ಲೈಂಗಿಕ ಶಿಕ್ಷಣಕ್ಕಾಗಿ ಇಡುವ ಬೊಬ್ಬೆ ನೈತಿಕ ಶಿಕ್ಷಣಕ್ಕೇಕಿಲ್ಲ?
ಇತ್ತೀಚೆಗೆ ಸುದ್ದಿವಾಹಿನಿಗಳಲ್ಲಿ ವಿವಾದವೊಂದು ಭಾರಿ ಸದ್ದು ಮಾಡಿತು. ನಮ್ಮ ದೇಶದ ಆರೋಗ್ಯ ಸಚಿವರು
ಇತ್ತೀಚೆಗೆ ಸುದ್ದಿವಾಹಿನಿಗಳಲ್ಲಿ ವಿವಾದವೊಂದು ಭಾರಿ ಸದ್ದು ಮಾಡಿತು. ನಮ್ಮ ದೇಶದ ಆರೋಗ್ಯ ಸಚಿವರು ವ್ಯಕ್ತಪಡಿಸಿದ ಅಭಿಪ್ರಾಯ 24x7 ಚರ್ಚೆಗೆ ಕಾರಣವಾಗಿ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಯಿತು. ಆರೋಗ್ಯ ಸಚಿವರಾಗಲು ಅವರು ಅಯೋಗ್ಯರು ಎನ್ನುವಷ್ಟರ ಮಟ್ಟಿಗೆ ಟೀಕೆಗಳು ವ್ಯಕ್ತವಾದವು. ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಸರಿಯಾದ ಅರಿವಿರದ ಇವರು ವೃತ್ತಿಯಲ್ಲಿ ವೈದ್ಯರು ಬೇರೆ ಎಂಬ ಮೂದಲಿಕೆಯ ಮಾತುಗಳೂ ಕೇಳಿ ಬಂದವು. ಇಷ್ಟೆಲ್ಲಾ ಟೀಕೆಗಳಿಗೆ ಕಾರಣವಾದ ಆ ಅಭಿಪ್ರಾಯವಾದರೂ ಏನು? ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣಕ್ಕಿಂತ ನೈತಿಕ ಶಿಕ್ಷಣದ ಅಗತ್ಯ ಹೆಚ್ಚು ಎಂಬ ಅನಿಸಿಕೆಯನ್ನು ಡಾ.ಹರ್ಷವರ್ಧನ್ ತಮ್ಮ ವೈಯಕ್ತಿಕ ವೆಬ್ಸೈಟ್ನಲ್ಲಿ ಬರೆದುಕೊಂಡಿದ್ದರಂತೆ. ಇದು ಈ ಪರಿ ರಾದ್ಧಾಂತಕ್ಕೆ ಎಡೆ ಮಾಡಿಕೊಡುವ ವಿಷಯವೇ? ಹಾಗಿದ್ದರೆ ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣಕ್ಕಿಂತ ಲೈಂಗಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕೇ? ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ತಿಳಿವಳಿಕೆ ಮುಖ್ಯವೋ ಲೈಂಗಿಕ ತಿಳಿವಳಿಕೆಯೋ ಎಂಬುದು ಇಂದು ಚರ್ಚೆಗೊಳಪಡಬೇಕಾದ ವಿಷಯವೇ ಸರಿ.
ದೇಶ ಇಂದು ಸಾಂಸ್ಕೃತಿಕ ಸ್ಥಿತ್ಯಂತರದ ಹಾದಿಯಲ್ಲಿದೆ. ಯುವಜನತೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ಅರ್ಥಪೂರ್ಣ ಬದುಕಿನ ಆನಂದವನ್ನು ಸವಿಯಲಾಗದೆ, ಬಹುಬೇಗ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡು ಆತ್ಮಹತ್ಯೆಯತ್ತ ಮುಖ ಮಾಡುವ ಆಪತ್ ಸ್ಥಿತಿ ಬಂದೊದಗಿದೆ. ಮನೆಯಲ್ಲಿ ಅಪ್ಪ, ಅಮ್ಮ ಬುದ್ಧಿವಾದ ಹೇಳಿದರೆಂದೂ, ಶಿಕ್ಷಕರು ಶಾಲೆಯಲ್ಲಿ ಎಲ್ಲರೆದುರು ಬೈದರೆಂದೂ, ತಾನು ಪ್ರೀತಿಸುತ್ತಿರುವ ಹುಡುಗ-ಹುಡುಗಿ ತನ್ನನ್ನು ಪ್ರೀತಿಸುತ್ತಿಲ್ಲವೆಂತಲೂ ಅಥವಾ ತಮ್ಮನ್ನು ಪ್ರೀತಿಸಿ ಇನ್ನೊಬ್ಬರನ್ನು ಕೈಹಿಡಿದರೆಂತಲೂ, ಇಲ್ಲಾ ಕಡೆಗೆ ತಾವು ಬಯಸಿದ ಟಿ.ವಿ. ಚಾನಲ್ ನೋಡಲು ಬಿಡಲಿಲ್ಲವೆಂಬ ಕ್ಷುಲ್ಲಕ ಕಾರಣಗಳಿಗೂ ತಮ್ಮ ಪ್ರಾಣಗಳನ್ನು ಬಲಿಕೊಡುವ ಮನಃಸ್ಥಿತಿ ಒಂದು ಕಡೆ ಸೃಷ್ಟಿಯಾಗುತ್ತಿದ್ದರೆ, ಇನ್ನೊಂದು ಕಡೆ ಪೋಷಕರ ನಿಶ್ಚಯದಂತೆ ನಡೆಯುವ ವಿವಾಹಗಳಿರಲಿ, ತಾವೇ ಬಯಸಿ ಮಾಡಿಕೊಂಡಂಥ ಪ್ರೇಮವಿವಾಹಗಳೂ ಕೂಡ ಮದುವೆಯಾದ ಮೂರು ದಿನಕ್ಕೋ, ವಾರ, ತಿಂಗಳೂ, ವರ್ಷ ಕಳೆಯುವಷ್ಟರಲ್ಲೇ ಹೊಂದಿಕೊಂಡು ಬಾಳಲಾಗದೆ ವಿಚ್ಛೇದನಕ್ಕೆ ಅರ್ಜಿ ಹಾಕುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ವಿವಾಹ ಸಮಾರಂಭಕ್ಕೆಂದು ಗಂಡು ಹೆಣ್ಣಿನ ಕಡೆಯವರು ದುಬಾರಿ ಛತ್ರಗಳಿಗೆ ಬಂದು ವರಪೂಜೆ, ಆರತಕ್ಷತೆ ಅದ್ಧೂರಿಯಾಗಿ ಮುಗಿಸಿ ಮಾರನೇ ದಿನ ಮಾಂಗಲ್ಯ ಶಾಸ್ತ್ರ ಮಾಡಬೇಕೆನ್ನುವ ಹೊತ್ತಿಗೆ ಗಂಡು ಇಲ್ಲವೇ ಹೆಣ್ಣು ಪರಾರಿಯಾಗುವ ವಿಚಿತ್ರ ಸನ್ನಿವೇಶಗಳು, ಟಿ.ವಿ.ಯವರೇನು ತಮ್ಮ ಕಷ್ಟ ಆರಿಸಿಯಾರೇ, ತೀರಿಸಿಯಾರೇ ಎಂಬ ಕಿಂಚಿತ್ ಜ್ಞಾನವಿಲ್ಲದೆ, ಅವರು ತಮ್ಮ ಲಾಭಕ್ಕಾಗಿ ಮಾಡುವ ನೇರಪ್ರಸಾರ ಕಾರ್ಯಕ್ರಮಗಳಲ್ಲಿ ಬಂದು ಕೂತು ತಮ್ಮ ಮನೆಯ ಹುಳುಕುಗಳನ್ನು ತಾವೇ ಆಚೆ ಹಾಕಿ, ತಮ್ಮ ಮನೆತನದ ಮಾನ ಮರ್ಯಾದೆಗಳನ್ನು ಹರಾಜು ಹಾಕಿಕೊಳ್ಳುವ ಮತಿಗೇಡಿ ಪ್ರಸಂಗಗಳು, ಅತ್ತೆ ಮಾವನ ಜೊತೆ ಬಾಳಲಿಷ್ಟವಿಲ್ಲದೆ ಗಂಡನನ್ನು ಬೇರೆ ಮನೆ ಮಾಡುವಂತೆ ಒತ್ತಾಯಿಸಿ, ಅವನು ಒಪ್ಪದಿದ್ದಾಗ ಸುಳ್ಳು ವರದಕ್ಷಿಣೆ ಕೇಸಗಳನ್ನು ಹಾಕಿ, ಗಂಡನ ಮನೆಯವರನ್ನೆಲ್ಲಾ ಜೈಲಿಗಟ್ಟಿ ಸಂಭ್ರಮಿಸುವ ನೀಚ ಮನಸ್ಥಿತಿ, ತಂದೆ ತಾಯಿಯನ್ನು ಮುಪ್ಪಿನಲ್ಲಿ ವೃದ್ಧಾಶ್ರಮಗಳಿಗೆ ಅಟ್ಟುವ ನಿಷ್ಕರುಣ ಮನೋಭಾವ, ಮರ್ಯಾದಾ ಹತ್ಯೆ ಪ್ರಕರಣಗಳು ಇವೆಲ್ಲವೂ ಇಂದಿನ ನಮ್ಮ ನೈತಿಕ ಅಧಃಪತನದ ಸಂಕೇತಗಳು. ಇಂದು ತಂದೆ ತಾಯಿ ಸ್ಥಾನದಲ್ಲಿರುವ ಪೀಳಿಗೆ ಮತ್ತು ಮಕ್ಕಳ ಸ್ಥಾನದಲ್ಲಿರುವ ಪೀಳಿಗೆಗೆ ಸರಿಯಾದ ನೈತಿಕ ಶಿಕ್ಷಣವಿಲ್ಲದಿರುವುದೇ ಇಂಥ ಮನಸ್ಥಿತಿಯ ಹುಟ್ಟಿಗೆ ಕಾರಣ.
ಹಿಂದೆ ತಂದೆಯಾದವನು ಗಂಡು ಮಕ್ಕಳಿಗೆ ಜೀವನ ನಡೆಸಲು ಅಗತ್ಯವಾದ ಆರ್ಥಿಕ ಸಂಪಾದನೆಯನ್ನು ಸನ್ಮಾರ್ಗದಲ್ಲಿ ಗಳಿಸುವಂತಹ ಮಾರ್ಗದರ್ಶನ ಮಾಡುತ್ತಿದ್ದರೆ ತಾಯಿಯಾದವಳು ಸದಾಚಾರ, ಸನ್ನಡತೆ ಹೇಳಿಕೊಟ್ಟು ಬರುವ ದುಡಿಮೆಯಲ್ಲೇ ಸಂತೃಪ್ತ ಜೀವನ ಸಾಗಿಸುವ ಸೂತ್ರಗಳನ್ನು ಕಲಿಸುತ್ತಿದ್ದಳು. ಹೆಣ್ಣು ಮಕ್ಕಳಿಗೆ ಸಹನೆ, ತಾಳ್ಮೆ ತ್ಯಾಗ ಎಲ್ಲದರ ಮಹತ್ವ ತಿಳಿಸಿಕೊಟ್ಟು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಮನೋಭಾವ ಬೆಳೆಸುತ್ತಿದ್ದಳು. ಇನ್ನು ಗುರುಗಳು ಇವರುಗಳನ್ನು ತಿದ್ದಿ ತೀಡಿ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗುವಂತೆ ವ್ಯಕ್ತಿತ್ವ ರೂಪಿಸುತ್ತಿದ್ದರು. ಇದಕ್ಕೆ ಪೂರಕವಾಗುವಂತೆ ಶಾಲಾ ಪಠ್ಯ ಪುಸ್ತಕಗಳಲ್ಲಿ ದುರ್ಬುದ್ಧಿ, ದುರಾಸೆ, ದುರ್ವ್ಯಸನಗಳಿಂದಾಗುವ ಕಷ್ಟನಷ್ಟಗಳು, ಸದ್ಬುದ್ಧಿ, ತ್ಯಾಗ, ಪರೋಪಕಾರಗಳಿಂದ ಸಿಗುವ ಸಂತೋಷ ನೆಮ್ಮದಿ ಎಲ್ಲವನ್ನು ಒಳಗೊಂಡಿರುವ ಪಾಠಗಳಿರುತ್ತಿದ್ದವು. ಇವು ಮಕ್ಕಳನ್ನು ಸತ್ಪ್ರಜೆಯಾಗಿ ರೂಪುಗೊಳ್ಳಲು ಬಾಲ್ಯದಿಂದಲೇ ಸಹಾಯ ಮಾಡುತ್ತಿದ್ದವು. ಆದರೆ ಇಂದು ತಂದೆ, ತಾಯಿ, ಗುರು, ಪಠ್ಯ ಎಲ್ಲವೂ ಬೋಧನೆ ಮಾಡುತ್ತಿರುವುದೊಂದೇ... ಸುಲಭವಾಗಿ ಹೆಚ್ಚು ಹೆಚ್ಚು ಹಣ ಗಳಿಸುವುದು ಹೇಗೆ ಎಂದು! ಇವರೆಲ್ಲಾ ಮಕ್ಕಳನ್ನು ಓದುವಾಗ marks scoring machine ಎಂತಲೂ ನಂತರ money Printing Machine ಎಂತಲೂ ಭಾವಿಸಿ ಹಣ ಗಳಿಸುವುದರತ್ತಲೇ ಪ್ರೋತ್ಸಾಹಿಸುತ್ತಿದ್ದರೆ, ಗಳಿಸಿದ ಹಣದಲ್ಲಿ ಹೇಗೆ ಮೋಜು ಮಸ್ತಿ ಮಾಡಬಹುದೆಂದು ಹೊರಗಿನ ಮಾರುಕಟ್ಟೆ ಪ್ರಪಂಚ ಕಲಿಸುತ್ತಿದೆ. ಹಾಗಾಗಿ ಇಂದಿನ ಯುವಜನತೆಯ ಆಶೋತ್ತರಗಳೆಲ್ಲಾ ಕೇವಲ ತನ್ನ ಸುಖ, ಸಂತೋಷದ ಸುತ್ತಲೇ ಗಿರಕಿ ಹೊಡೆಯುವುದರಿಂದ ಯಾವ ಬಾಂಧವ್ಯಗಳೂ ಅವರನ್ನು ಸೆಳೆದಿಟ್ಟುಕೊಳ್ಳುತ್ತಿಲ್ಲ. ಒಂದು ರೀತಿಯ ಸ್ವಾರ್ಥದ ಮೊಟ್ಟೆಗಳಾಗಿ ಪರಿವರ್ತಿತರಾಗುತ್ತಿದ್ದಾರೆ.
ಇಂಥ ಒಂದು ಭಯಾನಕ ಬದಲಾವಣೆಯನ್ನು ಗುರುತಿಸಿ ನೈತಿಕ ಶಿಕ್ಷಣ ರೂಪಿಸುವ ಮೂಲಕ ಯುವಜನತೆಯನ್ನು ಮತ್ತೆ ಸರಿದಾರಿಗೆ ತರುವ ಪ್ರಯತ್ನ ಇಂದು ಆಗಲೇಬೇಕಿದೆ. ಅದಕ್ಕಾಗಿ ಸಮಾಜವನ್ನು ತುಂಬಾ ಹತ್ತಿರದಿಂದ ಗಮನಿಸುವ ಮಾಧ್ಯಮಗಳು, ವಿಮರ್ಶಾ ದೃಷ್ಟಿಯಿಂದ ನೋಡುವ ಬುದ್ಧಿಜೀವಿಗಳು ಕೈ ಜೋಡಿಸಬೇಕಿದೆ. ಆದರೆ ನಮ್ಮ ಮಾಧ್ಯಮಗಳಿಗೆ ಹಾಗೂ ಬುದ್ಧಿಜೀವಿಗಳಿಗೆ ನಮ್ಮ ಪೂರ್ವಜರು ಪ್ರತಿಪಾದಿಸಿದ 'ಉತ್ತಮ ಸಮಾಜ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಅಗತ್ಯ' ಎನ್ನುವ ತತ್ವಕ್ಕಿಂತ ಯಾರೋ ಕಾಂಡೋಮ್ ತಯಾರಕರು ತಮ್ಮ ಮಾರುಕಟ್ಟೆಗಾಗಿ ಪ್ರತಿಪಾದಿಸುವ ಲೈಂಗಿಕ ಶಿಕ್ಷಣ ಅಗತ್ಯ ಎಂಬ ತತ್ವವೇ ಹೆಚ್ಚು ಪ್ರಸ್ತುತವಾಗಿ ಕಾಣುತ್ತಿರುವುದು ದುರಂತವೇ ಸರಿ. ಸರಿಯಾದ ರೀತಿಯಲ್ಲಿ ಬುದ್ಧಿಹೇಳುವವರಿಲ್ಲದೆ ಯುವಜನತೆ ಹದಗೆಡುತ್ತಿದೆಯಲ್ಲಾ ಎಂದು ನಿಜವಾದ ಸಮಾಜ ಚಿಂತಕರು ಪರಿತಪಿಸುತ್ತಿದ್ದರೆ, ನಮ್ಮ ದೇಶದಲ್ಲಿ ಲೈಂಗಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುವ ಸ್ವಾತಂತ್ರವಿಲ್ಲವಲ್ಲಾ ಎಂಬುದು ಇವರ ಕೊರಗು. ಅಷ್ಟಕ್ಕೂ ಲೈಂಗಿಕ ವಿಷಯಗಳು ನಮ್ಮಲ್ಲಿ ಮುಕ್ತವಾಗಿಲ್ಲ ಎನ್ನುವುದೇ ಇವರ ತಪ್ಪು ಕಲ್ಪನೆ. ನಮ್ಮ ಪುರಾತನ ದೇವಾಲಯಗಳ ಗೋಪುರಗಳ ಮೇಲೆ ಕಂಡುಬರುವ ವಾತ್ಸಾಯನ ಕಾಮಸೂತ್ರದ ಭಂಗಿಗಳ ಕೆತ್ತನೆಗಳು ಬೇರೆಲ್ಲಿ ಕಾಣಬರಲು ಸಾಧ್ಯ? ನಮ್ಮಲ್ಲಿ ಎಲ್ಲವೂ ಗೌಪ್ಯ, ಎಲ್ಲವೂ ಮುಕ್ತ. ಯಾವ ಯಾವ ವಿಷಯಗಳು ಎಲ್ಲೆಲ್ಲಿ ಮುಕ್ತವಾಗಿರಬೇಕು ಎಲ್ಲಿ ಗೌಪ್ಯವಾಗಿರಬೇಕು ಎಂಬುದೇ ನಿಯಮ. ಸಂದರ್ಭಾನುಸಾರವಾಗಿ ಯಾರ್ಯಾರು ಯಾವ್ಯಾವ ವಿಷಯವನ್ನು ಯಾರ್ಯಾರಲ್ಲಿ ಚರ್ಚಿಸಬೇಕೋ ಚರ್ಚಿಸಿಯೇ ಇರುತ್ತಾರೆ. ವಿಷಯ ಸಂಗ್ರಹ ಮಾಡೇ ಇರುತ್ತಾರೆ. ಕೆಲವು ವಿದ್ಯೆಗಳು ಮನುಷ್ಯರಿಗಷ್ಟೇ ಅಲ್ಲ, ಪಶುಪಕ್ಷಿಗಳಿಗೂ ಕೂಡ ಕಾಲಾನುಕ್ರಮವಾಗಿ ಪ್ರಕೃತಿಯೇ ಕಲಿಸುತ್ತದೆ. ಹೀಗಾಗಿ ಸೆಕ್ಸ್ ಎಜುಕೇಷನ್ನೇ ಬೇಕು ಎಂದೇನೂ ಇಲ್ಲ.
ಇನ್ನು ಜನರಿಗೆ ಸರಿಯಾದ ಲೈಂಗಿಕ ಜ್ಞಾನವಿಲ್ಲದ ಕಾರಣ ್ಡಟಿಡಛಜಿಜ ಡಜ್ಢನಲ್ಲಿ ತೊಡಗಿ ಲೈಂಗಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಅದನ್ನು ತಡೆಯಬೇಕೆಂದರೆ ಲೈಂಗಿಕ ಶಿಕ್ಷಣ ಅತ್ಯಗತ್ಯ ಎಂಬ ವಾದಗಳು ಇವೆ. ಅದಕ್ಕೆ ಉತ್ತರವಾಗಿ ನೈತಿಕ ಶಿಕ್ಷಣದಿಂದ unsafe se ನಲ್ಲಿ ತೊಡಗುವುದನ್ನೇ ತಡೆಯಬಹುದಲ್ಲ? ಹಾಗಾದಾಗ ಖಾಯಿಲೆಗಳಿಗೆ ತುತ್ತಾಗುವುದು ಎಲ್ಲಿಂದ ಬಂತು? ಇನ್ನು "ಈ ಕಾಲದಲ್ಲಿ ನೀತಿ ಪಾಠ ಹೇಳಿದ್ರೆಕೇಳೋರ್ಯಾರು ಅದರಂತೆ ಎಲ್ಲರೂ ನಡ್ಕೊಂಡು ಬಿಡ್ತಾರಾ?" ಎಂಬ ಪ್ರಶ್ನೆ ಮೂಡಬಹುದು. ಆ ರೀತಿ ನೈತಿಕ ಪಾಠ ಕೇಳಲಿಚ್ಛಿಸದವರು ಲೈಂಗಿಕ ಗುರು ಹೇಳುವ ್ಡಟಿಡಛಜಿಜ ಡಜ್ಢನಲ್ಲಿ ತೊಡಗುವ ಮುನ್ನ ಮುಂಜಾಗರೂಕತಾ ಕ್ರಮಗಳನ್ನು ಅಳವಡಿಸಿಕೊಳ್ಳಿ ಎಂಬ ನೀತಿ ಪಾಠವನ್ನೂ ಕೇಳುತ್ತಾರೆಂಬ ಗ್ಯಾರಂಟಿ ಏನು? ಅಲ್ಲ, ಲೈಂಗಿಕ ರೋಗ ತಡೆಗಟ್ಟಲು ಕಾಂಡೋಮ್ ಬಳಸಬೇಕು ಎಂಬ ಸಣ್ಣ ಪಾಠ ಹೇಳಿಕೊಡಲು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ದೊಡ್ಡ ದೊಡ್ಡ ಪಠ್ಯಗಳನ್ನೇ ಅಳವಡಿಸಬೇಕೆ?
ಲೈಂಗಿಕ ಶಿಕ್ಷಣವೆಂದರೆ ಲೈಂಗಿಕ ಕ್ರಿಯೆಗೆ ಸಂಬಂಧಪಟ್ಟ ವಿಚಾರವಷ್ಟೇ ಅಲ್ಲ. ಅದರಲ್ಲಿ ಗಂಡು ಹೆಣ್ಣಿಗೆ ಅಗತ್ಯವಾದ ಎಷ್ಟೋ ವಿಷಯಗಳ ಬಗ್ಗೆ ಅರಿವು ಮೂಡಿಸುವ ವಿಚಾರಗಳಿವೆ ಎಂಬ ಲೈಂಗಿಕ ಶಿಕ್ಷಣದ ಪ್ರತಿಪಾದಕರ ವಾದವನ್ನು ಸ್ವಲ್ಪ ಮಟ್ಟಿಗೆ ಒಪ್ಪಬಹುದಾದರೂ sex awareness ಎಂಬ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕಾಂಡೋಮ್ ಕೇಂದ್ರಿತ ವಿಚಾರಗಳು ವಿಜೃಂಭಿಸುವಷ್ಟು ಬೇರಾವ ವಿಚಾರಗಳು ವಿಜೃಂಭಿಸುವುದಿಲ್ಲ. ಈ ಹಿಂದೆ ನಡೆದ ಅಂತ ಕಾರ್ಯಕ್ರಮದಲ್ಲಿ ರಸ್ತೆ ರಸ್ತೆಗಳಲ್ಲಿ, ಕಾಲೇಜ್ ಕ್ಯಾಂಪಸ್ಗಳಲ್ಲಿ ಉಚಿತವಾಗಿ ಕಾಂಡೋಮ್ಗಳನ್ನು ಹಂಚಿದ್ದು ನೋಡಿದಾಗ ಇವರೇನು ಆರೋಗ್ಯವಂತ ಸಮಾಜ ಕಟ್ಟಲು ಹೊರಟಿದ್ದಾರೋ "ಅಯೋಗ್ಯ ಸಮಾಜ" ನಿರ್ಮಾಣ ಮಾಡಲು ಹೊರಟಿದ್ದಾರೋ ಎಂದು ಎಲ್ಲರೂ ಮುಜುಗರಪಡುವಂತಾಗಿತ್ತು. ಅನಾಸಕ್ತರನ್ನು ಆಸಕ್ತರನ್ನಾಗಿ ಮಾಡಬಹುದಾದ ಇಂಥ ಕಾರ್ಯಕ್ರಮಗಳನ್ನು ಖಂಡಿತ ಒಪ್ಪಿಕೊಳ್ಳಲಾಗುವುದಿಲ್ಲ. ಇದನ್ನೆಲ್ಲಾ ವಿಮರ್ಶಿಸಿದಾಗ sex education ಎಂಬ ಹೆಸರಿನಲ್ಲಿ ಇವರು ಇನ್ನೇನನ್ನೋ ಸಾಧಿಸಹೊರಟಿದ್ದಾರೆ ಎಂಬ ಅನುಮಾನ ಮಾತ್ರ ಬರದೇ ಇರದು. ಕೆಟ್ಟದ್ದನ್ನು ಮಾಡಲೇಬೇಡಿ ಎನ್ನುವ ಸಂದೇಶದ ಬದಲು "ಮಾಡಿ, ಜಾಗರೂಕತೆಯಿಂದ ಮಾಡಿ" ಎಂದು ಹೇಳುವುದು, ಕಳ್ಳತನ ಮಾಡಿ, ಸಿಕ್ಕಿಹಾಕಿಕೊಳ್ಳದಂತೆ ಮಾಡಿ ಲಂಚ ತಿನ್ನಿ ಎಂದು ಹೇಳಿದಂತೆ ಆದೀತು. ಈ ಎಲ್ಲಾ ಸತ್ಯಗಳನ್ನು ತಲೆಯಲ್ಲಿ ಇಟ್ಟುಕೊಂಡು ಮಾಧ್ಯಮಗಳು, ಬುದ್ದಿಜೀವಿಗಳು ಸೆಕ್ಸ್ ಎಜುಕೇಷನ್ ಬಗ್ಗೆಯಾಗಲೀ, ಮಾರಲ್ ಎಜುಕೇಷನ್ ಬಗ್ಗೆಯಾಗಲೀ ಅಭಿಪ್ರಾಯರೂಪಿಸುವುದು ಒಳಿತು.
-ಫಣಿರಾಮಚಂದ್ರ
paniramachandra.hs@gmail.com