ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಟಿಇಟಿ ಮರುಪರೀಕ್ಷೆ ಇಲ್ಲವಾದರೆ ಸಿಗುವ ಸಂದೇಶವೇನು?

Vishwanath S
Updated On : 16 Jul 2014, 12:21 pm

ದುಡ್ಡಿದ್ದರೆ, ದೊಡ್ಡವರ ಬೆಂಬಲವಿದ್ದರೇ ಹಾಗೂ ಅಕ್ರಮಗಳನ್ನು ನೋಡಿ ಕಣ್ಮುಚ್ಚಿ ಕೂರುವ ಸಚಿವರಿದ್ದರೆ ಯಾವುದೇ ಅವ್ಯವಹಾರಕ್ಕೂ ಬೆಲೆ ತೆರಬೇಕಿಲ್ಲ!
ಭ್ರಷ್ಟಾಚಾರ, ಅನೀತಿ, ಅಕ್ರಮ ಮಾಡಿದರೆ ನಿಮ್ಮನ್ನು ಬೆದರಿಸುವ ಕಾನೂನು ಈ ದೇಶದಲ್ಲಿದೆ ಎಂದು ಮಕ್ಕಳಿಗೆ ಎದೆಯುಬ್ಬಿಸಿ ಪಾಠ ಮಾಡುವ ಶಿಕ್ಷಕನೇ ಈ ಅನಾಚಾರಗಳ ಕುರಿತಂತೆ ಪಿಎಚ್‌ಡಿ ಮಾಡಿಕೊಂಡು ಕಿಮ್ಮನೆ ರತ್ನಾಕರ ಅವರ ಶಾಲೆಗಳಲ್ಲಿ ಪಾಠ ಮಾಡುತ್ತಾರೆ. ಇಂತಹ ವ್ಯಭಿಚಾರಿಗಳಿಗೆ ಸರ್ಕಾರ ಶ್ರೀರಕ್ಷೆ ನೀಡುತ್ತದೆ. ನಕಲು ಹೊಡೆಯುವುದು ಯಾವ ದೊಡ್ಡ ಪಾಪ ಎಂದು ಸರ್ಕಾರ ಮೂಗು ಮುರಿಯುತ್ತಿದೆ. ಆದರೆ ಈ ಅಕ್ರಮಗಳಲ್ಲಿ ಭಾಗಿಯಾದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಆರೋಪಿ ಶಿವಕುಮಾರ್ ಮನಸಿನಲ್ಲಿಯೇ ಖುಷಿ ಪಡುತ್ತಿದ್ದಾರೆ, 'ಈ ಬೋಳೆ ಸರ್ಕಾರಕ್ಕೆ ಏನು ಮಾಡಲಾಯಿತು?' ಎಂದು ಹುಸಿನಗೆ ಬೀರುತ್ತಿರುತ್ತಾರೆ. ಆದರೆ ನಮ್ಮ ಶಿಕ್ಷಣ ಸಚಿವರು ಮಾತ್ರ, 'ಲಕ್ಷಗಟ್ಟಲೇ' ಅಭ್ಯರ್ಥಿಗಳಿಗೆ ಕಷ್ಟ ಕೊಡಬೇಕು ಎಂಬ ಕಾರಣದಿಂದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಮತ್ತೆ ಮಾಡುವುದಿಲ್ಲ' ಎಂಬ 'ಬುದ್ಧಿ'ವಂತಿಕೆಯ ಉತ್ತರ ನೀಡುತ್ತಿದ್ದಾರೆ.
ಜೂ.22ರಂದು ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದು ಎಲ್ಲರಿಗೂ ತಿಳಿದ ಸತ್ಯ. ಕನಿಷ್ಠ ಪಕ್ಷ ಸುಮಾರು 500 ವಿದ್ಯಾರ್ಥಿಗಳಿಗೆ ಪರೀಕ್ಷೆಯ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ದೊರೆತಿದೆ. 'ಬಹಿರಂಗಗೊಂಡ ಪ್ರಶ್ನೆ ಪತ್ರಿಕೆಗಳು ಸಿಕ್ಕಿರಬಹುದು, ಇಂತಹ ಕ್ಷುಲ್ಲಕ ಕಾರಣಕ್ಕೆ ಸುಮಾರು 3.77 ಲಕ್ಷ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದು ಸಾಧುವಲ್ಲ' ಎನ್ನುವುದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ಅಭಿಪ್ರಾಯವಾಗಿದೆ. ಆದರೆ ರಾಜ್ಯದ ಒಂದೂಕಾಲು ಕೋಟಿ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಹೊಂದಿರುವ ಸಚಿವರು ತಪ್ಪು ಸಂದೇಶ ನೀಡುತ್ತಿದ್ದಾರೆ. ದುಡ್ಡಿರುವ ಒಂದಿಷ್ಟು ಪ್ರಭಾವಿಗಳು ಅಕ್ರಮ ನಡೆಸಿದರೆ ನಾವು ಏನೂ ಮಾಡುವುದಿಲ್ಲ ಎಂಬ ಅಪಾಯಕಾರಿ ವಿಚಾರವನ್ನು ಸರ್ಕಾರ ಸಾಬೀತು ಮಾಡುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ 'ಲಂಚಾವತಾರ' ಎಷ್ಟು ಸಾಮಾನ್ಯವಾಗುತ್ತಿದೆಯೋ, ಅದೇ ದಾಟಿಯಲ್ಲಿ ಪರೀಕ್ಷೆ ಕುರಿತಂತೆ ಅಸಡ್ಡೆ ಮಾತನಾಡಲಾಗುತ್ತಿದೆ. ಮುಂದೊಂದು ದಿನ ಪ್ರಶ್ನೆ ಪತ್ರಿಕೆ ಬಹಿರಂಗ ಎನ್ನುವುದು ಚಟವಾದೀತು ಹುಷಾರ್!
ಶಿಕ್ಷಣ ಸಚಿವರಿಗೆ ತಿಳಿದಿದೆಯೋ ಗೊತ್ತಿಲ್ಲ, ಆದರೆ ಇಂತಹ ಅಸಡ್ಡೆಯಿಂದಲೇ ವಿಶ್ವವಿದ್ಯಾಲಯಗಳಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅಲ್ಲಿ ನಡೆಯುತ್ತಿರುವ ಪ್ರವೇಶ ಪರೀಕ್ಷೆಗಳಿಗೆ ಬೆಲೆಯಿಲ್ಲದಂತಾಗಿದೆ. ಇತ್ತೀಚೆಗೆ ಧಾರವಾಡ ಕೃಷಿ ವಿವಿಯಲ್ಲಿ ನಡೆದ ಎಂಎಸ್‌ಸಿ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಗುರುತಿನ ಚೀಟಿ ಪರೀಕ್ಷಿಸಲಿಲ್ಲ. ಬೆಂಗಳೂರಿನ ಪ್ರಭಾವಿ ವಿದ್ಯಾರ್ಥಿನಿಯೊಬ್ಬಳ ಕೈಯಲ್ಲಿ ಹಿಂದಿನ ದಿನವೇ ಪ್ರಶ್ನೆ ಪತ್ರಿಕೆ ಇತ್ತು ಎಂದು ಹೇಳಲಾಗಿದೆ. ಇದು ಸುದ್ದಿಯಾಗದಷ್ಟು ವಿವಿಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿಯೂ ಇದು ಅಷ್ಟೇ ಸಾಮಾನ್ಯವಾಗಿಬಿಟ್ಟೀತು.
ಟಿಇಟಿ ವಿಚಾರಕ್ಕೆ ಬಂದರೆ ತನಿಖೆಯ ಬಳಿಕ ಮರು ಪರೀಕ್ಷೆ ಬಗ್ಗೆ ಆಲೋಚಿಸುತ್ತೇವೆ ಎಂದು ಶಿಕ್ಷಣ ಇಲಾಖೆ ಹೇಳಿತ್ತು. ಸಿಸಿಬಿ ಮೂಲಗಳ ಪ್ರಕಾರ ಬಹುತೇಕ ವಿಚಾರಣೆ ಅಂತ್ಯವಾಗಿದೆ. ಅಕ್ರಮದ ರೂವಾರಿ ಶಿವಕುಮಾರ್‌ನನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಆದರೆ ಎಷ್ಟು ಅಭ್ಯರ್ಥಿಗಳಿಗೆ ಹಂಚಿದ್ದಾನೆ ಎನ್ನುವುದನ್ನು ಆತ ಬಾಯಿ ಬಿಡುತ್ತಿಲ್ಲ. ಇಲಾಖೆ ಅಧಿಕಾರಿಗಳು ಭಾಗಿಯಾಗಿರುವುದನ್ನು ಆತ ಬಾಯಿಬಿಟ್ಟಿದ್ದಾನೆ. ಇದೆಲ್ಲ ಸತ್ಯ ಬಹಿರಂಗವಾದ ಬಳಿಕ ಮರು ಪರೀಕ್ಷೆಯಿಲ್ಲ ಎಂದು ರಾಜ್ಯ ಸರ್ಕಾರ ಹೇಳುವುದು ಮುಂದಿನ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ತಪ್ಪು ಸಂದೇಶವಾಗುತ್ತದೆ. ಮತ್ತೊಂದೆಡೆ ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಿಗೆ ಬೆಲೆಯಿಲ್ಲದಂತಾಗುತ್ತದೆ. ಶಿವಕುಮಾರ್ ಹಾಗೂ ಆತನ ಸಂಗಡಿಗರಿಂದ ಪ್ರಶ್ನೆ ಪತ್ರಿಕೆ ಪಡೆದು ಟಿಇಟಿ ಉತ್ತೀರ್ಣರಾಗುವ ನೂರಾರು ಅಭ್ಯರ್ಥಿಗಳು ಭವಿಷ್ಯದಲ್ಲಿ ರಾಜ್ಯದ ಯಾವುದೋ ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಮಾಡುತ್ತಾರೆ. ಅಕ್ರಮ ದಾರಿಯಲ್ಲಿ ಶಿಕ್ಷಕರಾದ ಭ್ರಷ್ಟರು ಮಕ್ಕಳಿಗೆ ಇನ್ಯಾವ ರೀತಿಯ ಪಾಠ ಹೇಳಿಕೊಡಲು ಸಾಧ್ಯವಿದೆ.
ಪರೀಕ್ಷೆಯ ಪಾವಿತ್ರ್ಯವನ್ನು ಉಳಿಸಿಕೊಳ್ಳದಿದ್ದರೇ ಇಂತಹ ಅಕ್ರಮಗಳು ನಡೆದರೂ ಏನಾಗುವುದಿಲ್ಲ ಎಂಬ ಸಂದೇಶ ರವಾನಿಸಿದಂತಾಗುತ್ತದೆ. ರಾಜ್ಯ ಸರ್ಕಾರ ಭವಿಷ್ಯದಲ್ಲಿ ಸಾಕಷ್ಟು ಶಿಕ್ಷಕರ ನೇಮಕ ಮಾಡಿಕೊಳ್ಳುತ್ತದೆ. ಅದರಲ್ಲಿ ಇಂತಹ ನೂರಾರು ಕಳ್ಳ ಶಿಕ್ಷಕರು ಪ್ರವೇಶ ಪಡೆಯುತ್ತಾರೆ. ಈ ಮೂಲಕ ಸರ್ಕಾರವೇ ಇಂತಹ ಅಕ್ರಮಕ್ಕೆ ಶ್ರೀರಕ್ಷೆ ನೀಡಿದಂತಾಗುತ್ತದೆ. ಸಚಿವ ಕಿಮ್ಮನೆ ರತ್ನಾಕರ ಹೇಳುವಂತೆ ಪರೀಕ್ಷೆ ನಡೆಸಲು ಮತ್ತೆ ಶಿಕ್ಷಣ ಇಲಾಖೆ ಜವಾಬ್ದಾರಿ ಹೊರಬೇಕು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯ ಹೊರೆ ಬೀಳುತ್ತದೆ. ಆದರೆ ಸಚಿವರು ಇದೇ ಹೇಳಿಕೆಗೆ ನಿಷ್ಠರಾಗಿ ಕುಳಿತರೆ ಇಲಾಖೆಯಲ್ಲಿನ ಎಲ್ಲ ಹೊಲಸುಗಳು ಮುಂದುವರಿಯುತ್ತವೆ. ಅಷ್ಟಕ್ಕೂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಕ್ರಮವಾಗಿರುವುದರಿಂದ ಮತ್ತೊಮ್ಮೆ ಜವಾಬ್ದಾರಿ ಹೊರಲು ತಯಾರಿರಲೇಬೇಕು. ಅಷ್ಟಕ್ಕೂ ಗುಣಮಟ್ಟ ವೃದ್ಧಿಗಾಗಿ ಶಿಕ್ಷಕರ ಅರ್ಹತೆ ತಿಳಿಯಲು ಇಲಾಖೆ ಮುಂದಾಗಿದೆ. ಆದರೆ ಅಕ್ರಮಕ್ಕೆ ಪ್ರೋತ್ಸಾಹ ನೀಡಿ ಮುಂದುವರಿದರೆ ಯಾವ ಸೀಮೆಯ ಅರ್ಹತೆ ಪರೀಕ್ಷಿಸಿದಂತಾಗುತ್ತದೆ.
ಆದರೆ ಇಂತಹ ವಿಚಾರಗಳು ಬಂದಾಗ ಮತ್ತೊಂದು ರೀತಿಯಲ್ಲಿ ವಾದ ಮಂಡಿಸುವವರಿದ್ದಾರೆ. 'ಅಕ್ರಮ ಎಸಗಿದ ಕೆಲ ನೂರು ವಿದ್ಯಾರ್ಥಿಗಳಿಗಾಗಿ ಉಳಿದಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿದರೆ ಅನ್ಯಾಯವಾಗುತ್ತದೆ' ಎಂಬ ವಾದವೂ ಇದೆ. ಆದರೆ ಪ್ರತಿ ಅಕ್ರಮಗಳ ವಿಚಾರದಲ್ಲಿಯೂ ಸರ್ಕಾರ ಹೀಗೇ ನಿಲುವು ತಾಳಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಬಹುಮತ ಆಧರಿಸಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸರ್ಕಾರಗಳ ಇಂತಹ ಹೇಡಿತನದ ಕೆಲಸದಿಂದಲೇ ಶಿವಕುಮಾರ್‌ನಂತಹ ಆರೋಪಿಗಳು ರಾಜಾರೋಷವಾಗಿ ವ್ಯವಹರಿಸುತ್ತಿದ್ದಾರೆ. ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಈತ, ಕೆಲ ತಿಂಗಳ ಬಳಿಕ ಮತ್ತೆ ಅಖಾಡಕ್ಕೆ ಇಳಿದು ಪ್ರಶ್ನೆ ಪತ್ರಿಕೆ ಬಹಿರಂಗ ಮಾಡುತ್ತಾನೆ. ಬಹಿರಂಗ ಮಾಡಿದರೆ ಕೆಲ ತಿಂಗಳ ಜೈಲು ಶಿಕ್ಷೆ ತಾನೆ, ಮರು ಪರೀಕ್ಷೆಯಂತೂ ಆಗುವುದಿಲ್ಲ ಎಂಬ ಧೈರ್ಯದಿಂದ ಜಾಲ ವಿಸ್ತರಿಸುತ್ತಾನೆ.
ಅಂತಿಮವಾಗಿ ಇದೊಂದು ವಿಚಾರವನ್ನು ನೀವು ತಿಳಿದುಕೊಳ್ಳಿ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಈಶಪ್ಪ ಎಂಬ ಶಿಕ್ಷಕನನ್ನು ಸಿಸಿಬಿ ಪೊಲೀಸರು ಕೊಪ್ಪಳದಲ್ಲಿ ಬಂಧಿಸಿದ್ದಾರೆ. ಇದೇ ವ್ಯಕ್ತಿ ಶಿವಕುಮಾರ್‌ಗೆ ಪ್ರಶ್ನೆ ಪತ್ರಿಕೆ ತಲುಪಿಸಿದ್ದಾನೆ. ರಾಜ್ಯ ಸರ್ಕಾರದ ಸಚಿವರೊಬ್ಬರ ಸಂಬಂಧಿಯಾಗಿರುವ ಈಶಪ್ಪ, ಅದೇ ಧೈರ್ಯದಿಂದ ಇಂತಹ ಕರಾಮತ್ತು ಮಾಡಿ ಐಷಾರಾಮಿಯಾಗಿ ಜೀವನ ನಡೆಸುತ್ತಿದ್ದಾರೆ. ಸಚಿವರ ಸಂಬಂಧಿ ಅಕ್ರಮದಲ್ಲಿ ಭಾಗಿಯಾಗಿರುವುದು ಸರ್ಕಾರದ ಮೌನಕ್ಕೆ ಕಾರಣವಾಗಿರಲೂಬಹುದು. ಇನ್ನು ಕಾಕತಾಳೀಯವೆಂಬಂತೆ ಇವತ್ತಿನವರೆಗೆ ಪರೀಕ್ಷಾ ಅವ್ಯವಹಾರಕ್ಕೆ ಸಂಬಂಧಿಸಿ ಯಾವೊಬ್ಬ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಿಲ್ಲ.
ಪ್ರಾಮಾಣಿಕತೆ ಎನ್ನುವುದು ಭಾಷಣದಲ್ಲಿ, ಬಿಳಿಹಾಳೆಯಲ್ಲಿದ್ದರೆ ಸಾಲದು, ಕಾರ್ಯರೂಪಕ್ಕೆ ಬಂದರೆ ವ್ಯವಸ್ಥೆ ಉಸಿರಾಡಲು ಸಾಧ್ಯವಾಗುತ್ತದೆ.


- ರಾಜೀವ ಹೆಗಡೆ
ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement