ಶರವೇಗದಲ್ಲಿ ಮಂಜೂರಾದ ಗುಲ್ಬರ್ಗ ಜವಳಿ ಪಾರ್ಕ್
ಉರ್ದು ಭಾಷೆಯಲ್ಲಿ ಗುಲ್ಬರ್ಗ ಎಂಬುದರ ಅರ್ಥ "ಹೂ ಮತ್ತು ಎಲೆಗಳ ಪ್ರದೇಶ' - ಅಂದರೆ ಒಂದು ತೋಟ. ಇಂದು ಗುಲ್ಬರ್ಗ ಜಿಲ್ಲೆಯಲ್ಲಿ ಹಲವಾರು ಹೂದೋಟಗಳು ಹುಟ್ಟಿಕೊಂಡು ಅದರ ಹಳೆಯ ವೈಭವ ಮರುಕಳಿಸಿದೆ. ಇವಾನ್-ಎ-ಶಾಹಿ, ಶರಣ ಬಸವೇಶ್ವರ ಕೆರೆ ಹೂದೋಟ, ನಿಸರ್ಗಧಾಮ ಮುಂತಾದೆಡೆಗಳಲ್ಲಿ ಉತ್ತಮ ಹೂದೋಟಗಳಾದುದನ್ನು ಕಂಡು ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘದವರು ತಮ್ಮ ನೆರೆಹೊರೆಯಲ್ಲೂ ಹೂದೋಟಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ಬೇಡಿಕೆ ಮುಂದಿಟ್ಟರು. ನಗರ ಪಾಲಿಕೆ ಆಯುಕ್ತರು ಪಾಲಿಕೆಯಡಿಯಲ್ಲಿ ಬರುವ ಸ್ಥಳಗಳಲ್ಲಿ ಹೂದೋಟಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಂಘದವರಿಗೆ ಒಂದು ಯೋಜನೆಯನ್ನು ಸೂಚಿಸಿದರು. ತಾವು ಪಾಲಿಕೆಯ ಜಾಗ ಮತ್ತು ಸಸಿಗಳನ್ನು ಒದಗಿಸುವುದಾಗಿಯೂ, ಸಂಘದವರು ಅದರ ನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕೆಂದರು. ಇದರಿಂದಾಗಿ ಅಕ್ರಮವಾಗಿ ಹೂದೋಟಗಳ ಜಾಗಗಳನ್ನು ಆಕ್ರಮಿಸಿಕೊಳ್ಳುವುದಕ್ಕೂ ತಡೆ ಹಾಕಬಹುದೆಂದು ಕ್ರಿಯಾವಾದಿಗಳು ಸಲಹೆ ನೀಡಿದರು. ಜನ ಜಾಗೃತಿಯೊಂದಿಗೆ ಗಿಡಮರಗಳನ್ನು ನೆಟ್ಟಿದುದರಿಂದ ಇಂದು ಗುಲ್ಬರ್ಗ ತನ್ನ ಹೆಸರನ್ನು ಅರ್ಥಪೂರ್ಣವಾಗಿಸಿಕೊಂಡಿದೆ. ಕೋಟೆಯ ಸುತ್ತಲೂ ವಾಸ್ತುಶಾಸ್ತ್ರ ಇಲಾಖೆಯ ಸಹಯೋಗದೊಂದಿಗೆ ವಿಧ ವಿಧವಾದ ಗುಲಾಬಿಗಳ ತೋಟವನ್ನು ಸೃಷ್ಟಿಸಲಾಯಿತು.
ಸಾಂಪ್ರದಾಯಿಕ ಹೂದೋಟಗಳು ಜನರಿಗೆ ಉಲ್ಲಾಸ ಮತ್ತು ಆರೋಗ್ಯವನ್ನಿತ್ತರೆ ನೂತನ ಆರ್ಥಿಕ ಪಾರ್ಕುಗಳು ಹಲವಾರು ಜನರ ಅಭಿವೃದ್ಧಿಗೆ ಕಾರಣವಾಗುತ್ತವೆ. 2009 ರಲ್ಲಿ ಗುಲ್ಬರ್ಗ ಜಿಲ್ಲೆಯಿಂದ ಯಾದಗಿರಿಯನ್ನು ಬೇರ್ಪಡಿಸಿ ಒಂದು ಹೊಸ ಜಿಲ್ಲೆಯನ್ನಾಗಿ ಮಾಡುವವರೆಗೆ ಗುಲ್ಬರ್ಗ ಒಂದು ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 30 ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತದೆ. ಗುಲ್ಬರ್ಗ ಬೆಂಗಳೂರಿನಿಂದ ಉತ್ತರ ದಿಕ್ಕಿಗೆ 613 ಕಿ.ಮೀ. ದೂರದಲ್ಲಿದ್ದು, ಆರ್ಥಿಕ ರಾಜಧಾನಿಯಾದ ಮುಂಬಯಿಗೆ 580 ಕಿ.ಮೀ. ದೂರದಲ್ಲಿದೆ. ಪ್ರಮುಖ ನಗರಗಳಾದ ಹೈದರಾಬಾದ್, ಪುಣೆ, ಸೊಲ್ಲಾಪುರ, ಹುಬ್ಬಳ್ಳಿ ಕೇವಲ 200-250 ಕಿ.ಮೀ. ಅಂತರದಲ್ಲಿವೆ. ಮೇಲ್ಕಂಡ ನಗರಗಳು ಗುಲ್ಬರ್ಗದಿಂದ ಉತ್ತಮ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿವೆ. ರಾಜ್ಯ ಸರ್ಕಾರವು ಗುಲ್ಬರ್ಗಕ್ಕೆ ಒಂದು ವಿಮಾನ ನಿಲ್ದಾಣವನ್ನು ಮಂಜೂರು ಮಾಡಿದ್ದು, ಇದಕ್ಕಾಗಿ ಸುಮಾರು 700 ಎಕರೆ ಜಮೀನನ್ನು ಉದ್ದೇಶಿತ ಜವಳಿ ಪಾರ್ಕ್ ಬಳಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕರ್ನಾಟಕದ ಇತರೆ ಮುಂದುವರಿದ ನಗರಗಳಿಗಿಂತ ಗುಲ್ಬರ್ಗವು ಅತ್ಯಂತ ಅನುಕೂಲಕರವಾದ ಸೌಕರ್ಯಗಳನ್ನು ಹೊಂದಿದೆ.
ಗುಲ್ಬರ್ಗದಲ್ಲಿ ಎಲ್ಲಾ ತರಹದ ಜವಳಿ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆಯು ಶತಮಾನಕ್ಕೂ ಮೀರಿದ ಕಸುಬಾಗಿದೆ. ಇಲ್ಲಿ ಸುಮಾರು ನೂರೈವತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉತ್ಪನ್ನದಾರರು ಉಡುಪುಗಳ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಪ್ರಸ್ತುತ ಅವರು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿರುತ್ತಾರೆ. ಈ ವ್ಯವಹಾರವು ಗುಲ್ಬರ್ಗ ಭಾಗದಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ಉಡುಪುಗಳನ್ನು ತಯಾರಿಸುವ ಎಲ್ಲಾ ಭಾಗಗಳ ಸದಸ್ಯರನ್ನೊಳಗೊಂಡಂತೆ ಗುಲ್ಬರ್ಗ ಜವಳಿ ಪಾರ್ಕ್ ಪೈ.ಲಿ. ಎಂಬ ಒಂದು ಎಸ್.ಪಿ.ವಿ.ಯನ್ನು (ಸ್ಪೆಷಲ್ ಪರ್ಪಸ್ ವಹಿಕಲ್) ರಚಿಸಲಾಯಿತು. ಇವರೆಲ್ಲ ಎಸ್.ಪಿ.ವಿ. ಪ್ರವರ್ತಕರಾಗಿರುತ್ತಾರೆ: ಸುಭಾಶ್ ಕಮಲಾಪುರೆ, ಅಂಬಾದಾಸ್ ಮಿಸ್ಕಿನ್, ರಮೇಶ್ ಕಮಲಾಪುರೆ, ವಿವೇಕಾನಂದ ಗುಜರಾತಿ, ಅಶ್ವಿನಿ ಮಿಸ್ಕಿನ್. ಇವರೆಲ್ಲ ಹತ್ತಾರು ವರ್ಷಗಳಿಂದ ಉಡುಪು ತಯಾರಿಕಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಚಾರ್ಟರ್ಡ್ ಅಕೌಂಟೆಂಟ್ಉತ್ತಮ್ ಬಜಾಜ್ರವರ ನೇತೃತ್ವದಲ್ಲಿ ಜವಳಿ ಇಲಾಖೆಯ ಉಪನಿರ್ದೇಶಕರಾದ ವಿಜಯ್ ನಿರಾಲಿಯವರೊಂದಿಗೆ, ಎಲ್ಲಾ ಪ್ರವರ್ತಕರೂ ನನ್ನನ್ನು ಭೇಟಿ ಮಾಡಿದರು. ಅವರು ತಯಾರಿಸಿದ ಜವಳಿಯ ಕೆಲವು ಮಾದರಿಗಳನ್ನು ಕಂಡು ನನಗೆ ಮಹದಾಶ್ಚರ್ಯವಾಯಿತು. ಏಕೆಂದರೆ ಅಂತಹುದೇ ಬಟ್ಟೆಗಳು ಗುಲ್ಬರ್ಗದಲ್ಲಿಯೇ ಅದರ ಹತ್ತು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದ್ದವು. ಉದಾಹರಣೆಗೆ ಮಕ್ಕಳ ಫ್ರಾಕುಗಳು ಕಿಲೋಗ್ರಾಂ ತೂಕದ ಲೆಕ್ಕದಲ್ಲಿ ಮಾರಾಟವಾದಾಗ ಕೇವಲ ರು. ಇಪ್ಪತ್ತಕ್ಕೆ ದೊರಕುತ್ತಿದ್ದು, ಅದೇ ಫ್ರಾಕುಗಳು ಅಂಗಡಿಗಳಲ್ಲಿ ರು. ಮುನ್ನೂರಕ್ಕೆ ಮಾರಾಟವಾಗುತ್ತಿದ್ದವು. ನಾನು ಅವರುಗಳ ಉಡುಪು ತಯಾರಿಕಾ ಘಟಕಗಳನ್ನು ವೀಕ್ಷಿಸಲು ಹೋದೆ. ಅವರುಗಳ ಮನೆಗಳಲ್ಲಿ ಒಂದು ಸಣ್ಣ ಕೋಣೆಯಲ್ಲಿ ಒಬ್ಬ ಮುಖ್ಯ ದರ್ಜಿಯ ಕೆಳಗೆ ಎಂಟು ಹತ್ತು ದರ್ಜಿಗಳು ದಿನಕ್ಕೆ ನೂರಾರು ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದರು. ಒಬ್ಬ ಸದಸ್ಯರು ಉತ್ತಮ ತಂತ್ರಜ್ಞಾನವನ್ನು ಅಳವಡಿಸಿದ ಘಟಕವನ್ನು ನಡೆಸುತ್ತಿದ್ದರು. ವಿಜಯ್ ಅವರು ಕೇಂದ್ರ ಸರ್ಕಾರದ ಸುವರ್ಣ ವಸ್ತ್ರ ನೀತಿಯ ಪ್ರೋತ್ಸಾಹ ಧನದ ವಿಷಯಗಳನ್ನು ಸದಸ್ಯರಿಗೆ ವಿವರಿಸಿದರು. ಅವುಗಳೆಂದರೆ: ಸ್ಥಿರಾಸ್ತಿ ಮೌಲ್ಯದ ಶೇಕಡ 15 ರಷ್ಟು (ಹೆಸರಿಸಲಾದ ಜವಳಿ ಪಾರ್ಕ್ನ ವ್ಯಾಪ್ತಿಯಲ್ಲಿರುವ ಘಟಕಗಳಿಗೆ ಹೆಚ್ಚುವರಿಯಾಗಿ ಶೇಕಡ 5 ರಷ್ಟು) ಅಥವಾ ರು.15 ಲಕ್ಷ (ಹೆಚ್ಚುವರಿ ರು.5.00 ಲಕ್ಷ) ಇವುಗಳಲ್ಲಿ ಯಾವುದು ಕಡಿಮೆ ಮೊತ್ತದ ಸಹಾಯಧನ.
ಯಂತ್ರೋಪಕರಣ ಮತ್ತು ಬಂಡವಾಳ ಸಾಮಗ್ರಿಗಳ ಮೇಲಿನ ಪ್ರವೇಶ ತೆರಿಗೆಯ ಪೂರ್ಣ ಮರುಪಾವತಿ. ಗುತ್ತಿಗೆ, ಗುತ್ತಿಗೆ ಮತ್ತು ಮಾರಾಟ ಕರಾರು, ಮಾರಾಟ ಪತ್ರ, ಸಾಲ ಮತ್ತು ಸಾಲದ ಕರಾರು ಪತ್ರ, ಅಡಮಾನ ಕರಾರು ಪತ್ರ, ಮುಂತಾದುವುಗಳ ಮೇಲೆ ವಿಧಿಸುವ ಸ್ಟಾಂಪ್ ಶುಲ್ಕದ ಶೇಕಡ 50 ರಷ್ಟು ಮರುಪಾವತಿ. ಇಂಧನ ಸಹಾಯಧನ/ ಪಾವತಿಸಿದ ವಿದ್ಯುತ್ ವೆಚ್ಚದ ಮೇಲೆ ಪ್ರತಿ ಯುನಿಟ್ಗೆ ರು.1 ರಂತೆ ಮರುಪಾವತಿ.
ಸಾಮರ್ಥ್ಯ ಹೆಚ್ಚಿಸಲು ಸಹಾಯ: (ಅ) ಮಾರುಕಟ್ಟೆ ಅಭಿವೃದ್ಧಿ ಮತ್ತು ಗುರುತಿಸುವಿಕೆ- ಶೇಕಡ 50 ರಷ್ಟು ಯೋಜನಾ ವೆಚ್ಚ ಅಥವಾ ರು.50.00 ಲಕ್ಷ ದರ ಯಾವುದು ಕಡಿಮೆಯೋ ಅಷ್ಟು ಮೊತ್ತದ ಮರುಪಾವತಿ.
(ಆ) ವಿನ್ಯಾಸ ಅಭಿವೃದ್ಧಿ ಮತ್ತು ಬಗೆಬಗೆಯ ಉತ್ಪಾದನೆ- ಶೇಕಡ 50 ರಷ್ಟು ಯೋಜನಾ ವೆಚ್ಚ ಅಥವಾ ರು.25.00 ಲಕ್ಷ, ದರ ಯಾವುದು ಕಡಿಮೆಯೋ ಅಷ್ಟು ಮೊತ್ತದ ಮರುಪಾವತಿ.
(ಇ) ಮಾನಕಗಳು ಮತ್ತು ಅನುಸರಣೆಗಳು- ಶೇಕಡ 50 ರಷ್ಟು ಯೋಜನಾ ವೆಚ್ಚ ಅಥವಾ ರು.2.00 ಲಕ್ಷ ದರ ಯಾವುದು ಕಡಿಮೆಯೋ ಅಷ್ಟು ಮೊತ್ತದ ಮರುಪಾವತಿ. ಆದರೆ ಸದಸ್ಯರುಗಳಿಗೆ ಜಾಗವಾಗಲೀ ಮತ್ತು ಕೇಂದ್ರ ಸರ್ಕಾರದ ಅಂಗೀಕಾರವಾಗಲೀ ದೊರಕದಿದ್ದುದು ಅವರ ಸಮಸ್ಯೆಯಾಗಿತ್ತು. ಆಗ ನಾನು "ಹೇಗಿದ್ದರೂ ಗುಲ್ಬರ್ಗದಲ್ಲಿ ಸಚಿವ ಸಂಪುಟದ ಸಭೆ ನಡೆಯಲಿದೆ. ಮುಖ್ಯ ಮಂತ್ರಿಗಳು ಮತ್ತು ಜವಳಿ ಮಂತ್ರಿಗಳು ಬರುತ್ತಿದ್ದಾರೆ. ಅವರನ್ನು ಕಂಡು ನಿಮ್ಮ ಯೋಜನೆಯನ್ನು ಅವರಿಗೆ ತಿಳಿಸಿ" ಎಂದು ಸಲಹೆ ನೀಡಿದೆ.
ಸಚಿವ ಸಂಪುಟದ ಸಭೆಯ ದಿನ ಮುಖ್ಯ ಮಂತ್ರಿಗಳು ಬೆಳಗಿನ ಐದೂವರೆಯ ರೈಲಿನಲ್ಲಿ ಬಂದಿಳಿದರು. ಬಂದು ಸ್ವಲ್ಪ ಸುಧಾರಿಸಿಕೊಂಡ ನಂತರ ಅವರನ್ನು ಇವಾನ್-ಎ-ಶಾಹಿಯ ಆವರಣದಲ್ಲಿ ಹೊಸದಾಗಿ ಮಾಡಿದ್ದ ಜಪಾನ್ ಮಾದರಿಯ ಹೂದೋಟದ ಅನಾವರಣಕ್ಕೆ ಕರೆದುಕೊಂಡು ಹೋದೆವು. ಬರಡಾಗಿದ್ದ ಜಾಗವು ಈ ರೀತಿ ಓಯಸಿಸ್ ಮಾದರಿಯಲ್ಲಿ ಬದಲಾಗಿರುವುದನ್ನು ಕಂಡು ಮೆಚ್ಚುಗೆ ಸೂಚಿಸಿದರು. ಅಲ್ಲಿದ್ದ ಒಂದು ಕುದುರೆಯ ಶಿಲ್ಪದ ಮುಂದೆ ಕ್ಷಣ ಕಾಲ ನಿಂತು ಆ ಕುದುರೆ ಎಷ್ಟು ನೈಜವಾಗಿದೆಯೆಂದರೆ ಹಿಂದಿನ ರಾಜರುಗಳು ಅದರ ಮೇಲೆ ಸವಾರಿ ಮಾಡುತ್ತಿದ್ದರೇನೋ ಎಂದೆನಿಸುತ್ತಿದೆ ಎಂದರು. ಇವಾನ್-ಎ-ಶಾಹಿಯ ಆವರಣದ ಎರಡನೆಯ ಸುತ್ತು ಬರುತ್ತಿದ್ದಾಗ ನಾನು ಅವರೊಂದಿಗೆ ಜವಳಿ ಪಾರ್ಕ್ನ ವಿಷಯವನ್ನು ಪ್ರಸ್ತಾಪಿಸಿದೆ. ಅದೇ ವೇಳೆಗೆ ಮುಖ್ಯಮಂತ್ರಿಗಳು ನಡೆಯುತ್ತಿದ್ದಂತೆಯೇ ಎಸ್.ಪಿ.ವಿ. ಯ ಸದಸ್ಯರುಗಳು ಬಂದು ಪಾರ್ಕ್ನ ಬೆಳವಣಿಗೆಯಿಂದ ಉಂಟಾಗಬಹುದಾದ ಅನುಕೂಲಗಳ ಬಗ್ಗೆ ವಿವರಿಸಿದರು. ತಕ್ಷಣವೇ ಅವರು ತಮ್ಮ ಪ್ರಧಾನ ಕಾರ್ಯದರ್ಶಿಗಳನ್ನು ಕರೆದು ನನ್ನಿಂದ ಅದಕ್ಕೆ ಸಂಬಂಧ ಪಟ್ಟ ಕಡತಗಳನ್ನು ಪಡೆದು ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮಂಡಿಸಬೇಕೆಂದು ತಿಳಿಸಿದರು. ಮುಖ್ಯ ಮಂತ್ರಿಗಳಿಂದ ಒಪ್ಪಿಗೆ ದೊರಕಿದ ತಕ್ಷಣವೇ ಬೆಳಗ್ಗೆ ಎಂಟರಿಂದ ಒಂಬತ್ತು ಗಂಟೆಯವರೆಗೆ ಎಲ್ಲರೂ ಕುಳಿತು ಟಿಪ್ಪಣಿ ತಯಾರಿಸಿ, ಕೈಗಾರಿಕೆ ಮತ್ತು ಹಣಕಾಸು ಕಾರ್ಯದರ್ಶಿಗಳ ಒಪ್ಪಿಗೆಯನ್ನು ಪಡೆದು ನಂತರ ಮುಖ್ಯ ಕಾರ್ಯದರ್ಶಿಗಳು ಒಪ್ಪಿಗೆಯನ್ನು ಪಡೆಯಲಾಯಿತ್ತು. ಸಚಿವ ಸಂಪುಟ ಆರಂಭವಾಗುವ ಮುನ್ನವೇ ಎಲ್ಲಾ ಸಚಿವರು ಮತ್ತು ಸಂಬಂಧ ಪಟ್ಟವರಿಗೆ ಈ ಟಿಪ್ಪಣಿಯನ್ನು ಹೆಚ್ಚುವರಿ ಕಾರ್ಯಕಲಾಪದ ಪಟ್ಟಿಯನ್ನು ನೀಡಲಾಯಿತು. ನನ್ನ ಜೀವಮಾನದಲ್ಲಿಯೇ ಒಂದು ಯೋಜನೆ ಇಷ್ಟು ವೇಗವಾಗಿ ಒಪ್ಪಿಗೆ ಪಡೆದದ್ದನ್ನು ನಾನು ಕಂಡಿಲ್ಲ. ನಾನು ಅದರ ಒಂದು ಭಾಗವಾಗಿದ್ದುದಕ್ಕೆ ನನಗೆ ಬಹಳ ಸಂತೋಷವಿದೆ. ಜವಳಿ ಪಾರ್ಕ್ನ ಸ್ಥಾಪನೆಯ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿತು. ಕೆ.ಐ.ಎ.ಡಿ.ಬಿ.ಯ ನಂದೂರು ಕೆಸರಟಗಿ ಕೈಗಾರಿಕಾ ವಲಯದಲ್ಲಿ ಎಸ್.ಪಿ.ವಿ.ಗೆ ಐವತ್ತು ಎಕರೆ ಜಾಗವನ್ನು ಮಂಜೂರು ಮಾಡಲಾಯಿತು. ಪಾರ್ಕನ್ನು ಸ್ಥಾಪಿಸಲು ರಾಜ್ಯ ಸರ್ಕಾರ ರು. ಎರಡು ಕೋಟಿ ಮಂಜೂರು ಮಾಡಿತು. ಸುವರ್ಣ ವಸ್ತ್ರನೀತಿ 2008-13 ಅಡಿಯಲ್ಲಿ ಕರ್ನಾಟಕ ಸರ್ಕಾರವು ಉದ್ದೇಶಿತ ಜವಳಿ ಪಾರ್ಕ್ಗೆ ಅನುಮೋದನೆಯನ್ನು ಸಹ ನೀಡಿದೆ.
ಮುಂದಿನ ವಾರ ಜವಳಿ ಪಾರ್ಕ್ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿ ಕೊಡುತ್ತೇನೆ.
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com