ರಾಷ್ಟ್ರೀಯ ಕೃಷಿ ಕಾರ್ಯಸೂಚಿಗೆ ಬೇಡಿಕೆಯಿಡುವ ಸಮಯವಿದು
ಇಂದಿಗೂ 65 ಪ್ರತಿಶತ ಭಾರತೀಯರು ಕೃಷಿಯ ಮೇಲೆಯೇ ಅವಲಂಬಿತರಾಗಿದ್ದಾರೆ...
ಗೋದಿ, ಬತ್ತ, ತರಕಾರಿ, ಹಣ್ಣು ಮತ್ತು ಕಬ್ಬು ಬೆಳೆಗಳ ಅತಿ ದೊಡ್ಡ ಉತ್ಪಾದಕ ರಾಷ್ಟ್ರಗಳಲ್ಲಿ, ಭಾರತ ಎರಡನೇ ಸ್ಥಾನದಲ್ಲಿದೆ. ಇಂದಿಗೂ 65 ಪ್ರತಿಶತ ಭಾರತೀಯರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆಯೇ ಅವಲಂಬಿತರಾಗಿದ್ದಾರೆ. ಆದಾಗ್ಯೂ ಇವುಗಳ ಒಟ್ಟಾರೆ ರಫ್ತು ಕೇವಲ 18 ಪ್ರತಿಶತದಷ್ಟಿದ್ದು, ಜಾಗತಿಕ ಆಹಾರ ವ್ಯಾಪಾರದಲ್ಲಿ ನಮ್ಮ ಪಾಲು 2 ಪ್ರತಿಶತಕ್ಕಿಂತಲೂ ಕಡಿಮೆಯಿದೆ. ಸ್ಪಷ್ಟವಾಗಿ ಈ ಅಂಕಿ ಸಂಖ್ಯೆಗಳು ಕೃಷಿ ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತವನ್ನು ವ್ಯಾಕುಲಗೊಳಿಸುವಂತಿವೆ. ಮುಂಬರುವ ದಶಕಗಳಲ್ಲಿ ಗ್ರಾಮೀಣ ಭಾಗದ ಜನರ ಜೀವನ ಗುಣಮಟ್ಟವನ್ನು ಸುಧಾರಿಸಬೇಕಾದರೆ, ಅವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುವಂಥ ಪರಿಸರ ನಿರ್ಮಿಸಬೇಕಾದರೆ, ಕೃಷಿಯೆಡೆಗಿನ ನಮ್ಮ ಕಾರ್ಯಸೂಚಿಯನ್ನು ಬದಲಿಸಿಕೊಳ್ಳಲೇಬೇಕು. ಈ ವರ್ಷ ಲೋಕಸಭಾ ಚುನಾವಣೆಗಳು ನಡೆಯಲಿರುವುದರಿಂದ, ಆರೋಗ್ಯಕರ ಚರ್ಚೆ, ಬೇಡಿಕೆ ಅಥವಾ ಲಾಬಿ ನಡೆಸಿಯಾದರೂ 'ರಾಷ್ಟ್ರೀಯ ಕೃಷಿ ಕಾರ್ಯಸೂಚಿ 2014' ಅನುಷ್ಠಾನಕ್ಕೆ ಬರುವಂತೆ ನಾವು ನೋಡಿಕೊಳ್ಳಬೇಕು. ಇದೇ ಸರಿಯಾದ ಸಮಯ!
ಪ್ರಮುಖ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿದ ಲೇಖನವೊಂದನ್ನು ನಾನು ಗಮನಿಸಿದೆ. "ನಗರಗಳ ಆರ್ಥಿಕತೆ ದುರ್ಬಲವಾಗಿ, ಹಣದುಬ್ಬರ/ ಜೀವನ ವೆಚ್ಚ ಹೆಚ್ಚಾಗುತ್ತಿರುವುದರಿಂದ ಮತ್ತು ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ ಭಾರತದ ಜನಸಂಖ್ಯೆಯಲ್ಲಿ 65 ಪ್ರತಿಶತದಷ್ಟಿರುವ 35 ವರ್ಷದ ಒಳಗಿನವರಲ್ಲಿ ಬಹುತೇಕರು ಗ್ರಾಮೀಣ ಭಾಗಗಳಿಗೆ ಹಿಂದಿರುಗುತ್ತಿದ್ದಾರೆ" ಎಂಬುದು ಆ ಲೇಖನದ ಸಾರವಾಗಿತ್ತು. ಈ ಬದಲಾವಣೆ ಭಾರತವನ್ನು ಆವರಿಸಿರುವ ಕೆಟ್ಟ ಆರ್ಥಿಕ ಪರಿಸರವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ. "ಈ ಎಲ್ಲಾ ವಿದ್ಯಮಾನಗಳು ನಿಜವೇ ಆದರೆ, ಭಾರತ ಜನಸಂಖ್ಯೆ ವಿಭಜನೆಯಿಂದಾಗಿ ಯಾವ ರೀತಿಯ ಲಾಭ ಪಡೆಯುತ್ತಿತ್ತೋ, ಈಗ ಅದೇ 'ಹೊರೆ'ಯಾಗಿ ಕಾಡುವ ಸಾಧ್ಯತೆಗಳಿವೆ" ಎಂದು ಪರಿಣತರು ವಾದಿಸುತ್ತಿದ್ದಾರೆ.
ಆದರೆ ಈ ವಿಷಯದಲ್ಲಿ ನನ್ನ ನಿಲವು ಭಿನ್ನವಾಗಿದೆ. ಈ ಸಮಯವನ್ನು ಮುಂಬರಲಿರುವ ಒಳ್ಳೆಯ ದಿನಗಳಿಗೆ 'ಸೂಚಕ' ಮತ್ತು ಆಟವನ್ನು ಬದಲಾಯಿಸುವ 'ಅವಕಾಶ' ಎಂದೇ ನಾನು ಭಾವಿಸುತ್ತೇನೆ. ಇದಕ್ಕೆ ಕಾರಣಗಳನ್ನೂ ಕೊಡಬಯಸುತ್ತೇನೆ...
ಪೂರೈಕೆ ಸರಪಳಿಯಲ್ಲಿನ ಮೂಲಸೌಕರ್ಯಗಳ ಕೊರತೆ ಮತ್ತು ರೈತನನ್ನು ನೇರವಾಗಿ ಗ್ರಾಹಕರ ಅಡುಗೆ ಮನೆಗೆ ತಲುಪಿಸಲು ವಿಫಲವಾಗುವ ಅತ್ಯಂತ ದುಬಾರಿ ಸಾರಿಗೆ ವ್ಯವಸ್ಥೆಯಿಂದಾಗಿ, ಇಂದು 30 ಪ್ರತಿಶತಕ್ಕಿಂತಲೂ ಹೆಚ್ಚು ತಾಜಾ ತರಕಾರಿ ಮತ್ತು ಹಣ್ಣುಗಳು ಭಾರತದಲ್ಲಿ ಹಾಳಾಗುತ್ತಿವೆ. ಈ ಸಮಸ್ಯೆಯನ್ನು ಮೊದಲು ಸರಿಪಡಿಸಬೇಕಾದ ಅಗತ್ಯವಿದೆ. ಕೇವಲ ಸರ್ಕಾರವೊಂದರ ನೇರ ಭಾಗವಹಿಸುವಿಕೆಯಷ್ಟೇ ಅಲ್ಲದೆ, ಖಾಸಗಿ ವಲಯಗಳೂ ಈ ಕೆಲಸದಲ್ಲಿ ಕೈ ಜೋಡಿಸಬೇಕು. ಉದಾಹರಣೆಗೆ- ಬಿಹಾರದಲ್ಲಿ, ಕೌಶಿಲೇಂದ್ರ ಕುಮಾರ್ ಎನ್ನುವ ಐಐಎಮ್-ಎ ಹಳೆಯ ವಿದ್ಯಾರ್ಥಿ ನಡೆಸುತ್ತಿರುವ "ಸಮೃದ್ಧಿ" ಮಾದರಿ ಅಥವಾ ಐಟಿಸಿಯ "ಇ-ಚೌಪಲ್" ಯೋಜನೆ ಅಥವಾ ಕರ್ನಾಟಕ ಸರ್ಕಾರ ನಡೆಸುವ "ಹಾಪ್ಕಾಮ್ಸ್".
ಒಂದು ವೇಳೆ ಕೇಂದ್ರ ಸರ್ಕಾರವೇನಾದರೂ ಕೃಷಿಗೆ ಸೂಕ್ತವಾದ ವಾತಾವರಣ ಕಲ್ಪಿಸಿ ಬಲಿಷ್ಠ ನೀತಿಗಳಿಗೆ ಆದ್ಯತೆ ಕೊಟ್ಟರೆ ನಿಸ್ಸಂಶಯವಾಗಿಯೂ ಭಾರತದ ಕೃಷಿಯಲ್ಲಿ ಎರಡಂಕಿಯ ಬೆಳವಣಿಗೆಯಾಗವುದಕ್ಕೆ ಸಾಧ್ಯತೆ ಇದೆ. ಕೇವಲ ಉತ್ಪಾದನಾ ವಲಯಕ್ಕಷ್ಟೇ ಅಲ್ಲದೆ, ಕೃಷಿಗೂ ಅಧಿಕ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಶಕ್ತಿಯಿದೆ ಎನ್ನುವುದನ್ನು ಕಳೆದ ಕೆಲವು ದಶಕಗಳಿಂದ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಸಾಬೀತು ಪಡಿಸುತ್ತಾ ಬಂದಿವೆ. ಆ ರಾಜ್ಯ ಸರ್ಕಾರಗಳ ಚುನಾವಣಾ ಯಶಸ್ಸು, ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಅವು ಜಾರಿ ಮಾಡಿದ ಹೊಸ ಮತ್ತು ಸೃಜನಾತ್ಮಕ ಕೃಷಿ ನೀತಿಗಳ ಮೇಲೆಯೇ ಅವಲಂಬಿತವಾಗಿದೆ. ಗುಜರಾತ್ನಲ್ಲಿ Electronic Soil Health Card, Animal Hostel, Krishi Rathನಂಥ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ. ಇನ್ನು ಮಧ್ಯಪ್ರದೇಶದಲ್ಲಿ ಯಂತ್ರದೂತ, ಸೂರಜ್ ಧಾರಾ ಮತ್ತು ಅನ್ನಪೂರ್ಣ ಯೋಜನೆಗಳು ಕೃಷಿಗೆ ಹೊಸ ಮಜಲನ್ನು ನೀಡಿವೆ. ಒಂದು ಕಾಲಕ್ಕೆ ಅಸಾಧ್ಯವೆಂದೆನಿಸಿದ್ದನ್ನು ಸಾಧ್ಯ ಮಾಡಿ ತೋರಿಸಿರುವ ರಾಜ್ಯಗಳಿವು.
2014ರಲ್ಲಿ ಬರಲಿರುವ ಸರ್ಕಾರ ತುರ್ತಾಗಿ ಮಾಡಬೇಕಿರುವ ಕೆಲವು ಮುಖ್ಯ ಕೆಲಸಗಳಿವೆ. ಫಾರ್ವರ್ಡ್ ಮಾರ್ಕೆಟ್ ಕಮಿಷನ್ಗೆ ಹೆಚ್ಚಿನ ಶಕ್ತಿಯನ್ನು ನೀಡುವುದು ಮತ್ತದನ್ನು ಹೆಚ್ಚಿನ ಕಾರ್ಯಕಾರಿಯನ್ನಾಗಿ ಮಾಡುವುದು, ರಾಷ್ಟ್ರೀಯ ವಿದ್ಯುನ್ಮಾನ ಸರಕು ಬೆಲೆ ವಿನಿಮಯವನ್ನು ಸ್ಥಾಪಿಸುವುದು, ಪುರಾತನ ಎಪಿಎಮ್ಸಿ ಕಾಯ್ದೆಯನ್ನು ಕಿತ್ತೆಸೆದು ಆದರ ಜಾಗದಲ್ಲಿ ಮುಕ್ತ ಮಾರುಕಟ್ಟೆ ಮಾದರಿಯ ಕಾಯ್ದೆಯನ್ನು ಜಾರಿಗೊಳಿಸುವುದು, ಹಣದ ಕೊರತೆಯಿಂದ ಬಳಲುತ್ತಿರುವ ಭಾರತದ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನಾ ಮತ್ತು ಅಭಿವೃದ್ಧಿ ಇಲಾಖೆಗಳಲ್ಲಿ ಹಣ ಹೂಡುವುದು ಇತ್ಯಾದಿ. ಅಲ್ಲದೆ, ಇಂದು ಭಾರತದಲ್ಲಿ ನುರಿತ ಕೃಷಿ ಮಾನವಸಂಪನ್ಮೂಲದ ಕೊರತೆಯಿರುವುದರಿಂದ ಆ ಸಮಸ್ಯೆಯನ್ನು ಬಗೆಹರಿಸುವುದಕ್ಕೂ ಆದ್ಯತೆ ನೀಡಬೇಕು. ದೇಶೀಯ ಕೃಷಿ ಬೆಳವಣಿಗೆಗೆ ಪೂರಕವಾಗುವಂಥ ಪ್ರಭಾವಿ ಸ್ಕೂಲ್ಗಳು, ಪಠ್ಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕೃಷಿ ಶಿಕ್ಷಣದತ್ತ ಯುವಜನತೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಕಡೇಪಕ್ಷ ಕರ್ನಾಟಕದ ವಿಷಯದಲ್ಲಂತೂ ಇದು ಸತ್ಯ. ಆದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಹೆಚ್ಚಾಗುತ್ತಿರುವ ಜನಸಂಖ್ಯೆಯ ಹೊಟ್ಟೆ ತುಂಬಿಸಲು ಕೃಷಿಯಲ್ಲಿ ಕೌಶಲ್ಯ ಹೊಂದಿದವರ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಜಾಸ್ತಿ ಇದೆ.
ಸಬ್ಸಿಡಿ ಕೊಡುವಂಥ ಜನಪ್ರಿಯ ಯೋಜನೆಗಳನ್ನು ಪಕ್ಕಕ್ಕಿಟ್ಟು, ದಿಟ್ಟ ಮತ್ತು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ನಮ್ಮ ಸರ್ಕಾರಗಳಿಗೆ ಎದುರಾಗಿದೆ. ಇದರಿಂದಾಗಿ ಅಲ್ಪಾವಧಿ ಸಮಸ್ಯೆಯಾದ ಆಹಾರದುಬ್ಬರದಿಂದ ಹಿಡಿದು, ದೀರ್ಘಾವಧಿಯ ಸಮಸ್ಯೆಗಳಾದ ಹಸಿವು, ಬಡತನ ಮತ್ತು ಅಪೌಷ್ಟಿಕತೆಗಳು ದೂರವಾಗುತ್ತವೆ. ಪಶ್ಚಿಮ ರಾಷ್ಟ್ರಗಳಿಗೆ ಹೋಲಿಸಿದರೆ(ಉದಾಹರಣೆಗೆ- ಅಮೆರಿಕ ಮತ್ತು ಇಂಗ್ಲೆಂಡ್) ಭಾರತದ ಹವಾಮಾನ ಕೃಷಿಗೆ ಹೇಳಿಮಾಡಿಸಿದಂತಿದೆ.
ವರ್ಷದ 12 ತಿಂಗಳೂ ಭಾರತದಲ್ಲಿ ಸೂರ್ಯ ಮಿನುಗುತ್ತಲೇ ಇರುತ್ತಾನೆ. ಜಲಸಂಪನ್ಮೂಲಗಳೂ ನಮ್ಮಲ್ಲಿ ದಂಡಿಯಾಗಿವೆ. ಈಶಾನ್ಯ ರಾಜ್ಯಗಳ ಆ್ಯಪಲ್ಗಳಿಂದ ಹಿಡಿದು, ಮಹಾರಾಷ್ಟ್ರದ ಅಲ್ಫಾನ್ಸೋ ಮಾವಿನ ಹಣ್ಣಿನ ವರೆಗೂ ಅತ್ಯುತ್ತಮ ಫ್ರೂಟ್ ಬ್ರ್ಯಾಂಡ್ಗಳನ್ನು ನಾವು ಹೊಂದಿದ್ದೇವೆ. ಉತ್ತಮ ಗುಣಮಟ್ಟದ ಆಹಾರ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಆ ಬೇಡಿಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ನಾವು ಇದರ ಪ್ರಯೋಜನ ಪಡೆದು, ಭಾರತದ ಬ್ರ್ಯಾಂಡ್ಗಳು ಜಾಗತಿಕ ಆಹಾರ ಮಾರುಕಟ್ಟೆಗೆ ದಾಪುಗಾಲಿಡುವಂತೆ ಮಾಡಬಾರದೇಕೆ?
ನಾವು ಸದ್ಯದ ಕೃಷಿ ಬಿಕ್ಕಟ್ಟು ಮತ್ತು ಕೆಟ್ಟನಿರ್ವಹಣೆಯಿಂದ ಮುಕ್ತವಾಗಿ ಜಾಗತಿಕ ಕೃಷಿ ಸೂಪರ್ ಪವರ್ ಆಗಬಲ್ಲೆವು. ಇದೆಲ್ಲ ಸಾಧ್ಯವಾಗಬೇಕಾದರೆ, ಭಾರತೀಯರು ಎಲ್ಲಾ ರಾಜಕೀಯ ಪಕ್ಷಗಳನ್ನು ಮತ್ತು ಅದರ ನಾಯಕರನ್ನು 2014 ಮತ್ತು ಅದಕ್ಕೂ ಮುಂದಿನ ದಿನಗಳಿಗಾಗಿ ದೃಢವಾದ ಮತ್ತು ದೂರದೃಷ್ಟಿಯುಳ್ಳ ಕೃಷಿ ಕಾರ್ಯಸೂಚಿಯನ್ನು ತರಬೇಕು ಎಂದು ಒತ್ತಾಯಿಸಬೇಕು. ಅದು ಸಾಧ್ಯವಾಗಬೇಕಾದರೆ 'ಜೈ ಜವಾನ್, ಜೈ ಕಿಸಾನ್' ಎನ್ನುವ ಘೋಷಣೆಯನ್ನು ಅರ್ಥಮಾಡಿಕೊಂಡ, ದೂರದೃಷ್ಟಿಯುಳ್ಳ ನಾಯಕ ನಮ್ಮ ಮುಂದಿನ ಪ್ರಧಾನಿಯಾಗಬೇಕು. ಆ ನಾಯಕ ಕಾಂಗ್ರೆಸ್ಸಿನವರೇ ಆಗಿರಬೇಕೆಂದೇನೂ ಇಲ್ಲ.
- ಅಜಯ್ ಕುಲಿಗೋಡ್
ಸಂಶೋಧನಾ ವಿದ್ಯಾರ್ಥಿ, ಅರಿಜೋನಾ ರಾಜ್ಯ ವಿ.ವಿ., ಅಮೆರಿಕ
ajaykuligod@hotmail.com