ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತೀರ್ಥಹಳ್ಳಿಯ ಮುದ್ದು ಹೂ

ತೀರ್ಥಹಳ್ಳಿಯ ಪುಟಾಣಿ ಬರಹಗಾರ್ತಿ ವಿತಾಶಾ ರಿಯಾ ಅವರ ನೂತನ ಕಾದಂಬರಿ...

Rashmi Kasaragodu
Updated On : 17 Jan 2014, 12:56 pm

ತೀರ್ಥಹಳ್ಳಿಯ ಪುಟಾಣಿ ಬರಹಗಾರ್ತಿ ವಿತಾಶಾ ರಿಯಾ ಅವರ ನೂತನ ಕಾದಂಬರಿ 'ಕಾಡ ಹಾದಿಯ ಹೂಗಳು' ಬಿಡುಗಡೆಗೆ ಸಿದ್ಧವಾಗಿದೆ.

"ಅಪ್ಪ ಸಧ್ಯ ! ಮೊದಲನೇ ಪ್ರಿಪರೇಟರಿ ಪರೀಕ್ಷೆ ಮುಗೀತು!! ನನ್ನ ಕಾದಂಬರಿ ಕಾಡ ಹಾದಿಯ ಹೂಗಳು ಬಿಡುಗಡೆಗೆ ತಯಾರಾಗಿದೆ. ಕವರ್ ಚೆನ್ನಾಗಿದ್ಯಾ?" ಎಂದು ಈಕೆ ತನ್ನ ಫೇಸ್‌ಬುಕ್ ಗೋಡೆಯಲ್ಲಿ ಕಾದಂಬರಿಯ ಕವರ್ ಪೇಜ್ ಪೋಸ್ಟ್ ಮಾಡಿದ್ದಾಳೆ.

ವಿತಾಶಾ ರಿಯಾ ಯಾರೆಂದು ಗೊತ್ತಾಗಿಲ್ವಾ? ಅವಳೇ..ಮುದ್ದು ತೀರ್ಥಹಳ್ಳಿ. ಮುದ್ದು ತೀರ್ಥಹಳ್ಳಿ ಎಂಬುದು ಕಾವ್ಯನಾಮ. ತೀರ್ಥಹಳ್ಳಿಯ ಜಿಯುಪಿಸಿ ಶಾಲಾ ವಿದ್ಯಾರ್ಥಿನಿಯಾಗಿರುವ ಮುದ್ದು ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಮುಂದು. ಈಕೆ ಇಲ್ಲಿಯವರೆಗೆ ಮೂರು ಕವನ ಸಂಕಲನಗಳು ( ಹೂಗೊಂಚಲು, ಕಾನನ ಕಲರವ, ಎಷ್ಟು ಬಣ್ಣದ ಇರುಳು ) ಸೇರಿದಂತೆ ಒಂದು ಚಂದ್ರನ ತುಂಡು ಎಂಬ ಕಿರು ಬರಹಗಳ ಸಂಕಲನವನ್ನೂ ಪ್ರಕಟಿಸಿದ್ದಾಳೆ.

ತನ್ನ ಹೆಸರಿನಷ್ಟೇ ಮುದ್ದಾಗಿ ಬರೆಯುವ ಈಕೆ ಕೈಬರಹದಲ್ಲೇ 'ಮಂದಾನಿಲ' ಎಂಬ ದ್ವೈಮಾಸಿಕ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದಾಳೆ. ನಾಡಿನಾದ್ಯಂತವಿರುವ ಹಲವಾರು ಪತ್ರಿಕೆ, ಅಂತರ್ಜಾಲ ಪುಟಗಳಲ್ಲಿ ಈಕೆಯ ಕಥೆ, ಕವನ, ಲೇಖನಗಳು ಪ್ರಕಟವಾಗಿದ್ದು, ಹಲವಾರು ಪ್ರಶಸ್ತಿ ಪ್ರಶಂಸೆಗಳಿಗೂ ಭಾಜನಳಾಗಿದ್ದಾಳೆ.

ಇದೀಗ ಈಕೆ ಬರೆದಿರುವ 'ಕಾಡ ಹಾದಿಯ ಹೂಗಳು' ಎಂಬ ಮಕ್ಕಳ ಕಾದಂಬರಿಗೆ ಲೇಖಕ ಸ. ರಘುನಾಥ ಅವರು ಬೆನ್ನುಡಿ ಬರೆದಿದ್ದಾರೆ.

"ಕಾಡ ಹಾದಿಯ ಹೂಗಳು ಕೃತಿ ಕಾದಂಬರಿಯೂ ಹೌದು, ಅನುಭವ ಕಥನವೂ ಹೌದು, ಹಾಗೆಯೇ ಶೈಕ್ಷಣಿಕ ಪಠ್ಯಪುಸ್ತಕವೂ ಹೌದೆಂಬುದು ನನ್ನ ಖಚಿತ ನಿಲುವು. ಶಿಕ್ಷಕರಿಗೆ ಒಂದು ಮಾದರಿ ಕೈಪಿಡಿಯಾಗಬಹುದಾದ ಇದು ಮಕ್ಕಳಿಗೆ ಬುದ್ಧಿ, ಮನೋವಿಕಾಸದ ಕಥೆಯೂ ಆಗಿದೆ ಎಂದು ಮೆಚ್ಚದೆ ಹೋದರೆ  ಜಿಪುಣತನವಾದೀತು" -ಇದು ಸ.ರಘುನಾಥ ಅವರು ಬೆನ್ನುಡಿಯಲ್ಲಿ ಬರೆದ ಮಾತುಗಳು.

ಓದಿನ ಜತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲೆಯಾಗಿರುವ ಕನ್ನಡ ಸಾಹಿತ್ಯ ಲೋಕದ ಪ್ರಚಂಡ ಪುಟಾಣಿ ಮುದ್ದು ತೀರ್ಥಹಳ್ಳಿಯವರ ಸಾಹಿತ್ಯ ಪ್ರೀತಿಗೆ ನಮ್ಮದೊಂದು ಸಲಾಂ. ಹಾಗೆಯೇ ಮಲೆನಾಡಿನ ಸುಂದರ ಪ್ರಕೃತಿಯನ್ನೇ ಕಾವ್ಯಾತ್ಮಕವಾಗಿ ವರ್ಣಿಸುವ ಕಲೆಯ ಬುದ್ಧಿ ಸಿದ್ಧಿಸಿರುವ ಈ ಮುದ್ದು ಹುಡುಗಿಯ ಉಜ್ವಲ ಭವಿಷ್ಯಕ್ಕೆ ನಿಮ್ಮ ಹಾರೈಕೆಯೂ ಇರಲಿ.



ಈ ವಾರ ಫೇಸ್‌ಬುಕ್‌ನಲ್ಲಿ ಕಂಡಂತೆ ಅಂಕಣದ ವಿಷಯಕ್ಕೆ ಆಯ್ದು ಕೊಂಡ ಸ್ಟೇಟಸ್ ಮುದ್ದು ತೀರ್ಥಹಳ್ಳಿ ವಿತಾಶಾ ರಿಯಾ ಅವರದ್ದು:

ಅವರ ಕಿರುಪರಿಚಯ

ಮುದ್ದು ತೀರ್ಥಹಳ್ಳಿ ವಿತಾಶಾ ರಿಯಾ
ತೀರ್ಥಹಳ್ಳಿ


-ರಶ್ಮಿ ಕಾಸರಗೋಡು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement