ನಾ.ಡಿಸೋಜಾರಿಗೆ ಸಾಹಿತ್ಯಾಸಕ್ತರ ನಾಡಿಮಿಡಿತವೇ ತಿಳಿಯುತ್ತಿಲ್ಲ!
ಅಷ್ಟಕ್ಕೂ ಕವಿಯೊಬ್ಬ ಪುರಾಣ ಕಥೆಗಳನ್ನು ಈ ನೆಲೆಗಟ್ಟಿನಲ್ಲಿ ನೋಡದೇ ಹೋಗುತ್ತಿದ್ದರೆ...
ಅಷ್ಟಕ್ಕೂ ಕವಿಯೊಬ್ಬ ಪುರಾಣ ಕಥೆಗಳನ್ನು ಈ ನೆಲೆಗಟ್ಟಿನಲ್ಲಿ ನೋಡದೇ ಹೋಗುತ್ತಿದ್ದರೆ ಕಾಳಿದಾಸ, ಪಂಪ, ರನ್ನ, ನಾಗವರ್ಮ, ಅಷ್ಟೇ ಏಕೆ ಕುವೆಂಪುರವರ "ಶ್ರೀರಾಮಾಯಣ ದರ್ಶನಂ" ಕೃತಿಗಳೇಕೆ ಜನಮನ್ನಣೆ, ಸಾಹಿತ್ಯದ ನೆಲೆಯಲ್ಲಿ ಬಹುಮುಖ್ಯ ಸ್ಥಾನ ಪಡಕೊಂಡವು?
ಮಡಿಕೇರಿಯ ಸಾಹಿತ್ಯ ಸಮ್ಮೇಳನದ ಟೆಂಟುಗಳು ಇನ್ನೂ ಸ್ವಸ್ಥಾನ ತಲುಪಿದವೋ ಇಲ್ಲವೋ ಗೊತ್ತಿಲ್ಲ. ಆದರೆ ಅಧ್ಯಕ್ಷಗಿರಿ ಅಲಂಕರಿಸಿದ ನಾ. ಡಿಸೋಜಾರವರಿಗೆ ನನಗ್ಯಾಕೋ ಅಲ್ಲಿ ಸಿಕ್ಕಿದ ಗೌರವ ಕಡಿಮೆಯಾಗಿದೆ ಎನಿಸಿದಂತಿದೆ. ಅಕ್ಷರ ಜಾತ್ರೆಯ ಆರಂಭದಲ್ಲಿ ಕಸ್ತೂರಿ ರಂಗನ್ ವರದಿ, ಟಿಪ್ಪು ಸುಲ್ತಾನ್ ಬಗೆಗಿನ ಕೋಚೆಯವರ ಹೇಳಿಕೆಗಳಿಂದ ತಲೆದೋರಿದ್ದ ವಿಘ್ನಗಳು ಕನ್ನಡ ಕಟ್ಟುವ ಕೆಲಸಕ್ಕೆ ಧಕ್ಕೆ ತರಬಾರದೆಂಬ ನೆಲೆಯಲ್ಲಿ ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ ಕೆಲ ವಿಘ್ನ ಸಂತೋಷಿಗಳು ನಿದ್ದೆ ಮಾಡಿದಂತಿಲ್ಲ.
ಯಾಕೆಂದರೆ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಹಕ್ಕು, ಎಂದೆಲ್ಲ ಅನೇಕರು ಮಾಧ್ಯಮದ ಮುಂದೆ ಬಡಬಡಿಸಲು ಮಾಡಿಕೊಂಡಿದ್ದ ಟಿಪ್ಪಣಿಗಳು ಸದ್ದು ಮಾಡದೆ ಧೂಳು ಹಿಡಿಯಲಾರಂಬಿಸಿದ್ದು ಸುಮ್ಮನೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಯಿತಲ್ಲ ಎಂಬಷ್ಟು ಉರಿದಂತಿದೆ. ಬಡಿ-ಕಾಲ್ಕೀಳು ಸಿದ್ಧಾಂತದಡಿಯಲ್ಲಿ ರಂಗಪ್ರವೇಶ ಮಾಡಿ ಮೆರೆಯುವವರಿಗೆ ಈ ಸಮ್ಮೇಳನ ಅಂತಹ ಯಾವುದೇ ಚರ್ಚೆ, ಸಂಘರ್ಷಕ್ಕೆ ಎಡೆಮಾಡಿಕೊಡಲೇ ಇಲ್ಲ. ಅಷ್ಟಕ್ಕೂ ನೋವುಗಳನ್ನು ನುಂಗಿ, ನಮ್ಮ ನಾಳಿನ ಅಭದ್ರತೆ ನಾಡು ನುಡಿಯ ಸಂಭ್ರಮಕ್ಕೆ ಕಪ್ಪು ಚುಕ್ಕಿ ಎನಿಸಬಾರದೆಂಬ ಕೊಡವರ ಸಹಿಷ್ಣುತೆ, ಕನ್ನಡಕ್ಕಾಗಿ ಕರಗಿದ ಕೊಡವರ ಕೆಚ್ಚೆದೆ ಯಾರನ್ನೂ ಆಕರ್ಷಿಸಲಿಲ್ಲ. ಈ ಸಂದರ್ಭದಲ್ಲಿ ಹಳಿಯಲು ಸಿಕ್ಕಿದ್ದು ಮತ್ತದೇ ಲೇಖಕ- ಎಸ್.ಎಲ್. ಭೈರಪ್ಪನವರು.
"ಭೈರಪ್ಪ ಹಳೆಯದನ್ನೇ ಕೆದಕುತ್ತಾರೆ. ಕೃತಿಗಳು ಜಾಸ್ತಿ ಮಾರಾಟವಾದರೆ ಆತ ಒಳ್ಳೆಯ ಲೇಖಕ ಎಂದೇನೂ ಅಲ್ಲ" ಎಂದು ಈ ಬಾರಿಯ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ನಾ. ಡಿಸೋಜಾರವರು ಆಣಿಮುತ್ತು ಉದುರಿಸಿದ್ದಾರೆ. ಅಲ್ಲಾ ಸ್ವಾಮಿ, ನಿಮ್ಮ ಪ್ರಕಾರ ಹಳೆಯದು ಎಂದರೆ ಏನು? ನೀವು ಅವರ ಕೃತಿಗಳನ್ನು ಪ್ರಾಂಜಲ ಮನಸ್ಸಿನಿಂದ ಓದಿದ್ದೀರಾ? ತೀರಾ ಇತ್ತೀಚೆಗೆ ಬಂದಿರುವ "ಕವಲು" ಕೃತಿಯಲ್ಲಿ ಅದೇನು ಹಳತು ಕಂಡಿರಿ ನೀವು? ಕವಲೊಡೆಯುವ ಕುಟುಂಬ ವ್ಯವಸ್ಥೆ, ಅಬಲರಿಗೆಂದು ರೂಪಿಸಿರುವ ಕಾನೂನನ್ನು ಸ್ವಾರ್ಥ ಸಾಧನೆಯ ಸಲುವಾಗಿ, ವಿರೋಧಿಗಳನ್ನು ಹಳಿಯಲು ಬಳಸಿ ಸಾಮಾಜಿಕ ಅಸಮತೋಲನ ಸೃಷ್ಟಿಸುತ್ತಿರುವ ನಿಲುಮೆಗಳು ಹಳತು ಎನಿಸಿದವೇ? ಸ್ವಾತಂತ್ರ್ಯದ ನೆಪದಲ್ಲಿ ವ್ಯಭಿಚಾರಕ್ಕಿಳಿದಿರುವುದು ಇವತ್ತಿನ ಹೇಸಿಗೆಯಲ್ಲದೆ ಮತ್ತೇನು? ನಿಮಗೆ ಇದು ಪ್ರಸ್ತುತ ಅಲ್ಲ ಎನಿಸಿರಬಹುದು, ಆದರೆ ಓದುಗರಿಗೆ ಇದು ಈ ಸಮಾಜದ ಮುಂದಿರುವ ಸವಾಲು.
"ದಾಟು" ಎನ್ನುವ ಕಾದಂಬರಿ ಅಚ್ಚು ಹಾಕಿಸಿದಷ್ಟೂ ಖಾಲಿಯಾಗುತ್ತದಲ್ಲ ಯಾಕಿರಬಹುದು ಯೋಚಿಸಿದ್ದೀರಾ? ಅಲ್ಲಿ ಬರುವ ಜಾತಿ ಸಂಘರ್ಷ, ಹೆಣ್ಣು ಗಂಡುಗಳ ಪ್ರೀತಿಯ ಮುಂದೆ ಕುರುಡು ಪಿಡುಗಾಗಿ ಕುಣಿಯತ್ತದೆ. ಹೆಣ್ಣುಮಗಳ ಹೋರಾಟ, ಪ್ರೀತಿ, ಹೆಣಗಾಟಗಳಲ್ಲಿ ಇವತ್ತಿನ ಅಬಲವಾಡಿಯ ಮರ್ಯಾದಾ ಹತ್ಯೆಯಂತಹ ಶೋಷಿತ ಹೃದಯಗಳ ತುಡಿತವಿಲ್ಲವೇ? ಹೋಗಲಿ ಬಿಡಿ ದಾಟುವಿನಲ್ಲಿನ ಜಾತೀಯತೆ, "ಆವರಣ"ದಲ್ಲಿನ ಕೋಮುವಾದ ನಿಮ್ಮ ತಥಾಕಥಿತ ಲೆಕ್ಕಾಚಾರದಲ್ಲಿ ಹಳತು ಎಂದಾದರೆ, ಪ್ರಭುತ್ವದ ವಿರುದ್ಧದ ಹೋರಾಟಗಳಲ್ಲಿ ಎರಡು ಪ್ರತಿಷ್ಟಿತ ಮನೆತನಗಳು ಸೇವಾಕ್ಷೇತ್ರದಲ್ಲಿ ಮಗ್ನನಾಗಿದ್ದ ಶಿವಪ್ಪ ಎಂಬಾತನನ್ನು ದಾಳದಂತೆ ಬಳಸಿ ಹೊಸಕಿ ಹಾಕುವ "ಮತದಾನ"ದಂತಹ ಕಾದಂಬರಿಗಳು ಇವತ್ತಿನ ರಾಜಕೀಯ ಆಡುಂಬೋಲಕ್ಕೆ ಹಿಡಿದ ಕೈಗನ್ನಡಿಯಲ್ಲವೇ? "ಗ್ರಹಣ", "ನಿರಾಕರಣ"ದಂತಹ ಕಾದಂಬರಿಗಳು ವ್ಯಕ್ತಿಯ ಲೌಕಿಕ ಜಗತ್ತಿನೆಡೆಗಿನ ವಿಷಯಾಸಕ್ತತೆ, ಮತ್ತು ಅಲೌಕಿಕ ಜಗತ್ತಿನೆಡೆಗಿನ ತುಡಿತಗಳನ್ನು ಕಟ್ಟಿಕೊಡುತ್ತಲೇ ನೈತಿಕತೆಯ ಹುಡುಕಾಟದಲ್ಲಿ ನಿರತವಾಗಿರುವ ಪ್ರಸ್ತುತ ಸಮಾಜದ ನಿಲುವುಗಳ ಅಭಿವ್ಯಕ್ತಿಯಲ್ಲವೇ? ಸಾಹಿತ್ಯದಾಚೆಗಿನ ಸತ್ಯಗಳನ್ನು ಕಂಡುಕೊಳ್ಳುವ ನಿಮ್ಮ ಸಾಹಿತಿಯ ಗುಣ ವಿರೋಧಾಭಾಸಗಳನ್ನೇ ಹುಡುಕುತ್ತಾ ಗೌಣಗೊಂಡಿತೇ?
ಮಹಾಭಾರತದ ಘಟನಾವಳಿಗಳನ್ನು ಪ್ರಸ್ತುತ ಜಗತ್ತಿಗೆ ಹೋಲಿಸಿ ಬರೆದಿರುವ "ಪರ್ವ"ದ ಬಗ್ಗೆ ನಿಮ್ಮ ತಕರಾರಿರಬಹುದು. ಯಾಕೆಂದರೆ ಅದು ತುಂಬಾ ಹಳೆಯದಲ್ಲವೇ? ಅಷ್ಟಕ್ಕೂ ಕವಿಯೊಬ್ಬ ಪುರಾಣ ಕಥೆಗಳನ್ನು ಈ ನೆಲೆಗಟ್ಟಿನಲ್ಲಿ ನೋಡದೇ ಹೋಗುತ್ತಿದ್ದರೆ ಕಾಳಿದಾಸ, ಪಂಪ, ರನ್ನ, ನಾಗವರ್ಮ, ಅಷ್ಟೇ ಏಕೆ ಕುವೆಂಪುರವರ "ಶ್ರೀರಾಮಾಯಣ ದರ್ಶನಂ" ಕೃತಿಗಳೇಕೆ ಜನಮನ್ನಣೆ, ಸಾಹಿತ್ಯದ ನೆಲೆಯಲ್ಲಿ ಬಹುಮುಖ್ಯ ಸ್ಥಾನ ಪಡಕೊಂಡವು? ದುಷ್ಟನಾದ ರಾವಣ, ಹೊಟ್ಟೆಕಿಚ್ಚಿನಿಂದ ಅಣ್ಣಂದಿರಾದ ಧರ್ಮಜ, ಭೀಮರನ್ನು ಧಿಕ್ಕರಿಸಿ ಹೊರಟ ಅರ್ಜುನರಂತಹವರಲ್ಲಿ ಒಳ್ಳೆಯತನ ಹುಡುಕಿದ ಮೇಲ್ಪಂಕ್ತಿ ನಮ್ಮ ಸಾಹಿತ್ಯಕ್ಕಿದೆ. ಅಂತಹುದರಲ್ಲಿ ನೀವು ಕನ್ನಡ ನುಡಿ ಹಬ್ಬದ ಅಧ್ಯಕ್ಷರಾಗಿ ಕನ್ನಡದ ನೂರು ಮನಸ್ಸುಗಳನ್ನು ಬೆಸೆಯುವ ಹೆಗ್ಗಳಿಕೆ ಮುಡಿಗೇರಿಸಿಕೊಂಡವರು. ಹಿರಿದಾದ ಕನ್ನಡ ಹರಿದು ಹಂಚಿ ಹೋಗುವ ಕಾಲಕ್ಕೆ ನಿಮ್ಮ ಗುರುತರ ಜವಾಬ್ದಾರಿ ಮರೆತು ನೀವೇ ಕೆಸರೆರಚಾಟಕ್ಕೆ ನಿಂತಿರಲ್ಲ ನಿಮಗಿದು ಶೋಭೆಯೇ?
ಬೆಂದರೆ ಬೇಂದ್ರೆಯಾದಾನು ಎಂದು ದ.ರಾ ಬೇಂದ್ರೆ ಹೇಳಿದ್ದನ್ನು ಕೇಳಿ ಬೆಳೆದವರು ನಾವು. ನಿಮ್ಮಲ್ಲೊಂದು ವಿನಮ್ರ ವಿನಂತಿಯೇನೆಂದರೆ ನೀವೊಮ್ಮೆ ಭೈರಪ್ಪನವರ ಆತ್ಮಕಥೆ "ಭಿತ್ತಿ" ಓದಬೇಕು. ಯಾಕೆಂದರೆ ಅಲ್ಲಿ ವ್ಯಕ್ತವಾಗಿರುವ ನೋವು, ದುಗುಡ, ಕಷ್ಟಗಳು ಭೈರಪ್ಪರನ್ನು ಸೃಷ್ಟಿ ಮಾಡಿವೆ ಎಂದು ಒಂದೊಂದು ಸಾಲುಗಳೂ ಹೇಳುತ್ತವೆ. ಆ ಪುಸ್ತಕ ಸಾಯುವವನಿಗೂ ಬದುಕುವುದನ್ನು ಹೇಳಿಕೊಡಬಲ್ಲದು, ಚೈತನ್ಯ ತುಂಬಬಲ್ಲದು. ಆದರೆ ಓದಲು ಬೇಕಿರುವುದು ಮತ್ತದೇ ಪ್ರಾಂಜಲ ಮನಸ್ಸು! ಅದು ನಿಮಗಿದೆಯೇ? ಅದನ್ನೊಂದು ಸಿದ್ದಿಸಿಕೊಳ್ಳಬೇಕು!
ಪುಸ್ತಕ ಹೆಚ್ಚು ಮಾರಾಟವಾದರೆ ಆತ ಒಳ್ಳೆಯ ಲೇಖಕನಲ್ಲ, ಎಂಬ ನಿಮ್ಮ ಹೇಳಿಕೆ ಎಷ್ಟು ಸಮಂಜಸ ಡಿಸೋಜಾರವರೇ? ಅಷ್ಟಕ್ಕೂ ಭೈರಪ್ಪನವರ ಪುಸ್ತಕಗಳು ಹಾದಿ ಬೀದಿಗಳಲ್ಲಿ ಪೋಲಿ ಪುಸ್ತಕಗಳಂತೆ, ಹತ್ತಕ್ಕೋ ಇಪ್ಪತ್ತಕ್ಕೋ ದಕ್ಕುತ್ತವೆ ಎಂದುಕೊಂಡಿರಾ? ಆ ಪುಸ್ತಕಗಳ ಬೆಲೆ ಇಂದಿಗೂ ದುಬಾರಿಯೇ ಇವೆ. ಆದರೂ ಜನ ಹುಚ್ಚೆದ್ದು ಖರೀದಿಸುತ್ತಾರಲ್ಲ ಅವರಿಗೇನು ದುಡ್ಡಿನ ಮದ ಎಂದುಕೊಂಡಿರಾ? ಸಾಹಿತ್ಯದ ರಸಾಸ್ವಾದನೆ ಮುಂದೆ ಆ ಬೆಲೆಗಳು ಕೂಡ ಸದ್ದು ಮಾಡುತ್ತಿಲ್ಲ. ನೀವು ಯಾವುದಾದರೊಂದು ಗ್ರಂಥಾಲಯಕ್ಕೆ ಹೋಗಿ ಭೈರಪ್ಪನವರ ಕೃತಿಗಳ ಸ್ಥಿತಿ ನೋಡಿದ್ದೀರಾ? ಅವು ಎಷ್ಟು ಕೈ ಬದಲಾಯಿಸುತ್ತವೆ ಎಂದುಕೊಂಡಿರಿ! ಇನ್ನು ಅವರ ಪುಸ್ತಕಗಳನ್ನು ಮನೆ ಮನೆಗೆ ಹಂಚಿದ್ದಾರೆಂದು ನಿಮ್ಮಷ್ಟಕ್ಕೆ ಅಂದುಕೊಂಡು ಖುಷಿ ಪಟ್ಟರೆ ಸಾಕೇ? ಅವುಗಳಿಗೆಲ್ಲ ಸಾಕ್ಷಿ ಬೇಡವೇ? ಜನಪ್ರಿಯತೆಗೆ ಸರ್ಟಿಫಿಕೇಟು, ಉಪಾಧಿ, ಸರ್ಕಾರ ಕಾರಣವಲ್ಲ. ಓದುಗರ ಮನ್ನಣೆಯೊಂದೇ ಸಾಕು. ಸಮಾಜಕ್ಕೆ ಕೃತಿಗಳ ಮೂಲಕ ನನ್ನ ಕೊಡುಗೆ ಏನೂ ಇಲ್ಲ. ಅದು ಏನಾದರೂ ಇದ್ದರೆ ನನ್ನ ಬದುಕಿನಿಂದ ಎನ್ನುವ ಭೈರಪ್ಪನವರ ಎದೆಗಾರಿಕೆ ಇವತ್ತಿನ ಬುದ್ಧಿಜೀವಿಗಳಿಗೆ ಯಾರಿಗಾದರೂ ಇದೆಯಾ?
ಕನ್ನಡಕ್ಕೆ ಓದುಗರೇ ಇಲ್ಲ ಎನ್ನುವ ಕಾಲಕ್ಕೆ , ಪುಸ್ತಕ ಇಷ್ಟೊಂದು ಪ್ರಮಾಣದಲ್ಲಿ ಮಾರಾಟವಾಗುತ್ತದೆ ಎಂದರೆ ಹೆಮ್ಮೆ ಪಡಿ. ಹೊಟ್ಟೆಕಿಚ್ಚಲ್ಲ.
-ಶಿವಪ್ರಸಾದ್ ಸೂರ್ಯ
ಉಜಿರೆ, ಬೆಳ್ತಂಗಡಿ, ದ.ಕ