ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕನ್ನಡದ ಅನುಷ್ಠಾನಕ್ಕೆ ಆಂಗ್ಲದಲ್ಲಿ ಆದೇಶವಾದರೆ!

ಕನ್ನಡವನ್ನು ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸಲು ಸರ್ಕಾರ...

Mainashree
Updated On : 6 Jan 2014, 11:59 am

ಕನ್ನಡವನ್ನು ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಈಗಾಗಲೇ ನೂರಕ್ಕೂ ಹೆಚ್ಚು ಜಿ.ಓ (G‌ove‌rn​m​ent O‌rde‌r) ಹೊರಡಿಸಲಾಗಿದೆ ಎಂದು ಕನ್ನಡ ಭಾಷೆ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ಅಂಬೋಣ.  ಆದರೆ ಈ ಜಿ.ಓ ಯಾವ ಭಾಷೆಯಲ್ಲಿ ನೀಡಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಇಂಗ್ಲಿಷ್ ಎಂದು ಬಾಯ್ಬಿಟ್ಟು ಹೇಳದಿದ್ದರೂ ಕನ್ನಡ ಪ್ರೇಮಿಗಳು ಅರ್ಥೈಸಿಕೊಳ್ಳಬೇಕಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ 77ನೇ ಜನ್ಮದಿನದ ಅಂಗವಾಗಿ ಬೆಂಗಳೂರು ಬಾನುಲಿಯ ಎಫ್‌ಎಂ ರೈನ್ಬೋದಲ್ಲಿ ಕಳೆದ ಶುಕ್ರವಾರ ಹೆಸರಾಂತ ವಿಮರ್ಶಕ ಸಿ.ಎನ್.ರಾಮಚಂದ್ರನ್ ಅವರ ನಡುವಿನ ಸಂವಾದದಲ್ಲಿ ತೇಲಿ ಬಂದ ಅನಿಸಿಕೆ ಇದಾಗಿತು. ಆಡಳಿತ ಭಾಷೆಯನ್ನಾಗಿ  ಕನ್ನಡವನ್ನು ಪ್ರಾಮಾಣಿಕವಾಗಿ ಜಾರಿಗೆ ತರಲು ಸರ್ಕಾರಿ ಆದೇಶ ನೀಡುತ್ತಿರುವುದು ಆಂಗ್ಲಭಾಷೆಯಲ್ಲಿ ಎಂಬುದು ವಿಪರ್ಯಾಸ ಎಂದವರು ವಿಷಾದಿಸಿದರು.
ಕಾರ್ಯಕ್ರಮ ಆಲಿಸುತ್ತಿರುವಾಗ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಡೆದ ಘಟನೆಯೊಂದು ನೆನಪಿಗೆ ಬಂತು.  ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ, ಹಿರಿಯ ಮುತ್ಸದ್ದಿ, ಕೆಳಸ್ತರದ ದನಿಯಾಗಿದ್ದ ದಿವಂಗತ ದೇವರಾಜ ಅರಸರು ಅಂದಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ  ಸರ್ವವೂ ಆಂಗ್ಲ ಮಯವಾಗಿದ್ದಾಗ, ಕನ್ನಡ ಭಾಷೆಗೆ ಆಡಳಿತದಲ್ಲಿ ಆದ್ಯತೆ ನೀಡಬೇಕೆಂಬ ಸಂಕಲ್ಪದಿಂದ ಸಮಾಜದ ಗಣ್ಯರ, ಸಾಹಿತಿಗಳ, ವಿಚಾರವಾದಿಗಳ ಸಭೆಯೊಂದನ್ನು ವಿಧಾನಸೌಧದಲ್ಲಿ ಕರೆದಿದ್ದರು. ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿತ್ತು.  ಸಭೆಯಲ್ಲಿ  ಭಾಗವಹಿಸಲು ಆಹ್ವಾನ ತಿರಸ್ಕರಿಸಿದ ಮಹನೀಯರೊಬ್ಬರು 'ಕನ್ನಡವನ್ನು ಸರ್ಕಾರದ ಹಂತದಲ್ಲಿ ಆಡಳಿತ ಭಾಷೆಯಾಗಿ ಜಾರಿಗೆ ತರುವ ಸಂಬಂಧ ಸಲಹೆ ಸೂಚನೆಗಳನ್ನು ಸ್ವೀಕರಿಸಲು ನನಗೆ ಆಹ್ವಾನ ನೀಡಿದ್ದಿರಿ, ಧನ್ಯವಾದಗಳು. ಆದರೆ ಅದನ್ನು ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಇದರಿಂದಲೇ ಅರಿವಾಗುತ್ತದೆ, ಸರ್ಕಾರ ಎಷ್ಟು ಪ್ರಾಮಾಣಿಕವಾಗಿ ವರ್ತಿಸುತ್ತಿದೆ ಎಂಬುದು ಅರ್ಥವಾಗುತ್ತದೆ' ಎಂದು ಪತ್ರ ಮುಖೇನ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಅಂದು ರಾಜ್ಯದ ಮುಖ್ಯಮಂತ್ರಿ ಆಹ್ವಾನವನ್ನು ತಿರಸ್ಕರಿಸದವರು ಬೆಂಗಳೂರು ಬಾನುಲಿ  ಕೇಂದ್ರದ ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ದಿವಂಗತ ಡಾ. ವಸಂತ ಕವಲಿ ಅವರು. ಒಂದು ವೇಳೆ ದೇವರಾಜ ಅರಸು ಅವರು ಮನಸ್ಸು ಮಾಡಿದ್ದರೆ, ಕವಲಿ ಅವರ  ವರ್ತನೆ ವಿರುದ್ಧ ಶಿಸ್ತಿನ ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಿತ್ತು.
1975ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯೊಂದು ಕರ್ನಾಟಕ ರಾಜ್ಯದ ಹಿಂದೂಸ್ಥಾನಿ ದಿಗ್ಗಜರೊಬ್ಬರ ಆತ್ಮ ಚರಿತ್ರೆಯನ್ನು ಬರೆಯುವ ಕಾರ್ಯವನ್ನು ಇವರಿಗೆ ನೀಡಿತ್ತು. ಪುಸ್ತಕ ಮುದ್ರಣದ ನಂತರ  ಕೆಲವು ಪ್ರತಿಗಳು ಹಾಗೂ ಅಂದಿನ ಕಾಲಕ್ಕೆ ತುಸು ಹೆಚ್ಚೆನಿಸುವ ಗೌರವಧನದ ಚೆಕ್‌ನೊಂದಿಗೆ  ಪ್ರತಿನಿಧಿಯೊಬ್ಬರು ವಸಂತ ಕವಲಿಯವರನ್ನು ಭೇಟಿ ಮಾಡಿದರು. ಪುಸ್ತಕದ ಹಾಳೆಗಳನ್ನು ತಿರುವು ಹಾಕುತ್ತಿರುವಾಗ ಮೊದಲ ಪುಟದಲ್ಲೇ ಕನ್ನಡದ ಅಂಕಿಗಳನ್ನು ಮುದ್ರಿಸದಿರುವುದಕ್ಕೆ ಆಕ್ರೋಶಗೊಂಡು ಜಾಗ ಖಾಲಿ ಮಾಡಲು ಆದೇಶಿಸಿದರು. ಬಹುಶಃ ಈ ಪ್ರಕರಣದಲ್ಲಿ ಇಲ್ಲಿ ಅಪ್ರಸ್ತುತವಾಗಲಾರದು.
'ಕನ್ನಡ ಎನೆ ಕುಣಿದಾಡುವುದೆನ್ನದೆ' ಎಂದು ರಾಷ್ಟ್ರಕವಿ ಕುವೆಂಪು ನುಡಿದ ಮಾತನ್ನು  ಜೀವನ ಪರ್ಯಂತ ಇವರು ಪಾಲಿಸಿದರು.  ಅವರ ಕನ್ನಡ ಪ್ರೇಮ, ವ್ಯಾಮೋಹ ಕಾಳಜಿ ಹಾಗೂ ಬದ್ಧತೆ ಪದಗಳಿಗೆ ಸಿಗಲಾರದು.

- ಬಿ.ಎನ್. ಸತ್ಯನಾರಾಯಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement