ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ನಿಗ್ರಹಕ್ಕೆ ಬೇಕು ಪೊಕ್ಸೊ ಕಾಯ್ದೆಯ ಬಲವರ್ಧನೆ
ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ನಿಗ್ರಹಕ್ಕೆ ಬೇಕು ಪೊಕ್ಸೊ ಕಾಯ್ದೆಯ ಬಲವರ್ಧನೆ
ಮಕ್ಕಳ ಮೇಲೆ ನಡೆಯುವ ಅಪರಾಧ-ದೌರ್ಜನ್ಯಗಳು ಕ್ರೌರ್ಯದ ಪರಮಾವಧಿಯಾಗಿದೆ. ಏಕೆಂದರೆ ಮುಗ್ಧ ಮಕ್ಕಳು ದೊಡ್ಡವರಿಂದ ಸಹಜವಾಗಿ ನಿರೀಕ್ಷಿಸುವ ಸುರಕ್ಷತೆಯನ್ನು ಮತ್ತು ನಂಬಿಕೆಯನ್ನೇ ಇಂತಹ ಕೃತ್ಯಗಳು ಮೂಲಭೂತವಾಗಿ ಉಲ್ಲಂಘಿಸುತ್ತವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಹೀನಾಯ ಪ್ರಕರಣಗಳಿಂದ ನಾಗರಿಕ ಸಮಾಜ ರೊಚ್ಚಿಗೆದ್ದಿದೆ. ಪಾಲಕರು, ಪೋಷಕರು, ಯುವಕ-ಯುವತಿಯರಾದಿಯಾಗಿ ಜನರು ಬೀದಿಗಿಳಿದು ಸರ್ಕಾರ, ವ್ಯವಸ್ಥೆ ಮತ್ತು ಶಾಲೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ನಡೆದ ಮೊದಲ ಪ್ರಕರಣದಲ್ಲಿ, ಅತ್ಯಾಚಾರಕ್ಕೀಡಾದ ಎರಡುವರೆ ವರ್ಷದ ಮಗುವಿನ ಹೆತ್ತವರು ಸಹಾಯ ಕೇಳಿ ನನ್ನ ಬಳಿಗೆ ಬಂದಿದ್ದರು. ಆ ಮುಗ್ಧ ಮಗುವಿನ ಮೇಲೆ, ಆಕೆ ಕಲಿಯುತ್ತಿದ್ದ ಉನ್ನತ ಶಾಲೆಯಲ್ಲಿ, ಅದೇ ಶಾಲೆಯ ವಾಹನ ಚಾಲಕ ಲೈಂಗಿಕ ದೌರ್ಜನ್ಯವೆಸಗಿದ್ದ. ಆ ಮುಗ್ಧ ಮಗುವಿನ ಪಾಲಕರು, ಇಂತಹ ಬಹಳಷ್ಟು ಪ್ರಕರಣಗಳಲ್ಲಿನ ಇತರರಂತೆ ಮೌನವಹಿಸದೆ, ಅಪರಾಧಿಯನ್ನು ನ್ಯಾಯಯುತವಾಗಿ ಶಿಕ್ಷಿಸಲೇಬೇಕೆಂದು ಪಣತೊಟ್ಟರು. ಮತ್ತೊಂದು ಮಗುವಿನ ಮೇಲೆ ಹೀಗಾಗಬಾರದು, ಅಪರಾಧಿಗೆ ದಂಡನೆಯಾಗಬೇಕು ಎಂದೆಣಿಸಿ ನ್ಯಾಯಕ್ಕಾಗಿ ಮೊರೆಹೊಕ್ಕ ಅವರ ದೃಢ ನಿರ್ಧಾರ ಮತ್ತು ಕಾಳಜಿಗಳಿಂದ ನಾನು ಬಹಳ ಪ್ರಭಾವಿತನಾದೆ ಮತ್ತು ಅಂದೇ ಅವರ ಮತ್ತು ಅಂತಹ ಪಾಲಕರ ಹೋರಾಟದಲ್ಲಿ ನಾನು ಜೊತೆಗೂಡಬೇಕೆಂದು ತೀರ್ಮಾನಿಸಿದೆ.
ಪ್ರಕರಣದ ಸೂಕ್ಷ್ಮತೆಯನ್ನು ಗ್ರಹಿಸಿದ ಅಂದಿನ ಬೆಂಗಳೂರು ಪೊಲೀಸ್ ಕಮಿಷನರ್ ಔರಾದಕರ್, ಡಿಸಿಪಿ ಮೊಹಾಂತಿ ಮತ್ತು ಎಸಿಪಿ ಸೌಮ್ಯ ಅಲ್ಪಾವಧಿಯಲ್ಲಿ ಪ್ರಶಂಸನೀಯವಾಗಿ ಕಾರ್ಯನಿರ್ವಹಿಸಿ ಬಲಿಷ್ಠ ಕೇಸನ್ನು ದಾಖಲಿಸಿದರು. ನಮ್ಮ ರಾಜ್ಯದಲ್ಲಿ ಪೊಕ್ಸೊ (pocso) (ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ) ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣವಿದು. ಆದರೆ, ಆ ಪೋಷಕರು ಕಾನೂನು ಪ್ರಕ್ರಿಯೆಯಲ್ಲಿ ಅಭಿಯೋಜಕರಿಗೆ ಸಹಾಯಕವಾಗಿ ತಮ್ಮ ವಕೀಲರನ್ನು ನೇಮಿಸಿಕೊಂಡರೂ, ವಿಶೇಷ ನ್ಯಾಯಾಲಯಗಳ ಬಗ್ಗೆ ಪೊಕ್ಸೊ ಕಾಯ್ದೆ ಉಲ್ಲೇಖಿಸಿದ್ದರೂ, ಆ ಪ್ರಕರಣದ ವಿಚಾರಣೆಗಳು ಮುಂದೂಡಲ್ಪಡುತ್ತಾ, ನಿಧಾನಗತಿಯಲ್ಲಿ ಈಗಲೂ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಈ ಎಲ್ಲದರ ಮಧ್ಯೆ, ಅತ್ಯಂತ ನೋವಿನ ಮತ್ತು ನಾಚಿಕೆಗೇಡಿನ ಸಂಗತಿಯೆಂದರೆ, ಮುಖ್ಯಮಂತ್ರಿಗಳು, ಗೃಹಮಂತ್ರಿಗಳೂ ಸೇರಿದಂತೆ ಸರ್ಕಾರದಲ್ಲಿರುವ ನಮ್ಮ ರಾಜಕೀಯ ನಾಯಕರುಗಳು ಸೂಕ್ಷ್ಮತೆ ಮತ್ತು ಸಂವೇದನೆಗಳನ್ನೆ ಮರೆತಿದ್ದಾರೆ. 'ಇದಕ್ಕೆ ಪೋಷಕರೆ ಹೊಣೆ, ಸರ್ಕಾರವಲ್ಲ' - ಮುಂತಾದ ಅವರ ಅಪ್ರಬುದ್ಧ ಹೇಳಿಕೆಗಳೆ ಇದಕ್ಕೆ ಸಾಕ್ಷಿ. ಈ ರಾಜಕೀಯ ನಾಯಕರುಗಳ ಸಂವೇದನಾ ದಾರಿದ್ರ್ಯ, ಇತ್ತೀಚೆಗೆ 6 ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಮ್ಮೆ ಜಾಹೀರಾಗಿದೆ. ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ಸಂಭವನೀಯತೆ, ಶಾಲೆಗಳಲ್ಲಿ ಮಕ್ಕಳ ಅಸುರಕ್ಷತೆ, ನಿಯಮಗಳ ನಿರ್ಲಕ್ಷ್ಯಗಳ ಪುರಾವೆಗಳು ಬಹಳ ಸಮಯದಿಂದಲೂ ಕಣ್ಮುಂದೆಯೇ ಇದ್ದರೂ, ಇಂತಹ ಹೀನಾಯ ದುರಂತಗಳು ನಡೆಯುವ ತನಕ ಸರ್ಕಾರ ಎಚ್ಚೆತ್ತುಕೊಳ್ಳುವುದಿಲ್ಲ ಎಂದರೆ ಅದಕ್ಕಿಂತ ನಾಚಿಕೆಗೇಡು ಮತ್ತೊಂದಿಲ್ಲ.
ಪ್ರಮುಖವಾಗಿ ಎರಡು ಬೇಡಿಕೆಗಳ ಬಗ್ಗೆ ನಾನು ಈ ಹಿಂದೆ, ಮೊದಲಿನ ಪ್ರಕರಣದ ಸಮಯದಲ್ಲೆ, ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದೆ- ಒಂದು, ಶಾಲಾ ಆಡಳಿತ ಮಂಡಳಿಯವರನ್ನು ಬಂಧಿಸಿ ಕೇಸು ದಾಖಲಿಸಬೇಕು ಮತ್ತು ಎರಡನೆಯದಾಗಿ, ಇಂತಹ ಸೂಕ್ಷ್ಮ ಪ್ರಕರಣಗಳಿಗಾಗಿ ಸರ್ಕಾರ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂಬುದಾಗಿತ್ತು. ಒಂದು ವೇಳೆ ಸರ್ಕಾರ ಮೊದಲನೆಯದನ್ನು ಮಾಡಿದ್ದಿದ್ದಲ್ಲಿ, ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೂ ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂಬ ಸಂದೇಶ ಹೋಗುತ್ತಿತ್ತು ಹಾಗು ಸಹಜವಾಗಿ ಅವರು ಜಾಗ್ರತೆ ವಹಿಸುತ್ತಿದ್ದರು. ಪ್ರಾಯಶಃ ಈ ನಂತರದ ಕುಕೃತ್ಯ ನಡೆಯುತ್ತಿರಲಿಲ್ಲವೇನೋ? ವಿಶೇಷ ನ್ಯಾಯಾಲಯವನ್ನು ಸರ್ಕಾರ ಇನ್ನೂ ಸ್ಥಾಪಿಸದಿರುವುದು, ನ್ಯಾಯದಾನದಲ್ಲಿ ವಿಳಂಬವಾಗಿ ಅಪರಾಧಿಗೆ ಶಿಕ್ಷೆಯಾಗಲು ತಡವಾಗುತ್ತದೆ ಮತ್ತು ಇದರಿಂದ ಸರ್ಕಾರ ಯಾವ ಕಠಿಣ ಸಂದೇಶವನ್ನೂ ಕೊಟ್ಟಂತಾಗುವುದಿಲ್ಲ.
ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಶಾಲಾವಧಿಯಲ್ಲಿ (ಶಾಲಾ ವಾಹನವೂ ಸೇರಿದಂತೆ) ಶಾಲಾ ಆವರಣದೊಳಗೆ ಶಾಲಾ ಆಡಳಿತ ಮಂಡಳಿಯೆ ಜವಾಬ್ದಾರಿ ವಹಿಸಬೇಕಾದ ಅಗತ್ಯತವನ್ನು ಈಗಿನ ಘಟನೆ ಒತ್ತಿ ಹೇಳುತ್ತಿವೆ. ಹಾಗೆಯೇ, ಶಾಲೆಗಳೆ ಮೇಲಿನ ನಿಯಂತ್ರಣ ಮತ್ತು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳು ಈಗ ಎದುರಾಗಿವೆ. ಇಂತಹ ಪ್ರಕರಣಗಳು ನಡೆದಾಗ ಸಹಜವಾಗಿ ಆಕ್ರೋಶಮಯ ಪ್ರತಿಭಟನೆಗಳು ನಡೆಯುತ್ತವೆ ಮತ್ತು ತಣ್ಣಗಾಗುತ್ತವೆ. ಮತ್ತೆ ಇಂತಹ ಮತ್ತೊದು ಪ್ರಕರಣ ಘಟಿಸಿದಾಗ ನಾವು ಏನು ಮಾಡಬಹುದಿತ್ತು ಎಂಬ ವಿಮರ್ಶೆಗಳು ಆರಂಭವಾಗುತ್ತವೆ. ಈ ಕಾವು ಸದ್ಯದಲ್ಲೆ ಕರಗಲಿದೆ, ಇನ್ನೊಂದು ಶಾಲೆಯಲ್ಲಿ, ಇಂತಹ ಮತ್ತೊಬ್ಬ ಅಪರಾಧಿ, ಇನ್ನೊಂದು ಮುಗ್ಧ ಮಗುವಿನ ಮೇಲೆ ದೌರ್ಜನ್ಯವೆಸಗುವುದಿಲ್ಲ ಎಂದು ಆಶಿಸುತ್ತಾ ನಾವು ಸುಮ್ಮನೆ ಕೂರಬಾರದು. ಸುಮ್ಮನಿದ್ದು ಮತ್ತೊಬ್ಬ ರಾಕ್ಷಸನ ಕೈಗೆ ಮತ್ತೊಂದು ಪುಟ್ಟ ಮಗುವನ್ನು ನಾವೇ ನೀಡಿದಂತಾಗಬಾರದು. ಇದು ನಿರ್ಣಾಯಕ ಘಳಿಗೆ, ನಾವು ಎಚ್ಚೆತ್ತುಕೊಳ್ಳಲೇಬೇಕು!
ಲೈಂಗಿಕ ಅಪರಾಧಗಳ ವಿರುದ್ದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಸಾಕಷ್ಟು ಉತ್ತಮವಾಗಿಯೇ ಸಿದ್ಧಪಡಿಸಿದ ಕಾಯ್ದೆಯಾಗಿದೆ. ಅಗತ್ಯ ಕಾಯ್ದೆಯ ಚೌಕಟ್ಟನ್ನು ಸಿದ್ಧಪಡಿಸಿದ್ದರೂ, ಇರುವ ಕೊರತೆಯೆಂದರೆ, ನಮ್ಮ ದೇಶದ ಹಲವು ಕಾನೂನು ಕಾಯ್ದೆಗಳಿಗಾಗುವಂತೆಯೇ, ಇದೂ ಕೂಡ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕಾಯ್ದೆಯ ಸಮರ್ಪಕ ಜಾರಿಗೆ ಸಹಾಯಕವಾಗಿ ಇಲ್ಲಿನ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ವಿಶೇಷ ಘಟಕಗಳ ಅವಶ್ಯಕತೆಯಿದೆ. ಮಕ್ಕಳ ಮೇಲೆ ನಡೆಯುವ ಅತ್ಯಾಚಾರದಂತಹ ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ಪರಿಣಾಮಕಾರಿಯಾಗಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಅದರಿಂದ ಆ ನೊಂದ ಮಕ್ಕಳ ಮತ್ತು ಪಾಲಕರ ಸಂಕಷ್ಟಗಳನ್ನು ಹೆಚ್ಚಿಸದಂತಾಗುವ ಜೊತೆಗೆ ನ್ಯಾಯಾಂಗದ ಮೇಲಿನ ನಂಬಿಕೆಯೇ ಅಳಸಿಹೋಗುತ್ತದೆ. ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡಾ 84.5 ತೀರ್ಮಾನವಾಗದೆ ಉಳಿದಿವೆ. ಪೊಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳು, ಅವುಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಬಗ್ಗೆ ನಾನು ಸಂಸತ್ತಿನಲ್ಲಿ ಸರ್ಕಾರವನ್ನು ಪ್ರಶ್ನಿಸಿದಾಗ, ಸಚಿವರು ತಮ್ಮ ಉತ್ತರದಲ್ಲಿ ಗಾಬರಿಹುಟ್ಟಿಸುವ ಅಂಕಿಅಂಶಗಳ ವಿವರಗಳನ್ನು ನೀಡಿದರು. 2011ರಲ್ಲಿ 7112 ಪ್ರಕರಣಗಳು ದಾಖಲಾಗಿದ್ದರೆ, 2103ರಲ್ಲಿ 12363 ಪ್ರಕರಣಗಳಿಗೆ ಏರಿಕೆಯಾಗಿದೆ. ಅದರೆ 2011ರಲ್ಲಿ 1196 ಅಪರಾಧಿಗಳಿಗೆ ಶಿಕ್ಷೆಯಾಗಿದ್ದರೆ 2013ರಲ್ಲಿ 1611 ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗಿದೆ!
ಪರಿಣಾಮಕಾರಿಯಾಗಿ ಕಾನೂನು ಅನುಷ್ಠಾನಗೊಳ್ಳುವುದಿಲ್ಲ ಎಂಬುದಕ್ಕೆ ಇನ್ನೊಂದು ನಿದರ್ಶನವೆಂದರೆ, ಪೊಕ್ಸೊ ಕಾಯ್ದೆಯ ಸೆಕ್ಷನ್ 28, ಇಂತಹ ಸೂಕ್ಷ್ಮ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಹೇಳುತ್ತದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಆ ಮೂಲಕ ಮಕ್ಕಳ-ಸ್ನೇಹಿ ವ್ಯವಸ್ಥೆಯ ಮೂಲಭೂತ ಹಕ್ಕನ್ನೆ ಮಕ್ಕಳಿಗೆ ನಿರಾಕರಿಸಲಾಗುತ್ತಿದೆ. ವಾಸ್ತವವಾಗಿ ಇಡೀ ದೇಶದಲ್ಲಿ ಇಂತಹ ಮಕ್ಕಳ ಸ್ನೇಹಿ ನ್ಯಾಯಾಲಯ ಇರುವುದು ಒಂದೇ ಒಂದು ಕಡೆ, ನವದೆಹಲಿಯ ಕಾಕರ್ದುಮ ನ್ಯಾಯಾಲಯಗಳ ಆವರಣದಲ್ಲಿ ಮಾತ್ರ!
ಸಂತ್ರಸ್ತರಿಗೆ ಸೂಕ್ತ ನ್ಯಾಯವೊದಗಿಸಲು ಮತ್ತು ಪೊಕ್ಸೊ ಕಾಯ್ದೆಯನ್ನು ಹೆಚ್ಚು ಬಲಿಷ್ಠಗೊಳಿಸಿ ಪರಿಣಾಮಕಾರಿಯಾಗಿಸಲು ಈ ಕೆಳಕಂಡ ಬದಲಾವಣೆಗಳ ಅವಶ್ಯಕತೆಯಿದೆ: - ಬೆಂಗಳೂರಿನ ಪ್ರಕರಣದಲ್ಲಿ ಎದ್ದು ಕಂಡಂತೆ, ಶಾಲಾ ಆಡಳಿತ ಮಂಡಳಿಗಳನ್ನು ಕೂಡ ಕಾಯ್ದೆಯ ವ್ಯಾಪ್ತಿಯೊಳಗೆ ತರಬೇಕು. ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಉತ್ತರದಾಯಿಗಳನ್ನಾಗಿಸುವ ಜೊತೆಗೆ, ಶಾಲಾ ಆವರಣದಲ್ಲಿ- ಶಾಲಾ ಬಸ್ಸಿನಲ್ಲಿ ಅಥವಾ ಶಾಲಾ ಸಿಬ್ಬಂದಿಗಳಿಂದ ನಡೆಯಬಹುದಾದ ಅಪರಾಧಗಳಿಗೆ ಹಾಗು ಮಕ್ಕಳ ಸುರಕ್ಷತೆಗೆ ಹೊಣೆಗಾರರನ್ನಾಗಿಸಬೇಕು. ಇದು ಅವಶ್ಯವಾಗಿ ಪೊಕ್ಸೊ ಕಾಯ್ದೆಯಲ್ಲಿ ತಿದ್ದುಪಡಿಯಾಗಿ ಸೇರ್ಪಡೆಯಾಗಬೇಕಾದ ಒಂದು ಪ್ರಮುಖ ವಿಷಯ.
ಕಾಯ್ದೆಯೇನೊ ವಿಶೇಷ ಸರ್ಕಾರಿ ಅಭಿಯೋಜಕರನ್ನು (ಪಬ್ಲಿಕ್ಪ್ರಾಸಿಕ್ಯೂಟರ್) ನಿಯುಕ್ತಗೊಳಿಸುವುದನ್ನು ಕಡ್ಡಾಯಮಾಡಿದ್ದರೂ, ಅದು ಪಾಲನೆಯಾಗುತ್ತಿಲ್ಲ. ಇನ್ನೂ ದುರ್ದೈವವೆಂದರೆ, ಸಿಬ್ಬಂದಿ ಕೊರತೆ ಮತ್ತು ಅಧಿಕ ಹೊರೆಯ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ, ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವ ಪರಿಣಿತಿಯಾಗಲಿ ಅನುಭವವಾಗಲಿ ಇಲ್ಲದ ನ್ಯಾಯಾಧೀಶರುಗಳು, ಮೊದಲು ಯಾವುದೋ ವಾಣಿಜ್ಯ ಅಪರಾಧವನ್ನು ಮತ್ತು ನಂತರದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವ ಪರಿಸ್ಥಿತಿಯಿದೆ. ಈ ಸಡಿಲ ವಿಧಾನಗಳನ್ನು ಮೊದಲು ಸರಿಪಡಿಸಬೇಕು. ವಿಶೇಷ ಪರಿಣಿತ ಸರ್ಕಾರಿ ಅಭಿಯೋಜಕರುಗಳನ್ನು ರೂಪಿಸಿ, ವಿಶೇಷ ತ್ವರಿತ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಿ, ಅಪರಾಧಿಗಳನ್ನು ಶಿಕ್ಷಿಸುವ ವ್ಯವಸ್ಥೆಯಾಗಬೇಕು.
ಪೊಕ್ಸೊ ಕಾಯ್ದೆಯ 32ನೆಯ ಸೆಕ್ಷನ್ನಿನಲ್ಲಿ ಘಟನೆ ಗಮನಕ್ಕೆ ಬಂದು, ಆದಷ್ಟು ಒಂದು ವರ್ಷದೊಳಗೆ ವಿಶೇಷ ನ್ಯಾಯಾಲಯದಲ್ಲಿ ಅದರ ವಿಚಾರಣೆ ಕೊನೆಗೊಳ್ಳಬೇಕೆಂದು ಹೇಳಲಾಗಿದೆಯಾದರೂ ಅದನ್ನು ಕಡ್ಡಾಯಗೊಳಿಸಿಲ್ಲ. ಆದರೆ ನಮಗೀಗ ಬೇಕಿರುವುದು, ವಿಶೇಷ ನ್ಯಾಯಾಲಯಗಳು ವರ್ಷದೊಳಗೆ ವಿಚಾರಣೆ ಮುಗಿಸಲು, ನಿರ್ದಿಷ್ಟ, ಕಡ್ಡಾಯ ಮತ್ತು ಕಾಲಬದ್ಧ ನ್ಯಾಯಿಕ ವ್ಯವಸ್ಥೆಯೇ ಹೊರತು, ಆದಷ್ಟು ಬೇಗ ಎಂಬ ಎಳೆಯಬಹುದಾದ ನಿಯಮವಲ್ಲ.
ಇಂತಹ ಹೀನಾಯ ಪ್ರಕರಣಗಳ ವಿರುದ್ಧ ಶೂನ್ಯ ಸಹನೆಯ ಸಂದೇಶವನ್ನು ಸಾರಲು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ ಯಾವ ಆರೋಪಿಗೂ ಕೂಡ ನಿರೀಕ್ಷಣಾ ಜಾಮೀನನ್ನು ಪಡೆಯಲು ಸಾಧ್ಯವಾಗದಂತೆ ಖಚಿತಪಡಿಸಿಕೊಳ್ಳಬೇಕು. ನಿರೀಕ್ಷಣಾ ಜಾಮೀನನ್ನು ಪಡೆದರೆ, ಆರೋಪಿಗಳು ತಪ್ಪಿಸಿಕೊಳ್ಳುವ ಅಥವಾ ಕನಿಷ್ಠ ನ್ಯಾಯಾಂಗ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಸಾಧ್ಯತೆಗಳಿರುತ್ತವೆ. ಪೊಕ್ಸೊ ಕಾಯ್ದೆಯಲ್ಲಿ ಸುಧಾರಣೆ ಮಾಡಬಹುದಾದ ಇನ್ನೊಂದು ಮಹತ್ವಪೂರ್ಣ ಅಂಶವೆಂದರೆ, ಅಪರಾಧಕ್ಕೆ ಬಲಿಯಾದ ಮಕ್ಕಳ ಸುರಕ್ಷತೆಯ ಕ್ರಮಗಳಲ್ಲಿ ಅಪರಾಧಕ್ಕೀಡಾದ ಮಗುವಿನ ಹೇಳಿಕೆಯನ್ನು ದಾಖಲಿಸಿಕೊಳ್ಳಲು 30 ದಿನಗಳ ಕಾಲಾವಕಾಶವನ್ನು ಕಾಯ್ದೆ ನೀಡುತ್ತಿದ್ದರೂ, ಆ ಅವಧಿ ಬಹಳ ಪ್ರಮುಖವಾದದ್ದರಿಂದ ಮಗುವಿನ ಕುಟುಂಬದ ಮೇಲೆ ದೂರನ್ನು ಹಿಂತೆಗೆದುಕೊಳ್ಳಲು ಅಥವಾ ಮೃದುಗೊಳಿಸಲು ಪ್ರಭಾವ ಬೀರುವ, ಹೆದರಿಸುವ ಸಾಧ್ಯತೆಗಳಿರುತ್ತವೆ. ಘಟನೆ ನಡೆದ ತಕ್ಷಣವೇ/ ಗಮನಕ್ಕೆ ಬಂದ ಕೂಡಲೇ, 24 ರಿಂದ 48 ಗಂಟೆಗಳೊಳಗೆ, ಹೇಳಿಕೆಯನ್ನು ಪಡೆಯಬೇಕೆಂಬ ತಿದ್ದುಪಡಿಯಿಂದ ಅಪರಾಧಕ್ಕೀಡಾದ ಮಗುವಿನ ಮೇಲೆ ಪ್ರಭಾವಬೀರುವ ಸಾಧ್ಯತೆಗಳು ಕಡಿಮೆ. ಅಪರಾಧಕ್ಕೆ ತುತ್ತಾದ ಮಗು, ಸಾಕ್ಷಿಗಳು, ಘಟನೆಗೆ ಸಾಕ್ಷಿಯಾಗಿರಬಹುದಾದ ಇತರ ಮಕ್ಕಳ ರಕ್ಷಣೆ ಮುಂತಾದ ಅಂಶಗಳನ್ನು ಪರಿಗಣಿಸಿ ಒಂದು ಸಮರ್ಪಕವಾದ ಕಾಯ್ದೆಯನ್ನು ರೂಪಿಸಿ, ಪರಿಣಾಮಕಾರಿ ವಿಚಾರಣೆ ನಡೆಸಿ ತೀರ್ಪು ನೀಡುವುದಕ್ಕೆ ಸಾಧ್ಯವಿದೆ.
ಶಿಶುಕಾಮಿಗಳ (paedophiles) ಮತ್ತು ನೀಚ ದುರುಳರ ಅಪಾಯಗಳಿಂದ ನಮ್ಮ ಮಕ್ಕಳು ಸುರಕ್ಷಿತರಾಗಿರಬೇಕು. ಮತ್ತು ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಶೂನ್ಯ ಸಹನೆಯ ಸಂದೇಶದ ಜೊತೆಗೆ ಅಪರಾಧಿಗಳಿಗೆ ಶೀಘ್ರವಾಗಿ ತೀಕ್ಷ್ಣ ಶಿಕ್ಷೆಗೆ ಒಳಪಡಿಸುವ ಮೂಲಕ ಸಂಭಾವ್ಯ ಅಪರಾಧಿಗಳಲ್ಲಿ ಭಯಹುಟ್ಟಿಸಿ, ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಾಗುವಂತೆ ಪೊಕ್ಸೊ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಮತ್ತಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ.
ರಾಜೀವ್ ಚಂದ್ರಶೇಖರ್
ಸಂಸತ್ ಸದಸ್ಯರು, ರಾಜ್ಯಸಭೆ
rajiv.c@sansad.nic.in
www.rajiv.in