ಈ ದುರ್ಗತಿಗೆ ಯಾರು ಹೊಣೆ?
ಹಿಂದುಸ್ಥಾನ ಎಂಬ ಹಣೆಪಟ್ಟಿ ಹೊತ್ತಿರುವ ಈ ದೇಶದಲ್ಲಿ ಹಿಂದುಗಳಿಗೇಕೆ ಈ ದುರ್ಗತಿ?...
ಹಿಂದುಸ್ಥಾನ ಎಂಬ ಹಣೆಪಟ್ಟಿ ಹೊತ್ತಿರುವ ಈ ದೇಶದಲ್ಲಿ ಹಿಂದುಗಳಿಗೇಕೆ ಈ ದುರ್ಗತಿ?
ಇತಿಹಾಸದ ಪುಟಗಳನ್ನು ತೆರೆದರೆ ಎಲ್ಲೆಡೆ ಅನ್ಯಾಯ- ಅಕ್ರಮ. ಇನ್ನೊಂದೆಡೆ ಆ ಇತಿಹಾಸ ತಿರುಚಿ ಹಿಂದುಗಳ ಕಣ್ಣಿಗೆ ಮಣ್ಣೆರಚಿದರು.
ಹಿಂದುಸ್ಥಾನ ಎಂಬ ಹೆಸರು ಈ ಪುಣ್ಯ ಭೂಮಿಗೆ ಹೇಗೆ ಬಂತೆಂದು ಕೇಳಿದರೆ ಸಿಗುವ ಉತ್ತರವಾದರೂ ಏನು? ಆಂಗ್ಲರಿಗೆ ಭಾರತದಲ್ಲಿ ಹರಿಯುವ ಪವಿತ್ರ ನದಿಯಾದ 'ಸಿಂಧೂ' ಹೆಸರನ್ನು ಉಚ್ಚಾರಣೆ ಮಾಡಲಾಗದೇ ಹಿಂದೂ ಎಂದು ಉಚ್ಚಾರಣೆ ಮಾಡುತ್ತಿದ್ದರು ಎಂದು. ಈ ಕತೆಯನ್ನು ಒಪ್ಪಲಾದೀತೇ? ಈ ನೆಲದಲ್ಲಿ ಹಿಂದುಗಳು ಅಧಿಕವಾಗಿರುವುದರಿಂದ ಈ ಹೆಸರು ಬಂತೆಂದು ಹೇಳಲಾಗದ ಪರಿಸ್ಥಿತಿಯಲ್ಲಿ ನಾವಿದ್ದೆವೆಂದರೆ ಯೋಚಿಸಿ!
ಜಾತ್ಯತೀತತೆ, ಸಮಾನತೆ ಎಂದು ಹೇಳಿ ರಾಜಕಾರಣ ಮಾಡುತ್ತಿರುವ ಈ ರಾಜಕಾರಣಿಗಳು ಜಾತೀಯತೆಯನ್ನೇ ಬಂಡವಾಳ ಮಾಡಿಕೊಂಡಿರುವುದು ಜಾಹೀರಾಗಿದ್ದರೂ ಇನ್ನೂ ಸುಮ್ಮನಿದ್ದೇವಲ್ಲವೇ?
ಮೊನ್ನೆಯಷ್ಟೆ ಈ ದೇಶದ ಗೃಹ ಮಂತ್ರಿಯಯವರು ಎಲ್ಲಾ ರಾಜ್ಯಗಳಿಗೂ ಬರೆದ ಪತ್ರವೆ ಇದಕ್ಕೊಂದು ನಿದರ್ಶನ. ಒಂದು ಕೋಮಿನವರನ್ನು ಬಂಧಿಸುವಾಗ ಮಾತ್ರ ಎಚ್ಚರ ವಹಿಸಬೇಕೆಂಬ ಆದೇಶವೇಕೆ? ನಿರಪರಾಧಿಗಳು ಯಾವುದೇ ಕೋಮಿನವರಾದರೂ ಶಿಕ್ಷೆಯಾಗಬಾರದು ಎಂಬ ಕಾಳಜಿ ಇರಬೇಕಲ್ಲವೇ? ಉಗ್ರನನ್ನು ಬಂಧಿಸಿದರೂ ಆತನಿಗೆ ಶಿಕ್ಷೆಯಾಗುವುದಕ್ಕೆ ಮುಂಚೆ 25-30 ಕೋಟಿ ರುಪಾಯಿ ವೆಚ್ಚ ಮಾಡಿದರೆಂದರೆ?
ಇದಕ್ಕೆಲ್ಲ ಮುಖ್ಯ ಕಾರಣ ಹಿಂದುಗಳಲ್ಲಿರುವ ಒಗ್ಗಟ್ಟಿನ ಕೊರತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಧರ್ಮದಲ್ಲಿ ನಾವೆಲ್ಲರೂ ಹಿಂದುಗಳು ಎಂದು ಗುರುತಿಸಿಕೊಳ್ಳುವ ಬದಲು ಅದರ ಉಪಜಾತಿಯಲ್ಲೆ ಗುರುತಿಸಿಕೊಂಡವರೆ ಹೆಚ್ಚು.
ಒಂದು ಮನೆಯಲ್ಲಿ 10 ಜನರಿದ್ದರೆ ನಾವು ಆ ಮನೆಯಲ್ಲಿರುವ ಎಂಟು ಮಂದಿಯನ್ನು ನಿರ್ಲಕ್ಷಿಸಿ ಎರಡು ಮಂದಿಯನ್ನು ಮಾತ್ರ ಗಮನದಲ್ಲಿರಿಸಿಕೊಂಡು ಅವರ ಆರೋಗ್ಯವನ್ನೆ, ಅವರ ಏಳಿಗೆಯನ್ನೇ ನೋಡಿಕೊಂಡು ಬರುತ್ತಿದ್ದರೆ ಏನಾಗಬಹುದು? ಆ ಮನೆಯ ಪರಿಸ್ಥಿತಿಯೇ ಅಲ್ಲೋಲ ಕಲ್ಲೋಲವಾಗಿಬಿಡುತ್ತದೆ. ಏಕೆಂದರೆ ಉತ್ತಮವಾಗಿರುವ ಆ ಎರಡು ಮಂದಿಗೆ ಉಳಿದ ಆ ಎಂಟು ಮಂದಿಯನ್ನು ತಮಗೆ ಸರಿಸಾಟಿಯಾಗಿ ಬೆಳೆಸಲು ಸಾಧ್ಯವೇ? ಸಾಧ್ಯವಾದರೂ ಅದು ವಿಳಂಬದಾಯಕ ಕೆಲಸ. ಇದರಿಂದ ಆ ಮನೆಯ ಬೆಳವಣಿಗೆಯೆ ಕುಂಠಿತವಾಗುತ್ತದೆ.
ಅಂದ ಹಾಗೆ ನಾವು ಆ ಮನೆಯಲ್ಲಿರುವ ಎಂಟು ಮಂದಿಯನ್ನು ಗಮನದಲ್ಲಿರಿಸಿಕೊಂಡು ಉಳಿದ ಎರಡು ಮಂದಿಯನ್ನು ನಿರ್ಲಕ್ಷಿಸಿದರೇ ಏನಾಗಬಹುದು? ಆ ಮನೆಯಲ್ಲಿ ನಾವು ಅಷ್ಟೊಂದು ವ್ಯತ್ಯಾಸವನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ಆ ಉತ್ತಮವಾಗಿರುವ ಎಂಟು ಮಂದಿಯು ನಿರ್ಲಕ್ಷಕ್ಕೊಳಗಾದ ಆ ಎರಡು ಮಂದಿಯನ್ನು ಉತ್ತಮವಾಗಿ, ತಮ್ಮ ಸರಿಸಾಟಿಗೆ ಬರುವಂತೆ ಬೆಳಸಬಹುದು. ಇದು ಆ ಎಂಟುಮಂದಿಗೆ ಕಷ್ಟದಾಯಕವಾದ ಕೆಲಸವೇ ಅಲ್ಲ. ಆ ಮನೆಯು ವೇಗವಾಗಿ ಬೆಳವಣಿಗೆ ಕಾಣುವುದರಲ್ಲಿ ಯಾವ ಸಂಶಯವೂ ಇಲ್ಲ.
ಇದೇ ಪರಿಸ್ಥಿತಿ ನಮ್ಮ ಅಖಂಡವಾದ ಭಾರತ ದೇಶಕ್ಕೆ ಬಂದಿರುವುದು. ಹಿಗಾಗಿ ನಮ್ಮ ದೇಶ ಇನ್ನೂ ಮುಂದುವರಿಯುತ್ತಿರುವ ರಾಷ್ಟ್ರವಾಗಿಯೇ ಉಳಿದದುಕೊಂಡು ಬಂದಿದೆ.
ಅಂದ ಹಾಗೆ ನಾವು ಯಾರನ್ನೂ ನಿರ್ಲಕ್ಷಿಸುವುದು ಬೇಡ. ಎಲ್ಲರನ್ನೂ ಸಮಾನವಾಗಿ ನೋಡಿಕೊಂಡು ಹೋಗಬಹುದಲ್ಲವೇ? ರಾಜಕಾರಣಿಗಳು ಬಹುಸಂಖ್ಯಾತರನ್ನು ಹಾಗು ಅಲ್ಪಸಂಖ್ಯಾತರನ್ನು ಸಮಾನವಾಗಿ ನೋಡಿ, ಎಲ್ಲರನ್ನೂ ಒಗ್ಗೂಡಿಸಿ ಭಾರತವನ್ನು ಪ್ರಗತಿ ಪಥದಲ್ಲಿ ಮುನ್ನುಗ್ಗಿಸುವುದು ಕಷ್ಟದ ಕೆಲಸವೇ?
- ಶಶಿ ಕುಮಾರ