ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸರ್ವಾಧಿಕಾರದ ಬಗ್ಗೆ ಮಾತನಾಡುವವರಿಗೆ ತಾವು ಮಾಡಿದ್ದೇನೆಂದು ನೆನಪಿಲ್ಲವೇ?

ಇದೀಗ ಎರಡು ವಿಷಯಗಳು ರಾಷ್ಟ್ರ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಂದು...

Mainashree
Updated On : 1 Jul 2014, 10:02 am

ಇದೀಗ ಎರಡು ವಿಷಯಗಳು ರಾಷ್ಟ್ರ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಂದು, ವಿರೋಧ ಪಕ್ಷದ ಸ್ಥಾನವನ್ನು ಕಾಂಗ್ರೆಸ್ಗೆ ನೀಡುವ ಬಗ್ಗೆ ಹಾಗೂ ಎರಡನೆಯದು, ಕಾಂಗ್ರೆಸ್ ಕಾಲದಲ್ಲಿ ನೇಮಕಗೊಂಡ ರಾಜ್ಯಪಾಲರುಗಳನ್ನು ಇದೀಗ ಬಿಜೆಪಿ ಕಿತ್ತಾಕುತ್ತಿದೆಯೇ ಎಂಬುದು. ಆದರೆ ಇವರೆಡೂ ವಿಚಾರಗಳನ್ನು ಮಾಧ್ಯಮಗಳಾದಿಯಾಗಿ ಜನಸಾಮಾನ್ಯ ಕೂಡ ಮೈ ಪೂರ ಕಿವಿಯಾಗಿಸಿ ಕೇಳುವಂತಾಗಿದೆ.
16ನೇ ಲೋಕಸಭೆ ಚುನಾವಣೆಯು ಒಂದೆಡೆ ಕಾಂಗ್ರೆಸ್ಗೆ ಮರೆಯಲಾಗದ ಸೋಲನ್ನು ನೀಡಿದ್ದರೆ ಇನ್ನೊಂದೆಡೆ ನರೇಂದ್ರ ಮೋದಿ ನಾಯಕತ್ವದಡಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೇರಿಸಿದೆ. ಸಾಂವಿಧಾನಿಕ ನಿಯಮಗಳ ಪ್ರಕಾರ ಲೋಕಸಭೆಯ ಒಟ್ಟು ಸ್ಥಾನಗಳ ಶೇಕಡ 10 ಅಥವಾ ಅದಕ್ಕಿಂತ ಜಾಸ್ತಿ ಸ್ಥಾನಗಳನ್ನು ಪಡೆದಿರುವ ಎರಡನೇ ಅತಿ ದೊಡ್ಡ ಪಕ್ಷವು ವಿರೋಧಪಕ್ಷದ ಸ್ಥಾನವನ್ನು ಅಲಂಕರಿಸಬೇಕು. ಈ ಸಾಂವಿಧಾನಿಕ ನಿಯಮನ್ನು ಪಾಲಿಸುವುದಾದರೆ 16ನೆಯ ಲೋಕಸಭೆಯಲ್ಲಿ ಕಾಂಗ್ರೆಸ್ಗೆ ವಿರೋಧ ಪಕ್ಷದ ಸ್ಥಾನವನ್ನೂ ಕೂಡ ನೀಡುವಂತಿಲ್ಲ ಎಂಬುದು ಸ್ಪಷ್ಟ. ಯಾಕೆಂದರೆ 543 ಲೋಕಸಭೆ ಸ್ಥಾನವಿರುವ ಇಲ್ಲಿ ಶೇಕಡಾ 10 ಅಂದರೆ ಕನಿಷ್ಠ 54ಸ್ಥಾನಗಳನ್ನಾದರೂ ವಿರೋಧ ಪಕ್ಷವು ಹೊಂದಿರಬೇಕಾಗುತ್ತದೆ. ಆದರೆ ಕಾಂಗ್ರೆಸ್ಗೆ ಇರುವುದು ಬರೀ 44 ಸ್ಥಾನಗಳು ಮಾತ್ರ.
ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯೊಂದು ನಿರಂಕುಶ ಮಾದರಿಯನ್ನು ತುಳಿಯಬಾರದು ಎಂದಾದರೆ ಅಲ್ಲೊಂದು ಕಾವಲುಗಾರನಾಗಿ ವಿರೋಧಪಕ್ಷದ ಉಪಸ್ಥಿತಿಯೂ ಅತ್ಯಗತ್ಯ. ಈ ನಿಟ್ಟಿನಲ್ಲಿ ಅಗತ್ಯವಿರುವಷ್ಟು ಸ್ಥಾನವಿಲ್ಲದಿದ್ದರೂ ವಿರೋಧ ಪಕ್ಷವನ್ನು ಮೋದಿ ಸರಕಾರ ಹೊಂದಬೇಕು ಮತ್ತದು ಸದ್ಯದ ಎರಡನೇ ದೊಡ್ಡಪಕ್ಷವಾಗಿರುವ ಕಾಂಗ್ರೆಸ್ಗೆ ದಕ್ಕಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು. ಹಾಗೇನೇ ಒಂದು ವೇಳೆ ಮೋದಿ ಸರಕಾರ ಕಾಂಗ್ರೆಸ್ಸನ್ನು ಈ ವಿಚಾರದಲ್ಲಿ ಅವಗಣನೆ ಮಾಡಿದರೆ ಇದನ್ನೇ ಕಾಂಗ್ರೆಸ್ ದೊಡ್ಡಮಟ್ಟದ ಸುದ್ದಿಮಾಡಿ ಅನುಕಂಪ ಪಡೆಯುವುದೇ ಎಂಬ ಬಗ್ಗೆಯೂ ಸಂಶಯವಿದೆ. ಅದ್ದರಿಂದ ಇದೀಗ ತೀರ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಬಿಜೆಪಿ ಈ ವಿಚಾರವನ್ನು ಸ್ಪೀಕರ್ ಅವರ ಅಂಗಳಕ್ಕೆ ಒಯ್ದು ತಕ್ಕ ಮಟ್ಟಿಗೆ ನಿರಾಳವಾಗಿದೆ. ಆದರೆ, ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಲೇಬೇಕು. ಅದೇನೆಂದರೆ ಅತಿ ಹೆಚ್ಚು ಬಾರಿ ಆಡಳಿತ ನಡೆಸಿದ ಕಾಂಗ್ರೆಸ್ ತನ್ನ ಅವಧಿಯುದ್ದಕ್ಕೂ ವಿರೋಧಪಕ್ಷವನ್ನು ಸಂಸತ್ತಿನಲ್ಲಿ ಹೊಂದಿತ್ತೇ ಎಂಬುದು. ಕುಹಕವೆಂದರೆ ಇದೀಗ ತನಗೆ ವಿರೋಧ ಪಕ್ಷದ ಸ್ಥಾನ ನೀಡಲೇಬೇಕು, ತಮ್ಮದು ಎರಡನೇ ಅತೀ ದೊಡ್ಡ ಪಕ್ಷ ಎಂದೆಲ್ಲಾ ಕ್ಯಾತೆ ತೆಗೆಯುತ್ತಿರುವ ರಾಷ್ಟ್ರೀಯ ಕಾಂಗ್ರೆಸ್ 1952ರಿಂದ ಅಧಿಕಾರಕ್ಕೇರಿ 1977ರ ವರೆಗೂ ನಿರಂತರ ಆಡಳಿತ ನಡೆಸಿತ್ತಾದರೂ ಈ ಕಾಲಾವಧಿಯಲ್ಲಿ ಸಂಸತ್ತಿನಲ್ಲಿ ಯಾವುದೇ ಪಕ್ಷಕ್ಕೂ ವಿರೋಧಪಕ್ಷದ ಸ್ಥಾನ ಕೊಟ್ಟಿರಲಿಲ್ಲ. ಅಂದರೆ ಜವಾಹರ್ಲಾಲ್ ನೆಹರೂ ಹಾಗೂ ಇಂದಿರಾಗಾಂಧಿಯವರ ಪ್ರಧಾನಿಗಿರಿಯ ಕಾಲದುದ್ದಕ್ಕೂ ನಮ್ಮ ಲೋಕಸಭೆಯಲ್ಲಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ವಿರೋಧ ಪಕ್ಷವೆಂದು ಸ್ವೀಕರಿಸುವ ಗೋಜಿಗೆ ಹೋಗಿಲ್ಲ ನಮ್ಮ ಕಾಂಗ್ರೆಸ್. 1952ರಲ್ಲಿ ಅಂದಿನ 489 ಸ್ಥಾನಗಳ ಲೋಕಸಭೆಯಲ್ಲಿ 16 ಸ್ಥಾನಗಳನ್ನು ಪಡೆದಿದ್ದ ಸಿಪಿಐ ಎರಡನೇ ಅತಿದೊಡ್ಡ ಪಕ್ಷವಾಗಿತ್ತು. ಇದೇ ಪಕ್ಷದ ಎ.ಕೆ. ಗೋಪಾಲ್ರನ್ನು ಪ್ರಪ್ರಥಮ ವಿರೋಧಪಕ್ಷದ ನಾಯಕ ಎಂದು ಕೂಡ ಕರೆಯಲಾಗುತ್ತದೆ (ಇದು ತಪ್ಪು). ಆದರೆ ವಾಸ್ತವವೇನೆಂದರೆ ಅಂದಿನ ಕಾಂಗ್ರೆಸ್ ಸಿಪಿಐನ್ನು ಅಧಿಕೃತವಾಗಿ ವಿರೋಧಪಕ್ಷವೆಂದು ಮಾನ್ಯ ಮಾಡಿರಲೇ ಇಲ್ಲ. ಇನ್ನು 1984ರ ಲೋಕಸಭೆಯಲ್ಲಿ 30ಸ್ಥಾನಗಳನ್ನು ಪಡೆದು ಎರಡನೇ ಅತೀ ದೊಡ್ಡ ಪಕ್ಷವಾಗಿ ಆರಿಸಿ ಬಂದದ್ದು ತೆಲುಗುದೇಶಂ ಪಕ್ಷ. ಆದರೆ ರಾಜೀವ್ ಗಾಂಧಿ ನೇತೃತ್ವದ ಅಂದಿನ ಕಾಂಗ್ರೆಸ್ ಅಧಿಕೃತವಾಗಿ ತೆಲುಗುದೇಶಂ ಪಕ್ಷವನ್ನು ವಿರೋಧಪಕ್ಷವೆಂದು ಒಪ್ಪಿಕೊಂಡದ್ದೇ ಇಲ್ಲ. ಈ ಹಿನ್ನೆಲೆಯನ್ನಿಟ್ಟುಕೊಂಡು ನೋಡಿದಾಗ ಅಂದು ಕಾಂಗ್ರೆಸ್ ಹೇಗೆ ತಾನು ನಡೆದಿದ್ದೇ ದಾರಿ ಎಂದು ಇತರ ಪಕ್ಷಗಳನ್ನು ಕಡೆಗಣಿಸಿತೋ ಅದೇ ರೀತಿ ಇದೀಗ ಬಿಜೆಪಿ ನಡೆದುಕೊಂಡರೆ ಕಾಂಗ್ರೆಸ್ ಕೂಡ ಸುಮ್ಮನಿರಬೇಕಾಗುತ್ತದೆ. ಆದ್ದರಿಂದ ಸಂಸದೀಯ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಬಿಜೆಪಿ ನಿರಂಕುಶಾಧಿಕಾರವನ್ನು ಚಲಾಯಿಸುತ್ತಿದೆ ಎಂಬೆಲ್ಲಾ ಪದಗಳನ್ನು ಉಪಯೋಗಿಸುವ ಮುನ್ನ ಕಾಂಗ್ರೆಸ್ ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಜರೂರತ್ತು ಇದೆ.
ಇನ್ನು ಎರಡನೆಯ ಸಂಗತಿ ಕಾಂಗ್ರೆಸ್ ಆಯ್ದು ಕಳುಹಿಸಿದ್ದ ರಾಜ್ಯಪಾಲರುಗಳನ್ನು ಬಿಜೆಪಿ ವಜಾಗೊಳಿಸುತ್ತಿದೆಯೇ ಎಂಬುದು. ಇದು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ ಸುದ್ದಿ ಮಾತ್ರ ದೇಶಾದ್ಯಾಂತ ಹಬ್ಬಿದೆ. ಒಂದು ವೇಳೇ ಬಿಜೆಪಿ ಸರಕಾರ ಇಂತಹ ಕಾರ್ಯಕ್ಕೆ ಕೈ ಹಾಕಿದರೆ ಅದೊಂದು ದ್ವೇಷದ ರಾಜಕಾರಣವಾಗುತ್ತದೆಯಷ್ಟೆ. ಹಾಗೆ ನೋಡಿದರೆ ರಾಜ್ಯಪಾಲರ ಹುದ್ದೆ ಉತ್ಸವ ಮೂರ್ತಿ ಇದ್ದಂತೆ. ಸರಕಾರದ ಯಾವುದೇ ವಿಚಾರದಲ್ಲಿ ಸಲಹೆ ನೀಡಬಹುದೇ ಹೊರತು ಪರಿಣಾಮಕಾರಿಯಾಗಿ ಅಡ್ಡಗಾಲು ಇಡುವಂತಿಲ್ಲ. ಆದರೂ ಇದೀಗ ಬಿಜೆಪಿಯು ಕಾಂಗ್ರೆಸ್ ತನ್ನ ಅವಧಿಯಲ್ಲಿ ನೇಮಿಸಿದ್ದ ಕೆಲವೊಂದು ರಾಜ್ಯಗಳ ರಾಜ್ಯಪಾಲರುಗಳನ್ನು ತೆರವುಗೊಳ್ಳುವಂತೆ ಒತ್ತಡ ಹೇರುತ್ತಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ಗೆ ಬಿಜೆಪಿಯನ್ನು ಹಳಿಯುವ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ ಇದನ್ನು ಹೊಸ ಸಂಪ್ರದಾಯವೆನ್ನದೆ ಈ ಹಿಂದೆ ಇದೇ ಕಾಂಗ್ರೆಸ್ ನಡೆಸಿಕೊಂಡು ಬಂದಿರುವಂತಹ ರಾಜಕಾರಣದ ಮುಂದುವರಿದ ಭಾಗ ಎಂಬುದನ್ನು ನಾವು ಒಪ್ಪಲೇಬೇಕು
ಅಂದು (2004ರಲ್ಲಿ) ಎನ್ಡಿಎಯನ್ನು ಹಿಮ್ಮೆಟ್ಟಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಮೊದಲು ಮಾಡಿದ ಕೆಲಸವೇ ಎಲ್ಲೆಲ್ಲಿ ಬಿಜೆಪಿ ಬೆಂಬಲಿತ ರಾಜ್ಯಪಾಲರುಗಳಿದ್ದರೋ ಅವರನ್ನೆಲ್ಲಾ ವಜಾಗೊಳಿಸಿದ್ದು. ಇದರ ಫಲವಾಗಿಯೇ ಅಂದು ಕಾರಣವೇ ಇಲ್ಲದೆ ಗೋವಾ ರಾಜ್ಯಪಾಲ ಕೇದರನಾಥ ಸಹಾನಿ, ಗುಜರಾತ್ ರಾಜ್ಯಪಾಲ ಕೈಲಾಸಪತಿ ಮಿಶ್ರ, ಹರ್ಯಾಣದ ಬಾಬು ಪರಮಾನಂದ ಹಾಗೂ ಉತ್ತರಪ್ರದೇಶದ ವಿಷ್ಣುಕಾಂತ್ ಶಾಸ್ತ್ರಿ ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್ನ ಈ ನಡೆಯಿಂದ ಬೇಸತ್ತ ಬಿಜೆಪಿ ಸುಪ್ರೀಂ ಕೋರ್ಟ್ನ ಮೊರೆ ಕೂಡ ಹೋಗಿತ್ತು. ಈ ಬಗ್ಗೆ 2010ರಲ್ಲಿ ತೀರ್ಪು ನೀಡಿದ ಕೋರ್ಟ್ ಯಾವ ಸರಕಾರವೇ ಆಗಲಿ ತನ್ನ ಇಚ್ಚೆಗನುಗುಣವಾಗಿ ರಾಜ್ಯಪಾಲರುಗಳನ್ನು ಬದಲಿಸುವ ಹಾಗಿಲ್ಲ  (in an arbitrary and capricious manner) ಎಂಬ ಸ್ಪಷ್ಟನೆಯನ್ನು ಕೂಡ ನೀಡಿತು. ತನಗೆ ಮುಖಭಂಗವಾಗುವ ರೀತಿಯಲ್ಲಿದ್ದ ಆ ತೀರ್ಪಿಗೆ ಕಾಂಗ್ರೆಸ್ ನೀಡಿದ ಪ್ರತಿಉತ್ತರ ಏನು ಗೊತ್ತೆ? ತಾವು ಕಿತ್ತು ಹಾಕಿದ ರಾಜ್ಯಪಾಲರುಗಳೆಲ್ಲಾ ರಾಜಕೀಯವಾಗಿ ಆಯ್ಕೆಯಾದವರು ಹಾಗೂ ಸಂಘಪರಿವಾರದ ಜೊತೆ ಹಲವಾರು ವರ್ಷಗಳಿಂದ ಒಡನಾಟವಿರಿಸಿಕೊಂಡವರು. ಹಾಗಾಗಿ ಅವರನ್ನೆಲ್ಲಾ ವಜಾಗೊಳಿಸಲಾಗಿದೆ ಎಂದು!
ಹಾಗೆ ನೋಡಿದರೆ ಕೇಂದ್ರ ಸರಕಾರ ಬದಲಾದಾಗಲೆಲ್ಲಾ ರಾಜ್ಯಪಾಲರುಗಳನ್ನು ಬದಲಾಯಿಸುವ ಕೆಟ್ಟ ಚಾಳಿ ಪ್ರಾರಂಭಗೊಂಡದ್ದು 1977ರಲ್ಲಿ ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ. ಇದು ಮೊದಲ ಕಾಂಗ್ರೆಸ್ಸೇತರ ಸರಕಾರವೂ ಹೌದು. ಮುಂದೆ ಇದೇ ಸಂಪ್ರದಾಯವನ್ನು ಇಂದಿರಾಗಾಂಧಿ ಕೂಡ ಮುಂದುವರೆಸಿದ್ದರು. ಅಂದರೆ ಜನತಾ ಪಕ್ಷ ನೇಮಕಗೊಳಿಸಿದ್ದ ರಾಜ್ಯಪಾಲರುಗಳಲ್ಲಿ ಕೆಲವರನ್ನು ವಜಾಗೊಳಿಸಿ ಅಲ್ಲಿಗೆ ತಮಗೆ ಬೇಕಾದ ವ್ಯಕ್ತಿಗಳನ್ನು ರಾಜ್ಯಪಾಲರನ್ನಾಗಿಸಿತ್ತು ಅವರ ಸರ್ಕಾರ.
ಇಲ್ಲಿ ಕಾಡುವ ಸಹಜ ಪ್ರಶ್ನೆ ಇಷ್ಟೇ, ಅಂದು ಕಾಂಗ್ರೆಸ್ ಮಾಡಿದ್ದು ಸರಿ ಎಂದಾದರೆ ಇಂದು ಬಿಜೆಪಿ ಸರಕಾರ ಮಾಡುವುದರಲ್ಲಿ ತಪ್ಪೇನಿದೆ? ತನ್ನ ಇತಿಹಾಸವೇ ಹೀಗಿರುವಾಗ ಮತ್ತೆ ಇನ್ಯಾವ ನೆಲೆಗಟ್ಟಿನಲ್ಲಿ ಕಾಂಗ್ರೆಸ್ ಇಂದಿನ ಬಿಜೆಪಿಯ ನಡೆಯನ್ನು ಸರ್ವಾಧಿಕಾರಿ ಧೋರಣೆ, ನಿರಂಕುಶ ಆಡಳಿತ ಎಂದು ಕರೆಯುತ್ತಿದೆ?
= ಪ್ರಸಾದ್ ಕುಮಾರ್ ಮಾರ್ನಬೈಲ್
kulal22@rediffmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement