ವಾಟ್ಸ್ಆ್ಯಪ್ ಹಾದಿ ತಪ್ತೇ?
ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಸಿನಿಮಾರಂಗವನ್ನು ನಿಯಂತ್ರಿಸುವ ಪ್ರಾದೇಶಿಕ ಸೆನ್ಸಾರ್ ಮಂಡಳಿ...
ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಸಿನಿಮಾರಂಗವನ್ನು ನಿಯಂತ್ರಿಸುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಎಂಬ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಜವಾಬ್ದಾರಿಯುತ ಸಂಸ್ಥೆ ಇದೆ. ಇದರ ಕರ್ತವ್ಯ ಏನೆಂದರೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಯಾವುದೇ ಚಲನಚಿತ್ರಗಳಲ್ಲಿ ಒಂದು ಸಣ್ಣ ರಕ್ತಸಿಕ್ತ ದೃಶ್ಯವಾಗಲಿ, ಹಿಂಸೆ, ಕ್ರೌರ್ಯ, ಕಾಮ, ಅಶ್ಲೀಲತೆಯನ್ನು ಪ್ರಚೋದಿಸುವ ಯಾವುದೇ ದೃಶ್ಯವಿರಲಿ ಅದನ್ನು ಬಿತ್ತರಿಸುವ ಅವಕಾಶವನ್ನು ಮೊಟುಕುಗೊಳಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು.
ಇಪ್ಪತ್ತು ವರ್ಷಗಳ ಹಿಂದೆ ಒಂದು ಚಿತ್ರ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೇಟ್ ಪಡೆದರೆ ಆ ಚಿತ್ರದ ನಿರ್ಮಾಪಕನಿಗೆ ಅದು ತಲೆ ತಗ್ಗಿಸುವಂಥ ಸಂಗತಿಯಾಗಿತ್ತು. ವರನಟ ಡಾ.ರಾಜ್ ನಟಿಸಿರುವ ಇನ್ನೂರ ಐದು ಚಿತ್ರಗಳಲ್ಲಿ ಒಂದೂ ಚಿತ್ರವು ಎ ಪ್ರಮಾಣಪತ್ರ ಪಡೆದಿಲ್ಲ! ಅಂತಹ ಸಾಮಾಜಿಕ ಬದ್ಧತೆ ಆ ತಲೆಮಾರಿನವರಿಗಿತ್ತು. ಆದರೆ ಇಂದು ಸೆನ್ಸಾರ್ ಮಂಡಳಿಯು ಹೇಗೆ ಅಪ್ರಸ್ತುತವಾಗಿ ಹೋಗಿದೆ ಎಂದರೆ ಅದು ನೀಡುವ ಎ ಆಗಲಿ ಯೂ ಆಗಲಿ....ಯಾವ ಸರ್ಟಿಫಿಕೇಟ್ ಸಿಕ್ಕರೂ ಒಂದೇ ಎಂಬಂತೆ ಆಗಿಹೋಗಿದೆ. ಕಾರಣ ಇದು ಇಂಟರ್ನೆಟ್, ಮೊಬೈಲ್ ಜಮಾನ. ಯಾವುದಾದರೂ ಸೈಬರ್ ಕೆಫೆಗಳಲ್ಲಿ ಹೊಕ್ಕರೆ ಸಾಕು, ಅಲ್ಲಿ ಎಲ್ಲವೂ ಲಭ್ಯ!
ಸಾಲದೆಂಬಂತೆ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಾ, ಆ ಅಭಿವೃದ್ಧಿಯು ತನ್ನೊಟ್ಟಿಗೆ ಅನೇಕ ಅಪಾಯಗಳನ್ನೂ ಹೊತ್ತು ಸಾಗುತ್ತಿದೆ. ಸ್ಮಾರ್ಟ್ ಫೋನ್ ಎಂಬ ಮಾಯಾಲೋಕದ ತಂತ್ರಜ್ಞಾನ, ಅದರಲ್ಲೂ ಕೆಲವು ವರ್ಷಗಳ ಹಿಂದೆ ಪರಿಚಯಗೊಂಡ ವ್ಯಾಟ್ಸ್ಆ್ಯಪ್ ಎಂಬ ಸಾಮಜಿಕ ತಾಣದ ತಂತ್ರಾಂಶವು ಎಲ್ಲಾ ರೀತಿಯ ಸೆನ್ಸಾರ್ಗಳ ನೀತಿ ನಿಯಮಗಳ ಗೋಡೆಗಳನ್ನು ಒಡೆದು ಹಾಕಿ ನೇರವಾಗಿ ಯುವಕರ ಅಂಗೈ ಸೇರಿಹೋಗಿದೆ. ಹಾಗಂತ ವ್ಯಾಟ್ಸ್ಆ್ಯಪ್ನಿಂದ ಅನುಕೂಲಗಳು ಇಲ್ಲವೆಂದೇನಲ್ಲ. ಹೇಗೆಂದರೆ ಕಾಲೇಜಿಗೆ ಹೊರಟ ಮಗ ಅಥವಾ ಮಗಳು ಕಾಲೇಜಿಗೆ ಚಕ್ಕರ್ ಹಾಕಿ ಸ್ನೇಹಿತರೊಂದಿಗೆ ಪಿಕ್ಚರ್ ಅಥವಾ ಇನ್ನೆಲ್ಲಿಗೋ ಹೊರಟರು ಎಂದಿಟ್ಟುಕೊಳ್ಳಿ, ತಂದೆ ಫೋನ್ ಮಾಡಿದಾಗ ಮಗ/ಮಗಳು ತಾನು ಕಾಲೇಜಿನಲ್ಲಿದ್ದೇನೆ ಎಂದು ಸುಳ್ಳು ಹೇಳಿದರೆ, ಬುದ್ಧಿವಂತ ತಂದೆಯ "ಹೌದಾ, ಹಾಗಿದ್ದರೆ ಕಾಲೇಜಿನಲ್ಲಿ ಟೀಚರ್ ಜತೆ ನಿಂತು ಫೋಟೋ ತೆಗೆದು ಅದನ್ನು ವ್ಯಾಟ್ಸ್ಆ್ಯಪ್ನಲ್ಲಿ ಕಳಿಸು" ಎಂದರೆ ಕಳ್ಳ ಸಿಕ್ಕಿ ಬೀಳುತ್ತಾನೆ. ಇಂತಹ ಇನ್ನೂ ಅನೇಕ ಸಾಂದರ್ಭಿಕ ಅನುಕೂಲಗಳಿವೆ.
ಫೇಸ್ಬುಕ್ನಂತಹ ಸಾಮಾಜಿಕ ತಾಣಗಳಲ್ಲಿ ಅಸಭ್ಯ/ ಭೀಕರ ಚಿತ್ರಗಳನ್ನು, ವೀಡಿಯೋಗಳನ್ನು ಅಪ್ಲೋಡ್ ಮಾಡುವುದಕ್ಕೆ ಮುಜಗರ ಮತ್ತು ಭಯವಾದರೂ ಇರುತ್ತದೆ. ಆದರೆ ಈಗ ಅತಿವೇಗದಲ್ಲಿ ಜನಪ್ರಿಯವಾಗುತ್ತಿರುವ ವ್ಯಾಟ್ಸ್ಆ್ಯಪ್ನಲ್ಲಿ ಹೀಗಿಲ್ಲ. ಮುಖದಗಲದ ಸ್ಮಾರ್ಟ್ಫೋನನ್ನು ಉಪಯೋಗಿಸುವ ಮನೆಗಳಲ್ಲಿ ಮಕ್ಕಳು ಗೇಮ್ ಅಥವಾ ಇನ್ನಾವುದೋ ಕುತೂಹಲಕ್ಕಾಗಿ ತಂದೆ ಮನೆಗೆ ಬಂದ ತಕ್ಷಣವೇ ಮೊಬೈಲನ್ನು ನೋಡುತ್ತಾರೆ. ಆಗ ಅದರಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಕತ್ತನ್ನು ಕೋಳಿ ಕೊಯ್ಯುವ ಹಾಗೆ ಕೊಯ್ಯುವ, ಗುಂಡಿಟ್ಟು ತಲೆಯನ್ನು ಛಿದ್ರಗೊಳಿಸುವ, ರಸ್ತೆಯಲ್ಲಿ ಬೇಕೆಂದೇ ಅಪಘಾತಗೊಳಿಸಿ ಕೊಲ್ಲುವ ಭಯಾನಕವಾದ, ಅಸಹ್ಯವೆನಿಸುವ ವಿಡಿಯೋಗಳು, ಚಿತ್ರಗಳು ಪುಟ್ಟ ಮಗುವಿಗೆ ಸಿಕ್ಕಿಬಿಡುತ್ತಿವೆ. ಅಷ್ಟೇ ಅಲ್ಲ ಕೋಮುಸೌಹಾರ್ದವನ್ನು ಕೆಣಕುವಂಥ ಅನೇಕ ಚಿತ್ರಗಳೂ ಇಂದು ಫೋನಿಂದ ಫೋನಿಗೆ ಲೀಲಾಜಾಲಾವಾಗಿ ಹರಿದಾಡಿ ಯುವಜನಾಂಗದ ಮನಸು ಕೆಡಿಸುತ್ತಿವೆ. ಅದರಲ್ಲೂ ಇಂಥವುಗಳು ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲವೋ ಯೋಚಿಸಿ? ಈ ಕುರಿತು ಯೋಚಿಸಲೇಬೇಕಿದೆ. ಕೆಲವರಿಗೆ ಇಂತಹ ಫೈಲ್ಗಳನ್ನು ಸಂಗ್ರಹಿಸಿ ರವಾನಿಸುವುದೇ ಒಂದು ಚಟವಾಗಿಬಿಟ್ಟಿದೆ.
ಹಿಂದೆ ಮಕ್ಕಳು ಸಿನಿಮಾದಿಂದ ಹಾಳಾಗುತ್ತಾರೆ ಎನ್ನುತ್ತಿದ್ದರು. ಆಗ ಊರಿಗೆ ಒಂದು ಅಥವಾ ಊರಿಗೆ ದೂರದಲ್ಲಿ ಚಿತ್ರಮಂದಿರಗಳಿರುತ್ತಿದ್ದವು. ಮಕ್ಕಳು ಅಲ್ಲಿಗೆ ತೆರಳುವುದನ್ನು ಸುಲಭವಾಗಿ ತಡೆಯಬಹುದಾಗಿತ್ತು. ಆದರೆ ಇಂದು ನಮ್ಮ ಮನೆಯಲ್ಲೇ ಮಕ್ಕಳ ದಿಕ್ಕು ತಪ್ಪಿಸಿಬಿಡಬಹುದಾದಂಥ ಉಪಕರಣಗಳು ಬಂದು ಕೂತಿವೆ. ಅಂದು ಸೆನ್ಸಾರ್ ಮಂಡಳಿ ಚಲನಚಿತ್ರದಲ್ಲಿ ಸೃಷ್ಟಿಸಲಾದ ಹೊಟ್ಟೆಗೆ ಚಾಕು ತಿವಿಯುವ ನಕಲಿ ಸನ್ನಿವೇಶವನ್ನು ಕತ್ತರಿಸಿ ಬಿಸಾಡಿದರೆ, ಇಂದು ಕ್ರೌರ್ಯದ, ಹಿಂಸೆಯ ಮತ್ತು ಭಯಾನಕದ ಪರಮಾವಧಿಯಾದ ಮನುಷ್ಯನ ಕತ್ತನ್ನು ತುಂಡರಿಸುವ ಅಸಲಿ ತುಣುಕುಗಳು ಅಂಗೈಯಲ್ಲೇ ಅದೂ ಮಕ್ಕಳಿಗೂ ಕಾಣುವಂತಾಗಿದೆ. ಇಂತಹವುಗಳು ಮನೆಯಲ್ಲೇ ಅಲ್ಲದಿದ್ದರೂ ಮಕ್ಕಳು ಆಟವಾಡಲು ಹೋಗುವ ಪಕ್ಕದ ಮನೆಯ ಹತ್ತನೇ ತರಗತಿಯ ಹುಡುನ ಮೊಬೈಲ್ನಲ್ಲೂ ಸಿಗಬಹುದು ಅಥವಾ ಸಾರ್ವಜನಿಕ ಬಸ್ಸಿನಲ್ಲಿ ಕುಳಿತು ನೋಡುವ ಕಾಲೇಜಿನ ಯುವಕರ ಕೈಯಲ್ಲೂ ಮಕ್ಕಳಿಗೆ ಕಾಣಬಹುದಾದ ಅವಕಾಶಗಳಿವೆ. ಇಂದಿನ ದೃಶ್ಯಮಾಧ್ಯಮದಲ್ಲಿ ಶವದ ಚಿತ್ರಗಳನ್ನು ಮಂಕುಮಾಡಿ ಸುದ್ದಿಯನ್ನು ಬಿತ್ತರಿಸಲಾಗುತ್ತದೆ. ಆದರೆ ವ್ಯಾಟ್ಸ್ಆ್ಯಪ್ನಲ್ಲಿ ಅಸಲಿ ಚಿತ್ರಗಳು ಹರಿದಾಡುತ್ತವೆ. ಸೆನ್ಸಾರ್ ಮಂಡಳಿಯಷ್ಟೇ ಅಲ್ಲ ಯಾವ ಕಾನೂನೂ ನೇರವಾಗಿ ನಿಯಂತ್ರಿಸಲಾಗದ ಬೆಳವಣಿಗೆಗಳು ಇಂದು ಅತಿಯಾದ ತಂತ್ರಜ್ಞಾನದಿಂದಾಗಿ ಕಾಣಿಸಿಕೊಳ್ಳುತ್ತಿವೆ. ಇಂದು ಬೆಳೆವ ಮಕ್ಕಳಿಗೆ ಸಮಾಜದಲ್ಲಿ ಸನ್ಮಾರ್ಗದಲ್ಲಿ ಸಾಗಲು ದಾರಿ ಒಂದೆರಡಿದ್ದರೆ, ಹಾಳಾಗಿ ಕುಲಗೆಟ್ಟು ಹೋಗಲು ಹತ್ತಾರು ಹಾದಿಗಳಿವೆ. ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದಂತೆ. ಅದರಲ್ಲಿ ಸುಂದರ ಅಕ್ಷರಗಳನ್ನು ಬರೆದರೆ ಮುಂದೆ ಅದು ಅವರ ಮೂಲಕ ಸಮಾಜದಲ್ಲಿ ಪ್ರತಿಫಲನವಾಗುತ್ತದೆ. ಅದೇ ಹಾಳೆಯ ಮೇಲೆ ಚಾಕುವಿನಿಂದ ಗೀಚಿದರೆ ಅದು ಮುಂದೆ ಇನ್ನೂ ಹೊಸರೀತಿಯ ಹುಚ್ಚು, ವಿಕೃತಿಗಳಿಗೆ ಕಾರಣವಾಗುತ್ತದೆ. ಈ ಅಪಾಯದ ಬಗ್ಗೆ ಯೋಚಿಸಿ ಪೋಷಕರು ಮಕ್ಕಳನ್ನು ಬಹು ಎಚ್ಚರಿಕೆಯಿಂದ ಬೆಳಸಬೇಕಾದ ಸವಾಲನ್ನು ಎದುರಿಸಬೇಕಾಗಿದೆ. ಇಲ್ಲಿ ಮೊಬೈಲ್ ಬಳಕೆ ಅಥವಾ ತಂತ್ರಜ್ಞಾನವನ್ನು ಅಲ್ಲಗಳೆಯುತ್ತಿಲ್ಲ. ಆದರೆ ಇವು ಮಕ್ಕಳ ಆರೋಗ್ಯಕರ ಭವಿಷ್ಯಕ್ಕೆ ಪೂರಕವಾಗಬೇಕೇ ಹೊರತು ಮಾರಕವಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲರಲ್ಲೂ ಇದೆ ಅಲ್ಲವೇ?
- ದೇ. ವಿ. ಮಹೇಶ್ವರ ಹಂಪಿ