ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಏನೋ ಕಳೆದುಕೊಂಡಂತನಿಸಿತು

Vishwanath S
Updated On : 19 Jan 2014, 12:44 pm

ಕೃಷಿ ಅವಲಂಬಿತ ರೈತನ ಬದುಕು ಸಮೃದ್ಧವಾಗಲ್ಲ ಎಂಬ ಅಭಿಪ್ರಾಯವೊಂದು ಅಸ್ತಿತ್ವದಲ್ಲಿರುವಂತೆ ಕೃಷಿಕರ ಬಗ್ಗೆ ಬೆಳಕು ಚೆಲ್ಲುವ ಕೃಷಿ ಟೂರಿಸಂ ಎಂಬ ಖುಷಿಯ ಸಂಕ್ರಾಂತಿ ಸಂಪುಟ ಕೂಡಾ ಯಥೇಚ್ ಸಪ್ಪೆ ಜಾಹೀರಾತುಗಳನ್ನು ತುಂಬಿಸಿಕೊಂಡು ಬರವಣಿಗೆಯ ಸರಕುಗಳ ಕೊರತೆಯಿಂದ ನಲುಗಿಹೋಗಿತ್ತು. ಬಗೆ ಬಗೆಯ ಬರವಣಿಗೆಗಳಿಂದ ತುಂಬಿರುತ್ತಿದ್ದ ಖುಷಿ ಪುರವಣಿಯ 32 ಪುಟಗಳ ಪೈಕಿ ಭರ್ತಿ 15 ಪುಟಗಳನ್ನು  ಜಾಹೀರಾತು ಆಹುತಿ ತೆಗೆದುಕೊಂಡಿತ್ತು. ಒಮ್ಮೆ ಓದಿದರೆ ಇಡೀ ವಾರ ಪೂರ್ತಿ ಮನ ಮಂದಿರಕ್ಕೆ ಮುದ ನೀಡುವಂತಿದ್ದ ಖುಷಿಯ ಹಲವಾರು ಆಕರ್ಷಕ ಅಂಕಣಗಳು, ಸೃಜನಶೀಲ ಸ್ಥಿರ ಶೀರ್ಷಿಕೆಗಳು ನಾಪತ್ತೆಯಾಗಿ, ಕೆಲವೊಮ್ಮೆ ಜಾಹೀರಾತು ಸಂಗ್ರಹದ ಅನಿವಾರ್ಯತೆಗೆ  ಸಿದ್ಧಗೊಳ್ಳುವ ವಿಶೇಷಾಂಕದಂತೆ ಕಂಡಿತು. ಆದಾಗ್ಯೂ ಜಾಹೀರಾತುಗಳನ್ನು ಪ್ರಕಟಿಸಲೇಬೇಕಿದ್ದರೆ ಒಂದಷ್ಟು ಪುಟಗಳನ್ನಾದರೂ ಹೆಚ್ಚಿಸಬಹುದಿತ್ತಲ್ಲವೇ? ಈಗಷ್ಟೇ ಖುಷಿಯ ಅನುಭೂತಿಗೆ ಪಕ್ಕಾಗುತ್ತಿರುವ ಓದುಗರಿಗೆ ಈ ವಾರದ ಸಂಚಿಕೆ ಏನೋ ಕಳೆದುಕೊಂಡ ಭಾವಸ್ಪುರಣೆಗೆ ಕಾರಣವಾಯಿತು...ಇನ್ನು ಹೀಗಾಗಲ್ಲ ಅಲ್ವಾ ಪ್ರಾಮೀಸ್?
-ಸಂದೇಶ್. ಎಚ್. ನಾಯಕ ಹಕ್ಲಾಡಿ, ಕುಂದಾಪುರ

12 ಜನವರಿ 2014 ರ ಖುಷಿ ಸಂಚಿಕೆಯಲ್ಲಿ ಸಾಮಾನ್ಯ ಜ್ಞಾನೇಶ್ವರರು ಬರೆದ ಕಾಮನ್ ಸೆನ್ಸ್ ಎಷ್ಟಿದೆ ಟೆಸ್ಟ್  ಎಂಬ ಲೇಖನ ತುಂಬಾ ತಮಾಷೆಯಾಗಿತ್ತು. ಪ್ರಶ್ನೆ ಓದಿ ಉತ್ತರ ಹೊಳೆಯದಿದ್ದಾಗ ಬಹಳ ತಲೆ ಕೆರೆದು  ಕೊಂಡೆವು. ಉತ್ತರವನ್ನು ನೋಡಿದಾಗ ಬಿದ್ದು ಬಿದ್ದು ನಕ್ಕೆವು. ಛೇ ಇಷ್ಟು  ಸುಲಭವಾದ ಉತ್ತರ ತಿಳಿಯಲಿಲ್ಲವಲ್ಲ ಎಂದು ಕೈಕೈ ಹಿಸುಕಿಕೊಂಡೆವು. ಕಾಲೇಜಿನಲ್ಲಿ ಇದನ್ನು ನನ್ನ  ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಾಗ ಅವರೂ ಬಹಳ ಎಂಜಾಯ್ ಮಾಡಿದರು. ಅವರು ಕೊಟ್ಟ ವಿಧವಿಧವಾದ ಉತ್ತರಗಳನ್ನು ಕೇಳಿ ನಕ್ಕು ನಕ್ಕು ಸುಸ್ತಾಯಿತು.
-ಸರಸ್ವತಿ ಹೆಗಡೆ, ಹುಬ್ಬಳ್ಳಿ

ನಮ್ಮಂಥ ಓದುಗರಿಗೆ ವಿಜ್ಞಾನವೆಂದರೆ, ಗಣಿತದಂತೆಯೇ ಕಬ್ಬಿಣದ ಕಡಲೆ. ಗಂಟಲಲ್ಲಿ ಇಳಿಯದ ಕಡಬು. ತಿಳಿಯೋ ಆಸಕ್ತಿ ಉಂಟು ಆದರೆ ಅರ್ಥವಾಗೋಲ್ಲ! ನಮ್ಮ ವಿಜ್ಞಾನಿಗಳೂ ಅದ್ಯಾವುದೋ ಅನ್ಯಗ್ರಹದ ಭಾಷೇಲಿ ಮಾತಾಡ್ತಾರೆ. ಅಲ್ಪಸ್ವಲ್ಪ ಇಂಗ್ಲಿಷ್ ಗೊತ್ತಿದ್ದರೂ ಅವರಾಡುವ ಮಾತು, ಉಹುಂ ಅರ್ಥವಾಗುವುದಿಲ್ಲ. ಆದರೆ ಕೆಲವು ಲೇಖಕರು ಸಾಮಾನ್ಯರಿಗೂ ಅರ್ಥವಾಗುವ ಹಾಗೆ ವಿಜ್ಞಾನ ಬರಹಗಳನ್ನು ಬರೆಯುತ್ತಿದ್ದಾರೆ. ರೋಹಿತ್ ಚಕ್ರತೀರ್ಥರ ಬರಹಗಳು ಈ ವರ್ಗಕ್ಕೆ ಸೇರುವಂಥವು. ಅವರ ಬರಹಗಳು ಕಡುಬಲ್ಲ, ಪಾಯಸದಷ್ಟೇ ಸಲೀಸು. ಮಧ್ಯೆ, ಮಧ್ಯೆ ಗೋಡಂಬಿ ದ್ರಾಕ್ಷಿ! ಹೀಗೆಯೇ ಬರೆಯುತ್ತಿರಿ ರೋಹಿತ್.
-ಜಗದೀಪ. ಸಿ, ವಿದ್ಯಾನಗರ, ಹಾಸನ

ಪ್ರಣತಿ ಕ್ಷೇಮ ಸಮಾಚಾರದ ಕುರಿತಂತೆ ಬಾಲ್ಯದ ನೆನಪನ್ನು ಮಾಡಿಕೊಂಡಿದ್ದಾಳೆ. ಅದೇ ಪುಟದ ಪಕ್ಕದ ಗೋಡೆ ಬರಹದಲ್ಲಿ ಓದುಗರೊಬ್ಬರು "ಪತ್ರಗಳನ್ನು ಕಡೆಗಾಣಿಸಬೇಡಿ" ಅಂತ ಸಂಪಾದಕರಿಗೆ ಮನವಿ ಸಲ್ಲಿಸಿದ್ದಾರೆ. 80ರ ದಶಕದವರೆಗೂ ಈ ಪತ್ರವ್ಯವಹಾರ ಸುಗಮವಾಗಿ ಸಾಗಿತ್ತು. ಯಾವಾಗ ಈ ಎಸ್‌ಎಮ್‌ಎಸ್ ಸಂದೇಶ ಹಾಗೂ ಮಿಂಚಂಚೆಗಳ ಹಾವಳಿ ಶುರುವಾಯಿತೋ ಪತ್ರಗಳು ಮೂಲೆಗುಂಪಾದವು. ಆದರೂ ನಾವು ಬರೆಯುತ್ತಿದ್ದ ಪತ್ರಗಳು ಕಾಗದದ ಒಂದು ಪಕ್ಕ 'ಕ್ಷೇಮ', ಮಧ್ಯದಲ್ಲಿ 'ಶ್ರೀ' ಅಂತ ಬರೆದು ಕೊನೆಯ ತುದಿಯಲ್ಲಿ ದಿನಾಂಕ ಹಾಕಿ ಪತ್ರ ಪ್ರಾರಂಭಿಸುತ್ತಿದ್ದ ಆ ಸೊಬಗು ಇನ್ನೆಲ್ಲಿ? "ನಾವು ಕ್ಷೇಮವಾಗಿದ್ದೇವೆ. ನಿಮ್ಮ ಕ್ಷೇಮ ಸಮಾಚಾರಕ್ಕೆ ತಿಳಿಸುವುದು" ಈ ಪದಗಳೇ ಸಾಕು. ಈಗಲೂ ಮೈ ಮನ ತುಂಬಿಬರುತ್ತದೆ.
-ಬೆಳ್ಳಾವೆ ರಮೇಶ್, ಬೆಂಗಳೂರು

ಇತ್ತೀಚಿನ ಎರಡು ಖುಷಿ ಪ್ರತಿಗಳಲ್ಲಿ ಮಕ್ಕಳ ಬಾಲಬಣ್ಣ ಮಾಯವಾಗಿ, ಅದರ ಜಾಗದಲ್ಲಿ ಜಾಹೀರಾತು ಮಿಂಚುತ್ತಿರುವುದು ವಿಷಾದದ ಸಂಗತಿ. ಜಾಹೀರಾತು ತಪ್ಪೇನಲ್ಲ. ಆದರೆ ಅದಕ್ಕೆ ಮಕ್ಕಳ ಬಾಲಬಣ್ಣದ ಜಾಗವೇ ಬೇಕೆ? ಜುಲೈ 2013ರಲ್ಲಿ ನನ್ನ ಮೊಮ್ಮಗ ಹೂವಿನ ಚಿತ್ರ ಬಿಡಿಸಿ ಕನ್ನಡಪ್ರಭಕ್ಕೆ ಕಳುಹಿಸಿದ್ದ. ಪ್ರತೀ ವಾರವೂ ತನ್ನ ಚಿತ್ರ ಬರುವುದೆಂದು ಆಸೆಯಿಂದ ಕಾಯುತ್ತಿದ್ದ. ಮಕ್ಕಳು ಚಿತ್ರ ಬಿಡಿಸುವುದೇ ಕಡಿಮೆ. ಅಂತಹದರಲ್ಲಿ ಅವರನ್ನು ಪ್ರೋತ್ಸಾಹಿಸಬೇಕೆಂದು ನಾವು ಮಕ್ಕಳ ಫೋಟೋ ಸಮೇತ ಚಿತ್ರ ಕಳುಹಿಸಿದರೆ, ಅದನ್ನು ಕಡೆಗಣಿಸಿದ್ದನ್ನು ನೋಡಿ ಹಿರಿಯನಾದ ನನಗೆ ನೋವಾಗಿದೆ. ನನ್ನ ಮೊಮ್ಮಗಳ ಒಂದು ಫೋಟೋ ನಷ್ಟ ಮಾಡಿದೆನೆನ್ನುವು ಕೊರಗು ನನ್ನಲ್ಲೇ ಉಳಿಯಿತು.
-ಸೋಮಶೇಖರ್ ರಾವ್, ಬೆಂಗಳೂರು

ಮಾನ್ಯ ವಿ ಭಟ್ ಅವರೇ, ನೂರೆಂಟು ನೋಟದಲ್ಲಿ "ಕೋಟ್ಯಂತರ ಜನರ ಕಣ್ಣೀರು ಒರೆಸಿದ ಆ ಎರಡು ಹನಿ" ಎನ್ನುವ ಲೇಖನ ಸಮಯೋಚಿತವಾಗಿದೆ. ಪೋಲಿಯೋ ಮಾರಿಯಿಂದ ಸಂಕಷ್ಟಕ್ಕೆ ಒಳಗಾದ ಯಾವುದೇ ಕುಟುಂಬದ ಕಣ್ಣೀರು ಕಡಿಮೆಯಲ್ಲ. ಇಂಥ ಹತಭಾಗ್ಯರ ಕಂಬನಿಯನ್ನು ಶಾಶ್ವತವಾಗಿ ಅಳಿಸಿ ಹಾಕಿದ ಭಾರತ ಸರ್ಕಾರಕ್ಕೊಂದು ಸಲಾಂ ಅಂತೆಯೇ ಕರುಣಾಳು ಬಿಲ್‌ಗೇಟ್ಸ್ ಮತ್ತು ಪುಣ್ಯಾತ್ಮ ಡಾ. ಹರ್ಷವರ್ಧನ್ ಅವರಿಗೆ ಕೋಟಿ ನಮನಗಳು.
-ರಮೇಶ್‌ಚಂದ್ರ ಕ್ಯಾಲಿಫೋರ್ನಿಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement