ಎಲ್ಲಾಗಿದೆ ಸ್ವಾಮಿ ಕ್ರಾಂತಿ?
ರವಿವಾರದಂದು ಮಾತ್ರ ತಪ್ಪದೇ ಕನ್ನಡಪ್ರಭ ಕೊಳ್ಳುತ್ತೇನೆ. ಕಾರಣ ತಮ್ಮ ರವಿವಾರದ ಪುರವಣಿ 'ಖುಷಿ' ನೀಡುವ ಖುಷಿಗಾಗಿ. ಅದರಲ್ಲಿ ಒಂದಷ್ಟು ಹೊಸತನ ಇದೆ ಅನಿಸುತ್ತದೆ. ಇತರ ಎಲ್ಲ ಪತ್ರಿಕೆಗಳ ರವಿವಾರದ ಪುರವಣಿಯಲ್ಲಿ ತುಂಬ ಗಂಭೀರವಾದ ವಿಷಯಗಳ ದೀರ್ಘ ಲೇಖನಗಳಿರುವುದರಿಂದ ಓದಲು ತುಂಬ ಬೇಜಾರು. ರವಿವಾರದ ಪತ್ರಿಕೆಯ ತಮ್ಮ 'ನಂಗೆ ಇಷ್ಟಾನೋ' ನಂಗೂ ಇಷ್ಟಾನೇ. ಹಾಗೆಯೇ ಪಂಚಜ್ಜಾಯ, ಜೋಕ್ಸ್ ಪಿಯರ್, ಸಾಲ್ಪನಿಕ ಇವು ನನ್ನ ಇಷ್ಟದ ಅಂಕಣಗಳು.
ಜೋಕ್ಸ್ ಪಿಯರ್, ಸಾಲಪನಿಕ ಮುಂತಾದ ಚಿಕ್ಕ ಚಿಕ್ಕ ಅಂಕಣಗಳನ್ನು ಸಹ ನಿಮ್ಮ ಪತ್ರಿಕೆಯ ಸಿಬ್ಬಂದಿಯವರೇ ಬರೆಯುತ್ತಿರುವುದರಿಂದ ನಮ್ಮಂತಹ ಚಿಕ್ಕಪುಟ್ಟ ಬರಹಗಾರರಿಗೆ ನಿಮ್ಮ ಪತ್ರಿಕೆಯಲ್ಲಿ ಅವಕಾಶವೇ ಇಲ್ಲ. ದಯವಿಟ್ಟು ಬೇರೆಯವರಿಗೂ ಬರೆಯಲು ಅವಕಾಶ ನೀಡಿ. ಅಂದ ಹಾಗೆ, ಬೇರೆ ಪತ್ರಿಕೆಯವರಿಗೆ ದೊರೆಯುವ ಗುಣಮಟ್ಟದ ನ್ಯೂಸ್ಪ್ರಿಂಟ್ ತಮಗೇಕೆ ದೊರೆಯುತ್ತಿಲ್ಲ ಸ್ವಾಮಿ?
ಮುದ್ರಣದ ಗುಣಮಟ್ಟ ಸುಧಾರಿಸಿದರೆ ಕನ್ನಡಪ್ರಭ ಕರ್ನಾಟಕದಲ್ಲಿ ತನ್ನ ಪ್ರಭೆಯನ್ನು ಬೀರೀತು.
-ಮುರಳೀಧರ ಕುಲಕರ್ಣಿ, ಬೀದರ್
ಜುಲೈ 10ರ ಪತ್ರಿಕೆಯ ಮುಖಪುಟದಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ರಾಹುಲ್ ಗಾಂಧಿಯವರು ತೂಕಡಿಸುತ್ತಿರುವ ಚಿತ್ರವನ್ನು ಬೆಂಗಳೂರು ಆವೃತ್ತಿಯ ಪತ್ರಿಕೆಯಲ್ಲಿ ಮಾತ್ರ ನೀಡಿರುತ್ತೀರಿ. ಈ ಚಿತ್ರ ಇನ್ನುಳಿದ ಯಾವುದೇ ಜಿಲ್ಲೆಗಳ ಆವೃತ್ತಿಯಲ್ಲಿಯೂ ಇಲ್ಲ ಏಕೆ? ರಾಹುಲ್ ಗಾಂಧಿಯವರು ತೂಕಡಿಸುತ್ತಿರುವ ದೃಶ್ಯವನ್ನು ಬೆಂಗಳೂರಿನವರು ಮಾತ್ರ ನೋಡಬೇಕೆನ್ನುವುದು ನಿಮ್ಮ ಉದ್ದೇಶವೇ?!
-ಆರ್.ಸಿ. ಪರಶುರಾಮ್, ಶಿಕಾರಿಪುರ, 9902203492
"ಲತಾ ಎಂಬ ಮಿಂಚಿನ ಬಳ್ಳಿ" ಲೇಖನ (ಸಂಡೆ ಸಂಡಿಗೆ ಕ.ಪ್ರ. ಜು.13) ಅವರ ಪ್ರತಿಭೆಯನ್ನು ಅನಾವರಣಗೊಳಿಸುವಂತಿತ್ತು. 10 ಚಿತ್ರಗಳಲ್ಲಿ ನಟಿಸಿ, 5 ಚಿತ್ರ ನಿರ್ಮಿಸಿ, ದೇವ್ ಆನಂದ್, ರಾಜ್ಕಪೂರ್ರ ಎಲ್ಲಾ ಚಿತ್ರಗಳಲ್ಲಿ ಹಾಡಿ, ಓ.ಪಿ. ನಯ್ಯರ್ರ ಒಂದೂ ಚಿತ್ರದಲ್ಲಿ ಹಾಡದೇ, 5 ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ, 3 ಅಷ್ಟಮ ಶ್ರೇಣಿಗಳಲ್ಲಿ ಹಾಡಬಲ್ಲ ಅವಿದ್ಯಾವಂತನಂತೆ. 'ಹೇಮಾ' ನಿಜ ನಾಮಧೇಯ ಹಾಗೂ 'ಆನಂದಭವನ' ಕಾವ್ಯನಾಮದ, ವಿಶ್ವದಲ್ಲಿಯೇ 'ಪರಿಪೂರ್ಣ ಧ್ವನಿ' ಎಂದು ಹಾಡಿ ಹೊಗಳಿಸಿಕೊಂಡ ಲತಾ ಮಂಗೇಶ್ಕರ್ ಕಂಠ ಶುದ್ಧಿಗಾಗಿ ಕೊಲ್ಹಾಪುರದ ಮೆಣಸಿನಕಾಯಿ ತಿನ್ನುವರಂತೆ! ಇಷ್ಟೆಲ್ಲಾ ಏಕೆ ಬರೆದೆನೆಂದರೆ ಈ ಎಲ್ಲಾ ವಿಷಯಗಳೂ ಲೇಖನದಲ್ಲಿ ಎರಡೆರಡು ಬಾರಿ ಮುದ್ರಿತವಾಗಿವೆ. ಏಕೆ?
-ಕೆ. ಶ್ರೀನಿವಾಸರಾವ್, ಹರಪನಹಳ್ಳಿ, ದಾವಣಗೆರೆ ಜಿಲ್ಲೆ
ನಾನೊಬ್ಬಳು ಸಾಮಾನ್ಯ ಸ್ತ್ರೀ. 13.7.14ರ ಪತ್ರಿಕೆಯಲ್ಲಿ ನಿಮ್ಮ ಲೇಖನ ಓದಿ ಬಹಳ ಬೇಸರವಾಯ್ತು. ನನ್ನ ಪ್ರಕಾರ ಇಂಟರ್ನೆಟ್ ಏನೂ ಮೊಬೈಲ್ ಕ್ರಾಂತಿ ಕೂಡಾ ಆದ ಹಾಗಿಲ್ಲ. ನಮ್ಮ ಭಾರತದಲ್ಲಿ ಹಿಂದುಳಿದ ಹಳ್ಳಿಗಳು ಸಾವಿರಾರು ಇವೆ. ಬಹುಶಃ ನೀವು ಜಿಲ್ಲೆ, ತಾಲೂಕು, ಪ್ರಮುಖ ಊರುಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿರಬಹುದಲ್ಲವೇ? ನಮ್ಮಂತಹ ಹಳ್ಳಿಗರ ಕಥೆ ನಿಮಗೆ ಹೇಗೆ ತಿಳಿಯಬೇಕು ಸ್ವಾಮಿ? ಮೊಬೈಲ್ ಬಿಡಿ ನಮ್ಮ ದೂರವಾಣಿಗಳೂ ಸಹ ಸರಿಯಾಗಿರುವುದು ಬಹಳ ಅಪರೂಪ. ಈ ಮಳೆಗಾಲದಲ್ಲೋ ಕರೆಂಟ್ ಇಲ್ಲ. ಕರೆಂಟ್ ಇಲ್ಲವೆಂದರೆ ವೀಲ್ ಫೋನ್ಗಳು ಇಲ್ಲ. ಕೆಟ್ಟ ದೂರವಾಣಿಯನ್ನು ಸರಿಯಾಗಿ ರಿಪೇರಿ ಮಾಡುವುದಿಲ್ಲ. ಮನೆಗಳಿಗೆ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ದೂರ ಹೋಗಿ ಮೊಬೈಲ್ನಲ್ಲಿ ಮಾತಾಡಿ ಬರಬೇಕು. ಮಕ್ಕಳೂ ನಮ್ಮ ಬಳಿಯಿಲ್ಲ. ಎಲ್ಲಾ ದೂರದೂರು. ಬಸ್ಸಿಗೂ ಸಹ ನಾಲ್ಕಾರು ಕಿ.ಮಿ. ನಡೆಯಬೇಕು. ಹಾಳಾದ ರಸ್ತೆಗಳು, ನಿಮಗೆ ಗೊತ್ತೇ? ಓಟಿಗೆ ಓಡಿ ಬರುವ ಮಂದಿ ಮತ್ತೆ ತಿರುಗಿ ನೋಡೋದಿಲ್ಲ. ಈಗ ಅಡಕೆಗೆ ದರ ಬಂದಿದೆ. ನಮಗೆ ಅವಶ್ಯಕತೆಯಿರುವುದು ಜನವರಿ, ಫೆಬ್ರವರಿ, ಮಾರ್ಚ್ನಲ್ಲಿ. ಆಗ ಸಾಮಾನ್ಯ ರೈತರಾದ ನಾವು ಎಲ್ಲಾ ಮಾರಿಕೊಂಡು.... ಈಗ, ಈ ವಿಚಾರಕ್ಕೆ ತಮ್ಮ ಅಭಿಪ್ರಾಯವೇನು: ಸಿಡಿಲಿನ ಹೊಡೆತಕ್ಕೆ 40-50 ಮರಗಳು ಹೋಗಿವೆ. ಯಾವ ಸರ್ಕಾರ ಪರಿಹಾರ ಕೊಡುತ್ತೆ? ರಸಗೊಬ್ಬರದ ದರ ಇಳಿಸಿ ರೈತರ ಮಾಲಿಗೆ ಸಮಯಕ್ಕೆ ಸರಿಯಾಗಿ ದರ ಕೊಟ್ಟರೆ ನಿಜವಾಗಲೂ ಇಂಟರ್ನೆಟ್ ಕ್ರಾಂತಿಯಾದಂತೆ! ಯಶಸ್ವಿನಿ ಯೋಜನೆಯಲ್ಲಿ ಸರ್ಕಾರಕ್ಕೆ ಎಷ್ಟೊಂದು ಹಣ ಸಂಗ್ರಹವಾಗುತ್ತೆ ಗೊತ್ತಾ ನಿಮಗೆ? ಹಣ ಕಟ್ಟಿದ ರೈತರಿಗೆಲ್ಲಾ ಆಪರೇಷನ್ ಆಗಲ್ಲ. ಅದಕ್ಕಾಗಿ ಪ್ರತಿ ರೈತರನ್ನು ವರ್ಷಕ್ಕೊಂದು ಸಾರಿ ಜನರಲ್ ಚಕಪ್ಗೆ ಅವಕಾಶ ಮಾಡಿಕೊಟ್ಟರೆ ಒಳ್ಳೆಯದಲ್ಲವೆ? ಸಹಕಾರಿ ಸಂಘದಿಂದ ರೈತರಿಗೆ ಸರಿಯಾಗಿ ಸಾಲ ದೊರಕುತ್ತಿದೆಯಾದರೂ ರೈತರಿಗೆ ಅವರವರ ಯೋಗ್ಯತೆಗೆ ಅನುಸಾರವಾಗಿ ಪಡಿತರ ವಿತರಣೆ ಮಾಡಿ (ಆರ್.ಟಿ.ಸಿ. ಪ್ರಕಾರ) ಪ್ರತಿಯೊಬ್ಬ ರೈತರಿಗೂ ತಿಂಗಳಿಗೆ ನಾಲ್ಕು ಲೀಟರ್ ಸೀಮೆಎಣ್ಣೆ ಬೇಕು (ಕರೆಂಟ್ ಇಲ್ಲ). ರೈತರು ಭಾರತದ ಬೆನ್ನೆಲುಬು ಅನ್ನುವ ಮಾತು ಮರೆತು ಹೋಗಿ ಭಾರತದ ರೈತರಿಗೆ ಬೆನ್ನೆಲುಬೇ ಇಲ್ಲದಂತಾಗಿದೆ. ಸರ್ಕಾರದ ಸಹಾಯ ಸರಿಯಾಗಿ ವಿನಿಯೋಗವಾಗಬೇಕಿದೆ. ಪ್ರತಿ ವರ್ಷ ರೈತರಿಗೆ ಇಂತಿಷ್ಟು ಹಣ ಬಿಡುಗಡೆ ಮಾಡಿ ಮಾಧ್ಯಮದವರು, ಪತ್ರಿಕೆಯವರು ಗ್ರಾಮ ಗ್ರಾಮಕ್ಕೆ ಆಗಾಗ ಬಂದು ವಿಚಾರಿಸಿ. ನಿಮ್ಮ ಪತ್ರಿಕೆಯಲ್ಲಿ ಧಾರಣೆಯನ್ನೇ (ಪೇಟೆ ಸಾಮಾನು) ಪ್ರಕಟಿಸುವುದಿಲ್ಲ. ಹಳ್ಳಿ ಜನಕ್ಕೆ ಅದು ಮುಖ್ಯ. (ಸಾಮಾನಿನ ಬೆಲೆ ಸರ್ಕಾರಿ ಕೆಲಸಗಳು ಎಲ್ಲೆಲ್ಲಿ ಸಿಗುವುದು, ಇತ್ಯಾದಿ) ವರ್ತಕರು ಹೇಳಿದ ಬೆಲೆ ಕೊಟ್ಟು ಸಾಮಾನು ತರುವುದೇ ಆಗಿದೆ. ನಿಮ್ಮೆಲ್ಲರ ಸಹಕಾರದಿಂದ ಗ್ರಾಮೋದ್ಧಾರವಾದರೆ ಅದೇ ನಮಗೆ ದೊಡ್ಡ ಇಂಟರ್ನೆಟ್ ಕ್ರಾಂತಿಯಾದಂತೆ ಅಲ್ಲವೇ?
-ಶ್ರೀಮತಿ ಅನಸೂಯ, ಹಂದಿಗೋಡು, ತೀರ್ಥಹಳ್ಳಿ ತಾ, ಶಿವಮೊಗ್ಗ .