ಈ ಹಿಂಸೆಗೆ ಕೊನೆ ಎಂದು?
ಭಾರತದ ಪ್ರತಿಯೊಬ್ಬ ನಾಗರಿಕನಿಗೆ ರಕ್ಷಣೆ ನೀಡುವ ಜವಾಬ್ದಾರಿ ಗೃಹಸಚಿವರ ...
ಭಾರತದ ಪ್ರತಿಯೊಬ್ಬ ನಾಗರಿಕನಿಗೆ ರಕ್ಷಣೆ ನೀಡುವ ಜವಾಬ್ದಾರಿ ಗೃಹಸಚಿವರ ಮೇಲಿರುತ್ತದೆ. ಆದರೆ ಒಂದು ಕೋಮನ್ನು ಒಲಿಸಿಕೊಳ್ಳುವುದಕ್ಕಾಗಿ ಅವರು, "ಆ ಕೋಮಿನ ಆರೋಪಿಗಳನ್ನು ಬಂಧಿಸುವುದಕ್ಕೂ ಮುನ್ನ ಯೋಚಿಸಬೇಕು (ಅಂದರೆ ಆ ಯುವಕರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು)" ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರಲ್ಲ? ಹಾಗಿದ್ದರೆ ಉಳಿದ ಸಮಾಜದ ರಕ್ಷಣೆ ಮಾಡುವವರ್ಯಾರು? ಭಾರತವನ್ನು ಸುತ್ತುವರಿದಿರುವ ದೇಶಗಳಲ್ಲಿ ಅತಿ ಹೆಚ್ಚು ದೌರ್ಜನ್ಯಗಳಾಗುತ್ತಿರುವುದು ಹಿಂದುಗಳ ಮೇಲೆಯೇ. ಯಾವ ಮಹಾದ್ವೀಪ ಹಿಂದೆ ಭಾರತ ಎಂದು ಕರೆಸಿಕೊಳ್ಳುತ್ತಿತ್ತೋ ಅದರಲ್ಲೀಗ ಹಲವಾರು ರಾಷ್ಟ್ರಗಳು ಹುಟ್ಟಿಕೊಂಡಿವೆ. ಪಶ್ಚಿಮ ರಾಷ್ಟ್ರಗಳ ಷಡ್ಯಂತ್ರದಿಂದಾಗಿ ಈಗ ಈ ಭಾಗವನ್ನು ದಕ್ಷಿಣ ಏಶಿಯಾ ಎಂದೇ ಗುರುತಿಸಲಾಗುತ್ತಿದೆ. ಅಫ್ಘಾನಿಸ್ತಾನದ ಬಾಮಿಯಾನದಿಂದ ಹಿಡಿದು ಇಂಡೋನೇಷಿಯಾದ ಬೋರೋದೂರ್‌ನವರೆಗೆ ಒಂದೊಮ್ಮೆ ಹಿಂದು ಸಭ್ಯತೆ, ಸಂಸ್ಕೃತಿ ಮತ್ತು ವಿಶ್ವವಿದ್ಯಾಲಯಗಳ ಪಲ್ಲವಿಯಿತ್ತು. ಆದರೆ ಕಾಲಾಂತರದಲ್ಲಿ ಹಿಂದುಗಳೆಲ್ಲ ಈ ಭಾಗಗಳಲ್ಲಿ ಪಾಶವಿಕ ಅತ್ಯಾಚಾರಕ್ಕೊಳಗಾಗಿ, ಅವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟಾಗಿದೆ. ಅಫ್ಘಾನಿಸ್ತಾನದಲ್ಲಂತೂ ಹಿಂದುಗಳು ಸಮಾಪ್ತಿಯಾಗಿದ್ದಾರೆ. ಪಾಕಿಸ್ತಾನದಲ್ಲಿ ಎರಡನೆ ದರ್ಜೆಯ ನಾಗರಿಕರಂತೆ ಬದಕುತ್ತಿರುವ ಅವರು ದಿನನಿತ್ಯವೂ ಮೂಲಭೂತವಾದಿಗಳ ಕೈಗೆ ಸಿಕ್ಕು ತತ್ತರಿಸುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ನೆಪಾಳದಲ್ಲಂತೂ ಈಗ ಹಿಂದು ಹಿತ ರಕ್ಷಣೆಯ ಮಾತನ್ನು ಆಡುವಂತೆಯೇ ಇಲ್ಲ. ಪ್ರಪಂಚದ ಏಕೈಕ ಹಿಂದು ರಾಷ್ಟ್ರ ಎಂಬ ಸಂವಿಧಾನಿಕ ಅಲಂಕರಣವೇನಿತ್ತೋ ಅದನ್ನೂ ಈಗ ಕಿತ್ತೆಸೆಯಲಾಗಿದೆ. ಶ್ರೀಲಂಕಾದಲ್ಲಿ ಲಕ್ಷಾಂತರ ತಮಿಳು-ಹಿಂದುಗಳು ಸಿಂಹಿಳಿಯರ ಹುಚ್ಚಾಟದಿಂದಾಗಿ ಛಿದ್ರವಾಗಿ ಹೋಗಿದ್ದಾರೆ. ಇನ್ನು ನೆರೆಯ ಬಾಂಗ್ಲಾದೇಶದಲ್ಲಂತೂ ಎಂದಿನಂತೆ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿದೇ ಇದೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಿಗೆ ಪಾಕಿಸ್ತಾನದ ಸಮರ್ಥಕಿ ಬೇಗಂ ಖಲೀದಾ ಜಿಯಾ ಅವರು ಬಹಿಷ್ಕಾರ ಹಾಕಿದ್ದರು. ಹೀಗಾಗಿ ಆ ಏಕ ಪಕ್ಷೀಯ ಚುನಾವಣೆಯಲ್ಲಿ ಭಾರತದ ಸ್ನೇಹಿತೆ ಎಂದು ಕರೆಸಿಕೊಳ್ಳುವ ಶೇಖ್ ಹಸೀನಾ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡರು. ಆದರೆ ಈ ಸಮಯದಲ್ಲಿ 200 ಕ್ಕೂ ಹೆಚ್ಚಿನ ಹಿಂದುಗಳ ಸಂಹಾರವಾಗಿರುವ ಸುದ್ದಿ ಹೊರಬಿದ್ದಿದೆ. ಖುಲ್ಲಾನಾ, ಬಾರಿಸಾಲ್, ಢಾಕಾ ಮತ್ತು ಅದರ ಹತ್ತಿರದ ಚಟಗಾಂವ್‌ನಂಥ ನಗರಗಳಲ್ಲಿ ಸಾವಿರಾರು ಹಿಂದುಗಳನ್ನು ದರೋಡೆ ಮಾಡಲಾಯಿತು.
ಕೊಲೆಗೈಯಲಾಯಿತು. ಬಾಂಗ್ಲಾದೇಶದ ಇಂಥ ಸುದ್ದಿಗಳು ಪ್ರತಿದಿನವೂ ನಮ್ಮ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಆದರೆ ಕಳೆದ ಎರಡು ತಿಂಗಳಿನಿಂದ ಆಗುತ್ತಿರುವ ಈ ಹಿಂಸೆಯ ಬಗ್ಗೆ ಭಾರತದ ಯಾವುದೇ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಒಂದಿನಿತೂ ಚರ್ಚೆಗಳಾಗುತ್ತಿಲ್ಲ ಮತ್ತು ಯಾವ ರಾಜಕೀಯ ದಳಗಳೂ ಕೂಡ ಆಕ್ರೋಶ ಅಥವಾ ಅಸಂತೋಷವನ್ನು ಪ್ರಕಟಿಸುತ್ತಿಲ್ಲ.
1971ರ ಬಾಂಗ್ಲಾದೇಶ ವಿಮೋಚನಾ ಸಂಗ್ರಾಮದ ಸಮಯದಲ್ಲಿ ಪಾಕಿಸ್ತಾನದ ಪರವಿದ್ದ ಜಮಾತೆ ಇಸ್ಲಾಮಿಯ ಮುಸ್ಲಿಂ ಕಾರ್ಯಕರ್ತರು ಹಿಂದುಗಳನ್ನೇ ಮುಖ್ಯ ಗುರಿಯಾಗಿಸಿಕೊಂಡು ಹತ್ಯಾಕಾಂಡ ನಡೆಸಿದರು. ಅಮೆರಿಕದ ಪತ್ರಿಕೆಯೊಂದರ ಸಂಶೋಧನೆಯ ಪ್ರಕಾರ, ಅಜಮಾಸು 12 ರಿಂದ 15 ಲಕ್ಷ ಹಿಂದುಗಳು ಆ ಸಮಯದಲ್ಲಿ ಸಾವನ್ನಪ್ಪಿದರು. ಆ ಅಪರಾಧಗಳ ತನಿಖೆ ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವುದಕ್ಕಾಗಿ 2009ರಲ್ಲಿ ಬಾಂಗ್ಲಾದೇಶ ಸರ್ಕಾರ ಅಂತಾರಾಷ್ಟ್ರೀಯ ಅಪರಾಧ ತನಿಖಾ ಆಯೋಗವನ್ನು ರಚಿಸಿತು. ಈ ಆಯೋಗ ಕಳೆದ ವರ್ಷ ಕಾದಿರ್ ಮುಲ್ಲಾ ಎಂಬ ಜಮಾತೆ ಇಸ್ಲಾಮಿ ನಾಯಕನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತ್ತು. ನಂತರ ಸರ್ವೋಚ್ಚ ನ್ಯಾಯಾಲಯ ಆತನಿಗೆ ನೇಣು ಶಿಕ್ಷೆಯನ್ನು ವಿಧಿಸಿತು. ಇಡೀ ಬಾಂಗ್ಲಾದೇಶದಲ್ಲಿ ವಿಜಯೋತ್ಸವದ ಕಳೆ ಮಡುಗಟ್ಟಿತ್ತು. ಆದರೆ ಅದೇಕೋ ಇದೆಲ್ಲದರ ಪರಿಣಾಮವನ್ನು ಮತ್ತೆ ಹಿಂದುಗಳೇ ಅನುಭವಿಸಬೇಕಾಯಿತು. ಮತ್ತೆ ಅವರುಗಳ ಮನೆ ಲೂಟಿಯಾದವು, ಕೇವಲ 20 ದಿನಗಳಲ್ಲಿ 70 ಮಂದಿರಗಳು ಸುಟ್ಟುಕರಕಲಾದವು. ಸರ್ಕಾರದ ಎದುರಿನಲ್ಲೇ ಜಮಾತೆಯ ಜನ ಇದನ್ನೆಲ್ಲ ಮಾಡಿದರು. ಚಟಗಾಂವ್, ಖುಲ್ಲಾನಾ, ರಂಗಪುರ್, ವಾರೀಸಾಲ್, ರಾಜಶಾಹೀ, ಢಾಕಾ, ಸಿಲ್ಹತ್‌ಗಳ ಹಿಂದುಗಳಿಗೆ ಅತಿ ಹೆಚ್ಚಿನ ಹಾನಿಯಾಯಿತು. ಈ ಅನ್ಯಾಯವನ್ನು ವಿರೋಧಿಸುತ್ತಾ ಢಾಕಾದಲ್ಲಿರುವ ಅಮೆರಿಕದ ರಾಯಭಾರಿಗಳು ಹಿಂದುಗಳ ಮೇಲಾಗುತ್ತಿರುವ ಈ ಕ್ರೌರ್ಯವನ್ನು ತಡೆಯಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಆದರೆ ಸರ್ಕಾರಕ್ಕೆ ಏನೂ ಮಾಡಲಾಗಲಿಲ್ಲ.
'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ಜನವರಿ 14ರಂದು ಜೊಸೆಫ್ ಎಲ್ಕಿನ್ ಅವರ ವರದಿಯೊಂದನ್ನು ಪ್ರಕಟಿಸಿದೆ. ಅವರು ಸಾಥ್‌ಖೀರಾ ಜಿಲ್ಲೆಯ ಸುಭಾಷ್ ಘೋಷ್ ಎನ್ನುವ ಸಂತ್ರಸ್ತ್ರರ ಸಂದರ್ಶನವನ್ನು ಮಾಡಿದ್ದಾರೆ. ಜಮಾತೆ ಇಸ್ಲಾಮಿಯ ಜಿಹಾದಿಗಳು ಸುಭಾಷ್ ಅವರ ಪೂರ್ವಿಕರು ಕಟ್ಟಿಸಿದ ಮನೆಯನ್ನು ರಾತ್ರೋರಾತ್ರಿ ಸುಟ್ಟುಹಾಕಿದರಂತೆ. ಬಾಂಗ್ಲಾದೇಶದಲ್ಲಿ ಏನೇ ಆದರೂ ಹಿಂದುಗಳ ಕುತ್ತಿಗೆಗೇ ಸುತ್ತಿಕೊಳ್ಳುತ್ತದೆ ಎಂದು ಸುಭಾಷ್, ಎಲ್ಕಿನ್ ಎದುರು ಕಣ್ಣೀರು ಹಾಕಿದ್ದಾರೆ. ಜನವರಿ 5 ರಂದು ಚುನಾವಣೆಗಳು ನಡೆದಾಗ ಅದರ ಪರಿಣಾಮವನ್ನು ಹಿಂದುಗಳು ಎದುರಿಸಬೇಕಾಯಿತು. ಕಳೆದ ವರ್ಷ ಡಿಸೆಂಬರ್ 12ರಂದು ಕಾದಿರ್ ಮುಲ್ಲಾನನ್ನು ನೇಣಿಗೇರಿಸಿದಾಗಲೂ, ಹಿಂದುಗಳ ಬಲಿ ಪಡೆಯಲಾಯಿತು. ಅಂದಿನಿಂದ ಇಂದಿನವರೆಗೂ ನಾನು ಮೇಲೆ ಸೂಚಿಸಿರುವ ಜಿಲ್ಲೆಗಳ ಮಕ್ಕಳು ಶಾಲೆ ತೊರೆದು ಮನೆಯಲ್ಲೇ ಕುಳಿತಿದ್ದಾರೆ. ಅವರನ್ನು ಹೊರಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ.
ಭಾರತದ ಒಳಗೆ ಮತ್ತು ಹೊರಗೆ ಹಿಂದುಗಳ ಮೇಲೆ ಆಕ್ರಮಣಗಳು ಹೆಚ್ಚುತ್ತಲೇ ಇವೆ. ಅವರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ಇದರ ಬಗ್ಗೆ ಎಲ್ಲರಿಗಿಂತಲೂ ಹೆಚ್ಚು ಸಂವೇದನಾಶೂನ್ಯತೆಯನ್ನು ತೋರಿಸುತ್ತಿರುವ ದೇಶವೆಂದರೆ ಭಾರತ! ಮತ್ತು ಇಲ್ಲಿನ ರಾಜಕಾರಣಿಗಳು ಹಾಗೂ ಸೆಕ್ಯುಲರ್ ಮಾಧ್ಯಮಗಳು. ಅಮೆರಿಕದ ಪತ್ರಿಕೆಗಳ ಪ್ರತಿನಿಧಿಗಳು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ಅತ್ಯಾಚಾರಗಳ ಬಗ್ಗೆ ವರದಿ ಬರೆಯಲು ಆ ದೇಶಕ್ಕೆ ಹೋಗುತ್ತಾರೆ. ಆದರೆ ಭಾರತದ ಮಾಧ್ಯಮಗಳ ಮನೆಯಿಂದ ಯಾವೊಬ್ಬ ಪತ್ರಕರ್ತನೂ ನೆರೆ ರಾಷ್ಟ್ರಕ್ಕೆ ಹೋಗಿ ಅಲ್ಲಿನ ಘಟನೆಗಳ ಬಗ್ಗೆ ವರದಿ ಮಾಡುತ್ತಿಲ್ಲ. ಇನ್ನು ನಮ್ಮ ಸೆಕ್ಯುಲರ್ ರಾಜಕಾರಣಿಗಳು, ಹಿಂದುಗಳ ವೇದನೆಯ ಬಗ್ಗೆ ಚರ್ಚೆ ಮಾಡುವುದು ಚುನಾವಣೆಗಳಲ್ಲಿ ಲಾಭತರುವ ವಿಷಯವಲ್ಲ ಎಂದು ಭಾವಿಸುತ್ತಿದ್ದಾರೆ.
- ತರುಣ್ ವಿಜಯ್