ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಪರದೇಶಿ ವ್ಯಾಮೋಹದ ಭಾರತದ ಕ್ಲಬ್ಬುಗಳಲ್ಲಿ ಪಂಚೆ ನಿಷಿದ್ಧ!

Vishwanath S
Updated On : 16 Jul 2014, 12:15 pm

ಮಾಜಿ ಪ್ರಧಾನಿ ದೇವೇಗೌಡ, ಡಿಎಮ್ಕೆ ಮುಖ್ಯಸ್ಥ ಕರುಣಾನಿಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಇವರಿಗೆಲ್ಲ ಭಾರತದ ಬಹುತೇಕ ಕ್ಲಬ್ಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ. ಇದಕ್ಕೆ ಕಾರಣವೇನೆಂದರೆ, ಅವರು ಧರಿಸುವ ಬಟ್ಟೆ ಈ ದೇಶದ ಪ್ರತಿಷ್ಠಿತರ ಕ್ಲಬ್ಗಳಿಗೆ ಸರಿಹೊಂದುವುದಿಲ್ಲ ಎನ್ನುವುದು! ಸುದೈವವಶಾತ್, ಈ ನಾಯಕರೆಲ್ಲ ತಮ್ಮ ಬಿಡುವಿನ ಸಮಯವನ್ನು ಇಂಥ ಕ್ಲಬ್ಗಳಲ್ಲಿ ಕಳೆಯುವವರಲ್ಲ. ಹಾಗಾಗಿ ಇವರಿಗೇನೂ ಲುಕ್ಸಾನಾಗದು ಬಿಡಿ.
ಇತ್ತೀಚೆಗೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಕ್ಲಬ್, ಧೋತಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ನ ನ್ಯಾಯಾಧೀಶ ಡಿ. ಹರಿಪರಂಥಮನ್ ಅವರಿಗೆ ಪ್ರವೇಶ ನಿರಾಕರಿಸಿ ಸುದ್ದಿಯಾಯಿತು. ಈ ವಿದ್ಯಮಾನದಿಂದಾಗಿ ಭಾರತದ ಬಹುತೇಕ ಕ್ಲಬ್ಗಳು ಕಟ್ಟುನಿಟ್ಟಾಗಿ ಅನುಸರಿಸುತ್ತಾ ಬಂದಿರುವ 'ವಸ್ತ್ರಸಂಹಿತೆ' ಎಷ್ಟು ಸರಿ ಎಂದು ದೇಶವ್ಯಾಪಿ ಚರ್ಚೆಗಳು ನಡೆದವು.
ಬ್ರಿಟಿಷರ ಬಳುವಳಿಯಾಗಿರುವ ಈ ಪುರಾತನ ವಸ್ತ್ರಸಂಹಿತೆಯನ್ನು ಕ್ಲಬ್ಗಳು ಕೂಡಲೇ ಕೈಬಿಡಬೇಕು ಎಂದು ತಮಿಳುನಾಡಿನ ಬಹುತೇಕ ರಾಜಕೀಯ ಪಕ್ಷಗಳು ಗದ್ದಲಮಾಡತೊಡಗಿವೆ.
ಇಂಥ ಘಟನೆಗಳು ಭಾರತದಲ್ಲಿ ಆಗಾಗ ನಡೆಯುತ್ತಲೇ ಇರುತ್ತವಾದರೂ, ಹೆಚ್ಚಿನವು ಸುದ್ದಿಯಾಗುವುದಿಲ್ಲ. ಒಂದು ವೇಳೆ ಈ ರೀತಿ ಕ್ಲಬ್ಗಳಿಂದ ಪ್ರತಿಷ್ಠಿತ ವ್ಯಕ್ತಿಯೊಬ್ಬ ಅವಮಾನವಾದರೆ ಮಾತ್ರ ಮಾಧ್ಯಮಗಳ ದೃಷ್ಟಿ ಅತ್ತ ಬೀಳುತ್ತದೆ. ಆದರೆ ಯಾವ ಕ್ಲಬ್ಗಳೂ ಕೂಡ ಮಾಧ್ಯಮಗಳ ಅಥವಾ ಜನರ ಒತ್ತಾಯಕ್ಕೆ ಮಣಿದು ವಸ್ತ್ರಸಂಹಿತೆಯನ್ನು ಬದಲಿಸಿಕೊಂಡ ಉದಾಹರಣೆಗಳಿಲ್ಲ. "ಸರ್ಕಾರದ ಮಾತನ್ನು ಕೇಳಲು ಕ್ಲಬ್ಗಳೇನೂ ಸಾರ್ವಜನಿಕ ಸ್ವತ್ತಲ್ಲವಲ್ಲ? ಅವು ಖಾಸಗಿ ಸಂಸ್ಥೆಗಳು" ಎನ್ನುವುದು ಪ್ರತಿಷ್ಠಿತ ಕ್ಲಬ್ಗಳ ವಾದ. ಆದರೆ "ಸರ್ಕಾರದಿಂದ ಸಾರ್ವಜನಿಕ ಜಾಗವನ್ನಷ್ಟೇ ಅಲ್ಲದೆ, ಇತರೆ ಸೌಲಭ್ಯಗಳನ್ನೂ ಪಡೆಯುವಾಗ ಅದ್ಹೇಗೆ ಅವು ಖಾಸಗಿ ಸಂಸ್ಥೆಗಳಾಗುತ್ತವೆ?" ಎನ್ನುವುದು ಜನರ ಪ್ರತಿವಾದ.  
"ಬ್ರಿಟಿಷರು ಪರಿಚಯಿಸಿದ ಈ ವಸ್ತ್ರಸಂಹಿತೆ ಅದಾಗಲೇ ಹಳತಾಗಿದೆ. ಈಗ ಈ ಕ್ಲಬ್ಗಳೇನು ಬ್ರಿಟಿಷರ ಹಿಡಿತದಲ್ಲಿವೆಯೇ? ಭಾರತೀಯ ಸಂಸ್ಕೃತಿಯನ್ನು ಬದಿಗೊತ್ತಿ ಆಂಗ್ಲರ್ ಅಂಧಾನುಕರಣೆ ಮಾಡುವುದು ಹುಚ್ಚಾಟವಲ್ಲವೇ?" ಎನ್ನುವ ಪ್ರಶ್ನೆ ಹಲವರದ್ದು. ಆದರೆ ಬಹುತೇಕ ಕ್ಲಬ್ಗಳು ತಮ್ಮ ನಿಯಮಗಳನ್ನು ಬದಲಿಸಿಕೊಳ್ಳಲು ಮಾತ್ರ ಸಿದ್ಧವಿಲ್ಲ. 2002ರಲ್ಲಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ಬೆಂಗಳೂರು ವಿಭಾಗದ ನಿರ್ದೇಶಕ ಪ್ರೊಫೆಸರ್ ಜಿ. ಮೋಹನ್ ಗೋಪಾಲ್ ಅವರಿಗೆ 'ಬೆಂಗಳೂರು ಕ್ಲಬ್'(1865ರಲ್ಲಿ ಸ್ಥಾಪನೆಯಾದದ್ದು) ಪ್ರವೇಶ ನಿರಾಕರಿಸಿತ್ತು. ಇದಕ್ಕೆ ಕಾರಣ ಮೋಹನ್, ಧೋತಿ ಮತ್ತು ಚಪ್ಪಲಿ ಧರಿಸಿದ್ದರು ಎನ್ನುವುದು! ಈ ಘಟನೆ ದೊಡ್ಡ ಗದ್ದಲವನ್ನೇ ಹುಟ್ಟುಹಾಕಿತ್ತು. ಅಂದಿನ ಮುಖ್ಯಮಂತ್ರಿ ಮತ್ತು ಬೆಂಗಳೂರು ಕ್ಲಬ್ನ ಸದಸ್ಯರೂ ಆಗಿದ್ದ ಎಸ್.ಎಮ್. ಕೃಷ್ಣ ಅವರು, "ಸಭ್ಯವಾಗಿರುವ ಧಿರಿಸುಗಳಿದ್ದರೆ ಸಾಕು. ಪಂಚೆ ಧರಿಸಿ ಬಂದವರಿಗೆ ಪ್ರವೇಶ ನಿರಾಕರಿಸಬಾರದು" ಎಂದು ಹೇಳಿದ್ದರು.
ಆದರೆ ಕಳೆದ ವರ್ಷ ಇದೇ ಕ್ಲಬ್ನಲ್ಲಿ ಇಂಥದ್ದೇ ಘಟನೆಯೊಂದು ನಡೆದು, ಆ ಕ್ಲಬ್ಬು ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಯಿತು. ಸತ್ಯಜಿತ್ ರೇ ಅವರ ಸೋದರಳಿಯ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ನ ಮಾಜಿ ನಿರ್ದೇಶಕ ಅಶೋಕ್ ಚಟರ್ಜಿ ಅವರ ಧಿರಿಸು ತಮ್ಮ ಕ್ಲಬ್ನ ನಿಯಮಕ್ಕೆ ಸರಿಹೊಂದುವುದಿಲ್ಲವೆಂದು ಅವರಿಗೆ ಬೆಂಗಳೂರು ಕ್ಲಬ್ ಪ್ರವೇಶ ನಿರಾಕರಿಸಿತ್ತು. ಆ ಕ್ಲಬ್ನೊಂದಿಗೆ ಸುಮಾರು 100 ವರ್ಷಗಳ ನಂಟುಹೊಂದಿರುವ ಕುಟುಂಬಕ್ಕೆ ಸೇರಿದ ವ್ಯಕ್ತಿ ಅಶೋಕ್! 'ಆಧುನಿಕತೆಯ' ಗುಂಗಿನಲ್ಲಿ ಬೆಂಗಳೂರು ಕ್ಲಬ್ ಚಟರ್ಜಿರಂಥ ಹಿರಿಯರಿಗೆ ಅವಮಾನ ಮಾಡಿತ್ತು. ಇದರಿಂದ ಮನನೊಂದ ಅವರು ಆ ಕ್ಲಬ್ನ ಅಜೀವ ಸದ್ಯಸ್ಯತ್ವವನ್ನು ಕೈಬಿಡಲು ನಿರ್ಧರಿಸಿದರು. ಈ ಬಗ್ಗೆ ಪ್ರತಿಕ್ರಿಸಿಸಿದ ಚಟರ್ಜಿ ಹೇಳಿದ್ದಿಷ್ಟು: "ಭಾರತೀಯ ಶೈಲಿಯ ಬಟ್ಟೆ ಧರಿಸಿದೆನೆಂದು ಅಲ್ಲಿ ನನಗೆ ಪ್ರವೇಶ ನಿರಾಕರಿಸಲಾಯಿತು. ಯಾವ ರೀತಿಯ ವಸ್ತ್ರಸಂಹಿತೆ ಇರಬೇಕು ಎನ್ನುವುದು ಆ ಕ್ಲಬ್ಗೆ ಬಿಟ್ಟ ವಿಷಯ. ಆದರೆ ಪಾಶ್ಚಿಮಾತ್ಯ ಧಿರಿಸುಗಳನ್ನು ತೊಡುವುದಷ್ಟೇ ಸಭ್ಯತೆ ಎಂದು ಅದೇಕೆ ಭಾವಿಸುತ್ತದೆ ಎನ್ನುವುದನ್ನು ಲಿಖಿತ ಹೇಳಿಕೆಯಲ್ಲಿ ನೀಡಲಿ ನೋಡೋಣ?"
ಕಳೆದ ವರ್ಷ ಈ ವಿಷಯ ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಯಾಗಿತ್ತು. ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ಗಳಲ್ಲಿರುವ "ಪಾಶ್ಚಿಮಾತ್ಯ ಧಿರಿಸುಗಳು ಮಾತ್ರ" ಎನ್ನುವ ವಸ್ತ್ರಸಂಹಿತೆ ಕುರಿತು ಶಾಸಕ ಡಿ. ಹೇಮಚಂದ್ರ ಸಾಗರ್ ನೇತೃತ್ವದ ಸಮಿತಿ ವರದಿ ಸಲ್ಲಿಸಿತ್ತು. ಇಂಥ 'ವಸಾಹತು' ಆಚರಣೆಗಳನ್ನು ಕೂಡಲೇ ನಿಲ್ಲಿಸಬೇಕು ಎನ್ನುವ ಸಲಹೆಯೂ ಆ ವರದಿಯಲ್ಲಿತ್ತು.
ವಸ್ತ್ರಸಂಹಿತೆಯ ಬಗ್ಗೆ ಪ್ರಶ್ನಿಸಿದಾಗ ಬೆಂಗಳೂರು ಕ್ಲಬ್ನ ಮುಖ್ಯಸ್ಥ ಎಮ್ಕೆ ಚಿದಂಬರನಾಥ್ ಇದೆಲ್ಲ ವಸಾಹತು ನಿಯಮಗಳು ಎಂಬುದನ್ನು ಒಪ್ಪಿಕೊಂಡಿದ್ದರು. "ಬ್ರಿಟಿಷರು ಹಾಕಿಕೊಟ್ಟ ಹಾದಿಯಲ್ಲೇ ನಾವು ನಡೆಯುತ್ತಿದ್ದೇವೆ. ಈ ಕ್ಲಬ್ಬಿನ ವಾಸ್ತು ಅಥವಾ ಸಂಸ್ಕೃತಿಯನ್ನು ನಾವು ಪ್ರಜ್ಞಾಪೂರ್ವಕವಾಗಿ ಬದಲಿಸುವುದಿಲ್ಲ. ಕೆಲವು ಬಾರಿ ನಮ್ಮ ಸದಸ್ಯರಿಗೆ ಆರೋಗ್ಯ ಸಮಸ್ಯೆಯಿಂದಾಗಿ ಫಾರ್ಮಲ್ ಶೂ ಧರಿಸಲು ಸಾಧ್ಯವಾಗಿರಲಿಲ್ಲ. ಆಗ ನಾವು ನಿಯಮಗಳಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿಕೊಂಡಿದ್ದೆವು" ಎಂದು ಪತ್ರಿಕೆಯೊಂದಕ್ಕೆ ಹೇಳಿದ್ದರು.
ಬೆಂಗಳೂರು ಕ್ಲಬ್ನ ಈ ನಿಯಮಗಳ ಬಗ್ಗೆ ಗಿರೀಶ್ ಕಾರ್ನಾಡ್ ಒಳಗೊಂಡಂತೆ ಅನೇಕ ಹಿರಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದುಂಟು. ಇಷ್ಟೇ ಅಲ್ಲ, ಕೆಲವು ವರ್ಷಗಳ ಹಿಂದೆ ದೀಪಾವಳಿ ಸಮಯದಲ್ಲಿ ಈ ಕ್ಲಬ್ ಕುರ್ತಾ ಪೈಜಾಮ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿಯವರಿಗೇ ಪ್ರವೇಶ ನಿರಾಕರಿಸಿತ್ತು!
ಢಬ್ರಿಟಿಷರ ಕಾಲದಲ್ಲಿ 'ಕಲ್ಕತ್ತಾ ಕ್ಲಬ್'ಗೆ ಭಾರತೀಯರಿಗೆ ಪ್ರವೇಶವಿರಲಿಲ್ಲ. ಹಾಗಾಗಿ ಮುನಿಸಿಕೊಂಡಿದ್ದ ಭಾರತೀಯರನ್ನು ಶಾಂತಗೊಳಿಸಲು ಅದೇ ಬ್ರಿಟೀಷರೇ 'ಆಗಸ್ಟ್ ಬೆಂಗಾಲ್ ಕ್ಲಬ್' ಅನ್ನು ಸ್ಥಾಪಿಸಿದರು.  
ಬೆಂಗಾಲ್ ಕ್ಲಬ್ ಮೇಲ್ನೋಟಕ್ಕಷ್ಟೇ 'ಸಮಾಜದ ಎಲ್ಲ ಜಂಟಲ್ಮೆನ್ಗಳಿಗೂ' ಬಾಗಿಲು ತೆರೆದಂತೆ ಕಾಣಿಸಿದರೂ, ಅಲ್ಲಿ ಕೇವಲ ವೈಸ್ರಾಯ್ಗಳಿಗೆ, ಅವರ ಕಾರ್ಯದರ್ಶಿಗಳಿಗೆ, ರಾಜ್ಯಪಾಲರಿಗೆ, ಸೇನೆಯ ಮುಖ್ಯಸ್ಥರಿಗೆ, ಹೈಕೋರ್ಟ್ ನ್ಯಾಯಾಧೀಶರುಗಳಿಗೆ ಮತ್ತು ಉದ್ಯಮಿಗಳಿಗಷ್ಟೇ ಪ್ರವೇಶವಿತ್ತು. ಸಾಮಾನ್ಯ ಭಾರತೀಯನೊಬ್ಬ ಅತ್ತ ತಲೆಹಾಕಿ ಮಲಗುವಂತೆಯೂ ಇರಲಿಲ್ಲ. ವಿನ್ಸ್ಟನ್ ಚರ್ಚಿಲ್ ತಿಂಡಿ ತಿಂದ ಬಿಲ್ ಅನ್ನು ಇಂದಿಗೂ ಪ್ರದರ್ಶಿಸುವ  'ಬೆಂಗಳೂರು ಕ್ಲಬ್' ಮತ್ತು ಊಟಿಯ 'ಊಟಕಮುಂಡ್ ಕ್ಲಬ್' ಇಂದಿಗೂ ಅಂಥದ್ದೇ ಸಂಸ್ಕೃತಿಯನ್ನೇ ಪಾಲಿಸುತ್ತಾ ಸಾಗಿವೆ.
ಹೊಸ ದೆಹಲಿಯ ಜಿಮ್ಖಾನಾ ಕ್ಲಬ್ನಲ್ಲಿ ಅಥವಾ ಮದ್ರಾಸ್ನ ಅಡಿಯಾರ್ ಕ್ಲಬ್ನಲ್ಲಿ ಆಗಾಗ ಭಾರತೀಯ ಧಿರಿಸು ಧರಿಸಿದವರಿಗೆ ಪ್ರವೇಶ ನಿರಾಕರಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆ ವಿಷಯ ಸುದ್ದಿಯಾದಾಗ ರಾಜಕಾರಣಿಗಳು ವಸಾಹತು ಆಚರಣೆಗಳ ವಿರುದ್ಧ ಆರ್ಭಟಿಸುತ್ತಾರೆ. ಈ ರಾಜಕಾರಣಿಗಳು ಎಲ್ಲಿ ತಮ್ಮ ಕ್ಲಬ್ ಮುಚ್ಚಿಹಾಕುತ್ತಾರೋ ಎಂದು ಅವರ ಆರ್ಭಟಕೇಳಿ ಈ ಕ್ಲಬ್ಗಳು ಬೆಚ್ಚಿಬೀಳುತ್ತವೆ. ಇವುಗಳು ತಮಗೆ ಇನ್ನು ಅವಮಾನ ಮಾಡವು ಎಂದು ಜನರು ಸಮಾಧಾನ ಪಡುತ್ತಾರೆ. ಆದರೆ ಏನೇನೂ ಬದಲಾಗುವುದಿಲ್ಲ!
ಈ ರೀತಿ ಅವು ಬದಲಾವಣೆಯನ್ನು ವಿರೋಧಿಸುವುದಕ್ಕೂ ಕಾರಣವಿದೆ. ಭಾರತದ ಬಹುತೇಕ ಪ್ರತಿಷ್ಠಿತರ ಕ್ಲಬ್ಗಳಲ್ಲಿ ನಿವೃತ್ತ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸೈನ್ಯಾಧಿಕಾರಿಗಳು ಮತ್ತು ಕಾರ್ಪೊರೇಟ್ ನಾಯಕರೇ ಸದಸ್ಯರಾಗಿರುತ್ತಾರೆ. ಕ್ಲಬ್ನ ಬಹುಪಾಲು ಆಡಳಿತ ಇವರುಗಳ ಕೈಯಲ್ಲೇ ಇರುತ್ತದೆ. ನಿಯಮಗಳನ್ನು ಬದಲಿಸಿದರೆ, ಕ್ಲಬ್ಬು ತನ್ನ ಗತ್ತು ಕಳೆದುಕೊಳ್ಳುತ್ತದೆ ಎನ್ನುವ ಭಯ ಇವರುಗಳಿಗೆ. ಈ ಕಾರಣಕ್ಕಾಗಿಯೇ ಬ್ರಿಟಿಷರು ಹಾಕಿಕೊಟ್ಟ ನಿಯಮಗಳನ್ನು, ಸಂಸ್ಕೃತಿಯನ್ನು ವಿಧೇಯರಾಗಿ ಪಾಲಿಸುತ್ತಾರೆ. ಈ 'ನಿಯಮ' ಎನ್ನುವ ನೆಪವನ್ನಿಟ್ಟುಕೊಂಡು ಪಂಚೆ, ಚಪ್ಪಲಿ, ಪೈಜಾಮ, ಕುರ್ತಾ ಧರಿಸಿದವರನ್ನು ಅವರು ಹೊರಗಿಡುತ್ತಾರೆ. ಏಕೆಂದರೆ ಈ ವಸಾಹತು ಪರಿಪಾಲಕರು ಸಾಮಾನ್ಯ ಭಾರತೀಯರಿಗೆ ತಮ್ಮೊಡನೆ ಕುಳಿತುಕೊಳ್ಳುವ ಅರ್ಹತೆಯಿಲ್ಲ ಎಂದೇ ಭಾವಿಸುತ್ತಾರೆ!



- ಡಿ.ಪಿ. ಸತೀಶ್
ಸಿಎನ್ಎನ್-ಐಬಿಎನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement