ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಡೆಂಘೀ ನಿಯಂತ್ರಣಕ್ಕೆ ಆಧುನಿಕ ತಂತ್ರಜ್ಞಾನದಲ್ಲಿದೆ ಪರಿಹಾರ

ಪ್ರತಿ ವರ್ಷ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 50 ದೇಶಗಳಲ್ಲಿ 100 ಮಿಲಿಯನ್ ಜನರನ್ನು...

Rashmi Kasaragodu
Updated On : 4 Jul 2014, 12:55 pm

ಪ್ರತಿ ವರ್ಷ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 50 ದೇಶಗಳಲ್ಲಿ 100 ಮಿಲಿಯನ್ ಜನರನ್ನು  ಕಾಡುತ್ತಿದೆ ಡೆಂಘೀ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಸುಮಾರು 2.57 ಬಿಲಿಯನ್ ಜನರು ಡೆಂಘೀ ಜ್ವರದ ಸೋಂಕಿಗೆ ಸಿಲುಕುವ ಅಪಾಯದಲ್ಲಿರುತ್ತಾರೆ. ಕಳೆದ ಮೂರು-ನಾಲ್ಕು ವರ್ಷಗಳಿಂದ ಆಧುನಿಕ ತಂತ್ರಜ್ಞಾನಾಧಾರಿತ ನಿಯಂತ್ರಣ ವಿಧಾನಗಳು ಡೆಂಘೀ ತಡೆಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುತ್ತಿವೆ. ಆದರೆ ಭಾರತದಂತಹ ಪ್ರಗತಿಪರ ದೇಶ ಮಾತ್ರ ಅಂಥ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳದೇ ದೇಶವಾಸಿಗಳ ಆರೋಗ್ಯ ಕಾಪಾಡುವಲ್ಲಿ ಸಂಪೂರ್ಣವಾಗಿ ಸೋತಿದೆ. ಏಕಾಗಿ ಯಶಸ್ವಿಯಾಗಿರುವ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಭಾರತ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾದ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ.
ಮೊದಲನೆಯ ನಿಯಂತ್ರಣ ವಿಧಾನ: ಆಧುನಿಕ ಜೈವಿಕ ವಿಜ್ಞಾನದ ಮೂಲಕ ಸಂತಾನ ಸಾಮರ್ಥ್ಯವಿಲ್ಲದ ಗಂಡು ಸೊಳ್ಳೆಗಳನ್ನು ಹುಟ್ಟಿಸಿ, ಅವುಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಲಾಗುತ್ತದೆ. ಇದರಿಂದಾಗಿ ಸಂಪೂರ್ಣವಾಗಿ ಸೊಳ್ಳೆಗಳ ನಿಯಂತ್ರಣ ಸಾಧ್ಯ. ಹಿಂದೆ, ಅಂದರೆ ಅರವತ್ತರ ದಶಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಲೇರಿಯಾ ತಡೆಗಟ್ಟಲು ಸಂತಾನ ಸಾಮರ್ಥ್ಯವಿಲ್ಲದ ಸೊಳ್ಳೆಗಳನ್ನು ಸಿದ್ಧಪಡಿಸಲು ಒಂದು ದೊಡ್ಡ ಸಂಶೋಧನಾ ಹೆಜ್ಜೆಯಿಟ್ಟು, ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದಂತೆ ನೂರಾರು ಸಂಶೋಧನಾ ಸಂಸ್ಥೆಗಳಿಗೆ ಹಣ ನೀಡಿತ್ತು. ಆದರೆ ವಿಜ್ಞಾನದ ಜ್ಞಾನ ಮತ್ತು ತಂತ್ರಜ್ಞಾನದ ಮಿತಿಯಿಂದಾಗಿ ಅದರ ಕನಸು ಕೈಗೂಡಿರಲಿಲ್ಲ. ಎಪ್ಪತ್ತು ಮತ್ತು ಎಂಭತ್ತರ ದಶಕದಿಂದ ಬೆಳೆಯುತ್ತಾ ಸಾಗಿದ ಜೈವಿಕ ತಂತ್ರಜ್ಞಾನದಿಂದಾಗಿ ನೂತನ ತಾಂತ್ರಿಕ ಸಾಧನಗಳು ಮತ್ತು ಪರಿಕರಗಳು ಹುಟ್ಟಿಕೊಂಡವು. ಇವುಗಳ ಉಪಯೋಗದಿಂದ ಎಜಟಿಜಡ್ಝ್ಛಿಛಟಟಣ ಜಟ್ಜ್ಝಿಟಿಜಜ್ಠಜಜ ಗಂಡು ಸೊಳ್ಳೆಗಳನ್ನು ಯಶಸ್ವಿಯಾಗಿ ಸೃಷ್ಟಿಸಲು ಸಾಧ್ಯವಾಯಿತು. ಲಂಡನ್ನ ಒಂದು ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆ ಇಂಥ ಸೊಳ್ಳೆಗಳನ್ನು ಸೃಷ್ಟಿಸಿ ಆಫ್ರಿಕಾ ಮತ್ತು ಕೆರೀಬಿಯನ್ ದ್ವೀಪಗಳಲ್ಲಿ 3-4 ವರ್ಷ ಪರೀಕ್ಷೆ ಮಾಡಿ ಇವುಗಳಿಂದ ಡೆಂಘೀ ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸಬಹುದೆಂದು ಸಾಬೀತುಪಡಿಸಿದೆ. ಕಳೆದ ವರ್ಷ ಬ್ರೆಜಿಲ್ ಸರ್ಕಾರ ಈ ತಂತ್ರಜ್ಞಾನವನ್ನು ತನ್ನ ದೇಶಕ್ಕೆ ಆಮದು ಮಾಡಿಕೊಂಡು, ಡೆಂಘೀಕಾರಕ ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಿದ್ಧವಾಗುತ್ತಿದೆ.
ಎರಡನೆಯ ನಿಯಂತ್ರಣ ವಿಧಾನ: ಡೆಂಘೀ ಜ್ವರದ ಹತೋಟಿಗೆ ಲಸಿಕೆ ಬಳಕೆಯೂ ಉತ್ತಮ ಸಾಧನ. ಫ್ರಾನ್ಸ್ನ ಪ್ಯಾರಿಸ್ನಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ಬಹುರಾಷ್ಟ್ರೀಯ ಔಷಧ ಕಂಪನಿ ಖಛಟ್ಟಿಜ್ಝಿ ಏಪ್ರಿಲ್ 2014ರಲ್ಲಿ ತಾನು ತಯಾರಿಸಿದ ಡೆಂಘೀ ಲಸಿಕೆಯ ಮೂರನೇ ಹಂತದ ಕ್ಲೀನಿಕಲ್ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಈ ಲಸಿಕೆ ಮಾರುಕಟ್ಟೆಗೆ ಸದ್ಯದಲ್ಲೇ ಬಂದರೆ, ಡೆಂಘೀ ಜ್ವರದಿಂದ ಬಳಲುತ್ತಿರುವ ಸುಮಾರು ಐವತ್ತರಿಂದ ನೂರು ಮಿಲಿಯನ್ ರೋಗಿಗಳನ್ನು ಸುಲಭವಾಗಿ ಗುಣಪಡಿಸಬಹುದು. ದಕ್ಷಿಣ ಪೂರ್ವ ಏಷಿಯಾದಲ್ಲಿ  ಸುಮಾರು 10,000 ಮಕ್ಕಳಲ್ಲಿ ಶೇಕಡಾ 56ರಷ್ಟು ಮಕ್ಕಳಿಗೆ ಡೆಂಘೀ ಜ್ವರ ಬರದಂತೆ ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಲ್ಯಾಟಿನ್ ಅಮೆರಿಕದಿಂದ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಮುಗಿಸಿದ ನಂತರ ಈ ಲಸಿಕೆಯನ್ನು ಮಾರುಕಟ್ಟೆಗೆ ತರಲು ಕಂಪನಿ ತಯಾರಿ ನಡೆಸುತ್ತಿದೆ. ಸುಮಾರು 20 ವರ್ಷಗಳಿಂದ ಈ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ ಸನೋಫಿ ಕಂಪನಿ. ಈ ಲಸಿಕೆ ಯಾಕೆ ಮುಖ್ಯವಾಗುತ್ತದೆಂದರೆ, ಡೆಂಘೀ ಜ್ವರಕ್ಕೆ ಬೇರೆ ಮದ್ದೇ ಇಲ್ಲ! ಡೆಂಘೀ ತಡೆಗೆ ಸನೋಫಿ ಕಂಪನಿಯ ಲಸಿಕೆಯನ್ನು ಮೂರು ಬಾರಿ ಹಾಕಿಸಿಕೊಳ್ಳಬೇಕಾಗುತ್ತದೆ. ಆದರೆ, ಆರ್ಬೊವ್ಯಾಕ್ಸ್ ಎಂಬ ಅಮೆರಿಕದ ಕಂಪನಿ ಒಂದೇ ಸರತಿ ಚುಚ್ಚುಮದ್ದಿನ ಮೂಲಕ ನೀಡಬಹುದಾದಂತಹ ಲಸಿಕೆಯನ್ನು ಸಧ್ಯದಲ್ಲೇ ಪ್ರಯೋಗ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಲಸಿಕೆಯನ್ನು 2016ರ ವೇಳೆಗೆ ಎಲ್ಲಾ ದೇಶಗಳ ಮಾರುಕಟ್ಟೆಗಳಿಗೆ ಬಿಡಲಾಗುವುದೆಂದು ಅದು ಭರವಸೆ ನೀಡಿದೆ. ಇದು ತಯಾರಾಗಿರುವುದು ರಿಕಾಂಬಿನೆಂಟ್(ಪುನಃ ಸಂಯೋಜಿತ) ಡಿಎನ್ಎ ತಂತ್ರಜ್ಞಾನದಿಂದ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಮೊನ್ನೆಯವರೆಗೂ ಎಷ್ಟೋ ಕಾಯಿಲೆಗಳಿಗೆ ಮದ್ದೇ ಇರಲಿಲ್ಲ. ಬೇರ್ಯಾವ ದಿಕ್ಕು ತೋಚದೆ ಇದ್ದಾಗ ಬೆಳಕಿನಂತೆ ಈ ರಿಕಾಂಬಿನೆಂಟ್ ಡಿಎನ್ಎ ತಂತ್ರಜ್ಞಾನ ಎದುರಾಯಿತು. ಅತ್ಯಂತ ತೀವ್ರ ಗತಿಯಲ್ಲಿ ಈ ತಂತ್ರಜ್ಞಾನದ ಮೂಲಕ ಔಷಧಗಳನ್ನು ಕಂಡು ಹಿಡಿಯಲಾಗುತ್ತಿದೆ. ಈ ಕಾರಣಕ್ಕಾಗಿಯೇ ಆರೋಗ್ಯಕ್ಕೆ ಸಂಬಂಧಪಟ್ಟ ಜೈವಿಕ ತಂತ್ರಜ್ಞಾನಕ್ಕೆ ಪ್ರತಿರೋಧ ಹೆಚ್ಚಾಗಿ ಕಾಣಸಿಗುವುದಿಲ್ಲ! ಇನ್ನು ಬಯೋವುಡಿಕಲ್ ಬಯೋಟೆಕ್ನಾಲಜಿಯ ಬಗ್ಗೆ ಜನಸಾಮಾನ್ಯರಿಗೆ ಅರಿವು ಕಡಿಮೆ. ಹಾಗಾಗೇ ಜೈವಿಕ ತಂತ್ರಜ್ಞಾನದ ವಿರೋಧಿಗಳೂ ಸಹ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಮೊಟ್ಟ ಮೊದಲಿಗೆ ಜನಸಾಮಾನ್ಯವಾದ ರಿಕಾಂಬಿನೆಂಟ್ ಔಷಧ ಅಂದರೆ ಇನ್ಸುಲಿನ್! ಪ್ರಪಂಚದಾದ್ಯಂತ ಮಧುಮೇಹಿಗಳಿಗೆ ಆರ್ಡಿಎನ್ಎ ಇನ್ಸುಲಿನ್ ಉಪಯೋಗಿಸದೇ ವಿಧಿಯೇ ಇಲ್ಲ. ಆದರೂ ಸಹ, ಕೆಲ ಕುತಂತ್ರಿ ಗುಂಪುಗಳು ಇದರ ಬಗ್ಗೆ ತಕರಾರೆತ್ತಿದ್ದಾರೆ. ಸದ್ಯಕ್ಕೆ ವಿರೋಧಿಗಳ ಹಾವಳಿ ಅಷ್ಟೊಂದು ಬಲ ಪಡೆದುಕೊಂಡಿಲ್ಲ. ಇಂಥವರ ಅಪಪ್ರಚಾರದಿಂದಾಗಿಯೇ ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ತನ್ನ ಒಂದು ಹೇಳಿಕೆಯಲ್ಲಿ ಜನರು rDNA ಇನ್ಸುಲಿನ್ ಬಗ್ಗೆ ವಿನಾಕಾರಣ ಆತಂಕಗೊಳ್ಳಬಾರದೆಂದು ಮನವಿ ಮಾಡಿತ್ತು. ಅಂದ ಹಾಗೆ, ಅಮೆರಿಕದಲ್ಲಿ, ಸುಮಾರು 25 ವರ್ಷದಿಂದ ಕೆಲ ಲಸಿಕೆ-ವಿರೋಧಿ ಗುಂಪುಗಳು ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂದು ಗುಲ್ಲೆಬ್ಬಿಸಿ, ಅದನ್ನು ಬಂದ್ ಮಾಡಬೇಕೆಂದು ಹೋರಾಡುತ್ತಿವೆ! ಅಲ್ಲದೆ ಕೆಲವು ವಿಜ್ಞಾನಿಗಳಿಗೆ ಜೀವಭಯವನ್ನೂ ಒಡ್ಡುತ್ತಿವೆ. ಈ ವಿರೋಧಿ ಗುಂಪುಗಳು ಇನ್ನೇನು ಆವಾಂತರ ಮಾಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.
ನಾನೂ ಸಹ ಕಳೆದ ನವೆಂಬರ್ -ಡಿಸೆಂಬರ್ನಲ್ಲಿ ಬೆಂಗಳೂರಿಗೆ ಬಂದಿದ್ದಾಗ ಡೆಂಘೀ ಜ್ವರಕ್ಕೆ ತುತ್ತಾಗಿ ಹದಿನೈದು ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಆವಾಗ, ಡೆಂಘೀ ಜ್ವರದ ಬಗ್ಗೆ ವಿಷಯ ಸಂಗ್ರಹಣೆ ಮಾಡಿದೆ. ಇನ್ನೊಂದು ವಿಷಯ. ಭಾರತದಿಂದ ಅಮೆರಿಕ ದೇಶಕ್ಕೆ ವಲಸೆ ಬಂದು Florida Internationalನಲ್ಲಿ ಸಂಶೋಧಕರಾಗಿರುವ ನನ್ನ ಸ್ನೇಹಿತ ಪ್ರೊ. ಹೆನ್ರಿ ಡೇನಿಯಲ್ (ಮೂಲತಃ ತಮಿಳುನಾಡಿನವರು) ಡೆಂಘೀ ಜ್ವರ ಉಂಟು ಮಾಡುವ ವೈರಾಣುವಿನಿಂದ ಬೇರ್ಪಡಿಸಲ್ಪಟ್ಟ ಒಂದು ಸಣ್ಣ ಪ್ರೊಟೀನ್ ಹೊರಪದರವನ್ನು ಕುಲಾಂತರಿ ತಂತ್ರಜ್ಞಾನದಿಂದ ಎಲೆ ತರಕಾರಿಯೊಂದರಲ್ಲಿ ಅಳವಡಿಸಿ ಬೆಳೆಸಿದ್ದಾರೆ. ಇದರ ಪ್ರಯೋಜನವೆಂದರೆ, ಚುಚ್ಚುಮದ್ದಿಗೆ ಬದಲಾಗಿ ಈ ಕುಲಾಂತರಿ Lettuceನ್ನು ತಿಂದರೆ ಸಾಕು. ಲಸಿಕೆಯ ಉಪಯೋಗವನ್ನು ಪಡೆದುಕೊಳ್ಳಬಹುದು! ಭಾರತದಂತಹ ದೇಶಗಳಲ್ಲಿ ರೆಫ್ರಿಜರೇಟರ್ಗಳೇ ಇಲ್ಲದೆ ಲಸಿಕೆಯನ್ನು ಸಂಗ್ರಹಿಸಿಡಬಹುದು ಹಾಗೂ ದೇಶದ ಮೂಲೆ ಮೂಲೆಗಳಿಗೆ ಇದನ್ನು ಕಡಿಮೆ ಖರ್ಚಿನಲ್ಲಿ ತಲುಪಿಸಬಹುದು. ಆದರೆ, ಈ ಕುಲಾಂತರಿ ಲಸಿಕೆ ಮಾರುಕಟ್ಟೆಗೆ ಬರಬೇಕಾದರೆ ದಶಕಗಳೇ ಆಗಬಹುದು. ಏಕೆಂದರೆ ಕುಲಾಂತರಿ ಔಷಧಗಳನ್ನು ತರಕಾರಿ, ಹಣ್ಣುಗಳಲ್ಲಿ ಅಳವಡಿಸಬೇಕೆಂದರೆ ಮೊದಲು ಅರ್ಥವಿಲ್ಲದ ಅನೇಕ ಕಾಯಿದೆಗಳು ಇಲ್ಲವಾಗಬೇಕಾಗುತ್ತದೆ.



-  ಡಾ. ಎಸ್. ಶಾಂತಾರಾಮ್
shanthus@iastate.edu


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement