ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಾಡಹಬ್ಬ ಹಂಪಿ ಉತ್ಸವದ ಯಶಸ್ಸಿಗೆ ಉತ್ಸುಕತೆ ತೋರುವರೇ?

Mainashree
Updated On : 6 Jan 2014, 9:48 am

ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ವಿಶ್ವವಿಖ್ಯಾತ ಹಂಪಿಯಲ್ಲಿ ಈ ತಿಂಗಳ 10, 11 ಮತ್ತು 12 ರಂದು ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದೆ. ಎರಡು ವರ್ಷಗಳ ನಂತರ ಮತ್ತೆ ಹಂಪಿ ಉತ್ಸವ ನಡೆಯುತ್ತಿದೆ. ನಾಡಿನಲ್ಲಿ ಇತೆರೆಡೆ ನಡೆಯುತ್ತಿರುವ ಕದಂಬೋತ್ಸವ, ವಚನ ಸಂಗೀತೋತ್ಸವ, ಗಡಿನಾಡ ಉತ್ಸವ, ಕರಾವಳಿ ಉತ್ಸವ, ಬೇಲೂರು ಉತ್ಸವ... ಗಳಿಗಿಂತ ಹಂಪಿ ಉತ್ಸವ ತನ್ನ ಶ್ರೀಮಂತ ಹಿನ್ನೆಲೆ, ಉದ್ದೇಶ, ವೈಶಿಷ್ಟ್ಯತೆಯಿಂದ ಭಿನ್ನವೆನಿಸಿದೆ. ಸಹಜವಾಗಿ ಜನರಲ್ಲಿ ಅಗಣಿತ ನಿರೀಕ್ಷೆಗಳಿವೆ. ಜನರ ನಿರೀಕ್ಷೆಗಳಿಗೆ ಹಂಪಿ ಉತ್ಸವ ನಿರಾಸೆ ಮಾಡಿಲ್ಲ. 1987 ರಲ್ಲಿ ಆರಂಭವಾದ ಉತ್ಸವ 1988ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ನಜೀರ್ಸಾಬ್ ನಿಧನ, 2000ನೇ ಸಾಲಿನಲ್ಲಿ ವರನಟ ಡಾ.ರಾಜ್ ಅಪಹರಣ, 2009ರಲ್ಲಿ ಪ್ರವಾಹ ಹಾಗೂ 2012ರಲ್ಲಿ ಬರಗಾಲದ ಹಿನ್ನೆಲೆಯಲ್ಲಿ ನಡೆಯಲಿಲ್ಲ. ಉಳಿದ ವರ್ಷ ನಡೆದ ಉತ್ಸವಗಳು ಕೆಲವೊಮ್ಮೆ ಅದ್ಧೂರಿಯಾಗಿ ಮತ್ತೊಮ್ಮೆ ಮಂಕಾಗಿ ನಡೆದರೂ ಸಹ ಸುಮಾರು ಇಪ್ಪತ್ತೈದು ವರ್ಷಗಳ ಕೆಳಗೆ ಜಿಲ್ಲಾ ಮಟ್ಟದ ಉತ್ಸವವಾಗಿದ್ದ ಹಂಪಿ ಉತ್ಸವ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದೆ.
ಮೈಸೂರಿನ ದಸರಾ ಉತ್ಸವಕ್ಕಿಂತ ಹಂಪಿ ಉತ್ಸವ ಸಂಪೂರ್ಣ ಭಿನ್ನವಾಗಿದೆ. ಮೈಸೂರಿನ ದಸರಾ ಅರಮನೆಯ ಧಾರ್ಮಿಕ ಆಚರಣೆಗಳ ವಿಧಿ-ವಿಧಾನಗಳ ಮೂಲಕ ರಾಜ ದರ್ಬಾರಿನ, ಪ್ರತಿಷ್ಠೆಯ ಉತ್ಸವವೆಂಬ ಟೀಕೆಗೆ ಗುರಿಯಾಗಿದೆ. ಮೈಸೂರಿನ ದಸರಾ ಪರಂಪರೆಯ ಮೂಲ ಹಂಪಿಯೇ ಆಗಿದ್ದರೂ ಹಂಪಿ ಉತ್ಸವ ಮಾತ್ರ ಜನರ ಉತ್ಸವವಾಗಿದೆ. ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಸಂಗೀತ, ಕಲೆ, ರಂಗಭೂಮಿ ಇತ್ಯಾದಿಗಳನ್ನೊಳಗೊಂಡ ಈ ಉತ್ಸವ ಸಮಾಜಮುಖಿ, ಜಾನಪದ, ಜನೋತ್ಸವವೆಂದಲ್ಲಾ ಹೆಸರಾಗಿದೆ. ಸಮಾಜದ ಎಲ್ಲಾ ವರ್ಗಗಳ ಪ್ರತಿಭೆಗಳನ್ನು ಸಂಚಯಗೊಳಿಸಿ, ಪ್ರಸ್ತುತ ಪಡಿಸುವ ಅಮೋಘ ಕಾರ್ಯಕ್ರಮವೆನಿಸಿದೆ. ವೇದಿಕೆಗಳಲ್ಲಿ ಶಾಸ್ತ್ರೀಯ ಕಲೆಗಳೊಂದಿಗೆ, ತೆರೆಮರೆಗೆ ಸರಿಯುತ್ತಿದ್ದ ಅನೇಕ ಕಲಾವಿದರಿಗೆ, ಕಲೆಗೆ ಅವಕಾಶ, ಭವಿಷ್ಯ ನೀಡುತ್ತಿದೆ. ಇನ್ನು ಬದಲಾದ ಕಾಲಕ್ಕೆ ತಕ್ಕಂತೆ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ವಿಚಾರ ಸಂಕಿರಣ, ಕಲಾ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇವುಗಳಲ್ಲಿ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರು, ಕಲಾ ತಂಡಗಳು ಭಾಗವಹಿಸಿ, ಉತ್ಸವಕ್ಕೆ ವೈವಿಧ್ಯತೆಯ ಸೊಬಗನ್ನು ನೀಡುತ್ತಿವೆ. ಉತ್ಸವಕ್ಕೆ ಪೂರಕವಾಗಿ ಕೃಷಿ ವಸ್ತು ಪ್ರದರ್ಶನ, ಎತ್ತಿನ ಬಂಡಿಗಳ ಓಟದ ಸ್ಪರ್ಧೆ ಇತ್ಯಾದಿಗಳನ್ನು ರೈತಾಪಿಗರಿಗೆ ರೂಪಿಸಿ ನಾಡ ಹಬ್ಬಕ್ಕೆ ಹೊಸ ಭಾಷ್ಯ ಬರೆದಿದೆ.
ಇಂತಹ ಅದ್ಭುತ ಉತ್ಸವದ ರೂವಾರಿ ದಿವಂಗತ ಎಂ.ಪಿ ಪ್ರಕಾಶ್ರವರು. ಈ ಉತ್ಸವದಲ್ಲಿ ಬರೀ ಇತಿಹಾಸ ನೆನೆಯದೇ, ನಾಡಿನ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳಿಗೆ ಅಭಿವ್ಯಕ್ತಿ ಅವಕಾಶ ಕಲ್ಪಿಸಿ, ಹಂಪಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ಕಾಣುವ ಬಯಕೆ ಅವರದ್ದಾಗಿತ್ತು. ಈ ನಿಟ್ಟಿನಲ್ಲಿ ಅವರ ಚಿಂತನೆ, ಶ್ರಮ ಅಪಾರ. 1986 ರಲ್ಲಿ ಮೊದಲಿಗೆ "ಕನಕ-ಪುರಂದರ" ಉತ್ಸವ ಎಂಬ ಹೆಸರಲ್ಲಿ ಹಂಪಿ ಉತ್ಸವ ಏರ್ಪಡಿಸಿದರು. ಆದರೆ ಆಗಿನ ಸಚಿವರಾದ ಅಬ್ದುಲ್ ನಜೀರ್ರ ನಿಧನದಿಂದ ಉತ್ಸವ ರದ್ದಾಯಿತು. ನಂತರ 1987 ರಲ್ಲಿ ಎದರು ಬಸವ ಮಂಟದಲ್ಲಿ ಮೂರು ದಿನಗಳ ಕಾಲ ಉತ್ಸವ ಯಶಸ್ವಿಯಾಗಿ ಜರುಗಿತು. ಎಂ.ಪಿ. ಪ್ರಕಾಶ್ ಉತ್ಸವದ ದಿನಾಂಕ ವ್ಯತ್ಯಾಸವಾಗಬಾರದೆಂದು ಸರ್ಕಾರಿ ಆದೇಶ ಹೊರಡಿಸಿ, ಪ್ರತಿ ನವೆಂಬರ್ 3, 4 ಮತ್ತು 5 ರಂದು ದಿನಾಂಕ ನಿಗದಿಪಡಿಸಿ, ಬಜೆಟ್ನಲ್ಲಿ ಅನುದಾನ ನೀಡುವಂತೆ ಮಾಡಿದರು. ಎಂ.ಪಿ.ಪ್ರಕಾಶರು ಗೆದ್ದಾಗ ಅದ್ಧೂರಿ, ಅಚ್ಚುಕಟ್ಟಾಗಿ ನಡೆಯುತ್ತಿದ್ದ ಉತ್ಸವ, ಸೋತಾಗ ಹೇಳಿಕೊಳ್ಳುವ ಮಟ್ಟಿಗೆ ನಡೆಯಲಿಲ್ಲವೆಂಬುದು ತೆರೆದ ಹಾಳೆಯಷ್ಟೇ ಸತ್ಯ.  ಆದರೂ ತನ್ನದೇ ತತ್ವ, ಆದರ್ಶಗಳನ್ನು ಉತ್ಸವ ಉಳಿಸಿಕೊಂಡು ಹೋಗಿದ್ದು ಮೆಚ್ಚಬೇಕಾದ ಸಂಗತಿ.
ಹೀಗೆ ಉತ್ಸವ ಯಾವುದೇ ವಿವಾದ, ಟೀಕೆ ಟಿಪ್ಪಣೆಗಳಿಗೆ ಆಹಾರವಾಗದೇ, ಜನಮನ ಗೆದ್ದರೆ, 2009 ರ ಈಚೆಗೆ ಬೇರೆಯದ್ದೇ ಸ್ವರೂಪಕ್ಕೆ ತಿರುಗಿದೆ. ಪ್ರತಿ ನವೆಂಬರ್ ತಿಂಗಳಲ್ಲಿ ಸಂಪ್ರದಾಯದಂತೆ ನಡೆದು ಬಂದ ಉತ್ಸವದ ದಿನಾಂಕವೇ ಬದಲಾಯಿತು. ಕೊಟ್ಯಂತರ ರುಪಾಯಿಗಳನ್ನು ಖರ್ಚು ಮಾಡಿ ಆಡಂಬರ, ಅತಿರೇಕದ ಮನರಂಜನೆಗೆ ಹೆಚ್ಚು ಮಣೆ ಹಾಕಲಾಯಿತೇ ವಿನಃ ಅರ್ಥಪೂರ್ಣ, ಸ್ವಾರಸ್ಯಕರ ಕಾರ್ಯಕ್ರಮಗಳ ಆಯೋಜನೆಯಲ್ಲಿ ವಿಫಲಗೊಂಡಿತು ಎನ್ನುವ ಟೀಕೆಗೆ ತುತ್ತಾಯಿತು. 2010 ರಲ್ಲಿ ಕೃಷ್ಣದೇವರಾಯನ ಉತ್ಸವ ಮಾಡಿ, ಹಂಪಿ ಉತ್ಸವ ವ್ಯಕ್ತಿಯ ಉತ್ಸವವಾಯಿತು. ರಾಜಕೀಯ ಗಾಳಿ ಬೀಸಿ, ರಾಜಪ್ರಭುತ್ವ ವಿಜೃಂಭಿಸಿದ್ದರಿಂದ ಉತ್ಸವದ ಮೂಲ ಆಶಯವೇ ಹಳ್ಳ ಹಿಡಿಯಿತು. ಅಲ್ಲದೆ ಉತ್ಸವದ ರೂವಾರಿ ಎಂ.ಪಿ ಪ್ರಕಾಶರಿಗೆ ಸೌಜನ್ಯಕ್ಕೂ ಆಹ್ವಾನ ನೀಡದೇ, ಪ್ರಜಾತಾಂತ್ರಿಕ ಕಾರ್ಯಕ್ರಮಕ್ಕೆ ರಾಜಕೀಯ ಜಿದ್ದಿನ ಜಿಡ್ಡು ಅಂಟಿಸಿದರು. ಆದರೆ ಸುದೈವದಿಂದ ಆ ಕೆಟ್ಟ ಪರಂಪರೆ ಬೇಗ ಅಂತ್ಯವಾಗಿದ್ದೇ ಹಂಪಿ ಉತ್ಸವದ ನಿಜವಾದ ಆರಾಧಕರಿಗೆ ದೊಡ್ಡ ಕೊಡುಗೆಯಾಗಿತು. ಇಷ್ಟೆಲ್ಲಾ ಏಳು-ಬೀಳುಗಳನ್ನು ಕಂಡ ಮೇಲೆ ಮತ್ತೇ ಉತ್ಸವ ಬಂದಿದ್ದು, ಸಹಜವಾಗಿ ಜನತೆಯ ಕುತೂಹಲ ನೂರ್ಮಡಿಸಿದೆ.
ಹೀಗಾಗಿ ಹಂಪಿ ಉತ್ಸವದ ಬಗ್ಗೆ ಸರ್ಕಾರ ಕೆಲವೊಂದು ದಿಟ್ಟ ಕ್ರಮ ಕೈಗೊಳ್ಳಬೇಕಿದೆ. ಕನ್ನಡ ರಾಜ್ಯೋತ್ಸವದ ನಂತರ ಹಂಪಿ ಉತ್ಸವವು ನಡೆಯಬೇಕು. ಹಂಪಿ ಉತ್ಸವವೂ ಕನ್ನಡಿಗರ ಉತ್ಸವವಾಗಿದ್ದರಿಂದ ಆ ಸಂಭ್ರಮಾಚರಣೆ ಸಾರ್ಥಕವೆನ್ನುವ ಆಶಯದಿಂದ ಎಂಪಿ ಪ್ರಕಾಶ್ರವರು ಉತ್ಸವವನ್ನು ಪ್ರತಿ ನವೆಂಬರ್ 3, 4 ಮತ್ತು 5 ರಂದು ನಡೆಸಬೇಕೆಂದು ಹೊರಡಿಸಿದ್ದ ಸರ್ಕಾರಿ ಆದೇಶ ಮತ್ತೆ ಜಾರಿಗೆ ತಂದು, ಸರ್ಕಾರಿ ಕ್ಯಾಲೆಂಡರ್ನ ಪ್ರತಿ ವರ್ಷದ ಘಟನಾವಳಿಗಳಲ್ಲಿ ಹಂಪಿ ಉತ್ಸವವನ್ನು ಸೇರಿಸಬೇಕು. ಇಲ್ಲದಿದ್ದರೆ ಉತ್ಸವದ ಕೊನೆಯ ದಿನ ಮುಂದಿನ ವರ್ಷದ ಉತ್ಸವದ ದಿನಾಂಕವನ್ನು ಪ್ರಕಟಿಸಬೇಕು. ಅಲ್ಲದೆ ಇಲ್ಲಿಯ ಕಲೆ, ಪ್ರಾಚೀನ ತಂತ್ರಜ್ಞಾನ ಮತ್ತು ನಾಡಿನ ಐತಿಹಾಸಿಕ ವೈಭವದ ವಿಷಯಾಸಕ್ತರನ್ನು ತಣಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು. ಇಲ್ಲಿಯ ಜನರಲ್ಲಿ ತಲೆಮಾರುಗಳಿಂದ ಉಳಿದುಕೊಂಡು ಬಂದಿರುವ ಕಲೆಯ ಪ್ರದರ್ಶನಕ್ಕೆ ಈ ಉತ್ಸವ ವೇದಿಕೆಯಾಗಿ, ಅಂತಹ ಕಲೆಗಳ ಪುನರುಜ್ಜೀವನಗೊಳಿಸಬೇಕು. ಇನ್ನು ಕಲಾವಿದರ ಆಯ್ಕೆಯಲ್ಲೂ ಮಾಡುವ ತಾರತಮ್ಯ ಸಲ್ಲದು. ಜತೆಗೆ ನಮ್ಮಲ್ಲಿಯೇ ಅದ್ಭುತ ಕಲಾವಿದರಿದ್ದಾರೆ, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಗರಿಷ್ಟ ಮಟ್ಟದಲ್ಲಾಗಬೇಕು. ಪುಸ್ತಕ ಮಾರಾಟ, ಕಲಾಕೃತಿಗಳ ಪ್ರದರ್ಶನ... ಇತ್ಯಾದಿಗಳಿಗೆ ಜನಸಂದಣಿ ಇರುವ ಕಡೆ ಸ್ಥಳಾವಕಾಶ ಮಾಡಬೇಕು.
ಇನ್ನು, ಈ ಸಲದ ಉತ್ಸವ ಮಂಕಾಗುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಮೊದಲನೆಯದು ಹಣದ ಕೊರತೆ. ಕೆಲವೊಮ್ಮೆ ಅನಗತ್ಯವಾಗಿ ಕೋಟಿಗಟ್ಟಲೆ ಹಣ ವ್ಯಯಿಸುವ ಸರ್ಕಾರ ಹಂಪಿ ಉತ್ಸವಕ್ಕೆ ಮಾತ್ರ ಅನುದಾನ ಬಿಡುಗಡೆಗೆ ಮೀನಮೇಷ ಎಣಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1.75 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ಮಾತ್ರ ಬಿಡುಗಡೆಯಾಗಿದೆಯಂತೆ. ಬಿಡಿ, ಹಣದ ಕೊರತೆ ಈಗಿನ ಸಮಸ್ಯೆಯಲ್ಲ. ಎಂ.ಪಿ.ಪ್ರಕಾಶ್ ಅವರೂ ಸಹ ಅನುದಾನದ ಹಣ ಸಾಲದೇ ಸ್ಥಳೀಯ ಸಂಸ್ಥೆಗಳು, ವ್ಯಕ್ತಿಗಳಿಂದ ಸಂಪನ್ಮೂಲ ಕ್ರೂಢೀಕರಿಸಿ ಉತ್ಸವ ಯಶಸ್ವಿಗೊಳಿಸಿದ್ದರು. ಆದರೆ ಅವರು ಕಾರ್ಯಕ್ರಮಗಳ ರೂಪರೇಷೆ, ಆಯೋಜನೆಗೆ ಒತ್ತು ನೀಡುತ್ತಿದ್ದರು. ಇಲ್ಲಿ ವ್ಯತ್ಯಾಸವಾದರೆ ಉತ್ಸವ ಕಳೆಗುಂದುವುದು ಶತಸಿದ್ಧ. ಈಗ ಕಾಡುತ್ತಿರುವುದು ಇದೇ ಪ್ರಶ್ನೆ. ಈ ಬಾರಿ "ಧ್ವನಿ ಮತ್ತು ಬೆಳಕು" ಕಾರ್ಯಕ್ರಮ ನಡೆಯುವುದೇ ಅನುಮಾನ. ವಿಜಯ ನಗರ ಅರಸರ ಕಾಲದಲ್ಲಿ ಮಹಾನವಮಿ ದಿಬ್ಬದಲ್ಲಿ ನಡೆಯುತ್ತಿದ್ದ ದಸರಾ ಉತ್ಸವವನ್ನು ಮತ್ತೆ ಈ ಕಾಲದಲ್ಲಿ ಕಟ್ಟಿಕೊಡುವ ಆಶಯವೇ ಹಂಪಿ ಉತ್ಸವದ ತಿರುಳು. ಹೀಗಾಗಿ ಆ ವೈಭವದ ಅಚ್ಚುಪಡಿಯಾದ ಈ ಕಾರ್ಯಕ್ರಮ ಇಲ್ಲದಿದ್ದರೆ ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಹಂಪಿ ಬೈ ನೈಟ್, ಬ್ಯಾಟರಿ ಚಾಲಿತ ವಾಹನಗಳ ಸದ್ಬಳಕೆಯಲ್ಲಿ ಇಚ್ಛಾಶಕ್ತಿ, ಸರಿಯಾದ ಸಾರಿಗೆ ಸಂಪರ್ಕ ಸೇರಿದಂತೆ ಅನೇಕ ನ್ಯೂನತೆಗಳಿವೆ. ವಿಜಯನಗರ ಕಾಲದ ಗತವೈಭವವನ್ನು ಉತ್ಸವದಲ್ಲಿ ಮರುಸೃಷ್ಟಿ ಮಾಡುವುದಿರಲಿ ಹಂಪಿ ಉತ್ಸವದ ಮೂಲ ಸೊಗಡು ಕಾಪಿಟ್ಟುಕೊಳ್ಳುವರೇ ಎನ್ನುವ ಅನುಮಾನ ಬಲವಾಗಿದೆ. ಹೀಗಾಗಿ ಹಂಪಿ ಉತ್ಸವವನ್ನು ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸ್ವೀಕರಿಸಿ, ಮುಕ್ತಾಯ ಮಾಡದೇ ಇದರ ಮೂಲ ಆಶಯವನ್ನು ಯಶಸ್ವಿಯಾಗಿಸುವ ನಿಟ್ಟಿನತ್ತ ಕಾರ್ಯಪ್ರವೃತ್ತವಾಗಬೇಕು. ಇದು ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಜನರ ಪ್ರಮಾಣಿಕ ಪ್ರಯತ್ನದ ಮೇಲೆ ಅವಲಂಬಿತವಾಗಿದೆ.

 ಸ್ವರೂಪಾನಂದ.ಎಂ ಕೊಟ್ಟೂರು
ಹವ್ಯಾಸಿ ಲೇಖಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement