ಅಂಕಣಗಳು

ಪಕ್ಷದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿರುವ ರಾಹುಲ್

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ತೀರಾ ಇತ್ತೀಚಿನವರೆಗೂ ಅವರದ್ದೊಂದು ಸನ್ನೆ ಹಿರಿಯ ನಾಯಕರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುತ್ತಿತ್ತು. ಅವರು ಸಾರ್ವಜನಿಕವಾಗಿ ಅಸಾಮಾಧಾನ ವ್ಯಕ್ತಪಡಿಸಿದರೆಂಬ ಕಾರಣಕ್ಕೆ ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿಕೊಂಡು ಕಳಂಕಿತ ನಾಯಕರನ್ನು ರಕ್ಷಿಸುವ ತನ್ನ ಕೆಲಸವನ್ನು ನಿಲ್ಲಿಸಿಬಿಟ್ಟಿತು. ರಾಜಕುಟುಂಬದ ಹಿಡಿತ ಎಷ್ಟು ಬಲಿಷ್ಠವಾಗಿತ್ತೆಂದರೆ ಅದರ ಇಚ್ಛೆಯ ವಿರುದ್ಧ ನಡೆದುಕೊಳ್ಳುವುದಕ್ಕೆ ಯಾವ ಕಾಂಗ್ರೆಸ್ಸಿಗನಿಗೂ ಸಾಧ್ಯವಿರಲಿಲ್ಲ. ಗಾಂಧಿ ಕುಟುಂಬಕ್ಕೆ ನಿಸ್ಸಂದೇಹ ನಿಷ್ಠೆಯನ್ನು ತೋರಿಸುವುದೇ ಪಕ್ಷದಲ್ಲಿ ಮೇಲ್ಮಟ್ಟಕ್ಕೇರುವ ಅರ್ಹತೆಯಾಗಿತ್ತು.
ಹೊರನೋಟಕ್ಕೆ ಕಾಂಗ್ರೆಸ್ಸಿನ ಜೀವನ ಶೈಲಿ ಈಗಲೂ ಮೊದಲಿನಿಂತೆಯೇ ಇದೆ ಎನಿಸಬಹುದು. ಆದರೆ ಒಳಗೆ ಎದ್ದಿರುವ ಬದಲಾವಣೆಯ ಅಲೆ ಪಕ್ಷವನ್ನು ಅಲುಗಾಡಿಸತೊಡಗಿದೆ. ರಾಜಕುಟುಂಬದ ಅನನುಭವಿ ಯುವ ನಾಯಕನನ್ನು ತಡೆದುನಿಲ್ಲಿಸುವ ಮಾರ್ಗವನ್ನು ಅನುಭವಿ ಹಿರಿಯ ನಾಯಕರು ಕಂಡುಕೊಂಡಿದ್ದಾರೆ. ಇದರ ನಿದರ್ಶನವನ್ನು ನಾವು ಮುಂಬೈ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಆಗುತ್ತಿರುವ ಬದಲಾವಣೆಯಲ್ಲಿ ಸ್ಪಷ್ಟವಾಗಿ ಕಾಣಬಹುದು.
ಮುಂಬೈನ ಆದರ್ಶ ಹೌಸಿಂಗ್ ಹಗರಣ, ಸಾಲುಸಾಲಾಗಿ ಕಾಂಗ್ರೆಸ್ ಮುಖ್ಯಮಂತ್ರಿಗಳು ಅದರಲ್ಲಿ ಆಡಳಿತದ ದುರ್ಬಳಕೆ ಮಾಡಿಕೊಂಡ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೆ. ಈ ಹಗರಣದಲ್ಲಿ ಹಲವಾರು ರಾಜಕೀಯ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಸಾಕ್ಷ್ಯ ದೊರಕಿದೆಯೆಂದು ತನಿಖಾ ಆಯೋಗದ ವರದಿ ಹೇಳಿತು. ಆದರೂ ಆ ವರದಿಯನ್ನು ತಿರಸ್ಕರಿಸುವ ಧೈರ್ಯವನ್ನು ಮಹಾರಾಷ್ಟ್ರ ಸರ್ಕಾರ ತೋರಿತು. ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಅಚಾನಕ್ಕಾಗಿ ಅಖಾಡಕ್ಕಿಳಿದ ಯುವರಾಜ ರಾಹುಲ್ ಗಾಂಧಿ ಸರ್ಕಾರದ ನಿರ್ಧಾರಕ್ಕೆ ಛೀಮಾರಿ ಹಾಕಿದರು. ಆಗ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿಕೊಳ್ಳುವುದಾಗಿ ಹೇಳಿತು.  
ಹಾಗೆ ಹೇಳಿತಾದರೂ, ಹಾಗೆ ಮಾಡಲಿಲ್ಲ! ಕಳಂಕಿತ ರಾಜಕೀಯ ನಾಯಕರ ಬೆಂಬಲಕ್ಕೆ ನಿಂತಿರುವ ಸರ್ಕಾರ ಅವರ ವಿರುದ್ಧ ಯಾವ ಕ್ರಮವನ್ನೂ ಜರುಗಿಸುವುದಿಲ್ಲ ಎಂದು ಗಟ್ಟಿಯಾಗಿಯೇ ಹೇಳಿದೆ. ರಾಹುಲ್ ಗಾಂಧಿಗೆ ಅದು ಕೊಟ್ಟ ಒಂದು ರಿಯಾಯಿತಿ ಎಂದರೆ, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡುವುದಾಗಿ ಹೇಳಿರುವುದಷ್ಟೆ. ರೋಗಕ್ಕಿಂತಲೂ ಮದ್ದೇ ಮಾರಣಾಂತಿಕವಾಗಿದೆ!
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ, ಈ ಕುರಿತು ವಿವರಣೆ ಕೊಡುವಂತೆ ಅವರನ್ನು ಕೇಳಿತ್ತು ಹೈಕಮಾಂಡ್. ಆಗ ಕಾಣದ ಕೈಗಳು ಕಾಣದ ತಂತಿಯನ್ನು ಮೀಟಿದವು. ಇದರಿಂದಾಗಿ ರಿವರ್ಸ್ ಗೇರ್ ಹಾಕಿರುವ ಹೈಕಮಾಂಡ್ ವೀರಭದ್ರ ಸಿಂಗ್ ಅವರನ್ನು ರಕ್ಷಿಸುವ ಪ್ರಯತ್ನಕ್ಕಿಳಿದಿದೆ.
'ರಾಹುಲ್ ಗಾಂಧಿ ಕಡೆಗಣಿಕೆ' ಹೆಚ್ಚು ಸ್ಪಷ್ಟವಾಗಿ ಗೋಚರವಾಗಿದ್ದು ಕರ್ನಾಟಕದಲ್ಲಿ. ಬಿಜೆಪಿ ವಿರುದ್ಧ ಎದ್ದ ಅಧಿಕಾರ ವಿರೋಧಿ ಅಲೆಯಿಂದಾಗಿಯೇ ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ತನಗೆ ಗೆಲ್ಲಲು ಸಾಧ್ಯವಾಯಿತು ಎನ್ನುವುದು ಕಾಂಗ್ರೆಸ್‌ಗೆ ಆಗ ಗೊತ್ತಾಯಿತು. ಈ ಕಾರಣಕ್ಕಾಗಿಯೇ ರಾಹುಲ್ ಗಾಂಧಿಯವರು ರಾಜ್ಯ ಕಾಂಗ್ರೆಸ್‌ಗೆ ಎರಡು ಆದೇಶಗಳನ್ನಿತ್ತರು: ಮೊದಲನೆಯದು, ಮುಖ್ಯಮಂತ್ರಿ ಹುದ್ದೆ ಕ್ಲೀನ್ ಇಮೇಜ್ ಹೊಂದಿರುವ ಸಿದ್ದರಾಮಯ್ಯನವರಿಗೆ ಸೇರಬೇಕು ಮತ್ತು ಎರಡನೆಯದು, ಕಳಂಕಿತ ನಾಯಕರಿಗೆ ಸಚಿವ ಸ್ಥಾನ ಕೊಡಬಾರದು ಎಂಬುದು. "ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಹೊರಗಿಡಬೇಕು, ಏಕೆಂದರೆ ಅವರು ಕಳಂಕಿತರಷ್ಟೇ ಅಲ್ಲದೆ ಅದರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದರು ಎನ್ನುತ್ತಾರೆ ಕಾಂಗ್ರೆಸ್ಸಿನ ಒಳಗಿನವರು. ಅವರ ಈ ಎರಡೂ ಆಜ್ಞೆಗಳನ್ನೂ ಕಾಂಗ್ರೆಸ್ ಪಾಲಿಸಿ, ಭರವಸೆಯ ಸರ್ಕಾರವನ್ನು ಆರಂಭಿಸಿತು.
ದುರ್ದೈವವಶಾತ್, ರಾಹುಲ್ ಗಾಂಧಿ ಯಾವ ಇಬ್ಬರನ್ನು ಪಕ್ಷಕ್ಕೆ 'ಹಾನಿಕಾರಕ' ಎಂದು ಭಾವಿಸುತ್ತಿದ್ದರೋ, ಆ ಇಬ್ಬರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಈಗ ಆಯ್ಕೆ ಮಾಡಲಾಗಿದೆ. ಕೆಲವು ಹಿರಿಯ ನಾಯಕರು ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರೆ, ಸಾಮಾಜಿಕ ಕಾರ್ಯಕರ್ತರು, ಲೇಖಕರು ಮತ್ತು ವಿದ್ಯಾವಂತ ನಾಗರಿಕರು ಗಟ್ಟಿಯಾಗಿಯೇ ಲೊಚಗುಟ್ಟುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು, ರಾಹುಲ್ ಗಾಂಧಿಯವರ ಆಜ್ಞೆಯನ್ನು ಧಿಕ್ಕರಿಸಲು ಪ್ರೋತ್ಸಾಹ ನೀಡಿದವರ ಬಗ್ಗೆ. ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಗುಲಾಮ್ ನಬಿ ಆಜಾದ್ ರಾಜಕುಟುಂಬಕ್ಕೆ ನಿಷ್ಠರಾಗಿರುವಂತೆ ವರ್ತಿಸಿದರೂ, ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಚಾಣಾಕ್ಷತನ ಅವರಲ್ಲಿದೆ ಎನ್ನುವುದು ರಾಜ್ಯ ಕಾಂಗ್ರೆಸ್ಸಿನಲ್ಲಿ ಈಗ ಓಪನ್ ಸೀಕ್ರೆಟ್!  
ಕಳಂಕಿತರಿಗೆ ಕ್ಯಾಬಿನೆಟ್ ಸ್ಥಾನಗಳನ್ನು ಕೊಡುವ ಮೂಲಕ ಕಾಂಗ್ರೆಸ್ ತನ್ನ ಕಾಲ ಮೇಲೆಯೇ ಕಲ್ಲು ಹಾಕಿಕೊಂಡಿರುವುದಷ್ಟೇ ಅಲ್ಲದೆ, ಬಿಜೆಪಿಯ ಹಾದಿಯನ್ನು ಸುಗಮಗೊಳಿಸಿದೆ. ಈಗ ಬಿಜೆಪಿಗೆ ತನ್ನಲ್ಲಿರುವ ಕಳಂಕಿತ ನಾಯಕರನ್ನು ಮೇಲಕ್ಕೆತ್ತುವ ಅವಕಾಶ ಸಿಕ್ಕಿದೆ. ಅದಾಗ್ಯೂ ಯಡಿಯೂರಪ್ಪ ಅವರು ಮರಳಿ ಬಂದಿರುವುದರಿಂದ ಭ್ರಷ್ಟಾಚಾರದ ವಿಷಯವನ್ನು ಎತ್ತಿಕೊಂಡು ಇನ್ನೊಬ್ಬರ ಮೇಲೆ ಮುರಿದುಕೊಂಡು ಬೀಳುವ ಶಕ್ತಿಯನ್ನಂತೂ ಬಿಜೆಪಿ ಕಳೆದುಕೊಳ್ಳಲಿದೆ.
ಆದರೆ ಶಿವಕುಮಾರ್-ಬೇಗ್‌ರಿಂದ ಕಾಂಗ್ರೆಸ್‌ಗಾಗುವಷ್ಟು ಹಾನಿಯಂತೂ,  ಯಡಿಯೂರಪ್ಪ ಆಗಮನದಿಂದ ಬಿಜೆಪಿಗೆ ಆಗದು. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದ ಕದನ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ನಡೆಯಲಿದೆ. ದೇವೇಗೌಡರ ಜನತಾದಳವಂತೂ ಅಪ್ರಸ್ತುತ. ಅಧಿಕಾರ ಕಳೆದುಕೊಂಡು, ನಂತರ ಜೈಲು ಕಂಡು ಬಂದ ಯಡಿಯೂರಪ್ಪನವರನ್ನು ಅವರ ಸಮುದಾಯ ಕ್ಷಮಿಸಬಹುದು. ಹಾಗೇನಾದರೂ ಆದರೆ ಸುಮಾರು 3-4 ಸ್ಥಾನಗಳ ಲಾಭವಾದರೂ ಬಿಜೆಪಿಗೆ ಆಗಲಿದೆ. ಶಿವಕುಮಾರ್ ಮತ್ತು ಬೇಗ್‌ರ ಚಹರೆ ಎಷ್ಟೊಂದು ಕೊಳಕಾಗಿದೆಯೆಂದರೆ ಅವರು ಕಾಂಗ್ರೆಸ್‌ಗೆ ಲಾಭ ಮಾಡಿಕೊಡುವ ಮಾತು ಅಷ್ಟರಲ್ಲೇ ಇದೆ. ಅದಾಗ್ಯೂ, ಪಕ್ಷಕ್ಕಿಂತ ಸ್ವಹಿತದತ್ತ ಮನಸ್ಸುಮಾಡಿರುವ ಕಾಂಗ್ರೆಸ್ಸಿಗರಿಗೆ ಇದು ಚಿಂತೆಯ ವಿಷಯವೇ ಅಲ್ಲ ಬಿಡಿ. ದೇವರು ಯಾರನ್ನು ನಾಶ ಮಾಡಲು ಬಯಸುತ್ತಾನೋ, ಅವರನ್ನು ರಾಜಕಾರಣಿಯಾಗಿಸುತ್ತಾನಂತೆ!


-ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!