ಅಸ್ಸಾಂನ ಕಂಪನ ನಮಗೇಕೆ ತಾಗಿಲ್ಲ?
ಕಳೆದ ವರ್ಷ ಬಾಂಗ್ಲಾದೇಶಿ ಮುಸಲ್ಮಾನರು ಮತ್ತು ಸ್ಥಳೀಯ ಬೋಡೋ ಜನಾಂಗದ ನಡುವೆ ಎದ್ದ ಹಿಂಸಾಚಾರದಿಂದಾಗಿ ಅಸ್ಸಾಂ ಭಾರೀ ಸುದ್ದಿಯಲ್ಲಿತ್ತು. ಈಗ ಆ ಸುದ್ದಿ ತಣ್ಣಗಾಗಿರಬಹುದು, ಆದರೆ ಅಸ್ಸಾಂ ಅಲ್ಲ! ದಶಕಗಳಿಂದ ಆ ರಾಜ್ಯ ಜನಾಂಗೀಯ ಮತ್ತು ಪ್ರತ್ಯೇಕತಾವಾದಿಗಳ ಹುಚ್ಚಾಟದಿಂದಾಗಿ ಹೈರಾಣಾಗಿ ಹೋಗಿದೆ. ಅಸ್ಸಾಂ ನಮ್ಮದು ಎಂದು ನಾವೆಲ್ಲಾ ಹೇಳುತ್ತೇವೆ, ಆದರೆ ಇಲ್ಲಿರುವ ಒಬ್ಬ ಆಸಾಮಿಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿವೇ ಇರುವುದಿಲ್ಲ.
ದುರಂತವೆಂದರೆ ಹಿಂಸಾಚಾರ ಹೆಚ್ಚಾದಾಗ ಮಾತ್ರ ಆ ರಾಜ್ಯ ನಮ್ಮ ಕಣ್ಣಿಗೆ ಬೀಳುತ್ತದೆ ಎನ್ನುವುದು. ಬೋಡೋ-ಮುಸ್ಲಿಂರ ನಡುವೆ ಹೊಡೆದಾಟವಾದಾಗ, ನಮ್ಮ ಮುಂಬೈನಗರಿಯೇ ಎರಡು ದಿನಗಳ ಕಾಲ ನಡುಗಿಹೋಗಿತ್ತು. ಈಗ ಅಂಥದ್ದೇ ಒಂದು ದುರ್ಘಟನೆ ಅಸ್ಸಾಂನಲ್ಲಾಗಿದೆ. ಆದರೆ ಟಿ.ಆರ್.ಪಿಗೆ ಪೂರಕವಾಗುವ ವಿಷಯವಂತೂ ಅದಲ್ಲ ಎಂದು ನಮ್ಮ ಮಾಧ್ಯಮಗಳಿಗೆ ಬಹುಶಃ ಅನಿಸಿರಬೇಕು!
***
ಕಳೆದ 15 ವರ್ಷಗಳಿಂದ ಅಸ್ಸಾಂನ 'ಕರ್ಬಿ' ಮತ್ತು 'ರೇಂಗ್ಮಾ' ನಾಗಾ ಎನ್ನುವ ಬುಡಕಟ್ಟು ಜನಾಂಗಗಳ ನಡುವೆ ಅಸ್ತಿತ್ವಕ್ಕಾಗಿ ಹೋರಾಟ ನಡೆದೇ ಇತ್ತು. ಹಾಗಾಗೇ ತಮಗೆ ಸ್ವತಂತ್ರ ಅಧಿಕಾರವನ್ನು ಕೊಡಬೇಕು ಎಂದು ಅವು ಸರ್ಕಾರಕ್ಕೆ ಮೊರೆಯಿಡತೊಡಗಿದವು. ಕೊನೆಗೂ ಮಣಿದ ಸರ್ಕಾರ ಈ ಜನಾಂಗಗಳಿಗೆ ಸ್ವಾಯತ್ತ ಪ್ರಾದೇಶಿಕ ಪರಿಷತ್ತುಗಳನ್ನು ನೀಡಿತ್ತು. ಆ ಭಾಗದಲ್ಲಿ ತುಸು ಸಂಪನ್ಮೂಲಗಳನ್ನು ಹೆಚ್ಚು ಹೊಂದಿದ್ದ ಜಿಲ್ಲೆಯೆಂದರೆ 'ಕರ್ಬಿ ಆಂಗ್ಲಾಂಗ್'. ಅಲ್ಲಿ ಕರ್ಬಿ ಜನಾಂಗದ ಸಂಖ್ಯೆಯೇ ತುಸು ಹೆಚ್ಚು. ಕಡಿಮೆ ಸಂಖ್ಯೆಯಲ್ಲಿದ್ದ ಮತ್ತು ರಾಜಕೀಯವಾಗಿ ಶಕ್ತಿಯಿಲ್ಲದ ರೇಂಗ್ಮಾ ಜನರ ಮೇಲೆ ಕರ್ಬಿ ಜನಾಂಗದ ದಬ್ಬಾಳಿಕೆ ಹೆಚ್ಚುತ್ತಲೇ ಹೋಯಿತು. ಕೊಲೆ, ಸುಲಿಗೆ ನಿತ್ಯ ವ್ಯಾಪಾರವಾಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ ಸೀಮಿತ ಅವಕಾಶ ಮತ್ತು ಸೀಮಿತ ಸಂಪನ್ಮೂಲಗಳೇ ಎರಡೂ ಜನಾಂಗಗಳ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣ. ಈ ತಿಕ್ಕಾಟ ದ್ವೇಷಕ್ಕೆ ತಿರುಗಿತು.
ಡಿಸೆಂಬರ್ 27ರಂದು ಕರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್(ಕೆಪಿಟಿಎಲ್) ಎನ್ನುವ ಪ್ರತ್ಯೇಕತಾವಾದಿ ಗುಂಪು ಹಳ್ಳಿಯೊಂದಕ್ಕೆ ನುಗ್ಗಿ ಆರು ರೇಂಗ್ಮಾ ನಾಗಾ ಜನರನ್ನು ಗುಂಡಿಟ್ಟು ಕೊಂದಿತು. ಸತ್ತವರಲ್ಲಿ ಐವರು ಮಹಿಳೆಯರಿದ್ದರು. ಈ ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ರೇಂಗ್ಮಾ ಜನಾಂಗದ ಪ್ರತ್ಯೇಕತಾವಾದಿ ಗುಂಪಾದ ರೇಂಗ್ಮಾ ನಾಗಾ ಹಿಲ್ ಪ್ರೊಟೆಕ್ಷನ್ ಫೋರ್ಸ್(ಆರ್ಎನ್ಹೆಚ್ಪಿಎಫ್)ನ ಯೋಧರು ಕೆಪಿಟಿಎಲ್ನ ಮೂವರು ಸದಸ್ಯರನ್ನು ಕೊಂದು ಹಾಕಿದ್ದಾರೆ. ಹೀಗೆ ಅಂದಿನಿಂದ ಶುರುವಾದ ಈ ಹತ್ಯಾಚಕ್ರಕ್ಕೆ ಅದಾಗಲೇ 16 ಜೀವಗಳು ಬಲಿಯಾಗಿವೆ. ಸುಮಾರು 1,600 ರೇಂಗ್ಮಾ ನಾಗಾಗಳು ಮತ್ತು 1,500 ಕರ್ಬಿಗಳು ಈಗ ನೆಲೆ ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ, ನಾಳೆ ಏನಾಗಲಿದೆಯೋ ಎನ್ನುವ ಅನಿಶ್ಚಿತತೆಯೊಂದಿಗೆ ಬದುಕುತ್ತಿದ್ದಾರೆ.
ಈಶಾನ್ಯ ರಾಜ್ಯಗಳನ್ನು ಮೊದಲಿನಿಂದಲೂ ನಮ್ಮ ಕೇಂದ್ರ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ. ಅನಕ್ಷರತೆ, ಬಡತನ, ಸಂಪನ್ಮೂಲ ಕೊರತೆ, ಉದ್ಯೋಗ ಕೊರತೆ ಹಿಂದೆಂದಿಗಿಂತಲೂ ಅಲ್ಲೀಗ ಹೆಚ್ಚಾಗಿದೆ. ಅಸಹನೆಯಿಂದ ಕುದಿಯುತ್ತಿರುವ ಮನಸ್ಸುಗಳಿಗೆ ಶಸ್ತ್ರಾಸ್ತ್ರಗಳು ಸಮಾಧಾನ ಹೇಳುತ್ತಿರುವುದು ವಿಪರ್ಯಾಸ.
ಒಂದು ವೇಳೆ ಇದೇ ಹಿಂಸಾಚಾರವೇನಾದರೂ ಗುಜರಾತಿನಲ್ಲೋ ಅಥವಾ ಉತ್ತರಪ್ರದೇಶದಲ್ಲೋ ನಡೆದಿದ್ದರೆ ನಮ್ಮ ಮಾಧ್ಯಮಗಳು ಅದನ್ನು ನೋಡುವ ಪರಿ ಹೇಗಿರುತ್ತಿತ್ತೋ ಯೋಚಿಸಿ? ವ್ಯಂಗ್ಯವೆಂದರೆ, ಅಸ್ಸಾಂ ತನ್ನ ಸಮಯವನ್ನು ಭಾರತಕ್ಕಿಂತಲೂ ಭಿನ್ನವಾಗಿ ಅಳವಡಿಸಿಕೊಳ್ಳಲು ಹೊರಟಿದೆ. ಆದರೆ ಅದರ ಟೈಂ ಮಾತ್ರ ಅಷ್ಟು ಸುಲಭವಾಗಿ ಬದಲಾಗುವಂತೆ ಕಾಣುತ್ತಿಲ್ಲ!
-ರಾಘವೇಂದ್ರ ಆಚಾರ್ಯ
ಕನ್ನಡಪ್ರಭ