ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಂತರಾರ್ಥ: ಸುನಂದಾ ಸಾವಿನ ಸುತ್ತ ಉತ್ತರ ಸಿಗದ ಪ್ರಶ್ನೆಗಳು

ಈ ಪ್ರಶ್ನೆಗೆ ಉತ್ತರಿಸಿ: ನಿಮಗೆ ಪ್ರಕರಣ...

Rashmi Kasaragodu
Updated On : 8 Jul 2014, 10:37 am

ಈ ಪ್ರಶ್ನೆಗೆ ಉತ್ತರಿಸಿ: ನಿಮಗೆ ಪ್ರಕರಣವೊಂದರಲ್ಲಿ ಬಹಳ ಆಸಕ್ತಿಯಿದೆ ಎಂದುಕೊಳ್ಳಿ. ಹೀಗಿದ್ದಾಗ ಆ ಪ್ರಕರಣದ ನ್ಯಾಯ ವಿಚಾರಣೆ ಮಾಡುತ್ತಿರುವ ನ್ಯಾಯಾಧೀಶರಿಗೆ "ತಮ್ಮೆದುರಿಗಿರುವ ಮಾಹಿತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು, ಹೇಗೆ ತೀರ್ಪು ನೀಡಬೇಕು" ಎನ್ನುವುದನ್ನು ಹೇಳಬಲ್ಲಿರಾ? ನೀವು ಹಾಗೆ ಮಾಡಲಾರಿರಿ. ಒಂದು ವೇಳೆ ಮಾಡಿದರೆ, ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಕ್ಕಾಗಿ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಈಗ ಇದನ್ನು ಗಮನಿಸಿ. ತಮ್ಮ ಎರಡನೆಯ ಪತ್ನಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದ ಕೆಲವೇ ಗಂಟೆಗಳಲ್ಲಿ, ಶಶಿ ತರೂರ್ ಅವರು ಎಐಐಎಮ್ಎಸ್ ವೈದ್ಯರೊಬ್ಬರಿಗೆ ಇ-ಮೇಲ್ ಕಳಿಸಿ, ಸುನಂದಾ ಪುಷ್ಕರ್ ಮರಣೋತ್ತರ ವರದಿಯನ್ನು ಯಾವ ರೀತಿಯಲ್ಲಿ ಬರೆಯಬೇಕು ಎಂದು ಸಲಹೆ ಕೊಡುತ್ತಾರೆ. ನೆನಪಿರಲಿ, ಈ ಘಟನೆ ಜೀವಂತವಿರುವ ತನ್ನ ಪತ್ನಿಯ ವೈದ್ಯಕೀಯ ವರದಿಯ ಕುರಿತು ಗಂಡನೊಬ್ಬ ಮಾತನಾಡಿದ್ದಲ್ಲ, ಎರಡನೆಯ ಅಭಿಪ್ರಾಯ ಪಡೆಯಲು ಇನ್ನೊಬ್ಬ ವೈದ್ಯರನ್ನು ಸಂಪರ್ಕಿಸಿದ್ದಲ್ಲ. ಬದಲಾಗಿ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧವಾಗಿದ್ದ ವೈದ್ಯರಿಗೆ ಮಿಂಚಂಚೆ ಕಳುಹಿಸಿ ಒತ್ತಡ ತರುವ ಪ್ರಯತ್ನ ಮಾಡಿದ್ದರು ಶಶಿ ತರೂರ್. ಆದರೆ ಎಲ್ಲಾ ಸಾಕ್ಷ್ಯಾಧಾರಗಳೂ ನಿಸ್ತೇಜವಾಗಿ ಟೇಬಲ್ನ ಮೇಲಿದ್ದ ಸುನಂದಾ ಪುಷ್ಕರ್ ದೇಹದೊಳಗಿನ ಅಂಗಗಳಲ್ಲಿಯೇ ಇದ್ದವು!
ಹಾಗಂತ ಶಶಿ ತರೂರ್ ಏನೂ ದಡ್ಡರಲ್ಲ, ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧನಾದ ಫೊರೆನ್ಸಿಕ್ ವೈದ್ಯನೊಬ್ಬನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವುದು ಅನೈತಿಕ, ಇದರಿಂದ ತಮ್ಮ ಸುತ್ತಲೂ ಅನುಮಾನಗಳು ಹುಟ್ಟಿಕೊಳ್ಳಬಹುದು ಎಂದು ಅವರಂಥ ಬುದ್ಧಿವಂತರಿಗೆ ತಿಳಿಯದ ವಿಷಯವೇನೂ ಅಲ್ಲ.
ಇನ್ನು ಮರಣೋತ್ತರ ಪರೀಕ್ಷೆ ನಡೆಸಿದ ಆ ವೈದ್ಯರು ಶಶಿ ಅವರ ಇ-ಮೇಲ್ನ ಒಳಾರ್ಥವನ್ನು ತಿಳಿದುಕೊಂಡರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ ಹೆಂಡತಿ ಸತ್ತು ಕೆಲವೇ ಗಂಟೆಗಳಾಗಿರುವಾಗ, ದುಃಖತಪ್ತನಾದ, ಆಘಾತಗೊಂಡ ತರೂರ್ ಅವರಿಗೆ ಎಐಐಎಮ್ಎಸ್ ವೈದ್ಯರಿಗೆ ಇ-ಮೇಲ್ ಬರೆದು ಸಲಹೆ ನೀಡಲು ಉತ್ಸಾಹವೆಲ್ಲಿಂದ ಬಂತು? ಸಮಯವೆಲ್ಲಿಂದ ಸಿಕ್ಕಿತು?
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಒಂದು ತೀರ್ಮಾನಕ್ಕೆ ಬರಬಹುದು. ಸುನಂದಾ ಸಾವಿಗೆ ಕಾರಣವಾದ ಸಂಗತಿಗಳನ್ನು ಮುಚ್ಚಿಹಾಕಬೇಕು ಎಂದು ತರೂರ್ ಬಯಸಿದ್ದಾರೆ. ಈ ನಿಗೂಢ ಘಟನೆಯ ಕಾರಣಗಳನ್ನು ತಿರುಚಲು ಅವರು ಮಾಡಿದ ಪ್ರಯತ್ನ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಎಐಐಎಮ್ಎಸ್ನ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಅಂದಿನ ಮುಖ್ಯಸ್ಥರಾದ ಡಾ. ಸುಧೀರ್ ಗುಪ್ತಾ, ಇವೆಲ್ಲ ಒತ್ತಡಗಳ ನಡುವೆಯೂ ಸುನಂದಾರದ್ದು ಅಸಹಜ ಸಾವು ಎಂದು ಹೇಳಿದ್ದಾರೆಂದರೆ, ಅವರ ಮಾತಿಗೆ ಪೂರಕವಾದ ವೈದ್ಯಕೀಯ ಪುರಾವೆಗಳು ಸಿಕ್ಕಿವೆ ಎಂದೇ ಅರ್ಥ. ಸುನಂದಾ ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಮತ್ತು ಆಕೆಯ ದೇಹದ ಮೇಲೆ ಹತ್ತಾರು ಗಾಯದ ಕಲೆಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತದೆ. ಅಂದರೆ ಆಕೆ ಸಾಯುವುದಕ್ಕೂ ಮುನ್ನ ತೀವ್ರ ಹಿಂಸೆ ಅನುಭವಿಸಿದ್ದಳು ಎಂದಂತಾಯಿತು.
ಇತ್ತೀಚಿನ ವರದಿಗಳನ್ನು ನೋಡಿದಾಗ, ಡಾ. ಗುಪ್ತಾ ಅವರು ಸಿದ್ಧಪಡಿಸಿದ ಮರಣೋತ್ತರ ವರದಿ ಸಿದ್ಧವಾದ ಕೆಲವೇ ದಿನಗಳಲ್ಲಿ ಸಾರ್ವಜನಿಕರನ್ನು ತಲುಪಿತು ಎನ್ನುವುದು ತಿಳಿಯುತ್ತದೆ. ಇದನ್ನು ಗಮನಿಸಿದ ಸರ್ಕಾರ ಬೇರೆ ಕಳ್ಳ ಹಾದಿ ಹಿಡಿಯಿತು. ಸಿಬಿಐನ ಪ್ರಯೋಗಾಲಯವೊಂದಕ್ಕೆ ಸರ್ಕಾರ ವರದಿ ವರದಿ ತಯಾರಿಸಲು ಕೇಳಿತು. ಅಂದರೆ, ಸುನಂದಾ ಪ್ರಕರಣದಲ್ಲಿ ಎಐಐಎಮ್ಎಸ್ಗೆ ತದ್ವಿರುದ್ಧವಾದ ವರದಿಯನ್ನು ಸಿಬಿಐನ ಪ್ರಯೋಗಾಲಯ ನೀಡುತ್ತದೆ ಎಂಬ ನಿರೀಕ್ಷೆ ಅದಕ್ಕಿತ್ತು.  ಸುನಂದಾ ಸತ್ತು 6 ತಿಂಗಳಾದರೂ ಆ ವರದಿ ಇನ್ನೂ ಹೊರಬಂದಿಲ್ಲ.
ಬಹುಶಃ ತಿರುಚಲಾಗದಷ್ಟು ಪ್ರಬಲ ವೈಜ್ಞಾನಿಕ ಆಧಾರಗಳು ದೊರೆತಿರುವುದರಿಂದ ಸಿಬಿಐಗೂ ಕೂಡ ತನ್ನ ಯಜಮಾನರ ಆದೇಶದಂತೆ ನಡೆದುಕೊಳ್ಳಲು ಆಗುತ್ತಿಲ್ಲವೆಂದೆನಿಸುತ್ತಿದೆ. ಇನ್ನು ಲ್ಯಾಬ್ಗಳ ಮೇಲೆ ಅತಿಯಾದ ಕೆಲಸದ ಹೊರೆಯಿರುವುದರಿಂದ ವರದಿ ತಯಾರಿಸಲು ತಿಂಗಳುಗಳೇ ಹಿಡಿಯಬಹುದು. ಆದರೆ ಇದು ಸುನಂದಾ ಪುಷ್ಕರ್ ಪ್ರಕರಣವಾದ್ದರಿಂದ ಮತ್ತು ಈ ವಿಷಯದಲ್ಲಿ ಸಾರ್ವಜನಿಕರಿಗೆ ಹೆಚ್ಚು ಆಸಕ್ತಿಯಿದ್ದದ್ದರಿಂದ ತಡವಾದರೂ ಪರವಾಗಿಲ್ಲ, ಈ ವರದಿಯನ್ನು ಸಿದ್ಧಪಡಿಸುವುದಕ್ಕೆ ಸಿಬಿಐ ಪ್ರಾಶಸ್ತ್ಯ ಕೊಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಲ್ಲದೆ, ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ತರೂರ್ ಕೂಡ ಕಳೆದ ತಿಂಗಳವರೆಗೂ ತಮಗೆ ಸುನಂದಾ ಪುಷ್ಕರ್ ಸಾವಿನ ನೈಜ ಹಿನ್ನೆಲೆಯನ್ನು ತಿಳಿದುಕೊಳ್ಳಲು ತೀವ್ರ ಆಸಕ್ತಿ ಇದೆ ಎನ್ನುವಂತೆಯೇ ವರ್ತಿಸಿದ್ದರು.
ಆದರೆ ಜನರ ನೆನಪಿನ ಶಕ್ತಿ ಬಹಳ ಕಾಲ ಇರುವುದಿಲ್ಲ ಎಂಬ ನಂಬಿಕೆಯ ಮೇಲೆ ಅವರು ಹಾಗೆ ಮಾಡಿದರು. ವರದಿ ಎಷ್ಟು ತಡವಾಗಿ ಬರುತ್ತದೋ, ಅಷ್ಟರ ಮಟ್ಟಿಗೆ ಜನತೆ ಈ ಪ್ರಕರಣದ ಬಗ್ಗೆ ಆಸಕ್ತಿ ಕಳೆದುಕೊಂಡಿರುತ್ತಾರೆ ಎಂದು ಭಾವಿಸಿದ್ದರು  ತರೂರ್ . ಆದರೆ ಯುಪಿಎ ಸರ್ಕಾರದ ಅಹಂಕಾರದ ಫಲವಾಗಿ, ಮರೆಯಾಗಿದ್ದ ಪ್ರಮುಖ ಪ್ರಶ್ನೆಯೊಂದು ಮತ್ತೊಮ್ಮೆ ನಿಚ್ಚಳವಾಗಿ ಎದುರಾಗಿದೆ: "ಸುನಂದಾ ಪುಷ್ಕರ್ ಅವರನ್ನು ಕೊಂದದ್ದು ಯಾರು ಮತ್ತು ಏಕೆ?"  
ಹೊಸ ಸರ್ಕಾರ ಬರುವುದಕ್ಕೆ ಮೂರು ದಿನ ಮುನ್ನ, ಡಾ. ಗುಪ್ತಾ ಅವರಿಗೆ ಹಿಂಬಡ್ತಿ ನೀಡುವ ಆದೇಶ ಹೊರಡಿಸಲಾಯಿತು. ಈ ಕಾರಣದಿಂದಾಗಿ ಡಾ.ಗುಪ್ತಾ ತಮ್ಮ ಹಿಂಬಡ್ತಿ ವಿಚಾರವನ್ನು ಹಿಡಿದುಕೊಂಡು ಈಜಟಿಡ್ಠಿಛಟ ಆಜಟ್ಝಟ್ಝಿಡಡ್ಠಿಛಡ್ಝಿಢಜ ಖ್ಠ್ಝಿಛ್ಡಿಟಿಛಟ ನ ಮೊರೆಹೋದರು.
ಕೂಡಲೇ ಸುನಂದಾ ಪುಷ್ಕರ್ ಸಾವಿನ ಕುರಿತು ಹುಟ್ಟಿಕೊಂಡಿದ್ದ ಪ್ರಶ್ನೆಗಳು ಮತ್ತೊಮ್ಮೆ ಜನರ ಬಾಯಲ್ಲಿ ಅಡ್ಡಾಡತೊಡಗಿದವು. ಡಾ. ಗುಪ್ತಾ ಅವರು ಈಗೇಕೆ ಈ ಮಾಹಿತಿಯನ್ನು ಹೊರಗೆ ಹಾಕಿದ್ದು ಎನ್ನುವ ಪ್ರಶ್ನೆಗೆ ಉತ್ತರ ಸರಳವಾಗಿದೆ. ಮಂತ್ರಿಗಳ ಮಾತಿಗೆ ಮಣೆ ಹಾಕದ ಕಾರಣ ಗುಪ್ತಾ ಅವರು ಬಹಳ ಸಂಕಷ್ಟ ಅನುಭವಿಸಬೇಕಾಯಿತು. ಇಂಥ ಸನ್ನಿವೇಶದಲ್ಲಿ ಯಾರೇ ಆಗಲಿ ಇದೇ ರೀತಿಯಲ್ಲಿ ನಡೆದುಕೊಳ್ಳುವುದು ಸಹಜ.
ಮೋಸಗಾರ ರಾಜಕಾರಣಿಗಳಿಗೆ ಮಗ್ಗುಲ ಮುಳ್ಳಾಗಿರುವ ಡಾ. ಸ್ವಾಮಿ ಅವರ ಬಳಿ  ತರೂರ್  ಅವರನ್ನು ಕೇಳಲು ಅನೇಕ ಪ್ರಶ್ನೆಗಳಿರಬಹುದು ಎನಿಸುತ್ತಿದೆ. ಇವಕ್ಕೆ ನಮ್ಮವೊಂದಿಷ್ಟು ಪ್ರಶ್ನೆಗಳನ್ನೂ ಸೇರಿಸೋಣ. ಸುನಂದಾ ಪುಷ್ಕರ್ ದುಬೈನಲ್ಲಿ 11 ಐಷಾರಾಮಿ ಫ್ಲಾಟ್ಗಳನ್ನು ಖರೀದಿಸಿದ್ದರಲ್ಲ, ಅಷ್ಟೊಂದು ಹಣ ಯಾರಿಂದ ಬಂತು? ದುಬೈನ  ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸಾಮಾನ್ಯ ದರ್ಜೆಯ ಪಿಆರ್ ಅಧಿಕಾರಿಯಾಗಿದ್ದ ಸುನಂದಾಗೆ 110 ಕೋಟಿ ರುಪಾಯಿ ಬಂಡವಾಳ ಹೂಡಲು ಹೇಗೆ ಸಾಧ್ಯವಾಯಿತು? ದುಬೈನಲ್ಲಿರುವ ಈ ಆಸ್ತಿಯ ವಾರಸುದಾರಿಕೆಯ ವಿಷಯದಿಂದಾಗಿಯೇ ಆಕೆಯ ಕುಟುಂಬ ಈಗ ಮೌನವಾಗಿದೆಯೇ?
ಅಂದಹಾಗೆ  ತರೂರ್  ಕುಟುಂಬ ತಮ್ಮ ಅಧಿಕೃತ ನಿವಾಸದಲ್ಲಿ(ಬಂಗಲೆಯಲ್ಲಿ) ಪೇಟಿಂಗ್ ಕೆಲಸ ನಡೆಯುತ್ತಿರುವುದರಿಂದ ಲೀಲಾ ಹೊಟೆಲ್ಗೆ ಶಿಫ್ಟ್ ಆಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಲೋದಿ ರಸ್ತೆಯಲ್ಲಿರುವ ಈ ಬಂಗಲೆ, ಕೇಂದ್ರ ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಲ್ಲಿದೆ. ಈ ಇಲಾಖೆಯಲ್ಲೂ ಕೂಡ  ತರೂರ್  ಅವರ ಬಂಗಲೆಯನ್ನು ಪೇಟಿಂಗ್ ಮಾಡಲಾಗುತ್ತಿತ್ತು ಎಂಬ ಬಗ್ಗೆ ಯಾವುದೇ ದಾಖಲೆಯಿಲ್ಲ. ಸತ್ಯವೇನೆಂದರೆ ಪತಿ ಪತ್ನಿಯ ನಡುವೆ ದೊಡ್ಡ ಜಗಳ ನಡೆದಿತ್ತು. ಅದಾದ ನಂತರ ಸಿಟ್ಟಿನಲ್ಲಿ ಸುನಂದಾ ಹೊಟೆಲ್ಗೆ ವಾಸ್ತವ್ಯ ಬದಲಿಸಿಸಿದ್ದರು. ದುರ್ದೈವವಶಾತ್ ಆಕೆ ಸಾವಿಗೀಡಾದರು.
ಒಂದು ವೇಳೆ  ತರೂರ್  ಮುಂದೆ ಎಂದಾದರೂ ಈ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗುತ್ತಾರೆಂದರೆ, ಅದರೊಟ್ಟಿಗೆ ಇನ್ನೂ ಕೆಲವು ಸಂಗತಿಗಳ ಮೇಲೆ (ಸುನಂದಾ ಸಾವಿಗೆ ಸಂಬಂಧಿಸಿದ್ದಲ್ಲ)ಅವರು ಬೆಳಕು ಚೆಲ್ಲಲಿ. ಸೋನಿಯಾ ಗಾಂಧಿಯವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹುದ್ದೆಗೆ ಭಾರತದ ಅಭ್ಯರ್ಥಿಯಾಗಿ   ತರೂರ್  ಅವರ ಹೆಸರನ್ನು ನಾಮನೀರ್ದೇಶನ ಮಾಡಿದ್ದಕ್ಕೆ ಕಾರಣವೇನು? ಅಲ್ಲದೆ,  ತರೂರ್ ಗೆ ಅಲ್ಲಿ ಗೆಲ್ಲುವ ಸಾಧ್ಯತೆಯಂತೂ ಇರಲೇ ಇಲ್ಲ, ಆದರೂ ಯುಪಿಎ ಸರ್ಕಾರ ಅವರ ಪ್ರಚಾರಕ್ಕಾಗಿ ತೆರಿಗೆದಾರರ ಕೋಟ್ಯಂತರ ರುಪಾಯಿ ಹಣ ವ್ಯಯಿಸಿದ್ದೇಕೆ?
 ಶಶಿ  ತರೂರ್  ಅವರ ನಾಮನಿರ್ದೇಶನ ಮತ್ತು ಕಾಂಗ್ರೆಸ್ನಲ್ಲಿನ ಅವರ ಅಚಾನಕ್ ಏಳಿಗೆಯ ಹಿಂದೆ, ವಿಶ್ವಸಂಸ್ಥೆಯ ನಿಯಮಗಳನ್ನು ಧಿಕ್ಕರಿಸಿ ಸದ್ದಾಂ ಹುಸೇನ್ನೊಂದಿಗೆ ಆಹಾರಕ್ಕಾಗಿ ತೈಲ ಹಗರಣದಲ್ಲಿ ಭಾಗಿಯಾದ ಕಾಂಗ್ರೆಸ್ಸಿಗರನ್ನು ಬಚಾವು ಮಾಡುವ ಉದ್ದೇಶ ಕೆಲಸ ಮಾಡಿತ್ತೇ?
ಪೌಲ್ ವಾಲ್ಕರ್ ತನಿಖಾ ವರದಿಯಲ್ಲಿ ನಟವರ್ ಸಿಂಗ್ ಹೆಸರು ಕಾಣಿಸಿಕೊಂಡಿತು. ಆದರೆ ಕಾಂಗ್ರೆಸ್ನ ನಾಯಕರ ಹೆಸರುಗಳು ಪ್ರಕಟವಾಗುವ ಬದಲು, ಆ ವರದಿಯಲ್ಲಿ ಕೇವಲ ಎಐಸಿಸಿಯ ಹೆಸರಷ್ಟೇ ನಮೂದಾಗಿತ್ತು. ಕಾಂಗ್ರೆಸ್ನ ಚುಕ್ಕಾಣಿ ಹಿಡಿದಿರುವವರಿಗೆ ಇದಕ್ಕಿಂತಲೂ ದೊಡ್ಡ ಕೊಡುಗೆ-ಉಪಕಾರ ಇನ್ಯಾವುದಿತ್ತು ಹೇಳಿ? ನಟವರ್ ಸಿಂಗ್ರ ರಾಜಕೀಯ ಜೀವನವಂತೂ ಮುಕ್ತಾಯವಾಯಿತು. ಗಾಂಧಿಗಳಿಗೆ ಒಂಚೂರೂ ತೊಂದರೆ ಆಗಲಿಲ್ಲ.
ಅಂದಿನಿಂದ ಶಶಿ  ತರೂರ್  ಬೆಳೆಯುತ್ತಲೇ ಸಾಗಿದ್ದಾರೆ....!



- ವೀರೇಂದ್ರ ಕಪೂರ್
virendra1946@yahoo.co.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement