ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಾನಿಯಾ ಪರಕೀಯ ಅಂತ ಚೀರಿದ ಕ್ಷುಲ್ಲಕ ರಾಜಕೀಯ

Srinivasa Murthy VN
Updated On : 30 Jul 2014, 11:30 am

ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೊಸ ರಾಜ್ಯ ತೆಲಂಗಾಣಕ್ಕೆ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದನ್ನು ಸಹಿಸದ ಅಲ್ಲಿನ ಬಿಜೆಪಿ ಮುಖಂಡ ಕೆ. ಲಕ್ಷ್ಮಣ್ 'ಸಾನಿಯಾ ಪಾಕಿಸ್ತಾನಿ ಸೊಸೆ. ಆಕೆಗೆ ಏಕೆ ಇಂಥ ಹುದ್ದೆ ಕೊಡಬೇಕು' ಎಂದು ಪ್ರಶ್ನಿಸಿದ್ದರು.  
ಅಷ್ಟಕ್ಕೂ ಸಾನಿಯಾ ಮಾಡಿದ ತಪ್ಪಾದರೂ ಏನು? ಒಬ್ಬ ಪಾಕಿಸ್ತಾನಿಯನ್ನು ಮದುವೆಯಾಗಿದ್ದೇ? ಅಥವಾ ಮದುವೆ ಬಳಿಕವೂ ಭಾರತದ ಪರವೇ ಆಡಿ ಪದಕಗಳನ್ನು ಗೆದ್ದು ಕೊಟ್ಟಿದ್ದೇ? ಹೋಗಲಿ ಸಾನಿಯಾ ಪ್ರಚಲಿತಕ್ಕೆ ಬರುವ ಮೊದಲು ಭಾರತದ ಟೆನ್ನಿಸ್ ಲೋಕ ಹೇಗಿತ್ತು ಗೊತ್ತೇ?
ಭಾರತದಲ್ಲಿ ಟೆನ್ನಿಸ್ ಎಂಬುದು ಹೈಕ್ಲಾಸ್ ಎನ್ನಬಹುದಾದ ವರ್ಗಕ್ಕೆ ಸೀಮಿತವಾಗಿತ್ತು. ಇದಕ್ಕೆ ವೀಕ್ಷಕರ ಸಂಖ್ಯೆಯೂ ಹೊರತಾಗಿರಲಿಲ್ಲ. ಈ ಗ್ರಹಿಕೆಯನ್ನು ಬದಲಿಸಿದ್ದು 2002ರ ಭೂಸಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್. ಆಗ ಭಾರತದ ಪರವಾಗಿ ಮಿಶ್ರ ಡಬಲ್ಸ್‌ನಲ್ಲಿ ಆಟವಾಡುತ್ತಿದ್ದ ಜೋಡಿ ಕಂಚಿನ ಪದಕ ಪಡೆಯಿತು. ಅಲ್ಲಿಯವರೆಗೆ ಮಿಶ್ರ ಡಬಲ್ಸ್‌ನಲ್ಲಿ ಭಾರತ ಯಾವುದೇ ಪದಕವನ್ನೂ ಗೆದ್ದಿರಲಿಲ್ಲ. ಆಗ ಈ ತಂಡದಲ್ಲಿ ಲಿಯಾಂಡರ್ ಫೇಸ್ ಜತೆ ಆಟವಾಡುತ್ತಿದ್ದ ಸಾನಿಯಾ ಮಿರ್ಜಾ ರಾತ್ರೋ ರಾತ್ರಿ ಕೇವಲ ಭಾರತವಷ್ಟೇ ಅಲ್ಲ, ವಿಶ್ವದ ಗಮನವನ್ನೂ ಸೆಳೆದಳು. ಭಾರತದಲ್ಲಿ ಬಹುತೇಕರು ಟೆನ್ನಿಸ್ ಅನ್ನು ನೋಡುವಂತೆ ಮಾಡಿದಳು. ಇಲ್ಲಿ ಸಾನಿಯಾ ಆಟದ ಜತೆಗೆ ರೂಪವೂ ಕೊಡುಗೆ ನೀಡಿದ್ದಿರಬಹುದಾದರೂ ರೂಪವಂತೆಯೂ ಆಗಿರುವ ಪ್ರತಿಭಾವಂತ ಕ್ರೀಡಾಪಟು ಎಂಬುದು ಖುಷಿಯ ವಿಷಯವೇ. ನಂತರ ಸಾನಿಯಾ ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಹಲವಾರು ಪದಕಗಳನ್ನು ತಂದು, ರ್ಯಾಂಕಿಂಗ್‌ನಲ್ಲಿ ಮೇಲೇರತೊಡಗಿದ್ದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯ.
ಇಷ್ಟೆಲ್ಲ ಮಾಡಿದ ಸಾನಿಯಾ ಒಬ್ಬ ಪಾಕಿಸ್ತಾನಿಯನ್ನು ಪ್ರೇಮಿಸಿ ವಿವಾಹವಾಗಿದ್ದು ದೊಡ್ಡ ವಿಷಯವಾಯಿತು. ಆಕೆ ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲ್ಲಿಕ್‌ರನ್ನು ವಿವಾಹವಾಗುವುದಾಗಿ ಘೋಷಿಸಿದ ಬೆನ್ನಲ್ಲೇ ಮಾಧ್ಯಮಗಳು ಕೇಳಿದ ಮೊದಲ ಪ್ರಶ್ನೆಯೇ 'ಮದುವೆ ನಂತರ ನೀವು ಟೆನ್ನಿಸ್ ಕ್ಷೇತ್ರದಲ್ಲಿ ಮುಂದುವರಿಯುತ್ತೀರಾ? ಮುಂದುವರಿದರೆ ಯಾವ ದೇಶದ ಪರ ಆಟ ಆಡುತ್ತೀರಿ?' ಎಂದು. ಇದಕ್ಕೆ ಸಾನಿಯಾ ಉತ್ತರ, 'ನಾನು ಪಾಕಿಸ್ತಾನದವನನ್ನು ವಿವಾಹವಾಗುತ್ತಿರಬಹುದು, ಆದರೆ ಭಾರತೀಯಳಾಗಿಯೇ ಮುಂದುವರಿಯುತ್ತೇನೆ. ನನ್ನ ದೇಶದ ಪರವಾಗಿಯೇ ಆಡುತ್ತೇನೆ'. ನಂತರ ಸಾಕಷ್ಟು ಬಾರಿ ಈಕೆಯ ಐಡೆಂಟಿಟಿ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇತ್ತು. ಅವೆಲ್ಲವಕ್ಕೂ ಸಾನಿಯಾ ಉತ್ತರ ಒಂದೇ- 'ಭಾರತದ ಪರವಾಗಿಯೇ ಆಡುತ್ತೇನೆ'. ಹಾಗೆಯೇ ನಡೆದುಕೊಂಡರು ಸಹ. ಆದರೂ ಲಕ್ಷ್ಮಣ್ ಎಂಬ ರಾಜಕೀಯ ನೇತಾರನ ಹೇಳಿಕೆ, ನಮ್ಮಲ್ಲಿ ಇನ್ನೂ ಅಂಥ ಮನಸ್ಥಿತಿ ಜೀವಂತ ಇದೆ ಎಂಬುದನ್ನು ಸಾರಿದೆ. ಅಮೆರಿಕದವನನ್ನೋ, ಆಸ್ಟ್ರೇಲಿಯಾದವನನ್ನೋ ಮದುವೆಯಾದರೆ ಹೀಗೆ ಕೇಳುತ್ತಿದ್ದರೆ?
ನಮ್ಮವರು ವಿದೇಶಗಳಲ್ಲಿ ಸಾಧನೆ ಮಾಡಿದರೆ ಬೀಗುವವರು ನಾವು. ವಿದೇಶದ ದೊಡ್ಡ ಕಂಪನಿಗೆ ಸಿಇಒ ಆದವರಿಗೆಲ್ಲ ಈ ದೇಶದ ಪೌರತ್ವವೇನೂ ಇಲ್ಲದಿದ್ದರೂ ಅವರು ನಮ್ಮ ಮೂಲದವರು ಎಂದು ಕೊಂಡಾಡುತ್ತೇವೆ. 'ಕೊನೆಯವರೆಗೂ ಭಾರತದ ಪರವೇ ಆಡುತ್ತೇನೆ' ಎಂಬ ಸಾನಿಯಾರನ್ನೇಕೆ ಹೀಗೆ ಹೀಯಾಳಿಸಬೇಕು? 'ನನ್ನ ವೈಯುಕ್ತಿಕ ಜೀವನದ ಬಗ್ಗೆ ಪ್ರಶ್ನಿಸಲು ಇವರಾರು?' ಎಂದು ಸಂದರ್ಶನವೊಂದರಲ್ಲಿ ಸಾನಿಯಾ ಕೇಳಿದ್ದಾರೆ. 'ನಾನು ಭಾರತೀಯಳು ಎಂದು ಎಷ್ಟು ಬಾರಿ ಸಮರ್ಥನೆ ಮಾಡಿಕೊಳ್ಳಲಿ. ಇದು ಭಯಾನಕ ಸಂಗತಿಯಾಗಿದೆ. ನಾನು ಹೆಣ್ಣು ಮಗಳು ಎಂದೋ ಅಥವಾ ಪಾಕಿಸ್ತಾನಿಯನ್ನು ವಿವಾಹವಾದೆನೆಂದೋ ನನ್ನನ್ನು ಈ ರೀತಿ ನೋಡಲಾಗುತ್ತಿದೆ. ಯಾಕೆ ಹೀಗೆ ಮಾಡಲಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ' ಎಂದು ಕಳವಳ ತೋಡಿಕೊಂಡಿದ್ದಾರೆ.
ಮೂಲತಃ ಹೈದ್ರಾಬಾದಿನವರೇ ಆದ ಸಾನಿಯಾ, ಟೆನ್ನಿಸ್‌ನಲ್ಲಿ ಭಾರತಕ್ಕೆ 12 ಪದಕ ತಂದುಕೊಟ್ಟಿದ್ದಾರೆ. ಟೆನ್ನಿಸ್ ಕ್ರೀಡೆಯನ್ನು ಉದ್ಧಾರ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಂತ ಹಣ ಬಳಸಿ ಟೆನ್ನಿಸ್ ಅಕಾಡೆಮಿಯನ್ನೂ ಸ್ಥಾಪಿಸಿದ್ದಾರೆ. ಸರ್ಕಾರ ಸಹ ಈಕೆಯನ್ನು ಭಾರತದ ಕ್ರೀಡಾಪಟು ಎಂದೇ ಗುರುತಿಸಿದೆ. ಇವರ ಬಳಿ ಇರುವುದೂ ಭಾರತದ ಪಾಸ್‌ಪೋರ್ಟ್. ಹೀಗಿರುವಾಗ ತೆಲಂಗಾಣ ರಾಜ್ಯದ ಪ್ರಚಾರ ರಾಯಭಾರಿ ಆದರೆ ಅದರಲ್ಲಿ ತಪ್ಪೇನಿದೆ?
ಪಾಕ್ ಕ್ರಿಕೆಟಿಗ ಶೋಯಿಬ್ ಮಲ್ಲಿಕ್‌ರನ್ನು ವಿವಾಹವಾಗಿದ್ದರೂ ಪಾಕಿಸ್ತಾನದಲ್ಲಿ ನೆಲೆಸಿಲ್ಲ. ಈ ಇಬ್ಬರೂ ದುಬೈನಲ್ಲಿ ಮನೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ತಾನು ಪ್ರತಿನಿಧಿಸುವ ಭಾರತದ ಬಗ್ಗೆ ಎಲ್ಲಿಯೂ ಹಗುರವಾಗಿ ಮಾತನಾಡಿದ್ದಿಲ್ಲ. ಪಾಕ್ ಸೊಸೆಯಾಗಿರುವುದನ್ನು ವೈಯಕ್ತಿಕ ವಿಷಯವಾಗಿರಿಸಿಕೊಂಡಿದ್ದಾರೆಯೇ ಹೊರತು ಅದನ್ನು ತಮ್ಮ ಇಮೇಜ್‌ವೃದ್ಧಿಯ ಸರ್ಕಸ್‌ಗಳಿಗೇನೂ ಬಳಸಿಕೊಂಡಿಲ್ಲ. ಹೀಗಿರುವಾಗ ಅಪಸ್ವರಗಳು ಅರ್ಥ ಕಳೆದುಕೊಳ್ಳುತ್ತವೆ.
ಕೆವಿನ್ ಪಿಟರ್ಸನ್ ಖ್ಯಾತ ಕ್ರಿಕೆಟಿಗ. ತಾನು ದಕ್ಷಿಣ ಆಫ್ರಿಕಾ ಮೂಲದವನೆಂಬ ಒಂದೇ ಕಾರಣಕ್ಕೆ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧವೇ ಧ್ವನಿ ಎತ್ತಿದ್ದ. ತಂಡ ಬಿಡುವುದಾಗಿಯೂ ಹೆದರಿಸುತ್ತಿದ್ದ. ಅಷ್ಟಕ್ಕೇ ಸುಮ್ಮನಾಗದೇ ತಾನು ಆಡುತ್ತಿದ್ದ ಇಂಗ್ಲೆಂಡ್ ತಂಡದ ಆಟಗಾರರ ವಿರುದ್ಧವೇ ಅವಹೇಳನಕಾರಿ ಮೆಸೇಜ್‌ಗಳನ್ನು ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಕಳುಹಿಸುತ್ತಿದ್ದ. ಇದೇ ಕಾರಣಕ್ಕೆ ಆತ ತಂಡದಿಂದ ಸ್ವಲ್ಪ ಕಾಲ ಉಚ್ಛಾಟಿತನಾಗಿಯೂ ಇದ್ದ. ಆದರೆ ಇಂಥ ಯಾವುದೇ ಕುಕೃತ್ಯವನ್ನು ಸಾನಿಯಾ ಮಾಡಿಲ್ಲ. ಸಾಧನೆ ಮೆರೆದಾಗಲೆಲ್ಲ ನಮ್ಮವಳೆನಿಸಿದ್ದ ಸಾನಿಯಾ, ಕ್ಷುಲ್ಲಕ ರಾಜಕೀಯ ಕಾರಣಕ್ಕೆ ಪರಕೀಯಳಾಗಬೇಕೆ?

-ಆದರ್ಶ ಎಸ್. ಅಂಚೆ
adianche@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement