ಗ್ರಾಹಕಸ್ನೇಹಿ ಎನಿಸಿಕೊಳ್ಳದ ಬ್ಯಾಂಕಿಂಗ್ ವ್ಯವಸ್ಥೆ
ಇತ್ತೀಚಿನ ಸಂವಿಧಾನ ತಿದ್ದುಪಡಿ ಮುಖಾಂತರದ ಆರ್ಟಿಕಲ್371(ಜೆ)ಯು ಹೈದರಾಬಾದ್ ಕರ್ನಾಟಕ ಭಾಗದ...
ಇತ್ತೀಚಿನ ಸಂವಿಧಾನ ತಿದ್ದುಪಡಿ ಮುಖಾಂತರದ ಆರ್ಟಿಕಲ್371(ಜೆ)ಯು ಹೈದರಾಬಾದ್ ಕರ್ನಾಟಕ ಭಾಗದ ಜನಸಾಮಾನ್ಯರ ಪಾಲಿಗೆ ಆಶಾದಾಯಕ ಬೆಳವಣಿಗೆ. ಎಲ್ಲಾ ವಿಭಾಗಗಳಲ್ಲೂ ಹಿಂದುಳಿದ ಈ ಹೈ.ಕ. ಭಾಗವು ಬ್ಯಾಂಕಿಂಗ್ ವಲಯದಲ್ಲೂ ರಾಜ್ಯದ ಇತರ ಭಾಗಗಳಿಗಿಂತ ತೀರ ಹಿಂದುಳಿದಿದೆ. ಒಂದು ಅಂದಾಜಿನಂತೆ ದೇಶದ ಶೇ50 ನಾಗರಿಕರು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪ್ರಮುಖ ನಗರ, ಪಟ್ಟಣಗಳಲ್ಲಿ ಮಾತ್ರ ಹೆಚ್ಚು ಶಾಖೆ ತೆರೆಯುವ ಕಮರ್ಷಿಯಲ್ ಬ್ಯಾಂಕುಗಳು ಶೇ.25 ಗ್ರಾಮೀಣ ಭಾಗಗಳಲ್ಲಿರಬೇಕೆಂಬ ರಿಜರ್ವ್ ಬ್ಯಾಂಕ್ ನಿಯಮವನ್ನು ಕಡೆಗಣಿಸಿ ಹಳ್ಳಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಬ್ಯಾಂಕುಗಳಿಲ್ಲದ ಬದುಕೇ ಇಲ್ಲ ಎಂಬಂತಹ ಸ್ಧಿತಿಯಲ್ಲಿ ಅವಶ್ಯಕತೆಗಳನ್ನಾಧರಿಸಿದ ತಾಲೂಕುವಾರು ಶಾಖೆಗಳಿಲ್ಲದೇ ಅನಿವಾರ್ಯ ಸಂದರ್ಭಗಳಾದ ವಿದ್ಯಾರ್ಥಿ ವೇತನ, ಗ್ಯಾಸ್ ಸಬ್ಸಿಡಿ ರೋಜ್ಗಾರ ಯೋಜನೆ, ಸ್ತ್ರೀ ಶಕ್ತಿಗಳಲ್ಲದೆ ರೈತರ ಆನ್ಲೈನ್ ವಹಿವಾಟು ಹೀಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಯೋಜನೆಗಾಗಿ ಜನ ಪರದಾಡುವಂತಾಗಿದೆ. ದೇಶದ ಪ್ರಗತಿಯಲ್ಲಿ ಬ್ಯಾಂಕಿಂಗ್ ಪಾತ್ರ ಮಹತ್ವದ್ದು. ಆದರೆ ಭೌಗೋಳಿಕ ಮಟ್ಟದಲ್ಲಿ ಸಾಕಷ್ಟು ಬ್ಯಾಂಕ್ ಶಾಖೆಗಳಿಲ್ಲದೇ ಜನರು ಹೈರಾಣಾಗಿದ್ದಾರೆ.
ಉದಾ: ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಸುತ್ತಮುತ್ತಲ ಪ್ರದೇಶ ಬಿಳಿ ಹತ್ತಿಯನ್ನು ಅರಳಿಸುವ ಕಪ್ಪು ಎರೆಮಣ್ಣನ್ನು ಹೊಂದಿದೆ. ಇಲ್ಲಿನ ಉತ್ಕೃಷ್ಟ ಗು ಮಟ್ಟದ (ಲಾಂಗ್ ಸ್ಟೇಫಲ್ ಹತ್ತಿಯನ್ನು ಗುರುತಿಸಿದ ಬ್ರಿಟಿಷ್ ಆಡಳಿತವು ಅದನ್ನು ಮೆಂಚೆಸ್ಟರ್ಗೆ ರವಾನಿಸುತ್ತಿತ್ತು. ಅದಕ್ಕಾಗಿಯೇ 1905ರಲ್ಲಿ ಇಲ್ಲಿಗೆ ರೇಲ್ವೆ ಸೌಲಭ್ಯ ಒದಗಿಸಲಾಗಿತ್ತು. ಆಗಿನ ಹಣಕಾಸಿನ ವಹಿವಾಟಿಗೆ ಬ್ರಿಟಿಷ್ ಕಾಲದಲ್ಲಿ ಪ್ರಾರಂಭವಾದ ಕಾರ್ಪೋರೇಷನ್ ಬ್ಯಾಂಕ್ ಶಾಖೆ ಬಿಟ್ಟರೆ 1975 ರಲ್ಲಿನ ಮೈಸೂರ್ ಬ್ಯಾಂಕ್ ನಂತರ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಇಲ್ಲಿ ಪ್ರಾರಂಭವಾಗಿಲ್ಲ. ಇತ್ತೀಚಿನ ಗ್ರಾಮೀಣ ಬ್ಯಾಂಕೂ ಸೇರಿ 2013 -14ರಲ್ಲಿ ಅವುಗಳ ವಾರ್ಷಿಕ ವಹಿವಾಟು ಸುಮಾರು 200 ಕೋಟಿ ರುಪಾಯಿ ದಾಟಿದ್ದು ಅದರಲ್ಲಿ 80 ಕೋಟಿ ರುಪಾಯಿ ಸಾಲವನ್ನು ವಿತರಿಸಿವೆ. ಇಷ್ಟೆಲ್ಲ ಆಗಾಧ ವಹಿವಾಟಿಗೆ ಕಾರಣ ಇಲ್ಲಿನ ಕೃಷಿ ಮಾರುಕಟ್ಟೆ. ಜಿಲ್ಲೆಯ 2ನೇ ಅತಿದೊಡ್ಡ ವಹಿವಾಟು ನಡೆಸುತ್ತಿರುವ ಕೃಷಿ ಮಾರುಕಟ್ಟೆಯು 2013-14 ರಲ್ಲಿ 224,59,69,584 ರು. ನಿವ್ವಳ ವಹಿವಾಟು ನಡೆಸಿದೆ. ಈ ವಹಿವಾಟಿಗೆ ತಕ್ಕಂತೆ ಇಲ್ಲಿ ಸಾಕಷ್ಟು ಬ್ಯಾಂಕ್ ಶಾಖೆಗಳೇ ಇಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಪ್ರಸ್ತುತ 174 ಕಮರ್ಷಿಯಲ್ ಬ್ಯಾಂಕುಗಳಲ್ಲಿದ್ದು ಅವುಗಳಲ್ಲಿ ಬಹಳಷ್ಟು ಬಳ್ಳಾರಿ ಮತ್ತು ಹೊಸಪೇಟೆ ನಗರಗಳನ್ನು ಕೇಂದ್ರೀಕರಿಸಿವೆ. ಈಗಿರುವ ಮೂರು ಬ್ಯಾಂಕ್ ಶಾಖೆಗಳಿಗೆ ಯಾವಾಗ ಹೋದರೂ ಒಳಗೆ ಕಾಲಿಡಲು ಆಗದಷ್ಟು ಜನ ಸಂದಣಿ ಇರುತ್ತದೆ. ಗ್ರಾಹಕರು ಆ ಶಾಖೆಗಳ ಆವರಣದಲ್ಲೇ ಆಯುಷ್ಯ ಕಳೆಯಬೇಕಾದ ಅನಿವಾರ್ಯತೆ ಇದೆ. ಹೈ.ಕ ಭಾಗದಲ್ಲಿ 40-42 ಡಿಗ್ರಿ ತಾಪಮಾನದ ಬಿರು ಬೇಸಗೆಯಲ್ಲಿ ಶಾಖೆಗಳ ಒಳಗೆ ಇರಲು ಹಿಂಸೆಯಾಗುತ್ತದೆ. ಕಂಪ್ಯೂಟರೀಕರಣ ನೆಪದಲ್ಲಿ ಸಿಬ್ಬಂದಿ ಖೋತಾ ಮಾಡುವ ಅಧಿಕಾರಿಗಳು ಗ್ರಾಹಕರ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚುಸುತ್ತಿದ್ದಾರೆ. ಗಡಿಭಾಗದ ಅಂಧ್ರದ ಊರುಗಳಲ್ಲಿ ಏರ್ಕೂಲರ್ ಒದಗಿಸುತ್ತಿರುವ ಬ್ಯಾಂಕುಗಳು ಹೈ.ಕ ಭಾಗಕ್ಕೇಕೆ ಮಲತಾಯಿ ಧೋರಣೆ ತೋರಿಸುತ್ತಿವೆ?
ದಿನವಹಿ ಕೋಟಿ ಕೋಟಿ ಹಣ ಚಲಾವಣೆಯಾಗುವ ಕೊಟ್ಟೂರಿನಂತಹ ಹೋಬಳಿಗಳಲ್ಲಿ ಬೇಕೆಂದಾಗ ಬೇಕಾದಷ್ಟು ನಗದು ಸಿಗುವುದೇ ಇಲ್ಲ. ನಗದೀಕರಣಕ್ಕೆ ಹೋದಾಗೆಲ್ಲ ಹೆಚ್ಚಿನ ಹಣ ತರಲು ಸಿಬ್ಬಂದಿ ಶಹರುಗಳಿಗೆ ದೌಡಾಯಿಸಬೇಕಾಗುತ್ತದೆ. ಇಲ್ಲಿನ ಕೃಷಿ ಮಾರುಕಟ್ಟೆಯಲ್ಲಿ ಆನ್ಲೈನ್ ವಹಿವಾಟು ಪ್ರಾರಂಭವಾಗಿದೆಯಲ್ಲದೆ, ಮೆಕ್ಕೆಜೋಳದ ಬೆಂಬಲ ಬೆಲೆಯ ಖರೀದಿಗೂ ಕಾಟನ್ ಕಾರ್ಪೊರೇಷನ್ನ ಹತ್ತಿ ಖರೀದಿಗೂ ಬ್ಯಾಂಕ್ ಮೂಲಕವೇ ಹಣ ಸಂದಾಯ ಇರುವುದರಿಂದ ಬ್ಯಾಂಕುಗಳನ್ನು 'ಮೂಲ ಸೌಕರ್ಯ'ವೆಂದು ಪರಿಗಣಿಸಿ ಆದ್ಯತೆ ಮೇರೆಗೆ ಕೊಟ್ಟೂರಿನಲ್ಲಿ ಇನ್ನೂ ಕನಿಷ್ಠ 5 ಶಾಖೆಗಳನ್ನು ತೆರೆಯಬೇಕಾದ ಜರೂರತ್ತು ಇದೆ. ಮತ್ತಿದು ಅನಿವಾರ್ಯ ಕೂಡ. ಸದಾ ಬರಗಾಲದ ಬವಣೆಯಿಂದ ಗುಳೆಹೋಗುವ ಹೈ.ಕ ಭಾಗದ ಜನರ ಅಭಿವೃದ್ಧಿಯು ಆರ್ಥಿಕ ಸುಧಾರಣೆಯಿಂದ ಮಾತ್ರ ಸಾಧ್ಯ. ಸುತ್ತಮುತ್ತಲ ರೈತರ-ರೈತ ಕೂಲಿಕಾರರ ಏಳಿಗೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆ ತೆರೆಯುವುದರಿಂದ ಸ್ಥಳೀಯವಾಗಿಯೇ ಅವರಿಗೆ ಆರ್ಥಿಕ ಸಬಲೀಕರಣ ಸಾಧಿಸಿಕೊಳ್ಳಲು ಸಹಾಯವಾಗುತ್ತದೆ. ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳಲ್ಪಡುತ್ತಿರುವ ಹಳ್ಳಿಗರು ಬ್ಯಾಂಕಿಂಗ್ ಸೌಲಭ್ಯಕ್ಕಾಗಿ ಮಧ್ಯವರ್ತಿಗಳನ್ನು ಅವಲಂಭಿಸಿರುವುದು ಅನಿವಾರ್ಯ ಸಂಕಟ. ಮಧ್ಯವರ್ತಿಗಳ ಕಾಟ ತಪ್ಪಿಸಿ ನೇರ ವ್ಯವಹಾರ ಕಲ್ಪಿಸಲು ಹಿರಿಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ. ಸಾಲ ಮರುಪಾವತಿ ಆಗುತ್ತಿಲ್ಲ ಎನ್ನುವ ಬ್ಯಾಂಕ್ ಮೆನೇಜರ್ಗಳು ಮಧ್ಯವರ್ತಿಗಳ ಮೂಲಕ ನಿಯಮ ಮೀರಿ ಕಮಿಷನ್ ಪಡೆಯುತ್ತಾ ಸತ್ತವರ ಹೆಸರಿನಲ್ಲೂ ಸಾಲ ನೀಡಿದ ಉದಾಹರಣೆಗಳವೆ!
ಇದಷ್ಟೇ ಅಲ್ಲದೆ ಒಂದೆಡೆ ಗ್ರಾಹಕರಿಂದ ಅಂತರ ಕಾಯ್ದುಕೊಳ್ಳುವ ಅನ್ಯಭಾಷಿಕ ಸಿಬ್ಬಂದಿಗಳ ಹಿಡಿತದಲ್ಲಿ ಬ್ಯಾಂಕುಗಳಿದ್ದರೆ ಇನ್ನೊಂದೆಡೆ ಕನಿಷ್ಠ ಸಂಬಂಧಗಳನ್ನು ಇಟ್ಟುಕೊಳ್ಳದ ಅಧಿಕಾರಿ ವರ್ಗ ಕೇವಲ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸುತ್ತಿದೆ. ಹೆಜ್ಜೆ ಹೆಜ್ಜೆಗೂ ತಾಳ್ಮೆ- ಆತ್ಮೀಯತೆಗಳ ಕೊರತೆಯಲ್ಲೂ ಸಾಕಷ್ಟು ಶಾಖೆ ತೆರೆದು ನಮ್ಮವರೆನಿಸಿಕೊಳ್ಳವುದಕ್ಕೆ ಆದ್ಯತೆ ನೀಡಲಿ.
-ವಿಶ್ವನಾಥ ಅಡಿಗ, ಕೊಟ್ಟೂರು