ಲೋಕಸಭೆ ಚುನಾವಣೆಗೆ ಇನ್ನು ಉಳಿದಿರುವುದು ನೂರು ದಿನಗಳಷ್ಟು ಅವಧಿ ಅಷ್ಟೇ. ಅದಕ್ಕಿಂತ ಹೆಚ್ಚಿನ ಅವಧಿ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ, ಕರ್ನಾಟಕ ಕಾಂಗ್ರೆಸ್ಸಿನಲ್ಲಿನ ರಾಜ್ಯ ನಾಯಕರ ವರ್ತನೆಯನ್ನು ನೋಡಿದರೆ, ಅವರ ಜತೆ ಲೋಕಾಭಿರಾಮವಾದ ಮಾತುಕತೆಯಲ್ಲಿ ಪ್ರಕಟವಾಗುವ ಅಭಿಪ್ರಾಯವನ್ನು ಗಮನಿಸಿದರೆ, ಚುನಾವಣೆ ಎಲ್ಲೋ ಉತ್ತರ ಭಾರತದಲ್ಲಿ ನಡೆಯಬಹುದು, ಇಲ್ಲಿ ಕಾಂಗ್ರೆಸ್ಸಿಗೆ ಅಷ್ಟೇನೂ ಸಮಸ್ಯೆಗಳಿಲ್ಲವೇನೋ ಎನ್ನುವ ಭಾವನೆ ಮೂಡುತ್ತದೆ.
ಆದರೆ ವಾಸ್ತವ ಸ್ಥಿತಿ ಅದಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ ಜಿ. ಪರಮೇಶ್ವರ ಅವರಿಬ್ಬರನ್ನೂ ಒಂದೇ ವೇದಿಕೆಯ ಮೇಲೆ ನೋಡಿ ಎಷ್ಟು ದಿನಗಳಾದವು ಎನ್ನುವ ಲೆಕ್ಕವೇ ಸಿಗುತ್ತಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಪದನಿಮಿತ್ತವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯರೂ ಹೌದು. ಪ್ರದೇಶ ಕಾಂಗ್ರೆಸ್- ಶಾಸಕಾಂಗ ಪಕ್ಷದ ನಡುವೆ, ವಾಸ್ತವದಲ್ಲಿ ಅವಿನಾಭಾವದ ಸಂಬಂಧವಿರಬೇಕು. ಅದೂ ಚುನಾವಣೆಯ ಸಿದ್ಧತೆ, ಸ್ಥಳೀಯವಾಗಿ ಕ್ಷೇತ್ರಗಳಲ್ಲಿ ಮಾಡಬೇಕಾದ ಕೆಲಸ ಕುರಿತ ಸಮಾಲೋಚನೆಗೆ, ವಿಧಾನ ಮಂಡಲದ ಅಧಿವೇಶನಕ್ಕಿಂತ ಪ್ರಶಸ್ತವಾದ ಅವಕಾಶ ಸಿಗುವುದಿಲ್ಲ.
ಆದರೆ ಈಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ತಮಗೂ ಶಾಸಕಾಂಗ ಪಕ್ಷಕ್ಕೂ ಏನೂ ಸಂಬಂಧವೇ ಇಲ್ಲವೇನೋ ಎನ್ನುವಂತೆ "ಪಕ್ಷದ ಕೆಲಸಕ್ಕಾಗಿ" ಬೇರೆ ಬೇರೆ ಕಡೆಗಳಲ್ಲಿ ಓಡಾಡಿಕೊಂಡಿದ್ದಾರೆ. ಹೆಚ್ಚು ಕಡಿಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಷ್ಟೇ. ಅಗತ್ಯ ಕಂಡುಬಂದಾಗ, ಅದೂ ಯಾರಾದರೂ ಕರೆದಾಗ ಮಾತ್ರ ಕಾಂಗ್ರೆಸ್ ಕಾರ್ಯಾಲಯದತ್ತ ಹೋಗುವುದು. ಅವರು ಪ್ರಾಯಶಃ ಕಾಂಗ್ರೆಸ್ ಕೆಲಸವನ್ನು ಮುಖ್ಯಮಂತ್ರಿಯ ಕಾರ್ಯಾಲಯದಲ್ಲೇ ಮಾಡುತ್ತಾರೋ ಏನೋ.
ರಾಜ್ಯದಲ್ಲಿ ಪಕ್ಷದ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಸಾರ್ವಜನಿಕರು ಆಳುವ ಪಕ್ಷದ ಕಡೆ ಒಲವು ತೋರಿಸಬೇಕಾದರೆ, ಮಂತ್ರಿಗಳ ವರ್ತನೆ, ಅವರು ಶಾಸಕರು ಹಾಗೂ ಕಾರ್ಯಕರ್ತರನ್ನು ನಡೆಸಿಕೊಳ್ಳುವ ರೀತಿ-ನೀತಿಯತ್ತ ಒಳ್ಳೆಯ ಅಭಿಪ್ರಾಯ ಮೂಡುವಂತಹ ವಾತಾವರಣ ಇರಬೇಕು.
ನಿಜ. ಒಂದು ರಾಷ್ಟ್ರೀಯ ಟಿ.ವಿ. ವಾಹಿನಿಯ ಸಮೀಕ್ಷೆಯಂತೆ ರಾಜ್ಯದಲ್ಲಿ ಶೇಕಡಾ ಎಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಜನರಿಗೆ ಸಿದ್ದರಾಮಯ್ಯ ಅವರ ಸರ್ಕಾರದ ವಿಚಾರದಲ್ಲಿ ತೃಪ್ತಿ ಇದೆ. ಆದರೆ ಈ ಅಭಿಪ್ರಾಯವನ್ನು ಅನೇಕ ಕಾಂಗ್ರೆಸ್ಸಿಗರೇ ಒಪ್ಪುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಅಂತರಂಗದ ಮಾತುಕತೆಯಲ್ಲಿ ಈಗ ಜಾತಿಗೆ ಸಿಗುವಷ್ಟು ಪ್ರಾಮುಖ್ಯ, ಪಕ್ಷಕ್ಕೆ ಸಿಗುತ್ತಿಲ್ಲ.
ರಾಜ್ಯ ಸರ್ಕಾರ ಈಗ ಪ್ರಕಟಿಸುವ ಜನಸ್ನೇಹಿ (ಮತಗಳ ಆಕರ್ಷಣೆಗೆ) ನಿರ್ಧಾರಗಳು ಬೇಗ ಹೊರಬಿದ್ದರೆ, ಮತದಾನದ ವೇಳೆಗೆ ಜನಸಮುದಾಯಗಳ ಕೆಲವು ಗುಂಪುಗಳಿಗಾದರೂ ಅದರ ಸೌಲಭ್ಯ ಸಿಕ್ಕಿದ್ದರೆ, ಪಕ್ಷದ ಜನಪ್ರಿಯತೆ, ಹೆಚ್ಚಬಹುದು. ಅಂತಹ ಯಾವ ಪ್ರಯತ್ನವೂ ಕಂಡುಬರುತ್ತಿಲ್ಲ. ಕಾಂಗ್ರೆಸ್ಸಿನಲ್ಲಿ ಈಗಿರುವ ವಾತಾವರಣದಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಸೋಲುವುದು, ಪಕ್ಷದ ಅಭ್ಯರ್ಥಿಯನ್ನೇ ಅವಲಂಬಿಸಿದೆಯೇ ಹೊರತು ಪಕ್ಷವನ್ನು ಅವಲಂಬಿಸಿಲ್ಲ, ಎನ್ನುವಂತಿದೆ ವ್ಯವಸ್ಥೆ.
ಎಂಟು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿ ಇರುವ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಹಾಗೂ ಅವರ ಸ್ವಂತ ಜನ (ಬಂಧುಗಳು, ಮಿತ್ರರು, ಜಾತಿಯ ಜನ) ಎಷ್ಟು ತಾನೇ ಬೆಂಬಲವನ್ನು ಸಂಗ್ರಹಿಸಬಲ್ಲರು?
ಕರ್ನಾಟಕಕ್ಕೆ ನಿಜವಾದ ಅರ್ಥದಲ್ಲಿ ಕಾಂಗ್ರೆಸ್ಸಿಗೆ ಪ್ರಾದೇಶಿಕ ನಾಯಕರೇ ಇಲ್ಲ. ಈಗಲೂ ಪ್ರಮುಖ ನಿರ್ಧಾರಗಳು ಕೇಂದ್ರದಲ್ಲಿರುವ ಮಂತ್ರಿಗಳನ್ನೇ ಅವಲಂಬಿಸಿರುವಂತಿದೆ. ಆ ನಾಯಕರು, ವರಿಷ್ಠರನ್ನು ಅಥವಾ ಅವರ ಸಮೀಪವರ್ತಿಗಳನ್ನು ದೆಹಲಿಯಲ್ಲೇ ಸಂಪರ್ಕಿಸಿ ತಮಗೆ ಅನುಕೂಲವಾದ ರೀತಿಯ ನಿರ್ಧಾರಗಳನ್ನು ಮಾಡಿಕೊಂಡರೆ ಇಲ್ಲಿ ಬೇರು ಮಟ್ಟದಲ್ಲಿ ಕೆಲಸ ಮಾಡುವವರು ಯಾರು?
ಹೊಸಬರಿಗೆ ಅವಕಾಶ: ಪ್ರಕಟಿತ ವರದಿಗಳಂತೆ, ಆಳುವ ಕಾಂಗ್ರೆಸ್ಸಿನಲ್ಲಿ, ಮೊದಲಬಾರಿಗೆ ಚುನಾವಣೆಯಲ್ಲಿ ಗೆದ್ದು ಉತ್ಸಾಹದಿಂದ ವಿಧಾನ ಸಭೆಯನ್ನು ಪ್ರವೇಶಿಸಿದವರಿಗೆ ಕೆಲಸ- ಪ್ರಾಮುಖ್ಯ ಎರಡೂ ಇಲ್ಲದೇ ಇರುವುದರಿಂದ ಅವರಲ್ಲಿ ಹತಾಶೆ ಮೂಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ವಿಧಾನ ಸಭೆಯಲ್ಲಿ ಅವರೆಲ್ಲ ಕಳೆದಿರುವ ಏಳೆಂಟು ತಿಂಗಳಲ್ಲಿ ಅವರನ್ನು ಗುರ್ತಿಸುವವರೇ ಇಲ್ಲ ಎನ್ನುವಂತಾಗಿದೆ. ಹಾಗೆಂದು ಅವರಲ್ಲೇ ಅನೇಕರು ಹೇಳಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಹತಾಶೆ ಮೂಡುವುದು. ಆ ಹತಾಶೆ ಅಲ್ಲಿಗೇ ನಿಲ್ಲುವುದಿಲ್ಲ. ಅದು ಭಿನ್ನಮತಕ್ಕೆ ಪರಿವರ್ತನೆಯಾಗಲು ಬಹುಕಾಲ ಬೇಕಾಗಿಲ್ಲ.
ಸರ್ಕಾರದ ಕ್ರಮಗಳನ್ನು ಕ್ಷೇತ್ರದ ಮಟ್ಟದಲ್ಲಿ ಸಮರ್ಥಿಸಿಕೊಳ್ಳುವವರು ಯಾರು? ಆ ಕೆಲಸವನ್ನು ಸರ್ಕಾರಿ ಅಧಿಕಾರಿಗಳು, ನೌಕರರಿಂದ ನಿರೀಕ್ಷಿಸುವಂತಿಲ್ಲ. ಅಬ್ಬಬ್ಬಾ ಎಂದರೆ ಅವರು ತಮಗೆ ವಹಿಸಿರುವ ಕೆಲಸವನ್ನು ನಿಯಮಗಳ ಚೌಕಟ್ಟಿನಲ್ಲಿ ಚೊಕ್ಕವಾಗಿ ಮಾಡಬಹುದು. ಅದೇ ಮಹಾಪ್ರಸಾದ ಎಂದುಕೊಳ್ಳಬೇಕು. ಆದರೆ ಸರ್ಕಾರದ ನೀತಿಯನ್ನು ಪ್ರಚಾರ ಮಾಡುವುದಕ್ಕೆ ಶಾಸಕರ ಪಡೆಯೇ ಕಾಲಾಳುಗಳ ಪಡೆ. ಆ ಪಡೆಯನ್ನು ರಾಜ್ಯದ ಕಾಂಗ್ರೆಸ್ ನಾಯಕರು ಈಗ ಕಡೆಗಾಣಿಸುತ್ತಿರುವಂತಿದೆ.
ನಿಜ. ಇದಕ್ಕೆಲ್ಲ ಪ್ರಚಾರ ಸಿಗುವುದು, ಅಂತಹ ಶಾಸಕರಲ್ಲಿ ಕೆಲವರಾದರೂ ವಿಧಾನ ಸಭೆಯ ಮೊಗಸಾಲೆಗಳಲ್ಲಿ ಗೊಣಗಾಡಲು ಆರಂಭಿಸಿದಾಗ. ಈಗಾಗಲೇ ಇಂತಹ ಗೋಣಗಾಟದ ಸೂಚನೆಯೂ ಕಂಡು ಬಂದಿದೆ.
ಮೊದಲ ಬಾರಿಗೆ ನಿಧಾನ ಸಭೆಯನ್ನು ಪ್ರವೇಶಿಸಿದವರೇನೂ ಏಕ್‌ದಮ್ ಮಂತ್ರಿ ಪದವಿಯನ್ನು ಕೇಳದೇ ಇರಬಹುದು. ಆದರೆ ಈಗಿನ ವಾತಾವರಣದಲ್ಲಿ ಅವರಲ್ಲಿ ಅನೇಕರು ನಿಗಮಗಳು, ಬೋರ್ಡು ಮಂಡಳಿಗಳ ಅಧ್ಯಕ್ಷ, ನಿರ್ದೇಶಕರ ಸ್ಥಾನಗಳ ಮೇಲೆ ಕಣ್ಣು ಹಾಕಿದ್ದಾರೆ. ಅದು ಅವರ ಸ್ಥಾನದ ಸಹಜ ಪ್ರಕ್ರಿಯೆ. ಇದೆಲ್ಲವೂ ಗೊತ್ತಿದ್ದರೂ, ಸಿದ್ದರಾಮಯ್ಯ ಅವರು ನಿಗಮ- ಮಂಡಳಿ, ಬೋರ್ಡು ಸಮಿತಿಗಳ ಅಧ್ಯಕ್ಷ- ನಿರ್ದೇಶಕರ ನೇಮಕದಲ್ಲಿ ವಿಳಂಬ ರಾಕ್ಷಸನ ಹಾವಳಿಗೆ ಅವಕಾಶ ಮಾಡಿಕೊಟ್ಟಿರುವುದೇಕೆ? ನಿಜ. ಇಂತಹ ವಿಚಾರಗಳಲ್ಲಿ ವಿಪರೀತವಾದ ಒತ್ತಡಗಳಿರುತ್ತದೆ. ಅದನ್ನು ನಿಭಾಯಿಸಲೇಬೇಕು.
ಇದು ಕೇವಲ ಶಾಸಕರ ಹಾಗೂ ಪ್ರಮುಖ ಕಾಂಗ್ರೆಸ್ ಕಾರ್ಯಕರ್ತರ ವಿಚಾರವಲ್ಲ. ಸರ್ಕಾರವೇ ನೇಮಿಸಿರುವ ನಿಗಮ- ಮಂಡಳಿಗಳ ಆರೋಗ್ಯದ ದೃಷ್ಟಿಯಿಂದಲೂ ಇದು ಮಹತ್ವವಾದ ವಿಚಾರವೇ. ಎಷ್ಟು ದಿನಾಂತ ಈ ಜನೋಪಯೋಗಿ ಸಂಸ್ಥೆಗಳನ್ನು ಅಧಿಕಾರಿಗಳ ವಶದಲ್ಲಿ ಬಿಟ್ಟಿರುವುದು? ಮಂತ್ರಿ ಮಂಡಲದ ರಚನೆಯಲ್ಲಿ ರಾಜಕೀಯವೇ ಪ್ರಮುಖ ಪರಿಗಣನೆಯಾಗಬಹುದು. ಆದರೆ ಈ ನಿಗಮ- ಮಂಡಳಿಗಳಿಗೂ ಅದೇ ಮಾನದಂಡ ಬೇಕೇನು?
ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಲೋಕಸಭೆ ಚುನಾವಣೆಯಲ್ಲಿ ಜಯ ಸಿಗಬೇಕಾದರೆ, ಅದಕ್ಕೆ ಅಹಿಂದದ (ಅಲ್ಪಸಂಖ್ಯಾತ ಹಿಂದುಳಿದ ದಲಿತರ) ಬೆಂಬಲ ದೊಡ್ಡ ರೀತಿಯಲ್ಲಿ ಬೇಕೇ ಬೇಕು. ಆ ಬೆಂಬಲವನ್ನು ಸಿದ್ದರಾಮಯ್ಯ ಅವರೊಬ್ಬರೇ ತಂದು ಕೊಡುವುದು ಸಾಧ್ಯವಿಲ್ಲವಲ್ಲ. ರಾಜಕೀಯ ಬೆಂಬಲವನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾದರೂ ಆ ವರ್ಗದ ಪ್ರಮುಖ ನಾಯಕರನ್ನಾದರೂ ಈಗ ಗುರ್ತಿಸಲೇ ಬೇಕಲ್ಲ.
ಶಾಸಕರಿಗೆ ವಿದೇಶ ಪ್ರವಾಸದಂತಹ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಸಾಲದು. ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಅಧಿಕಾರವನ್ನೂ ಹಂಚಿಕೊಡಬೇಕು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಆಳುವ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋದಾಗ, ಅವರ ಬೆಂಬಲಿಗರನ್ನು, ಇತರರನ್ನು ನೋಡಿದಾಗ, ಅವರಿಗೆ ಏನಾದರೂ ಹೇಳಲಿಕ್ಕೆ ಅವರಿಗಾದರೂ ಸರ್ಕಾರದಿಂದ ಏನಾದರೂ ಸಿಕ್ಕಿರಬೇಕಲ್ಲ! ಅದನ್ಯಾಕೆ ಸಿದ್ದರಾಮಯ್ಯ ನಿರಾಕರಿಸುತ್ತಿರುವುದು?
ಭಾರತೀಯ ಜನತಾ ಪಾರ್ಟಿಯ ಪೇಚು: ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಗೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಮ್ಮ ನಿಜವಾದ ಭಾವನೆಗಳನ್ನೆಲ್ಲ ನುಂಗಿಕೊಂಡು, ಪಕ್ಷಕ್ಕೆ ಮರಳಿದಾಗ, ಅವರ ಜತೆಯಲ್ಲೇ, ವಿಶ್ವಾಸ- ಜೈತನ್ಯವೂ ಮರಳುವ ನಿರೀಕ್ಷೆ ಕೆಲವರಲ್ಲಾದರೂ ಇತ್ತು.
ಆರಂಭಿಕ ಒಂದೆರಡು ದಿನಗಳಲ್ಲಿ ಅಂತಹ ಉತ್ಸಾಹ ಬೇರೆ ಎಲ್ಲೂ ಅಲ್ಲದಿದ್ದರು, ಪಕ್ಷದ ಕಾರ್ಯಾಲಯಗಳಲ್ಲಾದರೂ ಕಂಡುಬರಬೇಕಿತ್ತು. ಈಗ ಅಂತಹ ಯಾವ ಸಂಭ್ರಮದ ಸೂಚನೆಯೂ ಇಲ್ಲ. ಯಡಿಯೂರಪ್ಪ ಅವರು ತಮ್ಮ ಪಾಡಿಗೆ ತಾವು ಎನ್ನುವಂತೆ ರಾಜ್ಯದ ಕೆಲವು ಕಡೆಗಳಲ್ಲಿ ಓಡಾಡಿದ್ದಾರೆ.
ಯಡಿಯೂರಪ್ಪ ಬಿಜೆಪಿಗೆ ಹೊಸಬರೇನೂ ಅಲ್ಲ. ಅವರಿಗೆ ರಾಜ್ಯ ಬಿಜೆಪಿಯ ಪ್ರಮುಖ ಕಾರ್ಯಕರ್ತರಲ್ಲಿ ಸಾಕಷ್ಟು ಮಂದಿ ಚಿರಪರಿಚಿತರು. ಬಹುತೇಕ ಕಾರ್ಯಕರ್ತರನ್ನು ಹೆಸರು ಹಿಡಿದು ಕರೆಯಬಲ್ಲ ಸ್ಥಿತಿಯಲ್ಲಿ ಅವರಿದ್ದಾರೆ. ಆದರೂ ಅವರ ವಿಚಾರವನ್ನು ಬೇರೆಯವರು ಯಾರೂ ಪ್ರಸ್ತಾಪಿಸುತ್ತಲೇ ಇಲ್ಲ. ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜನಾಂಗೀಯ ನಾಯಕ ಎನ್ನುವ ಪ್ರಭಾವಳಿ ಇದೆ. ಅದರಿಂದ ಅವರು ತಮ್ಮ ಈಗಿನ ಅವಸ್ಥೆಯನ್ನು ನಿಭಾಯಿಸಿಕೊಳ್ಳಬಹುದು.
ಆದರೆ ಅವರ ಜತೆಯಲ್ಲೇ ಪಕ್ಷ ಬಿಟ್ಟು ಹೋಗಿ, ಅವರ ಜತೆಯಲ್ಲೇ ಹಿಂತಿರುಗಿರುವ ಬೆಂಬಲಿಗರಿಗೆ, ಯಾವ ರೀತಿಯ ಪ್ರಭಾವಳಿಯೂ ಇಲ್ಲದೇ ಇರುವುದರಿಂದ, ಯಾವ ಸ್ಥಾನ-ಮಾನವೂ ಇಲ್ಲದೇ ಅವರು ಪಕ್ಷದಲ್ಲಿ ಮಿಲನವಾಗುವುದಾದರೂ ಹೇಗೆ?
ಈಗ ರಾಜ್ಯ ಬಿಜೆಪಿಯಲ್ಲಿ ಬೇಕಾದಷ್ಟು "ಪ್ರಾತಿನಿಧಿಕ ಸ್ಥಾನಗಳು" ಖಾಲಿ ಇರಬಹುದು. ಪಕ್ಷ ಚುನಾವಣೆಯಲ್ಲಿ ಸೋತ ಅನಂತರ, ರಾಜಕೀಯ ಸ್ಥಾನ-ಮಾನದ ಆಸೆಯಿಂದ ಬಂದಿದ್ದವರಲ್ಲಿ ಎಲ್ಲರೂ ಉಳಿದಿರುವುದಿಲ್ಲ. ಅಂತಹವರನ್ನು ಆಕರ್ಷಿಸದೇ ಬಿಜೆಪಿ, ಅವರೆಲ್ಲ ಹೋದರೆ ಹೋಗಲಿ ಎನ್ನುವ ನಿಲವನ್ನು ತೆಗೆದುಕೊಂಡರೆ, ಅದು ಆತ್ಮಹತ್ಯಾ ಪ್ರವೃತ್ತಿಯೇ.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಜತೆಯಲ್ಲಿ ಮಾತುಕತೆ ನಡೆಸಲು, ಸ್ಥಳೀಯ ನಾಯಕರಿಗೆ "ವರಿಷ್ಠರ" ನೆರವು ಬೇಕೇನು? ಅವರ ಜತೆಯಲ್ಲಿ ಅನೇಕ ನಾಯಕರು ದಶಕಗಳಗಟ್ಟಲೆ ಸಹಚರ- ಸಂಗಾತಿಗಳಾಗಿ ಕೆಲಸ ಮಾಡಿದ್ದಾರೆ. ಅನೇಕ ವಿಚಾರಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯವಿರಬಹುದು. ಆ ವಿಚಾರ ಬೇರೆ ಆದರೆ ಯಾವುದೇ ಕಾರಣಕ್ಕೇ ಆದರೂ, (ವರಿಷ್ಠರ ಮಾತು, ಪರಿಸ್ಥಿತಿಯ ಒತ್ತಡ, ಜಾತಿ) ಅವರನ್ನೆಲ್ಲ ಪಕ್ಷಕ್ಕೆ ಮತ್ತೆ ಬರಮಾಡಿಕೊಂಡಮೇಲೆ, ಅವರೆಲ್ಲ ಪಕ್ಷದಲ್ಲಿ ಪ್ರತ್ಯೇಕ ವಾಹಿನಿಯಾಗಿಯೇ ಉಳಿದು ಬಿಡಬೇಕೆಂದು ನಿರೀಕ್ಷಿಸುವುದು ತಪ್ಪು.
ಕರ್ನಾಟಕ ಬಿಜೆಪಿಗೆ ಈಗ ಎಲ್ಲ ಕಡೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಳ್ಳೆಯ ಅಭ್ಯರ್ಥಿಗಳು ಸಿಗದೇ ಹೋಗಬಹುದು. 2009ರಲ್ಲಿ ರಾಜ್ಯದಲ್ಲಿ 19 ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. ಆಗ ಯಡಿಯೂರಪ್ಪ ಅವರ ಜನಾಂಗೀಯ ಆಕರ್ಷಣೆಯ ಶಕ್ತಿ ಇತ್ತು. ಚುನಾಯಿತ ಸದಸ್ಯರಲ್ಲಿ ಭೌತಿಕವಾಗಿ ಯಡಿಯೂರಪ್ಪ ಜತೆ ಪಕ್ಷ ಬಿಟ್ಟವರ ಸಂಖ್ಯೆ ಕಡಿಮೆ ಇರಬಹುದು. ಆದರೆ ಈಗಿನ ಎಲ್ಲ ಎಂ.ಪಿ.ಗಳಿಗೂ ಹಿಂದಿನಷ್ಟೇ ಉತ್ಸಾಹ ಬೆಂಬಲ ಇಲ್ಲ. ಹೋಳಾದ ಪಕ್ಷವನ್ನು ಒಂದು ಮಾಡಲು ಪ್ರಯತ್ನಿಸಿದವರು (ವಿಧಾನ ಸಭೆ ಚುನಾವಣೆ ಅನಂತರ) ಆ ಉದ್ದೇಶವನ್ನೇ ಈಗ ಮರೆತಿದ್ದಾರೇನು?
ಕಿಡಿಗೇಡಿತನ: ಮಂಗಳೂರು ಲೇಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ, ಬೇರು ಮಟ್ಟದ ಪ್ರಕಟಿತ ಬೆಂಬಲದ ಆಧಾರದ ಮೇಲೇ ನಡೆಯಬೇಕೆನ್ನುವ ರಾಹುಲ ಗಾಂಧಿ ಪ್ರಯೋಗದ ಕ್ಷೇತ್ರ. ಇಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ- ಹಿರಿಯ ನಾಯಕ ಜನಾರ್ದನ ಪೂಜಾರಿ ಪ್ರತಿಸ್ಪರ್ಧಿಗಳು. ದೇವರಾಣೆಗೂ ಇವರಲ್ಲಿ ನನ್ನ ಕೈವಾಡವಿಲ್ಲವೆಂದು ಮೊಯಿಲಿ ಉದ್ಗರಿಸಿದ್ದಾರಂತೆ. ಮತ್ತೆ ಆಣೆ- ಪ್ರಮಾಣದ ರಾಜಕೀಯ ಆರಂಭವೇ?
- ಸತ್ಯ
anisikeprabha@gmail.com