ಮುಂದಿನ ರಾಷ್ಟ್ರಕವಿ ಯಾರು, ಯಾವಾಗ?
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ತೀರಿಕೊಂಡು ಒಂದು...
ಸಾಹಿತ್ಯಿಕ ಚರ್ಚೆಗಳೆಲ್ಲ ಗಂಭೀರ ಸ್ವರೂಪದವೇ ಆಗಿರಬೇಕು ಎಂದೇನಾದರೂ ನಿಯಮವಿದೆಯೇ? ಒಂದೊಮ್ಮೆ ಇದ್ದರೂ ಅದನ್ನು ಮುರಿಯೋಣ ಎಂಬಂತೆ ಈ ಲಘು ಲಹರಿ...
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ತೀರಿಕೊಂಡು ಒಂದು ತಿಂಗಳಾಗುತ್ತಾ ಬಂದಿತು. ಈವರೆಗೂ ಆ ಸ್ಥಾನವನ್ನು ತುಂಬುವ ಯಾವುದೇ ಪ್ರಯತ್ನವನ್ನು ಅಹಿಂದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದಂತೆ ಕಾಣಲಿಲ್ಲ. ಅಕಾಡೆಮಿಗಳು, ಪ್ರಾಧಿಕಾರಗಳೇ ಖಾಲಿ ಬಿದ್ದಿರುವಾಗ, ಜೀವಮಾನ ಪರ್ಯಂತ ಸ್ಥಾನ ಭರ್ತಿ ಮಾಡಬೇಕಾಗಿರುವುದಕ್ಕೆ ಆತುರ ಸಲ್ಲದು ಎಂಬ ಭಾವನೆ ಇದ್ದಿರಬಹುದು. ಅಥವ ಜನತೆಯಾಗಲಿ ಕೊನೆಯ ಪಕ್ಷ ರಾಷ್ಟ್ರಕವಿ ಪಟ್ಟದ ಆಕಾಂಕ್ಷಿಗಳಾಗಲಿ ಒತ್ತಡ ತರದೆಯೇ, ತಾನಾಗಿಯೇ ಏನನ್ನೂ ಮಾಡದ ನ್ಯಾಯವಾದಿ ನಮ್ಮ ಸಿದ್ರಾಮಣ್ಣನವರು.
ಹಾಲಿ ಮುಖ್ಯಮಂತ್ರಿಯವರಿಗೆ ರಾಜಕೀಯ ಸಲಹೆಗಾರ, ಮಾಧ್ಯಮ ಸಲಹೆಗಾರ, ಕಾನೂನು ಸಲಹೆಗಾರರು ಇದ್ದಾರೆ, ಇರಲೇಬೇಕು. ಅಂತೆಯೇ ಸಾಂಸ್ಕೃತಿಕ ಸಲಹೆಗಾರ ಎಂಬ ಸ್ಥಾನವೂ ಇದೆಯೇ ನನಗೆ ಗೊತ್ತಿಲ್ಲ. ಅದರ ಅವಶ್ಯಕತೆಯೇ ಇಲ್ಲದೆ, ಯಾರಾದರೂ ಬಿಟ್ಟಿಯಾಗಿ ಚಾಕರಿ ಮಾಡುತ್ತಿದ್ದಾರೆಯೋ, ಅದೂ ಗೊತ್ತಿಲ್ಲ.
ಸಾಂಸ್ಕೃತಿಕ ನೀತಿ ರೂಪಿಸಲು ಒಂದು ಸಮಿತಿ ಮಾಡಿ, ಅದಕ್ಕೆ ಒಬ್ಬರನ್ನು ಅಧ್ಯಕ್ಷರನ್ನು ನೇಮಿಸಿ, ಏನೆಲ್ಲ ಸರ್ಕಾರಿ ಸವಲತ್ತುಗಳನ್ನು ನೀಡಿದ್ದಾರೆಯೋ, ಈವರೆಗೂ ಸ್ಪಷ್ಟವಿಲ್ಲ. ಆ ಸಾಂಸ್ಕೃತಿಕ ನೀತಿ ಒಳಕ್ಕೆ - ಹೀಗೆ ದಿಢೀರ್ ಖಾಲಿಯಾದ ಸ್ಥಾನಗಳನ್ನು ತುಂಬುವ ಬಗೆ ಹೇಗೆ ಎಂಬುದೂ ಅಳವಡುತ್ತದೆಯೋ, ಆ ಬೈಲಾ ನೋಡಿಲ್ಲ. ಆ ಬಗೆಯ ಬೈಲಾ ರೂಪಿಸುವವರು, ಬೈಲಾ ಆಜನ್ಮ ಪರ್ಯಂತ ಬದಲಾವಣೆಯಾಗದಂತೆ ನೋಡಿಕೊಳ್ಳುವವರು ನಮ್ಮಲ್ಲಿ ಇನ್ನೂ ಬದುಕಿದ್ದಾರೆ. ಹಾಗಿರುವಾಗ ನನ್ನಂತಹ ಶ್ರೀಸಾಮಾನ್ಯ, ಏನೋ ಬರೆದು ತಕ್ಷಣವೇ ಅಂತಹವರು ಮಾಧ್ಯಮ ಹೇಳಿಕೆಯೋ ನೇರವಾಗಿ ಮುಖ್ಯಮಂತ್ರಿಯನ್ನೇ ತರಾಟೆಗೆ ತೆಗೆದುಕೊಳ್ಳುವುದೋ ಆಗಿ, ವಿಷಯ ಇನ್ನಷ್ಟು ನೆನೆಗುದಿಗೆ ಹಾಕಿದ ಪಾಪ ನನಗೆ ಬರಬಾರದಷ್ಟೇ! ಸದ್ಯ ಏನಿದ್ದರೂ, ಈ ಬಗ್ಗೆ ಜನಸಮೂಹದ ನಡುವೆ ಚರ್ಚೆ-ವಿವೇಚನೆ ನಡೆಯಲಿ ಎಂಬ ಒಂದೇ ಒಂದು ದೂರಾಲೋಚನೆಯಿಂದ ಈ ಸಾಹಸಕ್ಕೆ ತೊಡಗಲಾಗಿದೆ.
ರಾಷ್ಟ್ರಕವಿ, ಎಂಬುದನ್ನು ಏನೆಂದು ಕರೆಯಬೇಕೆಂದೇ ನನಗೆ ಗೊಂದಲವಿದೆ. ಪ್ರಶಸ್ತಿಯೋ, ಪದವಿಯೋ, ಪಟ್ಟವೇ, ಸ್ಥಾನವೇ- ಏನೆಂಬುದನ್ನು ಸಾಂಸ್ಕೃತಿಕ ನೀತಿ ಸಮಿತಿಯೋ ಬೈಲವನ್ನೇ ಹುಟ್ಟು ಹಾಕುವವರೋ ಸ್ಪಷ್ಟಪಡಿಸಬೇಕು. ಕುವೆಂಪು ಅವರು ರಾಷ್ಟ್ರಕವಿಯಾದಾಗ 500 ರೂ. ಮಾಸಾಶನ ನೀಡುವುದಾಗಿ ಆಗಿನ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಜಿ.ಎಸ್. ಶಿವರುದ್ರಪ್ಪ ಅವರು ಆದಾಗ, ಒಟ್ಟಿಗೆ ಒಂದೇ ಇಡುಗಂಟು ಕೊಟ್ಟ ನೆನಪು. ಹೀಗಾಗಿ ರಾಷ್ಟ್ರಕವಿಗೆ ಏನೇನು ಸವಲತ್ತುಗಳು ಕೊಡ ಮಾಡಲಾಗುವುದು ಎಂಬುದನ್ನು ಮೊದಲೇ ತೀರ್ಮಾನಿಸಬೇಕು. ಏಕೆಂದರೆ, ಆ ಸ್ಥಾನದ ಸ್ಫರ್ಧಾಳುಗಳಿಗೆ ಅದರಿಂದ ಏನು ಲಾಭ ಎಂದು ತಿಳಿದರೆ, ಅದಕ್ಕೆ ತಕ್ಕಂತೆ ಪ್ರಯತ್ನಶೀಲರಾಗಲು ಅಥವಾ ಕಾರ್ಯೋನ್ಮುಖರಾಗಲು ಸಾಧ್ಯವಾದೀತು.
ಮೇಲಿನ ಮಾತುಗಳನ್ನು ನಾನು ನಗೆಚಾಟಿಗಾಗಿ ಬೀಸುತ್ತಿಲ್ಲ. ಕೊಂಚ ವಿವರಿಸಿದರೆ ನನ್ನ ಕಳಕಳಿ ನಿಮ್ಮದೂ ಆದೀತು. ಮೊದಲ ರಾಷ್ಟ್ರಕವಿ ಎಂದು ಕೆಲವರಾದರೂ ನಂಬಿರುವ, ಮಂಜೇಶ್ವರದ ಎಂ. ಗೋವಿಂದಪೈ ಅವರಿಗೆ 6.9.1963ರಲ್ಲಿ ರಾಷ್ಟ್ರಕವಿ ಎಂದಲ್ಲ, ಆಸ್ಥಾನ ಕವಿ ಎಂದು ನೀಡಿದವರು, ಕನ್ನಡಿಗರಲ್ಲ, ಆಗಿನ ಮದ್ರಾಸು ರಾಜ್ಯದವರು, ರಾಜ್ಯಪಾಲರು. ರಾಜ್ಯಪಾಲರು ಭಾವನಗರದ ಮಹಾರಾಜ ಕೃಷ್ಣಸಿಂಹ, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ ಅವರು. ತಮಿಳು, ಮಲಯಾಳ, ಸಂಸ್ಕೃತವೋ, ತೆಲುಗೋ, ಕನ್ನಡ-ಹೀಗೆ 4 ಭಾಷೆಗಳಿಂದ ಒಬ್ಬರನ್ನು ಆಹ್ವಾನಿಸಿ, ನೀಡಿದ ಪ್ರಶಸ್ತಿ ಅದಾಗಿತ್ತು. ಆಯಾ ಭಾಷೆ ಅಥವ ಆಯಾ ರಾಜ್ಯದ ಕವಿಗಳನ್ನೇ ರಾಷ್ಟ್ರದ ಕವಿಗಳು, ರಾಷ್ಟ್ರಕವಿಗಳಾಯಿತೋ? ಬಲ್ಲವರು ಬಾಯಿ ಬಿಡಬೇಕು. ಗೋವಿಂದಪೈ ಸ್ಮಾರಕ ಗ್ರಂಥ 'ದೀವಿಗೆ' ಯಲ್ಲಿ ಬೈಕಾಡಿ ವೆಂಕಟಕೃಷ್ಣ ರಾಯರು, ಪೈಯವರಿಗೆ ಆ ಪ್ರಶಸ್ತಿ ಬಂದದ್ದು ನಾರಾಯಣ ಕಿಲ್ಲೆಯವರಿಂದಲ್ಲ, ಮಂಜೇಶ್ವರ ಅನಂತರಾಯ ಎಂಬ ಬಾಲ್ಯದ ಗೆಳೆಯನ ಒತ್ತಾಸೆಯ ನಿಮಿತ್ತ ಎಂದು ದಾಖಲಿಸಿದ್ದಾರೆ. ನಗದು ಹಣವನ್ನು, ಗೋವಿಂದಪೈಯವರು ಸಾರ್ವಜನಿಕ ಕಾರ್ಯಗಳಿಗೆ ವೆಚ್ಚ ಮಾಡಿದರು ಎಂಬ ಸುದ್ದ್ದಿಯನ್ನು ಬರೆದಿದ್ದಾರೆ. ಅದೇ ಗ್ರಂಥದಲ್ಲಿಯೇ (ಪುಟ 56ರಲ್ಲಿ) ಶಿವರಾಮ ಕಾರಂತರು, ಗೋವಿಂದಪೈಯವರು ಆ ಪ್ರಶಸ್ತಿ ಸ್ವೀಕರಿಸಲು ಒಪ್ಪಿಸಿದ ಕೀರ್ತಿ ಮದ್ರಾಸಿನ ಕೆಲವು ಕನ್ನಡ ಅಭಿಮಾನಿ ಮಿತ್ರರಿಗೆ ಸಲ್ಲಬೇಕು ಎನ್ನುತ್ತ, ನಮ್ಮ ಜಿಲ್ಲೆಯ ಒಬ್ಬೊಬ್ಬರು ಅದಕ್ಕೆ ಸ್ಪರ್ಧಿಗಳಾಗಿ ಪ್ರಯತ್ನಿಸುತ್ತಿದ್ದರೆಂದೂ ಹೇಳಿದ್ದಾರೆ.
ಆಧುನಿಕ ಕಾಲದಲ್ಲಿಯೂ ಹಣ ಮತ್ತು ಸ್ಥಾನಕ್ಕಾಗಿ, ರಾಜಕಾರಣಿಗಳು, ಅಧಿಕಾರಿಗಳು ಹಾಹಾಕಾರ ಪಡುತ್ತಿದ್ದರು ಎಂಬುದು ಹೊಸದೇನಲ್ಲ. ಗೋವಿಂದಪೈ, ಕುವೆಂಪು ಕಾಲಕ್ಕೆ, ಆಳುವವರು ಈ ಪ್ರಶಸ್ತಿಗೆ ವ್ಯಕ್ತಿಗಳನ್ನು ಅಥವ ಕವಿಗಳನ್ನು ಆಯ್ಕೆ ಮಾಡುತ್ತಿದ್ದರು ಎಂಬುದು, ನನ್ನಂತಹವರಿಗೆ ಗೊತ್ತಿಲ್ಲ ಎಂಬುದೇ ಮರ್ಯಾದೆ. ನನ್ನ ಪ್ರಕಾರ ಮೈಸೂರು ರಾಜ್ಯದ ಆನಂತರ ಕರ್ನಾಟಕದ ಮೊದಲ ರಾಷ್ಟ್ರಕವಿ ಕುವೆಂಪು ಅವರೇ, ಎರಡನೇ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು. ಶಿವರುದ್ರಪ್ಪನವರನ್ನು ಆಯ್ಕೆ ಮಾಡುವ ಕಾಲಕ್ಕೆ, ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ, ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದರು. ಹಿರಿಯರಾದ ದೇ. ಜವರೇಗೌಡ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಲಾಗಿತ್ತು. ಅದರಲ್ಲಿ ಕಮಲಾ ಹಂಪನಾ, ಕೆ.ಎಸ್. ನಿಸ್ಸಾರ್ ಅಹಮದ್ ಇದ್ದದ್ದು ನೆನಪು. ಕೊನೆಗೆ ಇಬ್ಬರೇ ತೀರ್ಮಾನಿಸಿದಂತೆ ಆಯಿತು. ಆಗಲೇ ಕಯ್ಯಾರ ಕಿಞಣ್ಣ ರೈ, ಚೆನ್ನವೀರ ಕಣವಿ, ನಿಸ್ಸಾರ್ ಅಹಮದ್ ಅವರ ಹೆಸರೂ ಇತ್ತು.
ಈ ಹಿಂದೆ, ಮದ್ರಾಸು ಸರ್ಕಾರದವರು ರಾಷ್ಟ್ರಕವಿ ಪ್ರಶಸ್ತಿ ನೀಡಿದ್ದು ಬ್ರಾಹ್ಮಣ ಕವಿಗೆ. ಕನ್ನಡಿಗರೇ ಮೊದಲು ನೀಡಿದ್ದು ಒಕ್ಕಲಿಗ ಜನಾಂಗದ ಕವಿಗೆ. ಅನಂತರ ಅತ್ಯಂತ ಹೆಚ್ಚಿನ ಪ್ರಬಲ ಕೋಮಿನವರು, ವೀರಶೈವರಾದ್ದರಿಂದ, ವೀರಶೈವ ಕವಿಯನ್ನು ಆಯ್ಕೆ ಮಾಡುವುದು ಸಹಜವೇ. ಆದರೆ ಇನ್ನೊಬ್ಬರು ಧಾರವಾಡದಲ್ಲಿದ್ದರು. ಮುಖ್ಯಮಂತ್ರಿ ಹಳೇ ಮೈಸೂರಿನವರು, ಉಪಮುಖ್ಯಮಂತ್ರಿ ಶಿವಮೊಗ್ಗಕ್ಕೆ ತಮ್ಮ ಕಾರ್ಯಕ್ಷೇತ್ರ ಬದಲಾಯಿಸಿಕೊಂಡವರು. ಇದರಿಂದ ಒಂದೇ ಕಲ್ಲಿನಿಂದ, ಇಬ್ಬರ ಆಶಯವೂ ಈಡೇರುವಂತೆ ಆಯ್ಕೆ ಮಾಡಲಾಯಿತು. ಅಲ್ಲಿಗೆ ಆ ಕೋಮಿನ ಪ್ರಾತಿನಿಧ್ಯವೂ ಮುಗಿದಂತೆ ಆಯಿತು.
ಗೋವಿಂದಪೈ ಅವರಿಗೆ ಆ ಪ್ರಶಸ್ತಿ ಬಂದಾಗ, 80 ವರ್ಷ. ಕೆಲ ತಿಂಗಳಲ್ಲೇ ವಿಧಿವಶರಾದರು. ಕುವೆಂಪುಗೆ ಬಂದಾಗ 61 ವರ್ಷ. ಆನಂತರ 28 ವರ್ಷಗಳ ಕಾಲ ಬದುಕಿದ್ದರು. ಶಿವರುದ್ರಪ್ಪನವರಿಗೆ ಬಂದಾಗ 81 ವರ್ಷ. ಕೇವಲ 6 ವರ್ಷವಿದ್ದರು. ಆದರೆ ಜೀವಮಾನ ಪ್ರಶಸ್ತಿಗೆ ಆಯ್ಕೆ ಮಾಡುವಾಗ, ಅವರು 50 ವರ್ಷಗಳಾದರೂ ಬದುಕಿರುವಂತಹವರನ್ನು ಆಯ್ಕೆ ಮಾಡಿದರೆ, ಆ ಪ್ರಶಸ್ತಿಗೆ ಸಾರ್ಥಕತೆ ಬಂದೀತು ಅನ್ನಿಸುತ್ತದೆ. ಇದರ ಜೊತೆಗೇ ಕೊಡಬಹುದಾದ ಸಲಹೆ, ಹೀಗೆ ದಿಢೀರ್ ಅಂತ ರಾಷ್ಟ್ರಕವಿ ಇಲ್ಲವಾಗುವಾಗ, ರಾಷ್ಟ್ರಕವಿ ಜೊತೆಗೆ ಒಬ್ಬ ಉಪರಾಷ್ಟ್ರಕವಿಯನ್ನು ನೇಮಿಸಿಕೊಂಡಿದ್ದರೆ, ತಕ್ಷಣ ಆ ಜಾಗ ತುಂಬಲು ಸಾಧ್ಯವಾದೀತು. ಈ ಸಾಧ್ಯತೆಯನ್ನು ಸರ್ಕಾರ ಗಮನಿಸಬೇಕು.
ಈಗಾಗಲೇ ಗೋವಿಂದಪೈಯವರು ದಕ್ಷಿಣ ಕನ್ನಡದವರೂ, ಕುವೆಂಪು ಮೈಸೂರಿನವರೂ, ಶಿವರುದ್ರಪ್ಪ ಬೆಂಗಳೂರಿನವರೂ ಆಗಿ ಹೋಗಿ, ಈ ಬಾರಿ ಆಯ್ಕೆ ಮಾಡುವಾಗ ಸಹಜವಾಗಿಯೇ ಪ್ರಾದೇಶಿಕ ನ್ಯಾಯವನ್ನು ಸರ್ಕಾರ ಗಮನಿಸಬೇಕಾಗುತ್ತದೆ. ಅಲ್ಲಿಗೆ ಬ್ರಾಹ್ಮಣ, ಒಕ್ಕಲಿಗ, ವೀರಶೈವ ಜಾತಿಯವರನ್ನು ಬಿಟ್ಟು ಎಂಬುದು ಗೊತ್ತಿರುವ ವಿಷಯವೇ.
ಕಳೆದ ಬಾರಿಯೇ, ರಾಷ್ಟ್ರಕವಿ ಸ್ಥಾನಕ್ಕೆ, ಜ್ಞಾನಪೀಠ ಪುರಸ್ಕೃತರನ್ನು ಪಟ್ಟಿಯಲ್ಲಿ ಸೇರಿಸಬಾರದು ಎಂದು, ಯಾರು ಪುಕಾರು ಹುಟ್ಟಿಸಿದರೋ ಯಾಕೆ ಹುಟ್ಟಿಸಿದರೋ ಗೊತ್ತಿಲ್ಲ. ಅದೇ ನಿಜವಾದರೆ, ನಿಖರವಾದ ಕವಿ ಚಂದ್ರಶೇಖರ ಕಂಬಾರರೂ ಬೆಳಗಾವಿ ಜಿಲ್ಲೆಗೆ ವಿಶ್ವಕರ್ಮ ಜನಾಂಗಕ್ಕೆ ಅನ್ಯಾಯ ಮಾಡಿದಂತೆ ಆಗಿ ಬಿಡುತ್ತದಲ್ಲಾ? ಪ್ರಬಲರಾದರೂ ಅಲ್ಪಸಂಖ್ಯಾತ ಭಾಷಿಕರ ಪ್ರತಿನಿಧಿ ಕವಿ ನಿಸ್ಸಾರ್ ಅಹಮದ್ ಇದ್ದಾರೆ. ಆದರೆ ನಿಸ್ಸಾರ್ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯವರು. ಈಗಾಗಲೇ ಬೆಂಗಳೂರಿನ ಪ್ರಾತಿನಿಧ್ಯ, ಶಿವರುದ್ರಪ್ಪನವರಿಂದ ತುಂಬಿದ್ದಾಗಿದೆಯಲ್ಲಾ ಅನ್ನಬಹುದು. ಇನ್ನೂ ಚಂದ್ರಶೇಖರ ಪಾಟೀಲರು ಮೊನ್ನೆ ತಾನೇ ಕೆಜೆಪಿಗೆ ಸೇರಿ, ಇನ್ನೂ ಯಾವ ಪಕ್ಷ-ಪ್ರಣಾಳಿಕೆ ಎಂದು ವಿಲಿವಿಲಿ ಒದ್ದಾಡುವ ಜೀವಂತ ಕವಿಯನ್ನು, ಅತ್ತ ಧಾರವಾಡಕ್ಕೂ ಸೇರದೆ ಇತ್ತ ಬೆಂಗಳೂರಿಗೆ ಜಮಾ ಆಗದೆ ಹೋಗುತ್ತಾರಲ್ಲಾ ಎಂದು, ಕೆಲವರು ಕಿಡಿಗೇಡಿತನ ಮಾಡಬಹುದು. ಏಕೆಂದರೆ ವೀರಶೈವರ ಕವಿ ಚೆನ್ನವೀರಕಣವಿಯವರನ್ನು ಬಿಟ್ಟರೂ, ಸಿದ್ದಲಿಂಗಪಟ್ಟಣಶೆಟ್ಟಿ ಇದ್ದಾರೆ. ಪುರುಷರ ಪಟ್ಟಿಯಲ್ಲಿ ಅಲ್ಲದೇ ಹೋದರೆ, ಮಹಿಳೆಯರ ಪಟ್ಟಿಯಲ್ಲಿ ಅತ್ತ ಮಾಲತಿಪಟ್ಟಣ ಶೆಟ್ಟರೂ ಇತ್ತ ಹೇಮಾಪಟ್ಟಣ ಶೆಟ್ಟರೂ ಕವಿಗಳ ಪಟ್ಟಿಯಲ್ಲಿ ಜಮಾ ಆಗುವಂಥವರೇ.
ಮೊನ್ನೆ ತಾನೇ ಅಧಿಕೃತವಾಗಿ ಜೈನ ಜನಾಂಗದವರು ಅಲ್ಪಸಂಖ್ಯಾತರೆಂದೇ ಘೋಷಿರುವಾಗ ನಾಡೋಜ ಹಂಪನಾ ಅವರು, ಅದಕ್ಕಾಗಿಯೇ ಮಹಾಕಾವ್ಯ ಬರೆದುಕೊಂಡು ಕುಳಿತಿದ್ದಾರೆ. ಇನ್ನೊಂದು ಬದಿಗೆ ದಲಿತ ಜನಾಂಗದ ಬಹುಮುಖ ಪ್ರತಿಭೆಯ ನಾಡೋಜ ಕಮಲಾ ಹಂಪನಾ ಇದ್ದಾರೆ. ಇಬ್ಬರಲ್ಲಿ ಯಾರಿಗೆ ಕೊಟ್ಟರೂ, ಅದು ಪರಿಪೂರ್ಣಗೊಂಡಂತೆಯೇ ಎಂಬುದೂ ಸುಳ್ಳಲ್ಲ.
ಶಿವರುದ್ರಪ್ಪನವರು ಬದುಕಿರುವಾಗಲೇ, ಕಯ್ಯಾರ ಕಿಞಣ್ಣರೈ ಅವರಿಗೂ ರಾಷ್ಟ್ರಕವಿ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿ ಬಂದಿತು. ಬಹುಶಃ ಇಂಡಿಯಾದ ಗಾಂಧಿ, ಗಡಿನಾಡಿನ ಗಾಂಧಿ ಇತ್ಯಾದಿಯಂತೆ, ಗಡಿನಾಡ ರಾಷ್ಟ್ರಕವಿ ಎಂದು ದಲಿತ ಕವಿ ರೈ ಅವರನ್ನು, 100ರ ಸಂಕೇತವಾಗಿ ಪರಿಗಣಿಸಿ ಎಂದಿರಬಹುದು. ಹಾಗಾದರೆ ಜಯನಗರದ ನಿಘಂಟು ತಜ್ಞ, ಜಿ. ವೆಂಕಟಸುಬ್ಬಯ್ಯ ಅವರು, ಕುವೆಂಪು, ಶಿವರುದ್ರಪ್ಪನವರನ್ನು ರಾಷ್ಟ್ರಕವಿಗಳು ಎಂದು ತೀರ್ಮಾನಿಸಿ, ಬ್ರಾಹ್ಮಣ ಖೋಟಾ ಬಾಕಿ ಇದ್ದರೆ, 100 ತುಂಬಿದ ತಮಗೆ ಅದು ದಕ್ಕಬಾರದೆ ಎಂದರೆ ಸರ್ಕಾರಕ್ಕೆ ಇರಿಸು ಮುರಿಸು ಆದಿತೇನೋ!
ಅದು ಹೇಗೆ ಸಾಧ್ಯ? ರಾಷ್ಟ್ರಕವಿ ಪ್ರಶಸ್ತಿ-ಸ್ಥಾನ, ಕವಿಗಳಿಗೇ ಹೊರತು, ಸಾಹಿತಿಗಳಿಗಲ್ಲ ಎಂದು ಬೈಲಾ ಮುಂದಿಟ್ಟರೆ, ಯಾವ ಸ್ಥಾನವೂ ಇಲ್ಲದ ಸಿದ್ದಲಿಂಗಯ್ಯನವರಿಗೆ ಅದು ಕಟ್ಟಿಟ್ಟ ಬುತ್ತಿ. ಪ್ರತಿಯೊಂದು ಸಂದರ್ಭದಲ್ಲೂ ಬಲಗೈಯೇ ಮುಂದಾದರೆ, ಎಡಗೈ ಗತಿ ಏನು ಎಂದು ಕವಿ ಎಲ್. ಹನುಮಂತಯ್ಯ ಅವರು ಹೋರಾಟಕ್ಕೆ ಇಳಿಯಬಹುದು. ಈ ತಾರತಮ್ಯ ಏಕೆ? ಜ್ಞಾನಪೀಠ ತಪ್ಪಿ, ಯಾರೂ ಕೇಳದ ಮೂರ್ತಿದೇವಿ ಪ್ರಶಸ್ತಿ ನೀಡಿದ್ದಕ್ಕೆ ಕೇಂದ್ರ ಮಂತ್ರಿಯೂ ಮಹಾಕವಿಯೂ ಆದ ವೀರಪ್ಪ ಮೊಯಿಲಿ ಅವರು, ರಾಷ್ಟ್ರಮಟ್ಟದಲ್ಲಿಯೇ ರಂಪರಾಡಿ ಮಾಡುವ ಎಲ್ಲ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇದೇನಿದು ಗಂಡಸರ ಬಡಿವಾರ? ವಿಶ್ವದಲ್ಲಿಯೇ ಹೆಚ್ಚು ಹೆಚ್ಚು ಮಹಾಕಾವ್ಯ ಬರೆದ ಏಕೈಕ ಮಹಿಳಾ ಮಹಾಕವಿ ಮೈಸೂರಿನ ಲತಾ ರಾಜಶೇಖರ್ ಅವರು, ಇನ್ನು ಮುಂದೆ ಮಹಾಕಾವ್ಯವನ್ನೇ ಬರೆಯದೇ ಹೋದರೆ, ಮಹಿಳಾ ಸಂಘಟಕರೆಲ್ಲಾ ಅಭಿನವ ಉತ್ಸಾಹದಿಂದ ಮಹಿಳಾ ಆಯೋಗಕ್ಕೋ ನ್ಯಾಯಾಲಯಕ್ಕೋ ಹೊರಟೇ ಬಿಡಬಹುದು. ಎಚ್.ಎಸ್. ಅನುಪಮಾ ಅವರು ಖಡ್ಗವಾಗಲಿ ಸಾಧ್ಯ ಎಂದು ಝಳಪಿಸಬಹುದು.
ಪಾಟೀಲ ಪುಟ್ಟಪ್ಪ, ಚೆನ್ನವೀರಕಣವಿ ಅವರ ನಂತರ ಉತ್ತರ ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಲು ವರ್ಷ ವರ್ಷವೂ ಸಂಭ್ರಮೋತ್ಸಾಹದಿಂದ ಸಿದ್ಧತೆ ನಡೆಸಿರುವ, ಗಿರಡ್ಡಿ ಗೋವಿಂದರಾದರೂ, ತಾವೂ ಕವನ ಸಂಕಲನ ಪ್ರಕಟಿಸಿದ್ದು, ಇತ್ತೀಚೆಗೆ ವಿಮರ್ಶೆಗೆ ತಿಲಾಂಜಲಿ ನೀಡಿ, ಹರಟೆಗೆ ತೊಡಗಿರುವುದರಿಂದ, ನಿಜವಾದ ಸೃಜನಶೀಲ ಬರಹಗಾರ ತಾವೇ ಎಂದು ಮುಂದೆ ಬಂದರೆ, ಹೆದರಿಯಾದರೂ ಸರ್ಕಾರ ಪಟ್ಟಿಯಲ್ಲಿ ಸೇರಿಸದೆ ವಿಧಿಯಿಲ್ಲ.
ಸಾಹಿತಿಗಳೋ ಕವಿಗಳೋ ಆಯ್ಕೆ ಸಮಿತಿಯಲ್ಲಿ ಇರುವುದೇ ಅಪಾಯ. ಇಡೀ ನಾಡಿನ ಸಾಂಸ್ಕೃತಿಕ ತಿರುವು ಮುರುವಿಗೆ ತಾವೇ ಕಾರಣ ಎಂದು ಮತ್ತೆ ಐಎಂ ವಿಠಲಮೂರ್ತಿಯವರು, ಅವರಿಗೇನು ಕಡಿಮೆ ಎಂದು ಮನುಬಳಿಗಾರರು ವೈ.ಕೆ. ಮುದ್ದುಕೃಷ್ಣ ಅವರು ಮುಂದಾದರೆ, ಮುಖ್ಯಮಂತ್ರಿಯ ಅಘೋಷಿತ ಸಾಂಸ್ಕೃತಿಕ ಸಲಹೆಗಾರರ ಪೀಕಲಾಟ ಹೇಳತೀರದಾಗುತ್ತದೆ.
ಇಷ್ಟಕ್ಕೆಲ್ಲಾ ಅವಕಾಶ ಕೊಡಬಾರದು ಎನ್ನುವುದಾದರೆ, ಈಗಿಂದೀಗಲೇ ಮುಖ್ಯಮಂತ್ರಿಯವರು, ತಮ್ಮ ಸ್ವಯಂಬುದ್ಧಿಯಿಂದ, ರಾಷ್ಟ್ರಕವಿ ಪುರಸ್ಕಾರ ಘೋಷಿಸಿ, ಶಾಶ್ವತ ಕೀರ್ತಿಗೆ ಭಾಜನರಾಗುವುದೇ ಸೂಕ್ತ ಎಂದು ನನ್ನ ಹಿತವಚನ.
ಪುಸ್ತಕಮನೆ ಹರಿಹರಪ್ರಿಯ