ಶಾರ್ಕ್ ಮತ್ತು ಪಿರಾನ್ಹಾ ಮೀನುಗಳು ತಮ್ಮ ಬೇಟೆ ಕಣ್ಣಿಗೆ ಬೀಳುತ್ತಿದ್ದಂತೆಯೇ ಅವುಗಳ ಮೇಲೆ ಕ್ಷಣಾರ್ಧದಲ್ಲಿ ಮುಗಿಬಿದ್ದು ರಕ್ತದೋಕುಳಿಯಾಡುತ್ತವೆ. ಅವುಗಳ ಹಲ್ಲಿಗೆ ಸಿಕ್ಕ ಬೇಟೆ ನುಚ್ಚುನೂರಾಗುತ್ತದೆ. ಈಗ ಭಾರತದ ರಾಜಕೀಯದಲ್ಲಿ ಆಗುತ್ತಿರುವುದೂ ಇದೆ. ಪ್ರಗತಿಪರ ಬುದ್ಧಿಜೀವಿಗಳೂ ಸಹ ಹೊಸ ಪಕ್ಷವಾದ ಆಪ್ ಅನ್ನು ಹರಿದುತಿನ್ನುತ್ತಿದ್ದಾರೆ.
ಸಲ್ಮಾನ್ ಖುರ್ಷಿದ್ ಅವರು, "ಆಪ್‌ಗೆ ಜುರಾಸಿಕ್ ಯೋಚನೆಗಳಿವೆ, ಅದಕ್ಕೆ ಗಂಭೀರವಾದ ಸಿದ್ಧಾಂತವಿಲ್ಲ" ಎನ್ನುತ್ತಿದ್ದಾರೆ. ಈ ಹಿಂದೆ ಮನಿಷ್ ತಿವಾರಿಯವರು, "ಅಣ್ಣಾ ಹಜಾರೆ ಅಡಿಯಿಂದ ಮುಡಿಯವರೆಗೂ ಭ್ರಷ್ಟ ವ್ಯಕ್ತಿ" ಎಂದು ಹೇಳಿದ್ದರು. ಕೊನೆಗೆ ತಪ್ಪಾಯ್ತು ಎಂದು ತಿವಾರಿ ಅಣ್ಣಾ ಹಜಾರೆಯವರಿಗೆ ಪತ್ರ ಬರೆದರು. ಇನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು, ಮಾಧ್ಯಮಗಳಲ್ಲಿ ಮೆರೆಯುವವರಿಗಿಂತ ಭಿನ್ನವಾದ ನಾಯಕರು ಭಾರತಕ್ಕೆ ಬೇಕಿದೆ ಎಂದು ಪರೋಕ್ಷವಾಗಿ ಕೇಜ್ರೀವಾಲರನ್ನು ತಿವಿದರು.
ನಗೆ ಉಕ್ಕಿಸುವ ಸಂಗತಿಯೆಂದರೆ, ಟೀಕಾಕರರಿಗೆ, ತಾವು ಕೇಜ್ರಿವಾಲರ ಬಗ್ಗೆ ಹೇಳುತ್ತಿರುವ ಮಾತುಗಳು ತಮಗೇ ಚೆನ್ನಾಗಿ ಅನ್ವಯಿಸುತ್ತವೆ ಎನ್ನುವುದು ಅರಿವಾಗದೇ ಇರುವುದು. ಕಾಂಗ್ರೆಸ್ ಸಿದ್ಧಾಂತವೇನು? ಕುಟುಂಬ ರಾಜಕಾರಣವೇ ಅತ್ಯುತ್ತಮವಾದದ್ದು ಎನ್ನುವುದೇ? ಇನ್ನು ತನ್ನ ಎಷ್ಟು ರಾಜಕಾರಣಿಗಳು ಅಡಿಯಿಂದ ಮುಡಿಯವರೆಗೆ ಭ್ರಷ್ಟರಲ್ಲ ಎನ್ನುವುದನ್ನು ಕಾಂಗ್ರೆಸ್ ತೋರಿಸಬಲ್ಲದೇ? ಮೋದಿಯವರ ವಿಷಯಕ್ಕೆ ಬಂದರೆ, ಮಾಧ್ಯಮಗಳಲ್ಲಿ ಅವರಷ್ಟು ಮಿಂಚುವವರು ಮತ್ತೊಬ್ಬರಿಲ್ಲ. ದೇಶದಲ್ಲಿ ಪ್ರಸಕ್ತ ಅತ್ಯದ್ಭುತ ಮಾತುಗಾರರೆಂದರೆ ನರೇಂದ್ರ ಮೋದಿಯವರೇ.
ಇವೆಲ್ಲದರ ನಡುವೆಯೂ ಎರಡು ಅಂಶಗಳು ಮಾತ್ರ ಸ್ಪಷ್ಟವಾಗಿ ಉಳಿದುಕೊಳ್ಳುತ್ತವೆ: ಮೊದಲನೆಯದು, ಆಮ್ ಆದ್ಮಿ ಪಕ್ಷದಲ್ಲಿ ದೋಷಗಳಿವೆ, ಅದೇ ಆ ಪಕ್ಷವನ್ನು ಮುಂದೊಂದು ದಿನ ಮುಳುಗಿಸಬಹುದು ಮತ್ತು ಎರಡನೆಯದಾಗಿ, ಕುಟಿಲ ರಾಜಕಾರಣದಿಂದ ರೋಸಿ ಹೋಗಿದ್ದ ಜನರು ಉತ್ತಮ ಆಡಳಿತವನ್ನು ನೋಡಲು ಆ ಪಕ್ಷವನ್ನು ಆಯ್ಕೆ ಮಾಡಿದರು ಎನ್ನುವುದು. ಜನತೆಯ ಆಸೆಯನ್ನು ಈಡೇರಿಸಬೇಕೆಂದರೆ ಆಮ್ ಆದ್ಮಿ ಪಕ್ಷದ ನಾಯಕರು ಅಧಿಕಾರದಾಹವನ್ನು ಬಿಡಬೇಕಾಗುತ್ತದೆ. ಅದಾಗಲೇ ಆ ಪಕ್ಷದಲ್ಲಿ ಈ ವಿಚಾರದಿಂದಾಗಿ ಬಿರುಕು ಕಾಣಿಸಿಕೊಳ್ಳತೊಡಗಿದೆ. ಕೆಲವರು ತಮಗೆ ಸರಿಯಾದ ಸ್ಥಾನ ಸಿಕ್ಕಿಲ್ಲವೆಂದು ಸಿಟ್ಟಾದರೆ. ಇನ್ನೂ ಕೆಲವರು ಮತ್ತು ಆತ್ಮಾಭಿಮಾನಕ್ಕೆ ಏಟು ಬಿದ್ದಿತು ಎಂದು ಪಕ್ಷದಲ್ಲಿ ಹೊಡೆದಾಡತೊಡಗಿದ್ದಾರೆ. ಈ ಆಂತರಿಕ ಕಲಹ ಆಪ್ ಅನ್ನು ಎರಡು ಹೋಳು ಮಾಡಬಲ್ಲದು. ಕೇಜ್ರೀವಾಲ್ ಮೊದಲು ಈ ವಿಷಯದತ್ತ ಗಮನಹರಿಸಬೇಕು.
ಇನ್ನು ನೀತಿನಿರೂಪಣೆಯಲ್ಲಿಯೂ ಸಮಸ್ಯೆಗಳಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ನೇರಬಂಡವಾಳ ಹೂಡಿಕೆಯಂಥ ವಿಷಯ ಮೊದಲಿನಿಂದಲೂ ವಿವಾದಗಳನ್ನು ಎಬ್ಬಿಸಿದೆ. ಮುಂದಿನ ದಿನಗಳಲ್ಲೂ ಎಬ್ಬಿಸಲಿದೆ. ಅದನ್ನು ವಿರೋಧಿಸಿದ ದೆಹಲಿ ಸರ್ಕಾರವನ್ನು ಕೆಲವರು ಬೆಂಬಲಿಸಿದರು, ಕೆಲವರು ತೆಗಳಿದರು. ಇದೆಲ್ಲ ರಾಜಕೀಯದಲ್ಲಿ ಇದ್ದದ್ದೇ. ಆದರೆ ಆಪ್ ತನ್ನ ವೆಬ್‌ಸೈಟ್‌ನಲ್ಲಿ, "ಮುಂದಿನ ದಿನಗಳಲ್ಲಿ ಅನಿಲ, ಡೀಸಲ್ ಪೆಟ್ರೋಲ್ ಮತ್ತು ವಿದ್ಯುತ್‌ನಂಥ ಅವಶ್ಯಕ ಸರಕುಗಳ ಬೆಲೆ ನಿಗದಿಯಲ್ಲಿ ಜನರ ಅಭಿಪ್ರಾಯ ಕೇಳುವುದೂ ಅತ್ಯವಶ್ಯಕ" ಎಂದು ಬರೆದುಕೊಂಡಿದೆ. ಜನಾಭಿಪ್ರಾಯ ಕೇಳುವುದು ಅದ್ಭುತ ಕೆಲಸವೇ, ಆದರೆ ಇಂಥ ವಿಷಯಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಪೂರೈಕೆ ಮತ್ತು ಬೇಡಿಕೆಯಲ್ಲಿ ಹೆಚ್ಚುಕಡಿಮೆಯಾದಾಗ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಳಿತಗಳಾದಾಗ ಅದಕ್ಕೆ ತಕ್ಕಂತೆ ಬೆಲೆಯಲ್ಲಿ ಏರಿಳಿತಗಳನ್ನು ಮಾಡಬೇಕಾಗುತ್ತದೆ. ಆಗ ಜನರ ಅಭಿಪ್ರಾಯ ಕೇಳುತ್ತಾ ಕೂಡುವುದು ಎಷ್ಟು ಸರಿ?
ಆಪ್ ಎದುರಿಸುತ್ತಿರುವ ಮತ್ತೊಂದು ಅಪಾಯವೆಂದರೆ, ಅದು ತನ್ನ ಒಳ್ಳೆಯ ಉದ್ದೇಶಗಳಿಗೇ ಬಲಿಯಾಗುವ ಸಾಧ್ಯತೆಯಿರುವುದು. ಪಾಪ್ಯುಲರ್ ಆದದ್ದು, ಯಾವಾಗಲೂ ಪ್ರಾಕ್ಟಿಕಲ್ ಆಗಿರುತ್ತದೆ ಎಂದೇನೂ ಇಲ್ಲ. ಯಾವುದೇ ನೀತಿ ನಿರೂಪಣೆಯ ವಿಷಯವಾಗಲಿ, ಅಲ್ಲಿ ಬೇರು ಮಟ್ಟದ ಅಧ್ಯಯನದ ಅವಶ್ಯಕತೆಯಿರುತ್ತದೆ. ಭಾವನಾತ್ಮಕವಾಗಿ ಯೋಚಿಸುವುದರಲ್ಲಿ ತಪ್ಪಿಲ್ಲ, ಆದರೆ ಹಾಗೆ ಮಾಡುವಾಗ ವಾಸ್ತವವನ್ನೇ ಮರೆತುಬಿಟ್ಟರೆ? ಇನ್ನು, ಆಪ್‌ನ ಸರ್ಕಾರ ನಿಂತಿರುವುದು ಕಾಂಗ್ರೆಸ್‌ನ ಬೆಂಬಲದ ಮೇಲೆ. ಹರ್ಯಾಣಾ ಆ ಪಕ್ಷದ ಮುಂದಿನ ಪ್ರಮುಖ ಚುನಾವಣಾ ಕ್ಷೇತ್ರವಾಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಆ ಪಕ್ಷದ ನಿಲುವು, ಉದ್ಯಮಿ ರಾಬರ್ಟ್ ವಾದ್ರಾನಿಗೆ ಹಾನಿ ಮಾಡತೊಡಗಿದವೆಂದರೆ, ಆಗ ಏನಾಗಬಹುದು? ಕಾಂಗ್ರೆಸ್ ಯಾವ ರೀತಿಯಲ್ಲಿ ವರ್ತಿಸಬಹುದು?
ದೆಹಲಿಯಲ್ಲಿ ಆಪ್ ಇನ್ನೆಷ್ಟು ದಿನ ಉಳಿಯುತ್ತದೋ ಹೇಳುವುದಕ್ಕಾಗುವುದಿಲ್ಲ. ಆದರೆ ಅದರ ಗೆಲುವು ಮಾತ್ರ ಬದಲಾಗುತ್ತಿರುವ ಭಾರತದ ಸಂಕೇತವಂತೂ ಹೌದು. ಅದಾಗ್ಯೂ ಅದರ ಭಾಗವಾಗಬೇಕು ಎಂದು ಬಯಸುತ್ತಿರುವವರೆಲ್ಲಾ ಸಾಚಾಗಳೇನೂ ಅಲ್ಲ ಎನ್ನುವುದಂತೂ ನಿಜ. ಇದೇನೇ ಇದ್ದರೂ, ಭಾರತೀಯರು ಹೆಚ್ಚುತ್ತಿರುವ ಅಪರಾಧ ಮತ್ತು ಭ್ರಷ್ಟಾಚಾರದಿಂದ ರೋಸಿಹೋಗಿದ್ದಾರೆ. ಈ ಹೊಲಸನ್ನು ಹುಟ್ಟುಹಾಕಿದ ಸಾಂಪ್ರದಾಯಿಕ ಪಕ್ಷಗಳಿಂದ ಪರಿಹಾರ ಸಿಗುವುದಿಲ್ಲ ಎನ್ನುವುದೂ ಅವರಿಗೆ ಅರ್ಥವಾಗಿದೆ. ಒಂದು ವೇಳೆ ಈ ಆಪ್ ಹೋದರೂ, ಭಾರತೀಯರು ಇನ್ನೊಂದು ಆಪ್ ಅನ್ನು ಹುಡುಕೇ ಹುಡುಕುತ್ತಾರೆ.
-ಟಿ.ಜೆ.ಎಸ್ ಜಾರ್ಜ್