ಅಂಕಣಗಳು

ಸಿದ್ದರಾಮಯ್ಯ ನಾಲ್ಕು ವರ್ಷ ಇರ್ತಾರೆ

ಕಳೆದ ಒಂದು ವರ್ಷದಲ್ಲಿ ಗಂಭೀರವಾದ ರೀತಿಯಲ್ಲಿ ಯಾರೂ ಸಿದ್ದರಾಮಯ್ಯ ಅವರ ...

ಕಳೆದ ಒಂದು ವರ್ಷದಲ್ಲಿ ಗಂಭೀರವಾದ ರೀತಿಯಲ್ಲಿ ಯಾರೂ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅಧಿಕಾರದ ಅವಧಿಯ ವಿಚಾರವನ್ನು ಪ್ರಸ್ತಾಪಿಸಿರಲಿಲ್ಲ. 2013ರ ವಿಧಾನ ಸಭೆ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಿದ್ದು ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ. ಬಹುಜನ ಸಮಾಜದ, ಜನಸಾಮಾನ್ಯ ವರ್ಗಗಳು ಮತ ನೀಡಿದ್ದೂ ಸಿದ್ದರಾಮಯ್ಯ ಅವರಿಗೇ. ಅದು ಪ್ರಚಾರದ ಮಾತಲ್ಲ. ಅಂದಿನ ವಾಸ್ತವ.
 ಹೀಗಾಗಿ ಚುನಾವಣೆಯಲ್ಲಿ ನಿರ್ಣಾಯಕವಾಗಿ ಗೆದ್ದ ಅನಂತರ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಯಾರೂ ಅವರಿಗೆ ಯಾವ ಷರತ್ತುಗಳನ್ನು ವಿಧಿಸಿರಲಿಲ್ಲ. ಎಲ್ಲರೂ ಭಾವಿಸಿದ್ದು 2018ರ ಮೇ ತಿಂಗಳವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದೇ.  ಅದೇನೂ ತಾನೇ ತಾನಾಗಿ ಮೂಡಿಬಂದ ಮಾತಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಹೊಸಬರಾದರೂ, ಆ ಪಕ್ಷದ ಸಂಸ್ಕೃತಿಯನ್ನು ಈಗ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಾಲ್ಕು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಅವರು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ.
 ಅವರ ಆ ಅವಧಿಯ ದೊಡ್ಡ ಸಾಧನೆ ಎಂದರೆ, ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ದೊಡ್ಡ ಪಾದಯಾತ್ರೆ ನಡೆಸಿದ್ದು. ಆಗಿನ ಪ್ರಚಾರವೇ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕಂಟಕವಾಗಿದ್ದು.
 ಇನ್ನು ಸಿದ್ದರಾಮಯ್ಯ ಅವರ ರಾಜಕೀಯ, ಸಾಮಾಜಿಕ ನ್ಯಾಯದ ನಂಬಿಕೆಗಳೂ ರಹಸ್ಯವಾಗಿರಲಿಲ್ಲ. ರಾಜಕೀಯವಾಗಿ ಸಮತಾವಾದಕ್ಕೆ  ಹತ್ತಿರವಾಗಿದ್ದವರು. ಸಾಮಾಜಿಕ ನ್ಯಾಯ ವಿತರಣೆಯ ವಿಚಾರದಲ್ಲಿ ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಮುದಾಯಗಳ ಕೂಟ ವ್ಯವಸ್ಥೆಯ ರಚನೆಗೆ ಪ್ರಯತ್ನಿಸಿದವರು. ಆದರೂ "ಅಹಿಂದ" ಕೂಟದ ಸಂಸ್ಥಾಪಕರಲ್ಲಿ ಸಿದ್ದರಾಮಯ್ಯ ಇರಲಿಲ್ಲ. ಆ ಕೀರ್ತಿ ಹಿರಿಯ ಕಾಂಗ್ರೆಸ್ಸಿಗ, ಆರ್.ಎಲ್. ಜಾಲಪ್ಪ ಅವರಿಗೇ ಸಲ್ಲಬೇಕು.
 ಕಾಂಗ್ರೆಸ್ಸಿನಲ್ಲೇ ಅನೇಕ ನಾಯಕರು ಹಿಂದೆ ಸಿದ್ದರಾಮಯ್ಯ ಅವರ ಪರವಾಗಿ ನಡೆಸಿದ ಅಹಿಂದ ಮಹಾಮೇಳಗಳನ್ನು ಟೀಕಿಸಿದ್ದರು. ಕೆಲವರು ಬಹಿರಂಗವಾಗಿಯೇ ಈ ಚಳವಳಿಯಿಂದ ಜಾತಿ ಜಾತಿಗಳ ನಡುವಣ ಸಂಘರ್ಷ ಅನಿವಾರ್ಯ ಎಂದು ತಿಳಿದು ಕಾಂಗ್ರೆಸ್ ವರಿಷ್ಠರಿಗೇ ದೂರು ನೀಡಿದ್ದರು.  ಆಗ ಅನೇಕರು ವ್ಯಕ್ತಪಡಿಸಿದ್ದ, ಆದರೆ ಹೆಚ್ಚು ಪ್ರಚಾರ ಸಿಗದೇ ಇದ್ದ ಒಂದು ವಿಚಾರ ಎಂದರೆ ಅಹಿಂದ ಆಂದೋಲನವನ್ನು ನಿಜವಾದ ಸಾಮಾಜಿಕ ನ್ಯಾಯವಿತರಣೆಯ ಹಿನ್ನೆಲೆಯಲ್ಲಿ ನಡೆಸದೇ ಹೋದರೆ, ಆ ಗುಂಪಿನ ಬಲಿಷ್ಠ ಹಾಗೂ ಅಧಿಕ ಸಂಖ್ಯಾಬಲದ ಜಾತಿಗಳೇ ಎಲ್ಲ ಬಗೆಯ ಅಹಿಂದ ಸೌಲಭ್ಯಗಳನ್ನು ಕಬಳಿಸುವ ಆಪಾಯವಿದೆ ಎನ್ನುವುದು. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಆಗಿರುವುದು ಇದೇ.
 ಆಗ ಸಿದ್ದರಾಮಯ್ಯ ಅಸಹಾಯಕರಾಗಿ ಅಹಿಂದ ಬಹಿರಂಗ ಸಮಾವೇಶಗಳನ್ನು ನಿಲ್ಲಿಸಬೇಕಾಯಿತು. ಆದರೆ ಅಂತರಂಗದಲ್ಲಿ ಆ ವಿಚಾರದ ಆಂದೋಲನ ನಡೆದೇ ಇತ್ತು. ಸಿದ್ದರಾಮಯ್ಯ ತಮ್ಮ ರಾಜಕೀಯ ಉತ್ಕರ್ಷಣೆ ನಂಬಿದ್ದೂ ಆ ಶಕ್ತಿಯನ್ನೇ. ರಾಜಕೀಯಕ್ಕೆ ಅದರಲ್ಲೂ ಕಾಂಗ್ರೆಸ್ ರಾಜಕೀಯಕ್ಕೆ, ಅವರು ಕಮಂಡಲವನ್ನು ಹಿಡಿದು ಸನ್ಯಾಸಿಯಂತೆ ಬರಲಿಲ್ಲ. ಕಾಂಗ್ರೆಸ್ಸಿನಲ್ಲಿ ನಾಯಕರಾಗಬೇಕೆಂದೇ ಬಂದಿದ್ದು. ಅದನ್ನು ಸಾಧಿಸಿದರು ಕೂಡಾ.
 ಸಿದ್ದರಾಮಯ್ಯ ಇದುವರೆಗೆ, ಮುಖ್ಯಮಂತ್ರಿಯಾಗಿ ಒಂದು ದಿನವೂ ಅಧಿಕಾರದ ಅವಧಿಯ ವಿಚಾರವನ್ನು ಪ್ರಸ್ತಾಪಿಸಿರಲಿಲ್ಲ. ಆ ಪ್ರಶ್ನೆಯೇ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಈಗ ಕಾಂಗ್ರೆಸ್ ನಾಯಕರಿಂದಲೇ ಸಿದ್ದರಾಮಯ್ಯ ಅವರು ಉಳಿದ ನಾಲ್ಕು ವರ್ಷಗಳ ಅವಧಿಯನ್ನು ಮುಗಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿರುವುದು ಯಾಕೆ?
ಲೋಕಸಭೆ ಚುನಾವಣೆ:  ವಿಧಾನ ಸಭೆ ಚುನಾವಣೆಯಲ್ಲಿ ವರ್ಷದ ಹಿಂದೆ ಪ್ರಚಂಡ ವಿಜಯ ಗಳಿಸಿದ್ದ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕವಾದ ರೀತಿಯಲ್ಲಿ ಸೋತಿದ್ದೇಕೆ? ಲೋಕಸಭೆ ಚುನಾವಣೆಗೆ ಮುನ್ನಾ ದಿನಗಳಲ್ಲಿ ನಡೆದ ಮಂಡ್ಯ, ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಜಾತ್ಯತೀತ ಜನತಾದಳವನ್ನು ದೊಡ್ಡ ರೀತಿಯಲ್ಲಿ ಸೋಲಿಸಿತ್ತು. ಅದರಲ್ಲೂ ಮಂಡ್ಯದಲ್ಲಿ ಚಲನಚಿತ್ರ ತಾರೆ, ರಾಜಕೀಯದ ಅನುಭವವಿಲ್ಲದ ರಮ್ಯ ಅವರನ್ನು ಗೆಲ್ಲಿಸುವ ಸಾಮರ್ಥ್ಯ ಕಾಂಗ್ರೆಸ್ಸಿಗೆ ಇತ್ತು. ಅದು ಕೆಲವೇ ತಿಂಗಳಲ್ಲಿ ಮಾಯವಾಗಿದ್ದು ಹೇಗೆ?
 ಆದರೆ ಆ ಶಕ್ತಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಪ್ರಕಟವಾಗಲಿಲ್ಲ. ಕಾಂಗ್ರೆಸ್ ನಿರೀಕ್ಷಿಸಿದ್ದು 15 ಸ್ಥಾನಗಳನ್ನು. ಸಿಕ್ಕಿದ್ದು ಒಂಬತ್ತು ಮಾತ್ರ. ಅದಕ್ಕಿಂತ ಹೆಚ್ಚಾಗಿ ಗಮನಿಸಬೇಕಾದ್ದು ಈ ಚುನಾವಣೆಯಲ್ಲಿ 150ಕ್ಕೂ ಹೆಚ್ಚಿನ ವಿಧಾನ ಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೊದಲ ಪಕ್ಷವಾಗಿರಲಿಲ್ಲ ಎನ್ನುವುದು.
ಇವೆಲ್ಲದರ ಹೊಣೆಗಾರಿಕೆಯನ್ನು ಕಾಂಗ್ರೆಸ್ಸಿನಲ್ಲೇ ಅನೇಕರು ಸಿದ್ದರಾಮಯ್ಯ ಹಾಗೂ ಅವರ ಆತ್ಮೀಯ ಮಂತ್ರಿಗಳ ಮೇಲೆ ಹಾಕಿ, ಅವರನ್ನೇ ದೂರಲು ಆರಂಭಿಸಿದ್ದಾರೆ. ಬಹುತೇಕ ಮಂತ್ರಿಗಳು ತಮಗೂ ಲೋಕಸಭೆ ಚುನಾವಣೆಗೂ ಸಂಬಂಧವೇ ಇಲ್ಲವೇನೊ ಎನ್ನುವ ರೀತಿಯಲ್ಲಿ ಕೈ ಬೀಸಿಕೊಂಡು ಓಡಾಡಿದ್ದು ನಿಜ.
ಎಲ್ಲಕ್ಕಿಂತ ಹೆಚ್ಚಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ- ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಪರಮೇಶ್ವರ ಅವರ ನಡುವೆ ಜಗಳವಿಲ್ಲದೇ ಹೋದರೂ ಸಾಮರಸ್ಯವಿಲ್ಲ ಎನ್ನುವ ಪ್ರಚಾರದ ಹಾವಳಿ ವಿಪರೀತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಲ್ಲಿನ ಭಿನ್ನಾಭಿಪ್ರಾಯ, ಚನಾವಣೆಯ ಪ್ರಚಾರಕ್ಕೆ ಹಣ ಹೊಂದಿಸುವುದು, ಮುಂತಾದ ವಿಷಯಗಳಲ್ಲೂ ಆಂತರಿಕ ತಿಸ್ರಗಳು ತಲೆ ಎತ್ತಿದ್ದವು. ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಸ್ವಂತ ಕ್ಷೇತ್ರ ಅಲ್ಲದಿದ್ದರೂ ಅವರ ಸ್ವಂತ ಪ್ರಭಾವದ ಮೈಸೂರು ಕ್ಷೇತ್ರದಲ್ಲಿ ಅವರ ಅತ್ಯಂತ ಆತ್ಮೀಯ ರಾಜಕೀಯ ಸಂಗಾತಿ, ಕುಲಬಾಂಧವ ವಿಶ್ವನಾಥ ಅವರು, ಬಿಜೆಪಿಯ ಯುವ ಪತ್ರಕರ್ತ ಅಭ್ಯರ್ಥಿ ಪ್ರತಾಪ ಸಿಂಹ ಅವರ ವಿರುದ್ಧ ಸೋತಿದ್ದು ಇಡೀ ದೇಶದ ಗಮನ ಸೆಳೆದಿತ್ತು.  ಇದೆಲ್ಲಕ್ಕೂ ಮೂಲ ಕಾರಣ ಕಾಂಗ್ರೆಸ್ಸಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಂಡುಬಂದಿದ್ದ ರಾಜಕೀಯ ನಾಯಕತ್ವದ ದಿವಾಳಿಕೋರತನ. ಈ ಕಠೋರ ಸತ್ಯವನ್ನು ಒಪ್ಪಲು ಸೋನಿಯಾ, ರಾಹುಲ್ ತಯಾರಿಲ್ಲ.
ಈಗ ಇನ್ನೆರಡು ಮೂರು ತಿಂಗಳಲ್ಲೇ ದೆಹಲಿ, ಮಹಾರಾಷ್ಟ್ರ, ಹರ್ಯಾಣ ಹಾಗೂ ಇನ್ನು ಒಂದೆರಡು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಬೇಕಾಗಿದೆ. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪ್ರಮುಖರು, ಹಿರಿಯ ನಾಯಕ ಎ.ಕೆ. ಆಂಟನಿ ಅವರ ನೇತೃತ್ವದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣಗಳನ್ನು ಕಂಡು ಹಿಡಿಯಲು ಸಮಿತಿಯೊಂದನ್ನು ರಚಿಸಿದ್ದಾರೆ. ಎ.ಕೆ. ಆಂಟನಿ ಅವರೇ ಈಗ ಒಂದೆರಡು ಕಡೆ ಅತ್ಯುನ್ನತ ಮಟ್ಟದ ನಾಯಕತ್ವದ ವರ್ತನೆಯನ್ನು ಸಮಾಜದ "ಒಂದು ಪ್ರಮುಖ ಜನಾಂಗದ ತುಷ್ಟೀಕರಣ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ" ಎಂದಿದ್ದಾರೆ.  ಆಂಟನಿ ಬೆಂಗಳೂರಿನಲ್ಲಿ ವಿಚಾರ ವಿನಿಮಯ ನಡೆಸಿದ್ದು ಆಯಿತು. ದೆಹಲಿಗೇ ಇಲ್ಲಿನ ನಾಯಕರನ್ನು ಕರೆಸಿ ವಿಚಾರ ವಿನಿಮಯವನ್ನು ನಡೆಸಿದ್ದೂ ಆಯಿತು. ಆ ಕೂಟಗಳಲ್ಲಿನ ವಿವರಗಳನ್ನು ಕುರಿತ ಪ್ರಕಟಿತ ವರದಿಗಳು ಉತ್ಪ್ರೇಕ್ಷೆಯಿಂದ ಕೂಡಿರಬಹುದು. ಆದರೂ ಸಿದ್ದರಾಮಯ್ಯ ಸಂಗಾತಿಗಳ ವರ್ತನೆ ಕುರಿತು ರಾಜ್ಯದ ಕೆಲವು ಪ್ರಭಾವಿ ಮುಖಂಡರಿಗೆ ಅತೃಪ್ತಿ, ಅಸಹನೆ ಇದೆ ಎನ್ನುವುದು ಸ್ಥೂಲವಾಗಿ ವ್ಯಕ್ತವಾಯಿತು.  ಹಾಗೆಂದ ಮಾತ್ರಕ್ಕೇ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ ಎಂದು ಭಾವಿಸುವುದು ಅವರ ವಿರೋಧಿಗಳಿಗೆ ಮಾತ್ರ ಸಾಧ್ಯ. ಆದರೂ ಸಿದ್ದರಾಮಯ್ಯ ಅವರ ಕಿವಿಗೆ ದೆಹಲಿಯಲ್ಲಿ ಬಾರಿಸಿದ ಗಂಟೆಯ ಶಬ್ದ ಇತರರಿಗಿಂತ ಮೊದಲು ಕೇಳಿ ಬಂದಿರುವಂತಿದೆ.  ಅವರಿಗೂ ಈಗ ಅರ್ಥವಾಗಿರುವ ವಿಚಾರ: ವರಿಷ್ಠರ ವಿಶ್ವಾಸ ತಮ್ಮ ಪರವಾಗಿ ಇದ್ದರೂ, ಅದಕ್ಕೆ ಚ್ಯುತಿ ಬರುವ ರೀತಿಯಲ್ಲಿ ವರ್ತಿಸಿದರೆ ರಾಜಕೀಯದಲ್ಲಿ ಕಷ್ಟವಾಗಬಹುದು.
ಅದನ್ನು ಅವರು ಅರ್ಥಮಾಡಿಕೊಂಡಿದ್ದಾರೆನ್ನುವುದಕ್ಕೆ ಸಾಕ್ಷಿ ಎಂದರೆ ಇತ್ತೀಚೆಗೆ ಒಂದು ಕಡೆ ಮುಖ್ಯಮಂತ್ರಿಯಾಗಿ ನಾನು ಇರಲಿ ಬಿಡಲಿ ಈ ಕೆಲಸ ಆಗುತ್ತೆ ಎಂದಿರುವುದು. ಇನ್ನೊಂದು ಕಡೆ ನಾನು ಅಧಿಕಾರದಲ್ಲಿ ಇರುವವರೆಗೂ ಅದಕ್ಕೆಲ್ಲ ಅವಕಾಶ ಕೊಡುವುದಿಲ್ಲ ಎಂದು ಒಂದು ವಿಚಾರದಲ್ಲಿ ಹೇಳಿದ್ದು ನಿಜ. ಇಂತಹ ಮಾತುಗಳು ಬಾಯಿ ತಪ್ಪಿ ಹೊರಗೆ ಬರುವುದೂ ಸಾಧ್ಯ.  
ವಾಸ್ತವದಲ್ಲಿ ಸಿದ್ದರಾಮಯ್ಯ ಅವರು ಈಗ ಚಿಲ್ಲರೆ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಕಾದ ಪ್ರಮೇಯವಿಲ್ಲ. ಅಂತಹದ್ದೇನೂ ಆಗಿಲ್ಲ. ಆದರೆ ಇದುವರೆಗೆ ಮಾಡಿದಂತೆ, ಮಂತ್ರಿಮಂಡಲದ ವಿಸ್ತರಣೆ, ಪುನಾರಚನೆ, ನಿಗಮ- ಬೋರ್ಡ್- ಮಂಡಳಿಗಳಿಗೆ ಅಧ್ಯಕ್ಷರು- ಸದಸ್ಯರ ನೇಮಕ, ತುರ್ತಾಗಿ ಸರ್ಕಾರ ಅಗತ್ಯ ಬಿದ್ದಾಗ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸುವುದಕ್ಕೆ ಸಮರ್ಥವಾಗಿದೆ ಎನ್ನುವುದರ ಪ್ರದರ್ಶನದ ಮೂಲಕ ಆಡಳಿತ ಯಂತ್ರದ ಮೇಲೆ ಹಿಡಿತವನ್ನು ಸ್ಥಾಪಿಸುವುದು, ಸ್ಥಾಪಿಸಿದ್ದರೆ, ಅದನ್ನು ಪ್ರದರ್ಶಿಸುವುದು ಬಹು ಮುಖ್ಯ.
ನಿಜ. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಯಾರ ಬಳಿಯೂ ಮಾಯಾದಂಡವಿಲ್ಲ. ಆದರೆ, ಆಡಳಿತದಲ್ಲಿ, ಅದರಲ್ಲೂ ಅತ್ಯುನ್ನತ ಮಟ್ಟದ ಅಧಿಕಾರಿಗಳ ಮೇಲೆ ತಪ್ಪು ಮಾಡಿದ ಆರೋಪಗಳು ಬಂದಾಗ ಸರ್ಕಾರ ಕ್ಷಿಪ್ರವಾಗಿ ಕ್ರಮ ಜರುಗಿಸಬೇಕು. ಅದೇ ಆಡಳಿತದಲ್ಲಿ ಪ್ರಜ್ಞೆ ಮೂಡಿಸುವ ಮಾಯಾ ದಂಡ. ಆ ಶಕ್ತಿ ಮುಖ್ಯಮಂತ್ರಿಗೆ ಇದೆ. ಅಕ್ರಮ ಗಣಿಗಾರಿಕೆ, ಅನ್ನಭಾಗ್ಯದ ಲೂಟಿ, ಬಿಡಿಎನಲ್ಲಿ ಬೆಳಕಿಗೆ ಬಂದಿರುವ ಅತ್ಯುನ್ನತ ಮಟ್ಟದ ಭ್ರಷ್ಟಾಚಾರ, ಅವರ ಊರಾದ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅವಾಂತರಗಳಲ್ಲಿ ಶೀಘ್ರವಾಗಿ ಕಟ್ಟುನಿಟ್ಟಾಗಿ ವರ್ತಿಸದೇ ಹೋದರೆ ರಾಜಕೀಯ ವಿರೋಧಿಗಳ ಅಭಿಪ್ರಾಯವನ್ನು ಸಾಮಾನ್ಯ ಜನರೂ ಹಂಚಿಕೊಳ್ಳಬಹುದು. ಅದು ಅಪಾಯಕಾರಿ ಬೆಳವಣಿಗೆ.
ಕಿಡಿಗೇಡಿತನ- ಕಳೆದ ಎರಡು ವಾರಗಳಲ್ಲಿ ರಾಜ್ಯದ ಹಾಗೂ ರಾಷ್ಟ್ರೀಯ ಮಾಧ್ಯಮದ ವಿಶ್ಲೇಷಣಕಾರರ ಗಮನ ಸಂಪೂರ್ಣವಾಗಿ ಸಿದ್ದರಾಮಯ್ಯ, ಕಾಂಗ್ರೆಸ್ ಕಡೆಗೇ ಕೇಂದ್ರೀಕೃತವಾಗಿರುವುದಕ್ಕೆ ವಿಶೇಷವಾದ ಕಾರಣಗಳೇನಾದರೂ ಇದೆಯೇ? ಗೊತ್ತಿಲ್ಲ.


- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ