ಅಮರ ಚಿತ್ರಗಳು ಆಗಾಗ ಪ್ರಕಟವಾಗಲಿ
ಜುಲೈ 27ರ ಸಂಚಿಕೆಯಲ್ಲಿ ಮುಖಪುಟದ ಸುಂದರ 'ಅಮರನಾಥ ಗುಹೆಯ ದೃಶ್ಯ'- ಬೆಟ್ಟದ ತಪ್ಪಲುಗಳಲ್ಲಿ, ಬಿಡಾರ, ಸೂರ್ಯನ ಕಿರಣ ಬೀಳುತ್ತಿರುವ ದೃಶ್ಯ ಇವುಗಳನ್ನು ಸೆರೆಹಿಡಿದಿರುವ ಕನ್ನಡಪ್ರಭದ ಛಾಯಾಗ್ರಾಹಕ, ಕೆ.ರವಿ ಅವರನ್ನು ಅಭಿನಂದಿಸಬೇಕು. ಅಮರನಾಥ ದೇವಾಲಯದ ವಿಚಾರಗಳನ್ನು ಓದುಗರಿಗೆ ತಿಳಿಸಿರುವ ಕ.ಪ್ರ. ಸಂಪಾದಕ, ಕಾರ್ಯಮಂಡಳಿಗೆ ನನ್ನ ವಂದನೆಗಳು. ಭಾರತ ದೇಶದ ಅದ್ಭುತ, ದೇವಸ್ಥಾನ, ನದಿ, ಜಲಪಾತ, ಸುಂದರ ದೃಶ್ಯಗಳು ಇದ್ದಲ್ಲಿ ಅವುಗಳನ್ನು ಓದುಗರಿಗೆ ಛಾಯಾಚಿತ್ರದ ಸಹಿತ ವರದಿರೂಪದಲ್ಲಿ ನೀಡಬೇಕಾಗಿ ವಿನಂತಿ.
-ಎಂ.ಪಿ. ಸ್ವಾಮಿ, ಚಾಮರಾಜಪೇಟೆ, ಬೆಂಗಳೂರು.ದೂ. 2675 7534
ರಾಜಕೀಯ, ವ್ಯಕ್ತಿ ಪರಿಚಯ, ಸ್ಥಳ, ಸಂದರ್ಭ ವಿಶ್ಲೇಷಣೆ ಹೀಗೆ ಹತ್ತು ಹಲವಾರು ವಿಷಯಗಳು ಚರ್ಚೆ ಮಾಡುವ 'ನೂರೆಂಟು ನೋಟ' ಅಂಕಣ ಈ ಬಾರಿ (17/7) ಊಹಿಸಲಾಗದಂಥ ವಿಷಯದ ಬಗ್ಗೆ ಚರ್ಚೆ ನಡೆಸಿದ್ದು ಅತೀವ ಸಂತಸದೊಂದಿಗೆ ಆಶ್ಚರ್ಯವನ್ನೂ ತಂದಿದೆ. ಎಷ್ಟೊಂದು ಮಾಹಿತಿ ಒದಗಿಸಿ ಓದುಗರನ್ನೂ ವಿಚಾರ ಮಂಥನಕ್ಕೆ ಎಳೆ ತಂದಿದೆಯಲ್ಲ ಈ ಲೇಖನ. ನಮ್ಮಲ್ಲಿ ಕೆಲವು ಶಬ್ದಗಳ ಕೊರತೆ ಇದೆ ಅಂತಲೇ ಗೊತ್ತಿರದೆ ಇನ್ನಾವುದೋ ಭಾಷೆಯ ಬಳಕೆಯನ್ನೇ ನಮ್ಮದಾಗಿಸಿಕೊಂಡು ಎಲ್ಲವೂ ನಮ್ಮದೆಂಬಂತೆ ಬೀಗುತ್ತಿರುವಾಗ ಈ ಲೇಖನ ಹೊಡೆದೆಬ್ಬಿಸಿದಂತಿದೆ. ನಮ್ಮ ತುರ್ತು ಆವಶ್ಯಕತೆಯನ್ನು ಕನ್ನಡಪ್ರಭವೇ ಪೂರೈಸುತ್ತಿದೆಯಲ್ಲ. ಉದಾ: ಹತ್ಯಾಚಾರ. ಮೊಬೈಲ್ ವಿಷಯದಲ್ಲಿ 'ಕರೆ ಮಾಡು' ಅಂತಲೋ 'ಔ್ಝಢ್ಝಟ್ಜಿ-್ಝಟಿ-್ಠಜಟಛಡ್ಝ್ಟಿಟಿಝ್ಝಠ' ಸಂತಸದ ಒಟ್ಟಿರುವಿಕೆ ಅಥವಾ ಸಹಬಾಳ್ವೆ ದಕ್ಕಬಹುದೇನೋ?
-ಶಂಕರನಾರಾಯಣಭಟ್, ಮಾಡಗೇರಿ. ಹೊನ್ನಾವರ.
ಮೊ. 9632 821920
ತಾ. 17.7.14ರ ಗುರುವಾರದ ನೂರೆಂಟು ನೋಟದ ಅಪೇಕ್ಷೆಗೆ ಲಿವಿಂಗ್ ಟು ಗೆದರ್ ಎಂಬ ಪದಕ್ಕೆ ಸಮಾನಾರ್ಥವಾಗಿ "ಸಹಜೀವಿಗಳು" ಎಂಬ ಪದ ಅರ್ಥಬದ್ಧವಾಗಿ ತೋರುತ್ತದೆ. ಒಬ್ಬರಾದರೆ ಸಹಜೀವಿ ಎಂದು ಇಬ್ಬರು ಮಾಡುವ ಜೀವನ "ಸಹಜೀವನ"ವೆಂದು ಪದ ಪ್ರಯೋಗ ಮಾಡಬಹುದೆಂದು ನನ್ನ ಅನಿಸಿಕೆ. ಪ್ರಕಟಿಸಿ ಚರ್ಚೆಗಿಡಿ ಎಂದು ಕೋರುತ್ತೇನೆ.
-ಎಂ.ಕೆ. ಪ್ರಕಾಶ್, ಹೊಸದುರ್ಗ, ಮೊ. 9611 770634
ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ನಮ್ಮ ರಾಹುಲ್ ಗಾಂಧಿಯವರು ತೂಕಡಿಸುತ್ತಿದ್ದ ಚಿತ್ರವನ್ನು ಬೆಂಗಳೂರು ಆವೃತ್ತಿಯ ಪತ್ರಿಕೆಯಲ್ಲಿ ಮಾತ್ರ ನೀಡಿದ್ದೀರಿ ಎಂದು ಶಿಕಾರಿಪುರದ ಆರ್.ಸಿ. ಪರಶುರಾಮ್ರವರು ಆಕ್ಷೇಪಿಸಿದ್ದಾರೆ (ಜುಲೈ 20 ಕ.ಪ್ರ.) ಬಹುಶಃ ಅವರು ಗಮನಿಸಿಲ್ಲ. ನಮ್ಮ ಶಿವಮೊಗ್ಗ ಆವೃತ್ತಿಯಲ್ಲಿ ನೋಡಿ ನಾವು ಆನಂದತುಂದಿಲರಾಗಿದ್ದೇವೆ! ಹಾಗೆಯೇ ಉಳಿದ ಭಾಗದ ಜನರೂ ಈ ಸುಂದರ ದೃಶ್ಯವನ್ನು ಆಸ್ವಾದಿಸಿರಬಹುದೆಂದು ನನ್ನ ಎಣಿಕೆ.
-ಕೆ. ಆದಿತ್ಯ ಹೆಬ್ಬಾರ್, ಹರಪನಹಳ್ಳಿ. ದಾವಣಗೆರೆ ಜಿಲ್ಲೆ.
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಬರೆದಿರುವ 'ಖುಷಿ' ಭಾನುವಾರದ ಸಾಪ್ತಾಹಿಕದ ಮೂರು ವಿಶೇಷ ಪುಟಗಳು ಓದುಗರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಗಮನ ಸೆಳೆಯುವಂತೆ ಅದ್ಭುತವಾಗಿ ಮೂಡಿ ಬಂದಿವೆ. ಈ ರೀತಿ ಪತ್ರಿಕೋದ್ಯಮದ ವಿಭಾಗದಲ್ಲಿ ವ್ಯಾಸಂಗದಲ್ಲಿರುವ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು ಕ.ಪ್ರ. ದಿನಪತ್ರಿಕೆಯ ಹೆಗ್ಗಳಿಕೆಯೂ ಹೌದು.
-ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, ಮೊ. 94491-30531
ನಿಜಕ್ಕೂ ಕನ್ನಡಪ್ರಭಕ್ಕೆ ಹ್ಯಾಟ್ಸಾಫ್ ಹೇಳ್ಲೇಬೇಕು. ಏಕೆಂದರೆ ಪ್ರತಿದಿನ ರಾಜ್ಯದ ಮೂಲೆಮೂಲೆಗಳಲ್ಲಿ ನಿರಂತರ ಅತ್ಯಾಚಾರ ನಡೆಯುತ್ತಿದ್ದರೂ ಅಸಮರ್ಥತೆಯಿಂದ ನರಳುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸುವ ಮಹೋನ್ನತ ಕೆಲಸವನ್ನು ತಾವು ಮಾಡುತ್ತಾ ಬಂದಿದ್ದೀರಿ.
-ಬರ್ಕ್ಲಿ ರಮೇಶ್, ಕಿರಗಂದೂರು, ಮಂಡ್ಯ.ಮೊ. 900 8741 348
ಜುಲೈ 17ರ ಬೈಟುಕಾಫಿಯಲ್ಲಿ ಪ್ರಕಟವಾಗಿರುವ 'ನೇ... ಸರಗಿ ನೋಡು') ಲೇಖನವು ನನ್ನ ಮನಸ್ಸನ್ನು 38 ವರ್ಷಗಳ ಹಿಂದಿನ ನೆನಪಿಗೆ ದೂಡಿತು. ನೇಸರಗಿ (ನೇಸರ್ಗಿ) ಯಲ್ಲಿ ಬ್ಯಾಂಕ್ ಮೆನೇಜರ್ ಆಗಿದ್ದ ನಾನು ಅಲ್ಲಿನ ಜೋಡಿ ಗುಡಿಗಳ ಜೀರ್ಣೋದ್ಧಾರಕ್ಕಾಗಿ ಪ್ರಯತ್ನಗಳನ್ನು ನಡೆಸಿದ್ದೆ. ಪತ್ರಿಕೆಗಳಿಗೆ ಬರೆದಿದ್ದೆ, ರಾಜ್ಯ ಸರ್ಕಾರಕ್ಕೆ ಬರೆದಿದ್ದೆ, ಗ್ರಾಮದ ಹಿರಿಯರೊಡನೆ ಸಮಾಲೋಚಿಸಿದ್ದೆ. ಪ್ರಯತ್ನವು ಮುಂದುವರಿಯುತ್ತಿದ್ದಾಗಲೇ ನನಗೆ ಬೇರೆಡೆಗೆ ವರ್ಗವಾಯಿತು. ಇಂದಿಗೂ ಆ ಜೋಡಿಗುಡಿಗಳು ಜೀರ್ಣಾವಸ್ಥೆಯಲ್ಲೇ ಇರುವುದನ್ನು ತಿಳಿದು ಬಹಳ ಬೇಸರವಾಗುತ್ತಿದೆ. ಜುಲೈ 17ರ ಬೈಟುಕಾಫಿಯಲ್ಲೇ ಪ್ರಕಟಗೊಂಡಿರುವ ಇನ್ನೊಂದು ಲೇಖನ 'ಮನಸು ಗಾಂಧಿಬಜಾರು' ಬೆಂಗಳೂರಿನ ಗಾಂಧಿ ಬಜಾರಿನ ರೂಪಾಂತರ ಚಿತ್ರಣವನ್ನು ಒಳಗೊಂಡಿದ್ದು, ಹಳೆಯ ರೂಪವನ್ನು ಒಂದಿಷ್ಟು ಇನ್ನೂ ಉಳಿಸಿಕೊಂಡಿರುವ ಗಾಂಧಿಬಜಾರನ್ನು ನೋಡಿದವರು ಒಮ್ಮೆ ಅಲ್ಲಿಗೆ ಹೋಗುವ ಮನಸ್ಸು ಮಾಡುವಂತೆ ಚಿತ್ರಿತವಾಗಿದೆ. ಬಾಲ್ಯದಲ್ಲಿ ಗಾಂಧಿ ಬಜಾರಿನ ಸಂಪರ್ಕ ಹೊಂದಿದ್ದಿವರೀಗ, ಕವಿ ನಿಸಾರ್ ಅಹಮದ್ ಅವರು, 'ಮನಸು ಗಾಂಧಿಬಜಾರು' ಕವನದಲ್ಲಿ ಹೇಳಿರುವಂತೆ, 'ಆ ಹಿರಿಯ ಕುಹರದಲಿ ಮೌನಿಯಾಗುವ ಆಸೆ' ಉಂಟಾಗುತ್ತಿರಬಹುದು.
-ಎಚ್. ಆನಂದರಾಮಶಾಸ್ತ್ರೀ, ಬೆಂಗಳೂರು.