ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಔಷಧೀಯ ಸಸ್ಯಗಳ ಸಾಲಿನಲ್ಲಿ ಹೆಜ್ಜೆ ಹಾಕಿದಾಗ

ಹೋದ ವಾರ ಗುಲ್ಬರ್ಗದಲ್ಲಿ ನೆನೆಗುದಿಗೆ ಬಿದ್ದಿದ್ದ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರ ಬಗ್ಗೆ ಪ್ರಸ್ತಾಪಿಸಿದ್ದೆ.

Srinivasa Murthy VN
Updated On : 2 Jun 2014, 1:05 am

ಹೋದ ವಾರ ಗುಲ್ಬರ್ಗದಲ್ಲಿ ನೆನೆಗುದಿಗೆ ಬಿದ್ದಿದ್ದ ಶರಣಬಸವೇಶ್ವರ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರ ಬಗ್ಗೆ ಪ್ರಸ್ತಾಪಿಸಿದ್ದೆ. ಇದೇ ಮಾದರಿಯಲ್ಲಿ ಹಲವಾರು ಯೋಜನೆಗಳನ್ನು ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಕೈಗೊಂಡೆವು.  
ದುರದೃಷ್ಟವಶಾತ್ ಬೃಹತ್ ಆಶಯದೊಂದಿಗೆ ಆರಂಭಗೊಂಡು ನಂತರ ನೆನೆಗುದಿಗೆ ಬಿದ್ದ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕಂಡಿದ್ದೇವೆ. ಉದಾಹರಣೆಗೆ ಅರಣ್ಯ ಇಲಾಖೆ ನಿರ್ಮಿಸಿದ ಒಂದು 'ನಿಸರ್ಗ ಧಾಮ' ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪ್ರತಿವರ್ಷ ಸ್ವಲ್ಪ ಧನಸಹಾಯ ಪಡೆಯುತ್ತಾ ಬಂದಿದೆ, ಅದು ಲೋಕಾರ್ಪಣೆ ಆಗಿರಲಿಲ್ಲ. ಈ ವಿಷಯವನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರ ಮುಂದೆ ಮಂಡಿಸಿದಾಗ ಅವರು ತಕ್ಷಣ ಇದಕ್ಕಾಗಿ ಬೇಕಾಗಿರುವ ಬಾಕಿ ಅನುದಾನವನ್ನು ನೀಡಲು ಒಪ್ಪಿಕೊಂಡರು. ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ರಾಧಾರವರು ಈ ಯೋಜನೆಯಲ್ಲಿ ತುಂಬಾ ಆಸಕ್ತಿ ವಹಿಸಿದರು.  ಆದರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಲವು ಅಡಚಣೆ ಅನುಭವಿಸುತ್ತಾ ಇದ್ದರು.  ಉದಾಹರಣೆಗಾಗಿ, ಉಪ್ಲಾವ್ ಗುಡ್ಡಕ್ಕೆ ವಿದ್ಯುತ್ತಿನ ವ್ಯವಸ್ಥೆ ಕಡಿತವಾಗಿತ್ತು, ಏಕೆಂದರೆ ಹಿಂದಿನ ಬಿಲ್‌ಗಳ ಪಾವತಿ ಆಗಿರಲಿಲ್ಲ. ಅರಣ್ಯ ಇಲಾಖೆ ಹತ್ತಿರ ನಿರ್ವಹಣಾ ವೆಚ್ಚಕ್ಕಾಗಿ ಹಣ ಇರಲಿಲ್ಲ ಮತ್ತು ಆ ಯೋಜನೆಯಿಂದ ಯಾವುದೇ ಸಹಾಯ ಆಗದೇ ಇರುವುದರಿಂದ ನಿರ್ವಹಣೆ ಮಾಡಲು ದಿನನಿತ್ಯದ ಖರ್ಚು ಹಾಗೂ ಕಾವಲುಗಾರರು, ಉದ್ಯಾನವನದ ಮಾಲಿಗಳು ಮುಂತಾದ ಸಿಬ್ಬಂದಿಗಳನ್ನು ಕೂಡ ಒದಗಿಸಲು ಸಮಸ್ಯೆ ಆಗುತ್ತಿತ್ತು. ಆಗ, ನಿಮಗೆ ಈ ಹಿಂದೆ ತಿಳಿಸಿದ ಶರಣಬಸವೇಶ್ವರ ಕೆರೆಯ ಪುನುರುತ್ಥಾನದ ಮಾದರಿಯಲ್ಲಿ ಉಪ್ಲಾವ್ ನಿಸರ್ಗ ಧಾಮದಲ್ಲಿ ಕೂಡ ಐದು, ಹತ್ತು ರುಪಾಯಿ ಪ್ರವೇಶ ಶುಲ್ಕವನ್ನು ಇರಿಸಿ, ಬಾಹ್ಯ ಸಂಪನ್ಮೂಲಗಳ ಮೂಲಕ ನಿರ್ವಹಣೆ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಲಾಯಿತು.  
ಸುತ್ತಮುತ್ತ ಬಯಲು ಪ್ರದೇಶ ಇದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಸುಮಾರು ನಲವತ್ತು ಎಕರೆ ಈ ಉಪ್ಲಾವ್ ಗುಡ್ಡ ಅರಣ್ಯ ಇಲಾಖೆ ವಶದಲ್ಲಿ ಇರುವುದರಿಂದ ಇದರ ಮೇಲೆ ಯಾವುದೇ ಒತ್ತುವರಿಯನ್ನು ಮಾಡಲು ಜನರಿಗೆ ಸಾಧ್ಯವಾಗಿರಲಿಲ್ಲ. ಮಾತ್ರವಲ್ಲ ಈ ಗುಡ್ಡವನ್ನು ಬಳಸಿ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ವತಿಯಿಂದ ಕಾಮಗಾರಿಗಳನ್ನು ತೆಗೆದುಕೊಳ್ಳಲಾಯಿತು. ಮೆಟ್ಟಿಲು ಅಥವಾ ಸುತ್ತ ಮಣ್ಣಿನ ರಸ್ತೆ ಮೂಲಕ ಗುಡ್ಡದ ಮೇಲೆ ಹತ್ತಿದರೆ ಬಹಳ ಸುಂದರವಾದ ದೃಶ್ಯ ಕಾಣುತ್ತಿತ್ತು. ವಿಶೇಷವಾಗಿ ರಾತ್ರಿ ವೇಳೆ ತಾರೆಗಳು ಧರೆಗಿಳಿದಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಮಾತ್ರವಲ್ಲ ಸಾಮಾನ್ಯವಾಗಿ ಒಣ ಭೂಮಿ ಹಾಗೂ ಬಿಸಿಲು ಪ್ರದೇಶವಾದ ಗುಲ್ಬರ್ಗದ ಭೂದೃಶ್ಯ ಸಂಪೂರ್ಣ ಭಿನ್ನವಾಗಿ ಕಾಣುತ್ತಿತ್ತು. ಹಸಿರು ಚೆಲ್ಲಿ ಮರಗಳೆಲ್ಲ ತಂಪು ವಾತಾವರಣವನ್ನು ನಿರ್ಮಿಸಿದ್ದವು. ಹಾಗಾಗೇ ಜನರು ಈ ಗುಡ್ಡಕ್ಕೆ ಬರಲು ಇಷ್ಟಪಡುತ್ತಿದ್ದರು. ಮಕ್ಕಳಿಗೆ ಚಾರಣ ಹವ್ಯಾಸವನ್ನು ಬೆಳೆಸಿಕೊಳ್ಳುವ ಒಂದು ಸಣ್ಣ ಅವಕಾಶ ಸಿಕ್ಕಿತು. ಅಲ್ಲದೇ ಅವರಿಗಾಗಿ ಅರಣ್ಯ ಜೀವಿಗಳ ಪ್ರತಿಮೆಗಳನ್ನೂ ನಿರ್ಮಿಸಲಾಗಿತ್ತು. ಹುಲಿ, ಜಿರಾಫೆ, ಜಿಂಕೆ, ನವಿಲು, ಚಿರತೆ, ಕರಡಿ, ಡೈನಾಸಾರ್, ಮೊಸಳೆ ಮುಂತಾದ ಪ್ರತಿಮೆಗಳನ್ನು ನೋಡಿ ಮಕ್ಕಳು ಖುಷಿಪಡುತ್ತಿದ್ದರು. ಜೊತೆಗೆ ಕಾರಂಜಿ, ಪ್ಯಾರಾಬೋಲ, ಕುಳಿತುಕೊಳ್ಳುವುದಕ್ಕೆ ಪೀಠಗಳ ಮತ್ತು ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಒಂದು ಸಣ್ಣ ಅತಿಥಿ ಗೃಹ ಮತ್ತು ಅಡುಗೆಮನೆಯನ್ನು ಕಟ್ಟಿ, ಅಲ್ಲಿ ಸಣ್ಣಪುಟ್ಟ ತಿನಿಸುಗಳ ವ್ಯವಸ್ಥೆಯನ್ನು ಕೂಡ ಮಾಡಲಾಯಿತು. ಹೀಗಾಗಿ ಪರಿಸರದಲ್ಲಿ ಕಲಿಕೆ ಅವಕಾಶದ ಜೊತೆಗೆ ಮನೋರಂಜನೆ ಅನುಭವಿಸಲು ಗುಲ್ಬರ್ಗ ನಗರದಲ್ಲಿ ಎರಡನೇ ಉದ್ಯಾನವನ ನಿರ್ಮಾಣವಾಗಿದ್ದು ಜನರಿಗೆ ಸಂತಸವನ್ನು ನೀಡಿತ್ತು.  
ಅರಣ್ಯ ಇಲಾಖೆಯಿಂದ ಬಂದ ಇನ್ನೊಂದು ಅದ್ಭುತ ಯೋಜನೆ ಎಂದರೆ ವೈದ್ಯಕೀಯ ಸಸ್ಯಗಳನ್ನು ಬೆಳೆದದ್ದು. ಬೀದರ್‌ನಲ್ಲಿ 'ದೇವ ದೇವ ವನ' ಎಂಬ ಅತಿ ಸುಂದರ ಉದ್ಯಾನವನ ನಿರ್ಮಿಸಲಾಗಿರುವ ಬಗ್ಗೆ ಸಂರಕ್ಷಣಾಧಿಕಾರಿಗಳು ನನಗೆ ತಿಳಿಸಿದರು. ನಾನು ತುಂಬಾ ಕುತೂಹಲದಿಂದ ಅಲ್ಲಿಗೆ ಭೇಟಿ ನೀಡಿದೆ. ಅಲ್ಲಿನ ಭೇಟಿಯನ್ನೂ ನನಗೆ ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ. ನಮ್ಮ ವೇದ ಪುರಾಣದಲ್ಲಿ ಇರವಂಥ ಬಹುಮೂಲ್ಯ ಜ್ಞಾನವನ್ನು ಬಳಸಿ ಇವತ್ತಿನ ಜೀವನ ಶೈಲಿಗೆ ಅನುಕೂಲವಾಗುವಂತೆ ನಿರ್ಮಾಣವಾದ ಈ 'ದೇವ ದೇವ ವನದ' ವಿವರವನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇನೆ.
ಬೀದರ್ ಅರಣ್ಯ ವಿಭಾಗದಲ್ಲಿರುವ ಶಹಪೂರ ರಕ್ಷಿತಾರಣ್ಯದಲ್ಲಿರುವ 'ದೇವ ದೇವ ವನ' ಉದ್ಯಾನ ಶೈಕ್ಷಣಿಕ ಕೇಂದ್ರ. ಈ ಉದ್ಯಾನವನವು ಸುಮಾರು ನೂರೈವತ್ತು ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದೆ. ಹುಲ್ಲುಹಾಸು, ಪ್ಯಾರಾಬೋಲಾ ಹಾಗೂ ಕಾರಂಜಿಗಳನ್ನು ಹೊರತುಪಡಿಸಿ ಈ ಉದ್ಯಾನದಲ್ಲಿ ಇನ್ನೂರು ಅಮೂಲ್ಯ ಹಾಗೂ ಪವಿತ್ರ ಔಷಧೀಯ ಸಸ್ಯಗಳು ನೆಲೆಯೂರಿವೆ. ಪವಿತ್ರವಾದ ವನ ಕಲ್ಪನೆಯನ್ನು ಅನುಸರಿಸಿಕೊಂಡು ಇದನ್ನು ನಿರ್ಮಿಸಲಾಗಿದೆ. ಉದಾಹರಣೆಗೆ, ಬೃಹತ್ ಪಂಚವಟಿ ವನ, ಶಿವ ಪಂಚವಟಿ ವನ, ನವಗ್ರಹ ವನ, ರಾಶಿ ವನ, ಫಲಪುಷ್ಪ ಪತ್ರಿ ವನ ಮತ್ತು ಅಶೋಕ ವನ ಇತ್ಯಾದಿ.
ಈ ಉಪಉದ್ಯಾನವನಗಳನ್ನು ಅಭಿವೃದ್ಧಿಪಡಿಸುವಾಗ ಶಾಸ್ತ್ರಗಳಲ್ಲಿ ಹೇಳಿರುವ ರೀತಿ-ರಿವಾಜುಗಳನ್ನು ಅನುಸರಿಸಿರುವ ಬಗ್ಗೆ ಸಿಬ್ಬಂದಿ ಬಹಳ ಆಸಕ್ತಿಯಿಂದ ಹೇಳುತ್ತಾರೆ. ಶಾಸ್ತ್ರದಲ್ಲಿ ಒಂದು ಸಸಿ ತಳಿಯನ್ನು ಇಂತಹುದೇ ಸಮಯದಲ್ಲಿ ನೆಡಬೇಕು ಎಂದು ಹೇಳಿದ್ದರೆ, ಅದೇ ಸಮಯದಲ್ಲೇ ಸಸಿಗಳನ್ನು ನೆಡಲಾಗಿದೆ. ಅಂತೆಯೇ ಕೆಲವೊಮ್ಮೆ ಮಧ್ಯರಾತ್ರಿಯಲ್ಲೂ ಸಸಿ ನೆಟ್ಟಂತಹ ಪ್ರಸಂಗಗಳಿವೆ. ಬೃಹತ್ ಪಂಚವಟಿ ವನದ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಪ್ರಸ್ತಾಪವಿದೆ.  
ದೇವ ದೇವ ವನದಲ್ಲಿ ಸಸಿಗಳನ್ನು ಈ ಕೆಳಗಿನ ಅನುಕ್ರಮದಲ್ಲಿ ನೆಡಲಾಗಿದೆ. ಬಿಲ್ವ, ಅಶೋಕ, ಕೃಷ್ಣ ಆಲದ ಮರ, ನೆಲ್ಲಿಕಾಯಿ ಮತ್ತು ಅರಳಿ.
ಶಿವ ಪಂಚವಟಿ ವನ- ಪೌರಾಣಿಕ ನಂಬಿಕೆಯ ಆಧಾರದಲ್ಲಿ ಕೆಲವು ಮರಗಳು ದೇವತೆಗಳಿಗೆ ಪ್ರಿಯವಾಗಿರುತ್ತವೆ ಎಂದು ಪರಿಗಣಿಸಲಾಹುತ್ತದೆ. ಹಾಗಾಗೆ ಪಂಚವಟಿ ವನದಲ್ಲಿ ಈಶ್ವರ ಬಿಲ್ವ, ವಿಷ್ಣು ತುಳಸಿ, ಸೂರ್ಯ ಅಶ್ವತ್ಥ/ಅರಳಿ, ಗಣಪತಿ ಕಗ್ಗಲಿ, ಅಂಬಿಕ ಅಶೋಕ, ಶಂಖಪುಷ್ಪಿ ಇತ್ಯಾದಿ. ಇಷ್ಟೇ ಅಲ್ಲದೆ ಇನ್ನೂ ಅನೇಕ ಔಷಧಿಯ ತಳಿಗಳನ್ನು ದೇವ ದೇವ ವನದಲ್ಲಿ ನೆಡಲಾಗಿದೆ. ಕೆಲವು ಮುಖ್ಯ ಔಷಧೀಯ ಸಸ್ಯಗಳು ಈ ಕೆಳಗಿನಂತಿವೆ.
ಅಡುಸೂಗಿ: ಕೆಮ್ಮು, ನೆಗಡಿ, ಅಸ್ತಮಾ ಶಮನದಲ್ಲಿ ಬೇರು ಮತ್ತು ಎಲೆಗಳನ್ನು ಬಳಸಲಾಗುತ್ತದೆ. ಜೊತೆಗೆ ಚರ್ಮ ಸಂಬಂಧಿ ರೋಗಗಳಲ್ಲೂ ಬಳಕೆಯಾಗುತ್ತದೆ. ಹೂವುಗಳನ್ನು ರೋಗ ನಿರೋಧಕವಾಗಿ ಬಳಸಬಹುದು. ಎಲೆಯನ್ನು ಅರೆದು ಮೂಗಿನಿಂದ ರಕ್ತ ಸೋರುವಾಗ ಚಿಕಿತ್ಸೆಗೆ ಉಪಯೋಗಿಸಬಹುದು.
ದೊಡ್ಡ ತಗಚೆ: ಎಲೆಗಳನ್ನು ತುರಿಕಜ್ಜಿ ಹಾಗೂ ಇಸಬು ಶಮನದಲ್ಲಿ ಬಳಸಬಹುದು. ಎಲೆಯನ್ನು ಅರೆದು ಹಳದಿಯೊಂದಿಗೆ ಉತ್ತಮ ಚರ್ಮ ಲೇಪನವಾಗಿ ಬಳಸಬಹುದು. ಎಲೆಯ ಕಷಾಯ ಅಸ್ತಮಾ ಶಮನಕ್ಕೆ ಉಪಯೋಗಕಾರಿ.
ಕರಿ ದತ್ತೂರ: ಬೀಜ, ಎಲೆ ಹಾಗೂ ಬೇರು ಮಸ್ತಿಷ್ಕ ಸಂಬಂಧಿ ರೋಗಗಳಲ್ಲಿ ಬಳಸಲಾಗುತ್ತದೆ.
ಕರಿ ಚಿತ್ರ ಮೂಲ: ಸಂಧಿವಾತ, ಲಕ್ವ ಹಾಗೂ ಕುಷ್ಠ ರೋಗ ಶಮನಗಳಲ್ಲಿ ಇದರ ಬೇರು ಬಳಕೆಯಾಗುತ್ತದೆ.  ಎಲೆಯನ್ನು ಅರ್ಬುಧ ರೋಗ ಶಮನಕ್ಕಾಗಿ ಬಳಸುತ್ತಾರೆ.
ಇದೇ ರೀತಿಯ  ಔಷಧೀಯ ಗುಣ ಹೊಂದಿರುವ ಅನೇಕ ಸಸ್ಯ ಹಾಗೂ ಮರಗಳ ವಿವರವನ್ನು ನಿಮಗೆ ಮುಂದಿನವಾರ ತಿಳಿಸುತ್ತೇನೆ.

-ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement