ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪ್ರಚಾರ ಸಾಕು, ಆಡಳಿತಾನುಭವ ಬೇಕು

Vishwanath S
Updated On : 15 Jan 2014, 12:32 pm

ಅದು 2008ನೇ ಇಸ್ವಿಯ ಪೂರ್ವಾರ್ಧ. ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಮ್‌ಎನ್‌ಎಸ್) 'ಮರಾಠಿಗರಿಗಾಗಿ ಮುಂಬೈ' ಎಂಬ ಬೃಹತ್ ಅಭಿಯಾನವನ್ನು ಹಮ್ಮಿಕೊಂಡಿತ್ತು. ಮುಂಬೈಯಲ್ಲಿ ನೆಲೆನಿಂತಿರುವ ಇತರೆ ರಾಜ್ಯಗಳ ಜನರನ್ನು ಹೊರಹಾಕಿ, ಕೇವಲ ಮರಾಠಿಗರು ಮಾತ್ರ ನೆಲೆಸುವಂತೆ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿತ್ತು. ಇದರ ಪ್ರಯುಕ್ತ ಎಮ್‌ಎನ್‌ಎಸ್ ಕಾರ್ಯಕರ್ತರು ಫೆಬ್ರವರಿ ತಿಂಗಳ ಮೊದಲು ಅಲ್ಲಿದ್ದ ಹಲವಾರು ಉತ್ತರ ಭಾರತೀಯ ವರ್ತಕರ, ಶ್ರಮಿಕರ ಮೇಲೆ ಹಲ್ಲೆಗೆ ಮುಂದಾದರು. ಸಹಜವಾಗಿ ಇದಕ್ಕೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು. ಎಮ್‌ಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರು ಕೇಂದ್ರ ಗೃಹಮಂತ್ರಿ ಪಿ ಚಿದಂಬರಮ್ ಅವರಿಗೆ ಪತ್ರ ಬರೆದು, ಮುಂಬೈಯಲ್ಲಿನ ಉದ್ಯೋಗಗಳಲ್ಲಿ ಮರಾಠಿಗರಿಗೇ ಸಿಂಹಪಾಲಿರಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಿದಂಬರಮ್‌ರವರು, ಮುಂಬೈ ಕೇವಲ ಮಹಾರಾಷ್ಟ್ರದ ರಾಜಧಾನಿಯೊಂದೇ ಅಲ್ಲ, ಬದಲಾಗಿ ದೇಶದ ವಾಣಿಜ್ಯ ರಾಜಧಾನಿಯೂ ಹೌದು. ಹಾಗಾಗಿ ಇಂತಹ ವಿಚಾರವೇ ಮೂರ್ಖತನದಿಂದ ಕೂಡಿದ್ದು ಎಂದರು. ಇದನ್ನು ಹೆಚ್ಚು ಕಮ್ಮಿ ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸಿದವು.
ಇದೀಗ ಆಪ್ ಸರ್ಕಾರದ ಶಿಕ್ಷಣ ಸಚಿವ ಮನೀಶ್ ಸಿಸೋಡಿಯ ಸಹ ಎಮ್‌ಎನ್‌ಎಸ್ ಮಾರ್ಗದಲ್ಲೇ ಸಾಗಿದಂತಿದೆ.  ದೆಹಲಿ ವಿಶ್ವವಿದ್ಯಾಲಯದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಮನೀಶ್ ಅವರು ಕೇವಲ ದೆಹಲಿ ವಿಶ್ವವಿದ್ಯಾಲಯವೊಂದೇ ಅಲ್ಲ, ರಾಜ್ಯ ಸರ್ಕಾರಿ ಪ್ರಾಯೋಜಿತ ಎಲ್ಲ ಕಾಲೇಜುಗಳಲ್ಲಿಯೂ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ದೆಹಲಿಯ ಮೂಲನಿವಾಸಿಗಳಿಗೆ ಶೇಕಡಾ 90ರಷ್ಟು ಮೀಸಲಾತಿಯನ್ನು ಕಲ್ಪಿಸುತ್ತೇವೆ ಎಂದು ಘೋಷಿಸಿದ್ದಾರೆ. ವಿಚಿತ್ರವೆಂದರೆ ಮುಂಬೈಯಲ್ಲಿ ಎಮ್‌ಎನ್‌ಎಸ್ ಇಂಥಹುದೇ ಪ್ರತಿಪಾದನೆಯನ್ನು ಶತಾಯಗತಾಯ ವಿರೋಧಿಸಿದ್ದ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಮೊದಲಾದ ಪಕ್ಷಗಳಿಗಾಗಲೀ ಅಥವಾ ಹಲವು ಮಾಧ್ಯಮಗಳಿಗಾಗಲೀ ಇದೊಂದು ಅತಿರೇಕದ ನಡೆ ಎನ್ನಿಸುತ್ತಲೇ ಇಲ್ಲ. ಮೂಲದೆಹಲಿಗರ ಕುರಿತಾದ ಕಾಳಜಿಪೂರ್ವಕ ನೀತಿ ಎಂದೇ ಪರಿಗಣಿಸುತ್ತ ಅವರೆಲ್ಲ ಸುಮ್ಮನಿರುವಂತೆ ಕಂಡುಬರುತ್ತದೆ. ಹಾಗಿದ್ದಲ್ಲಿ ದೆಹಲಿಗರಿಗೊಂದು ನ್ಯಾಯ ಹಾಗೂ ಮರಾಠಿಗರಿಗೊಂದು ನ್ಯಾಯವೇಕೆ ಎಂಬ ಪ್ರಶ್ನೆ ಕಾಡುತ್ತದೆಯಲ್ಲವೇ?
ಇದ್ದುದರಲ್ಲಿ ಸಮಾಧಾನಕರ ಸಂಗತಿಯೆಂದರೆ ಇದನ್ನು ಅಲ್ಲಿನ ವಿದ್ಯಾರ್ಥಿಗಳೊಂದೇ ಅಲ್ಲ, ದೆಹಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘವೂ ಕಟುವಾಗಿ ವಿರೋಧಿಸಿದೆ. ಈ ವಿರೋಧದ ಹಿಂದೆ ವಾಸ್ತವವಿದೆ. ಏಕೆಂದರೆ ದೆಹಲಿ ವಿಶ್ವವಿದ್ಯಾಲಯವು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲೊಂದಾಗಿದ್ದು, ಇದರಲ್ಲಿ ಅಧ್ಯಯನ ನಡೆಸಲು ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇಲ್ಲಿ ಸ್ಥಳೀಯರಿಗಿಂತಲೂ ಅನ್ಯ ರಾಜ್ಯದವರೇ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ ಈ ಮೀಸಲಾತಿಯನ್ನು ಜಾರಿಗೊಳಿಸಿದಲ್ಲಿ, ಇಲ್ಲಿ ಅಭ್ಯಸಿಸಬೇಕೆಂದು ಕನಸು ಕಟ್ಟಿಕೊಂಡ ದೇಶದ ಹಲವೆಡೆಗಳಲ್ಲಿನ ಪ್ರತಿಭೆಗಳು ಮಂಕಾಗಿಹೋಗುವದಿಲ್ಲವೇ? ಅಷ್ಟೇ ಅಲ್ಲ, ವಿವಿಧ ರಾಜ್ಯಗಳಿಂದ ಉದ್ಯೋಗಕ್ಕಾಗಿ, ವ್ಯಾಪಾರಕ್ಕಾಗಿ ರಾಷ್ಟ್ರರಾಜಧಾನಿಯಲ್ಲಿ ನೆಲೆಸಿರುವವರ ಮಕ್ಕಳೆಲ್ಲ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರಲ್ಲವೇ? ಅಷ್ಟಕ್ಕೂ, ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅನುದಾನ ಮಾತ್ರ ರಾಜ್ಯಸರ್ಕಾರಕ್ಕೆ ಸಂಬಂಧಪಟ್ಟಿದ್ದು, ಅಲ್ಲಿನ ನಿಯಮಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಹಕ್ಕಿಲ್ಲವೆಂಬ ಪರಿಜ್ಞಾನವೂ ಸಿಸೋಡಿಯಾರಿಗಿಲ್ಲವೇ? ಇವುಗಳೊಂದಿಗೆ, ಸಾಧಾರಣವಾಗಿ ನಮ್ಮ ದೇಶದಲ್ಲಿ ಅಭಿವೃದ್ಧಿ-ಅಧಿಕಾರ-ಅವಕಾಶಗಳು ರಾಜಧಾನಿ ಕೇಂದ್ರಿತವೆಂಬ ಮಾತು ನೂರಕ್ಕೆ ನೂರರಷ್ಟು ಸತ್ಯ. ಪ್ರಮುಖ ಸವಲತ್ತುಗಳು, ಮುಖ್ಯಾತಿಮುಖ್ಯ ಹೂಡಿಕೆಗಳು ರಾಜಧಾನಿಯ ಪರಿಸರದಲ್ಲಿ ಮಾತ್ರ ಲಭ್ಯವಿರುವಾಗ ಈಗಾಗಲೇ ಅಲ್ಲಿನ ಜನ ವಿಫುಲ ಸೌಲಭ್ಯಗಳನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ ವಾಸಿಸುವವರಿಗೆ ಲಭ್ಯವಿರುವ ಉತ್ತಮ ಶಿಕ್ಷಣಕೇಂದ್ರಗಳು, ಸಂಶೋಧನಾಕೇಂದ್ರಗಳು, ವಿವಿಧ ಉದ್ಯೋಗಗಳೆಡೆಗಿನ ಮಾಹಿತಿಗಳು ಮುಂತಾದವೆಲ್ಲ ದೂರದ ಕೇರಳದಲ್ಲೋ ಅಥವಾ ಕಾಶ್ಮೀರಲ್ಲೂ ಅಥವಾ ಪೂರ್ವರಾಜ್ಯಗಳಲ್ಲೆಲ್ಲೋ ನೆಲೆಸಿರುವ ದೇಶವಾಸಿಗಳಿಗೆ ಅರಿವಿರುವುದಿಲ್ಲವೆಂಬುದು ಸುಳ್ಳಲ್ಲ. ಹೀಗಿರುವಾಗ ಇಂತಹ ಕಾನೂನು ಜಾರಿಯಾದಲ್ಲಿ ಅಲಕ್ಷ್ಯ-ಅನ್ಯಾಯಕ್ಕೊಳಗಾದ ಇತರೆಡೆಗಳ ಜನರು ಪ್ರತಿಭಟನೆಗಾಗಿ ಬೀದಿಗಿಳಿಯುವುದು ನಿಶ್ಚಿತ. ಆಪ್ ಸರ್ಕಾರಕ್ಕೆ ನಿಜಕ್ಕೂ ಶಿಕ್ಷಣದಲ್ಲಿ ಕ್ರಾಂತಿಯುಂಟು ಮಾಡುವ ಮನಸ್ಸಿದ್ದಲ್ಲಿ ಹೆಚ್ಚು ಹೆಚ್ಚು ಕಾಲೇಜುಗಳನ್ನು ಸ್ಥಾಪಿಸಲಿ, ಅವುಗಳಲ್ಲಿ ಅಗತ್ಯ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲಿ, ಶುಲ್ಕಗಳನ್ನು ಕಡಿತಗೊಳಿಸಲಿ. ಬದಲಾಗಿ ಆರಂಭದ ಆವೇಶಕ್ಕೊಳಗಾಗಿ ಇಂತಹ ಕ್ರಮಗಳಿಗೆ ಮುಂದಾಗದಿರಲಿ.
ಆಪ್ ಮಂತ್ರಿಗಳು ಅವಸರಕ್ಕೊಳಪಟ್ಟು ಅನುಚಿತ ಹೇಳಿಕೆ ನೀಡುತ್ತಿರುವುದು ಕೇವಲ ಇದೊಂದೇ ಅಲ್ಲ. ಇತ್ತೀಚೆಗಷ್ಟೇ ಆಫ್‌ನ ಪ್ರಶಾಂತ್ ಭೂಷಣ್ ಅವರು ಕಾಶ್ಮೀರದಲ್ಲಿನ ಸೇನೆಯ ನಿಯೋಜನೆಯ ಕುರಿತು ಜನಾಭಿಪ್ರಾಯದ ಅನಿವಾರ್ಯತೆಯಿದೆ ಎನ್ನುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ತಾವು ದೆಹಲಿಯಲ್ಲಿ ಅಧಿಕಾರಕ್ಕೆ ಬರುವಾಗ ಜನಾದೇಶ ಸಂಗ್ರಹಣೆ ನಡೆಸಿದಂತಹ ಸ್ಥಿತಿಯೇ ಕಾಶ್ಮೀರದಲ್ಲಿದೆ ಎಂದು ಭೂಷಣರು ಕಲ್ಪಿಸಿದ್ದಿರಬಹುದೇನೊ? ಇದು ಅವರಲ್ಲಿನ ದೂರದೃಷ್ಟಿಯ ಕೊರತೆಯೆಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಏಕೆಂದರೆ ದಿನಬೆಳಗಾದರೆ ಉದ್ವಿಗ್ನವಾಗುವ ಕಣಿವೆರಾಜ್ಯ ಕಾಶ್ಮೀರದಲ್ಲಿ ಭಾರತಸರ್ಕಾರವು ಒಂದುವೇಳೆ ಸೈನ್ಯವನ್ನೇನಾದರೂ ಹಿಂದಕ್ಕೆ ಕರೆಸಿದರೆ ಪಾಕಿಸ್ತಾನದ ಪಾಲಿನ ರೊಟ್ಟಿ ತುಪ್ಪದಲ್ಲಿ ಜಾರಿಬಿದ್ದಂತೆಯೇ ಸರಿ. ಸೈನ್ಯವಿರುವಾಗಲೇ ಪ್ರತ್ಯೇಕತಾವಾದಿಗಳ ಪುಂಡಾಟವನ್ನು ನಿಯಂತ್ರಿಸುವುದು ಅಸಾಧ್ಯವಾಗಿರುವಾಗ, ಸೈನ್ಯವಿಲ್ಲದಿದ್ದರೆ ಅಳಿದುಳಿದ ಕಾಶ್ಮೀರವನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಇದೆಲ್ಲ ಅರಿವಾದ ನಂತರ ಅವರು ಯಥಾಪ್ರಕಾರ ನನ್ನ ಮಾತನ್ನು ತಿರುಚಲಾಗಿದೆ ಎನ್ನುವ ಮೂಲಕ ತಿಪ್ಪೆ ಸಾರಿಸುವ ಯತ್ನ ಮಾಡಿದ್ದಾರೆ.
   ಇವೆಲ್ಲ ಒತ್ತಟ್ಟಿಗಿರಲಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಕನಸಿನಂತೆ ಅಸ್ತಿತ್ವಕ್ಕೆ ಬಂದ ಉಚಿತ ನೀರು ನೀಡುವ ಸೌಲಭ್ಯವು ಅತೀ ಕನಿಷ್ಠ ಸಂಖ್ಯೆಯ ಜನರನ್ನು ಮಾತ್ರ ತಲುಪುತ್ತದೆಯೆಂಬ ಸತ್ಯ ಅವರಿಗಿನ್ನೂ ಅರಿವಾಗಿಲ್ಲವೇ? ಜೊತೆಯಲ್ಲಿ, ಅಷ್ಟೊಂದು ಅಬ್ಬರದ ಪ್ರಚಾರದ ನಡುವೆ ಜಾರಿಯಾದ ವಿದ್ಯುತ್ ದರದಲ್ಲಿನ ಶೇಕಡಾ 50ರಷ್ಟು ಕಡಿತವು ಸದ್ಯ ಗೋವಾ ರಾಜ್ಯದಲ್ಲಿ ಜಾರಿಯಲ್ಲಿರುವ ವಿದ್ಯುತ್ ದರಕ್ಕಿಂತಲೂ ಹೆಚ್ಚು. ಅಧಿಕಾರಕ್ಕೇರಿದ ದಿನದಿಂದ ಇದುವರೆಗೂ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಪೆಟ್ರೋಲ್ ದರವನ್ನು ಅತಿ ಕಡಿಮೆ ಮಾಡಿರುವುದು ಖಂಡಿತವಾಗಿಯೂ ಸಣ್ಣ ಸಾಧನೆಯಲ್ಲ. ಅವರ ಪ್ರಚಾರರಹಿತ ಸರಳ ಜೀವನ, ಜನಸಾಮಾನ್ಯರಿಗೂ ಸುಲಭವಾಗಿ ಲಭ್ಯವಾಗುವ ಪರಿ, ನರೇಂದ್ರ ಮೋದಿಯವರ ದಕ್ಷ ಆಡಳಿತ ಹಾಗೂ ಜನರ ಸಮಸ್ಯೆಗೆ ಸ್ಪಂದಿಸುವ ಗುಣಗಳೆಲ್ಲ ಕೇಜ್ರಿವಾಲರಿಗೆ ಮಾದರಿ.
ಜನಪರ ಕಾರ್ಯಕ್ರಮಗಳೇ ಮೂಲೋದ್ದೇಶವೆಂಬ ಗುರಿಯಿಟ್ಟುಕೊಂಡು ಅಧಿಕಾರದ ಗದ್ದುಗೆಗೇರಿರುವ ಆಪ್ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಸಮರ್ಥವಾಗಿ ಈಡೇರಿಸುವಂತಾಗಲಿ. ಇಲ್ಲವಾದಲ್ಲಿ ಆಡದೆಲೆ ಮಾಡುವವನು ರೂಢಿಯೊಳಗುತ್ತಮನು ಆಡಿ ಮಾಡುವವನು ಮಧ್ಯಮನು ಅಧಮ ತಾನಾಡಿಯೂ ಮಾಡದವನು ಸರ್ವಜ್ಞ ಎಂಬ ಸರ್ವಜ್ಞ ಕವಿಯ ತ್ರಿಪದಿಯ ಪ್ರಕಾರ ಅಧಮರೆನ್ನಿಸಿಕೊಳ್ಳುವುದು ಖಂಡಿತ. ವಸ್ತುಸ್ಥಿತಿ ಹೀಗಿರುವಾಗ ಆಪ್ ಮಂತ್ರಿಗಳಿಗೆ ಅತ್ಯವಶ್ಯಕವಾಗಿರುವುದು ಆಡಳಿತಪಾಠವೇ ಹೊರತು ಪ್ರಚಾರವಲ್ಲ ಎಂಬುದರಲ್ಲಿ ಸಂಶಯವಿಲ್ಲ.


 -ಪ್ರಿಯದರ್ಶಿನಿ ಎಸ್ ಭಟ್
ಹೊನ್ನಾವರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement