ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಮೆರಿಕದ ಮಿತ್ರತ್ವ ಬಯಸುವಾಗ ಮನದಲ್ಲಿರಬೇಕಾದ ಅಂಶಗಳು

ಅಮೆರಿಕದೊಂದಿಗೆ ಸಹಭಾಗಿತ್ವ ಹೊಂದುವುದರಲ್ಲಿರುವ ತೊಂದರೆ ಎಂದರೆ...

Mainashree
Updated On : 1 Feb 2014, 11:30 am

ಅಮೆರಿಕದೊಂದಿಗೆ ಸಹಭಾಗಿತ್ವ ಹೊಂದುವುದರಲ್ಲಿರುವ ತೊಂದರೆ ಎಂದರೆ ಅದು ಯಾವತ್ತೂ ನಂಬಲರ್ಹವಲ್ಲ. ಅಮೆರಿಕವು ತನ್ನ ಆ ಕ್ಷಣದ ಹಿತಾಸಕ್ತಿಯನ್ನು ಹೊಂದಾಣಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತ್ರವೇ ಹೆಜ್ಜೆ ಇಡುತ್ತದೆಯೇ ಹೊರತು ತನ್ನ ಮಿತ್ರ ದೇಶಗಳೂ ಸೇರಿದಂತೆ ಬೇರೆ ರಾಷ್ಟ್ರಗಳಿಗೆ ತಾನಿಡುವ ಹೆಜ್ಜೆ ಎಂಥ ಪರಿಣಾಮಗಳನ್ನು ತಂದೊಡ್ಡುತ್ತದೆ ಎಂಬುದರ ಕಾಳಜಿ ಅದಕ್ಕಿಲ್ಲ. ಕೆಲವೊಮ್ಮೆ ಕೆಲವೊಂದು ಕ್ರಮಗಳು ಅದಕ್ಕೆ ಅಗತ್ಯವಲ್ಲದಿದ್ದರೂ ಆ ಪ್ರದೇಶದ ಸ್ಥಿರತೆಯ ದೃಷ್ಟಿಯಿಂದ ಮುಖ್ಯವಾಗಿರುತ್ತದೆ.
ಆದರೆ ಜಾಗತಿಕ ನಿರ್ವಹಣೆ ಸಂದರ್ಭದಲ್ಲಿ ಅಮೆರಿಕ ತಾನು ಉಪಯೋಗಿಸುವ ಸಾಧನ ಮತ್ತು ದಾರಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ನುಗ್ಗುತ್ತದೆ. ಯಾವಾಗ ಅಲ್ಲಿನ ಪರಿಸ್ಥಿತಿ ಕೈಮೀರಿ, ಶವ ತುಂಬುವ ಬ್ಯಾಗುಗಳ ಸಂಖ್ಯೆ ಅಧಿಕವಾಗುತ್ತದೆಯೋ, ವಿಪರೀತ ಸಾವು- ನೋವುಗಳ ಬಿಸಿಗೆ ಸುಸ್ತು ಆವರಿಸುತ್ತದೆಯೋ ಆಗ ಅಲ್ಲಿಂದ ಜಾಗ ಖಾಲಿ ಮಾಡಿಬಿಡುತ್ತದೆ. ಅದು ಬಿಟ್ಟುಹೋದ ಪ್ರದೇಶ ಅಂಥ ಪರಿಸ್ಥಿತಿಯನ್ನು ಸಂಭಾಳಿಸುವ ಶಕ್ತಿ ಇಲ್ಲದೇ ಸಂಘರ್ಷದಲ್ಲಿ ನಲುಗುತ್ತದೆ. ದೃಢ ನಿರ್ಧಾರದಿಂದ ಎಲ್ಲ ನಷ್ಟಗಳನ್ನೂ ತಾಳಿಕೊಂಡು ಕೊನೆವರೆಗೆ ನಿಲ್ಲುವುದರಲ್ಲಿ ಅಮೆರಿಕ ವೈಫಲ್ಯವನ್ನೇ ಅನುಭವಿಸಿದೆ. ಭದ್ರತೆ ಸಂಬಂಧದ ಕಾರ್ಯತಂತ್ರ ಯೋಜನೆಗಳಲ್ಲಿ ಅಮೆರಿಕ ತಮ್ಮನ್ನು ಕಾಪಾಡಲಿ ಎಂದು ಬಯಸುವ ರಾಷ್ಟ್ರಗಳೆಲ್ಲ ಈ ಬಗ್ಗೆ ಯೋಚಿಸಬೇಕು.
ಇತ್ತೀಚಿನ ಕೆಲ ದಾಖಲೆಗಳನ್ನೇ ಪರಿಶೀಲಿಸೋಣ. 2001ರ ವಿವಾದಾತ್ಮಕ ನಡೆಯಲ್ಲಿ ಸದ್ದಾಂ ಹುಸೇನ್ ಅವರನ್ನು ಅಮೆರಿಕ ಕೆಳಗಿಳಿಸಿತು. ಅದು ಆನಂತರದಲ್ಲಿ, ಆರಿಹೋದಂತಿದ್ದ ಶಿಯಾ-ಸುನ್ನಿ ಕಲಹವನ್ನು ಮತ್ತೆ ಪ್ರಚೋದಿಸಿ ಇಸ್ಲಾಂ ಉಗ್ರವಾದ ಪ್ರಖರವಾಗುವುದಕ್ಕೆ ತನ್ನ ಕೊಡುಗೆ ನೀಡಿತು. ತಾನೇ ಬಾಗ್ದಾದ್‌ನಲ್ಲಿ ಸ್ಥಾಪಿಸಿ ಬಂದಿದ್ದೇನೆಂದು ಹೇಳಿಕೊಂಡ 'ಪ್ರಜಾಪ್ರಭುತ್ವ' ವ್ಯವಸ್ಥೆಯ ಸಹಾಯದ ಕರೆಯನ್ನು 13 ವರ್ಷಗಳ ನಂತರ ಅದು ಕಡೆಗಣಿಸಿಬಿಟ್ಟಿತು.
ಕೆಲವಾರಗಳ ಹಿಂದೆ ಇರಾಕ್‌ನ ಪ್ರಧಾನಿ ನೌರಿ ಅಲ್ ಮಲಿಕಿ, ಅಲ್‌ಕೈದಾ ಜತೆ ಸಂಪರ್ಕ ಹೊಂದಿರುವ ತಮ್ಮ ನೆಲದ ಸುನ್ನಿ ತೀವ್ರವಾದಿ ಗುಂಪುಗಳನ್ನು ಹೊರಹಾಕುವುದಕ್ಕೆ ಸಹಾಯ ಮಾಡಿ ಎಂದಾಗ ಅಮೆರಿಕ ಕೈಚೆಲ್ಲಿತು.
ದಶಕಗಳಷ್ಟು ಕಾಲ ಅಫಘಾನಿಸ್ತಾನದ ನೆಲದಲ್ಲಿ ಕಾದಾಡಿದ ಅಮೆರಿಕನ್ನರು ಅಲ್ಲೂ ಅನುಸರಿಸಿದ್ದು ಅರ್ಧಕ್ಕೇ ಓಡುವ ನೀತಿಯನ್ನೇ. ಇದರ ಪರಿಣಾಮ ಏನಾಯಿತೆಂದರೆ ಮುಲ್ಲಾ ಫಜುಲ್ಲಾಹ್ ನೇತೃತ್ವದಲ್ಲಿ ಅಫ್ಘನ್ ಮತ್ತು ಪಾಕ್ ತಾಲಿಬಾನಿಗಳು ಒಗ್ಗೂಡುವಂತಾಯಿತು. ಉತ್ತರ ವಾಜಿರಿಸ್ತಾನದ ಗುಡ್ಡಗಾಡುಗಳಿಂದ ಹೊರಗೆ ಇಣುಕಿರುವ ಇವರೆಲ್ಲ ಕಾಬೂಲ್‌ನ ಚುನಾಯಿತ ಸರ್ಕಾರವನ್ನು ಅಧೀರಗೊಳಿಸಿವೆ. ಅದಾಗಲೇ ಶಿಥಿಲವಾಗಿರುವ ಪಾಕಿಸ್ತಾನದಲ್ಲೂ ವಿಧ್ವಂಸಗಳನ್ನು ಸೃಷ್ಟಿಸಿ ಅಣ್ವಸ್ತ್ರ ರಾಷ್ಟ್ರವು ಉಗ್ರರ ಪಾಲಾಗುವ ಮಹಾದುಃಸ್ವಪ್ನವನ್ನೂ ನೆನಪಿಸುತ್ತಿದೆ. ದಕ್ಷಿಣ ಏಷ್ಯಾದಲ್ಲಿ ಬೆಳೆದು ನಿಂತಿರುವ ಇಂಥ ಆತಂಕಗಳಿಗೆಲ್ಲ ಬೀಜ ಬಿತ್ತಿದ್ದು ಅಮೆರಿಕವೇ. ಅಫಘಾನಿಸ್ತಾನದಲ್ಲಿ ಆಗಿನ ಸೋವಿಯತ್ ರಷ್ಯ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಬಾರದು ಎಂಬ ಕಾರಣಕ್ಕೆ ಮುಜಾಹಿದೀನ್‌ಗಳನ್ನು ರೂಪಿಸಿ ಶಸ್ತ್ರಾಸ್ತ್ರ ಕೊಟ್ಟವರು ಇವರೇ. ನಂತರ ರಷ್ಯನ್ನರು ಹಿಂತೆಗೆದಾಗ ಈ ಮುಜಾಹಿದೀನ್‌ಗಳೇ ತಾಲಿಬಾನ್‌ಗಳಾಗಿ ಜಗತ್ತಿನಾದ್ಯಂತ ಹತಾಶ ಮುಸ್ಲಿಂ ಯುವಕರನ್ನೆಲ್ಲ ಬಂಡುಕೋರರನ್ನಾಗಿಸಿದವು. ಮಧ್ಯ ಏಷ್ಯ ಮತ್ತು ಚೆಚೆನ್ಯಗಳಿಂದ ವಿಶೇಷವಾಗಿ ಅಂಥ ಯುವಕರು ತಾಲಿಬಾನ್‌ಗೆ ಜಮೆಯಾದರು. ಪಾಕಿಸ್ತಾನದಲ್ಲಿ, ಭಾರತದ ಕಾಶ್ಮೀರದಲ್ಲಿ ವಿನಾಶಗಳನ್ನು ಹರಡುತ್ತಿರುವವರು ಇವರೇ. ಮಾಘ್ರೆಬ್‌ನಿಂದ ಇಂಡೊನೇಷ್ಯದವರೆಗೆ ಸುನ್ನಿ ತೀವ್ರವಾಗಿ ಹಬ್ಬುವುದಕ್ಕೆ ಕಾರಣ ಈ ಪಡೆ.
ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆ ಬೆಳೆಯುತ್ತಿದೆ ಎಂಬ ಭಾರತದ ಬೊಬ್ಬೆಗೆ ಅಮೆರಿಕದ ಬಳಿ ಯಾವ ಬೆಲೆಯೂ ಇಲ್ಲ. 2014ರ ಕನ್‌ಸಾಲಿಡೇಟೆಡ್ ಅಪ್ರಾಪ್ರಿಯೇಷನ್ ಬಿಲ್ ಪ್ರಕಾರ ಅಮೆರಿಕವು ಪಾಕಿಸ್ತಾನಕ್ಕೆ ಬಹುಕೋಟಿ ಡಾಲರ್‌ಗಳ ನೆರವು ನೀಡುತ್ತಿದೆ. ಅಮೆರಿಕ ಮತ್ತು ನ್ಯಾಟೊ ಪಡೆಗಳು ಅಫ್ಘನ್‌ನಿಂದ ಹಿಂತೆಗೆಯುವಾಗ ಅಲ್ಲಿನ ತಾಲಿಬಾನ್ ನಿಯಂತ್ರಣದಲ್ಲಿರಲಿ ಮತ್ತು ಪಾಕ್ ಸೇನೆ ತನಗೆ ಅಡ್ಡಿಯಾಗದಿರಲಿ ಎಂಬ ಆಶಯದಲ್ಲಿ ಈ ಹಣದ ಹೊಳೆ. ಸೌದಿ ಹಣಕಾಸಿನಲ್ಲಿ ತಲೆ ಎತ್ತುವ ಉಗ್ರರು ತನ್ನ ಭದ್ರತೆಗೆ ಆತಂಕ ಒಡ್ಡಬಾರದು ಎಂಬ ಎಚ್ಚರಿಕೆಯೇನೋ ಅಮೆರಿಕಕ್ಕಿದೆಯಾದರೂ ಸೌದಿ ಮತ್ತು ಪಾಕ್‌ನ ವ್ಯವಸ್ಥೆಗಳು ಸುಮಾರು 65 ತಾಲಿಬಾನ್ ಗುಂಪುಗಳೊಂದಿಗೆ ಹೊಂದಿರುವ ಪರೋಕ್ಷ ಸಂಬಂಧವನ್ನು ಸಮಾಪ್ತಿಗೆ ತರುವ ಯತ್ನವನ್ನೇನೂ ಅದು ಮಾಡಿಲ್ಲ.  ಏಷ್ಯದಲ್ಲಿ ಚೀನಾ ವೈರವನ್ನು ಎದುರಿಸುವ ಸಮತೋಲಿತ ಸೂಕ್ಷ್ಮ ಪ್ರದೇಶವಾಗಿ ಜಪಾನ್ ಅದಕ್ಕೆ ಮುಖ್ಯವಾಗುತ್ತದೆ. ಚೀನಾ ಮತ್ತು ಜಪಾನ್‌ಗಳು ಕೆಲ ದ್ವೀಪ ಪ್ರದೇಶಗಳ ಕುರಿತು ಹೊಂದಿರುವ ವಿವಾದ ಯುದ್ಧಕ್ಕೆ ಎಡೆಮಾಡದಿರಲಿ ಎಂದೇ ಅಮೆರಿಕ ಆಶಿಸುತ್ತದೆ. ಹಾಗೆಂದು ಜಪಾನ್‌ಗೆ ಸಂಪೂರ್ಣ ಬೆಂಬಲ ನೀಡದೇ, 'ಮಿಲಿಟರಿ ಯೋಧರ ಸ್ಮೃತಿ ಹೊಂದಿರುವ ಯಾಸುಕುನಿ ದೇವಾಲಯಕ್ಕೆ ಜಪಾನ್ ಪ್ರಧಾನಿಯ ಭೇಟಿ ಪ್ರಚೋದನಕಾರಿಯಾಗಿದೆ' ಎಂಬ ಚೀನಾ ಹೇಳಿಕೆಯನ್ನು ಅನುಮೋದಿಸುತ್ತದೆ. ಜಪಾನ್ ತನ್ನ ರಕ್ಷಣೆಯನ್ನು ತಾನು ನೋಡಿಕೊಂಡಿದೆ ಎಂಬುದು ಬೇರೆ ಮಾತು.
ಇತ್ತೀಚೆಗೆ ಜಪಾನ್ ಪ್ರಧಾನಿ ಶಿಂಜೊ ಅಬೆ ನಮ್ಮ ಗಣತಂತ್ರ ದಿನಾಚರಣೆಯ ಮುಖ್ಯ ಅತಿಥಿಯಾಗಿದ್ದರು. ಅಮೆರಿಕದ ನಂಬಲರ್ಹವಲ್ಲದ ನಡತೆಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಜಪಾನ್‌ಗಳು ಹೆಚ್ಚಿನ ಮಿಲಿಟರಿ ಸಹಭಾಗಿತ್ವ ಹೊಂದುವುದು ಏಷ್ಯದಲ್ಲಿ ಚೀನಾವನ್ನು ಎದುರಿಸುವ ನಿಟ್ಟಿನಲ್ಲಿ ಉತ್ತಮ ಮಾರ್ಗವಾಗಲಿದೆ.
ಅಮೆರಿಕವು ನಮಗೆ ಕೊಡುವ ಕಿಮ್ಮತ್ತೇನು ಎಂಬುದು ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಬ್ರಗಡೆ ಪ್ರಕರಣದಲ್ಲೇ ಗೊತ್ತಾಗಿದೆ. ಆ ಪ್ರಕರಣದಲ್ಲಿ ಅಮೆರಿಕ ಕ್ಷಮೆಯನ್ನೂ ಕೇಳಿಲ್ಲ ಹಾಗೂ ತನ್ನ ರಾಜತಾಂತ್ರಿಕ ಅಧಿಕಾರಿಗಳಿಗೆ ಪ್ರಕರಣ ಆರಂಭವಾಗುವುದಕ್ಕೆ ಮೊದಲು ಯಾವೆಲ್ಲ ಸವಲತ್ತುಗಳಿದ್ದವೋ ಅವನ್ನು ಮರುಸ್ಥಾಪಿಸಿಕೊಳ್ಳುವಲ್ಲೂ ಯಶಸ್ವಿಯಾಗಿದೆ.
ಅಮೆರಿಕದ ಒತ್ತಡಕ್ಕೆ ಮಣಿದ ಭಾರತ ಮಾತ್ರ ಅಮೆರಿಕ ಹೇಳುವ ಕನಿಷ್ಠ ವೇತನ ಮಟ್ಟವನ್ನು ಒಪ್ಪಿಕೊಂಡಿದೆ. ಭಾರತದ ರಾಜತಾಂತ್ರಿಕ ಪ್ರದೇಶಗಳು ಅವುಗಳದ್ದೇ ಆದ ಸಾರ್ವಭೌಮತೆ ಹೊಂದಿರುತ್ತವೆ ಎಂಬ ಅಂಶವನ್ನು ಈ ಮೂಲಕ ಅಮೆರಿಕ ಗಾಳಿಗೆ ತೂರಿದ್ದಾಗಿದೆ. ಭಾರತವನ್ನು ಬೇಕಾದಾಗಲೆಲ್ಲ ಪ್ರಚೋದಿಸಿ ಮಣಿಸಬಹುದು ಎಂಬ ಧೋರಣೆಯನ್ನು ಈ ವಿದ್ಯಮಾನ ಗಟ್ಟಿಗೊಳಿಸಿದೆ. ಅಮೆರಿಕದೊಂದಿಗಿನ ಕಾರ್ಯತಂತ್ರ ಸಹಭಾಗಿತ್ವ ಹೊಂದುವಿಕೆಗೆ ಇದು ಅನುಕೂಲಕರವಂತೂ ಅಲ್ಲ. ಏಷ್ಯದಲ್ಲಿ ತನ್ನ ಸಮತೋಲನವನ್ನು ಹೊಂದಬೇಕು ಎಂದು ಪ್ರಯತ್ನಿಸುತ್ತಿರುವ ಅಮೆರಿಕಕ್ಕೆ ಭಾರತ ಸಹಕಾರ ಒದಗಿಸುವಂಥ ವಾತಾವರಣ ಇಲ್ಲೆಲ್ಲಿದೆ?

- ಭರತ್ ಕಾರ್ನಾಡ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement