ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಲೈಂಗಿಕ ಶಿಕ್ಷಣ ಎಂದರೆ ಸ್ವಚ್ಛಂದ ಮಾತ್ರವಲ್ಲ

Srinivasa Murthy VN
Updated On : 30 Jul 2014, 12:19 pm

'ಲೈಂಗಿಕ ಶಿಕ್ಷಣ: ಚಿಂತನ-ಮಂಥನ' ಮಾಲಿಕೆಯಲ್ಲಿ ಬರುತ್ತಿರುವ ಲೇಖನಗಳಿಗೆ ಒಬ್ಬ ಆಪ್ತ ಸಲಹೆಗಾರನಾಗಿ ನನ್ನ ಪ್ರತಿಕ್ರಿಯೆ ಇದು. ನನ್ನ ವೃತ್ತಿ ಅನುಭವವೇ ಈ ಲೇಖನಕ್ಕೆ ಆಧಾರ.
1. ನಾವು ಲೈಂಗಿಕ ಶಿಕ್ಷಣ ಕೊಡದಿದ್ದರೂ ಹದಿಹರೆಯದವರಿಗೆ ಅದು ಬೇರೆಡೆಯಿಂದ ಸಿಕ್ಕೇ ಸಿಗುತ್ತದೆ. ಇದನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ. ಹೆಚ್ಚಿನ ಬಾರಿ, ಅಂತಹ 'ಲೈಂಗಿಕ ಶಿಕ್ಷಣ'ವು 'ಅರೆಬೆಂದ- ಅಪಕ್ವ' ಶಿಕ್ಷಣವೇ ಆಗಿರುತ್ತದೆ. ಸಹಜವಾಗಿ ಇದು ಅನಾಹುತಗಳನ್ನುಂಟು ಮಾಡಿಯೇ ತೀರುತ್ತದೆ. ಉದಾ: ವಯೋಸಹಜ 'ಹಸ್ತಮೈಥುನ'ದಿಂದ ಭೀತಿಗೊಳಗಾಗಿ/ ಶಿಶ್ನ ಗಾತ್ರದ ಕುರಿತು ತಪ್ಪು ತಿಳಿವಳಿಕೆ, ಪತ್ರಿಕೆಗಳಲ್ಲಿ ಬರುತ್ತಿರುವ ಜಾಹೀರಾತುಗಳ ಪ್ರಭಾವದಿಂದಾಗಿ ವೈವಾಹಿಕ ಜೀವನದಲ್ಲಿ ವಿನಾ ಕಾರಣ ಲೈಂಗಿಕ ತೊಂದರೆ ಅನುಭವಿಸುವುದು ಹಾಗೂ ವಯೋಸಹಜ ಲೈಂಗಿಕ ಭಾವನೆಗಳನ್ನು ನಿಭಾಯಿಸಲಾಗದೇ ಆತಂಕಕ್ಕೆ ಒಳಗಾಗುವುದು.
2. ಲೈಂಗಿಕ ಶಿಕ್ಷಣವೆಂದರೆ ಬೇರೆಡೆಯ 'ಮುಕ್ತ ಸಮಾಜ'ದಲ್ಲಿ ಇರುವಂತೆ ಲೈಂಗಿಕತೆಯನ್ನು ಉತ್ತೇಜಿಸುವುದಲ್ಲ ಅಥವಾ ಶಾಲೆಗಳಲ್ಲಿ ಕಾಂಡೋಂಗಳನ್ನು ಉಚಿತವಾಗಿ ಸರಬರಾಜು ಮಾಡುವುದಲ್ಲ. ಶಿಕ್ಷಣ ತಜ್ಞರು, ಮನೋವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು, ಮನೋವೈದ್ಯರು, ಆಪ್ತಸಲಹೆಗಾರರು ಹಾಗೂ ಈ ವಿಷಯದಲ್ಲಿ ಕಾಳಜಿಯುಳ್ಳವರೆಲ್ಲರ ನೆರವನ್ನು ಪಡೆದು, ಲೈಂಗಿಕ ಶಿಕ್ಷಣವನ್ನು ಇಂದಿನ ಭಾರತೀಯ ಸಮಾಜದ ಅಗತ್ಯಕ್ಕೆ ತಕ್ಕಂತೆ ಸೂಕ್ತ ಮಾರ್ಪಾಡು ಮಾಡಿಕೊಳ್ಳಬಹುದು.
3. ಲೈಂಗಿಕ ಶಿಕ್ಷಣವನ್ನು ವಿರೋಧಿಸುವವರೆಲ್ಲರೂ ಬಹಳ ಮುಖ್ಯವಾಗಿ ಗಮನಿಸಬೇಕಾದ್ದೇನೆಂದರೆ
ಲೈಂಗಿಕ ಶಿಕ್ಷಣದ ಕೊರತೆಯಿಂದಾಗಿ ಹದಿಹರೆಯದವರಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವಂತೆಯೇ ವಿವಾಹಿತ ವಯಸ್ಕರಲ್ಲಿಯೂ ಸಮಸ್ಯೆಗಳುಂಟಾಗಿ, ಅವರು ಆರೋಗ್ಯಕರ ಲೈಂಗಿಕ ಜೀವನವನ್ನು ನಡೆಸಲು ಅಸಾಧ್ಯವಾಗಿ ಅನೇಕ ವಿವಾಹಗಳು ಮುರಿದು ಬಿದ್ದ ಉದಾಹರಣೆಗಳೂ ಉಂಟು.
4. ಲೈಂಗಿಕ ಶಿಕ್ಷಣವೆಂದರೆ ಹದಿಹರೆಯದವರು ತಮ್ಮಲ್ಲುಂಟಾಗುವ ವಯೋಸಹಜ ದೈಹಿಕ-ಮಾನಸಿಕ ಬದಲಾವಣೆಗಳನ್ನು ಗುರುತಿಸಿಕೊಳ್ಳುವುದು, ಲೈಂಗಿಕ ಭಾವನೆಗಳನ್ನು ನಿಭಾಯಿಸುವುದು ಹಾಗೂ ಅನಗತ್ಯ ಕುತೂಹಲ ಅಥವಾ ಅಪರಾಧಿ ಮನೋಭಾವವನ್ನು ದೂರ ಮಾಡುವುದು. ಅಗತ್ಯಕ್ಕೆ ತಕ್ಕಂತೆ ಇದರಲ್ಲಿ ಇನ್ನೂ ಹಲವು ವಿಷಯಗಳನ್ನು ಸೇರಿಸಿಕೊಳ್ಳಬಹುದು. ಇಂತಹ ಶಿಕ್ಷಣವನ್ನು ಮಕ್ಕಳ ಪೋಷಕರು ಮತ್ತು ಶಿಕ್ಷಕರು ಪರಿಣಾಮಕಾರಿಯಾಗಿ ಕೊಡಬಲ್ಲರು. ಇದು ಕಷ್ಟವೆನಿಸಿದಲ್ಲಿ ಕಿಂಚಿತ್ತೂ ಹಿಂಜರಿಕೆಯಿಲ್ಲದೇ ಆಪ್ತ ಸಲಹೆಗಾಗಿ ಕರೆದೊಯ್ಯುವುದು ಇಂದಿನ ತುರ್ತು ಅಗತ್ಯ.
ಕೊನೆಯದಾಗಿ ಒಂದು ಮಾತು, 'ಆರೋಗ್ಯಕರ ಸಮಾಜ ನಿರ್ಮಾಣ'ದಲ್ಲಿ 'ಆರೋಗ್ಯಕರ ಲೈಂಗಿಕ ಜೀವನ' ಬಹು ಮುಖ್ಯವಾದದ್ದು. ಲೈಂಗಿಕ ಶಿಕ್ಷಣ ಇದಕ್ಕೆ ಖಂಡಿತಾ ಪೂರಕವಾಗಬಲ್ಲದು.

-ಗಣೇಶರಾವ್ ನಾಡಿಗೇರ್
ಮನೋವೈದ್ಯ, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement