ಅಂದು ಶಾ ಬಾನುಗಾದ ಅನ್ಯಾಯಕ್ಕೆ ಸುಮ್ಮನಿದ್ದವರೇ, ಇಂದು ಸಮಾನ ನಾಗರಿಕ ಸಂಹಿತೆ ವಿರೋಧಿಸುತ್ತಿದ್ದಾರೆ
ಶರಿಯಾ ನ್ಯಾಯಾಲಯಗಳ ಫತ್ವಾಗಳಿಗೆ ಕಾನೂನು ಮಾನ್ಯತೆಯಿಲ್ಲ ಎಂದು...
ಶರಿಯಾ ನ್ಯಾಯಾಲಯಗಳ ಫತ್ವಾಗಳಿಗೆ ಕಾನೂನು ಮಾನ್ಯತೆಯಿಲ್ಲ ಎಂದು ಸುಪ್ರೀಮ್ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಮತ್ತೊಮ್ಮೆ 'ಏಕರೂಪ ನಾಗರೀಕ ಸಂಹಿತೆ'ಯ ಜಾರಿಯ ಬಗ್ಗೆ ಚರ್ಚೆ ಶುರುವಾಗುವಂತೆ ಮಾಡಿದೆ. ಈ ಸಂದರ್ಭದಲ್ಲಿ ನೆನಪಾಗುವುದು 80ರ ದಶಕದ ಶಾ ಬಾನು ಪ್ರಕರಣ. ಇಂದೋರ್ನ ವಕೀಲ ಮೊಹಮ್ಮದ್ ಅಹ್ಮದ್ ಖಾನ್ನ ಪತ್ನಿ ಶಾ ಬಾನು. ಮದುವೆಯಾಗಿ 14 ವರ್ಷಗಳ ನಂತರ ಎರಡನೇ ಮದುವೆಯಾದ ಅಹ್ಮದ್ ಖಾನ್. ಇಬ್ಬರು ಹೆಂಡಿರ ಜೊತೆ ಸಂಸಾರ ನಡೆಸಿ ಕಡೆಗೆ ಕೆಲ ವರ್ಷಗಳ ನಂತರ ಐದು ಮಕ್ಕಳ ತಾಯಿಯಾಗಿದ್ದ ಶಾ ಬಾನುವನ್ನು ಆಕೆಯ 62ನೇ ವಯಸ್ಸಿನಲ್ಲಿ ಆಕೆಯ ಐದು ಮಕ್ಕಳ ಜೊತೆಗೆ ಹೊರಹಾಕಿದ. ಒಪ್ಪಂದದಂತೆ ಮಾಸಿಕ 200 ರು. ಜೀವನಾಂಶವನ್ನು ಆಕೆಗೆ ನೀಡದಿದ್ದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಏಪ್ರಿಲ್ 1978ರಲ್ಲಿ ದಾವೆ ಹೂಡಿದ ಶಾ ಬಾನು, ಮಾಸಿಕ 500 ರು ಜೀವನಾಂಶ ಬೇಕೆಂದು ಕೇಳಿಕೊಳ್ಳುತ್ತಾರೆ.
ತಲಾಖ್ ನೀಡಿದಾಗ ಇಸ್ಲಾಮಿಕ್ ಕಾಯ್ದೆ ಮೂಲಕ ಕೊಡಬೇಕಾದ 5400 ರು. ಬಿಟ್ಟರೆ ನಾನು ಇನ್ನಾವುದೇ ಹಣವನ್ನು ಕೊಡಬೇಕಾಗಿಲ್ಲ ಎಂದು ವಾದಿಸುತ್ತಾನೆ ಖಾನ್. ಆಗಸ್ಟ್ 1979ರಲ್ಲಿ ಸ್ಥಳೀಯ ನ್ಯಾಯಾಲಯ ಮಾಸಿಕ 25 ರು. ನೀಡುವಂತೆ ತೀರ್ಪು ಕೊಟ್ಟಿತ್ತು. ಶಾ ಬಾನು ಕೇಸನ್ನು ಹೈಕೋರ್ಟ್ಗೆ ಕೊಂಡೊಯ್ದರು. ಅಲ್ಲಿ ಶಾ ಬಾನು ಪರವಾಗಿ 1970ರ ಜುಲೈನಲ್ಲಿ ಬಂದ ತೀರ್ಪು ಮಾಸಿಕ 179 ರು. ನೀಡುವಂತೆ ತೀರ್ಪು ನೀಡುತ್ತದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಖಾನ್ ಸುಪ್ರೀಮ್ ಕೋರ್ಟ್ಗೆ ಹೋಗುತ್ತಾರೆ. ಶಾ ಬಾನು ಈಗ ನನ್ನ ಪತ್ನಿಯಲ್ಲ ಇಸ್ಲಾಮಿಕ್ ಕಾನೂನಿಂತೆ ಆಕೆಗೆ ನಾನು ತಲಾಖ್ ನೀಡಿ ಎರಡನೇ ಮದುವೆಯಾಗಿದ್ದೇನೆ ಎಂಬುದವರ ವಾದ. ವಾದ ಆಲಿಸಿದ ಸುಪ್ರೀಮ್ ಕೋರ್ಟಿನ ದ್ವಿ-ಸದಸ್ಯ ಪೀಠ ಪ್ರಕರಣವನ್ನು ಹೆಚ್ಚುವರಿ ಪೀಠಕ್ಕೆ ವರ್ಗಾಯಿಸಿತು. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಮತ್ತು ಜಮಾತೆ ಉಲೇಮಾ ಈ ಹಿಂದ್ ಸಂಘಟನೆಗಳು ಕೂಡ ಪ್ರಕರಣದಲ್ಲಿ ವಾದಿಗಳಾಗಿ ಭಾಗಿಯಾದವು. ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಚಂದ್ರಚೂಡ್ ಅವರನ್ನೊಳಗೊಂಡಿದ್ದ ಪಂಚ ಸದಸ್ಯ ಪೀಠವೂ ಸಹ ಹೈ ಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು. ಆ ಮೂಲಕ ಮುಸ್ಲಿಂ ಮಹಿಳೆಯಾದರೂ ಶಾ ಬಾನು ಉಳಿದ ಮಹಿಳೆಯರಂತೆ ಸಂವಿಧಾನ ಬದ್ಧ ಹಕ್ಕು ಪಡೆಯಲು ಸ್ವತಂತ್ರಳು ಮತ್ತು ನಮ್ಮ ಸಂವಿಧಾನವೇ ಇಂತ ಪ್ರಕರಣಗಳಲ್ಲಿ ಅಂತಿಮ ಎನ್ನುವ ಸಂದೇಶವನ್ನು ರವಾನಿಸುವಂತಿತ್ತು ಸುಪ್ರೀಮ್ ತೀರ್ಪು. ಇದೇ ಸಂದರ್ಭದಲ್ಲಿ 'ಏಕರೂಪ ನಾಗರೀಕ ಸಂಹಿತೆ'ಯನ್ನು ಜಾರಿಗೆ ತರದಿರುವ ಬಗ್ಗೆಯೂ ವಿಷಾದ ವ್ಯಕ್ತಪಡಿಸಿತ್ತು. ಸಹಜವಾಗಿಯೇ ತೀರ್ಪು ಮತೀಯವಾದಿಗಳಿಂದ ವಿರೋಧಕ್ಕೆ ಒಳಗಾಯಿತು.
ಆಗಲೇ ಹೀನಕಾರ್ಯವೊಂದಕ್ಕೆ ಕೈಯಿರಿಸಿದರು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ. ಮುಸ್ಲಿಂ ಸಮುದಾಯವನ್ನು ಓಲೈಸಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತಂದರು. ಕಾಂಗ್ರೆಸ್ಸಿನ ಈ ತುಷ್ಟೀಕರಣ ನೀತಿಯ ವಿರುದ್ಧ ಸಹಜವಾಗಿಯೇ ಹಿಂದೂ ಸಮುದಾಯ ದನಿಯೆತ್ತಿತು. ಕಡೆಗೆ ಹಿಂದೂಗಳನ್ನು ಸಮಾಧಾನಪಡಿಸಲಿಕ್ಕಾಗಿ ಅಯೋಧ್ಯೆಯ ರಾಮಮಂದಿರದ ಬಾಗಿಲು ತೆಗೆಸಿದ ರಾಜೀವ್ ಗಾಂಧಿ, ಮುಂದೆ ನಡೆದ ಎಲ್ಲಾ ಘಟನೆಗಳಿಗೆ ಮುನ್ನುಡಿ ಬರೆದಿದ್ದರು. ವಿಚಿತ್ರವೆಂದರೆ,ನಮ್ಮ ಸೋಗಲಾಡಿ ಸೆಕ್ಯುಲರ್ ಮಹಾಶಯರು ಇವತ್ತಿಗೂ ಬಾಬರಿ ಮಸೀದಿಯ ಬಗ್ಗೆ ಮಾತನಾಡುತ್ತಾರೆಯೇ ಹೊರತು, ರಾಮಮಂದಿರ ಬಾಗಿಲು ತೆಗೆಸಲು ಕಾರಣವಾದ ಶಾ ಬಾನು ಪ್ರಕರಣ ಮತ್ತು ರಾಜೀವ್ ತುಷ್ಟೀಕರಣದ ನೀತಿಯ ವಿರುದ್ಧ ಅಪ್ಪಿ ತಪ್ಪಿಯೂ ಮಾತನಾಡುವುದಿಲ್ಲ. ಇದನ್ನು ವಿರೋಧಿಸಿ ಆಗ ಅವರ ಸಂಪುಟದಲ್ಲಿ ಮಂತ್ರಿ ಮತ್ತು ಎಐಸಿಸಿ ಸದಸ್ಯರಾಗಿದ್ದ ಆರೀಫ್ ಮೊಹಮ್ಮದ್ ಖಾನ್ ರಾಜೀನಾಮೆ ನೀಡುವ ಮೂಲಕ ಪ್ರತಿಭಟಿಸಿದ್ದರು. ನಮ್ಮ ಸೆಕ್ಯುಲರ್ಗಳ ಬಾಯಿಗಳು ಮಾತ್ರ ಬಿದ್ದು ಹೋಗಿತ್ತು. ಮಹಿಳಾವಾದಿಗಳೆಂಬ ಮೈಕಿಗೆ ಮೂತಿಯಿಟ್ಟುಕೊಂಡಿರುವ ನಾರಿಮಣಿಗಳೂ ಅವತ್ತು ಶಾ ಬಾನು ಪರ ನಿಲ್ಲಲಿಲ್ಲ. ಇವತ್ತಿನ ಸ್ಥಿತಿಯೂ ಭಿನ್ನವಿಲ್ಲ. ಮಾತಿಗೊಮ್ಮೆ 'ಸಂವಿಧಾನವೇ ಅಂತಿಮ' ಎನ್ನುವ ಈ ಮಹಾಶಯರುಗಳೇ ಮತ್ತೊಂದು ಕಡೆ ನಿಂತು 'ಏಕರೂಪ ನಾಗರೀಕ ಸಂಹಿತೆ'ಯನ್ನು ವಿರೋಧಿಸುತ್ತಾರೆ!
ಅಂದು ಶಾ ಬಾನು ಪ್ರಕರಣದ ಸಮಯದಲ್ಲಿ ತಮ್ಮ ಕಣ್ಣೆದುರೆ ಮಹಿಳೆಯೊಬ್ಬಳಿಗೆ ಮೋಸವಾಗಿದ್ದು ನೋಡಿಯೂ ಏನು ಮಾಡಲಾಗದಿದ್ದ ಮಹಿಳಾ ಸಂಘಟನೆಗಳಿಗೆ ಈ ಬಗ್ಗೆ ದನಿಯೆತ್ತಲು ಶರಿಯಾ ಕುರಿತ ಸುಪ್ರೀಮ್ ಕೋರ್ಟಿನ ತೀರ್ಪು ವರದಾನವಾಗಬಲ್ಲದು. ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಲಿಕ್ಕೆ ಇದು ಸಕಾಲವೂ ಹೌದು.
ಫತ್ವಾದ ಕುರಿತ ಸುಪ್ರೀಮ್ ಕೋರ್ಟಿನ ತೀರ್ಪು ಏಕರೂಪ ನಾಗರೀಕ ಸಂಹಿತೆಗೆ ಮುನ್ನುಡಿ ಬರೆದಂತೆ ಕಾಣುತ್ತದೆ. ಫತ್ವಾಗಳು ಯಾವುದೇ ಸಾಂವಿಧಾನಿಕವಾದ ಮಾನ್ಯತೆಯನ್ನು ಪಡೆದಿಲ್ಲ ಅದಕ್ಕೂ ಹೆಚ್ಚಿನದಾಗಿ ಪರ್ಯಾಯ ಸಂವಿಧಾನದಂತೆ ಕಾರ್ಯ ನಿರ್ವಹಿಸುವ ಅಧಿಕಾರ ಫತ್ವಾಗಳಿಲ್ಲ ಎಂಬುದು ತೀರ್ಪಿನ ಸಾರಾಂಶ.
ಭಾರತದಲ್ಲಿ ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ನ್ಯಾಯ ಪಂಚಾಯಿತಿಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಲು ಯತ್ನಿಸುತ್ತವೆ. ಬಹುತೇಕ ಸಂದರ್ಭಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳ ಹೊರತಾಗಿ ಸಮಸ್ಯೆಗಳನ್ನು ಇತ್ಯರ್ಥ ಮಾಡುತ್ತಿವೆ. ಹಾಗಾದರೆ ಇದು ನ್ಯಾಯಾಂಗ ವ್ಯವಸ್ಥೆಗೆ ಪರ್ಯಾಯವಲ್ಲವೆ? ಇದೂ ಸಹ ಫತ್ವಾದಂತೆಯೇ ಪರ್ಯಾಯವೇ ಎಂಬ ಪ್ರಶ್ನೆಗಳೇಳುತ್ತವೆ.
ಆದರೆ, ಸಾಂಪ್ರದಾಯಿಕ ನ್ಯಾಯ ಪಂಚಾಯತಿಗಳನ್ನು ಷರಿಯತ್ಗಾಗಲಿ ಅಥವಾ ಫತ್ವಾಗಾಗಲಿ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಅವು ಒಂದಕ್ಕೊಂದು ವಿರುದ್ಧ ದಿಕ್ಕಿನಿಂದ ರೂಪುಗೊಂಡಂಥವುಗಳು.
ಉದಾಹರಣೆಗೆ, ಪ್ರಸಕ್ತ ಸುಪ್ರೀಮ್ ಕೋರ್ಟಿನ ತೀರ್ಪಿಗೆ ಪ್ರತಿಕ್ರಿಯಿಸಿರುವ ಕುಲ್ ಹಿಂದ್ ಇಮಾಮ್ ಸಂಸ್ಥೆಯ ಅಧ್ಯಕ್ಷ ಮೌಲಾನಾ ಮೊಹಮ್ಮದ್ ಸಾಜಿದ್ ರಶೀದ್ 'ಧಾರ್ಮಿಕ ವಿಚಾರವನ್ನು ಕೋರ್ಟಿಗೆ ಕೊಂಡೊಯ್ದಿದ್ದೇ ಮೊದಲ ತಪ್ಪು, ಒಬ್ಬ ವ್ಯಕ್ತಿ ಒಂದು ಧರ್ಮವನ್ನು ಆಚರಿಸುತ್ತಿದ್ದರೆ ಅದರ ಉಪದೇಶವನ್ನು ಪಾಲಿಸಲೇಬೇಕು. ಶರಿಯಾವನ್ನು ಪಾಲಿಸದವನು ನೈಜ ಮುಸಲ್ಮಾನನೇ ಅಲ್ಲ' ಎಂದಿದ್ದಾರೆ. ಅಂದರೆ ಶರಿಯಾ ನ್ಯಾಯಾಲಯಗಳು ನಡೆಯುವುದು ಅವರ ರಿಲಿಜಯನ್ ಗ್ರಂಥಗಳ ಚೌಕಟ್ಟಿನೊಳಗೆ ಅಂತಾಯಿತಲ್ಲವೇ?
ಆದರೆ, ಇದೇ ಮಾತು ನಮ್ಮ ಸಾಂಪ್ರದಾಯಿಕ ನ್ಯಾಯ ಪಂಚಾಯಿತಿಗಳಿಗೆ ಅನ್ವಯಿಸುವುದಿಲ್ಲ. ಇಲ್ಲಿ ಯಾವುದೇ ಧರ್ಮಗ್ರಂಥಗಳ ಆಧಾರವಿಲ್ಲದೇ ಆಯಾ ಪರಿಸರದ ಮೇಲೆ ಸಮಸ್ಯೆಯ ಪರಿಹಾರಗಳು ಅವಲಂಬಿತವಾಗಿರುತ್ತವೆ.
ಸಾಂಪ್ರದಾಯಿಕ ನ್ಯಾಯಪಂಚಾಯಿತಿಗಳು ನೀಡುವ ತೀರ್ಮಾನವನ್ನು ಪ್ರಶ್ನಿಸಬಹುದು ಅಥವಾ ಒಪ್ಪಿಕೊಳ್ಳಲೂ ಬಹುದು. ಹಾಗೆಯೇ ಅದು ಸಂವಿಧಾನಕ್ಕೆ ವಿರುದ್ಧವಾದ ತೀರ್ಪುಗಳನ್ನು ನೀಡಲು ಯಾವುದೇ ಅಧಿಕಾರವನ್ನು ಹೊಂದಿಲ್ಲ. ಅದು ತನ್ನ ಸುತ್ತಮುತ್ತಲಿನ ಸ್ಥಳೀಯವಾಗಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಅದಕ್ಕೂ ಮಿಗಿಲಾಗಿ ಬಹುತೇಕ ನ್ಯಾಯಪಂಚಾಯಿತಿಗಳಿಗೆ ಸಾಂಸ್ಥಿಕವಾದ ರಚನೆಗಳಿರುವುದಿಲ್ಲ. ಸಮಸ್ಯೆಯ ಆಳ ಮತ್ತು ಅಗಲದ ಆಧಾರದ ಮೇಲೆ ಪಂಚಾಯತಿಗಳು ರೂಪುಗೊಳ್ಳುತ್ತವೆ.
ಫತ್ವಾಗಳು ಶರಿಯಾ ಎಂಬ ರಿಲಿಜನ್ ಪರಿಧಿಯೊಳಗೆ ಬರುವ ಕಾನೂನಿಗೆ ಮಾತ್ರ ನಿಷ್ಠವಾಗಿರುತ್ತವೆಯೇ ವಿನಃ ಇತರ ಯಾವ ಸಂಗತಿಗಳೂ ಅವುಗಳಿಗೆ ಮುಖ್ಯವಾಗುವುದಿಲ್ಲ. ಆದ್ದರಿಂದಲೇ ಅದು ಅಸಂವಿಧಾನಿಕವಾಗಿದ್ದರೂ ಆಶ್ಚರ್ಯವಿಲ್ಲ. ಇಂತಹ ಸಮಸ್ಯೆ ಹಿಂದೂ ಸಂಪ್ರದಾಯಗಳಿಗೆ ಬರುವುದು ಅಸಾಧ್ಯ. ಏಕೆಂದರೆ, ಎಲ್ಲವನ್ನೂ ಒಳಗೊಳ್ಳುವ ಮೂಲಕ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಹೋಗುವ ಗುಣ ಸಂಪ್ರದಾಯಗಳಿಗೆ ಇರುತ್ತವೆ ಮತ್ತು ಯಾವುದೇ ಧರ್ಮಗ್ರಂಥಗಳ ಆಧಾರದ ಮೇಲೆ ನಮ್ಮ ಬದುಕು ನಿರ್ಧರಿತವಾಗುವುದಿಲ್ಲ. ನಿಮಗೆ ನೆನಪಿರಬಹುದು, ವರ್ಷಗಳ ಹಿಂದೊಮ್ಮೆ ಹಿಂದೂ ಸಿವಿಲ್ ಕೋಡ್ ತಿದ್ದುಪಡಿ ಕುರಿತಂತೆ ನ್ಯಾಯಾಲಯ 'ಹಿಂದೂಗಳ ವಿಷಯದಲ್ಲಿ ಕಾನೂನು ಮಾಡಲು ಆತುರ ತೋರುವ ಸರ್ಕಾರಗಳು ಅದನ್ನೇ ಬೇರೆ ಧರ್ಮಗಳ ವಿಷಯದಲ್ಲಿ ಮಾಡಲಾರರು' ಅನ್ನುವ ರೀತಿಯಲ್ಲಿ ಉಲ್ಲೇಖಿಸಿತ್ತು.
ಈ ಕಾರಣದಿಂದಾಗಿಯೇ ಬಹುಶಃ ಯುರೋಪ್ ಸಮಾಜದ ಕ್ರಿಶ್ಚಿಯನ್ ಥಿಯಾಲಜಿಯ ಮೇಲೆ ರೂಪುಗೊಂಡಿರುವ ನಮ್ಮ ಸಂವಿಧಾನಕ್ಕೆ ಹಿಂದೂಗಳು ಸುಲಭವಾಗಿ ಒಗ್ಗಿಕೊಂಡಿದ್ದಾರೆ. ಆದರೆ, ಇದೇ ಮಾತು ಇಸ್ಲಾಂ ರಿಲಿಜನ್ನಿನ ಅನುಯಾಯಿಗಳ ಕುರಿತು ಹೇಳಲಾಗುವುದಿಲ್ಲ. ರಿಲಿಜನ್ಗಳಿಗೆ ಒಂದು ದೇಶದ ಕಾನೂನು ಅಥವಾ ಸಾಂವಿಧಾನಿಕ ನಿಯಮಗಳು ತೊಂದರೆಯುಂಟು ಮಾಡುತ್ತವೆ. ಏಕೆಂದರೆ ರಿಲಿಜನ್ಗಳಿಗೆ ಅವುಗಳದ್ದೇ ಆದ ಆಂತರಿಕ ಕಾನೂನುಗಳಿರುತ್ತವೆ.
ಸೆಕ್ಯುಲರ್ ಪ್ರಭುತ್ವದಲ್ಲಿ ಬದುಕುವ ರಿಲಿಜನ್ಗಳಿಗೆ ಯಾವುದನ್ನು ಅನುಸರಿಸಬೇಕು ಎಂಬ ಗೊಂದಲ ಏಳುವುದು ಅತ್ಯಂತ ಸಹಜ. ಇದರ ಪರಿಣಾಮವೇ ಶಾ ಬಾನು ಪ್ರಕರಣ. ಆದ್ದರಿಂದ ಫತ್ವಾಗಳ ನಿಷೇಧ ಅಥವಾ ಶರಿಯಾ ಕಾನೂನುಗಳನ್ನು ಅನುಸರಿಸುವುದು ಅಥವಾ ಸಂವಿಧಾನದ ಕಾನೂನನ್ನು ಅನುಸರಿಸುವ ದ್ವಂದ್ವವನ್ನು ಹುಟ್ಟಿಹಾಕುತ್ತಿರುವುದು ಈ ಸೆಕ್ಯುಲರ್ ಪ್ರಭುತ್ವ.
ಕೊನೆಯದಾಗಿ ಹೇಳುವುದಾದರೆ ಏಕರೂಪ ನಾಗರೀಕ ಸಂಹಿತೆಯು ಹಾಗೂ ಶರಿಯಾ ಕಾನೂನುಗಳನ್ನು ಫಾಲೋ ಮಾಡುವುದು ಒಂದಕ್ಕೊಂದು ವಿರುದ್ಧವಾದ ಕ್ರಿಯೆಗಳಾಗಿರಬಹುದು. ಆದರೆ, ರಿಲಿಜನ್ಗಳಿಗೆ ಇಂತಹ ಗೊಂದಲದ ಮೂಲ (Root Cause) ಸೆಕ್ಯುಲರ್ ಪ್ರಭುತ್ವವೇ ಎಂದರೂ ತಪ್ಪಾಗಲಾರದು.
ರಿಲಿಜನ್ ಮತ್ತು ಹಿಂದೂ ಸಂಪ್ರದಾಯಗಳನ್ನು ಒಳಗೊಳ್ಳುವಂತೆ ರೂಪಿಸುವ ಸಾರ್ವತ್ರಿಕ ನಿಯಮಗಳು ಇಂತಹ ಸಮಸ್ಯೆಗಳನ್ನು ಪ್ರಾಯಶಃ ಪರಿಹರಿಸಬಹುದು. ಹಾಗೆಯೇ ಬಹುಪತ್ನಿತ್ವ, ಬಾಲ್ಯ ವಿವಾಹ ಇತ್ಯಾದಿ ಮಹಿಳಾ, ಮಕ್ಕಳ ಹಕ್ಕುಗಳ ರಕ್ಷಣೆಗೆ ಮತಾಂತರಕ್ಕೆ ಸಂಬಂಧಿಸಿದಂತೆ ಸೆಕ್ಯುಲರ್ಭುತ್ವದ ಕಾನೂನುಗಳನ್ನೇ ಪಾಲಿಸುವುದನ್ನು ಕಾನೂನಾತ್ಮಕವಾಗಿ ಹೇರಿಕೆ ಮಾಡಬೇಕಾಗಿಯೂ ಬರಬಹುದು. ಈ ಬಗ್ಗೆ ಮುಕ್ತವಾದ ಚರ್ಚೆಯಾಗಬೇಕಿದೆ.
- ರಾಕೇಶ್ ಶೆಟ್ಟಿ