ಪ್ರತಿರೋಧ: ಸರ್ಕಾರ ಆರೋಗ್ಯ ಭಾಗ್ಯ ಕಿತ್ತುಕೊಂಡಿದ್ದೇಕೆ?
ಅನಾರೋಗ್ಯ ನಗರದ ನಿಶ್ಚಿತ ಸಂಬಳದ...
ಅನಾರೋಗ್ಯ. ನಗರದ ನಿಶ್ಚಿತ ಸಂಬಳದ ವರ್ಗವನ್ನೇ ದಿಕ್ಕೆಡಿಸುವ ಪದ ಇದು. ಈ ಕಾಲದಲ್ಲಿ ರೋಗ ಆವರಿಸಿತೆಂದರೆ ನೆಮ್ಮದಿ, ಉಳಿತಾಯದ ಹಣ ಎರಡೂ ಕರಗಿಹೋಗುತ್ತವೆ. ಹೀಗಿರುವಾಗ ಹಳ್ಳಿಗಳಲ್ಲಿನ ಆರೋಗ್ಯ ವ್ಯವಸ್ಥೆ ಚಿತ್ರಣ ಯಾರಾದರೂ ಊಹಿಸಿಕೊಳ್ಳಬಹುದು. ಇಂತಿರುವಾಗ ಗ್ರಾಮೀಣರ ಆರೋಗ್ಯಕ್ಕೆಂದು ರೂಪಿಸಲಾಗಿದ್ದ ಸವಲತ್ತನ್ನು ಸರ್ಕಾರ ನಿಲ್ಲಿಸುತ್ತಿರುವುದನ್ನು ಸಹಿಸುವುದಕ್ಕೆ ಹೇಗೆ ಸಾಧ್ಯ?
ರಾಜ್ಯದ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕವಚವಾಗಿದ್ದ ಸಂಚಾರಿ ಆರೋಗ್ಯ ಘಟಕ ಸ್ಥಗಿತಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಅಸ್ತಿತ್ವಕ್ಕೆ ಬಂದ ಈ ಯೋಜನೆ ಗುಡ್ಡಗಾಡು ಪ್ರದೇಶದ ಜನರ ಸಂಜೀವಿನಿಯಾಗಿ ಪರಿಣಮಿಸಿತ್ತು. ಅಂತಹ ಯೋಜನೆ ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರ ಗ್ರಾಮೀಣ ಪ್ರದೇಶದ ಬಡ ಜನರಿಗೆ ನೀವು ನಮಗೆ ಲೆಕ್ಕಕ್ಕಿಲ್ಲ ಅಂತ ಅಣಕಿಸಿದಂತಾಗಿದೆ.
ವಿಶ್ವಸಂಸ್ಥೆಯ ಮಿಲೇನಿಯಂ ಗೋಲ್ ತತ್ವದಡಿ 'ಎಲ್ಲರಿಗೂ ಆರೋಗ್ಯ, ಯಾವಾಗಲೂ ಆರೋಗ್ಯ' ಎನ್ನುವ ಘೋಷವಾಕ್ಯದೊಂದಿಗೆ ಆರಂಭಗೊಂಡ ಯೋಜನೆ ಜನಪ್ರಿಯವೂ ಆಯಿತು. ಕೇವಲ ಐದು ಜಿಲ್ಲೆಗಳಿಗೆ ಪ್ರಾಯೋಗಿಕವಾಗಿ 2008ರಲ್ಲಿ ಆರಂಭಿಸಲಾದ ಯೋಜನೆಯನ್ನು ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಯಿತು. ಒಂದು ಹಂತದಲ್ಲಿ 110 ಸಂಚಾರಿ ಆರೋಗ್ಯ ಘಟಕಗಳಿದ್ದವು. ಪ್ರಚಲಿತ 107 ಘಟಕ ಕಾರ್ಯ ನಿರ್ವಹಿಸುತ್ತಿದ್ದವು. ಹಿಂದಿನ ಸರ್ಕಾರ ನಂಜುಂಡಪ್ಪ ಆಯೋಗದ ವರದಿಯನ್ನಾಧರಿಸಿ ಹಿಂದುಳಿದ ಮತ್ತು ಅತಿ ಹಿಂದುಳಿದ ಪ್ರದೇಶಗಳಿಗೆ ಯೋಜನೆ ಲಭ್ಯವಾಗಬೇಕೆಂದು ಬಯಸಿತ್ತು. ಯೋಜನೆಯ ಯಶಸ್ಸನ್ನು ಗಮನಿಸಿದ ಅಂದಿನ ಸರ್ಕಾರ ಯೋಜನೆಯ ವಿಸ್ತರಣೆಗೂ ಮುಂದಾಯಿತು. ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆಯೇ ಯೋಜನೆಗೆ ಅಡ್ಡಗಾಲಿಕ್ಕಲು ಪ್ರಾರಂಭಿಸಿತು. 2013ರ ಅಗಸ್ಟ್ನಲ್ಲಿ ಯೋಜನೆ ಸ್ಥಗಿತಗೊಳಿಸುವ ಸೂಚನೆ ಹೊರಬಿದ್ದಿತ್ತು. ಆದರೆ ಸಾರ್ವಜನಿಕರ ತೀವ್ರ ವಿರೋಧವನ್ನು ಗಮನಿಸಿದ ಸರ್ಕಾರ ಅಲ್ಲಿಗೇ ತಣ್ಣಗಾಯಿತು.
ಚಾಮರಾಜನಗರ, ಉತ್ತರ ಕನ್ನಡ, ಶಿವಮೊಗ್ಗ, ಅವಿಭಜಿತ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಳಗಾವಿ ಇಂತಹ ಜಿಲ್ಲೆಗಳಲ್ಲಿ ಗುಡ್ಡಗಾಡು ಪ್ರದೇಶಗಳೇ ಜಾಸ್ತಿ. ಆದಿವಾಸಿಗಳು, ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್-ಕರ್ನಾಟಕದ ಜಿಲ್ಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಅಂತಹವರ ಆರೋಗ್ಯದ ಗುಣಮಟ್ಟ ಕಾಪಾಡಲು ಗ್ರಾಮೀಣ ಆರೋಗ್ಯ ಸಂಚಾರಿ ಘಟಕ ತನ್ನದೇ ಆದ ಕೊಡುಗೆ ನೀಡುತ್ತಿತ್ತು. ಮಧುಮೇಹ, ಅಸ್ತಮಾ, ರಕ್ತದೊತ್ತಡ ಇಂತಹ ಗುಣಪಡಿಸಲಾಗದ ಮತ್ತು ದೀರ್ಘಕಾಲೀನ ರೋಗಗಳಿಗೆ ಸಂಚಾರಿ ಆರೋಗ್ಯ ಘಟಕದ ನೆರವಿನಲ್ಲಿ ಮನೆ ಬಾಗಿಲಿಗೆ ಉಚಿತ ಔಷಧಗಳನ್ನು ನೀಡಲಾಗುತ್ತಿತ್ತು. ಅಷ್ಟರ ಮಟ್ಟಿಗೆ ಹಿಂದುಳಿದವರ, ಬಡಜನರ ಆರೋಗ್ಯದ ಗುಣಮಟ್ಟ ಸುಧಾರಿಸಿತ್ತು ಎಂದೇ ಹೇಳಬಹುದು.
ಸಂಚಾರಿ ಆರೋಗ್ಯ ಘಟಕದ ಸೇವೆಯನ್ನು ರಾಜ್ಯದ ಆಯ್ದ ಸ್ವಯಂಸೇವಾ ಸಂಸ್ಥೆಗಳಿಗೆ ನೀಡಲಾಗಿತ್ತು. ತಾಲೂಕಿಗೊಂದರಂತೆ ಸುಸಜ್ಜಿತ ಅಂಬ್ಯುಲೆನ್ಸ್ ಹೊಂದಿರಬೇಕು. ಇದರಲ್ಲಿ ಜೀವರಕ್ಷಕ ಔಷಧಗಳು, ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಎಲ್ಲ ರೀತಿಯ ಔಷಧ ಮತ್ತು ಪರಿಕರಗಳು, ಪ್ರಾಥಮಿಕ ಪರೀಕ್ಷೆಗೆ ಬೇಕಾಗುವ ಪ್ರಯೋಗಾಲಯ, ಒಬ್ಬರು ನುರಿತ ವೈದ್ಯರು, 2 ಸ್ಟಾಫ್ ನರ್ಸ್, ಒಬ್ಬ ಔಷಧ ವಿತರಕ, ಒಬ್ಬ ಪ್ರಯೋಗಾಲಯ ತಜ್ಞ ಹಾಗೂ ಆರೋಗ್ಯ ಸಹಾಯಕರು ಇರಬೇಕೆನ್ನುವ ಷರತ್ತಿನೊಂದಿಗೆ ಯೋಜನೆ ಗುತ್ತಿಗೆ ನೀಡಲಾಗಿತ್ತು. ಇದರ ಫಲಾನುಭವಿಗಳಲ್ಲಿ ವೃದ್ಧರು, ಅಶಕ್ತರು, ಮಹಿಳೆಯರು, ವಿಶೇಷವಾಗಿ ಗರ್ಭಿಣಿಯರು ಮತ್ತು ಬಾಣಂತಿಯರು, ಅಂಗವಿಕಲರು, ಕೃಷಿ ಕೂಲಿ ಕಾರ್ಮಿಕರು, ಚಿಕ್ಕ ಮಕ್ಕಳು ಇದ್ದಾರೆ. ನವಜಾತ ಶಿಶುಗಳಿಗೆ ಸಾಂದರ್ಭಿಕವಾಗಿ ಅಗತ್ಯದ ಲಸಿಕೆ ಹಾಕುವ ಉದ್ದೇಶವನ್ನೂ ಈ ಯೋಜನೆಯಲ್ಲಿ ಅಳವಡಿಸಲಾಗಿತ್ತು. ಸಂಚಾರಿ ಆರೋಗ್ಯ ಘಟಕದ ಯೋಜನೆ ಗ್ರಾಮೀಣ ಪ್ರದೇಶದಕ್ಕೆ ತಲುಪುತ್ತಿದ್ದಂತೆಯೇ ಫಲಾನುಭವಿಗಳು ಅಧಿಕಗೊಂಡರು. ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಸಂಚಾರಿ ಆರೋಗ್ಯ ಘಟಕ ತಲುಪುತ್ತಿದ್ದಂತೆಯೇ ಜನ ಒಂದಿಲ್ಲೊಂದು ಕಾಯಿಲೆಗೆ ಚಿಕಿತ್ಸೆ ಪಡೆಯಲು ಬರುತ್ತಿರುವುದು ಸಾಮಾನ್ಯ ಎನ್ನುವಂತಾಗಿತ್ತು. ಚಿಕಿತ್ಸಾ ಕೇಂದ್ರದ ಸುತ್ತಲಿನ 2-3 ಕಿ.ಮೀ. ದೂರದವರೆಗಿನ ಜನರು ಇದರ ಪ್ರಯೋಜನ ಪಡೆಯುತ್ತಲಿದ್ದರು.
ಗ್ರಾಮದ ಅಂಗನವಾಡಿ ಕೇಂದ್ರಗಳು, ಶಾಲಾ ಆವಾರ, ಸಾರ್ವಜನಿಕ ಸ್ಥಳಗಳು, ಸ್ಥಳೀಯವಾಗಿ ನೀಡಲಾದ ಮನೆಗಳು, ಪಂಚಾಯಿತಿ ಕಟ್ಟಡಗಳು ಹೀಗೆ ಗ್ರಾಮಗಳಲ್ಲಿ ಲಭ್ಯವಿರುವ ಸ್ಥಳಗಳಲ್ಲಿ ಸೇವೆ ನೀಡಲಾಗುತ್ತಿತ್ತು. ಈ ರೀತಿ ರಾಜ್ಯಾದ್ಯಂತ ಈಗ 107 ಸಂಚಾರಿ ಆರೋಗ್ಯ ಘಟಕಗಳು ಸುಮಾರು 1300 ಕೇಂದ್ರಗಳಲ್ಲಿ ಕುಗ್ರಾಮಗಳ ಜನರಿಗೆ ಸೇವೆ ನೀಡುತ್ತಿದ್ದು, ಪ್ರತಿ ತಿಂಗಳು ಒಂದೊಂದು ಘಟಕ 1500ರಿಂದ 3000 ರೋಗಿಗಳಿಗೆ ಸೇವೆ ಒದಗಿಸುತ್ತಿದ್ದವು. 2008ರಿಂದ ಹಂತ ಹಂತವಾಗಿ ವಿಸ್ತರಿಸಿದ ಈ ಯೋಜನೆಯಿಂದ ಈವರೆಗೆ ಸುಮಾರು 85 ಲಕ್ಷಕ್ಕೂ ಹೆಚ್ಚು ಕಾಯಿಲೆ ಪೀಡಿತರಿಗೆ ಚಿಕಿತ್ಸೆ ನೀಡಲಾಗಿದೆ.
ಸಿದ್ದಿಗಳು, ಕುಣಬಿಗಳು, ಗೌಳಿಗರು, ಹಾಲಕ್ಕಿ, ಸೋಲಿಗರು, ಜೇನು ಕುರುಬರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಸಂಚಾರಿ ಆರೋಗ್ಯ ಘಟಕದ ಗರಿಷ್ಠ ಸೌಲಭ್ಯ ಪಡೆದುಕೊಳ್ಳುತ್ತಿದ್ದರು. ಗುಡ್ಡಗಾಡು ಪ್ರದೇಶಗಳಲ್ಲಿ ದುರ್ಗಮವಾದ ರಸ್ತೆಗಳಲ್ಲಿಯೂ ಸಂಚಾರಿ ಆರೋಗ್ಯ ಘಟಕ ತನ್ನ ಸೇವೆಯನ್ನು ನಿರಂತರವಾಗಿ ನೀಡುತ್ತಿರುವ ಕಾರಣದಿಂದಾಗಿ ಜನರಿಗೆ ಇನ್ನಷ್ಟು ಹತ್ತಿರವಾಯಿತು. ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಸಿಗಲಾರದ ಔಷಧೋಪಚಾರಗಳು ಸಂಚಾರಿ ಆರೋಗ್ಯ ಘಟಕದಲ್ಲಿ ಲಭ್ಯವಾಗುತ್ತಿರುವುದೇ ಜನರ ಆರೋಗ್ಯ ಸುಧಾರಣೆಗೆ ಮೂಲ ಮಂತ್ರವಾಯಿತು. ನಿಗದಿ ಪಡಿಸಿದ ದಿನದಂದೆ ಔಷಧೋಪಚಾರ ಸೇವೆ ದೊರಕುತ್ತದೆ ಎನ್ನುವ ವಿಶ್ವಾಸವೂ ಆರೋಗ್ಯ ವೃದ್ಧಿಗೆ ಕಾರಣವಾಯಿತು. ಕುಂಭದ್ರೋಣ ಮಳೆಯಲ್ಲೂ ಸಂಚಾರಿ ಆರೋಗ್ಯ ಘಟಕದ ಸೇವೆ ಜನರಿಗೆ ಸುಲಭದಲ್ಲಿ ಲಭ್ಯವಾಗುತ್ತಿತ್ತು ಎಂದು ಕುಗ್ರಾಮಗಳ ನಿವಾಸಿಗಳು ಹೇಳುತ್ತಾರೆ.
ಗ್ರಾಮೀಣ ಪ್ರದೇಶದ ಅದರಲ್ಲೂ ಕುಗ್ರಾಮಗಳ ಜನರಿಗೆ ಸುಲಭದಲ್ಲಿ ಸಿಗುತ್ತಿದ್ದ ಯೋಜನೆಯನ್ನು ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಸ್ಥಗಿತಗೊಳಿಸಿರುವ ಸರ್ಕಾರದ ನಿರ್ಧಾರ ಹಲವಾರು ಸಂಶಯಕ್ಕೂ ಎಡೆಮಾಡಿಕೊಟ್ಟಿದೆ. ಸರ್ಕಾರವೇ ಮಾನವೀಯತೆ ಮರೆತರೆ ಹೇಗೆ ಎನ್ನುವ ಪ್ರಶ್ನೆಗೂ ಉತ್ತರ ಸಿಗಬೇಕಾಗಿದೆ. ಈ ಸ್ಥಗಿತ ನಿರ್ಧಾರದ ಮೂಲಕ ಬಿಟ್ಟ ಭಾಗ್ಯಗಳ ಮಂಕುಬೂದಿ ಎರಚುವುದಕ್ಕೆ ಮೀರಿದ ಬಡವರ ಕಾಳಜಿ ತನಗಿಲ್ಲ ಎಂದು ಇವರೇ ಸಾರಿದಂತಿದೆಯಲ್ಲವೇ? ಸರ್ಕಾರದ ಅದರಲ್ಲೂ ವಿಶೇಷವಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂಲಗಳ ಪ್ರಕಾರ ಒಟ್ಟಾರೆ ಇಡೀ ಯೋಜನೆಯನ್ನು ಆಂಧ್ರಪ್ರದೇಶದ ಸಂಘ ಸಂಸ್ಥೆಗಳಿಗೆ ಹಸ್ತಾಂತರಿಸುವ ಹುನ್ನಾರ ಅಡಗಿದೆ ಎನ್ನುವುದು ಇನ್ನಷ್ಟು ಆಘಾತಕಾರಿ ಸಂಗತಿ. ರಾಜ್ಯದಲ್ಲಿರುವ ಈ ಯೋಜನೆಯ ಗುತ್ತಿಗೆ ಪಡೆದ ಸಂಘ ಸಂಸ್ಥೆಗಳ ಮೇಲೆ ಅಧಿಕಾರಿಗಳು ಕೆಂಗಣ್ಣು ಬೀರಿದ್ದಾರೆ. ಒಂದಿಲ್ಲೊಂದು ನೆಪವೊಡ್ಡುತ್ತ ಮಾಸಿಕವಾಗಿ ನೀಡಬೇಕಾದ ಗುತ್ತಿಗೆ ಹಣವನ್ನು ಪಾವತಿಸದೆ ಸತಾಯಿಸಲಾಗುತ್ತದೆ. ಹಣ ಪಾವತಿಗಾಗಿ ಸಂಘ ಸಂಸ್ಥೆಗಳು ಅಡ್ಡದಾರಿಗಿಳಿಯುವಂತೆ ಅಧಿಕಾರಿಗಳೆ ಪ್ರೇರೇಪಿಸುತ್ತಾರೆ ಎನ್ನುವ ದೂರೂ ಇದೆ. ಆಡಳಿತ ಯಂತ್ರದಲ್ಲಿಯ ದ್ವಂದ್ವ ನಿಲುವೇ ಯೋಜನೆಯ ಸ್ಥಗಿತದಲ್ಲಿ ಪಾಲು ಪಡೆದಿವೆ.
ರಾಜಧಾನಿಯಲ್ಲಿ ಕುಳಿತು ಯೋಜನೆ ಸ್ಥಗಿತಗೊಳಿಸುವ ಆದೇಶ ಹೊರಡಿಸುವ ಅಧಿಕಾರಿಗಳಿಗೆ ಗ್ರಾಮೀಣ ಪ್ರದೇಶದ ಮತ್ತು ಬಡಜನರ ಆರೋಗ್ಯದ ಬಗೆಗೆ ಕಿಂಚಿತ್ ಕಾಳಜಿಯೂ ಇಲ್ಲ ಎನ್ನುವ ಟೀಕೆ ಇಂದು ನಿನ್ನೆಯದಲ್ಲ. ಆದಾಗ್ಯೂ ಅಧಿಕಾರಿಗಳು ಸುಧಾರಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವುದು ಈ ಆದೇಶದಿಂದ ವ್ಯಕ್ತಗೊಂಡಿದೆ. ಅದೇ ರೀತಿ ನಮ್ಮ ಜನಪ್ರತಿನಿಧಿಗಳಿಗೆ ಯಾವ ಯಾವ ಯೋಜನೆಗಳಿವೆ ಮತ್ತು ಅದರಿಂದ ಯಾರು ಸೌಲಭ್ಯ ಪಡೆಯುತ್ತಾರೆ ಅಥವಾ ವಂಚಿತರಾಗುತ್ತಾರೆ ಎನ್ನುವ ಸ್ಪಷ್ಟ ಕಲ್ಪನೆ ಇನ್ನೂ ಬಾರದಿರುವುದು ಜನಸಾಮಾನ್ಯರ ದುರದೃಷ್ಟ. ಈ ಕಾರಣಕ್ಕಾಗಿಯೇ ಗ್ರಾಮೀಣ ಆರೋಗ್ಯ ಸಂಚಾರಿ ಘಟಕದ ಕುರಿತಂತೆ ಜನಪ್ರತಿನಿಧಿಗಳು ಬಾಯಿ ಬಿಡುತ್ತಿಲ್ಲ. ರಾಜ್ಯದ ಪ್ರತಿ ತಾಲೂಕಿನಲ್ಲೂ ಪ್ರಾರಂಭವಾಗಬೇಕಿದ್ದ ಇಂತಹ ಯೋಜನೆಗಳನ್ನು ಏಕಾಏಕಿ ನಿಲ್ಲಿಸಲಾಗುತ್ತದೆ ಎಂದಾದರೂ ಬಾಯಿ ಬಿಡಲು ಹಿಂದೆ ಮುಂದೆ ನೋಡುತ್ತಾರೆ. ಗಟ್ಟಿ ಧ್ವನಿಯಲ್ಲಿ ಸರ್ಕಾರದ ಇಂತಹ ನಿರ್ಧಾರಗಳನ್ನು ಪ್ರಶ್ನಿಸಿದ್ದೇ ಆದರೆ ಆಡಳಿತದ ಚುಕ್ಕಾಣಿ ಹಿಡಿದವರೂ ಜಾಗೃತರಾಗುತ್ತಾರೆ. ಅಧಿಕಾರಿಗಳೂ ಎಚ್ಚೆತ್ತುಕೊಳ್ಳುತ್ತಾರೆ.
ಈ ಯೋಜನಾನುಷ್ಠಾನಕ್ಕೆ ಸಮರ್ಥ, ದಕ್ಷ ಹಾಗೂ ಸೇವಾ ಮನೋಭಾವನೆಯ ಸ್ವಯಂಸೇವಾ ಸಂಸ್ಥೆಗಳ ಆಯ್ಕೆಯಲ್ಲಿ ಸರ್ಕಾರ ಎಡವಿದೆ. ಆರಂಭದಿಂದಲೂ ಸಂಚಾರಿ ಆರೋಗ್ಯ ಘಟಕಗಳ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ಮಾಡದೇ ಅನುಷ್ಠಾನ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ನಿಷ್ಕಾಳಜಿ ತೋರಿಸಿರುವುದು ಹಾಗೂ ಹೊಂದಾಣಿಕೆ ಮಾಡಿಕೊಂಡಿರುವುದು, ಯೋಜನೆಗೆ ನೀಡಬೇಕಾದ ಪ್ರಾಮುಖ್ಯವನ್ನು ಅರ್ಥ ಮಾಡಿಕೊಳ್ಳದೇ ಅಸಮರ್ಪಕ ಹಾಗೂ ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುವ ನಿಷ್ಕ್ರಿಯ ಅಧಿಕಾರಿಗಳು, ಕ್ರಮ ಕೈಗೊಂಡು ನಿಗಾ ವಹಿಸಬೇಕಾದ ವಿಭಾಗದಲ್ಲಿ ಅಧಿಕಾರಿಗಳು ಮೇಲಿಂದ ಮೇಲೆ ಬದಲಾವಣೆ ಆಗುತ್ತಿರುವುದು, ಅಧಿಕಾರಿಗಳಲ್ಲೇ ಹೊಂದಾಣಿಕೆ ಇರದೆ ವೈಯಕ್ತಿಕ ಪ್ರತಿಷ್ಠೆಗಾಗಿ ತಪ್ಪು ತೀರ್ಮಾನಗಳು ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಅನುಭವಿ ಸಂಘ, ಸಂಸ್ಥೆಗಳನ್ನು ಕಡೆಗಣಿಸಿ ತಮಗೆ ಬೇಕಾದ ಕಂಪನಿಗಳಿಗೆ ಮಣೆ ಹಾಕುವ ಮೂಲಕ ತಪ್ಪು ಹೆಜ್ಜೆ ಇಡಲಾಗಿದೆ. ಇಂತಹ ಹಲವಾರು ನ್ಯೂನತೆಗಳನ್ನು ಸರಿಪಡಿಸುವ ಬದಲು, ಪರ್ಯಾಯ ವ್ಯವಸ್ಥೆಯನ್ನೂ ಮಾಡದೆ ಸಾರಾಸಗಟಾಗಿ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಸರ್ಕಾರದ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ.
- ವಿಶ್ವಾಮಿತ್ರ ಹೆಗಡೆ
ಕನ್ನಡಪ್ರಭ