ಅಂಕಣಗಳು

ಅಡಕೆ ವೈಭೋಗದೆದುರು ಅಮೆರಿಕನ್ ಡಾಲರ್‌ನ ಕತೆ

ಅಡಕೆ ವೈಭೋಗದೆದುರು ಅಮೆರಿಕನ್ ಡಾಲರ್‌ನ ಕತೆ

ನಮ್ಮೂರಿನ ಕಣ್ಣೆದುರು ಆವಾಗೀವಾಗ ಇಂಥ ಸ್ವರ್ಗದ ತೇರು ಹಾದುಹೋಗುವುದುಂಟು. ಅಡಕೆಗೆ ಭಾರಿ ರೇಟು ಎಂಬುದು ಸದ್ಯದ ಸಂಚಲನ. ಕೆಲ ವರ್ಷಗಳ ಹಿಂದೆ ವೆನಿಲ್ಲಾ ಎಂಬ ಬೆಳೆ ಇಂಥದೇ ಸ್ವರ್ಗವೊಂದನ್ನು ಅಲ್ಪಾವಧಿಗೆ ಕಣ್ಮುಂದೆ ಕುಣಿಸಿತ್ತು. ಈಗ ಅದರ ಅಡ್ರೆಸ್ಸಿಲ್ಲ. ಈಗಿನ ಉನ್ಮಾದಕ್ಕೂ ವಿಳಾಸವಿಲ್ಲ. ಕೆಲವೇ ಕ್ಷಣಗಳ ಅವಧಿಗೆ ಹೀಗೆಲ್ಲ ಸ್ವರ್ಗದ ತೇರನ್ನು ಹತ್ತು ಸಮಸ್ತರ ಎದುರು ಎಳೆದೊಯ್ಯುವ ಕೈಗಳು ಯಾವವು? ಯಾವುದೋ ಹೊಸಬೆಳೆ, ಇನ್ನೆಂಥದೋ ಹುಚ್ಚುಬೆಲೆ ಇದನ್ನೆಲ್ಲ ನೇಪಥ್ಯದಲ್ಲಿ ಕುಳಿತು ಯಾರೋ ನಿರ್ಧರಿಸುತ್ತಾರಲ್ಲ? ಅವರ ವಿಳಾಸ ಯಾವುದು?
ಕೆಲವರ ಬಳಿ ಇವಕ್ಕೆಲ್ಲ ವಿವರಣೆಗಳಿವೆ. ಹಿಂದಿನ ಬಾರಿ ಕೊಳೆರೋಗ ಬಂದು ಅಡಕೆ ಬೆಳೆಯ ಪ್ರಮಾಣವೇ ಕಡಿಮೆಯಾದ್ದರಿಂದ ಈಗ ಹೀಗೆಲ್ಲ ಬೇಡಿಕೆ ಕುದುರಿದೆ. ಆಮದಿಗೆ ಸುಂಕ ಹೆಚ್ಚಿಸಿದ್ದಾರಂತೆ, ಹೀಗಾಗಿ ನಮ್ಮ ಬೆಳೆಗೆ ಬೆಲೆ ಬಂದಿದೆ. ಇವೆಲ್ಲವೂ ಪೂರಕ ಅಂಶಗಳೇ ಆಗಿರಬಹುದು. ಆದರೆ ಲಕ್ಷಗಳ ಸಮೀಪಕ್ಕೆ ದರವು ದಾಂಗುಡಿ ಇಡುವುದಕ್ಕೆ ನಮಗೆ ಅರ್ಥವಾಗದ ಇನ್ನೇನೋ ಅಂಶಗಳು ಆಟವಾಡಿವೆ ಅಂತ ಕೆಲವರಿಗಾದರೂ ಅನ್ನಿಸಿದೆ. ಎಲ್ಲರ ಕಣ್ಣುಗಳನ್ನೂ ಅರಳಿಸುತ್ತಿರುವ ಸ್ವರ್ಗದ ತುಂಡು ಸಿಕ್ಕಿರುವುದಾದರೂ ಯಾರಿಗೆ ಎಂಬುದು ಮರೆಯದೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಈ ರೇಟನ್ನು ಸುಗ್ಗಿಯಾಗಿಸಿಕೊಂಡವರು ನಮ್ಮ ಅಕ್ಕಪಕ್ಕದಲ್ಲಿ ಹೆಚ್ಚಿನವರೇನೂ ಕಾಣುತ್ತಿಲ್ಲ. 'ಆಕಸ್ಮಿಕ' ಎಂಬಂತೆ ಕೆಲವು ಜನಸಾಮಾನ್ಯರಿಗೆ ಲಾಭ ಆಗಿರಬಹುದಾದರೂ ನಿಜಕ್ಕೂ ಲಕ್ಷಗಳನ್ನು ಬಾಚಿದ ಹೈಪ್ರೊಫೈಲ್ ಅಸಾಮಿಗಳು ಯಾರು ಎಂಬ ಬಗ್ಗೆ ನಮಗೆ ಮಾಹಿತಿಗಳಿಲ್ಲ. ಹೋಗಲಿ, ಹೀಗೆಲ್ಲ ಐತಿಹಾಸಿಕ ಬೆಲೆ ಕೊಟ್ಟು ಯಾರೋ ಒಬ್ಬ ವರ್ತಕ ಇವನ್ನೆಲ್ಲ ಖರೀದಿಸಿರುತ್ತಾನಲ್ಲ, ಆತ ಗ್ರಾಹಕನಿಗೆ ಇದಕ್ಕೂ ಹೆಚ್ಚಿನ ಬೆಲೆಗೆ ನೀಡಿದರೆ ಮಾತ್ರವೇ ಲಾಭ ತಾನೇ? ಇಷ್ಟೆಲ್ಲ ಆಗಿ ಈ ಅಡಕೆಯ ಗ್ರಾಹಕ ಯಾರು? ಪಂಚತಾರಾ ಹೊಟೇಲ್‌ಗಳ ಪ್ರತಿಷ್ಠಿತ ವರ್ಗವೇ? ಅವರಿಗೆಲ್ಲ ಅಡಕೆಗಿಂತ ಮೈನವಿರೇಳಿಸುವ ಏನೆಲ್ಲ ಪದಾರ್ಥಗಳಿವೆ. ಗುಟ್ಕಾವೋ, ವೀಳ್ಯದೆಲೆ ರಸಗವಳವೋ ಒಟ್ಟಿನಲ್ಲಿ ಅಡಕೆಯನ್ನು ಮೆಲ್ಲುವ ಬಹುದೊಡ್ಡ ವರ್ಗ 'ಕಾಮನ್‌ಮ್ಯಾನ್‌' ತಾನೇ? ತಾನು ಆಗಸದೆತ್ತರದ ಮೌಲ್ಯದಲ್ಲಿ ಕೊಂಡ ಪದಾರ್ಥವೊಂದನ್ನು ಯಾರಾದರೂ ವರ್ತಕ ಈ ವರ್ಗಕ್ಕೆ ಕೈಗೆಟಕುವ ಬೆಲೆಯಲ್ಲಿ ಹೇಗೆ ಮುಟ್ಟಿಸಬಲ್ಲ? ಅದಿಲ್ಲ ಎಂದಾದರೆ ಅಡಕೆಯನ್ನು ಅವನೇನು ಧರ್ಮಕ್ಕೆ ಖರೀದಿಸುತ್ತಿದ್ದಾನೆಯೇ? ಈ ಪ್ರಶ್ನೆಗಳ ಕೊಂಡಿ ಗೋಜಲೊಂದನ್ನು ಹುಟ್ಟಿಸುತ್ತದೆ.
ರೇಟು ದಕ್ಕಿಸಿಕೊಂಡವರ ಬಗ್ಗೆ ಹೊಟ್ಟೆಕಿಚ್ಚೇಕೆ? ಸರಿ, ಅವರ ಹೊಟ್ಟೆ ತಣ್ಣಗಿರಲಿ. ಆದರೆ ರಪ್ಪಂತ ಹಾದುಹೋಗಿಬಿಡುವ ಇಂಥ ಸ್ವರ್ಗಗಳು ಸಾಮಾನ್ಯರ ಬದುಕನ್ನು ಹೇಗೆಲ್ಲ ನರಕವಾಗಿಸುವ ಸಾಧ್ಯತೆಗಳಿವೆ ನೋಡಿ? ಇದೇ ದರದ ಆಧಾರದಲ್ಲಿ ಈ ಹಂಗಾಮಿಗೆ ಕೆಲಸಕ್ಕೆ ಬರಲಿರುವವರೆಲ್ಲ ಸಾಮೂಹಿಕವಾಗಿ ತಮ್ಮ ರೇಟು ಏರಿಸುತ್ತಾರೆ. ಹಿಂದಿನ ಸಾರಿ ತಮಗೆಲ್ಲ ಆ ರೇಟು ಸಿಗದಿದ್ದರೂ ಈಗ ಸಿಗಲಿದೆ ಎಂಬ ಆಸೆಯೊಂದನ್ನೇ ಆಧಾರವಾಗಿರಿಸಿಕೊಂಡು ಒಂದಿಡೀ ಸಮಾಜ ಬೆಲೆ ತೆರುತ್ತದೆ. ಇವರಿಗೆಲ್ಲ ಭವಿಷ್ಯದಲ್ಲಿ ಬೆಲೆ ಸಿಕ್ಕಿಬಿಡುತ್ತದೆ ಎಂಬುದಕ್ಕೆ ಯಾವ ತಾರ್ಕಿಕ ಕಾರಣಗಳೂ ಸಿಗುವುದಿಲ್ಲವಾದರೂ ಮಾರುಕಟ್ಟೆ ಹುಟ್ಟುಹಾಕಿದ ಈ ತಾತ್ಕಾಲಿಕ ಕಂಪನ ಇವರ ನಿತ್ಯ ದೈನಿಕವನ್ನು ಅಲ್ಲಾಡಿಸದೇ ಬಿಡುವುದಿಲ್ಲ. ಚಿಕ್ಕ ಚಿಕ್ಕ ಹಿಡುವಳಿದಾರರಿಗೆ ಭವಿಷ್ಯದ ಅತಿಮೌಲ್ಯದ ಮಾಲನ್ನು ಕಾಪಾಡಿಕೊಳ್ಳುವ ಸಂಕಟ. ತೋಟದ ಕಡೆಯಿಂದ ಬರುವ ಸಣ್ಣಸದ್ದು, ಅಡಕೆ ಇಟ್ಟ ಕೊಠಡಿಯ ಕಡೆಯಿಂದ ಕೇಳಿಬಂದ ಸರಭರ ಎಲ್ಲವೂ ಮನೆಯವರನ್ನು ಆತಂಕಕ್ಕೆ ದೂಡಿ ನೆಮ್ಮದಿಯನ್ನೇ ಕಸಿಯುತ್ತವೆ. ನಿಜಕ್ಕೂ ಕಳ್ಳನೇ ಬಂದಿದ್ದಾನೆ ಎಂದಾದರೂ ಅವನನ್ನು ಎದುರಿಸುವುದಾದರೂ ಹೇಗೆ? ರಟ್ಟೆಯಲ್ಲಿ ಕಸುವು ಮೊಳೆಯುತ್ತಿದ್ದವರೆಲ್ಲ ಬೆಂಗಳೂರು ಸೇರಿಕೊಂಡು ಅವೆಷ್ಟು ಕಾಲಗಳಾಗಿ ಹೋದವು?
ವೆನಿಲ್ಲಾದ ಉನ್ಮಾದ ಆವರಿಸಿದ್ದ ಗಳಿಗೆಯಲ್ಲಿ ಮನೆಗೆ ಬಂದ ಸಂಬಂಧಿಕ ಸಹಜವೆಂಬಂತೆ ತೋಟ ಇಳಿದರೂ ಅವ್ಯಕ್ತ ಆತಂಕ ಕಾಡುತ್ತಿತ್ತು. ಬಳ್ಳಿ ಕಿತ್ತೊಯ್ದು ಬಿಟ್ಟರೆ ಎಂಬ ಅನುಮಾನ? ಊಟಕ್ಕೆ ಅಣಿ ಮಾಡುವುದಕ್ಕೂ ಮೊದಲು ತೀರ ಸಹಜ ಎಂಬಂತೆ ತೋಟ ಅಡ್ಡಾಡಿ ಬರುತ್ತಿದ್ದ ಆ ನೆಂಟನಿಗೂ ಯಾಕೆ ಮಾರಾಯ ಉಸಾಬರಿ ಎಂಬ ಯೋಚನೆ. ತಾನು ಹೋಗಿಬಂದ ನಂತರ ಇನ್ಯಾರೋ ಬಳ್ಳಿ ಕಿತ್ತುಕೊಂಡು ಹೋದರೂ ತನ್ನನ್ನೇ ಸಂಶಯಿಸಿಕೊಂಡಿರುತ್ತಾರೆ ಎಂಬ ದಿಗಿಲು. ಆ ಬೆಳೆಗೆ ಅಗತ್ಯವಾಗಿದ್ದ ಪರಾಗಸ್ಪರ್ಶ ಪ್ರಕ್ರಿಯೆಯನ್ನು ಕಲಿಯಲೆಂದು ಉತ್ಸುಕರು, ಅದಾಗಲೇ ಒಂದು ಹಂತದಲ್ಲಿ ವೆನಿಲ್ಲಾ ಪ್ರಯೋಗ ಮಾಡಿದ್ದವರ ತೋಟಗಳಿಗೆ ಹೋದರೆ ಅಲ್ಲಿ ಸ್ವಾಗತಿಸುತ್ತಿದ್ದದ್ದು ದುರಾಸೆ. ಇವನಿಗೆ ಕಲಿಸುವ ಕಷ್ಟ ತನಗೇಕೆ? ಕಲಿಕೆಯಲ್ಲಿ ಒಂದು ವೆನಿಲ್ಲಾ ಹೂವು ಹಾಳಾದರೂ ಅಷ್ಟರಮಟ್ಟಿಗೆ ತನಗೆ ಲಾಸ್ ಅಲ್ಲವಾ? ಸಮೂಹಪ್ರಜ್ಞೆಯನ್ನೇ ಜೀವವಾಗಿರಿಸಿಕೊಂಡಿದ್ದ ಊರುಗಳು ತಮ್ಮ ಆತ್ಮವನ್ನೇ ಕಳೆದುಕೊಳ್ಳುತ್ತಿದ್ದ ನಿರ್ಭರ ದಿನಗಳು ಅವಾಗಿದ್ದವು. ಅದೇನಾಯಿತೋ, ಚಿನ್ನದ ಬಳ್ಳಿಯಾಗಿ ಬಳುಕಿದ್ದ ವೆನಿಲ್ಲಾಕ್ಕೆ ರೇಟು ಕಡಿಮೆಯಾಯಿತೆಂಬುದು ಹಾಗಿರಲಿ, ಕೇಳುವವರೇ ಗತಿ ಇಲ್ಲದಂತೆ ಆಗಿ ಸಮಾಜ ಬಚಾವಾಯಿತು!
ಅಡಕೆ- ವೆನಿಲ್ಲಾಗಳೆಲ್ಲ ಉದಾಹರಣೆಗಳಷ್ಟೇ. ಎಲ್ಲ ವಲಯಗಳ ಮೇಲೂ ಇದೆ ಈ ಆತಂಕಗಳ ಛಾಯೆ. ನಾವದನ್ನು ನೆರಳು ಎಂದು ಸಮಾಧಾನದಿಂದ ಇದ್ದೇವೆ. ಹಣವೆಂಬ ಕಾಗದ ಅಥವಾ ಈಗಿನ ಕಂಪ್ಯೂಟರ್ ಎಂಟ್ರಿಯ ಮಜ ನೋಡಿ. ವಿನಿಮಯದ ಮಾಧ್ಯಮವಾಗಿ, ನಮ್ಮ ನೆಮ್ಮದಿಗೆ ರೂಪುಗೊಂಡಿದ್ದು ಅದು. ಈಗ ನೀವು ನಿಮ್ಮ ನೆಮ್ಮದಿಯನ್ನು ಜೂಜಿಗಿಡಲು ತಯಾರಿದ್ದರೆ ಎಷ್ಟಾದರೂ ನಗದು ಲಭ್ಯವಿದೆ!
-
1944ನೇ ಸಾಲಿನ ಜುಲೈ ತಿಂಗಳು. ಬ್ರೆಟ್ಟನ್‌ವುಡ್ಸ್‌ನ ನ್ಯೂ ಹ್ಯಾಂಪ್‌ಶೈರ್‌ನ ವಾಷಿಂಗ್ಟನ್ ಹೋಟೆಲ್‌ನಲ್ಲಿ ಜಮಾಯಿಸಿದ್ದರು ಬೆರಳೆಣಿಕೆಯ ಪ್ರತಿಷ್ಠಿತರು. ಎರಡನೇ ವಿಶ್ವಯುದ್ಧದಲ್ಲಿ ಜರ್ಜರಿತವಾಗಿದ್ದ ಜಗತ್ತನ್ನು ಇನ್ನು ಮುಂದೆ ನಿರ್ದೇಶಿಸಲಿರುವ ಹಣಕಾಸು ನೀತಿಯನ್ನು ರೂಪಿಸಲು ಸೇರಿದ್ದವರು ಅವರು. ಬೇರೆ ಬೇರೆ ದೇಶಗಳೊಂದಿಗೆ ಮುಕ್ತ ವ್ಯಾಪಾರ ಮಾಡುವುದಕ್ಕೆ ಕರೆನ್ಸಿಯೊಂದನ್ನು ರೂಪಿಸುವ ಹೊಣೆ ಅವರದ್ದು. ಅದುವರೆಗೂ ಅನುಸರಿಸಿಕೊಂಡು ಬರುತ್ತಿದ್ದದ್ದು ಗೋಲ್ಡ್ ಸ್ಟ್ಯಾಂಡರ್ಡ್ ನೀತಿ. ಕರೆನ್ಸಿಯ ಯುನಿಟ್ ಅನ್ನು ಚಿನ್ನದ ನಿಗದಿತ ತೂಕಕ್ಕೆ ಸಮೀಕರಿಸಿ, ಆ ಕರೆನ್ಸಿ ಹೊಂದಿದವ ಸೆಂಟ್ರಲ್ ಬ್ಯಾಂಕ್‌ಗೆ ಬಂದು ಯಾವ ಸಮಯದಲ್ಲಾದರೂ ಆ ಕರೆನ್ಸಿ ಬದಲಿಗೆ ಅದಕ್ಕೆ ಸರಿಹೊಂದುವಷ್ಟು ಚಿನ್ನ ತೆಗೆದುಕೊಳ್ಳಬಹುದಾಗಿದ್ದ ವ್ಯವಸ್ಥೆ. ಆದರೆ ಜಾಗತಿಕ ವ್ಯಾಪಾರದ ಹರವು ಹೆಚ್ಚುತ್ತಲೇ ಬೇಡಿಕೆಗೆ ಅನುಗುಣವಾದಷ್ಟು ಚಿನ್ನ ಪೂರೈಕೆ ಸಾಧ್ಯವಾಗದೇ ಹೋಯಿತು. ಆ ಸಭೆಯಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ್ದ ಜಾನ್ ಮೆನಾರ್ಡ್ ಕಿಯ್ನೆಸ್ ಉತ್ತಮ ಪರಿಹಾರವನ್ನು ಸೂಚಿಸಿದ. 'ಗ್ಲೋಬಲ್ ಸೆಂಟ್ರಲ್ ಬ್ಯಾಂಕ್‌ನ ನಿಯಂತ್ರಣದಲ್ಲಿರುವಂತೆ ಜಾಗತಿಕ ಕರೆನ್ಸಿಯೊಂದನ್ನು ರೂಪಿಸೋಣ. ಇದು ಕೇವಲ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಎಲ್ಲ ದೇಶಗಳಿಂದ ಬಳಕೆಯಾಗಲಿ' ಎಂದ ಕಿಯ್ನೆಸ್ ಯೋಚನೆಯನ್ನು ಒಪ್ಪಿಕೊಂಡಿದ್ದರೆ ಜಗತ್ತು ಸಮಾನತೆಯತ್ತ ಸಾಗಿಬಿಡುತ್ತಿತ್ತೇನೋ? ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದ ಅಮೆರಿಕವನ್ನು ಪ್ರತಿನಿಧಿಸಿದ್ದ ಹ್ಯಾರಿ ಡೆಕ್‌ಸ್ಟರ್ ವೈಟ್. ಅಮೆರಿಕದ ಕರೆನ್ಸಿಯನ್ನೇ ಜಾಗತಿಕ ವಹಿವಾಟಿನ ಕರೆನ್ಸಿ ಆಗಿಸುವ ನೀಲನಕ್ಷೆಯೊಂದಿಗೆ ತಯಾರಾಗಿ ಬಂದಿದ್ದ ವೈಟ್‌ಗೆ ನಿರಾಸೆಯಾಗಲಿಲ್ಲ. ಆ ವೇಳೆಗೆ ಇಂಗ್ಲೆಂಡ್ ಸೇರಿದಂತೆ ಯುರೋಪಿನ ಅನೇಕ ಮಿತ್ರರಾಷ್ಟ್ರಗಳಿಗೆ ತಮ್ಮ ಅರ್ಥವ್ಯವಸ್ಥೆ ಸರಿದೂಗಿಸುವುದಕ್ಕೆ ಅಮೆರಿಕದ ಸಹಾಯದ ಅಗತ್ಯವಿತ್ತು. ಒಂದು ಔನ್ಸ್ ಬಂಗಾರಕ್ಕೆ 35 ಅಮೆರಿಕನ್ ಡಾಲರ್‌ಗಳ ನಿಗದಿತ ಮೌಲ್ಯ. ಈ ಬೆಲೆಯಲ್ಲಿ ಅಮೆರಿಕ ಸರ್ಕಾರವು ನಿಮ್ಮಲ್ಲಿರುವ ಡಾಲರ್‌ಗಳನ್ನು ಬಂಗಾರಕ್ಕೆ ಬದಲಾಯಿಸಿಕೊಡಲು ಬದ್ಧವಾಗಿರುತ್ತದೆ ಎಂಬ ನಿಯಮ ಈ ಬೆರಳೆಣಿಕೆ ಮಂದಿಯ ಮುದ್ರೆಯೊಂದಿಗೆ ಜಗತ್ತಿನಲ್ಲಿ ರೂಢಿಗೆ ಬಂದುಬಿಟ್ಟಿತು.
ಆ ಕಾಲಕ್ಕೆ ಜಗತ್ತಿನ ಉತ್ಪಾದಿತ ಸಾಮಗ್ರಿಗಳಲ್ಲಿ ಅರ್ಧದಷ್ಟು ಪಾಲು ಹೊಂದಿತ್ತು ಅಮೆರಿಕ. ಆದರೆ ಆ ಪ್ರಾಬಲ್ಯವೇ ತುಂಬ ದಿನ ಮುಂದುವರಿಯಲಿಲ್ಲ. ಶೀತಲ ಯುದ್ಧ, ವಿಯೆಟ್ನಾಂ ಸಮರಗಳಲ್ಲಿ ಬಸವಳಿದ ಅಮೆರಿಕಕ್ಕೆ ಡಾಲರ್ ಅನ್ನು 'ಬಂಗಾರ'ವಾಗಿರಿಸಿಕೊಳ್ಳುವುದಕ್ಕೆ ಕಷ್ಟವಾಯಿತು. 'ಈಗಿನ ವ್ಯವಸ್ಥೆಯನ್ನು ಸರಿದೂಗಿಸುವಷ್ಟು ಚಿನ್ನದ ಪೂರೈಕೆ ಇಲ್ಲ. ಆದರೆ ಈಗಾಗಲೇ ರೂಪುಗೊಂಡಿರುವ ವ್ಯವಸ್ಥೆ ಸುಸೂತ್ರವಾಗಿರಬೇಕೆಂದರೆ ಡಾಲರ್ ಅನ್ನೇ ರಿಸರ್ವ್ ಕರೆನ್ಸಿಯಾಗಿ ಮುಂದುವರಿಸಬೇಕು' ಅಂತ 1960ರಲ್ಲಿ ಅಧ್ಯಕ್ಷ ಲಿಂಡನ್ ಜಾನ್ಸನ್ ಹೇಳಿದರು. 1971ರ ಆಗಸ್ಟ್‌ನಲ್ಲಿ ಬಿತ್ತು ನೋಡಿ 'ನಿಕ್ಸನ್ ಶಾಕ್‌'. ಡಾಲರ್ ಅನ್ನು ಇನ್ನು ಮುಂದೆ ಬಂಗಾರಕ್ಕೆ ಪರಿವರ್ತಿಸಿಕೊಡುವ ಯಾವುದೇ ಆಯ್ಕೆ ಇಲ್ಲ ಅಂದರು ಪ್ರಸಿಡೆಂಟ್ ನಿಕ್ಸನ್. 1972ರ ವೇಳೆಗೆ ಒಂದು ಔನ್ಸ್ ಬಂಗಾರ ಎಪ್ಪತ್ತು ಡಾಲರ್‌ಗಳಿಗೆ ಜಿಗಿದು ಕರೆನ್ಸಿಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಎಗರಾಡಿತು. ಅಮೆರಿಕನ್ ಡಾಲರ್‌ನ ಬೆನ್ನಮೇಲೆ ಬರೆದಿರುವುದು 'ಇನ್ ಗಾಡ್ ವಿ ಟ್ರಸ್ಟ್.' ಅಮೆರಿಕನ್ ಡಾಲರ್‌ಗೆ ಬೆಲೆ ಏಕಿದೆಯೆಂದರೆ ಹಾಗೆಂದು ನಾವೆಲ್ಲ ನಂಬುವುದರಿಂದ. ದೇವರನ್ನು ನಂಬಿದಂತೆ. ನಮ್ಮ ಸಿದ್ದರಾಮಯ್ಯನವರು ಮೂಡನಂಬಿಕೆ ಪ್ರತಿರೋಧ ಕಾಯ್ದೆ ಅಡಿ ಒಂದೇ ಕ್ಷಣದಲ್ಲಿ ನಿಷೇಧಿಸಬಹುದಾದ ಸಂಗತಿಯ ಸುತ್ತ ಜಗತ್ತೇ ಗಿರಿಗಿಟ್ಲೆ ಹೊಡೆಯುತ್ತಿದೆ ಎಂಬುದು ತಮಾಷೆಯ ವಾಸ್ತವ!
-
ಊರಿನ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಬೆಳಗ್ಗೆ ಊರಿಗೆ ನುಗ್ಗುವ ಕಾನ್ವೆಂಟ್ ವಾಹನ ಅಲ್ಲಿನ ಚಿಣ್ಣರನ್ನೆಲ್ಲ ಆಯ್ದುಕೊಂಡು ಸಮೀಪದ ಪೇಟೆಶಾಲೆಗೆ ಕರೆದೊಯ್ಯುತ್ತದೆ. ಅವರೆಲ್ಲರ ಚಿತ್ತದಲ್ಲಿ ಅಮೆರಿಕನ್ ಮಾದರಿಯ ಏಕತಾನದ ಕನಸೊಂದು ಬಿತ್ತನೆಯಾಗುತ್ತಿದೆ. ಹಣವೆಂಬ ಬಣ್ಣದ ಹಾಳೆ, ಕಂಪ್ಯೂಟರಿನ ಪರದೆಯ ಮೇಲೆ ಮಿನುಗುತ್ತಿರುವ ಸೂಚ್ಯಂಕಗಳು ಇವರೆಲ್ಲರ ಜೀತವನ್ನು ಜೂಜಿಗಿಡಲು ಹಪಾಹಪಿಸಿವೆ.

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!