ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪಡಿತರ ವ್ಯವಸ್ಥೆಯಲ್ಲಿ ಹೊಸ ನಿಯಮಗಳ ಅವ್ಯವಸ್ಥೆ

Srinivasa Murthy VN
Updated On : 13 Jul 2014, 9:34 am

ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ದಿನಕ್ಕೊಂದು ನಿಯಮವನ್ನು ಜಾರಿಗೆ ತರುತ್ತಿದ್ದಾರೆ. ಅದರ ಪ್ರಕಾರ ನ್ಯಾಯಬೆಲೆ ಅಂಗಡಿ ಮಾಲೀಕರು ಅರವತ್ತು ವಯೋವುತಿ ಮೀರಿರಬಾರದು, (ಕೇಂದ್ರ ಸರ್ಕಾರ ಒಂದೊಂದು ಇಲಾಖೆಗೆ ಒಂದೊಂದು ವಯೋವಾನವನ್ನು ನಿಗದಿಪಡಿಸಿದೆ. ಅದರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ 65 ವರ್ಷವಿದ್ದರೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ವಯೋವುತಿ 62 ವರ್ಷ. ಇನ್ನು ರಾಜಕಾರಣಿಗಳಿಗೆ ಈ ನಿಯಮಗಳಿಲ್ಲ) ಒಂದು ತಿಂಗಳ ಮುಂಗಡ ದಾಸ್ತಾನಿಗೆ ಅವಕಾಶವಿರುವಷ್ಟು ವಿಶಾಲವಾದ ಜಾಗವಿರಬೇಕು, (ಅನ್ನಭಾಗ್ಯದ ಅಪಾರ ಪ್ರಮಾಣದ ಪಡಿತರಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುವ ವಿಶಾಲವಾದ ಉಗ್ರಾಣ ವ್ಯವಸ್ಥೆ ಸರ್ಕಾರದ ಸುಪರ್ದಿಯಲ್ಲಿಲ್ಲ. ಈ ನಿಯಮ ಜಾರಿಯಾದರೆ, ಅನ್ಯಾಯ, ಅಕ್ರಮಗಳು ಹೆಚ್ಚಾಗುವ ಸಂಭವವಿದೆ.) ಮಾಲೀಕರನ್ನು ಹೊರತುಪಡಿಸಿ ಬೇರಾರೂ ಅಂಗಡಿಯಲ್ಲಿ ಕೆಲಸವನ್ನು ನಿರ್ವಹಿಸಬಾರದು, ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಕೆಲಸ ನಿರ್ವಹಿಸಬೇಕು.... ಹೀಗೆ ದಿನಕ್ಕೊಂದು ನಿಯಮಗಳು ಎದುರಾದರೆ ಪಡಿತರ ಹಂಚಿಕೆ ವ್ಯವಸ್ಥೆಸುಗಮವಾಗಿ ನಡೆಯುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ.
ಈಗಾಗಲೇ ಅನ್ನಭಾಗ್ಯ ಯೋಜನೆಯಿಂದಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಅಪಾರ ಪ್ರಮಾಣದ ಹಣವನ್ನು ಮುಂಗಡವಾಗಿ ಡಿ.ಡಿ. ಮೂಲಕ ಸಲ್ಲಿಸಿ, ಇಲಾಖೆ ಪಡಿತರಗಳನ್ನು ಸರಬರಾಜು ಮಾಡಿದಾಗ ಲಾರಿ ಬಾಡಿಗೆ ಹಾಗೂ ಪಡಿತರಗಳನ್ನು ಲೋಡ್ ಮತ್ತು ಅನ್‌ಲೋಡ್ ಮಾಡಿದ ಕೂಲಿಯನ್ನೂ ಸಲ್ಲಿಸಿ, ನಂತರ ಕಾರ್ಡುದಾರರಿಗೆ ಹಂಚಿಕೆ ಮಾಡಬೇಕಾಗಿದೆ. ಇದರ ಜೊತೆಗೆ ಈ ಅವಧಿಯಲ್ಲಿ ಲೋಡ್ ಹಾಗೂ ಅನ್‌ಲೋಡ್ ಸಮಯದಲ್ಲಿ ಸಂಭವಿಸುವ ನಷ್ಟವನ್ನೂ ಅಂಗಡಿ ಮಾಲೀಕರೇ ಭರಿಸಬೇಕಾಗಿದೆ. ಸೀಮೆ ಎಣ್ಣೆಯ ಪರಿಸ್ಥಿತಿ ಇದಕ್ಕೂ ಭಿನ್ನ. ಸೂಕ್ತ ತಂಪು ವಾತಾವರಣವಿಲ್ಲದಿದ್ದರೆ ಇದು ಆವಿಯಾಗುತ್ತದೆ ಅಥವಾ ಬಿಸಿಲಿನಲ್ಲಿ ಬ್ಯಾರೆಲ್‌ಗಳಿದ್ದರೆ ಹಿಗ್ಗಿ ಹೊರಚೆಲ್ಲಿ ನಷ್ಟ ಸಂಭವಿಸುತ್ತದೆ. ಡಿ.ಡಿ.ಯನ್ನು ಮುಂಗಡವಾಗಿ ಪಡೆದು ತಾಲೂಕು ಕೇಂದ್ರಗಳಿಗೆ ಹೋಗಿ, ಅಲ್ಲಿನ ದಾಸ್ತಾನು ಮಳಿಗೆಗೆಳ ನಿರ್ವಾಹಕರಿಗೆ ಸಲ್ಲಿಬೇಕಾಗಿದೆ. ಅಲ್ಲದೆ ಇವರಿಗೆ ಯಾವುದೇ ಬಗೆಯ ಪ್ರಯಾಣ ಭತ್ಯೆ, ದಿನಭತ್ಯೆ, ಇ.ಎಸ್.ಐ., ಪಿ.ಎಫ್‌ನಂತಹ ಸರ್ಕಾರಿ ಸೌಲಭ್ಯಗಳಾಗಲಿ, ನಿವೃತ್ತಿ ವೇತನ ಸೌಲಭ್ಯಗಳಾಗಲೀ ಲಭ್ಯವಿಲ್ಲ. ಈ ಸಮಸ್ಯೆಗಳ ಜೊತೆಗೆ ಕಾರ್ಡುದಾರರು ಸಮಯಕ್ಕೆ ಸರಿಯಾಗಿ ಬಾರದೆ, ಸೂಕ್ತ ಹಣವನ್ನು ತಾರದೆ, ಮದುವೆ, ಮುಂಜಿ ಇತ್ಯಾದಿಗಳ ಹೆಸರಿನಲ್ಲಿ ಮಾಲೀಕರನ್ನು ಹೆಚ್ಚಿನ ಪಡಿತರಕ್ಕಾಗಿ ಪೀಡಿಸುತ್ತಿರುತ್ತಾರೆ. ಹಳ್ಳಿಗಳಲ್ಲಿನ ನ್ಯಾಯಬೆಲೆ ಅಂಗಡಿ ಮಾಲೀಕರ ದುಸ್ಥಿತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಹಳ್ಳಿಗಳಲ್ಲಿನ ಬಹುತೇಕ ಪಡಿತರ ಚೀಟಿದಾರರು ಭೂರಹಿತ ಕೃಷಿಕಾರ್ಮಿಕರು. ಇವರು ನಿಗದಿತ ಸಮಯದಲ್ಲಿ ಪಡಿತರವನ್ನು ಕೊಂಡೊಯ್ಯಲು ಬರುವುದಿಲ್ಲ. ಬದಲಾಗಿ ಅವರಿಗೆ ಬಿಡುವಾದಾಗ ಆಗಮಿಸುತ್ತಾರೆ. ಬೆಳಿಗ್ಗೆ ಬೇಗ ಕೆಲಸಕ್ಕೆ ಹೋಗಬೇಕೆಂದು ಆರು ಗಂಟೆಗೆ ಕೆಲವರು ಬಂದು, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸುಪ್ರಭಾತವನ್ನು ಹಾಡಿ ಎದ್ದೇಳಿಸಿದರೆ, ಇನ್ನು ಕೆಲವರು ರಾತ್ರಿ ಮಲಗಿದ ನಂತರವೂ ಬಂದು ಶುಭರಾತ್ರಿಯನ್ನು ಕೋರುತ್ತಿರುತ್ತಾರೆ!
ಇದರ ಜೊತೆಗೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿರುವಂತೆ ಇಲ್ಲಿಯೂ ಅನೇಕ ಬಗೆಯ ಅಲಿಖಿತ ನಿಯಮಗಳಿವೆ. ಇಲಾಖೆ ನಡೆಸುವ ಅನೇಕ ಕಾರ್ಯಕ್ರಮಗಳ ಖರ್ಚನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಭರಿಸಬೇಕಾಗಿದೆ. ಅಂಗಡಿ ಮಾಲೀಕರನ್ನು ಹೊರತುಪಡಿಸಿ ಬೇರಾರೂ ಕೆಲಸ ನಿರ್ವಹಿಸುವಂತಿಲ್ಲ ಎಂಬ ನಿಯಮದ ಸಾಧ್ಯತೆಗಳೆಡೆಗೆ ನೋಡುವುದಾದರೆ ಅನ್ನ ಭಾಗ್ಯ ಯೋಜನೆಯನ್ವಯ ಹಂಚಿಕೆಯಾಗುತ್ತಿರುವ ಅಕ್ಕಿ, ಗೋದಿ ಹಾಗೂ ಸಕ್ಕರೆಯನ್ನು ದಿನವಿಡೀ ಒಬ್ಬ ವ್ಯಕ್ತಿ ಕಾರ್ಡ್‌ಗೆ ಅವರು ಪಡೆದಿರುವ ಪಡಿತರದ ಮಾಹಿತಿಯನ್ನು ನಮೂದಿಸಿ, ಅವರ ಬಳಿ ಇರಬಹುದಾದ ಟೋಕನ್‌ಗಳನ್ನು ಪಡೆದು, (ಇವರಲ್ಲಿ ಕೆಲವರು ಹಣ, ಪಡಿತರ ಕಾರ್ಡನ್ನು, ಚಿಲ್ಲರೆಯನ್ನು, ಟೋಕನ್ನನ್ನು, ಚೀಲವನ್ನು ತಂದಿರುವುದಿಲ್ಲ) ಹಣ ಪಡೆದು ರಸೀತಿಯಲ್ಲಿ ಈ ಎಲ್ಲ ಮಾಹಿತಿಯನ್ನು ನಮೂದಿಸಿ ಕಾರ್ಡುದಾರರಿಂದ ಸಹಿ ಅಥವಾ ಹೆಬ್ಬೆರಳಿನ ಗುರುತನ್ನು ಪಡೆದು ದಿನಕ್ಕೆ ಎಷ್ಟು ಜನಕ್ಕೆ ತೂಕ ಮಾಡಿ ಪಡಿತರವನ್ನು ಹಂಚಲು ಸಾಧ್ಯ?

-ವಾದಿರಾಜ, ಬೆಂಗಳೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement