ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅದಕ್ಷತೆ ಮರೆಮಾಚುವ ಅಸ್ತ್ರವೇ ಸಂವಿಧಾನ ತಿದ್ದುಪಡಿ?

ನ್ಯಾಯಾಲಯದ ತೀರ್ಪು ಹೊರಬಿದ್ದಾಕ್ಷಣವೇ ಹಾಲಿ ಕಾನೂನಿಗೆ ತಿದ್ದುಪಡಿ ತರುವ ಅಥವಾ ಹೊಸ ಕಾನೂನು...

Rashmi Kasaragodu
Updated On : 9 Jul 2014, 12:42 pm

ನ್ಯಾಯಾಲಯದ ತೀರ್ಪು ಹೊರಬಿದ್ದಾಕ್ಷಣವೇ ಹಾಲಿ ಕಾನೂನಿಗೆ ತಿದ್ದುಪಡಿ ತರುವ ಅಥವಾ ಹೊಸ ಕಾನೂನು ರೂಪಿಸುವ, ಮುಂದುವರಿದು ಸಂವಿಧಾನವನ್ನೇ ತಿದ್ದುಪಡಿ ಮಾಡುವ ಅವಸರದಲ್ಲಿ ನೀವು- ಸರ್ಕಾರಗಳಿರುತ್ತೀರಿ' ಎಂದು ಸರ್ವೋಚ್ಚ ನ್ಯಾಯಾಲಯ ಅನೇಕ ಬಾರಿ ಕಟಕಿ ನುಡಿದಿದೆ. ನ್ಯಾಯಾಂಗ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುತ್ತದೆ ಎಂದು ನಂಬಿ ಸ್ವೀಕರಿಸಬೇಕಾದ ಜನತಾ ಸರ್ಕಾರ ತಿದ್ದುಪಡಿಗೆ ತೋರಿಸುವ ಆತುರವನ್ನು ತನ್ನ ಕಾರ್ಯವೈಖರಿಯ ಪರಾಮರ್ಶೆಗೆ ಆಸಕ್ತಿ ತೋರಿಸುವುದಿಲ್ಲ ಎನ್ನುವುದು ನ್ಯಾಯಾಲಯದ ನಿಲವು. ಅದು ನಿಜವೆಂದು ಇಲ್ಲಿ ಒತ್ತಿ ಹೇಳಬೇಕಾಗಿದೆ.
ಇತ್ತೀಚೆಗೆ ಹೊರಬಿದ್ದ ಶಿಕ್ಷಣ ಮಾಧ್ಯಮ ಕುರಿತಾದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೂ ಇದರ ವಿಮರ್ಶೆಗೆ ತೆಗೆದುಕೊಳ್ಳಬಹುದು. ಮಗು ತಾನು ಯಾವ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂದು ಆಯ್ಕೆ ಮಾಡುವುದು ಪಾಲಕರ ಸಾಂವಿಧಾನಿಕ ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿತ್ತ ಬಳಿಕ ಕರ್ನಾಟಕ ಮುಖ್ಯಮಂತ್ರಿಗಳು ಮಾಡಿದ ಮೊದಲ ಕೆಲಸವೆಂದರೆ ಎಲ್ಲಾ ರಾಜ್ಯಗಳ ಸಹಕಾರವನ್ನು ಪಡೆದು ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಘೋಷಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿರುವುದು ಆರ್ಟಿಕಲ್ 19(1)(ಎ)ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ದತ್ತವಾಗಿದೆ. ಹಾಗಾಗಿ ಮಗು ಯಾ ಅದರ ಪರವಾಗಿ ರಕ್ಷಕರು ಮಗುವಿಗೆ ಯಾವ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂದು ನಿರ್ಧರಿಸುವ ಅವಕಾಶ ಮೂಲಭೂತ ಹಕ್ಕು. ಹಾಗೆ ಆರ್ಟಿಕಲ್ 19(1)(ಜಿ) ಯಲ್ಲಿ ಪೌರನೊಬ್ಬನು ದೇಶದ ಯಾವುದೇ ಭಾಗದಲ್ಲಿ ತಾನು ಇಚ್ಚಿಸಿದ ಉದ್ಯೋಗದಲ್ಲಿ ನಿರತನಿರಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಒಂದು ಉದ್ಯೋಗ ಎಂದು ಡಾ. ಟಿ.ಎಂ.ಎ.ಪೈ ಪೌಂಡೇಷನ್ ಪ್ರಕರಣದಲ್ಲಿ ಇದೇ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗಾಗಿ ಖಾಸಗಿ ವ್ಯಕ್ತಿಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಹಾಗೂ ಆ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಕರು ಅಪೇಕ್ಷಿಸುವ ಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ನೀಡುವುದು ಮೂಲಭೂತ ಹಕ್ಕಿನ ವ್ಯಾಪ್ತಿಯೊಳಗೆ ಬರುತ್ತದೆ. ಅಲ್ಲದೆ ಆರ್ಟಿಕಲ್ 19(2)ರಲ್ಲಿ ದೇಶದ ಸಮಗ್ರತೆ ಹಾಗೂ ಭದ್ರತೆಗೆ ಸಂಬಂಧಿಸಿ ಅಳವಡಿಸಲಾದ ನಿಯಂತ್ರಕಗಳನ್ನು ಹೊರತುಪಡಿಸಿ ಆರ್ಟಿಕಲ್ 19(1)(ಎ) ರಿಂದ (ಜಿ)ವರೆಗೆ ದತ್ತವಾದ ಎಲ್ಲಾ ಸ್ವಾತಂತ್ರ್ಯ ಅಬಾಧಿತ ಮೂಲಭೂತ ಹಕ್ಕು ಎಂಬುದಾಗಿ ಅಭಿಪ್ರಾಯಪಟ್ಟಿದೆ. ಮುಂದುವರಿದು ಮಾತೃಭಾಷೆ ಎಂದರೆ ಪ್ರಾದೇಶಿಕ ಭಾಷೆಯಲ್ಲ. ಮಗುವಿನ ಪರವಾಗಿ ರಕ್ಷಕರು ಯಾವುದು ಮಾತೃಭಾಷೆ ಎಂದು ಹೇಳುತ್ತಾರೋ ಅದು ಎಂದು ಅಭಿಪ್ರಾಯಪಟ್ಟಿದೆ.
ತೀರ್ಪಿನಲ್ಲಿ ಇತರೆ ಯಾವುದೇ ಗೊಂದಲಗಳಿರಲಿ ಸರ್ಕಾರದ ಆಡಳಿತಾತ್ಮಕ ಕ್ರಮನಿಯಂತ್ರಕ ಅಧಿಕಾರವನ್ನು ಎಲ್ಲಿಯೂ ಮೊಟಕುಗೊಳಿಸಿಲ್ಲ. ಸಂವಿಧಾನದಲ್ಲಿ ಪೌರನಿಗೆ ದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ವೈಶಾಲ್ಯ ಹಾಗೂ ಅದರ ಮಹತ್ವವನ್ನು ಮಾತ್ರ ಎತ್ತಿಹಿಡಿಯಲಾಗಿದೆಯಷ್ಟೆ. ಆಡಳಿತಕ್ಕೆ ಸಹಕಾರಿ ಎಂಬ ತತ್ವದ ನೆಲೆಯಲ್ಲಿ ರಚಿತವಾದ ಭಾಷಾವಾರು ಪ್ರಾಂತ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಯ ಬಲವರ್ಧನೆಗೆ ಉತ್ತೇಜದಾಯಕವಾದ ಉಪಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಇರುವ ವಿಫುಲ ಅವಕಾಶಗಳಿಗೆ ಧಕ್ಕೆಯಿಲ್ಲ. ಕರ್ನಾಟಕದಲ್ಲಿ ಈಗ ಆಡಳಿತ ಭಾಷೆ ಕನ್ನಡವೆಂದು ಘೋಷಿಸಲ್ಪಟ್ಟಿದೆಯಲ್ಲದೆ ಅದರ ಪಾಲನೆಯೂ ಆಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡಲಾಗುತ್ತಿದೆ. ಅಲ್ಲದೆ ಕನ್ನಡ ಪರ ಸಂಘಟನೆಗಳೂ ಅಸ್ವಿತ್ವದಲ್ಲಿವೆ. ಪ್ರಕೃತ ಉದ್ಭವಿಸಿದ ಬಿಕ್ಕಟ್ಟೇನೆಂದರೆ ಖಾಸಗಿ ವಿದ್ಯಾಸಂಸ್ಥೆಗಳು ಕೂಡಾ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ನೀಡಬೇಕೆಂಬ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿ ಉಚ್ಚ ನ್ಯಾಯಾಲಯ, ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಪ್ರಸ್ತಾಪಿತ ಆದೇಶ ಅಸಾಂವಿಧಾನಿಕವೆಂದು ಅಭಿಪ್ರಾಯಪಟ್ಟಿದೆ. ಅಂದ ಮಾತ್ರಕ್ಕೆ ಕರ್ನಾಟಕದಲ್ಲಿ ಕನ್ನಡದ ಅಸ್ತಿತ್ವವೇ ಉಡುಗಿ ಹೋಯಿತೆಂದು ಹುಯಿಲೆಬ್ಬಿಸಿ ಶತಾಯಗತಾಯ ಕನ್ನಡದ ಉಳಿವಿಕೆಗಾಗಿ ಸಂವಿಧಾನ ತಿದ್ದುಪಡಿಗೆ ಮುಂದಾಗಿರುವುದು ಆತುರದ ಹೆಜ್ಜೆಯೇ ಸರಿ.
ರಾಜ್ಯದಲ್ಲಿ ಕಳವಳಕಾರಿ ಸ್ಥಿತಿ ಇರುವುದು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ. ಬಹುತೇಕ ಮಂದಿಯ ಚಿತ್ತ ಆಂಗ್ಲಮಾಧ್ಯಮ ಶಾಲೆಗಳ ಕಡೆ ಇದೆ ಎಂದು ಭಾಸವಾಗುತ್ತದೆ. ಈ ಸ್ಥಿತಿ ಮುಂದುವರಿದರೆ ಕನ್ನಡ ಭಾಷೆಯ ಮೇಲೆ ಆಘಾತಕಾರಿ ಪರಿಣಾಮ ಉಂಟಾದೀತು ಎಂಬ ವಿದ್ವಾಂಸರ, ಬುದ್ಧಿಜೀವಿಗಳ ಅಭಿಪ್ರಾಯ ಒಪ್ಪುವಂತದ್ದೆ. ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ ಎಂದರೆ ತಪ್ಪಾಗಲಾರದು. ಸರ್ಕಾರದ ಕೆಲವು ತಪ್ಪು ಧೋರಣೆ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನುಸರಿಸುವ ಲಘು ನೀತಿ, ಬದ್ಧತೆ ಇಲ್ಲದಿರುವಿಕೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ ಎನ್ನುವುದು ಕ್ಷೇತ್ರ ತಜ್ಞರ ಅಭಿಮತ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡಬೇಕೆಂದು ಆದೇಶ ಮಾಡುವುದಕ್ಕಷ್ಟೇ ಸರಕಾರಿ ಸಾಮರ್ಥ್ಯ ಸೀಮಿತವಾಗಬಾರದು. ಕನ್ನಡ ಮಾಧ್ಯಮ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಾಗಿದೆ. ಪ್ರಾಥಮಿಕ ಶಿಕ್ಷಣ ಮುಂದಿನೆಲ್ಲ ಶಿಕ್ಷಣಕ್ಕೆ ಬುನಾದಿ ಎಂದು ವಾದಿಸುವ ನಾವು ಕನ್ನಡ ಮಾಧ್ಯಮ ಶಾಲೆಗಳ ಮೂಲ ಸೌಕರ್ಯ, ಕಲಿಕಾಮಟ್ಟ, ಪರಿಣಿತ ಬೋಧಕವರ್ಗ ಅತಿ ಅಗತ್ಯವೆಂಬುದನ್ನು ಮನಗಾಣಬೇಕು. ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆಗಳು ರಕ್ಷಕರನ್ನು ಆಕರ್ಷಿಸುವ ಮಟ್ಟಕ್ಕೆ ಏರಿಸಬೇಕಾದುದು ಕನ್ನಡದ ಸಹಜ ಕಳಕಳಿಯುಳ್ಳ ಸರ್ಕಾರದ ಜವಾಬ್ದಾರಿ.
ಪ್ರಾಥಮಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆ (ಕನ್ನಡಭಾಷೆ)ಯಲ್ಲಿ ಪಡೆದ ಮಕ್ಕಳು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ಯುನ್ನತ ಪದವಿಗೇರಿರುವುದಲ್ಲದೆ ಅನೇಕ ಮಂದಿ ವಿಜ್ಞಾನಿಗಳೂ ಆಗಿದ್ದಾರೆ ಎಂಬುದು ಸತ್ಯ. ವಿಜ್ಞಾನಿ, ವೈದ್ಯ, ಇಂಜಿನಿಯರ್, ಐಎಎಸ್, ಐಪಿಎಸ್ಗಳಂಥ ಉನ್ನತ ಹುದ್ದೆಗೇರಲು ಪ್ರಾಥಮಿಕ ಶಿಕ್ಷಣ ಆಂಗ್ಲಮಾಧ್ಯಮದಲ್ಲಾಗಿರ ಬೇಕೆಂಬ ವಾದಕ್ಕೆ ಇಲ್ಲಿ ಪುರಸ್ಕಾರವಿಲ್ಲ. ಹಾಗಾದರೆ ಎಲ್ಲರ ಲಕ್ಷ್ಯ ಈಗ ಆಂಗ್ಲಮಾಧ್ಯಮದ ಕಡೆಗೆ ಹರಿಯುತ್ತಿರುವುದೇಕೆ? ಕಾರಣವಿಷ್ಟೇ. ಸರ್ಕಾರದ ಕನ್ನಡ ಮಾಧ್ಯಮ ಶಾಲೆಗಳ ದುರವಸ್ಥೆ.
ಇತ್ತ ಆಂಗ್ಲಮಾಧ್ಯಮ ಶಾಲೆಗಳ ಕಾರ್ಯವೈಖರಿಯ ಮೇಲೂ ಸರ್ಕಾರ ನಿಗಾ ಇಡಬೇಕಾಗಿದೆ. ಅನುಮತಿ ನೀಡುವಾಗಲೂ ಯುಕ್ತಾಯುಕ್ತತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನಿಸುವುದು ವಿಹಿತ. ಮುಖ್ಯವಾಗಿ ಮತೀಯ ಹಾಗೂ ಭಾಷಾ ಅಲ್ಪಸಂಖ್ಯಾತರು ನಡೆಸುವ ಶಾಲೆಗಳಿಗೆ ಅನ್ವಯಿಸುವ ನೇಮ ನಿಬಂಧನೆಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸುವಂತೆ ಸೂಕ್ತ ಮೇಲ್ವಿಚಾರಣೆ ನಡೆಸತಕ್ಕದ್ದು. ಆಗ ಕೇವಲ ವಾಣಿಜ್ಯ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಬೇಡಿಕೆಗಳೂ ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ. ಇದರಿಂದ ಕನ್ನಡ ಶಾಲೆಗಳ ಅಸ್ತಿತ್ವ ಹೆಚ್ಚಿ ಕನ್ನಡ ಭಾಷೆಯ ಬಲವರ್ಧನೆಗೂ ಸಹಾಯವಾಗುತ್ತದೆ. ದುರದೃಷ್ಟವೇನೆಂದರೆ ಅಲ್ಪಸಂಖ್ಯಾತ ಎಂಬ ಪದ ಕೇಳುತ್ತಲೇ ಸರ್ಕಾರ ದುರ್ಬಲವಾಗಿ ಮುದರಿಕೊಳ್ಳುತ್ತದೆ. ನಿಷ್ಠುರವಾಗಿ ಕಾನೂನು ಜಾರಿ ಮಾಡಲು ಹಿಂದು ಮುಂದು ನೋಡುತ್ತದೆ. ಮೇಲಾಗಿ ಕರ್ನಾಟಕದಲ್ಲಿ ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳನ್ನು ನಮ್ಮ ಶಾಸಕ, ಸಚಿವರುಗಳೇ ನಡೆಸುತ್ತಿದ್ದಾರೆ. ಕೆಲವರು ನೇರ ತಮ್ಮ ಹೆಸರಲ್ಲಿ ನಡೆಸುವುದಾದರೆ ಇನ್ನೂ ಕೆಲವರು ಬೇನಾಮಿ ಹೆಸರಲ್ಲಿ ನಡೆಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ನಿಷ್ಪಕ್ಷಪಾತ ಮೇಲ್ವಿಚಾರಣೆಯನ್ನು ನಡೆಸಬಲ್ಲದೇ?
ಈ ನಡುವೆ ಸಾರ್ವಜನಿಕರಿಗೆ ಮಂಕುಬೂದಿ ಚೆಲ್ಲುವ ಆತುರದಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಆಶ್ವಾಸನೆ ನೀಡುತ್ತಾರೆ. ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದೇನೋ ನಿಜ. ಆದರೆ ತಿದ್ದುಪಡಿಗಾಗಿಯೇ ಇರುವ ಪುಸ್ತಕ ಅದಲ್ಲ ಎಂಬ ಎಚ್ಚರ ರಾಜಕಾರಣಿಗಳಿಗಿರಬೇಕು. ಸುಮಾರು 230 ವರ್ಷದ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಸಂಯುಕ್ತ ಅಮೆರಿಕ 26 ಸಂವಿಧಾನ ತಿದ್ದುಪಡಿಗಳನ್ನು ಮಾಡಿರುತ್ತದೆ. ಆದರೆ ಭಾರತ 65 ವರ್ಷಗಳಲ್ಲಿ ತಿದ್ದುಪಡಿಗಳ ಶತಕ ಬಾರಿಸಿ ಬ್ಯಾಂಟಿಂಗ್ ಕಾಯ್ದಿರಿಸಿಕೊಂಡಿದೆ. ಅನುಷ್ಠಾನ ದೋಷ ಹಾಗೂ ಅನುಷ್ಠಾನ ಕಾಲದಲ್ಲಿ ನುಸುಳಿದ ಅದಕ್ಷತೆಯಿಂದ ಉಂಟಾದ ದೋಷಗಳ ಪರಿಹಾರಕ್ಕೆ ಸಂವಿಧಾನ ತಿದ್ದುಪಡಿ ಮಾಡುವ ಹವ್ಯಾಸ ಸಂವಿಧಾನವನ್ನು ನಿಸ್ಸಂಶಯವಾಗಿ ಶಿಥಿಲಗೊಳಿಸುತ್ತದೆ.

- ಬೇಳೂರು ರಾಘವ ಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement