ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಡಬ್ಬಿಂಗ್ ಬಂದರೆ ಭಾಷೆಯೂ ಭದ್ರ!

ಡಬ್ಬಿಂಗ್ ವಿರೋಧ ಜೋರಾಗಿಯೇ ನಡೆದಿದೆ. ಕನ್ನಡ ಭಾಷೆಗೆ ಡಬ್ಬಿಂಗ್ ಬಂದರೆ ಕನ್ನಡ ಚಿತ್ರಗಳ ಮೂಲೋತ್ಪಾಟನೆಯಾಗುವುದು ...

Rashmi Kasaragodu
Updated On : 22 Jan 2014, 11:21 am

ಡಬ್ಬಿಂಗ್ ವಿರೋಧ ಜೋರಾಗಿಯೇ ನಡೆದಿದೆ.  ಕನ್ನಡ ಭಾಷೆಗೆ ಡಬ್ಬಿಂಗ್  ಬಂದರೆ ಕನ್ನಡ ಚಿತ್ರಗಳ ಮೂಲೋತ್ಪಾಟನೆಯಾಗುವುದು ಖಂಡಿತ ಎಂಬುದು ಒಂದು ವಾದವಾದರೆ, ಡಬ್ಬಿಂಗ್‌ನಿಂದಾಗಿ ನಮ್ಮ ಭಾಷೆ ಹಾಗೂ ಸಂಸ್ಕೃತಿ ನಾಶವಾಗುತ್ತದೆ ಎನ್ನುವುದು ಇನ್ನೊಂದು ವಾದ. ಕಾರ್ಮಿಕರು ಬೀದಿಪಾಲಾಗುತ್ತಾರೆ ಎಂಬುದು ಮತ್ತೊಂದು ವಾದ. ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಬಹುತೇಕ ಇಡೀ ಕರ್ನಾಟಕ ಚಿತ್ರೋದ್ಯಮ, ಬೀದಿಗಿಳಿಯುವುದಾಗಿ ಎಚ್ಚರಿಸಿ, ಇದಕ್ಕೆ ಸಾಹಿತಿಗಳ ಬೆಂಬಲವೂ ಇದೆ ಎಂದು ಹೇಳುತ್ತಿದೆ.
ಸಾಹಿತ್ಯ, ಸಿನಿಮಾ ಸೃಜನಶೀಲ ಮಾಧ್ಯಮಗಳಾಗಿ ಉಳಿದಿವೆಯೇ ಎಂಬುದು ಈಗಿನ ಪ್ರಶ್ನೆ. ತಮಿಳು, ತೆಲುಗು, ಮಲೆಯಾಳಂ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿಯಾಗುವುದೇ ತಡ ಅವುಗಳನ್ನು ಕನ್ನಡೀಕರಿಸುವ ಪ್ರಯತ್ನದಲ್ಲಿ ಅಂದಿನ ದ್ವಾರಕೀಶ್, ರವಿಚಂದ್ರನ್‌ರಿಂದ ಹಿಡಿದು ಇಂದಿನ ಬಹುತೇಕ ನಿರ್ಮಾಪಕರು, ನಿರ್ದೇಶಕರು ಅದೇ ಕಾಯಕದಲ್ಲಿದ್ದಾರೆ. ಇನ್ನೂ ಕೆಲವರು ಹತ್ತಾರು ಸಿನಿಮಾಗಳ ದೃಶ್ಯಗಳನ್ನು ಕದ್ದು ಅದಕ್ಕೊಂದು ಕಥೆ ಹೆಣೆದು, ಬೆರಕೆ ಸೊಪ್ಪಿನ ಸಾರನ್ನು ಬಡಿಸುತ್ತಿದ್ದಾರೆ. ಇಷ್ಟಾದರೂ ಟೈಟಾನಿಕ್, ಜುರಾಸಿಕ್ ಪಾರ್ಕ್‌ನಂಥ ಬಾಲಿವುಡ್ ಚಿತ್ರ ಹೋಗಲಿ, ತೆಲುಗಿನ ಸಾಗರ ಸಂಗಮಂ, ರೋಬೋಟ್, ಮಗಧೀರ ಚಿತ್ರಗಳನ್ನು ಕನ್ನಡದಲ್ಲಿ ರಿಮೇಕ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಒಂದೆಡೆ ಕನ್ನಡದ ಸೀಮಿತ ಮಾರುಕಟ್ಟೆಯ ನೆಪವಾದರೆ, ಇನ್ನೊಂದೆಡೆ ಪರಿಣತಿ ಪಡೆದ ತಂತ್ರಜ್ಞರ ಕೊರತೆ. ಇಂಥ ಸಿನಿಮಾಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ಬಂದರೆ ಆ ಸಿನಿಮಾಗಳನ್ನು ನೋಡುವ ಅವಕಾಶ ಕನ್ನಡಿಗರಿಗೂ ದಕ್ಕುತ್ತದೆ ಅಲ್ಲವೇ?
ಇಂದಿನ ಯುವ ಜನಾಂಗವು ಮೊದ ಮೊದಲಿಗೆ ಬಾಲ್ಯದಲ್ಲಿ ಕನ್ನಡ ಸಿನಿಮಾ ನೋಡುವವರು ಯೌವನದಲ್ಲಿ ತಮಿಳು, ತೆಲುಗು, ಹಿಂದಿ ಸಿನಿಮಾಗಳತ್ತ ವಾಲುತ್ತಿರುವುದನ್ನು ಕಂಡರೆ, ಡಬ್ಬಿಂಗ್‌ನಿಂದಾಗಿ ಅಂಥ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡಲು ಸಾಧ್ಯವಾಗುತ್ತಿದ್ದರೆ ಅರ್ಧದಷ್ಟಾದರೂ ಮಂದಿ ಕನ್ನಡ ಸಿನಿಮಾಭಿಮಾನಿಗಳಾಗಿ ಉಳಿಯುತ್ತಿದ್ದರು. ಇನ್ನು ಕನ್ನಡ ಸಿನಿಮಾದ ಉಳಿವಿಗಾಗಿ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ. ಸಂಪೂರ್ಣ ತೆರಿಗೆ ವಿನಾಯಿತಿ, ಸಬ್ಸಿಡಿ, ಮಕ್ಕಳ ಸಿನಿಮಾಗಳಿಗೆ ವಿಶೇಷ ಪುರಸ್ಕಾರ, ಆದರೆ ಈ ಸವಲತ್ತುಗಳನ್ನು ಬಳಸಿಕೊಂಡು ಕನ್ನಡ ಸಿನಿಮಾ ಬೆಳೆಸುವ ಕೈಂಕರ್ಯಕ್ಕೆ ಮುಂದಾಗದಿರುವುದು ವಿಷಾದನೀಯ.
ಇಂದು ಕನ್ನಡದ ಬಹುತೇಕ ನಿರ್ಮಾಪಕರಲ್ಲಿ ತಮ್ಮ ಮಕ್ಕಳಿಗಾಗಿ, ಬಂಧುಗಳಿಗಾಗಿ ಸಿನಿಮಾ ತೆಗೆಯುವವರು ಒಂದು ಗುಂಪಾದರೆ, ಜನಪ್ರಿಯವಾಗಿರುವ ಕೆಲವೇ ಕೆಲವು ನಟರ ಹಿಂದೆ ಬಿದ್ದಿರುವ ನಿರ್ಮಾಪಕ ನಿರ್ದೇಶಕರದ್ದು ಇನ್ನೊಂದು ಗುಂಪು. ಎರಡನೆ ಗುಂಪಿನವರು ಕೋಟ್ಯಂತರ ರುಪಾಯಿ ಹಣ ಸುರಿಯುವುದರಿಂದ ಇವರಿಗೆ ಪರಭಾಷೆಗಳಲ್ಲಿ ಯಶಸ್ವಿಯಾಗಿರುವ ಚಿತ್ರಗಳ ರಿಮೇಕ್‌ನ ಕಡೆ ಗಮನ. ಏಕೆಂದರೆ ಅವರಿಗೆ ರಿಸ್ಕ್ ತೆಗೆದುಕೊಳ್ಳುವ ಮನಸ್ಸಿಲ್ಲ. ಕನ್ನಡ ಸಂಸ್ಕೃತಿಯನ್ನು ಉಳಿಸುವವರಂತೆ ಬೊಗಳೆ ಬಿಡುತ್ತಿರುವ ಇವರು ಮಾಡುತ್ತಿರುವುದಾದರೂ ಏನು? ಕನ್ನಡದಲ್ಲಿ ಹಣದ ಸೂರೆಯನ್ನೇ ಮಾಡಿದ ಪ್ರಖ್ಯಾತ ಚಿತ್ರವೊಂದರಲ್ಲಿ ಅಮ್ಮಮ್ಮ ಎಂಬ ಪದದ ಬಳಕೆಯಿದೆ. ತಮಿಳಿನಲ್ಲಿ ತಾಯಿಯ ತಾಯಿಗೆ ಬಳಸುವ ಪದವನ್ನು ಕನ್ನಡದಲ್ಲಿ ಯಾವುದೇ ಯೋಚನೆಯಿಲ್ಲದೆ ಬಳಸಿ, ನಮ್ಮನ್ನು ಗೊಂದಲಕ್ಕೀಡು ಮಾಡಿದರು. ಪಕ್ಕದಲ್ಲಿ ಕ್ಯಾಸೆಟ್ ಹಾಕಿಕೊಂಡು ಇತ್ತ ಸಿನಿಮಾ ಮಾಡುತ್ತಿರುವ ಇವರಿಗೆ ಸಂಸ್ಕೃತಿ ಉಳಿಸುವ ಕಾಳಜಿಯಾದರೂ ಎಲ್ಲಿದೆ?
ಈ ನಿಟ್ಟಿನಲ್ಲಿ ಡಬ್ಬಿಂಗ್ ಸಂಸ್ಕೃತಿಯನ್ನು ವಿರೋಧಿಸುವುದರಿಂದ ಭಾಷೆ, ಸಂಸ್ಕೃತಿಯನ್ನು ಉಳಿಸುತ್ತೇವೆ ಎಂಬುದು ಎಷ್ಟು ಸರಿ? ಕರುಣೆಯಿಂದ ಕನ್ನಡವನ್ನು ಉಳಿಸಲು ಪ್ರಯತ್ನಿಸದೆ, ಉತ್ತಮ ಪ್ರಯತ್ನಗಳಿಂದ ಯಾಕೆ ಕನ್ನಡವನ್ನು ಉಳಿಸುವ ಪ್ರಯತ್ನ, ಪ್ರಯೋಗವಾಗುತ್ತಿಲ್ಲ? ಬಿಡುಗಡೆಯಾಗುವ ಎಲ್ಲಾ ಚಿತ್ರಗಳ ಡಬ್ಬಿಂಗ್ ಸಾಧ್ಯವೂ ಇಲ್ಲ. ಬದಲಾಗಿ ಜನಪ್ರಿಯ ನಟರ, ಇಲ್ಲವೇ ಹೆಚ್ಚು ನಿರೀಕ್ಷೆಯನ್ನುಂಟು ಮಾಡಿರುವ ಚಿತ್ರಗಳನ್ನು ಮತ್ರ ಡಬ್ಬಿಂಗ್ ಮಾಡಲು ಪ್ರಯತ್ನಿಸುತ್ತಾರೆಯೇ ಹೊರತು ಸಿನಿಮಾ ಮಂದಿರಗಳಿಗೆ ಖಾಲಿಬಾಡಿಗೆ ನೀಡಲು ಯಾರು ತಾನೇ ಮುಂದೆ ಬರುತ್ತಾರೆ? ಉತ್ತಮ ಕಥೆ, ಸಂಗೀತ, ಛಾಯಾಗ್ರಹಣ ಹೊಂದಿದ ಚಿತ್ರಗಳನ್ನು ಕನ್ನಡದ ಪ್ರೇಕ್ಷಕ ಅಂದೂ ಪ್ರೋತ್ಸಾಹಿಸಿದ್ದಾನೆ. ಅದು ಇಂದಿಗೂ ಮುಂದುವರಿದಿದೆ. ಮುಂದುವರಿಯುತ್ತದೆ ಕೂಡಾ. ಹೊಸಬರ ಸಿಂಪಾಲ್ಲಾಗ್ ಒಂದ್ ಲವ್ ಸ್ಟೋರಿ, ಲೂಸಿಯಾ, 6-52 ಕೆಲ ಉದಾಹರಣೆ ಮಾತ್ರ. ವಿಶಾಲ ಕರ್ನಾಟಕದ, ಕನ್ನಡದ ಭಾಷೆ, ಸಂಸ್ಕೃತಿ ಗರಿಕೆಯ ನಾಶವಂತೂ ಸಾಧ್ಯವಿಲ್ಲ. ಮುಂಗಾರು ಮಳೆಯಂತೆ ಅಪ್ಪಳಿಸಿ ಅವುಗಳನ್ನು ಮತ್ತೆ ಮತ್ತೆ ಚಿಗುರಿಸುವ ಕಾಯಕವನ್ನು ಚಿತ್ರರಂಗದ ಉದ್ಯಮಿಗಳು ಮಾಡಬೇಕಿದೆ.

- ಗೊರೂರು ಶಿವೇಶ, ಹಾಸನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement