ದುರ್ಬಳಕೆ ಕಾನೂನಿಗೀಗ ಸುಪ್ರೀಮ್ ಲಗಾಮು
ಗಂಡ, ಅತ್ತಿಗೆ, ಭಾವ, ಮಾವ, ಅಜ್ಜ-ಅಜ್ಜಿ ಇನ್ನಿತರ ಬಂಧುಗಳ ವಿರುದ್ಧ ಕಿರುಕುಳದ ಸುಳ್ಳು ಆರೋಪವನ್ನು ಹೊರಿಸಿ, ಅವರುಗಳನ್ನು ಕಂಬಿಗಳ ಹಿಂದೆ ಇರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಪತ್ನಿಗಳ ಕಾನೂನುಬಾಹಿರ ಕೃತ್ಯಗಳಿಗೆ ಸುಪ್ರೀಂಕೋರ್ಟ್ ಇತಿಶ್ರೀ ಹಾಡಿದೆ! ಈ ತೀರ್ಪು ಅತ್ಯಂತ ಮಹತ್ವಪೂರ್ಣ ಮೈಲಿಗಲ್ಲು ಎಂದೇ ಭಾವಿಸಬಹುದು. ಕೆಳಗಿನ ಎರಡು ಪ್ರಕರಣಗಳನ್ನು ಗಮನಿಸಿ:
1. ಪತಿಯು 5 ಕೋಟಿ ರುಪಾಯಿಗಳನ್ನು ತನ್ನ ಹೆಸರಲ್ಲಿ ಡೆಪಾಸಿಟ್ ಇಡಬೇಕು, ತನಗೊಂದು ಐಷಾರಾಮಿ ಕಾರನ್ನು ಕೊಡಿಸಬೇಕು, ತನ್ನ ತಾಯಿ-ತಂದೆ, ತಂಗಿ, ಭಾವನೊಂದಿಗೆ ಗಂಡನ ಮನೆಯಲ್ಲಿ ಇರಲು ಗಂಡನು ಅಡ್ಡಿ ಮಾಡಬಾರದು ಎಂಬಿತರ ಡಿಮ್ಯಾಂಡ್ಗಳನ್ನು ಪೊಲೀಸರಿಗೆ ಲಿಖಿತವಾಗಿ ಪತ್ನಿಯೊಬ್ಬಳು ನೀಡುವಳು. ತನಗೆ ಎರಡು ಕೋಟಿ ರುಪಾಯಿಗೂ ಅಧಿಕ ಬ್ಯಾಂಕ್ ಸಾಲವಿದೆ. ತನ್ನ ಎರಡು ಮಕ್ಕಳಿಗೆ ಅಡಿಗೆಯನ್ನೂ ಮಾಡದೇ, ರಾತ್ರೋರಾತ್ರಿ ಮನೆಯ ಹೊರಗೆ ವಾಸಿಸುವ ಹೆಂಡತಿಯು ಅದನ್ನೆಲ್ಲ ಬಿಟ್ಟು ಜವಾಬ್ದಾರಿ ಉಳ್ಳ ಪತ್ನಿಯಾಗಿ, ತಾಯಿಯಾಗಿ ಇರುವುದಾದರೆ ಜೊತೆಯಲ್ಲಿ ಇರಲು ಈಗಲೂ ಸಿದ್ಧ ಎಂದು ಆಕೆಯ ಗಂಡ ಲಿಖಿತವಾಗಿ ಪೊಲೀಸರಿಗೆ ಬರೆದು ಕೊಡುವನು. ಅದಕ್ಕೊಪ್ಪದ ಪತ್ನಿಯು ಗಂಡ, ಆತನ ಅಣ್ಣ ಮತ್ತು ಹೆಂಡತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ಕಳೆದ ವಾರ ನೀಡಿದ್ದಾಳೆ. ಅಂದಿನಿಂದ ಇವರೆಲ್ಲರೂ ಊರು ಬಿಟ್ಟು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿ ತಲೆಮರೆಸಿಕೊಂಡಿದ್ದಾರೆ! (ಕುಶಾಲನಗರದ ಪೊಲೀಸರು ಇಂದಿಗೂ ಅವರನ್ನು ಹುಡುಕುತ್ತಿದ್ದಾರೆ!)
2. ಒಂಭತ್ತು ವರ್ಷಗಳಿಂದ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಹೆಂಡತಿಯು ಮೂರು ವರ್ಷಗಳ ಹಿಂದೆ ಡೈವೋರ್ಸ್ ಕೇಳಿ ಅರ್ಜಿ ಹಾಕುವಳು. ಆಕೆ ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗಲಿಲ್ಲವೆಂದು ಆ ಅರ್ಜಿಯು ಎರಡು ವರ್ಷಗಳ ಹಿಂದೆಯೇ ವಜಾ ಆಗುವುದು. ಈಗ ಇದ್ದಕ್ಕಿದ್ದಂತೆ ಬಂದು 60 ಲಕ್ಷ ಜೀವನಾಂಶ ಕೇಳುವಳು. ಈಗ ತಾನೇ ಸರ್ಕಾರಿ ನೌಕರಿ ಖಾಯಂ ಮಾಡಿಕೊಂಡು ಬದುಕುತ್ತಿದ್ದೇನೆ. ಬೇಕಿದ್ದರೆ ಸಂಬಳದ ಅರ್ಧವನ್ನು ಪ್ರತಿ ತಿಂಗಳೂ ಕೊಡುತ್ತೇನೆ. ದೂರು ನೀಡಿ ನನ್ನ ಕೆಲಸ ಹೋಗುವಂತೆ ಮಾಡಬೇಡ ಎಂದು ಬೇಡಿಕೊಳ್ಳುವ ಪತಿ ಮತ್ತು ಎಂಟು ಜನ ಸಂಬಂಧಿಗಳ ವಿರುದ್ಧ ಕಿರುಕುಳ ಪ್ರಕರಣವನ್ನು ಪತ್ನಿಯಿಂದ ರಿಜಿಸ್ಟರ್ ಮಾಡಲಾಗಿದೆ. ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಹಾಲಿ ನಿರೀಕ್ಷಣಾ ಜಾಮೀನು ಅರ್ಜಿ ತೀರ್ಮಾನವಾಗಬೇಕಿದೆ!
ಈ ಎರಡು ಪ್ರಕರಣಗಳು ಉದಾಹರಣೆಗಳಷ್ಟೇ. ಇಂತಹ ಲಕ್ಷಾಂತರ ಪ್ರಕರಣಗಳು ದೇಶದ ಎಲ್ಲ ಕಡೆ ಬಾಕಿ ಇದ್ದು ಪತ್ನಿ ದೌರ್ಜನ್ಯ ಎಗ್ಗಿಲ್ಲದೇ ನಡೆಯುತ್ತಿದೆ. ಬೇರೆ ಬೇರೆ ಕಾರಣಗಳಿಗಾಗಿ ಅಂದರೆ ಜೀವನಾಂಶ ಪಡೆಯಲು, ಡೈವೋರ್ಸ್ ಪಡೆಯಲು, ಆಸ್ತಿಯಲ್ಲಿ ಪಾಲು ಪಡೆಯಲು ಮತ್ತು ಇನ್ನಿತರ ಕಾರಣಗಳಿಗಾಗಿ ಪತಿ ಮತ್ತು ಆತನ ಸಂಬಂಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತಿತ್ತು. ಕೇವಲ ಗಂಡನ ವಿರುದ್ಧ ಮಾತ್ರ ದೂರು ನೀಡಿದರೆ ಅವಳಿಗೆ ಸಾಲದು, ಆತನ ಅಕ್ಕ-ತಂಗಿ, ತಂದೆ-ತಾಯಿ, ಬಂಧುಗಳ ವಿರುದ್ಧವೂ ದೂರು ನೀಡಿ, ಬಂಧನಕ್ಕೊಳಪಡಿಸಿದರೆ ತನಗೆ ಸಮಾಧಾನವಾಗುತ್ತದೆ ಎಂದು ತಿಳಿದು, ಕ್ರಿಮಿನಲ್ ಕೇಸನ್ನು ದಾಖಲಿಸಲಾಗುತ್ತಿತ್ತು. ಇದಕ್ಕೆ ಕಾರಣಗಳು ಇಲ್ಲದಿಲ್ಲ. ತನ್ನ ವೈವಾಹಿಕ ಜೀವನದ ಬಗ್ಗೆ ಅನೇಕ ಸುಂದರ ಕನಸುಗಳನ್ನು ಹೊತ್ತು ಮದುವೆಯಾಗುವ ಮಹಿಳೆಯು, ತನ್ನ ವೈವಾಹಿಕ ಸಂಬಂಧ ಮುರಿದು ಹೋಗುವ ಬಗ್ಗೆ ಅತ್ಯಂತ ನಿರಾಶಳಾಗುವಳು. ತನಗಿದ್ದ ಬದುಕೇ ಇಲ್ಲವೆಂದು ಭಾವಿಸಿ, ತನ್ನ ಈ ದುಸ್ಥಿತಿಗೆ ತನ್ನ ಗಂಡನೇ ಕಾರಣನೆಂದೂ, ಈತನನ್ನು ಮದುವೆ ಆಗಿದ್ದರಿಂದಲೇ ತನಗೀ ಗತಿ ಬಂತೆಂದು ತಿಳಿದು, ಈತನಿಗೆ ಬುದ್ಧಿ ಕಲಿಸಬೇಕು; ತನ್ನ ಜೀವನವನ್ನು ಹಾಳು ಮಾಡಿದ ಇವನು ಹೇಗೆ ಸುಖದಿಂದ ಬಾಳುತ್ತಾನೆಂದು ನಾನೂ ನೋಡುತ್ತೇನೆ ಎಂದು ಗಂಡ ಮತ್ತವನ ಪ್ರೀತಿಪಾತ್ರರೆಲ್ಲರ ಮೇಲೆ ಕ್ರಿಮಿನಲ್ ಕೇಸು ಹಾಕುವ ಸಂದರ್ಭಗಳೇ ಹೆಚ್ಚು. ವಿವಾಹವು ಮುರಿದು ಬೀಳಲು ಅನೇಕ ಕಾರಣಗಳಿರುತ್ತವೆ. ಎರಡು ವ್ಯಕ್ತಿಗಳ ನಡುವಣ ಜೀವನ ಪೂರ್ಣ ಸಾಮರಸ್ಯ ಎಂಬುದು ಅತ್ಯಂತ ಸಂಕೀರ್ಣವಾದ ಸಂಗತಿ. ವಿಭಿನ್ನ ಮನಸ್ಸಿನ ಎರಡು ವ್ಯಕ್ತಿಗಳು ಒಂದೇ ಸೂರಿನಡಿಯಲ್ಲಿ, ಪರಸ್ಪರ ಗೌರವ- ಆದರಗಳೊಂದಿಗೆ, ಅರ್ಥ ಮಾಡಿಕೊಂಡು ಜೀವನ ಪೂರ್ತಿ ಸ್ನೇಹಿತರಂತೆ ಬದುಕುವುದು ಒಂದು ದೊಡ್ಡ ಸವಾಲೇ ಸರಿ. ನಮ್ಮ ಜೀವನ ಇಷ್ಟೆ ಎಂದು ಕೆಲವರು ಬದುಕಿದರೆ ತನ್ನ ಜೀವನ ಹಾಳಾಗಲು ನನ್ನ ಸಂಗಾತಿಯೇ ಕಾರಣ ಎಂದು ಬಹುತೇಕ ಪತಿ-ಪತ್ನಿಯರು ಭಾವಿಸಿ ಒಬ್ಬರ ವಿರುದ್ಧ ಮತ್ತೊಬ್ಬರು ದ್ವೇಷ, ಅಸೂಯೆ ಸಾಧಿಸಲು ಆರಂಭಿಸುವರು. ಸ್ತ್ರೀ ಮತ್ತು ಪುರುಷರ ಗುಣವು ಭೂಮಿ ಆಕಾಶದಷ್ಟು ವಿಭಿನ್ನ ಮತ್ತು ಅಷ್ಟೇ ಪೂರಕವೂ ಹೌದು.
ಒಬ್ಬರ ಕೊರತೆಯನ್ನು ತುಂಬಲು ಮತ್ತೊಬ್ಬರಿರುವರು. ಆದರೆ ಇದನ್ನರಿತು ಜೀವನ ಪೂರ್ತಿ ಅನ್ಯೋನ್ಯವಾಗಿ ಬಾಳಿ ಬದುಕಲು ತಾಳ್ಮೆ, ವಿವೇಚನೆ, ವಿಚಾರವಂತಿಕೆ, ಬಿಟ್ಟು ಕೊಡುವಿಕೆ, ಪರಸ್ಪರ ಪ್ರೀತಿ, ಗೌರವಗಳು ಇಬ್ಬರಲ್ಲೂ ಇರಬೇಕಾಗುತ್ತದೆ. ಒಟ್ಟಾರೆ ನೋಡುವುದಾದರೆ, ವೈವಾಹಿಕ ಸಂಬಂಧವು ಮುರಿದು ಬೀಳಲು ಕೇವಲ ವರದಕ್ಷಿಣೆ ಅಥವಾ ಪತಿಯ ಕ್ರೌರ್ಯವೊಂದು ಕಾರಣವಾಗಿರುವುದಿಲ್ಲ. ಪತಿಯರೆಲ್ಲರೂ ಮರ್ಯಾದಾ ಪುರುಷೋತ್ತಮರೆಂದಲ್ಲ. ಕ್ರೂರಿಗಳೂ, ಹಣಕ್ಕಾಗಿ ಏನು ಬೇಕಾದರೂ ಮಾಡಬಲ್ಲವರು ಕೋಟಿ -ಕೋಟಿ ಜನರಿದ್ದಾರೆ. ಆದರೆ ಇವರೆಲ್ಲರೂ ಪತ್ನಿ ಮತ್ತು ಮಕ್ಕಳಲ್ಲೂ ಹಣ ವಸೂಲಿ ಮಾಡುವರೆಂದು ಇಲ್ಲವೇ ಕ್ರೂರಿಗಳಾಗಿ ವರ್ತಿಸುವರೆಂದೂ ಹೇಳಲಾಗುವುದಿಲ್ಲ.
ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ವೈವಾಹಿಕ ಸಂಬಂಧ ಮುರಿದು ಬೀಳುವುದು. ಇಲ್ಲಿಂದ ಮುಂದೆ ಜೀವನಾಂಶ, ವಿಚ್ಛೇದನ, ವಿವಾಹೇತರ ಸಂಬಂಧ, ಮಕ್ಕಳ ಮೇಲಿನ ಹಕ್ಕು, ಆಸ್ತಿಯಲ್ಲಿ ಪಾಲು ಇನ್ನಿತರ ಸಮಸ್ಯೆಗಳನ್ನು ಪತಿ-ಪತ್ನಿಯರು ಎದುರಿಸಬೇಕಾಗುತ್ತದೆ. ಅದಾಗಲೇ ಪರಸ್ಪರ ಗೌರವ ಮತ್ತು ಅನ್ಯೋನ್ಯತೆ ಹಾಳಾಗಿರುವುದರಿಂದ ಚೌಕಾಶಿಯೇ ಎದ್ದು ನಿಲ್ಲುತ್ತದೆ. ಅದರಲ್ಲೂ ಪತಿ-ಪತ್ನಿಯರಲ್ಲಿ ವಿವಾಹ ಸಂಬಂಧವನ್ನು ಮುಂದುವರೆಸುವ ಇಲ್ಲವೇ ಮುರಿಯುವ ಬಗ್ಗೆ ಭಿನ್ನಾಭಿಪ್ರಾಯವಿದ್ದಲ್ಲಿ ಸಮಸ್ಯೆಯು ಗಂಭೀರವಾಗುತ್ತದೆ. ಚೌಕಾಶಿ ವಿಚಾರದಲ್ಲಿ ಪತಿಯು ಜ್ಟಟ್ಝಟಿಛಟಿಡಿ ಆಗಿ ವರ್ತಿಸಿದರೆ, ಪತ್ನಿಯು ಅಸಹಾಯಕಳಾಗಿ ನಿಲ್ಲುವಳು. ಏನಾದರಾಗಲೀ ಇವನೇ ನನ್ನ ಪತಿ, ಎಂದೆಂದಿಗೂ ಇವನನ್ನು ಬಿಟ್ಟು ಕೊಡುವುದಿಲ್ಲ ಎಂಬ ಪತ್ನಿಗೆ, ಪ್ರಾಣ ಹೋದರೂ ಸರಿಯೇ ಇವಳೊಂದಿಗೆ ಬಾಳಲಾರೆ ಎಂಬ ಪತಿ ಇದ್ದರೆ ಆಗ ಸಮಸ್ಯೆಯು ಬಿಗಡಾಯಿಸುವುದು.
ಇಂಥಹ ಹಲವಾರು ಸಂದರ್ಭಗಳಲ್ಲಿ, ತನ್ನಿಚ್ಛೆಯೇ ನಡೆಯಬೇಕೆಂಬ ಹಠಕ್ಕೆ ಬೀಳುವ ಪತ್ನಿಯು, ಗಂಡನನ್ನು ತಗ್ಗಿಸಿ-ಬಗ್ಗಿಸಿ ಇವನಿಗೆ ಸರಿಯಾಗಿ ಬುದ್ಧಿ ಕಲಿಸದಿದ್ದರೆ ತನಗೆ ಸಮಾಧಾನ, ಶಾಂತಿ ಸಿಗುವುದಿಲ್ಲವೆಂದು ಭ್ರಮಿಸಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವ ಸಂಭವಗಳೇ ಹೆಚ್ಚು. ಗಂಡನ ಮೇಲೆ ಒತ್ತಡವನ್ನು ಹೆಚ್ಚಿಸುವ ಮತ್ತು ಪೂರ್ಣ ಹಿಡಿತವನ್ನು ಸಾಧಿಸುವ ಭರದಲ್ಲಿ ಪತ್ನಿಯು ಪತಿಯ ತಂದೆ-ತಾಯಿ, ಅಣ್ಣ, ಅಕ್ಕ-ತಂಗಿ ಮತ್ತಿತರ ಬಂಧುಗಳ ವಿರುದ್ಧವೂ ಪ್ರಕರಣವನ್ನು ದಾಖಲಿಸುವಳು. ಕಳೆದ ವರ್ಷವೊಂದರಲ್ಲೇ ದಾಖಲಾದ ವರದಕ್ಷಿಣೆ ಪ್ರಕರಣಗಳಲ್ಲಿ ಬಂಧಿತರಾದ 2 ಲಕ್ಷ ಆರೋಪಿಗಳಲ್ಲಿ ಮಹಿಳೆಯರೇ 49000! ಅತ್ತೆ, ನಾದಿನಿ, ನಾದಿನಿಯರ ಗಂಡಂದಿರ ಅಕ್ಕ-ತಂಗಿಯರೂ ಕೂಡ! ಕೆಲವು ಪ್ರಕರಣಗಳಲ್ಲಿ ಅತ್ತೆಯ ಸಹೋದರಿಯರು ಮತ್ತು ಗಂಡನ ಶಂಕಿತ ಪ್ರೇಮಿಗಳೂ ಸಹಾ! ಹೀಗೆ 'ಪತ್ನಿ' ಎಂಬ ಒಬ್ಬ ಮಹಿಳೆ ತನ್ನಿಚ್ಛೆಯಂತೆ ಅನೇಕ ಮಹಿಳೆಯರನ್ನು ಕೇವಲ ಹೇಳಿಕೆಯೊಂದರ ಸಹಾಯದಿಂದ ಬಂಧನಕ್ಕೊಳಪಡಿಸುವ, ಅವಮಾನಕ್ಕೀಡು ಮಾಡುವ ಕುಕೃತ್ಯಕ್ಕೆ ವರದಕ್ಷಿಣೆ ಮತ್ತು ಕಿರುಕುಳದ ಕಾನೂನುಗಳು ಅಸ್ತ್ರವಾಯಿತು. 1983ರಲ್ಲಿ ಮಹಿಳೆಯರ ರಕ್ಷಣೆಗಾಗಿ ಮಾಡಿದ ಕಾನೂನೇ ಮಹಿಳೆಯರ ಪಾಲಿಗೆ ದುಃಸ್ವಪ್ನವಾದಂತಾಯಿತು! ಗಂಡನ ರಕ್ತ ಸಂಬಂಧೀ ಮಹಿಳೆಯರ ವೈವಾಹಿಕ ಜೀವನದ ಮೇಲೂ ಅಗಾಧ ಪರಿಣಾಮಗಳಾದವು. ಹೀಗೆ ಬಂಧಿಸಲ್ಪಟ್ಟ ಮಹಿಳೆಯರಲ್ಲಿ ಶೇ. 85 ರಷ್ಟು ಮಹಿಳೆಯರು ನಿರಪರಾಧಿಗಳೆಂದು ದೋಷಮುಕ್ತರೂ ಆದರು. ಕೆಲವು ಪ್ರಕರಣಗಳಲ್ಲಿ ಹಾಸಿಗೆ ಹಿಡಿದಿರುವ, ಗಂಡನ ಅಜ್ಜ-ಅಜ್ಜಿಯಂದಿರು, ಹತ್ತಾರು ವರ್ಷಗಳಿಂದ ವಿದೇಶದಲ್ಲಿ ವಾಸವಿರುವ ಅಕ್ಕ-ತಂಗಿಯರೂ ಬಂಧಿಸಲ್ಪಟ್ಟಿದ್ದು ಈ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ನಿಯ ಮೇಲೆ ದೌರ್ಜನ್ಯ ಎಸಗಿದ ಪತಿ ಮತ್ತು ಅವನ ಸಂಬಂಧಿಗಳಿಗೆ ಶಿಕ್ಷೆ ವಿಧಿಸುವುದನ್ನು ಸ್ವಾಗತಿಸಲೇಬೇಕು. ವಿವಾಹವಾದ ಏಕಮಾತ್ರ ಕಾರಣಕ್ಕೆ ಕ್ರೂರಿಗಳಾಗಿ ವರ್ತಿಸುವ ಪುರುಷರಿಗೆ ಮತ್ತವನ ಬೆಂಬಲಿಗರಿಗೆ ಜೈಲು ಶಿಕ್ಷೆ ವಿಧಿಸುವುದು ಅತ್ಯಗತ್ಯ ಮತ್ತು ನ್ಯಾಯಸಮ್ಮತ. ಆದರೆ ಇದೇ ಕಾನೂನು ಬಳಸಿ ಮುಗ್ಧ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸುವುದು ಅಮಾನವೀಯ. ಈ ಕಾರಣದಿಂದಲೇ, ಅಂದರೆ ವರದಕ್ಷಿಣೆ ಮತ್ತು ಕಿರುಕುಳದ ಕಾನೂನಿನ ದುರುಪಯೋಗವನ್ನು ತಡೆಯಲೆಂದೇ ಸುಪ್ರಿಂಕೋರ್ಟ್ ಜುಲೈ 2ರಂದು ಮಹತ್ವದ ತೀರ್ಪು ನೀಡಿ, ಲಕ್ಷಾಂತರ ಜನರಿಗೆ ಸಮಾಧಾನ ತಂದಿದೆ. ಈ ತೀರ್ಪಿನ ಸಾರಾಂಶವೆಂದರೆ;
1. ವರದಕ್ಷಿಣೆ ಮತ್ತು ಕಿರುಕುಳ ಪ್ರಕರಣಗಳಲ್ಲಿ ಪೊಲೀಸರು ಯಾಂತ್ರಿಕವಾಗಿ ಆರೋಪಿಗಳನ್ನು ಬಂಧಿಸಬಾರದು ಮತ್ತು ನ್ಯಾಯಾಲಯಗಳು ಯಾಂತ್ರಿಕವಾಗಿ ಆರೋಪಿಗಳಿಗೆ ಜಾಮೀನನ್ನು ನಿರಾಕರಿಸಬಾರದು ಎಂದು ತನ್ನೆಲ್ಲಾ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ದೇಶದ ಎಲ್ಲ ರಾಜ್ಯಗಳ ಸರ್ಕಾರಗಳಿಗೆ, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಎಲ್ಲಾ ಹೈಕೋರ್ಟ್ಗಳಿಗೆ ಆದೇಶಿಸಿದೆ.
2. ಹಾಗೊಮ್ಮೆ ಪೊಲೀಸರೇನಾದರೂ ಆರೋಪಿಗಳನ್ನು ಬಂಧಿಸಿದರೆ, ಬಂಧಿಸಲು ಕಾರಣಗಳು, ಆರೋಪಿ ತಲೆಮರೆಸಿಕೊಳ್ಳುವ ಸ್ವಭಾವದವರೇ, ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಯತ್ನಿಸಿರುವರೇ ಇತ್ಯಾದಿ ಎಲ್ಲಾ ಕಾರಣಗಳನ್ನು ಸಾಕ್ಷ್ಯಾಧಾರ ಸಮೇತವಾಗಿ ನ್ಯಾಯಾಲಯಕ್ಕೆ ವರದಿಯನ್ನು ಪೊಲೀಸರು ಸಲ್ಲಿಸತಕ್ಕದ್ದು.
3. ಇಂತಹ ವರದಿಯನ್ನು ನ್ಯಾಯಾಧೀಶರು, ಕಾನೂನಿನ ಪ್ರಕಾರ ಪರಿಶೀಲಿಸಿ ಅದು ತೃಪ್ತಿಕರವೆಂದು ಮನಗಂಡರೆ ಮಾತ್ರ ನ್ಯಾಯಾಂಗ ಬಂಧನಕ್ಕೆ ಆರೋಪಿಯನ್ನು ಒಪ್ಪಿಸಬಹುದು.
4. ಪ್ರಥಮ ವರ್ತಮಾನ ಸ್ವೀಕರಿಸಿದ ಎರಡು ವಾರಗಳ ಒಳಗಾಗಿ, (ಬಂಧಿಸುವ ಅಗತ್ಯವಿಲ್ಲದಿದ್ದಲ್ಲಿ) ಪೊಲೀಸರು ನ್ಯಾಯಾಲಯಕ್ಕೆ ತಿಳಿಸತಕ್ಕದ್ದು ಮತ್ತು ಅದರ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸತಕ್ಕದ್ದು. ಅಂತೆಯೇ ಈ ಎರಡು ವಾರಗಳಲ್ಲಿ ಆರೋಪಿಗಳನ್ನು ಬಂಧಿಸದೇ ಕೇವಲ ನೋಟಿಸ್ ನೀಡಿ, ಠಾಣೆಗೆ ಕರೆಸಿ ಹೇಳಿಕೆ ಪಡೆಯಬಹುದು. ವಿಚಾರಣೆಗೆ ಆರೋಪಿ ಹಾಜರಾಗುವ ಮತ್ತು ತನಿಖೆಗೆ ಸಹಕರಿಸುವ ಸಂದರ್ಭಗಳಲ್ಲಿ ಬಂಧಿಸುವ ಅಗತ್ಯವಿಲ್ಲ.
ಈ ತೀರ್ಪಿನ ನಿರ್ದೇಶನವನ್ನು ಪಾಲಿಸದ ಪೊಲೀಸ್ ಅಧಿಕಾರಿಯ ವಿರುದ್ಧ ಇಲಾಖಾ ತನಿಖೆಯನ್ನು ಜರುಗಿಸಿ, ಸೂಕ್ತ ಶಿಕ್ಷೆಯನ್ನು ವಿಧಿಸತಕ್ಕದ್ದು. ಜೊತೆಗೆ ಅಂತಹ ಅಧಿಕಾರಿಯು ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹನಾಗುವನು.
ಮೇಲ್ಕಂಡ ತೀರ್ಪಿನನ್ವಯ ವಿಚಾರಿಸದೇ, ಸಕಾರಣಗಳನ್ನು ನೀಡದೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸುವ ನ್ಯಾಯಾಧೀಶರ ವಿರುದ್ಧವೂ ಹೈಕೋರ್ಟ್ಗಳು ಇಲಾಖಾ ವಿಚಾರಣೆ ನಡೆಸಿ ಕ್ರಮಕೈಗೊಳ್ಳತಕ್ಕದ್ದು.
-ವೇಣುಗೋಪಾಲ್
ವಕೀಲರು