ಯಾರೆಲ್ಲ ಆಳಿದರೂ ಕೊಡಗಿನ ತನ್ನತನ ಕೊಲ್ಲಲಾಗಲಿಲ್ಲ
ಕೇಂದ್ರದಲ್ಲಿ ಅಧಿಕಾರಸೂತ್ರ ಹಿಡಿದಿರುವವರು ಮೂಡಿಸುತ್ತಿರುವ ಸ್ಥಿರತೆ ರಾಜಕೀಯಕ್ಕೆ ಮಾತ್ರವಲ್ಲ, ಭಾರತದ ಬೌದ್ಧಿಕ ವಲಯಕ್ಕೂ ಹೊಸ ಹೊಳಹು- ಭವಿಷ್ಯದ ಭರವಸೆ ನೀಡುತ್ತಿದೆ. ಏಕೆಂದರೆ ಈವರೆಗೆ ಒಂದು ನಿರ್ದಿಷ್ಟ ವಿಚಾರ ಪ್ರವಾಹವನ್ನು ಅಸ್ಪೃಶ್ಯವನ್ನಾಗಿಸಲಾಗಿತ್ತು. ಆ ಸ್ಥಿತಿಯ ಪರಿಕಲ್ಪನೆ ಕೊಡುವುದಕ್ಕೆ ಈ ದೇಶದ ಪ್ರಥಮ ಪ್ರಧಾನಿ ಆಡಿದ್ದ ಮಾತುಗಳನ್ನು ನೆನಪಿಸಿಕೊಳ್ಳುವುದು ಪ್ರಸ್ತುತವೆನಿಸುತ್ತದೆ. >
'ಎಲ್ಲಿಯವರೆಗೆ ನಾನು ಅಧಿಕಾರದಲ್ಲಿರುತ್ತೇನೆಯೋ ಅಲ್ಲಿಯವರೆಗೆ ನಾನು ಭಾರತವನ್ನು ಒಂದು ಹಿಂದು ರಾಷ್ಟ್ರರಾಗಲು ಬಿಡುವುದಿಲ್ಲ. ಹಿಂದೂ ರಾಷ್ಟ್ರದ ಕಲ್ಪನೆಯು ಕೇವಲ ಮಧ್ಯಯುಗದ್ದು ಮಾತ್ರವಲ್ಲ, ಅದೊಂದು ಮೂರ್ಖ ಕಲ್ಪನೆಯಾಗಿದೆ. ಆಧುನಿಕ ಕಾಲದಲ್ಲಿ ರಿಲಿಜನ್ ಹೊಂದಿರಬೇಕಾದವರು ವ್ಯಕ್ತಿಗಳೇ ವಿನಹ ರಾಷ್ಟ್ರವಲ್ಲ.' ಇದು ಭಾರತದ ಮೊದಲ ಪ್ರಧಾನಿ ಜವಹರ್‌ಲಾಲ್ ನೆಹರು 1947ರಲ್ಲಿ ಚರಿತ್ರೆ ಪುಟಗಳಲ್ಲಿ ದಾಖಲಾದ ಭಾಷಣದಲ್ಲಿ ಹೇಳಿದ್ದು.
ಇಲ್ಲಿಂದಲೇ ನಮ್ಮ ದೇಶದ ದುರಂತ ಆರಂಭಗೊಂಡಿದ್ದು ಎನ್ನಬಹುದು. ಭಾರತೀಯ ಸಂಸ್ಕೃತಿ- ಸಂಪ್ರದಾಯವನ್ನೇ ನೆಹರು ಪಾಶ್ಚಾತ್ಯ ಪರಿಲ್ಪನೆಯ ರಿಲಿಜನ್ ಎಂದು ಭಾವಿಸಿದ್ದರ ಫಲ ಇದು. ನೆಹರು ಭಾರತದ ಸಂಸ್ಕೃತಿ- ಸಂಪ್ರದಾಯವನ್ನು ಎಂದೂ ಒಬ್ಬ ಭಾರತೀಯನಾಗಿ ನೋಡೇ ಇಲ್ಲ. ಒಬ್ಬ ಹೊರಗಿನ, ಅದರಲ್ಲೂ ಪಶ್ಚಿಮದ ಮೂಲಕ ಭಾರತಕ್ಕೆ ಕಾಲಿಟ್ಟ ಒಬ್ಬ ಮಿಮರ್ಶಕನಂತೆ ನೋಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ನೇರವಾಗಿ ಆಮದು ಮಾಡಿಕೊಂಡ ಮೊದಲ ವಸ್ತು ವಿಷಯ ಸೆಕ್ಯುಲರ್ ಪರಿಕಲ್ಪನೆ. ಬಹುಸಂಖ್ಯಾತ- ಅಲ್ಪಸಂಖ್ಯಾತ ಎಂಬ ವ್ಯಾಖ್ಯಾನ ನೀಡಿ ಸರ್ಕಾರಿ ಸವಲತ್ತುಗಳ ಮೂಲಕ ದ್ವೇಷಕ್ಕೆ ಕಾರಣವಾಗಿಸಿದ್ದು.
ನೆಹರು ಮೇಲೆ ಪ್ರಭಾವ ಬೀರಿದ ಯುರೋಪಿಯನ್ನರು ಇಡೀ ಭಾರತೀಯ ಸಂಸ್ಕೃತಿಯನ್ನು ಹಿಂದೂಯಿಸಂ ಎಂದು ಕರೆದು ತಮ್ಮ ರಾಷ್ಟ್ರಗಳಲ್ಲಿರುವಂತೆ ಇದೊಂದು ರಿಲಿಜನ್ ಎಂದು ಭ್ರಮಿಸಿದ್ದರು. ಅದಕ್ಕಾಗಿಯೇ ನೆಹರುರಿಂದ ಪ್ರಾರಂಭಗೊಂಡು ಇಂದಿನ ಯು.ಆರ್. ಅನಂತಮೂರ್ತಿವರೆಗೆ ಡೋಂಗಿ ಜಾತ್ಯತೀತವಾದಿಗಳೆಲ್ಲ ಹಿಂದುಯಿಸಂ ಎಂದರೆ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿ ಇದ್ದಹಾಗೆ ಒಂದು ರಿಲಿಜನ್ ಎಂದು ತಿಳಿದುಕೊಂಡಿದ್ದಾರೆ. ಭಾರತಕ್ಕೆ ಸಾವಿರಾರು ವರ್ಷಗಳ ಧರ್ಮ ಆಧಾರಿತ ಪರಂಪರೆಯ, ಋಷಿಮುನಿಗಳ, ಸಾಧುಸಂತರ ರಾಷ್ಟ್ರನಿರ್ಮಾಣದ ಇತಿಹಾಸವಿದೆ ಎನ್ನುದನ್ನು ಮರೆತುಬಿಟ್ಟಿದಾರೆ. ಇದೇ ತಳಹದಿಯ ಮೇಲೆ ನಿಂತು, ಪರಂಪರೆಯನ್ನು ಹೀಗಳೆಯುತ್ತ ಎಷ್ಟೇ ಪ್ರಖರ ವೈಚಾರಿಕ ಆಕ್ರಮಣ ಮಾಡಿಕೊಂಡು ಬಂದಿದ್ದರೂ ನಮ್ಮತನದ ನೀತಿ- ಉತ್ಕರ್ಷಗಳು ಇಂದಿಗೂ ಅಳಿದಿಲ್ಲ. ಚಿಕ್ಕ ಚಿಕ್ಕ ಸ್ಫೂರ್ತಿಗಾಥೆಗಳೇ ಅವಾದರೂ ನಿರ್ಲಕ್ಷಿಸಲಾಗದ ದೀವಿಗೆಗಳು.
ಇದಕ್ಕೊಂದು ಉದಾಹರಣೆ ಕೊಡಗು. ಇದು ಭರತಖಂಡದ ಪುಟ್ಟ ಪ್ರದೇಶ. ಇದೊಂದು ಪ್ರತ್ಯೇಕ ಅಸ್ತಿತ್ವ ಹೊಂದಿ 1600ರಲ್ಲಿ ಹಾಲೇರಿ ಅರಸರಿಂದ 234 ವರ್ಷ ಆಳಲ್ಪಟ್ಟಿತ್ತು. ಅಲ್ಲಿಂದ 1834ರಿಂದ 1947 ರವರೆಗೆ 113 ವರ್ಷಗಳ ಕಾಲ ಬ್ರಿಟೀಷರಿಂದಲೂ ಆಳಲ್ಪಟ್ಟಿತ್ತು. ಇದಕ್ಕೂ ಮೊದಲು ಮೈಸೂರಿನ ಹೈದರಾಲಿ- ಟಿಪ್ಪು ಸುಲ್ತಾನರಿಂದಲೂ ಒಂದಷ್ಟು ಕಾಲ ಆಡಳಿತಕ್ಕೆ ಒಳಗಾಯಿತು. ಈ ಮೂರು ಅವಧಿಯಲ್ಲಿ ಇಲ್ಲಿನ ವಿಭಿನ್ನ ಸಂಸ್ಕೃತಿ- ಭಾಷೆಯ ಕೊಡವ ಜನಸಮೂಹ ತಮ್ಮ ಸಂಸ್ಕೃತಿ ಬಿಟ್ಟು ವೀರಶೈವ ಸಂಸ್ಕೃತಿಯನ್ನೋ, ಯುರೋಪಿಯನ್ನರ ಕ್ರೈಸ್ತ ಮತವನ್ನೋ ಅಥವ ಟಿಪ್ಪುವಿನ ಇಸ್ಲಾಂ ಮತವನ್ನು ಅಪ್ಪಿಕೊಳ್ಳಬೇಕಿಲ್ಲ. ಭಲತ್ಕಾರಗಳು ನಡೆದರೂ ತಮ್ಮ ಮೂಲ ಸಂಸ್ಕೃತಿ- ಸಂಪ್ರದಾಯವನ್ನು ಬಿಟ್ಟುಕೊಡಲಿಲ್ಲ. ಕೊಡಗು ಕೊಡಗಾಗಿಯೇ ಉಳಿದುಬಿಟ್ಟಿತ್ತು. ಇದು ಹೇಗೆ ಸಾಧ್ಯ?
ಅವರು ಇಂಗ್ಲಿಷ್ ಭಾಷೆ, ಉಡುಗೆ ತೊಡುಗೆ, ಅವರ ಶೈಲಿಯನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡರೂ ತಮ್ಮತನವನ್ನು ಬಿಟ್ಟುಕೊಡದೆ, ಪರಂಪರೆ- ಸಂಸ್ಕೃತಿಗಳನ್ನು ಮೂಢನಂಬಿಕೆಯನ್ನದೆ ಉಳಿಸಿಕೊಂಡುಬಂದಿದ್ದಾರೆ. ಹೀಗಾಗಿ ಒಂದು ವಿಭಿನ್ನ ವಿಶಿಷ್ಟ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಜನಸಮೂಹ ಎಂಬ ಹೆಮ್ಮೆಗೆ ಪಾತ್ರವಾಗಿದ್ದಾರೆ. ಆದರೆ ಈಗ ಕೊಡಗಿನಲ್ಲಿ ಡೋಂಗಿ ಜಾತ್ಯತೀತವಾದಿಗಳ ಅಬ್ಬರ ಹೆಚ್ಚಾಗಿದೆ. ಇದರ ಫಲ ಕೊಡಗಿನ ಮೂಲ ನಿವಾಸಿ ಪರಿಶಿಷ್ಟ ಪಂಗಡದ ಎರವರು ಹಿಂಡು ಹಿಂಡಾಗಿ ಕ್ರೈಸ್ತ ಮತಕ್ಕೆ ಮತಾಂತರಗೊಂಡು ಪ್ರತಿ ಭಾನುವಾರ ಹುಣಸೂರಿನ ಚರ್ಚ್‌ಗೆ ತೆರಳುತ್ತಿದ್ದಾರೆ. ಇದು ನಿಜವಾದ ಜಾತ್ಯತೀತತೆ ಮತ್ತು ಪ್ರಗತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿರುವ ಸಂಕೇತವಂತೆ!
ಇಸ್ಲಾಂ ಮತ ಪ್ರವಾದಿ ಮಹಮದ್ ಪೈಗಂಬರರಿಂದಲೂ, ಕ್ರೈಸ್ತ ಮತ ಏಸುಕ್ರಿಸ್ತನಿಂದಲೂ ಆರಂಭಗೊಂಡಿತು ಎಂದು ಆ ಮತಗಳೇ ಹೇಳುತ್ತವೆ. ಆದರೆ ಹಿಂದೂ ಧರ್ಮಕ್ಕೆ ಒಂದು ಕಾಲಘಟ್ಟವೇ ಇಲ್ಲ. ಇದು ಏಕ ವ್ಯಕ್ತಿಯಿಂದ ಆದದ್ದು ಅಲ್ಲ. ಕುರಾನ್ ಬೈಬಲಿನಂತೆ ಒಂದೇ ಧರ್ಮ ಗ್ರಂಥವೂ ಇಲ್ಲ, ಒಂದೇ ದೇವರು ಎಂಬ ಪ್ರತಿಪಾದನೆಯೂ ಇಲ್ಲ. ಇದೆಲ್ಲದಕ್ಕೆ ಮೀರಿದ್ದು ಬಹು ಸಂಸ್ಕೃತಿ, ಬಹು ಸಂಪ್ರದಾಯ, ಬಹು ಋಷಿಮುನಿಗಳು, ಬಹು ಪುರಾಣಗಳು, ಬಹು ತತ್ವಸಿದ್ದಾಂತಗಳು. ಅಗೆದಷ್ಟು ಆಳ. ಇದಕಾಗಿಯೇ ಭಾರತದ ಸಂಸ್ಕೃತಿ ಎಲ್ಲ ರಾಷ್ಟ್ರಗಳಿಗೂ ಮಾದರಿ. ಶಾಂತಿಯನ್ನು ಅರಸಿ ಭಾರತಕ್ಕೆ ಲಗ್ಗೆಯಿಡುತ್ತಿರುವುದು ಈ ಕಾರಣಕ್ಕಾಗಿಯೇ. ಕಾಂಬೋಡಿಯಾ ರಾಷ್ಟನಿರ್ಮಾಣಕ್ಕೆ ಭಾರತದ ಕಂಭ ಮಹಋಷಿ ಶಿಲ್ಪಿಯಾದದ್ದು ನಮ್ಮ ಚರಿತ್ರೆ. ಮಹಾಭಾರತ ರಾಮಾಯಣ, ಭಗವದ್ಗೀತೆಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೊಸ ಚಿಂತನೆಯನ್ನು ಹಚ್ಚಿರುವುದು ಸುಳ್ಳಲ್ಲ. ಆದರೆ ಭಾರತದಲ್ಲಿ ಪರಂಪರಾಗತವಾಗಿರುವ ಎಲ್ಲವನ್ನೂ ಮೂಢನಂಬಿಕೆ ಪರಿಧಿಯಲ್ಲಿ ಸೇರಿಸಿಬಿಡುವ ಹಪಾಪಹಿ ಹಾಗೂ ಅದರಿಂದ ಏನಕೇನ ಪ್ರಚಾರ ಪಡೆಯುವ ವಿಚಾರ ದಾಳಿ ಹಲವರದ್ದು.
2013ರ ಫೆಬ್ರವರಿ 4ರಲ್ಲಿ ರಷ್ಯದ ಸಂಸತ್ತಿನಲ್ಲಿ ಅಧ್ಯಕ್ಷ ಪುಟಿನ್ ಮಾಡಿದ ಭಾಷಣ ಉಲ್ಲೇಖಿಸಿ ನಿರ್ಧಾರವನ್ನು ನಿಮಗೆ ಬಿಡುತ್ತೇನೆ. 'ರಷ್ಯ ಇರುವುದು ರಷ್ಯನ್ನರಿಗಾಗಿ. ಎಲ್ಲೇ ಯಾವುದೇ ಅಲ್ಪಸಂಖ್ಯಾತರು ಇಲ್ಲಿ ಇರಲು ಬಯಸುವುದಾದರೆ, ತಿಂದುಂಡು ನೆಮ್ಮದಿಯಿಂದ ಬದುಕಲು, ದುಡಿದು ಜೀವಿಸಲು ಇಷ್ಟಪಡುವುದಾದರೆ ಅವರು ರಷ್ಯನ್ ಭಾಷೆಯನ್ನೇ ಆಡಬೇಕು. ಇಲ್ಲಿನ ಕಾನೂನು, ನಿಯಮಗಳನ್ನು ಪಾಲಿಸಲೇಬೇಕು. ಗೌರವಿಸಲೇಬೇಕು. ಇವರಿಗೆಲ್ಲ ರಷ್ಯ ಬೇಕಿದ್ದರೆ ಅವರಿಗೆ ವಿಶೇಷ ಸೌಲಭ್ಯ, ಸವಲತ್ತುಗಳನ್ನು ಕೊಡಲು ನಾವು ಸಿದ್ಧವಿಲ್ಲ. ನಮ್ಮ ನಿಯಮಗಳನ್ನು ಅವರ ಸಲುವಾಗಿ ನಾವು ತಿರುಚಲು ಸಾಧ್ಯವಿಲ್ಲ. ನಮಗೆ ಇಲ್ಲಿ ಪಕ್ಷಪಾತ, ವಂಚನೆ ಮಾಡಲಾಗಿದೆ ಎಂದು ಎಷ್ಟೇ ಜೋರಾಗಿ ಅವರು ಕಿರುಚಿದರೂ ಸರಿ, ಅಮೆರಿಕ, ಇಂಗ್ಲೆಂಡ್, ಹಾಲೆಂಡ್, ಫ್ರಾನ್ಸ್‌ಗಳಲ್ಲಿ ನಡೆಸುತ್ತಿರುವ ಆತ್ಮಾಹುತಿ ದಾಳಿಗಳಿಂದ ನಾವು ಪಾಠ ಕಲಿಯಲಾರಂಭಿಸಿದ್ದೇವೆ. ಏಕೆಂದರೆ ರಾಷ್ಟ್ರವಾಗಿ ನಮಗೆ ಬದುಕುಳಿವ ಆಸೆಯಿದೆ. ಇಲ್ಲಿ ಬಹುಸಂಖ್ಯಾತ- ಅಲ್ಪಸಂಖ್ಯಾತ ಮುಖ್ಯವಲ್ಲ. ರಾಷ್ಟ್ರೀಯ ಹಿತಾಶಕ್ತಿಯಿಂದ ನಾವೆಲ್ಲಾ ರಷ್ಯನ್ನರು ಮಾತ್ರ.'
-ಅಡ್ಡಂಡ ಕಾರ್ಯಪ್ಪ
ಕೊಡಗು