ಹುನಗುಂದದ ಶ್ರೀಮಂತ ಕಾಂಗ್ರೆಸ್ ಶಾಸಕ ಕಾಶಪ್ಪನವರ್, ಕಳೆದ ವಾರ ಒಂದು ದಿನ ಮಧ್ಯರಾತ್ರಿ ಕಳೆದ ಅನಂತರ ಒಂದು 'ಪಬ್'ನಲ್ಲಿನ ಜಗಳದಲ್ಲಿ ಭಾಗಿದಾರರಾಗಿದ್ದಾರೆನ್ನುವ ವರದಿಯನ್ನು ಸರ್ಕಾರ ಅಧಿಕೃತವಾಗಿ ತಿರಸ್ಕರಿಸಿಲ್ಲ. ಅಂತಹ ಯಾವ ಪ್ರಕಟಣೆಯೂ ಅಧಿಕೃತವಾಗಿ ಹೊರಬಿದ್ದಿಲ್ಲ.
ಆ ಜಗಳದ ಸಮಯದಲ್ಲಿ ಜಗಳ ಬಿಡಿಸಲಿಕ್ಕೆ ಬಂದಿದ್ದ ಇಬ್ಬರು ಕಾನ್ಸ್‌ಟೇಬಲ್‌ಗಳ ಮೇಲೆ ಕಾಶಪ್ಪನವರ್ ಹಲ್ಲೆ ನಡೆಸಿದ್ದರೆನ್ನುವ ದೂರಿರುವುದನ್ನೂ ಸರ್ಕಾರ ತಿರಸ್ಕರಿಸಿಲ್ಲ. ಹಲ್ಲೆಗೊಳಗಾದ ಪೊಲೀಸ್ ಕಾನ್ಸ್‌ಟೇಬಲ್‌ಗಳೇ ಘಟನೆ ನಡೆದ ಮರುದಿನ ದೂರು ನೀಡಿದ್ದಾರೆ. ಅದನ್ನು ಸರ್ಕಾರ ತಿರಸ್ಕರಿಸಿಲ್ಲ. ಇದೆಲ್ಲ ಸುದ್ದಿಯಾಗಿ, ಮಾಧ್ಯಮ ಪ್ರಪಂಚದಲ್ಲಿ ದೊಡ್ಡ ರೀತಿಯಲ್ಲೇ ಪ್ರಚಾರವಾಗುತ್ತಿದ್ದಾಗ ಕಾಶಪ್ಪನವರ್ ಯಾರಿಗೂ ಸಿಗಲಿಲ್ಲ. ವಿಧಾನಮಂಡಲದಲ್ಲಿ ಈ ವಿಚಾರದ ಪ್ರಸ್ತಾಪವಾದಾಗ ಅಲ್ಲಿ-ಇಲ್ಲಿ ಪ್ರಕಟವಾದ ಸುದ್ದಿ: ಕಾಶಪ್ಪನವರ್ ಗೋವಾಗೆ ಹೋಗಿದ್ದಾರೆ. ತಿರುಪತಿಗೆ ಹೋಗಿದ್ದಾರೆ.
ವಿಧಾನಸಭೆಯಲ್ಲಿ ಸಹಜವಾಗಿಯೇ ಆಳುವ ಪಕ್ಷದ ಶಾಸಕರೊಬ್ಬರ ಮೇಲೆ ಇಂತಹ ದೂರು ಪ್ರಕಟವಾಗಿರುವುದು ರಾಜಕೀಯಕ್ಕೆ ತಿರುಗಿತ್ತು. ಪ್ರಧಾನ ಪ್ರತಿಪಕ್ಷವಾದ ಬಿಜೆಪಿ ಕಾಂಗ್ರೆಸ್ ಸರ್ಕಾರ ತನ್ನ ಶಾಸಕರನ್ನು ರಕ್ಷಿಸಿಕೊಳ್ಳುತ್ತಿದೆ ಎನ್ನುವ ಸಾಮಾನ್ಯ ಆರೋಪವನ್ನು ಹೊರಿಸಿತ್ತು. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಅದೇ ಪ್ರತಿಪಕ್ಷಗಳ ಪ್ರತಿಕ್ರಿಯೆ. ಎಂದಿನಂತೆ ಸರ್ಕಾರದ ಪರವಾಗಿ ಸಿಕ್ಕ ಉತ್ತರ: ತಪ್ಪು ಮಾಡಿದವರಿಗೆ ರಕ್ಷಣೆ ನೀಡುವುದಕ್ಕಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು.
ಅದು ಅಲ್ಲಿಗೇ ನಿಂತಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಆರೋಪ - ಪ್ರತ್ಯಾರೋಪಗಳ ವಿನಿಮಯದ ಆವೇಶದ ಭರಾಟೆಯಲ್ಲಿ ರಾಜದಂಡವನ್ನು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಸ್ನೇಹಿತರ ಹೆಂಡತಿಯನ್ನೇ ರೇಪ್ ಮಾಡಿದ ಆರೋಪವಿರುವ ಹರತಾಳು ಹಾಲಪ್ಪ ಅವರಿಗೇನಾಯಿತು? ನಿಮ್ಮ ಸರ್ಕಾರ (ಬಿಜೆಪಿ) ಆಗ ಮಾಡಿದ್ದೇನು' ಎಂದು ಎತ್ತರಿಸಿದ ಧ್ವನಿಯಲ್ಲೇ ರೇಗಿ ಕೂತರು. ಮುಖ್ಯಮಂತ್ರಿಯ ಘನತೆವೆತ್ತ ಸ್ಥಾನ-ಮಾನಕ್ಕೆ ಆ ವಾಕ್ಯದ ಉಚ್ಚಾರಣೆ ನಿಜವಾಗಿಯೂ ಶೋಭೆಯನ್ನು ತರುವುದಿಲ್ಲ. ಆದರೇನು ಮಾಡುವುದು. ಸಂಯಮ ಕೈ ಕೊಟ್ಟಿತ್ತು. ಅದೆಲ್ಲ ಕಡತದಲ್ಲಿ ಇದೆಯೋ ಇಲ್ವೋ ಗೊತ್ತಿಲ್ಲ. ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಯಿತು. ಪತ್ರಿಕೆಗಳಲ್ಲೂ ಅಚ್ಚಾಯಿತು.
ನಿಜ. ಹಾಲಪ್ಪ ಅವರ ಹಗರಣದ ವಿಚಾರಣೆ ಏನಾಯಿತು ಎನ್ನುವ ವಿಚಾರದಲ್ಲಿ ಜನರಿಗೆ ಆಸಕ್ತಿ ಇದೆ. ಆದರೆ ಸರ್ಕಾರದ ಮೂಲಗಳಿಂದ ಯಾವುದೇ ರೀತಿಯ ಪ್ರಕಟಣೆಯೂ ಹೊರಬಿದ್ದಿಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅನಂತರವಾದರೂ ಸಿದ್ದರಾಮಯ್ಯ ಅವರು ವಿಷಯವನ್ನು ತಿಳಿದುಕೊಳ್ಳಬೇಕಾಗಿತ್ತು. ನೇರವಾಗಿ ಅಧಿಕಾರಿಗಳಿಂದಲೇ ವಿಷಯ ತಿಳಿಯುವ ಸ್ಥಾನದಲ್ಲಿ ಅವರಿದ್ದರು. ಏನೂ ಆಗಲಿಲ್ಲ. ಅಂದರೆ ಏನೂ ಆಗಿಲ್ಲ ಎಂದೇ ತರ್ಕಬದ್ಧ ಅರ್ಥ. ಈಗ ಮತ್ತೆ ಕಾಶಪ್ಪನವರ್ ಸರದಿ. ಅವರು ಎಲ್ಲಿಂದಲೋ ಬಂದು ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯಕ್ಕೆ ಅರ್ಜಿ ಹಾಕಿದರು. ಅದು ತಿರಸ್ಕೃತವಾಯಿತು. ಅದಾದ ಅನಂತರ ಏನಾಯಿತು? ಬಹಿರಂಗವಾಗಿ ಏನೂ ಆಗಿಲ್ಲ. ಕಾಶಪ್ಪನವರ್ ಬಂಧನವಾಗಿಲ್ಲ, ವಿಚಾರಣೆಯಾಗಿಲ್ಲ.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಕಾಶಪ್ಪನವರ್ ಪಬ್ ಸಿಬ್ಬಂದಿ ಜತೆ ಜಗಳವಾಡಿದ್ದು ಮುಖ್ಯವಲ್ಲ. ಅವರು ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ, ಕರ್ತವ್ಯ ನಿರ್ವಹಣೆಯ ಕಾಲದಲ್ಲೇ ಬಾರಿಸಿದ್ದರು ಎನ್ನುವ ದೂರು ಮುಖ್ಯ. ಪಬ್ ಜಗಳಗಳು ನಡೆಯುತ್ತಲೇ ಇರುತ್ತವೆ. ಹಾಗೇ ಕರಗಿ ಹೋಗುತ್ತವೆ. ಆದರೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ (ಹೌದು. ಕಾನ್ಸ್‌ಟೇಬಲ್ ಕೂಡಾ ಅಧಿಕಾರಿಯೇ. ಲಂಡನ್‌ನ ಪೊಲೀಸ್ ಮುಖ್ಯಸ್ಥರ ಹುದ್ದೆಯ ಹೆಸರು ಚೀಫ್ ಕಾನ್ಸ್‌ಟೇಬಲ್) ಬಾರಿಸಿದ್ದು ಕಾಯಿದೆಯಂತೆ ದೊಡ್ಡ ಅಪರಾಧ. ಅಂತಹ ಪ್ರಕರಣದಲ್ಲಿ ಯಾರ ವಿರುದ್ಧ ದೂರಿದೆಯೋ ಅವರ ಬಂಧನವೂ ಆಗಿಲ್ಲ, ವಿಚಾರಣೆಯೂ ಆಗಿಲ್ಲ ಎಂದರೆ ಈ ಹಗರಣದ ಹಿಂದೆ ಪ್ರಬಲ ಶಕ್ತಿಗಳ ಕೈವಾಡವೇ ಇರಬೇಕು ಎನ್ನುವ ತರ್ಕಕ್ಕೆ ಅವಕಾಶವಾಗಿದೆ.
ವಿಧಾನ ಸಭೆಯ ಮೊಗಸಾಲೆಯಲ್ಲಿ ಪಿಸುಮಾತಿನಲ್ಲಿ, ಅನಾಮಧೇಯತೆಯ ಷರತ್ತು ಹಾಕಿ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ ರಹಸ್ಯ: ಕಾಶಪ್ಪನವರ್ ಈಗ ಸಂಪೂರ್ಣವಾಗಿ ಕಾಂಗ್ರೆಸ್ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಕಡೆಗೇ ಇರುವ ವಚನ ನೀಡಿದ್ದಾರೆ. ಅದಕ್ಕೇ ಅವರಿಗೇನೂ ಆಗುವುದಿಲ್ಲ. ಅಲ್ಲಿಗೆ ಕಾಶಪ್ಪನವರ್ ಹಗರಣದ ಕತೆ ಮುಗೀತು.
ಕರ್ನಾಟಕ ಕಾಂಗ್ರೆಸ್ ಏನಾಗ್ತಿದೆ?: ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ಪ್ರಶ್ನಾತೀತ. ಅದನ್ನು ಎಲ್ಲರೂ ಒಪ್ಪಿದ್ದಾರೆ. ಕಾಂಗ್ರೆಸ್ ವರಿಷ್ಠರೂ ಅವರ ಮಾತಿಗೇ ಬೆಲೆ ಕೊಡುವುದು ಎನ್ನುವ ಮಾತನ್ನು ಈಗ ಆಡದೇ ಇರುವ ಕಾಂಗ್ರೆಸ್ಸಿಗರಿಲ್ಲ ಎನ್ನುವುದು ಮಿಥ್ಯೆಯಾಗಿದೆ. ಆದರೆ ಅವರೆಲ್ಲ ಮಾತಾಡುವುದು ಪಿಸು ಮಾತಿನಲ್ಲಿ. ವಿಧಾನ ಸಭೆಯ ಮೊಗಸಾಲೆಯಲ್ಲೇ ಪಿಸುಮಾತಿನ ಪ್ರಚಾರ ಅಥವಾ ಅಪಪ್ರಚಾರದ ಸ್ವರೂಪದಲ್ಲಿ ಈಗೀಗ ಕಾಂಗ್ರೆಸ್ಸಿನಲ್ಲಿನ ಆಂತರಿಕ ತಿಸ್ರಗಳು ಇನ್ನೂ ಜೀವಂತವಾಗಿವೆ ಎಂದಾಯಿತು. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ರಾಜಕೀಯದಲ್ಲಿ, ಅದರಲ್ಲೂ ಕಾಂಗ್ರೆಸ್ಸಿನಂತಹ ವಿವಿಧ ಹಿತಾಸಕ್ತಿಗಳನ್ನು ಏಕಕಾಲದಲ್ಲಿ ಕಾಪಾಡುವ ಭರವಸೆ ನೀಡುವ ಪಕ್ಷದಲ್ಲಿ ಇದು ಸಾಮಾನ್ಯವೇ.
ಮತ್ತೆ ಅದೇ ಹಳೆಯ ಕತೆ. ಈಗ ತಾನೇ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಿದರೆ ಮಾತ್ರ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಈಗಿನ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳುವುದು ಸಾಧ್ಯ ಎನ್ನುವ ಅಭಿಪ್ರಾಯ ಗರಿಗಟ್ಟುತ್ತಿದೆ. ಅದನ್ನು ಸಾರಾಸಗಟು ತಿರಸ್ಕರಿಸುವ ಸ್ಥಿತಿಯಲ್ಲೂ ಕಾಂಗ್ರೆಸ್ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕ್ಷೇತ್ರವಾದ ಮೈಸೂರಿನಲ್ಲಿ ಅವರೇ ಆರಿಸಿದ ಅಭ್ಯರ್ಥಿ, ಎಚ್. ವಿಶ್ವನಾಥ ಸೋತಿದ್ದಾರೆ. ಡಾ. ಜಿ. ಪರಮೇಶ್ವರ ಅವರ ಸ್ವಂತ ಜಿಲ್ಲೆಯಾದ ತುಮಕೂರಿನಲ್ಲಿ ಅವರೇ ಆರಿಸಿದ, ಮಾಜಿ ಜಾತ್ಯತೀತ ಜನತಾದಳದ ನಾಯಕ, ಮುದ್ದಹನುಮೇಗೌಡರು ಕಾಂಗ್ರೆಸ್ಸಿನ ಪರವಾಗಿ ಗೆದ್ದಿದ್ದಾರೆ. ಈ ಎರಡು ಫಲಿತಾಂಶಗಳನ್ನು ವಿಶೇಷವಾಗಿ ಪ್ರಸ್ತಾಪಿಸಲು ಇರುವ ಕಾರಣವೇನು? ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೆ, ರಾಜ್ಯದ ಕಾಂಗ್ರೆಸ್ಸಿನಲ್ಲಿ ಎರಡು ಶಕ್ತಿ ಕೇಂದ್ರಗಳನ್ನು ರೂಪಿಸಿದಂತಾಗಿ, ಪಕ್ಷದ ಸಂಘಟನೆಯಲ್ಲಿ ಒಡಕುಂಟಾಗಿ, ಪಕ್ಷ ದುರ್ಬಲವಾಗಬಹುದು ಎನ್ನುವ ಪ್ರಚಾರ. ಸದ್ಯಕ್ಕೆ ಉಪಮುಖ್ಯಮಂತ್ರಿಯಾಗುವ ಆಸೆ ಅನೇಕರಿಗಿದ್ದರೂ, ಅವರು ಅದನ್ನು ಹೇಳಿಕೊಳ್ಳುವಂತಿಲ್ಲ. ಆದರೆ ಉಪಮುಖ್ಯಮಂತ್ರಿಯ ಸ್ಥಾನದ ವಿಚಾರ ಹಾಗಲ್ಲ. ಇನ್ನೂ ಆ ಸ್ಥಾನಕ್ಕೆ ಕುರ್ಚಿ ಸಿದ್ಧವಾಗಿಲ್ಲ, ಆಗಲೇ ಡಾ. ಪರಮೇಶ್ವರ ಅವರಿಗೆ ಪ್ರತಿಸ್ಪರ್ಧಿಗಳು ಇದ್ದಾರೆ. ಅದಕ್ಕೆ ಪ್ರಚಾರವೂ ಸಿಕ್ಕಿದೆ. ಪರಮೇಶ್ವರ ಅವರ ತುಮಕೂರು ಜಿಲ್ಲೆಯವರೇ ಆದ ಸಚಿವ ಟಿ.ಬಿ. ಜಯಚಂದ್ರ ಅವರ ಹೆಸರನ್ನು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ ವರಿಷ್ಠರು ರಾಜ್ಯದಲ್ಲಿ ಉಪಮುಖ್ಯಮಂತ್ರಿಯ ಸ್ಥಾನವನ್ನು ಸೃಷ್ಟಿಸಲು ಸಿದ್ಧವಾದರೆ, ಇನ್ನಷ್ಟು ಅಭ್ಯರ್ಥಿಗಳು ಹುಟ್ಟಬಹುದು. ಅದು ತೀರ ಸಹಜವಾದ ಪ್ರಕ್ರಿಯೆ. ಈಗಲೇ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಬ್ಬರೂ ಹಳೆಯ ಮೈಸೂರು ಸಂಸ್ಥಾನಕ್ಕೇ ಸೇರಿದವರಾದ್ದರಿಂದ ಕಾಂಗ್ರೆಸ್ ರಾಜಕೀಯ ಶಕ್ತಿಯ ಹಂಚಿಕೆಯಲ್ಲಿ ವಿಶಾಲವಾದ ಕೃಷ್ಣಾ - ತುಂಗಭದ್ರಾ ಬಯಲ ಪ್ರದೇಶ ತಬ್ಬಲಿಯಾಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಆ ಪ್ರದೇಶದಲ್ಲಿನ ಪ್ರಬಲ ಕಾಂಗ್ರೆಸ್ ನಾಯಕರಲ್ಲಿ ಅಲ್ಲಿನ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ರಾಜಕೀಯ ಶಕ್ತಿಯಾದ ವೀರಶೈವ ಸಮಾಜದವರು ಯಾರೂ ಇಲ್ಲ ಎನ್ನುವ ಕಠೋರ ಸತ್ಯವನ್ನು ಕಡೆಗಾಣಿಸುವುದು ಸಾಧ್ಯವಿಲ್ಲ. ಹಿಂದೆ, ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಯಾರಾದರೂ ಆಗಿರಲಿ, ನೇರವಾಗಿ ಪ್ರಧಾನಿಯ ಬಳಿಗೇ ಹೋಗಿ ಕೆಲಸ ಮಾಡಿಸಿಕೊಳ್ಳುವ ಶಕ್ತಿ ಇರುವ ಕರಾವಳಿಯ ಜನರಿದ್ದರು. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಆ ಸ್ಥಿತಿಯಲ್ಲಿಲ್ಲ.
ಹಾಗಿದ್ರೆ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಭದ್ರವಾಗಿಲ್ಲವೇನು ಎಂದು ಕೇಳಿದರೆ, ಹಾಗೇನಿಲ್ಲ. ಅವರಿಗೆ ವರಿಷ್ಠರ ಬೆಂಬಲ ಇರುವವರೆಗೆ ಅವರ ಆಡಳಿತ, ಅವರ ಕಾರ್ಯಕ್ರಮಗಳನ್ನು ಜಾರಿಗೆ ತರುವ ರೀತಿ - ನೀತಿ, ಹಾಗೂ ಕಾಂಗ್ರೆಸ್ಸಿನ ಈಗಿನ ವಿಶಿಷ್ಟ ನೀತಿಯಾದ 'ಎಲ್ಲರನ್ನೂ ಒಳಗೊಂಡ, ಎಲ್ಲ ಜನರನ್ನು ಸಮಾನರೆಂದೇ ಪರಿಗಣಿಸುವ ಸಿದ್ಧಾಂತವನ್ನು' ಪಾಲಿಸಿದರೆ ಅವರ ಕುರ್ಚಿ ಭದ್ರ. ಈಗ ಏಕಪಕ್ಷೀಯವಾಗಿ ಕಾಂಗ್ರೆಸ್ಸಿನ ಆಳ್ವಿಕೆಯಲ್ಲಿರುವ ದೊಡ್ಡ ರಾಜ್ಯ ಎಂದರೆ ಕರ್ನಾಟಕ ಒಂದೇ. ಮಹಾರಾಷ್ಟ್ರದಲ್ಲಿರುವುದು ಸಮ್ಮಿಶ್ರ ಸರ್ಕಾರ. ಈ ಸನ್ನಿವೇಶದಲ್ಲಿ ರಾಜ್ಯದಲ್ಲಿನ ರಾಜಕೀಯ ಭದ್ರತೆಯನ್ನು ಅಲ್ಲಾಡಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ವರಿಷ್ಠರು ಕೈ ಹಾಕಲಿಕ್ಕಿಲ್ಲ.
ಕಿಡಿಗೇಡಿತನ: ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ಪ್ರದೇಶ ವಿಭಾಗದಲ್ಲಿ ಈಗ ಕೇಳಿ ಬರುತ್ತಿರುವ ಜ್ವಲಂತ ಪ್ರಶ್ನೆ ಎಂದರೆ, ಪಕ್ಷದಲ್ಲಿನ ಏಕೈಕ ಜನನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವ ಸ್ಥಾನ - ಮಾನ ಸಿಕ್ಕೀತು ಎನ್ನುವುದೇ ಅಂದರೆ ಸರಿಯಾದೀತೇ?
- ಸತ್ಯ
anisikeprabha@gmail.com