ಇವರಿಗೆ ಪ್ಯಾರಿಸ್ ಎಂದ ಕೂಡಲೇ ಎಲ್ಲ ಬಿಟ್ಟು ವೇಶ್ಯಾವಾಟಿಕೆಯೇ ನೆನಪಾಗುವುದೇಕೆ?
ಮೇ 16ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿ ಮೈಸೂರು-ಕೊಡಗು ಜನ ನನಗೆ ಆಶೀರ್ವಾದ ಮಾಡಿದ ನಂತರ, "ಇಂದಿಗೆ ರಾಜಕೀಯ ಮುಗಿಯಿತು, ಇನ್ನು ಮುಂದಿನದ್ದೇನಿದ್ದರೂ ಅಭಿವೃದ್ಧಿ ರಾಜಕೀಯ ಮಾತ್ರ" ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದೆ. ಆದರೆ ಜನಾದೇಶವನ್ನು ವಿನಮ್ರತೆಯಿಂದ ಒಪ್ಪಿಕೊಳ್ಳದೇ ಮಾಜಿ ಸಂಸದರು ತಮ್ಮೊಬ್ಬ ಏಜೆಂಟನ ಮೂಲಕ ನನ್ನ ವಿರುದ್ಧ ಥರಾವರಿ ಆರೋಪಗಳನ್ನು ಮುಂದುವರಿಸುತ್ತಲೇ ಹೋದರು. ಮತದಾನಕ್ಕೆ ಮೊದಲೂ ಇಂಥದ್ದೇ ಹಲವು ಆರೋಪಗಳನ್ನು ಮಾಡಿದರೂ ಜನ ಲೆಕ್ಕಿಸದೆ ನನಗೆ ಆಶೀರ್ವಾದ ಮಾಡಿರುವಾಗ ಇಂತಹ ವ್ಯಕ್ತಿಗಳಿಗೆ ನಾನೇಕೆ ತಲೆಕೆಡಿಸಿಕೊಳ್ಳಬೇಕು ಎಂದು ಸುಮ್ಮನಿದ್ದೆ ಹಾಗೂ ಸದ್ದಿಲ್ಲದೆ ನನ್ನ ಕೆಲಸದಲ್ಲಿ ಮಗ್ನನಾಗಿದ್ದೆ. ನನ್ನ ಕ್ಷೇತ್ರದ ತಂಬಾಕು ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ನಾಲ್ಕು ಸಾವಿರಕ್ಕೂ ಹೆಚ್ಚು ಲೈಸೆನ್ಸ್ಗಳನ್ನು ನವೀಕರಣ ಮಾಡಿಸಿಕೊಟ್ಟೆ. ಈ ಮಧ್ಯೆ ಸದಾನಂದ ಗೌಡರು ನನ್ನ ಹಾಗೂ ನನ್ನ ಕ್ಷೇತ್ರದ ಜನರ ಮನವಿಗೆ ಓಗೊಟ್ಟು ಮೈಸೂರು-ಕುಶಾಲನಗರ-ಮಡಿಕೇರಿ ರೈಲು ಮಾರ್ಗ ನಿರ್ಮಾಣಕ್ಕೆ ಬಜೆಟ್ನಲ್ಲೇ ತಾತ್ವಿಕ ಒಪ್ಪಿಗೆ ಕೊಟ್ಟರು. ಜನರಲ್ ಬಜೆಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಟೆಕ್ಸ್ಟೈಲ್ ಮೆಗಾ ಕ್ಲಸ್ಟರ್ ನೀಡಿದರು.
ಈ ಮಧ್ಯೆ ಅಧಿಕಾರಿಗಳ ಸಭೆ ಕರೆದು ವ್ಯವಸ್ಥೆಯನ್ನು ಅರಿತುಕೊಳ್ಳಲು ನಾನು ಪ್ರಯತ್ನಿಸಿದೆ. ತುರ್ತಾಗಿ ಕಚೇರಿ ತೆರೆದು ಬೆಳಗ್ಗೆ 10 ರಿಂದ ಸಂಜೆ 5ರವರೆಗೂ ಸಾರ್ವಜನಿಕರ ಸೇವೆಗೆ ಮುಂದಾದೆವು. ಆ ದಿನ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ನಾನು ಖುದ್ದಾಗಿ ಆಹ್ವಾನಿಸಿದಾಗ ಅವರೂ ಬಂದು ಹಾರೈಸಿ, ಆಶೀರ್ವದಿಸಿ ಹೋದರು. ಜನ ನಮ್ಮನ್ನು ಆಯ್ಕೆ ಮಾಡಿರುವುದು ಸೇವೆ ಮಾಡುವುದಕ್ಕೇ ಹೊರತು ಹೇಳಿಕೆ ರಾಜಕಾರಣ ಮಾಡುವುದಕ್ಕಲ್ಲ ಎಂಬ ಕಾಮನ್ಸೆನ್ಸ್ ಖಂಡಿತ ನನಗಿದೆ. ಹಾಗಾಗಿ ಯಾವ ಪುರಾವೆಗಳನ್ನೂ ಕೊಡದೆ ಹತ್ತಾರು ದಿನಗಳ ಕಾಲ ಪಂಚತಾರಾ ಹೋಟೆಲ್ಗಳಲ್ಲಿ ತಂಗಿದ, ಅದರ ಬಿಲ್ಲನ್ನು ಯಾರೋ ತುಂಬಿದ, ಚುನಾವಣೆಯಲ್ಲಿ 20 ಕೋಟಿ ರು. ಖರ್ಚು ಮಾಡಿದ ಆರೋಪ ಮಾಡಿದಾಗಲೂ ಆಚಾರವಿಲ್ಲದ ನಾಲಗೆಗಳ ಬಗ್ಗೆ ನಾನು ಪ್ರತಿಕ್ರಿಯಿಸಲು ಹೋಗಿರಲಿಲ್ಲ. ನಾನು ಜನರಿಗಷ್ಟೇ ಉತ್ತರದಾಯಿ ಎಂದು ಸುಮ್ಮನಿದ್ದೆ.
ಈ ಮಧ್ಯೆ ಮೊನ್ನೆ ಶನಿವಾರ ವಿಶ್ವನಾಥ್ ಅವರು ತಮ್ಮ ಖಾಸಾ ಏಜೆಂಟ್ನ ಬದಲು ತಾವೇ ಪತ್ರಿಕಾಗೋಷ್ಠಿ ಕರೆದರು!
ಬಹುಶಃ ಇತ್ತೀಚೆಗೆ ಮಗ ಮಾಡಿದ ಪುಂಡಾಟಿಕೆಗೆ ಮೈಸೂರಿನ ಪ್ರಜ್ಞಾವಂತ ಜನರ ಕ್ಷಮೆ ಕೇಳಲು ಪತ್ರಿಕಾಗೋಷ್ಠಿ ಕರೆದಿದ್ದಾರೆ ಎಂದು ಭಾವಿಸಿದ್ದೆ!
ಆದರೆ...
ಆಶ್ಚರ್ಯ ಹಾಗೂ ದಿಗ್ಭ್ರಮೆ ಹುಟ್ಟಿಸಿದ ಸಂಗತಿಯೇನೆಂದರೆ, ಮಗನ ಬದಲು, ಈ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದನಾದ ನನಗೆ ಬುದ್ಧಿವಾದ ಹೇಳಲು ಮುಂದಾದರು!! "ಪ್ಯಾರಿಸ್ನ ಬಗ್ಗೆ ನೂತನ ಸಂಸದರು ಓದಿಕೊಳ್ಳಬೇಕು. ಪ್ಯಾರಿಸ್ ಮಾದರಿಯಲ್ಲಿ ಮೈಸೂರು ನಗರವನ್ನು ಅಭಿವೃದ್ಧಿ ಮಾಡಿದರೆ ಮೈಸೂರು ಪ್ಯಾರಿಸ್ ಅಲ್ಲ, ಪೆರಿಶ್ ಆಗುತ್ತದೆ. ಪ್ಯಾರಿಸ್ನ ಮೂಲ ಆದಾಯ ಹಾಗೂ ಮೂಲ ವೃತ್ತಿ ವೇಶ್ಯಾವಾಟಿಕೆ. ಅದನ್ನು ಅರಿಯದೆ ಪ್ರಧಾನಿ ಹಾಗೂ ಸಂಸದರು ಹೇಳಿರುವುದು ಖಂಡನೀಯ" ಎಂದಿದ್ದಾರೆ.
ವ್ಹಾರೆ, ವಾಹ್ ವಿಶ್ವನಾಥರೇ!
ಹೆಸರಿಗೆ ತಕ್ಕಂತೆ ವಿಶ್ವದ ಯಾವ ಯಾವ ಭಾಗದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ! ಅಲ್ಲಿನ ಮೂಲ ಕಸುಬು ಹಾಗೂ ಆದಾಯ ವೇಶ್ಯಾವಾಟಿಕೆ ಎನ್ನುತ್ತಿದ್ದೀರಲ್ಲಾ, ನೀವು ಯಾವಾಗ ಪ್ಯಾರಿಸ್ಗೆ ಭೇಟಿ ಕೊಟ್ಟಿದ್ದಿರಿ? ನೀವು ಭೇಟಿಕೊಟ್ಟಿದ್ದು ಅಲ್ಲಿನ ಮೂಲ ಆದಾಯವನ್ನು ತುಸು ಹೆಚ್ಚಿಸುವುದಕ್ಕಾಗಿಯೇ ಇರಬೇಕು ಎಂಬ ಅನುಮಾನ ಜನರನ್ನು ಕಾಡಬಹುದಲ್ಲವೆ? ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎನ್ನುತ್ತಾರೆ. ನಿಮಗೆ ಪ್ಯಾರಿಸ್ನಲ್ಲಿ ಎದ್ದು ಕಂಡಿದ್ದು ವೇಶ್ಯಾವಾಟಿಕೆಯೆ? ನಿಮ್ಮ ಪ್ರಕಾರ ಪ್ಯಾರಿಸ್ ವಿಶ್ವದಲ್ಲೇ ಅತಿ ಹೆಚ್ಚು (ಈಗ ಲಂಡನ್) ಪ್ರವಾಸಿಗರನ್ನು ಆಕರ್ಷಿಸುವ ನಗರವಾಗಿದ್ದು ವೇಶ್ಯಾವಾಟಿಕೆಯಿಂದಲೇ?
ವಿಶ್ವನಾಥ್ ಅವರೆ, ನಿಮಗೆ ಪ್ಯಾರಿಸ್ ಎಂದಕೂಡಲೇ ವೇಶ್ಯಾವಾಟಿಕೆ ನೆನಪಾಗಬಹುದು. ಆದರೆ ಜಗತ್ತಿನ ಜನರಿಗೆ ಪ್ಯಾರಿಸ್ ಎಂದರೆ ಐಫೆಲ್ ಟವರ್ ನೆನಪಾಗುತ್ತದೆ, ಪ್ಯಾರಿಸ್ ಎಂದರೆ ವಿಶ್ವವಿಖ್ಯಾತ ಆರ್ಟ್ ಗ್ಯಾಲರಿಗಳು ನೆನಪಾಗುತ್ತವೆ. ಪ್ಯಾರಿಸ್ ಎಂದರೆ ವಿಶ್ವದ ಅತಿ ದೊಡ್ಡ ಮ್ಯೂಸಿಯಂ ಕಣ್ಣಮುಂದೆ ಬರುತ್ತದೆ. ಪ್ಯಾರಿಸ್ ಎಂದರೆ ಮೊನಾಲೀಸಾ ನೋಡಬೇಕೆನಿಸುತ್ತದೆ, ಪ್ಯಾರಿಸ್ ಎಂದರೆ ವರ್ಸೈಲ್ಸ್ ಅರಮನೆ, ಶತಶತಮಾನಗಳ ಇತಿಹಾಸ ಹೊಂದಿರುವ ಕಟ್ಟಡಗಳು ಹಾಗೂ ವಾಸ್ತುಶಿಲ್ಪ ನೆನಪಾಗುತ್ತವೆ. ಪ್ಯಾರಿಸ್ ಅಂದ್ರೆ ಕಲೆಗಳ ತವರೂರು. ಪ್ಯಾರಿಸ್ ಅಂದ್ರೆ ಫ್ಯಾಷನ್, ಪ್ಯಾರಿಸ್ ಅಂದ್ರೆ ಫುಡ್, ಪ್ಯಾರಿಸ್ ಅಂದ್ರೆ ಏರ್ಬಸ್ ಫ್ಯಾಕ್ಟರಿ, ಪ್ಯಾರಿಸ್ ಅಂದ್ರೆ ಪೇಂಟಿಂಗ್ಸ್, ಪ್ಯಾರಿಸ್ ಅಂದ್ರೆ ಸೈನ್ಸ್ ಮ್ಯೂಸಿಯಂ, ಪ್ಯಾರಿಸ್ ಅಂದ್ರೆ ಉದ್ಯಾನಗಳು, ಸುಂದರ ಸೇತುವೆಗಳು, ಅತಿಸುಂದರ ವೃತ್ತಗಳು, ಮನಮೋಹಕ ರಸ್ತೆಗಳು, ಶಾಪಿಂಗ್ ತಾಣಗಳು, ಸ್ಮಾರಕಗಳು, ಪ್ಯಾರಿಸ್ ಅಂದ್ರೆ ಅಲ್ಲಿನ ಸಾಹಿತ್ಯ ನೆನಪಾಗುತ್ತದೆ. ಫ್ರೆಂಚ್ ಕ್ರಾಂತಿ ನೆನಪು ಮೈನವಿರೇಳಿಸುತ್ತದೆ. ಪ್ಯಾರಿಸ್ ಅಂದ್ರೆ ಲಿಡೋ ಶೋ, ಮಾರ್ಲಿನ್ ರೋ ಕಣ್ಮುಂದೆ ಬರುತ್ತದೆ. ಅಲ್ಲಿನ ವಾರಿಯರ್ಸ್, ಅದರ ಗ್ರೇಟೆಸ್ಟ್ ಪ್ರೆಸಿಡೆಂಟ್ ಚಾರ್ಲ್ಸ್ ಡಿಗಾಲ್ ನೆನಪಾಗುತ್ತಾರೆ. ಪ್ಯಾರಿಸ್ನ ಬಹುದೊಡ್ಡ ವಿಶೇಷವೆಂದರೆ ಇಲ್ಲಿ ಹೆಸರಿಸಿದ್ದೆಲ್ಲ ಅಲ್ಲಿದೆ ಆ ಕಾರಣಕ್ಕಾಗಿಯೇ ಅತಿ ಹೆಚ್ಚು ಜನ ವರ್ಷಂಪ್ರತಿ ಪ್ಯಾರಿಸ್ಗೆ ಭೇಟಿ ನೀಡುತ್ತಾರೆ.
ಪ್ರಪಂಚದ ಬಗ್ಗೆ ಬಹಳ ಅರಿವಿರುವ ನಮ್ಮ ಮಾಜಿಗಳಿಗೆ ಪ್ಯಾರಿಸ್ ಎಂದರೆ ಇವ್ಯಾವವೂ ನೆನಪಾಗುವುದಿಲ್ಲವೆ?
ಕೆಲವು ಗುಟ್ಕಾ, ಸಿಗರೇಟು ವ್ಯಸನಿಗಳಿರುತ್ತಾರೆ. ಅವರನ್ನು ತಾಜ್ಮಹಲ್ ನೋಡಲು ಕರೆದುಕೊಂಡು ಹೋದರೂ ಪಕ್ಕದಲ್ಲಿ ಗೂಡಂಗಡಿ ಇದೆಯಾ ಅಂತ ಹುಡುಕುತ್ತಿರುತ್ತಾರೆ! ಹಾಗಾಯಿತು ಇವರ ಕಥೆ. ಖಂಡಿತ, ಗಂಡು ಹೆಣ್ಣು ಇರುವ ಕಡೆಯಲ್ಲೆಲ್ಲ ಕಾಮವಿರುತ್ತದೆ. ಆದರೆ ಪ್ಯಾರಿಸ್ ಯಾವತ್ತೂ ಕಾಮನಗರಿ(ಖ್ಝಟಿ ಈ್ಝಡಿಣ)ಯಾಗಿಲ್ಲ. ಪ್ಯಾರಿಸ್ ಎಂದರೆ ಪ್ರಣಯ ಎನ್ನಬಹುದು! ಬೇಕಾದರೆ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರರನ್ನು ಕೇಳಿ. ಪ್ಯಾರಿಸ್ಗೆ ಹೋಗುವವರು ಸಾಮಾನ್ಯವಾಗಿ ಸಂಸಾರ ಸಮೇತ ಹೋಗುತ್ತಾರೆ. ನವವಿವಾಹಿತರು ಹೋಗುತ್ತಾರೆ, ಗೆಳತಿ ಜತೆ ಹೋಗುವವರಿದ್ದಾರೆ. ಶಾಶ್ವತವಾದ ನೆನಪಿನ ಬುತ್ತಿಯೊಂದಿಗೆ ವಾಪಸ್ ಆಗುತ್ತಾರೆ.
ಆದರೆ...
ಕಾಮಕ್ಕಾಗಿ ಹೋಗುವವರು ಥಾಯ್ಲೆಂಡ್ನ ಪಟ್ಟಾಯ, ಮೆಕ್ಸಿಕೋದ ತಿಜುವಾನಾ, ನೆದರ್ಲ್ಯಾಂಡ್ನ ಆ್ಯಮ್ಸ್ಟರ್ಡ್ಯಾಮ್, ಲಾಸ್ವೆಗಾಸ್, ರಿಯೊಡಿಜನೈರೊ ಮತ್ತು ಮಕಾವೂದತ್ತ ಮುಖಮಾಡುತ್ತಾರೆ. ವೇಶ್ಯಾವಾಟಿಕೆ ಕೇಂದ್ರಗಳ ಬಗ್ಗೆ ಬಹಳ ಅರಿವಿರುವ ನಿಮಗೆ ಈ ಸಿನ್ಸಿಟಿಗಳು ಬಹುಶಃ ಚಿರಪರಿಚಿತವಿರಬಹುದು!
ಮತ್ತೊಂದು ವಿಚಾರ, ಕಳೆದ ಏಪ್ರಿಲ್ 8ರಂದು ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ಹಾಗೂ ಇಂದಿನ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣವನ್ನು ಮತ್ತೊಮ್ಮೆ ಯೂಟ್ಯೂಬ್ನಲ್ಲಿ ವೀಕ್ಷಿಸಿ. ಅವರು ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ ಎಂದು ಹೇಳಲಿಲ್ಲ. ಪ್ಯಾರಿಸ್ನಂತೆಯೇ ಸಂಸ್ಕೃತಿ, ಕಲೆಗಳ ತವರೂರು ಆಗಿರುವ ಹಾಗೂ ಭಾರತದಲ್ಲೇ ಅತ್ಯಂತ ಸುಂದರ ಅರಮನೆಯನ್ನು ಹೊಂದಿರುವ ಮೈಸೂರಿಗೆ ಪ್ಯಾರಿಸ್ಗೆ ಸರಿಸಮನಾಗಿ ಬೆಳೆಯುವ ಅವಕಾಶ ಹೊಂದಿದೆ ಎಂದರು. ಅಂದರೆ ಪ್ಯಾರಿಸ್ನಂತೆಯೇ ಮೈಸೂರು ಕೂಡ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು. ಅಂತಹ ಸಂಕಲ್ಪಕ್ಕೆ ನಾವು ಕಟಿಬದ್ಧರಾಗಿದ್ದೇವೆ. ದಯವಿಟ್ಟು ಪ್ಯಾರಿಸ್ ಬಗ್ಗೆ ಪ್ರಧಾನಿಗೆ ಪಾಠ ಹೇಳಿಕೊಡುವ ಸಾಹಸಕ್ಕೆ ಇಳಿಯಬೇಡಿ. ಜನ ನಗುತ್ತಾರೆ.
ಇದೇನೇ ಇರಲಿ, ನಾನು ತಪ್ಪೆಸಗಿದ್ದರೆ ಖಂಡಿತ ಟೀಕಿಸಿ, ಕಿವಿಮಾತು ಹೇಳಿ, ಸರಿದಾರಿಯಲ್ಲಿ ನಡೆಸಿ. ಆದರೆ ಆಗಾಗ್ಗೆ ವೃಥಾ ಆರೋಪ ಮಾಡಬೇಡಿ. ಜೀವನದಲ್ಲಿ ಸೋಲು ಗೆಲವು ಎರಡೂ ಶಾಶ್ವತವಲ್ಲ. ಗೆದ್ದಾಗ, ಮಾಡಿದ ಕೆಲಸ ಮಾತ್ರ ಉಳಿದಿರುತ್ತದೆ. ಯೋಗ ಶಾಶ್ವತವಲ್ಲ. ಆದರೆ ಯೋಗ್ಯತೆ ನಾವು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡುತ್ತದೆ. ಸಾಯುವವರೆಗೂ ರಾಜಕಾರಣ ಮಾಡುವ ಉದ್ದೇಶ ನನಗಂತೂ ಇಲ್ಲ. ಮೈಸೂರು-ಕೊಡಗು ಜನರು ಮುಂದಿನ 5 ವರ್ಷಗಳ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ದಯವಿಟ್ಟು, ನೆಮ್ಮದಿಯಿಂದ ಕೆಲಸ ಮಾಡಲು ಬಿಡಿ. ನಾನು ಬೇಕೋ ಬೇಡವೋ ಎಂಬುದನ್ನು 2019ರಲ್ಲಿ ಜನ ನಿರ್ಧರಿಸುತ್ತಾರೆ.
- ಪ್ರತಾಪ್ಸಿಂಹ ಸಂಸದ, ಮೈಸೂರು-ಕೊಡಗು