ಕುಮಾರ, ಮೇಲ್ಮನೆ ಆದರ್ಶ ಢಮಾರಾ?
ಕನಿಷ್ಠ ಅಂಥದ್ದೊಂದು ಸಂಭಾಷಣೆಯನ್ನು ಸಮರ್ಥಿಕೊಳ್ಳುವಾಗ ಅದರ ...
ಕನಿಷ್ಠ ಅಂಥದ್ದೊಂದು ಸಂಭಾಷಣೆಯನ್ನು ಸಮರ್ಥಿಕೊಳ್ಳುವಾಗ ಅದರ ಪರಿಣಾಮ ಏನಾಗಬಹುದು, ರಾಜ್ಯದ ಜನತೆಗೆ ಯಾವ ಸಂದೇಶ ಹೋಗಬಹುದು ಎಂಬ ವಿವೇಚನೆಯೂ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಇಲ್ಲದಂತಾಗಿರುವುದು ಈ ನಾಡಿನ ದುರಂತ. ಮಾಡಿದ್ದೇ ತಪ್ಪು, ಅದರಲ್ಲೂ ಅದನ್ನು ಸಮರ್ಥಿಸಿಕೊಳ್ಳುವಾಗ ಭಾರಿ ಸಂಭಾವಿತತನದ ಫೋಸು ಕೊಡುವ ನಮ್ಮ ರಾಜಕಾರಣಿಗಳಲ್ಲಿ ಎಳ್ಳಷ್ಟೂ ಪ್ರಾಮಾಣಿಕತೆ ಉಳಿದಿಲ್ಲವೆ? ಅಥವಾ ನಾವು ಅದನ್ನು ನಿರೀಕ್ಷಿಸುವುದೇ ತಪ್ಪೇ?
ಹಾಗಲ್ಲದಿದ್ದರೆ ವಿಧಾನ ಪರಿಷತ್ ಸದಸ್ಯತ್ವಕ್ಕೆ 40 ಕೋಟಿಯಷ್ಟು ಬೃಹತ್ ಮೊತ್ತದ ಬೇಡಿಕೆಯಿಟ್ಟದ್ದಲ್ಲದೇ, 'ಅದರಲ್ಲಿ ವಿಶೇಷವೇನೂ ಇಲ್ಲ. ನಾನೇನೂ ಹೊಸದನ್ನು ಹೇಳಿಲ್ಲ. ವಾಸ್ತವವನ್ನು ತೆರೆದಿಟ್ಟಿದ್ದೇನೆ. ಎಲ್ಲ ಕಡೆ ನಡೆಯುತ್ತಿರುವುದೇ ಇದು' ಎಂಬ ಸಾಚಾತನವನ್ನು ಪ್ರದರ್ಶಿಸಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರ ಧೋರಣೆ ನಿಜಕ್ಕೂ ಪ್ರಶ್ನಾರ್ಹವೇ. ಸಾರಾಸಗಟಾಗಿ ರಾಜಕಾರಣ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ ಎಂಬರ್ಥದ ಮಾತನ್ನು ಜನಸಾಮಾನ್ಯರಂತೆ ಸಾಮಾನ್ಯೀಕರಿಸಿ ಹೇಳುವುದನ್ನು ಭಂಡತನವೆನ್ನದೇ ವಿಧಿಯಿಲ್ಲ. ಅದೂ ಒಬ್ಬ ಜವಾಬ್ದಾರಿಯುತ ನಾಯಕನಾಗಿದ್ದುಕೊಂಡು, ಮಾಜಿ ಮುಖ್ಯಮಂತ್ರಿಯಾಗಿ ಈ ನಾಡಿನ ಚುಕ್ಕಾಣಿ ಹಿಡಿದಿದ್ದವರೊಬ್ಬರು ಇಂಥ ಮಾತನ್ನು ಹೇಳುತ್ತಾರೆಂದರೆ ಪ್ರತಿಯೊಬ್ಬ ರಾಜಕಾರಣಿಯೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಇಷ್ಟಾದರೂ ಯಾವೊಬ್ಬ ನಾಯಕನೂ ಈ ಬಗ್ಗೆ ಪ್ರತಿಭಟನೆಯ ಧ್ವನಿ ಎತ್ತದೆ ಉಳಿದಿರುವುದು ವ್ಯವಸ್ಥೆಯ ಬಗ್ಗೆ ಇನ್ನಷ್ಟು ಗುಮಾನಿಗಳನ್ನು ಹುಟ್ಟು ಹಾಕುತ್ತದೆ. ಅಲ್ಲಲ್ಲಿ ಕೆಲ ಮುಖಂಡರು ವೈಯಕ್ತಿಕವಾಗಿ ವಿರೋಧಿ ಹೇಳಿಕೆಗಳನ್ನು ನೀಡಿದ್ದು ಬಿಟ್ಟರೆ ಪ್ರಮುಖ ಪಕ್ಷಗಳಿಂದಾಗಲಿ, ಆಡಳಿತಾರೂಢರಿಂದಾಗಲಿ ಅಧಿಕೃತವಾಗಿ ಗಂಭೀರ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಂದರೆ ಕುಮಾರಸ್ವಾಮಿಯವರ ಹೇಳಿಕೆಗೆ ವ್ಯಕ್ತವಾಗಿರುವ ಮೌನ ಸಮ್ಮತಿಯ ಲಕ್ಷಣವೆಂದು ಭಾವಿಸಬೇಕೆ? ಅಂತಾದರೆ ನಮ್ಮ ರಾಜಕೀಯ ವ್ಯವಸ್ಥೆ, ಅದರಲ್ಲಿದ್ದು ನಮ್ಮ ಪ್ರತಿನಿಧಿಗಳೆನಿಸಿಕೊಳ್ಳುತ್ತಿರುವವರು ಎತ್ತ ಸಾಗುತ್ತಿದ್ದಾರೆಂಬುದಕ್ಕೆ ಈ ಹೇಳಿಕೆಯನ್ನು ದಿಕ್ಸೂಚಿಯೆಂದು ಭಾವಿಸಬೇಕೆ? ಒಂದೊಮ್ಮೆ ಹಾಗೇ ಆಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಮನಸ್ಸುಗಳಿಗೆ ಇದನ್ನು ಒಪ್ಪಿಕೊಂಡು ಬಾಯ್ಮುಚ್ಚಿಕೊಂಡು ಇರುವುದನ್ನು ಬಿಟ್ಟು ಬೇರೆಯ ದಾರಿಯೇ ಇಲ್ಲವೇ?
ಮಾತೆತ್ತಿದರೆ ಆದರ್ಶಗಳನ್ನು, ವ್ಯವಸ್ಥೆ ಸುಧಾರಣೆ ಅಭಿವೃದ್ಧಿಯ ವ್ಯಾಖ್ಯೆಯನ್ನು ಪುಂಖಾನುಪುಂಖವಾಗಿ ಪ್ರತಿಪಾದಿಸುವ, ಸಮಾನತೆ, ಸಾಮಾಜಿಕ ತಾರತಮ್ಯ ನಿವಾರಣೆಯ ಸಿದ್ಧಾಂತವೇ ಜೀವಾಳ ಎಂದುಕೊಂಡು ತಿರುಗಾಡುವ ಪಕ್ಷಗಳಲ್ಲಿ ನಿಜಕ್ಕೂ ನಡೆಯುತ್ತಿರುವುದು ಇದೇ ಏನು? ಕೋಟಿ ಕೋಟಿಗಳನ್ನು ಹಂಚಿಕೊಳ್ಳುವುದೇ ಸಮಾನತೆಯೆ? ಭ್ರಷ್ಟಾಚಾರದ ವಿಕೇಂದ್ರೀಕರಣವೇ ಸುಧಾರಣೆಯೆ? ಆಡಳಿತದ, ಅಧಿಕಾರದ ಅಂತಿಮ ಗುರಿ ಅಕ್ರಮ ಸಂಪತ್ತೇ? ನಮ್ಮ ಜನಪ್ರತಿನಿಧಿಗಳೆನಿಸಿಕೊಂಡವರ ಬಾಯಲ್ಲಿ ಉದುರುವ 'ಜನಸೇವೆ'ಯ ಅಣಿಮುತ್ತಿಗೆ ಇದೇ ನೈಜ ಅರ್ಥವೇ? ಉತ್ತರಿಸಬೇಕಾದ ಹೊಣೆ ಪ್ರತಿಯೊಬ್ಬ ರಾಜಕಾರಣಿಯದ್ದೂ ಇದೆ. ಇಲ್ಲದಿದ್ದರೆ ಕುಮಾರಸ್ವಾಮಿಯವರ ಹೇಳಿಕೆಯನ್ನು ಎಲ್ಲರೂ ಅನುಮೋದಿಸುತ್ತಿದ್ದಾರೆಂದೇ ಭಾವಿಸಬೇಕಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ನ ಶಾಸಕರು ಈ ಬಗ್ಗೆ ತಮ್ಮ ಪ್ರತಿಭಟನೆಯನ್ನು ದಾಖಲಿಸಲೇಬೇಕಿದೆ. ಏಕೆಂದರೆ ಕುಮಾರಸ್ವಾಮಿಯವರು ತಮಗೆ ಹಣ ಬೇಕು ಎಂದು ಹೇಳಿಲ್ಲ. ವಿಜುಗೌಡ ಅವರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಶಾಸಕರು ಮತ ಚಲಾಯಿಸಬೇಕೆಂದಾದಲ್ಲಿ ಅವರಿಗೆ ತಲಾ ಒಂದು ಕೋಟಿ ರು. ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಂದರೆ ಜೆಡಿಎಸ್ನ ಎಲ್ಲ ಶಾಸಕರೂ ತಮ್ಮ ಅತ್ಯಮೂಲ್ಯ ಮತವನ್ನು ಮಾರಿಕೊಳ್ಳಲು ನಿಂತಿದ್ದರು ಎಂದೇ ಅರ್ಥವಲ್ಲವೇ? ಈವರೆಗೆ ಅವರು ಎಲ್ಲ ಸಂದರ್ಭದಲ್ಲೂ ಮತ ಚಲಾಯಿಸಿದ್ದು, (ಈ ಬಾರಿ ಸಹ) ಹಣ ಪಡೆದೇ ಎಂದಾಯಿತು. ಅದಿಲ್ಲದಿದ್ದರೆ ಪಕ್ಷದ ಶಾಸಕಾಂಗ ನಾಯಕ ಇಷ್ಟು ಧೈರ್ಯವಾಗಿ ಒಬ್ಬ ಅಭ್ಯರ್ಥಿ ಆಕಾಂಕ್ಷಿಯೆದುರು ಶಾಸಕರ ಪರವಾಗಿ ಹಣ ಯಾಚನೆ ಮಾಡಲು ಹೇಗೆ ಸಾಧ್ಯ? ಆನಂತರವೂ ಅದನ್ನು 'ವಾಸ್ತವವನ್ನು ಹೇಳುತ್ತಿದ್ದೇನೆ. ಇದಷ್ಟೇ ಅಲ್ಲ, ಎಲ್ಲ ಆಯ್ಕೆಯ ಬಗ್ಗೆಯೂ ತನಿಖೆಯಾಗಲಿ' ಎಂದು ಸಂಭಾವಿತತನದ ಸಮರ್ಥನೆಯನ್ನು ಸಾರ್ವಜನಿಕವಾಗಿ ಕೊಡಲು ಹೇಗೆ ಸಾಧ್ಯ? ಆ ಪಕ್ಷ, ಅದರ ಸಿದ್ಧಾಂತ, ನಾಯಕತ್ವವನ್ನು ನಂಬಿ ಪ್ರತಿನಿಧಿಸುವ ರಾಜಕಾರಣಿಗಳಿಗೆ ಇದಕ್ಕಿಂತ ಅವಮಾನಿಸುವ ಸಂಗತಿ ಇನ್ನೊಂದು ಇದೆಯೇ? ರಾಜಕಾರಣಿಗಳು ಭ್ರಷ್ಟರು ಎಂಬ ಮಾತು ಮೊದಲೇ ಜನಜನಿತವಾಗಿರುವ ಸನ್ನಿವೇಶದಲ್ಲಿ ಅದನ್ನು ಪುಷ್ಟೀಕರಿಸುವಂತೆ ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ ಅಂತಾದರೆ ಇಂಥ ಪ್ರತಿನಿಧಿಗಳನ್ನು ನಾವು ಇನ್ನೂ ಸಹಿಸಿಕೊಳ್ಳಬೇಕೆ?
ಇದೊಂದೇ ಹೇಳಿಕೆಯಿಂದ ಮೇಲ್ಮನೆಗೆ ಆಯ್ಕೆಯಾದ ಸದಸ್ಯರು, ಮತ್ತು ಅವರ ಆಯ್ಕೆ ಮಾರ್ಗವೂ ಅನುಮಾನಕ್ಕೆ ಎಡೆ ಮಾಡಿಕೊಡುವಂತಿದೆ. ಅಭ್ಯರ್ಥಿ ಆಕಾಂಕ್ಷಿಯಾಗಲು ಕನಿಷ್ಠ 40 ಕೋಟಿ ಖರ್ಚು ಮಾಡುವುದು ಅನಿವಾರ್ಯ ಎಂದಾದರೆ ಅಂಥ 'ಅನಿವಾರ್ಯ'ವನ್ನು ಪೂರೈಸಿಯೇ ಜೆಡಿಎಸ್ನಿಂದ ಮೇಲ್ಮನೆಗೆ ಸದಸ್ಯರು ಆಯ್ಕೆಯಾಗಿದ್ದಾರೆ ಎಂದುಕೊಳ್ಳುವ ಅಪಾಯವಿದೆ. ಕೇವಲ ಸದಸ್ಯತ್ವಕ್ಕೇ ನಲವತ್ತು ಕೋಟಿಯಷ್ಟು ಖರ್ಚು ಮಾಡುವುದು 'ಅನಿವಾರ್ಯ' ಎಂದಾದರೆ ಮುಂದಿನ ಪ್ರಕ್ರಿಯೆಗಳೆಲ್ಲದರ ಮೊತ್ತ ಎಷ್ಟಾಗಬಹುದು? ಅಷ್ಟು ಹಣವನ್ನು ಕುಮಾರಸ್ವಾಮಿ ಎಲ್ಲಿಡುತ್ತಾರೆ? ನಿಜಕ್ಕೂ ಶಾಸಕರಿಗೆ ಕೊಡುತ್ತಾರಾ? ಅಥವಾ ಇದರ ಹಿಂದೆ ಕಪ್ಪುಬಿಳುಪಿನ ಆಟವೇನಾದರೂ ಇದೆಯೇ? ಈ ಎಲ್ಲ ಪ್ರಶ್ನೆಗಳೇಳುವುದು ಸಹಜವೆಂದೆನಿಸುತ್ತದೆ. ಒಟ್ಟಾರೆ ವ್ಯವಸ್ಥೆ ಭ್ರಷ್ಟಗೊಳ್ಳುತ್ತಿರುವುದಕ್ಕೆ ಮೂಲವೇ ಇದು ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡದೇ ಇರದು. ಒಬ್ಬ ಜನಪ್ರತಿನಿಧಿ ಆಯ್ಕೆಯಾಗಲು ಕೋಟಿಗಳನ್ನು ಖರ್ಚು ಮಾಡಬೇಕು, ಒಬ್ಬ ಸರಕಾರಿ ಅಧಿಕಾರಿ ತನ್ನ ನೇಮಕಕ್ಕೆ ಲಕ್ಷಗಟ್ಟಲೆ ಲಂಚ ನೀಡಬೇಕು, ಸಾಮಾನ್ಯ ನೌಕರನೊಬ್ಬ ಉದ್ಯೋಗ ಪಡೆಯಲು ಸಾವಿರಾರು ರೂಪಾಯಿ ವ್ಯಯಿಸಬೇಕು ಎಂದಾದರೆ ಮುಂದೆ ಅವರೆಲ್ಲರೂ ಭ್ರಷ್ಟರಾಗದೇ ಉಳಿಯಲು ಸಾಧ್ಯವೇ ಇಲ್ಲ. ಅದಿಲ್ಲದೇ ಆ ಹಣವನ್ನು ಅವರು ಋಜು ಮಾರ್ಗದಲ್ಲಿ ಅಥವಾ ತಮ್ಮ ವೇತನದ ರೂಪದಲ್ಲಿಯಷ್ಟೇ ಗಳಿಸಲು ಹೇಗೆ ಸಾಧ್ಯ?
ಮೇಲ್ಮನೆಯ ಪಾವಿತ್ರ್ಯ ಮತ್ತು ಔಚಿತ್ಯದ ಪ್ರಶ್ನೆ ಎದ್ದಿರುವುದು ಖಂಡಿತಾ ಈ ಎಲ್ಲ ಹಿನ್ನೆಲೆಯಲ್ಲಿಯೇ. ಹಿರಿಯರ ಸದನವೆಂಬ ಅಗ್ಗಳಿಕೆಯೊಂದಿಗೆ ತುಂಬು ಗೌರವದಿಂದ ನಡೆಸಿಕೊಂಡು ಬರುತ್ತಿದ್ದ ಶಾಸಕಾಂಗದ ಭಾಗವೊಂದು ಇಂಥ ಸ್ಥಿತಿಗೆ ಬಂದು ಮುಟ್ಟಿರುವುದಕ್ಕಿಂತ ಹೆಚ್ಚಿನ ದುರಂತ ಪ್ರಜಾಪ್ರಭುತ್ವದಲ್ಲಿ ಏನಿದ್ದೀತು? ಚುನಾವಣಾ ವ್ಯವಸ್ಥೆಯಲ್ಲಿ ಭಾಗಿಯಾಗಲು ಆಗದ, ರಾಜಕೀಯ ಕ್ಷೇತ್ರದಿಂದ ಹೊರತಾದ, ಆದರೆ ಆಡಳಿತ, ಮಾರ್ಗದರ್ಶನದ ದೃಷ್ಟಿಯಿಂದ ಈ ವ್ಯವಸ್ಥೆಗೆ ಅಗತ್ಯವೆನಿಸುವ ನಾನಾ ಕ್ಷೇತ್ರಗಳ ಗಣ್ಯರನ್ನು, ಹಿರಿಯರನ್ನು ವಿಧಾನಪರಿಷತ್ಗೆ ಕಳುಹಿಸುವುದು ನಮ್ಮ ಸತ್ಸಂಪ್ರದಾಯವಾಗಿತ್ತು. ಈವರೆಗೂ ಮೇಲ್ಮನೆಯ ಸದಸ್ಯರನ್ನು ಅದೇ ಗೌರವದಿಂದ ಕಾಣುತ್ತ ಬರಲಾಗಿತ್ತು. ಆದರೆ ಈಗ ನಿಜಕ್ಕೂ ಅದಕ್ಕೆ ಚ್ಯುತಿ ಬಂದಂತಾಗಿದೆ. ದೇವರು ದೊಡ್ಡವನು. ಏಕೆಂದರೆ ಹಿರಿಯ ರಾಜಕಾರಣಿ, ಸಂಭಾವಿತ ನಾಯಕ, ಸಂವೇದನಾಶೀಲ ವ್ಯಕ್ತಿ ಎಂ.ಸಿ.ನಾಣಯ್ಯನಂಥವರನ್ನು ಮೆಲ್ಮನೆಗೆ ಕಳುಹಿಸುವ ಬುದ್ಧಿ ಕುಮಾರಸ್ವಾಮಿಯವರ ಪಕ್ಷಕ್ಕೆ ಆತ ಕೊಡಲಿಲ್ಲ. ಏಕೆಂದರೆ ಇಂಥ ವ್ಯವಸ್ಥೆಯಲ್ಲಿ ನಾಣಯ್ಯನವರಂಥವರು ನಿಜಕ್ಕೂ 'ಅನಿವಾರ್ಯ'ವಾಗಿ ಅಸಹಾಯಕ ಸ್ಥಿತಿಯಲ್ಲಿ ತೊಳಲಬೇಕಿತ್ತು. ಬಹುಶಃ ನಲವತ್ತು ಕೋಟಿಯಷ್ಟು ಬೃಹತ್ ಮೊತ್ತವನ್ನು ಕೊಡಲು ಅಸಮರ್ಥರು ಎಂಬ ಕಾರಣಕ್ಕೇ ಅವರನ್ನು ವಿಧಾನಪರಿಷತ್ಗೆ ಕಳುಹಿಸುವ ಮನಸ್ಸು ಮಾಡಲಿಲ್ಲವೇನೋ? ಅಥವಾ ನಾಣಯ್ಯನಂಥವರನ್ನು ಕಳುಹಿಸಿಬಿಟ್ಟರೆ ಇನ್ನೊಬ್ಬ ಹಣವಂತ ಕುಳದಿಂದ ಬರುವ ಹಣ ವೃಥಾ ಕೈತಪ್ಪಿ ಹೋಗಿಬಿಡುತ್ತದೆ ಎಂಬ ದೂರದೃಷ್ಟಿಯೂ ಇದ್ದಿರಬಹುದೇನೋ. ಹೀಗೆ ವ್ಯಾಖ್ಯಾನಿಸದೇ ಬೇರೆ ಮಾರ್ಗವೇ ಇಲ್ಲ. ಮಾತ್ರವಲ್ಲ, ಈವರೆಗೆ ಆ ಪಕ್ಷದಿಂದ ಆಯ್ಕೆಯಾದವರು ಮತ್ತು ಮುಂದೆ ಆಯ್ಕೆಯಾಗುವವರಿಗೆ ಇರಬಹುದಾದ ಅರ್ಹತೆ ಮತ್ತೆ ಮಾನದಂಡವನ್ನು ಕುಮಾರಸ್ವಾಮಿಯವರು ಈ ಹೇಳಿಕೆಯ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅವರು ಹೇಳಿದ 'ವಾಸ್ತವ' ಮತ್ತು 'ಅನಿವಾರ್ಯ'ದ ಬಗ್ಗೆ ನಿಜಕ್ಕೂ ಜನ ಸಾಮಾನ್ಯ ಚಿಂತಿಸಬೇಕಾಗಿದೆ.
-ರಾಧಾಕೃಷ್ಣ ಎಸ್. ಭಡ್ತಿ
abhyagatha @yahoo.co.in