ಸಿಂಪಲ್ ಸಿಎಮ್ಗಳು
ಅರವಿಂದ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಆಗುತ್ತಿದ್ದಂತೆ, 'ಜನ ಸಾಮಾನ್ಯರಂತಿರುವ' ಮುಖ್ಯಮಂತ್ರಿ ಎಂಬ ಪುಳಕದ ಪರಿಕಲ್ಪನೆಯೊಂದು ಸುದ್ದಿ ಮಾಡುತ್ತಿದೆ. 'ಜನರದ್ದೇ ಆಡಳಿತ, ತಾನು ನಿಮಿತ್ತ ಮಾತ್ರ' ಎಂಬ ಇಮೇಜ್ ಒಂದನ್ನು ಕೇಜ್ರಿವಾಲ್ ತಾವು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆಯೇ ಬೆಳೆಸಿಕೊಂಡಿದ್ದರು.
ಹೀಗೆ ತಮ್ಮ ಆದರ್ಶದ ಬಗ್ಗೆ ಅತಿಯಾಗಿ ಪ್ರಚಾರ ಪಡೆದುಕೊಂಡಿದ್ದರಿಂದಲೇ ಅವರ ಚಿಕ್ಕ ಲೋಪವೂ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಅದೇನೆ ಇರಲಿ, 'ಸರಳ ಮುಖ್ಯಮಂತ್ರಿ' ಎಂಬ ಪರಿಕಲ್ಪನೆಯ ಪುಕ್ಕ ಬಿಚ್ಚುವಂತಾಗಿದ್ದು ಕೇಜ್ರಿವಾಲ್ ಅವರಿಂದ. ಆದರೆ ಕೇಜ್ರಿವಾಲ್ ಅವರೇ ಈ ದೇಶ ಪ್ರಪ್ರಥಮವಾಗಿ ಕಾಣುತ್ತಿರುವ 'ಆಮ್ ಆದ್ಮಿ' ವರ್ಚಸ್ಸಿನ ಮುಖ್ಯಮಂತ್ರಿಯೇ? ಉತ್ಸಾಹದಲ್ಲಿ ಹೌದು ಎಂದು ಕುಣಿದಾಡಿದರೆ ಅದು ಹಲವು ಹೆಸರುಗಳಿಗೆ ಸಲ್ಲಿಸುವ ತಾತ್ಸಾರವಾಗಿಬಿಡುತ್ತದೆ. 'ಸಿಂಪಲ್ ಸಿಎಂ' ಉದಾಹರಣೆ ಕೇಜ್ರಿವಾಲ್ ಅವರೊಂದಿಗೆ ಹುಟ್ಟಿದ್ದಲ್ಲ.
ಮನೋಹರ್ ಪಾರಿಕ್ಕರ್: ಬಿಜೆಪಿಯ ಗೋವಾ ಮುಖ್ಯಮಂತ್ರಿ ಪಾರಿಕ್ಕರ್ ಅವರು ತಮ್ಮ ಸರಳತೆಯನ್ನು ಪ್ರಚಾರಕ್ಕೆ ಇರಿಸಿಲ್ಲ. ಆದರೆ ಇದೀಗ ಆಮ್ ಆದ್ಮಿ ಪಕ್ಷವು ತನ್ನದೇ ನವೀನ ಆಲೋಚನೆ ಎಂಬಂತೆ ಹೇಳಿಕೊಳ್ಳುತ್ತಿರುವ- ಕೆಂಪುಬತ್ತಿ ಇಲ್ಲದ ಕಾರು, ವಿಐಪಿ ಸಂಸ್ಕೃತಿ ತೆಗೆದು ಹಾಕುವುದು- ಇಂಥದ್ದನ್ನೆಲ್ಲ ಈ ಮೊದಲೇ ಜಾರಿಗೆ ತಂದಿದ್ದಾರೆ. ಐಐಟಿ ಪದವೀಧರರಾಗಿರುವ ಪಾರಿಕ್ಕರ್ ತಮ್ಮ ಚಿಕ್ಕ ಮಾರುತಿ ಕಾರ್ನಲ್ಲಿ ದಿನವೂ ಆಫೀಸಿಗೆ ಬರುತ್ತಾರೆ. ಸರ್ಕಾರಿ ಬಂಗಲೆ, ಕೆಂಪುಗೂಟ ಎಲ್ಲವುಗಳಿಂದಲೂ ಇವರು ದೂರ. ರಸ್ತೆಪಕ್ಕದ ಅಂಗಡಿಯಲ್ಲಿ ಚಹಾ ಹೀರಿ, ತಿಂಡಿ ತಿನ್ನುವುದು ಪಾರಿಕ್ಕರ್ ಪಾಲಿಗೆ ಅಪರೂಪದ ವಿದ್ಯಮಾನ ಅಲ್ಲ.
ಮಮತಾ ಬ್ಯಾನರ್ಜಿ: ಹಠಮಾರಿ ಧೋರಣೆಗೆ ಸಂಬಂಧಿಸಿ ಮಮತಾ ವಿರುದ್ಧ ಸಾವಿರ ಟೀಕೆ ಮಾಡಬಹುದೇನೊ. ಆದರೆ ಸರಳ ಸಿಎಮ್ಗಳ ಪಟ್ಟಿಯಲ್ಲಿ ಇವರಿಗೆ ಅಗ್ರಸ್ಥಾನ ಎಂದು ಹೇಳಿದರೆ ಅವರ ವೈರಿಯೂ ಅಲ್ಲಗಳೆಯಲಾರ. ಕಾಲಿಘಾಟ್ ಬಳಿಯ ಹರೀಶ್ ಚಟರ್ಜಿ ಬೀದಿಯ ಚಿಕ್ಕ ಮನೆಯಲ್ಲಿ ವಾಸ. ಕಾಟನ್ ಸೀರೆ, ರಬ್ಬರ್ ಚಪ್ಪಲ್ಲಿ ಟ್ರೇಡ್ಮಾರ್ಕ್. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರ ಮನೆಗೆ ಭೇಟಿ ಇತ್ತಿದ್ದರು. ಬಹಳ ಒತ್ತಡ ಬಂದಿದ್ದರಿಂದ ಪಾಲಿಕೆಯವರಿಗೆ ತಮ್ಮ ಮನೆಗೆ ಒಂದು ಪದರದ ಬಣ್ಣ ಹೊಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ಇದೇ ದೀದಿ ಬದುಕಿನ ಅತಿದೊಡ್ಡ ರಾಜಿ ಎನ್ನುತ್ತಾರೆ ಹತ್ತಿರದವರು! ವಾಜಪೇಯಿ ಬಂದಿದ್ದಾರೆಂದು ಬಾಣಸಿಗರನ್ನೇನೂ ಕರೆಸಿರಲಿಲ್ಲ. ಎಂದಿನಂತೆ ತಾವೇ ಅಡುಗೆ ಮಾಡಿ ಬಡಿಸಿದರು.
ಎನ್. ರಂಗಸ್ವಾಮಿ: ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿಯ ಮುಖ್ಯಮಂತ್ರಿ. ಇವರ ಆಡಳಿತದಲ್ಲಿ ಪುದುಚೆರಿ ಉತ್ತಮ ವಾಸಯೋಗ್ಯ ಪ್ರದೇಶವಾಗಿರುವ ಹೆಗ್ಗಳಿಕೆ. ಪುದುಚೆರಿಯ ಜನಕ್ಕೆ ಯಾವತ್ತೂ ಮಾತಿಗೆ ಸಿಗುವ ವ್ಯಕ್ತಿ. ಪ್ರತಿದಿನ ಬೆಳಗ್ಗೆ ಜನಸಾಮಾನ್ಯನಂತೆಯೇ ವಾಕಿಂಗ್. ಬೀದಿಪಕ್ಕದ ಚಹದಂಗಡಿಯಲ್ಲಿ ಗುಟುಕು. 2008ರಲ್ಲಿ ಆಂತರಿಕ ರಾಜಕೀಯದಿಂದಾಗಿ ಕಾಂಗ್ರೆಸ್ನಿಂದ ಹೊರಬಂದ ಇವರು, ತಮ್ಮದೇ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ಸ್ಥಾಪಿಸಿಕೊಂಡರು.
ಮಾಣಿಕ್ ಸರ್ಕಾರ್: 1998ರಿಂದಲೂ ತ್ರಿಪುರಾ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಸಿಪಿಎಮ್ನ ಮಾಣಿಕ್ ಸರ್ಕಾರ್. ಭಾರತದ ಅತ್ಯಂತ ಬಡ ಮುಖ್ಯಮಂತ್ರಿ ಇವರೇ. ಮನೆ, ಕಾರು, ಅಂಗರಕ್ಷಕ ಪಡೆ ಯಾವುದೂ ಇಲ್ಲ. ತಮ್ಮ ವೇತನವನ್ನೆಲ್ಲ ಪಕ್ಷಕ್ಕೆ ಜಮಾ ಮಾಡುತ್ತಾರೆ ಹಾಗೂ ಪಕ್ಷ ನೀಡುವ ಮಾಸಿಕ 5 ಸಾವಿರ ರುಪಾಯಿಗಳ ವೇತನದಲ್ಲಿ ಬದುಕು ನಡೆಸುತ್ತಾರೆ. ಸರ್ಕಾರಿ ಕೆಲಸದಿಂದ ನಿವೃತ್ತಿಯಾಗಿರುವ ಅವರ ಮಡದಿ ಪಾಂಚಾಲಿ ಭಟ್ಟಾಚಾರ್ಯ ಸಹ ಸರಳ ಜೀವನದಲ್ಲಿ ಖುಷಿಯಾಗಿರುವವರು. ಹತ್ತಿರದ ಪ್ರಯಾಣಕ್ಕೆ ರಿಕ್ಷಾವೇ ಇವರ ವೈಭೋಗ. ಇತ್ತೀಚಿನ ಅಫಡವಿಟ್ ಪ್ರಕಾರ ಮಾಣಿಕ್ ಸರ್ಕಾರ್ ಖಾತೆಯಲ್ಲಿರುವ ಹಣ ಬರೋಬ್ಬರಿ 10,800 ರುಪಾಯಿಗಳು.
ಮಾಜಿಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಾರೆ ಇಂಥ ಹಲವು 'ಆಮ್ ಆದ್ಮಿ' ಮುಖ್ಯಮಂತ್ರಿಗಳನ್ನು ಹೆಸರಿಸಬಹುದು.