ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಕ್ಫ್ ವರದಿ ಮಂಡನೆಯಾದ್ರೆ ಅನೇಕರಿಗೆ ಜೈಲು

Srinivasa Murthy VN
Updated On : 13 Jul 2014, 12:09 pm

ವಕ್ಫ್ ಆಸ್ತಿ ಅತಿಕ್ರಮಣ, ಕಬಳಿಕೆಯ ಕುರಿತಂತೆ 2012 ರಲ್ಲಿ ನೀಡಿರುವ ವರದಿ ಇದೀಗ ಕೋಲಾಹಲ ಸೃಷ್ಟಿಸಿದೆ. ರಿಯಲ್ ಎಸ್ಟೇಟ್ ಉದ್ದಿಮೆದಾರರು, ರಾಜಕಾರಣಿಗಳು, 38 ಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತ ಸಮುದಾಯದವರ ಹೆಸರುಗಳು ವರದಿಯಲ್ಲಿ ಪ್ರಸ್ತಾಪವಾಗಿದ್ದು ಇದೀಗ ಸದನದಲ್ಲಿ ಮಂಡನೆಯಾಗಬೇಕಷ್ಟೆ. ಏತನ್ಮಧ್ಯೆ ಸದರಿ ವರದಿ ಸುಳ್ಳು ಎಂಬರ್ಥ ಬರುವಂತೆ ತಪ್ಪು ಮಾಹಿತಿ ನೀಡಿ ಸದನದ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದಾರೆ ಎಂಬ ಆರೋಪವನ್ನು ಸಚಿವ ಖಮರುಲ್ ಇಸ್ಲಾಂ ಎದುರಿಸುತ್ತಿದ್ದಾರೆ. ಈ ಕುರಿತು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಣಿಪ್ಪಾಡಿ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ...

-ಏನಿದು ವಕ್ಫ್ ಆಸ್ತಿ ಒತ್ತುವರಿ ಹಗರಣ, ನೀವು ಯಾವ ಆಧಾರದಲ್ಲಿ ಒತ್ತುವರಿ ವರದಿ ಸಿದ್ಧಪಡಿಸಿದ್ದೀರಿ?
ಬಡ ಮುಸ್ಲಿಂ ಸಮುದಾಯದ ಅನುಕೂಲಕ್ಕೆ ದಾನ ರೂಪದಲ್ಲಿರುವುದು ವಕ್ಫ್ ಆಸ್ತಿ. ಮಸೀದಿ, ಮದರಸಾ, ಕಬರಸ್ತಾನ, ಅಸೂರಖಾನಾ, ಯತೀಂಖಾನಾ (ಅನಾಥಾಲಯ), ಖುಲ್ಲಾ ನಿವೇಶನಗಳ ರೂಪದಲ್ಲಿ 54 ಸಾವಿರ ಎಕರೆ, ಅಂದಾಜು 200 ಕೋಟಿ ರು. ಬೆಲೆಬಾಳುವ ಆಸ್ತಿ ರಾಜ್ಯದಲ್ಲಿದೆ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾಗಿದ್ದಾಗ ಬೀದರ್‌ನಲ್ಲಿ ನಡೆಸಿದ್ದ ಪರಿಶೀಲನೆ ಸಭೆಯ ಕಾಲಕ್ಕೆ ವಕ್ಫ್ ಆಸ್ತಿ ಕಬಳಿಕೆಯ ನೂರಾರು ದೂರುಗಳು ಬಂದಾಗ ಪರಿಶೀಲನೆ ನಡೆಸಿದೆವು. ಬೀದರ್ ಜಿಲ್ಲೆಯೊಂದರಲ್ಲೇ 2, 800 ಎಕರೆ ಪೈಕಿ, 1, 803 ಎಕರೆ ವಕ್ಫ್ ಆಸ್ತಿ ಕಬಳಿಕೆ, ಕಾನೂನು ಉಲ್ಲಂಘಿಸಿ ಅನ್ಯರಿಗೆ ಮಾರಾಟ ಮಾಡಿದ್ದು ಪತ್ತೆಯಾಯ್ತು. ಬೀದರ್ ಜಿಲ್ಲೆಯೊಂದರಲ್ಲೇ ಈ ರೀತಿಯ ಹಗರಣ ಕಂಡಾಗ ರಾಜ್ಯದ ಇತರೆ ಜಿಲ್ಲೆಗಳ ಪಾಡೇನು ಎಂದು ಚರ್ಚಿಸಿ ಆಯೋಗದ ಇತರೆ ಸದಸ್ಯರ ಬೆಂಬಲ ಪಡೆದು ನಿಯಮಾನುಸಾರ, ವೈಜ್ಞಾನಿಕವಾಗಿ ವಕ್ಫ್ ಆಸ್ತಿಪಾಸ್ತಿ ಒತ್ತುವರಿ. ಮಾರಾಟ, ಕಬಳಿಕೆಯ ವಿಚಾರವಾಗಿ ಕ್ಷಕಿರಣ ಬೀರುವ ಕೆಲಸ ಮಾಡಿದೆ. ಅದರ ಫಲವೇ 2012ರಲ್ಲಿ ಸರ್ಕಾರಕ್ಕೆ ನೀಡಲಾಗಿರುವ ವಕ್ಫ್ ಹಗರಣದ 7, 000 ಪುಟಗಳ ವರದಿ.

-ಹಿಂದೆ ನಿಮ್ಮ (ಬಿಜೆಪಿ) ಸರ್ಕಾರವೇ ಇತ್ತಲ್ಲ, ಈ ವರದಿ ಸದನದಲ್ಲಿ ಮಂಡಿಸಬಹುದಿತ್ತು, ಯಾಕೆ ಆಗಲಿಲ್ಲ? ಬಿಜೆಪಿಗೂ ವರದಿಯ ಸದನ ಪ್ರವೇಶದ ಒಲವಿರಲಿಲ್ಲವೆ?
ಹಾಗೇನಿಲ್ಲ. ಬಿಜೆಪಿ ಸರ್ಕಾರದಲ್ಲೇ ನಾನು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾಗಿ ವಕ್ಫ್ ಆಸ್ತಿ ನುಂಗಿ ಹಾಕಿರುವ ರಾಜಕಾರಣಿಗಳ ಬಣ್ಣ ಬಯಲು ಮಾಡುವ ವರದಿ ನೀಡಿದ್ದು. ಹೀಗಿದ್ದಾಗ ಈ ವಿಚಾರದಲ್ಲಿ ಬಿಜೆಪಿಯ ನಿಲುವಿನ ಮೇಲೆ ಶಂಕೆ ಪಡುವುದು ಸರಿಯಲ್ಲ. ಕೆಲವು ರಾಜಕಾರಣಿಗಳ ಪರಮಾಪ್ತ ಐಎಎಸ್ ಅಧಿಕಾರಿಗಳು ಸೇರಿಕೊಂಡು ವರದಿ ಸದನ ಪ್ರವೇಶವಾಗದಂತೆ ಜಾಲ ಹೆಣೆದು ಯಶ ಕಂಡರು. ಸದಾನಂದಗೌಡರ ಸಂಪುಟದಲ್ಲಿ ವರದಿ ಮಂಡಿಸಿದ್ದೇವೆ. ಆಡಿಟರ್ ಜನರಲ್ ಗಮನ ಸೆಳೆದಿದ್ದೇವೆ. ಕೋಲಾರದವರೊಬ್ಬರು ಈ ವರದಿಯಲ್ಲಿನ ಅನೇಕ ಸಂಗತಿಗಳ ಬಗ್ಗೆ ಲೋಕಾಯುಕ್ತ ಕೋರ್ಟ್‌ನಲ್ಲಿ ದಾವೆ ಸಹ ಹೂಡಿದ್ದಾರೆ. ಈಗ ಬಿಜೆಪಿಯ ಸದಸ್ಯರೇ ಮೇಲ್ಮನೆಯಲ್ಲಿ ವರದಿ ಮಂಡನೆಗೆ ಪಟ್ಟು ಹಿಡಿದಿದ್ದಾರಲ್ಲ? ಸಚಿವ ಖಮರುಲ್ ಇಸ್ಲಾಂ ವರದಿ ಸರಿಯಿಲ್ಲ ಎಂದು ಸದನಕ್ಕೇ ಸುಳ್ಳು ಮಾಹಿತಿ ನೀಡಿರುವ ಆರೋಪ ಎದುರಿಸುತ್ತಿದ್ದಾರಲ್ಲ? ಬಿಜೆಪಿ ಈ ವಿಚಾರದಲ್ಲಿ ಎಂದಿಗೂ ನೇರ, ನಿಷ್ಠುರವಾಗಿದೆ.

-ನಿಮ್ಮ ವರದಿ ಸದನದಲ್ಲಿ ಮಂಡನೆಯಾದ್ರೆ ಏನಾಗುತ್ತದೆ?
ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡವರಲ್ಲಿ ಶೇ. 50 ರಷ್ಟು ರಾಜಕಾರಣಿಗಳೇ ಇದ್ದಾರೆ. ಇವರಲ್ಲಿ ಆಡಳಿತದಲ್ಲಿರುವ ಮಂತ್ರಿ, ಶಾಸಕರೂ ಸೇರಿದ್ದಾರೆ. ವರದಿಯಲ್ಲೇನಿದೆ, ಯಾರ್ಯಾರು ಎಷ್ಟೆಷ್ಟು ಆಸ್ತಿ ಕಬಳಿಸಿದ್ದಾರೆ ಎಂಬುದು ಸದನದಲ್ಲಿ ಮಂಡನೆಯಾಗಿ ಚರ್ಚೆಯಾದಾಗಲೇ ಗೊತ್ತಾಗೋದಲ್ವೆ? ವರದಿ ಸದನಕ್ಕೆ ಬರುವುದು ಬೇಡ ಎಂದು ಈ ಉದ್ದೇಶಕ್ಕಾಗಿಯೇ ಅನೇಕರು ತಡೆಯುತ್ತಿದ್ದಾರೆ. ವರದಿ ಸರ್ಕಾರಕ್ಕೆ ಒಪ್ಪಿಸಿರುವೆ. ಈಗದು ಸದನದ ಆಸ್ತಿ. ಅಲ್ಲಿ ಮಂಡನೆಯಾದಲ್ಲಿ ಈಗ ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರು ಅನೇಕರು ಜೈಲು ಸೇರುತ್ತಾರೆ. ಮುಸ್ಲಿಂ ಸಮುದಾಯದ ಹೆಸರಲ್ಲಿ ಅದ್ಹೇಗೆ ಬಂಡವಾಳ ಮಾಡಿದ್ದಾರೆಂಬ ಅವರ ಅಸಲೀತನ ಬಯಲಾಗುತ್ತದೆ. ವರದಿ ಸದನದಲ್ಲಿ ಮಂಡನೆಯಾದಾಗಲಷ್ಟೇ ವಕ್ಫ್ ಆಸ್ತಿ ತಿಂದು ತೇಗುತ್ತಿರುವವರ ಜಾತಕ ಜಾಲಾಡಲು ಸಾಧ್ಯ. ವರದಿ ಸದನದಲ್ಲಿ ಮಂಡನೆಯೇ ಆಗದಿದ್ರೆ ಮೂಲೆಗುಂಪಾಗುತ್ತದೆ, 7, 000 ಪುಟಗಳಷ್ಟು ವರದಿ ಸಿದ್ಧಪಡಿಸಲು ಮಾಡಲಾದ ಎಲ್ಲಾ ಕಸರತ್ತುಗಳು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುವುದಿಲ್ಲವೆ?

-ವಕ್ಫ್ ಆಸ್ತಿ ಒತ್ತುವರಿಯಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿದ್ದಾರೆ ಅಂತೀರಿ, ಬೇಲಿಯೆ ಎದ್ದು ಹೊಲ ಮೇಯ್ದಂತಲ್ಲವೆ?
ನಿಜ, ಇಲ್ಲಿ ಬೇಲಿಯೇ ಹೊಲ ಮೇಯ್ದಿದೆ. ವಕ್ಫ್ ಮಂಡಳಿಗೆ ಮುಸ್ಲಿಂ ಸಮುದಾಯವರೇ ಅಧ್ಯಕ್ಷರು. ಸದಸ್ಯರೂ ಅವರೇ. ವಕ್ಫ್ ಸಚಿವರು ಆ ಸಮುದಾಯದವರೇ ಆಗಿದ್ದಾರೆ. ಆದಾಗ್ಯೂ ವಕ್ಫ್ ಆಸ್ತಿ ಕರಗುತ್ತಿದೆ. ಅದಕ್ಕೆ ಕಾರಣವೂ ಮುಸ್ಲಿಂ ಸಮದಾಯದ ಜನನಾಯಕರೇ ಎಂಬುದು ದುರಂತ. ವರದಿಯಲ್ಲಿನ ಅನೇಕ ಸಂಗತಿಗಳು ಭಯಾನಕವಾಗಿವೆ. ದೇಶದಲ್ಲೇ ರೇಲ್ವೆ ಇಲಾಖೆ ನಂತರ ಹೆಚ್ಚಿನ ಆಸ್ತಿ ಹೊಂದಿರುವುದು ವಕ್ಫ್. ಇದರ ಸದ್ವಿನಿಯೋಗವಾದಲ್ಲಿ ಮುಸ್ಲಿಂ ಸಮಾಜಕ್ಕೆ ಬಡತನವೇ ಇರೋದಿಲ್ಲ. ಆದರೆ ಮುಸ್ಲಿಂ ಸಮುದಾಯದ ಹೆಸರಲ್ಲಿ ರಾಜಕೀಯ ಮಾಡುವವರೇ ಆಸ್ತಿ ನುಂಗುತ್ತಿದ್ದಾರೆ. ಇನ್ನು ಸಮುದಾಯದ ಕಲ್ಯಾಣ ಸಾಧ್ಯವೆ?

-ಸಚಿವ ಖಮರುಲ್ ಇಸ್ಲಾಂ ರಾಜಿನಾಮೆ ಕೇಳುತ್ತೀರಾ?
ರಾಜಿನಾಮೆ ಕೇಳೋದಕ್ಕಿಂತ ಹೆಚ್ಚಾಗಿ ವರದಿ ಸದನದಲ್ಲಿ ಮಂಡಿಸಲು ಆಗ್ರಹಿಸುತ್ತೇನೆ. ವರದಿ ಸದನದಲ್ಲಿ ಮಂಡಿಸುವ ಮೂಲಕ ಖಮರುಲ್ ಇಸ್ಲಾಂ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ತಮಗಿರುವ ಕಳಕಳಿ, ನಿಷ್ಠೆ ಸಾಬೀತುಪಡಿಸಲಿ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷನಾಗಿ ಲಭ್ಯವಿರುವ ಕಾನೂನು ಕಟ್ಟಳೆಗಳಲ್ಲೇ ವರದಿ ನೀಡಿರುವೆ. ಅದ್ಹೇಗೆ ಕಾನೂನು ಬಾಹಿರ ಆಗಲು ಸಾಧ್ಯ? ಕಾನೂನು ಚೌಕಟ್ಟಲ್ಲೇ ವರದಿ ನೀಡಿರುವೆ. ಅದು ಸದನದಲ್ಲಿ ಮಂಡಿಸಿ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಬಗ್ಗೆ ತನ್ನ ಕಳಕಳಿ ತೋರಿಸಲಿ. ಮತಬ್ಯಾಂಕ್ ರಾಜಕೀಯದಲ್ಲಿ ಬಡ ಮುಸಲ್ಮಾನರ ಹಿತಾಸಕ್ತಿ ಕಾಪಾಡಬೇಕಿದ್ದ ವಕ್ಫ್ ಆಸ್ತಿ ಅನ್ಯಾಯವಾಗಿ ಕೈಬಿಟ್ಟು ಹೋಗುತ್ತಿದೆ.

-ವಕ್ಫ್ ಆಸ್ತಿ ಕಬಳಿಕೆ ನಿಲ್ಲುವ ವಿಚಾರದಲ್ಲಿ ನಿಮ್ಮ ಸಲಹೆ- ಸೂಚನೆ ಏನು?
ಮುಸ್ಲಿಂ ಸಮಾಜ ಜಾಗೃತವಾಗಬೇಕು, ಅದಕ್ಕಾಗಿ ನಾನು ಪ್ರಾಣಭಯ ಲೆಕ್ಕಿಸದೆ ಅಭಿಯಾನ ಮಾಡುತ್ತಿದ್ದೇನೆ. ಇನ್ನು ಸರ್ಕಾರ ತಕ್ಷಣ ಜಿಲ್ಲಾಧಿಕಾರಿಗಳಿಗೆ ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಸೂಚಿಸಬೇಕು. ಒಮ್ಮೆ ವಕ್ಫ್ ಆಸ್ತಿ ಎಂದು ನೊಂದಣಿಯಾದರೆ ಅದು ಯಾವ ಕಾರಣಕ್ಕೂ ಬದಲಾಗದು. ಸರ್ವೋಚ್ಚ ನ್ಯಾಯಾಲಯದ ತೀರ್ಪೇ ಇದೆ. ಹೀಗಿದ್ದಾಗ ಸರ್ಕಾರ ಈ ವಿಚಾರದಲ್ಲಿ ಕಟ್ಟುನಿಟ್ಟು ಕ್ರಮಕ್ಕೆ ಮುಂದಾಗಬೇಕು. ಕೈಬಿಟ್ಟು ಹೋಗಿದೆ ಎನ್ನಲಾದ ವಕ್ಫ್ ಆಸ್ತಿಗಳನ್ನೆಲ್ಲ ಮರಳಿ ಪಡೆಯಬೇಕು. ಗುಲ್ಬರ್ಗ, ಬೀದರ್‌ನಲ್ಲೇ 4 ಸಾವಿರ ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ. ಇದೆಲ್ಲ ಸಂಗತಿ ಸದನದಲ್ಲಿ ಚರ್ಚೆಯಾಗಬೇಕು. ಇದು ಸಾವಿರಾರು ಕೋಟಿ ಮೌಲ್ಯದ ಮುಸ್ಲಿಂ ಸಮಾಜದ ಆಸ್ತಿ. ಅದು ಸಮಾಜಕ್ಕೆ ಉಳಿಯಬೇಕೇ ಹೊರತು ಖದೀಮರ ಪಾಲಾಗಬಾರದು. ಈ ವಿಚಾರದಲ್ಲಿ ಮುಸ್ಲಿಂ ಸಮುದಾಯ, ಬಣ್ಣದ ಮಾತುಗಳ ರಾಜಕಾರಣಿಗಳನ್ನು ನಂಬದೇ ಸಮುದಾಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಎಚ್ಚೆತ್ತುಕೊಳ್ಳಬೇಕಷ್ಟೆ.

-ಶೇಷಮೂರ್ತಿ ಅವಧಾನಿ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement