ವಿವೇಕರ ವಿಶಿಷ್ಟ ಸಂನ್ಯಾಸ
ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ. ಅದನ್ನು ರಾಷ್ಟ್ರೀಯ ಯುವದಿನ ಎಂದೂ ಆಚರಿಸಲಾಗುತ್ತದೆ. ತನ್ನಿಮಿತ್ತ ಲೇಖನ..
ಸ್ವಾಮಿ ವಿವೇಕಾನಂದರು ಭಾರತದಲ್ಲಿ ಉದಯಿಸಿದ ಕ್ರಾಂತಿಕಾರಿ ಸಂನ್ಯಾಸಿ ಎಂಬುದು ಸೂಕ್ತ ವ್ಯಾಖ್ಯಾನ. ಏಕೆಂದರೆ ಸನ್ಯಾಸವೆಂದರೆ ಕೇವಲ ಕಟ್ಟುಪಾಡು, ಸಂಪ್ರದಾಯಗಳ ಪಾಲನೆ ಎಂಬ ಚೌಕಟ್ಟಿನಿಂದ ಹೊರಬಂದು ಹೊಸ ಪಥದಲ್ಲಿ ನಡೆದವರು ಅವರು. ಈಗಿನ ಆಧುನಿಕ ಸಂದರ್ಭದಲ್ಲೇ ಸನ್ಯಾಸವೆಂಬುದು ಕೆಲವೆಡೆ ವಿಪರೀತ ಮಡಿ- ಮೈಲಿಗೆಗಳಿಗೆ ಸೀಮಿತವಾಗಿರುವಾಗ, ನೂರು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಯಾರಾದರೂ ಊಹಿಸಿಕೊಳ್ಳಬಹುದು.
ಒಬ್ಬ ಸಂನ್ಯಾಸಿ ಹೀಗೂ ಇರಬಹುದು ಎಂಬುದನ್ನು ಸ್ವಾಮೀಜಿ ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಅವರಲ್ಲಿ ಯೋಧರಿಗಿರಬೇಕಾದ ಕ್ಷಾತ್ರತೇಜವಿತ್ತು, ಸಂನ್ಯಾಸಿಗಿರಬೇಕಾದ ಜ್ಞಾನ ತೇಜಸ್ಸು ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇತರರ ನೋವಿಗೆ ಮಿಡಿಯುವಂತ ಹೃದಯ ಶ್ರೀಮಂತಿಕೆ ಇತ್ತು. ಅಂದಿನ ಕಾಲದಲ್ಲಿ ಸಂನ್ಯಾಸಿಗಳೆಂದರೆ ಜೀವನದ ರಭಸಕ್ಕೆ ಸಿಗದೆ ದೂರದ ಕಾಡಿನಲ್ಲಿ ಹೋಗಿ ದೇವರ ಧ್ಯಾನದಲ್ಲಿ ತೊಡಗುವುದು ಎಂದಿತ್ತು. ಆದರೆ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಅಪರೂಪದ ಪರಂಪರೆ ಸಮಾಜದ ಮಧ್ಯಯೇ ಇದ್ದು ಸಮಾಜದ ಒಳಿತಿಗಾಗಿ ಶ್ರಮಿಸಿವುದಾಗಿತ್ತು. ಅದಕ್ಕೆ ಅವರ ಜೀವನದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ ಬಂದದ್ದು 1892 ಅಕ್ಟೋಬರ್ 15 ರಂದು. ಬೆಳಗಾವಿಯ ಪ್ರಖ್ಯಾತ ವಕೀಲರಾಗಿದ್ದ ಜಿ.ಎಸ್.ಭಾಟೆ ಎಂಬುವರ ಮನೆಗೆ ಬಂದರು. ಮೊದಲ ಬಾರಿಗೆ ಸ್ವಾಮಿವಿವೇಕಾನಂದರನ್ನು ಕಂಡಾಗ ಬಾಟೆಯವರಿಗೆ ಆದ ಅನುಭವವನ್ನು ಅವರು 'ಪ್ರಭುದ್ಧ ಭಾರತ'ಕ್ಕೆ ಬರೆದ ಲೇಖನವೊಂದರಲ್ಲಿ ವಿವರಿಸಿದ್ದಾರೆ. ಸ್ವಾಮೀಜಿಯವರನ್ನು ಕಂಡಾಗ ಅವರಿಗಾದ ಕಿರಿಕಿರಿಯ ವಿಷಯವೆಂದರೆ ಅವರು ತೊಟ್ಟಿದ್ದ ಕಾವಿ ಬಣ್ಣದ ಬನಿಯನ್. ಅಂದಿನ ಕಾಲದಲ್ಲಿ ಸಂನ್ಯಾಸಿಗಳಾದವರು ಏಕವಸ್ತ್ರವನ್ನು ಧರಿಸಬೇಕು, ಹೊಲಿದ ಬಟ್ಟೆಯನ್ನು ಧರಿಸಬಾರದು ಎಂಬ ಆಚರಣೆಯಿತ್ತು. ಆದ್ದರಿಂದ ಬಾಟೆಯವರಿಗೆ ಕಿರಿಕಿರಿ ಅನ್ನಿಸಿತ್ತು. ನಂತರ ಸ್ವಾಮಿಜಿಯವರು ಭಾಟೆಯವರ ಮನೆಯಲ್ಲಿ ಕೆಲವು ದಿನ ಉಳಿದುಕೊಂಡಿದ್ದರು. ಆಗ ಸ್ವಾಮಿಜಿಯವರ ಬಗ್ಗೆ ಭಾಟೆಯವರಿಗೆ ಇನ್ನು ಕೆಲವು ಆಘಾತಕಾರಿ ವಿಷಯಗಳು ತಿಳಿದವು. ಒಮ್ಮೆ ಊಟದ ನಂತರ ಸ್ವಾಮಿಜಿ ತಿನ್ನಲು ಎಲೆ ಅಡಿಕೆ ಸಿಗಬಹುದೇ ಎಂದು ಕೇಳುತ್ತಾರೆ. ಆಗ ಭಾಟೆಯವರಿಗೆ ಆಶ್ಚರ್ಯದ ಜೊತೆ ಆಘಾತವೂ ಆಯಿತು. ಸಂನ್ಯಾಸಿಗಳು ಎಂದಾದರು ಎಲೆ ಅಡಿಕೆ ತಿನ್ನುವುದುಂಟೆ ಎಂದು ಅವರಿಗೆ ಅನ್ನಿಸಿತು. ಹಾಗೆ ಮಾತನಾಡುವಾಗ ಸ್ವಾಮಿಜಿ ಕಲ್ಕತ್ತದವರು ಎಂಬುದು ತಿಳಿಯಿತು. ಆಗ ಸ್ವಾಮೀಜಿ ಹೇಳಿದರಂತೆ ನನಗೆ ಅತ್ಯಂತ ಪ್ರಿಯವಾದ ಆಹಾರವೆಂದರೆ ಮೀನು ಎಂದು. ಆಗ ಭಾಟೆ, ಇದೆಂತ ಕರ್ಮ, ಈ ಸಂನ್ಯಾಸಿ ಮಾಂಸಾಹಾರಿ ಸಂನ್ಯಾಸಿ ಎಂದುಕೊಂಡು ಮರುಗಿದರಂತೆ. ಭಾಟೆ ಬಹಳ ಸಂಪ್ರದಾಯ ಕುಟುಂಬದಿಂದ ಬಂದವರು. ಅವರಿಗೆ ಈ ವಿಷಯಗಳು ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗಿದ್ದವು. ಒಮ್ಮೆ ಒಂದು ಸಂಜೆ ಭಾಟೆಯವರು ಅಷ್ಟಾಧ್ಯಾಯಿಯನ್ನು ಓದುತ್ತಿದ್ದರು. ಆಗ ಬಳಿಯಲ್ಲೇ ಕುಳಿತಿದ್ದ ಸ್ವಾಮೀಜಿಯವರು ಭಾಟೆಯವರನ್ನು ತಡೆದು, 'ಇದು ತಪ್ಪಿದೆ ಹೀಗಲ್ಲ ಹಾಗೆ' ಎಂದು ಇಡೀ ಅಷ್ಟಾಧ್ಯಾಯಿಯನ್ನು ನೋಡದೆ ಹೇಳಿದರಂತೆ. ಆಗ ಸ್ವಾಮೀಜಿಯವರ ಬಗೆಗಿದ್ದ ಅವರ ಪ್ರೀತಿ ಹೆಚ್ಚಾಯಿತು ಎಂದು ಭಾಟೆಯವರು ಹೇಳುತ್ತಾರೆ. ಭಾಟೆಯವರಿಗೆ ಈ ಘಟನೆಯಿಂದ ಒಂದು ಪ್ರಮುಖ ಸಂಗತಿ ಅರ್ಥವಾಯಿತು. ಇದೊಂದು ವಿಶೇಷವಾದಂಥ ಸಂನ್ಯಾಸ. ಸಂನ್ಯಾಸ ಅಂದರೆ ಯಾವುದಕ್ಕೂ ಅಂಟಿಕೊಳ್ಳದೇ ಇರುವುದು. ಹಾಕಿರುವ ಬಟ್ಟೆಯಿಂದ ಸಂನ್ಯಾಸಿಯಾಗುವುದಿಲ್ಲ, ಮನೋವೃತ್ತಿಯ ಆಧಾರದಲ್ಲಿ ಸಂನ್ಯಾಸಿಯಾಗುತ್ತಾರೆ ಎಂದು ಅವರು ವಿವರಿಸುತ್ತಾರೆ. ಸಂನ್ಯಾಸಿ ಎಂದರೆ ವಿಮುಖನಾಗುವುದಲ್ಲ. ಬದಲಿಗೆ ಯಾವುದರ ಬಗ್ಗೆಯೂ ಮೋಹವಿಲ್ಲದಿರುವುದು, ಎಂದು ಸ್ವಾಮೀಜಿ ಸೊಗಸಾಗಿ ತಿಳಿಸಿಕೊಟ್ಟರು.
ಸಾಮಾನ್ಯವಾಗಿ ಸಂನ್ಯಾಸಿಗಳು ತಮ್ಮ ಭಾವೋದ್ವೇಗವನ್ನು ತೋರಿಸುವಂತಿಲ್ಲ ಎಂಬ ಮಾತಿದೆ. ಆದರೆ, ಪ್ರೀತಿಯ ಅಂತಃಕರಣದ ಪ್ರತಿಮೂರ್ತಿಯವರಾಗಿದ್ದರು ಸ್ವಾಮಿ ವಿವೇಕಾನಂದರು ಎಂಬುದು ಅನೇಕ ಘಟನೆಗಳಿಂದ ತಿಳಿಯುತ್ತದೆ. ಒಮ್ಮೆ 1890 ರ ಏಪ್ರಿಲ್ 13 ರಂದು ಸ್ವಾಮಿಜಿ ವಾರಣಾಸಿಯಲ್ಲಿರುತ್ತಾರೆ. ಆಗ ಹಿರಿಯ ಸಂನ್ಯಾಸಿಗಳೊಬ್ಬರು ತೀರಿಕೊಂಡ ಸುದ್ದಿ ಬಂತು. ಸುದ್ದಿ ತಿಳಿದ ತಕ್ಷಣ ಸ್ವಾಮೀಜಿ ಬಿಕ್ಕಿ ಬಿಕ್ಕಿ ಅಳತೊಡಗಿದರು.
ಸ್ವಾಮಿ ವಿವೇಕಾನಂದರು ಧರ್ಮದ ಜೊತೆಗೆ ದೇಶ, ದೇಶದ ಜೊತೆಗೆ ದೇಶದಲ್ಲಿರುವ ದೀನ ದಲಿತರ ಪರವಾಗಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಒಮ್ಮೆ ಪಂಡಿತ್ ಗಣೇಶ್ ದೇವಸ್ಕರ್ ಎಂಬ ವಿದ್ವಾಂಸರು ತಮ್ಮ ತಂಡದೊಡನೆ ಸ್ವಾಮೀಜಿಯವರನ್ನು ಭೇಟಿಯಾಗಲು ಬರುತ್ತಾರೆ. ಅನೇಕ ತಾಸುಗಳು ಧರ್ಮದ ವಿಚಾರವಾಗಿ ಚರ್ಚೆ ನಡೆಯುತ್ತದೆ. ಈ ನಡುವೆ ಒಂದು ಮಾತು ಚರ್ಚೆಗೆ ಬರುತ್ತದೆ. ಅದು ಪಂಜಾಬ್ನಲ್ಲಿ ದಲಿತರ ಮೇಲಿನ ದಬ್ಬಾಳಿಕೆಯ ಕುರಿತು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿ. ಇದನ್ನು ಕೇಳಿದ ಸ್ವಾಮೀಜಿ ಆ ಘಟನೆಯನ್ನು ಕಟುವಾಗಿ ಟೀಕಿಸುತ್ತಾರೆ. ಅದನ್ನು ಕೇಳಿದ ಸಂಪ್ರದಾಯವಾದಿಯಾಗಿದ್ದ ಆ ಪಂಡಿತರು- 'ಅದು ಅವರವರ ಕರ್ಮ. ಏನು ಮಾಡಲು ಸಾಧ್ಯ? ಅನುಭವಿಸಬೇಕು.'ಎನ್ನುತ್ತಾರೆ. ಇದನ್ನು ಕೇಳಿ ಸಿಟ್ಟುಗೊಂಡ ಸ್ವಾಮಿ ವಿವೇಕಾನಂದರು 'ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಒಂದು ನಾಯಿ ಕೂಡ ಅನ್ನವಿಲ್ಲದೆ ಒದ್ದಾಡುವುದೋ ಅಲ್ಲಿಯವರೆಗೆ ಅದಕ್ಕೆ ಆಹಾರ ಕೊಡುವುದೇ ನನ್ನ ಧರ್ಮ. ಉಳಿದದ್ದೆಲ್ಲ ಅಧರ್ಮ' ಎನ್ನುತ್ತಾರೆ.
ಇದು ಸ್ವಾಮೀಜಿ ಧರ್ಮಕ್ಕೆ ನೀಡಿದ ಹೊಸ ವ್ಯಾಖ್ಯಾನ. ನನ್ನ ದೇಶದಲ್ಲಿ ಬಡತನ ಇರಬಾರದು, ಯಾರೂ ಉಪವಾಸದಿಂದ ಬದುಕಬಾರದು ಎಂದು ಅವರೊಬ್ಬ ರಾಜಕಾರಣಿಯಾಗಲ್ಲದೇ ಸಂನ್ಯಾಸಿಯಾಗಿ ಹೇಳಿದರು.
- ಪು. ರವಿವರ್ಮ