ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಪ್-ಕಾಂಗ್ರೆಸ್‌ನ ಗುರಿ ಒಂದೆ, ಮೋದಿಯನ್ನು ಹಾಕಬೇಕು ಹಿಂದೆ!

Mainashree
Updated On : 6 Jan 2014, 11:59 am

ಮಾಧ್ಯಮಗಳ ಧಾಟಿಯಲ್ಲೇ ಹೇಳಬೇಕೆಂದರೆ, ಕಳೆದ ಆರು ತಿಂಗಳುಗಳು 'ರೋಲರ್ ಕೋಸ್ಟರ್‌' ಸವಾರಿಯೇ ಆಗಿತ್ತು. ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದದ್ದು ಸಂಭ್ರಮದ ಅಲೆಯನ್ನು ಹರಿಸಿತು. ಇನ್ನೊಂದೆಡೆ "ಮೋದಿಯವರನ್ನು ಮುಂಚೂಣಿಯಲ್ಲಿ ನಿಲ್ಲಿಸಿದರೆ ಮತಗಳ ಧ್ರುವೀಕರಣಕ್ಕೆ ಹೆಚ್ಚು ಆಸ್ಪದ ಸಿಗುತ್ತದೆ, ಇದರಿಂದಾಗಿ ಮುಳುಗುತ್ತಿರುವ ಕಾಂಗ್ರೆಸ್‌ಗೇ ಲಾಭವಾಗಿ, ಬಿಜೆಪಿಗೆ ತಿರುಗೇಟು ಬೀಳಲಿದೆ" ಎಂದು ರಾಜಕೀಯ ಪಂಡಿತರು ಹೇಳಿದರು. ವ್ಯಂಗ್ಯವೆಂದರೆ ಸೆ. 13ರಂದು, ಮೋದಿಯೇ ಬಿಜೆಪಿಯ ಅಭ್ಯರ್ಥಿಯೆಂದು ಅಧಿಕೃತವಾಗಿ ಘೋಷಣೆಯಾದಾಗ ಮಾಧ್ಯಮಗಳು ಒಮ್ಮತಾಭಿಪ್ರಾಯದಿಂದ ಇನ್ನೊಂದು ಅವರತ್ತ ವಾಲಿದವು! ಅವರ ಸಾರ್ವಜನಿಕ ಸಭೆಗಳನ್ನು ಎಷ್ಟು ಸಂಭ್ರಮದಿಂದ ನಮ್ಮ ಮಾಧ್ಯಮಗಳು ಬಿತ್ತರಿಸತೊಡಗಿದವೆಂದರೆ, ಮೋದಿಯವರನ್ನು "ಸಾಮೂಹಿಕ ಕೊಲೆಗಾರ" ಎಂದು ಕರೆಯುತ್ತಿದ್ದ ವ್ಯಕ್ತಿಯೊಬ್ಬರು ಮಾತು ಬದಲಿಸಿ ಮೋದಿಯೆಡೆಗೆ ವಾಲಿಬಿಬಿಟ್ಟರು. "ಮೋದಿಯೇ ಪ್ರಧಾನಿಯಾಗಲಿದ್ದಾರೆ ಎನ್ನುವ ಸತ್ಯವನ್ನು ದೆಹಲಿಯ ಸ್ಥಾಪನೆ ಅರ್ಥಮಾಡಿಕೊಂಡ ತಿಂಗಳಾಗಿ ಅಕ್ಟೋಬರ್ ನಮ್ಮ ನೆನಪಿನಲ್ಲುಳಿಯಲಿದೆ" ಎಂದರವರು.
ಆದರೆ ಎಲ್ಲವೂ ಒಮ್ಮೆಗೇ ಯೂ-ಟರ್ನ್ ಹೊಡೆಯಿತು. ಮಾಧ್ಯಮಗಳಿಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರೀವಾಲರಲ್ಲಿ ಹೊಸ ಮಹಾಪುರುಷ ಕಂಡ. ಕೇಜ್ರಿವಾಲ್ ರಾಮ್‌ಲೀಲಾ ಮೈದಾನದಲ್ಲಿ(ಅಣ್ಣಾ ಹಜಾರೆಯವರು ಯುಪಿಎ ಸರ್ಕಾರದ ಬೆನ್ನು ಮೂಳೆ ಮುರಿದದ್ದು ಇದೇ ಜಾಗದಲ್ಲಿಯೇ) ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ದೆಹಲಿ ಮೂಲದ 'ಕೇಜ್ರೀವಾಲ್ ಭಜನಾ ಮಂಡಳಿಗಳು' ನರೇಂದ್ರ ಮೋದಿಯವರ ಅಧ್ಯಾಯ ಮುಗಿಯಿತು ಎಂದೇ ಭಾವಿಸಿದವು. ಇನ್ನು ಅಧಿಕಾರ ಸ್ವೀಕರಿಸಿದ 48 ಗಂಟೆಗಳೊಳಗೇ ನಾವು ಎರಡು ಭರವಸೆಗಳನ್ನು ಪೂರೈಸಿದೆವು ಎಂದು ಹೊಸ ಮುಖ್ಯಮಂತ್ರಿಗಳು ಹೇಳಿದಾಗ, ಸಾಮಾಜಿಕ ಜಾಲತಾಣಗಳ(ಮಾಧ್ಯಮ) ಬಹುದೊಡ್ಡ ವರ್ಗ "ಮೋದಿ  ಹಳಬರಾದರು" ಎಂದು ಬರೆದವು.
ಮಾಧ್ಯಮಗಳ ಕತೆಯನ್ನು ಕೇಳಿದಾಗ, ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಮೂಲಕ ಕಾಂಗ್ರೆಸ್‌ನ ಅವಸಾನ ಸಮೀಪವಾಗುತ್ತಿದೆ ಎನ್ನುವ ಅಂಶ ಅವುಗಳಿಗೆ ಮನದಟ್ಟಾಗಿದೆ ಎನ್ನುವುದು ಸ್ಪಷ್ಟವಾಯಿತು. ರಾಹುಲ್ ಗಾಂಧಿಯವರ ನೀತಿಗಳೆಲ್ಲ ನಿಸ್ತೇಜವಾಗಿವೆ ಎಂದು ಗೊಣಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಈ ವಿಷಯ ಇನ್ನಷ್ಟು ದುಃಖಕ್ಕೆ ದೂಡಿತು. ಬಹುಶಃ ತಾನು ಹೀನಾಯವಾಗಿ ಸೋಲುತ್ತೇನೆ ಎಂದು ಮನದಟ್ಟುಮಾಡಿಕೊಂಡು ಚುನಾವಣೆಗೆ ಧುಮುಕಲಿರುವ ಮೊದಲ ಸರ್ಕಾರ ಕಾಂಗ್ರೆಸ್ ನೇತೃತ್ವದ ಯುಪಿಎ-2 ಇರಬೇಕು.
ಕುತೂಹಲದ ಸಂಗತಿಯೆಂದರೆ, ಕಾಂಗ್ರೆಸ್‌ನ ಕಥೆ ಮುಗಿಯುತ್ತಿರುವುದಕ್ಕೂ ಮತ್ತು "ಸರಳ ವ್ಯಕ್ತಿತ್ವದ" ಕೇಜ್ರಿವಾಲ್ ಎಂಬ ಹೊಸ ಅಧ್ಯಾಯವನ್ನು ಬೌದ್ಧಿಕ ವಲಯ ಪ್ರಾರಂಭಿಸುತ್ತಿರುವುದಕ್ಕೂ ಪರಸ್ಪರ ಸಂಬಂಧವಿದೆ. ಸರಳತೆಯ ವಿಷಯಕ್ಕೆ ಬಂದರೆ, ಅಧಿಕಾರವನ್ನು ತಲೆಗೇರಿಸಿಕೊಳ್ಳದೇ ಸರಳವಾಗಿ ಬದುಕುತ್ತಿರುವ ನಾಯಕರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಎಡ ಪಕ್ಷವನ್ನು ಕಿತ್ತೆಸೆದು 2011ರಲ್ಲಿ ಪಶ್ಚಿಮ ಬಂಗಾಳದ ಚುಕ್ಕಾಣಿ ಹಿಡಿದ ಮಮತಾ ಬ್ಯಾನರ್ಜಿ ಇದುವರೆಗೂ ಸರ್ಕಾರಿ ಬಂಗಲೆಗೆ ಹೋಗಿಲ್ಲ. ಇಂದಿಗೂ ತಮ್ಮ ತಂದೆಯ ಮನೆಯಲ್ಲೇ ವಾಸಿಸುತ್ತಿರುವ ನವೀನ್ ಪಟ್ನಾಯಕ್ ಸಾಮಾಜಿಕ ಭೇಟಿಗಳಿಗೆ ಮತ್ತು ಪಕ್ಷದ ಕೆಲಸಗಳಿಗೆ ಸರ್ಕಾರಿ ವಾಹನವನ್ನು ಬಳಸುವುದಿಲ್ಲ. ಐಐಟಿ ಗ್ರಾಜ್ಯುವೇಟ್ ಆಗಿದ್ದರೂ ಕೂಡ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಸರಳವಾಗಿ ಜೀವನ ನಡೆಸುತ್ತಾರೆ. ಅವರಿಗೆ ಭದ್ರತಾ ಬಂದೋಬಸ್ತ್ ಎಂದರೇ ಆಗದು. ಇನ್ನು ಮೋದಿಯವರ ವಿಷಯಕ್ಕೆ ಬಂದರೆ 11 ವರ್ಷಗಳು ಆಡಳಿತ ನಡೆಸಿದರೂ ಕೂಡ ಆವರ ಆಸ್ತಿಯಲ್ಲಿ ಏರಿಕೆಯಾಗಿಲ್ಲ.  
ನಿಜ ಹೇಳಬೇಕೆಂದರೆ, ಒಂದು ದುರ್ಬಲ ಸರ್ಕಾರದ ನೇತೃತ್ವ ಹೊಂದಿರುವ ಕೇಜ್ರೀವಾಲರಿಗೆ ಭಾರತದ ಅತಿದೊಡ್ಡ ಮಾಧ್ಯಮ ಕಂಪನಿಯೊಂದು ಮತ್ತು ಕೆಲವು ಪ್ರಭಾವಿ ಸುದ್ದಿ ಮಾಧ್ಯಮಗಳು 'ಸರಳತೆಯ' ನೆಪ ಹಿಡಿದು ಜೈಕಾರ ಹಾಕುತ್ತಿವೆ. ರಾಷ್ಟ್ರೀಯ ಮಟ್ಟದಲ್ಲಿ ಆಪ್ ಗರ್ಜಿಸಲಿದೆ ಎನ್ನುವ ಪುಕಾರನ್ನು ಆಂಗ್ಲ ಪತ್ರಿಕೆಯೊಂದು ಎಗ್ಗಿಲ್ಲದೇ ಹಬ್ಬಿಸುತ್ತಿದೆ. ಈ ಎಲ್ಲಾ ಅಬ್ಬರದ ಸುದ್ದಿಗಳನ್ನು ನಂಬಿಕೊಂಡಿರುವ ಆಮ್ ಆದ್ಮಿ ಪಕ್ಷ ಅತ್ಯುತ್ಸಾಹದಿಂದ ಲೋಕಸಭಾ ಚುನಾವಣೆಗಳನ್ನು ಎದುರಿಸಲು ಸಿದ್ಧತೆ ನಡೆಸಿದೆ.
ರಾಜಸ್ಥಾನ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಭಾರತದ ಬೌದ್ಧಿಕ ವಲಯವನ್ನು ಆಳುತ್ತಿರುವ ಎಡಪಂಥೀಯ ಪ್ರಗತಿಪರ ಬುದ್ಧಿಜೀವಿಗಳ ಮಿದುಳಿಗೆ ಎರಡು ವಿಷಯಗಳು ಮನದಟ್ಟಾದವು. 'ಹಿಂದು ತೀವ್ರವಾದಿ' ಎಂದು ಮೋದಿಯವರ ಮೇಲೆ ಎಷ್ಟೇ ಕೆಸರೆರಚಲು ಪ್ರಯತ್ನಿಸಿದರೂ ಮಧ್ಯಭಾರತದ ಮತದಾರರ ಮನಸ್ಸು ಬದಲಾಗಲಿಲ್ಲ ಮತ್ತು ಕಾಂಗ್ರೆಸ್‌ಗೆ ಮೋದಿಯವರನ್ನು ಎದುರಿಸುವ ಸಾಮರ್ಥ್ಯವಿಲ್ಲ ಎಂಬುದು. ಕಾಂಗ್ರೆಸ್ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಮೋದಿ ಮೊದಲಿನಿಂದಲೂ ಟೀಕಿಸುತ್ತಾ ಬಂದವರು. ಅರವಿಂದ್ ಕೇಜ್ರಿವಾಲ್ ಕೂಡ ಭ್ರಷ್ಟಾಚಾರ ವಿರೋಧಿ ಮನಸ್ಥಿತಿಯವರು. ಹಾಗಾಗಿ ಮೋದಿಯವರಿಗೆ ಪರ್ಯಾಯವಾಗಿ ಇನ್ನೊಬ್ಬ ವ್ಯಕ್ತಿಯನ್ನು ಹುಡುಕುತ್ತಿದ್ದ ಈ ಹೆದರಿದ ವಲಯಕ್ಕೆ ಕೇಜ್ರಿವಾಲ್ ಕಾಣಿಸಿದರು!  
ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿರುವುದು ಗೆದ್ದು ಸರ್ಕಾರ ರಚಿಸುವುದಕ್ಕಲ್ಲ. ಆ ಆಸೆಗೆ ಅದು ಎಂದೋ ಎಳ್ಳು-ನೀರು ಬಿಟ್ಟಿದೆ. ಅದರ ಸದ್ಯದ ಗುರಿಯೇನಿದ್ದರೂ ನರೇಂದ್ರ ಮೋದಿಯನ್ನು ಪ್ರಧಾನಿಯಾಗದಂತೆ ತಪ್ಪಿಸುವುದು. ಆಡ್ವಾಣಿ ಅಥವಾ ರಾಜ್‌ನಾಥ್ ಸಿಂಗ್ ಪ್ರಧಾನಿಯಾದರೆ ಕಾಂಗ್ರೆಸ್‌ಗೆ ತೊಂದರೆಯಿಲ್ಲ ಎನ್ನುವುದು ಬೇರೆಯ ವಿಷಯ! ದೆಹಲಿಯ ಸ್ಥಾಪನೆ ಕೇವಲ ಮೋದಿ ಮತ್ತು ಮೋದಿಗಷ್ಟೇ ಹೆದರುತ್ತದೆ. ಏಕೆಂದರೆ ಅವರಿಗೆ ಆಟದ ನಿಯಮಗಳನ್ನು ಬದಲಿಸಿ ಕಾಂಗ್ರೆಸ್ಸನ್ನು ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವಂತೆ ಮಾಡುವ ಸಾಮರ್ಥ್ಯವಿದೆ.
ಆಮ್ ಆದ್ಮಿ ಬೆಂಬಲಿಗರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು "ಒಂದೇ ಬಳ್ಳಿಯ ಹೂಗಳು" ಎಂದು ಎಷ್ಟೇ ಕರೆದರೂ, ಮೋದಿಯವರ ಪ್ರಶ್ನೆ ಬಂದಾಗ ಮಾತ್ರ ಆಪ್ ಮತ್ತು ಕಾಂಗ್ರೆಸ್‌ನ ದೃಷ್ಟಿಕೋನ ಒಮ್ಮುಖವಾಗಿಯೇ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕಾಂಗ್ರೆಸ್ ಆಪ್‌ಗೆ ಬೆಂಬಲ ನೀಡಿರುವುದೂ ಈ ಕಾರಣಕ್ಕಾಗಿಯೇ! ಇದೇನೇ ಇರಲಿ, ಒಮ್ಮೆ ಲೋಕಸಭಾ ಚುನಾವಣೆಗಳು ಶುರುವಾದವೆಂದರೆ ನಿಸ್ಸಂಶಯವಾಗಿಯೂ ಕಾಂಗ್ರೆಸ್‌ನ ಮತವಲಯಗಳಲ್ಲಿ ಮತ್ತು ಆಪ್‌ನ ಕ್ಷೇತ್ರಗಳಲ್ಲಿ ಬಹಳಷ್ಟು ಪ್ರಮುಖ ಬದಲಾವಣೆಗಳು (ಭಿನ್ನತೆಗಳು) ಎದುರಾಗಲಿವೆ. ಇದರಿಂದಾಗಿ ನಾಟಕೀಯ ಫಲಿತಾಂಶಗಳು ಎದುರಾಗಬಹುದು. ಆಮ್ ಆದ್ಮಿ ಪಕ್ಷ ಬಿಜೆಪಿಯ ಮಧ್ಯಮ ವರ್ಗದ ಮತದಾರರನ್ನು ತನ್ನ ಜೋಳಿಗೆಗೆ ಹಾಕಿಕೊಳ್ಳಲೂಬಹುದು. ಹಾಗಾಗದೆ, ಒಂದು ವೇಳೆ ಭಾರತದ ಮಧ್ಯಮ ವರ್ಗ ಮೋದಿಯವರಿಗೇ ತಮ್ಮ ಮತ ನೀಡಿದರೆ, ಆಮ್ ಆದ್ಮಿ ಪಕ್ಷ ಕಾಂಗ್ರೆಸ್‌ಗೆ ಇನ್ನೂ ದೊಡ್ಡ ಗಾಯ ಮಾಡಿ, ಬಿಜೆಪಿಯನ್ನು ಪರೋಕ್ಷವಾಗಿ ಗೆಲುವಿನ ದಡ ಮುಟ್ಟಿಸಲು ಸಹಾಯಕವಾಗುವುದರಲ್ಲಿ ಸಂದೇಹವಿಲ್ಲ!  

- ಸ್ವಪನ್‌ದಾಸ್ ಗುಪ್ತಾ
ಅಂಕಣಕಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement