ಅಂಕಣಗಳು

ಔಚಿತ್ಯ ಪ್ರಜ್ಞೆಯನ್ನು ನಾಶಗೊಳಿಸುವ ರಾಜಕೀಯ

ಈ ಸಮಯದಲ್ಲಿ ಶಶಿ ಥರೂರ್ ಅವರ ಟೀಕಾಕಾರರು ಕೂಡ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ...

ಈ ಸಮಯದಲ್ಲಿ ಶಶಿ ಥರೂರ್ ಅವರ ಟೀಕಾಕಾರರು ಕೂಡ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ, ವಿಶ್ವಸಂಸ್ಥೆಯಲ್ಲಿ ಕೆಲಸ, ಲೇಖಕನಾಗಿ ಹೆಸರು ಪಡೆದದ್ದು, ಮೊದಲ ಪ್ರಯತ್ನದಲ್ಲೇ ಸಚಿವರಾಗಿದ್ದು, ವಿದ್ಯಾವಂತ ವರ್ಗದ ಡಾರ್ಲಿಂಗ್ ಎಂದು ಕರೆಸಿಕೊಂಡಿದ್ದು... ಹೀಗೆ ತಮ್ಮ ಜೀವನದ ಮೊದಲ 50 ವರ್ಷಗಳನ್ನು ಅತ್ಯದ್ಭುತವಾಗಿ ಕಳೆದವರು ಶಶಿ. ಆದರೆ ಅವರ ರಾಜಕೀಯ ಜೀವನದಲ್ಲಿ ಮಾತ್ರ ಒಂದಾದ ನಂತರ ಒಂದರಂತೆ ವಿವಾದಗಳು ಎದುರಾದವು. ಪಾಪ, ಈಗ ಮತ್ತೊಂದು ದುರಂತ ಅವರ ಜೀವನದಲ್ಲಿ ಬಂದೆರಗಿದೆ.
ಸುನಂದಾ ಪುಷ್ಕರ್ ಅವರ ಹಠಾತ್ ಸಾವು, ಶಶಿ ಥರೂರ್ ಅವರ ಮೇಲೆ ಅನುಮಾನಗಳನ್ನು ಹುಟ್ಟುಹಾಕಿದವು. ಸುನಂದಾ ಅವರ ಕುಟುಂಬ ವರ್ಗ ದೂರು ಸಲ್ಲಿಸಿಲ್ಲವಾದ್ದರಿಂದ ಶಶಿ ಥರೂರ್ಗೆ ತೊಂದರೆಗಳು ಎದುರಾಗಲಿಲ್ಲ. ಆದರೆ ವೈದ್ಯಕೀಯ ಪರೀಕ್ಷೆಗಳು, ಪೊಲೀಸ್ ಮೂಲಗಳು ಹೇಳುವ ವಿಷಯ ಕೆಲವು ಅರ್ಥವಾಗದ ಸಂಗತಿಗಳತ್ತ ಕೈಹಿಡಿದೊಯ್ಯುತ್ತವೆ. ಇನ್ನು ಥರೂರ್ ಕೇಂದ್ರ ಸಚಿವರಾಗಿರುವವರೆಗೆ ಪೊಲೀಸರು ಅವರ ವಿಚಾರಣೆಗೆ ಇಳಿಯುವುದು ಸಂದೇಹವೇ. ಈಗಲೂ ರಾಜಕೀಯ ಸ್ತರದಲ್ಲಿ ಅವರು ಕಾಂಗ್ರೆಸ್ ಹೈಕಮಾಂಡ್ನ ಮೆಚ್ಚಿನ ನಾಯಕರಾಗೇ ಉಳಿದಿದ್ದಾರೆ. ವಿವಾದದ ತುದಿಯಲ್ಲಿರುವಾಗಲೇ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಿಸಲಾಗಿದೆ.
ಶಶಿ ಥರೂರ್ ಅವರು ರಾಜಕೀಯವಾಗಿ ಮತ್ತು ಕಾನೂನುಬದ್ದವಾಗಿ ಒಂದಿಷ್ಟು ಗಾಯವಾಗದೇ ಹೊರಬರಬಹುದು. ಮರುಚುನಾವಣೆಗೆ ಅವರು ನಿಲ್ಲಲೂಬಹುದು. ಆದರೆ ಕಾನೂನು ಮತ್ತು ರಾಜಕೀಯಕ್ಕಿಂತ ಮಿಗಿಲಾದ ವಿಷಯಗಳು ಹಲವಿವೆ. ಲೇಖಕರು ಜೀವನದ ಅವ್ಯಕ್ತ ವಾಸ್ತವಗಳಿಗೆ ಸೂಕ್ಷ್ಮಗ್ರಾಹಿಯಾಗಿರಬೇಕು. ಒಂದೇ ಒಂದು ನಿಮಿಷ ಶಶಿ ಥರೂರ್ ಒಳಗಿರುವ ರಾಜಕಾರಣಿಯನ್ನು ಅವರಲ್ಲಿರುವ ಲೇಖಕ ತುಳಿದುನಿಂತನೆಂದರೆ, ಆಗ ಅವರಿಗೆ ಅನೇಕ ನಿಷ್ಠುರ ಸತ್ಯಗಳು ಗೋಚರವಾಗಬಹುದು. ತಮ್ಮನ್ನು ಜನತೆ ನೋಡುವ ದೃಷ್ಟಿ ಮೊದಲಿನಿಂತೆ ಎಂದಿಗೂ ಇರಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಆಗ ಅರಿವಾಗಬಹುದು. ಕೇವಲ ಐಪಿಎಲ್ ವಿವಾದವಷ್ಟೇ ಅಲ್ಲ, ಮನೆಜಗಳ, ವಿಮಾನಯಾನದ ಬಗ್ಗೆ ಅವರಾಡಿದ ಹಗುರ ಮಾತು, ಇನ್ನೊಬ್ಬ ಮಹಿಳೆಯ ಮೋಹಕ್ಕೆ ಸಿಕ್ಕಿಬಿದ್ದು ಹೆಂಡತಿಯಿಂದ ಮಾನಸಿಕವಾಗಿ ದೂರವಾದ ಸಂಗತಿಗಳೆಲ್ಲ ಅವರ ವರ್ಚಸ್ಸನ್ನು ಅದಾಗಲೇ ಕುಂದಿಸಿವೆ.
ಆದರೆ ಥರೂರ್ ಅವರಲ್ಲಿರುವ ಲೇಖಕನಿಗೆ ಅವರಲ್ಲಿರುವ ರಾಜಕಾರಣಿಯನ್ನು ಸೋಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ರಾಜಕೀಯ ಮನುಷ್ಯನನ್ನು ಹೀಗೆಯೇ ಬದಲಿಸಿಬಿಡುತ್ತದೆ. ಆ ಹಾದಿ ಹಿಡಿದ ವ್ಯಕ್ತಿಗಳಿಗೆ ಮಾನವ ಸಂಬಂಧಗಳಿಗಿಂತ, ಸಂವೇದನೆಗಳಿಗಿಂತ ಅಧಿಕಾರಬಲವೇ ಹೆಚ್ಚು ಆಪ್ಯಾಯವಾಗುತ್ತಾ, ಮುಖ್ಯವಾಗುತ್ತಾ ಹೋಗುತ್ತದೆ. ಸ್ವತಂತ್ರ ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಯಾದ ನೆಹರು ಅವರಿಗೆ ಹೀಗೇ ಆಯಿತು. ಕಾಶ್ಮೀರ ಸಮಸ್ಯೆ ಮತ್ತು ಚೀನಾದೊಂದಿಗಿನ ಗಡಿ ಕದನದಲ್ಲಿ ಅವರು ತೆಗೆದುಕೊಂಡ ತೀರ್ಮಾನಗಳು 17 ವರ್ಷದ ಅವರ ವರ್ಚಸ್ಸನ್ನು ಮಣ್ಣುಪಾಲು ಮಾಡಿಬಿಟ್ಟವು. ನೆಹರೂರ ನಂತರ ಇಂಥ ಪರಿಸ್ಥಿತಿ ತಂದುಕೊಂಡವರು ಜಯಪ್ರಕಾಶ್ ನಾರಾಯಣ್. ಅದಾಗ್ಯೂ ಇತಿಹಾಸದ ಪುಟದಲ್ಲಿ ಅವರು ಮಹಾನ್ ವ್ಯಕ್ತಿಯಾಗಿ ಕಾಣುತ್ತಾರಾದರೂ, ಅವರ ಕೊಡುಗೆ ಮಾತ್ರ ಶೂನ್ಯ. ಪ್ರಧಾನಿಯಾಗುವವರೆಗೂ ಮನಮೋಹನ್ ಸಿಂಗ್ ಅವರಿಗೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಥಶಾಸ್ತ್ರಜ್ಞರಾಗಿ ಭಾರೀ ಹೆಸರಿತ್ತು!
ಶಶಿ ಥರೂರ್ ಅಂತೂ ಈ ಕೂಟದಲ್ಲಿಲ್ಲ ಬಿಡಿ. ಹಾಗಾಗೇ ರಾಜಕಾರಣಿಯಾಗಿ ಅವರ ವರ್ಚಸ್ಸು ಅತ್ಯಂತ ವೇಗವಾಗೇ ಕುಸಿಯುತ್ತಿದೆ. ಅವರು ಅಧಿಕಾರದ ಆಮಿಷಕ್ಕೆ ಗಂಟುಬಿದ್ದರು ಎನ್ನುವುದು ದುರ್ದೈವದ ಸಂಗತಿ. ಹೈಕಮಾಂಡ್ನ ಬೆಂಬಲ ಅವರಿಗಿದೆಯಾದರೂ, ಅವರ ಬಳಿಯೇ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದಕ್ಕೆ ಒಂದು ಮಾರ್ಗವಿದೆ. ಆದರೆ ಅವರು ಅದನ್ನನುಸರಿಸುತ್ತಿಲ್ಲ. ಅದು ಸಾಹಿತ್ಯ ಮಾರ್ಗ. ಒಬ್ಬ ಕಾದಂಬರಿಕಾರರಾಗಿ ಅವರಿಗೆ  ದೊಡ್ಡ ಹೆಸರಿದೆ. ಇನ್ನು ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹು ಭದ್ರ ಸಾಹಿತ್ಯ ಸ್ನೇಹವಲಯವಿದೆ. ಹಾಗೆ ನೋಡಿದರೆ ಶಶಿ ಥರೂರ್, ತಮ್ಮ ತಂದೆಯ ಹೆಸರಿನಲ್ಲಿರುವ ಚಂದ್ರನ್ ಥರೂರ್ ಫೌಂಡೇಷನ್ಗೆ ಆಧುನಿಕ ಟಚ್ ಕೊಡಲು ವಿಫಲರಾಗಿದ್ದಾರೆ. ಬಿಲ್ ಗೇಟ್ಸ್ ಮತ್ತು ಬಿಲ್ ಕ್ಲಿಂಟನ್ ತಮ್ಮ ಸಂಸ್ಥೆಯ ಮೂಲಕ ಜನರನ್ನು ತಲುಪುತ್ತಿರುವ ರೀತಿ ಶಶಿ ಅವರಿಗೆ ಮಾದರಿಯಾಗಬೇಕಿದೆ. ತಮ್ಮ ಕುಟುಂಬದ ಹೆಸರನ್ನು ಎತ್ತಿಹಿಡಿಯಲು ಶಶಿ ಥರೂರ್ ಈ ವಲಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಮತ್ತು ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳಬಹುದು.
ಚಂದ್ರನ್ ಥರೂರ್ 'ಅಮ್ರಿತ ಬಾಜಾರ್ ಪತ್ರಿಕೆ'ಯ ಲಂಡನ್ನ ಸುದ್ದಿಗಾರರಾಗಿದ್ದವರು ಮತ್ತು ಅಂದಿನ ಸ್ಟೇಟ್ಸ್ಮನ್ನ ಕಲ್ಕತ್ತಾ ವಿಭಾಗದ ಜಾಹೀರಾತು ವಿಭಾಗದ ನಿರ್ದೇಶಕರಾಗಿದ್ದವರು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಹೊಂದಿದ್ದ ಚಂದ್ರನ್ ಈ ಕಾರಣಕ್ಕಾಗಿಯೇ 'ಡೈನಮೋ' ಎಂದು ತಮ್ಮ ಸಹೋದ್ಯೋಗಿಗಳಿಂದ ಕರೆಸಿಕೊಳ್ಳುತ್ತಿದ್ದರು. ಚಂದ್ರನ್ ಅವರ ಸಹೋದರ ಟಿ. ಪರಮೇಶ್ವರ್, ಭಾರತದ ರೀಡರ್ಸ್ ಡೈಜೆಸ್ಟ್ನ ಚುಕ್ಕಾಣಿ ಹಿಡಿದಿದ್ದವರು. ಥರೂರ್ ಕುಟುಂಬ ಶತಮಾನಗಳಿಂದ ಒಂದು ಪ್ರಭಾವಳಿಯನ್ನು ತನ್ನ ಸುತ್ತಲೂ ಕಟ್ಟಿಕೊಂಡು ಬಂದಿದೆ. ಇದರ ಬೆಳಕಿನಲ್ಲೇ ಶಶಿ ಥರೂರ್ ತಮ್ಮ ಪ್ರಯತ್ನದಿಂದ ಇನ್ನಷ್ಟು ಮಿನುಗಲು ಪ್ರಯತ್ನಿಸಬೇಕು. ಅವರ ಬಳಿ ಆಯ್ಕೆಗಳಿವೆ. ಆದರೆ ತ್ರಿಪುರಂನಿಂದ ಮರುಚುನಾವಣೆಗೆ ಸ್ಪರ್ಧಿಸಿ, ಗಾಯವನ್ನು ಹೆಚ್ಚು ಮಾಡಿಕೊಳ್ಳುವ ಅಪಾಯಕಾರಿ ಆಯ್ಕೆಯೂ ಅವರ ಮುಂದಿದೆ. ಬಹುಶಃ ಈ ಹಾನಿಕರ ಆಯ್ಕೆಯನ್ನೇ ಥರೂರ್ ಅಪ್ಪಿಕೊಳ್ಳುತ್ತಾರೆನಿಸುತ್ತಿದೆ. ನಾನಾಗಲೇ ಹೇಳಿದೆನಲ್ಲ, ರಾಜಕೀಯ ಮನುಷ್ಯನನ್ನು ಬದಲಿಸಿ, ಅವನ ವಿವೇಚನೆಯನ್ನು ನಾಶಗೊಳಿಸಿಬಿಡುತ್ತದೆ.


-ಟಿಜೆಎಸ್ ಜಾರ್ಜ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ