ಅಂಕಣಗಳು

ಮನುಷ್ಯರು ಸಾಯುತ್ತಾರೆ, ಅವರ ವಿಚಾರಗಳಲ್ಲ. ಮಹಾನ್ ವ್ಯಕ್ತಿಗಳ ಕಣ್ಣುಗಳಿಂದ ವಾಸ್ತವವನ್ನು ನೋಡುವುದಕ್ಕೆ ಇದು ಸಕಾಲ

ನಮ್ಮ ಭೂಮಿಯನ್ನು ಸ್ವರ್ಗ ಮಾಡಬೇಕು ಎಂದು ಎಲ್ಲ ಮಹಾನ್ ವ್ಯಕ್ತಿಗಳ ಮಾತುಗಳು..

ಮನುಷ್ಯರು ಸಾಯುತ್ತಾರೆ, ಅವರ ವಿಚಾರಗಳಲ್ಲ. ಮಹಾನ್ ವ್ಯಕ್ತಿಗಳ ಕಣ್ಣುಗಳಿಂದ ವಾಸ್ತವವನ್ನು ನೋಡುವುದಕ್ಕೆ ಇದು ಸಕಾಲ
ಕವಿಯನ್ನು ಸ್ವಲ್ಪವೇ ಉತ್ತಮಪಡಿಸಲು: ನಮ್ಮ ಭೂಮಿಯನ್ನು ಸ್ವರ್ಗ ಮಾಡಬೇಕು ಎಂದು ಎಲ್ಲ ಮಹಾನ್ ವ್ಯಕ್ತಿಗಳ ಮಾತುಗಳು ನಮಗೆ ನೆನಪಿಸುತ್ತವೆ. ನಮ್ಮ ದೇಶದಲ್ಲಿ ಬದಲಾವಣೆ ಬಂದಿರುವ ಈ ಹೊತ್ತಿನಲ್ಲಿ ಕೆಲವು ಮಹಾನ್ ಚಿಂತಕರು ವ್ಯಕ್ತಪಡಿಸಿದ ವಿಚಾರಗಳು ಮತ್ತು ಅವರ ಸಲಹೆಗಳು ಅಸಾಮಾನ್ಯವಾಗಿ ಅರ್ಥವನ್ನು ಧ್ವನಿಸುತ್ತವೆ. ಹೊಸ ನಾಯಕರ ಬಾಗಿಲನ್ನು ಬಡಿಯುತ್ತಿರುವ ಅವಕಾಶವು ಅಭೂತಪೂರ್ವವಾದದ್ದು. ರಾಜಕಾರಣಿಗಳು ತಮ್ಮ ಹಿಂದಿನ ಮನಸ್ಥಿತಿಯಲ್ಲಿಯೇ ಉಳಿದಿದ್ದಾರೆ. ಗೆದ್ದವರು ಹುದ್ದೆಗಳಿಗಾಗಿ ವ್ಯೂಹ ರಚನೆ ಮಾಡುತ್ತಿದ್ದಾರೆ. ಸೋತವರು ತಾವು ತಿರಸ್ಕೃತರಾಗುವುದಕ್ಕೆ ಸಂಬಂಧಿಸಿದ ವಾಸ್ತವವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ. ಜನರಿಗೆ ಸ್ವಲ್ಪ ಬಿಡುವು ಬೇಕಾಗಿದೆ. ಮಹಾನ್ ವ್ಯಕ್ತಿಗಳು ನಮ್ಮ ಬಗ್ಗೆ ತೇಲಿಬಿಟ್ಟ ಮಾತುಗಳಲ್ಲಿ ಈ ಬಿಡುವನ್ನು ನಾವು ಕಂಡುಕೊಳ್ಳಬೇಕಾಗಿದೆ.
ಫ್ರಾನ್ಸಿಸ್ ಬೇಕನ್ (ನಿಧನ 1626) ನಮ್ಮನ್ನು ನೆನಪಿಸಿದ್ದು ಹೀಗೆ: "ದೊಡ್ಡ ಸ್ಥಾನಗಳಲ್ಲಿರುವ ಮನುಷ್ಯರು ಮೂರು  ಬಾರಿ ಸೇವಕರಾಗುತ್ತಾರೆ: ಸಾರ್ವಭೌಮ ರಾಷ್ಟ್ರದ ಸೇವಕರು, ಪ್ರಸಿದ್ಧಿಯ ಸೇವಕರು ಮತ್ತು ವ್ಯವಹಾರದ ಸೇವಕರು. ಹೀಗಾಗಿ ಅವರಿಗೆ ವೈಯಕ್ತಿಕವಾಗಿಯಾಗಲಿ ಅವರ ಕ್ರಿಯೆಗಳಲ್ಲಾಗಲಿ ಇಲ್ಲವೆ ಅವರ ಸಮಯದಲ್ಲಾಗಲಿ ಸ್ವಾತಂತ್ರ್ಯ ಎನನ್ನುವುದೇ ಇರುವುದಿಲ್ಲ. ಅಧಿಕಾರವನ್ನು ಅಪೇಕ್ಷಿಸುವುದು ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ವಿಚಿತ್ರ ಬಯಕೆ."
 ಹೆನ್ರಿ ಫೀಲ್ಡಿಂಗ್ (ನಿಧನ 1754) 'ಆ್ಯನ್ ಎಸ್ಸೇ ಆನ್ ನಥಿಂಗ್‌' ಬರೆದಿದ್ದಾರೆ. ಶೂನ್ಯದಿಂದ ಏನೂ ಬರುವುದಿಲ್ಲ ಎಂಬ ಹಳೆಯ ಸಾಮತಿಯೊಂದನ್ನು ಶೇಕ್ಸ್‌ಪಿಯರ್ ಅನುವಾದಿಸಿದ್ದಾರೆ. ಇದಕ್ಕಿಂತ ಸುಳ್ಳು  ಇನ್ನೊಂದಿಲ್ಲ. (ಇದನ್ನು ನಂತರ ಜೂಲಿ ಆಂಡ್ರೂಸ್ ತನ್ನ 'ದಿ ಸೌಂಡ್ ಆಫ್ ಮ್ಯೂಸಿಕ್‌'ನಲ್ಲಿ ಅಜರಾಮರಗೊಳಿಸಿದ. ಆಸಕ್ತಿದಾಯಕ ವಿಷಯವೆಂದರೆ, ಭಾರತೀಯ ತತ್ವಶಾಸ್ತ್ರವು ಶೂನ್ಯಕ್ಕಿಂತ ಪೂರ್ಣಕ್ಕೆ ಮಹತ್ವನೀಡುತ್ತದೆ. ಈಶೋಪನಿಷತ್‌ನ ಆರಂಭದ ಸಾಲುಗಳು 'ಪೂರ್ಣಮದಃ ಪೂರ್ಣಮಿದಂ' ತುಂಬ ವಿಶಿಷ್ಟವಾದದ್ದು. ಆ ಪೂರ್ಣದಿಂದ ಈ ಪೂರ್ಣವನ್ನು ತೆಗೆಯುವುದು ಅಥವಾ ಸೇರಿಸುವುದರಿಂದ ಪೂರ್ಣವು ಪೂರ್ಣವಾಗಿಯೇ ಉಳಿಯುತ್ತದೆ.)
 ಫೀಲ್ಡಿಂಗ್‌ನ ಸಮರ್ಥನೆಯೇನೆಂದರೆ, ಒಂದುವೇಳೆ ಎಲ್ಲದರಿಂದಲೂ ಶೂನ್ಯವೇ ಗಳಿಕೆಯಾದರೆ ಬುದ್ಧಿವಂತ ವ್ಯಕ್ತಿಯು ಭಯಭಕ್ತಿಯಿಂದ ಮತ್ತು ಮೆಚ್ಚುಗೆಯಿಂದ ಶೂನ್ಯವನ್ನೇ ಗೌರವಿಸಬೇಕು. "ಆಗ ನಾವು ಮೋಸಕ್ಕೆ ಒಳಗಾಗುವುದೇ ಇಲ್ಲ. ಆಗ ಸರ್ಕಾರದ ಮತ್ತು ಸಚಿವ ಖಾತೆಯಲ್ಲಿ ಆಗುವ ಎಲ್ಲ ಬದಲಾವಣೆಗಳಿಗೆ ಸದ್ಗುಣಿಗಳೂ, ಬುದ್ಧಿವಂತರೂ ಮತ್ತು ತಿಳಿದವರೂ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಿರುವಾಗ ತಾವೇ ಕಳಪೆಯಾಗಿದ್ದರೂ, ಕೆಳಮಟ್ಟದ ನೀಚತನದ ಸಾಧನ ಹೊಂದಿದ್ದರೂ, ಲಂಚಕ್ಕೆ ಮತ್ತು ಪುರಸ್ಕಾರಕ್ಕೆ, ನಿಜವಾದ ಸದ್ಗುಣಕ್ಕೆ, ಬುದ್ಧಿವಂತಿಕೆಗೆ, ತಿಳಿವಳಿಕೆಗೆ, ವಿವೇಕಕ್ಕೆ ಮತ್ತು ಸಮಗ್ರತೆಗೆ ಏನನ್ನೂ ಗಳಿಸಿಕೊಡದಿದ್ದರೂ ಅದರಲ್ಲೇ ದೇಶದ ಸಚಿವರು ಸಂತುಷ್ಟರಾಗಬೇಕು."
 ಟಿ.ಎನ್. ಮದನ್ (ಜನನ 1933) ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸಲ್ಪಟ್ಟ ಸಮಾಜಶಾಸ್ತ್ರಜ್ಞ. 1987ರಲ್ಲಿ ಅವರು ಬೋಸ್ಟನ್‌ನಲ್ಲಿ ಒಂದು ಉಪನ್ಯಾಸವನ್ನು ನೀಡಿದರು. 'ಭಾರತದಲ್ಲಿ ಧರ್ಮನಿರಪೇಕ್ಷತೆಯ ಭವಿಷ್ಯ' ವಿಷಯ. "ಪ್ರಸ್ತುತ ಸನ್ನಿವೇಶಗಳಲ್ಲಿ ಧರ್ಮನಿರಪೇಕ್ಷತೆ ಎಂಬುದು ದಕ್ಷಿಣ ಏಶಿಯಾದಲ್ಲಿ ಎಲ್ಲರೂ ಪಾಲ್ಗೊಳ್ಳುವಂಥ ಜೀವನ ರೀತಿಯಲ್ಲಿ ಅಸಾಧ್ಯವೆಂದು ನಾನು ಹೇಳುತ್ತೇನೆ. ಏಕೆಂದರೆ ಸರ್ಕಾರದ ಕ್ರಿಯೆಗಳು ಆಚರಣೆಗೆ ಸಾಧುವಾದುದಲ್ಲ ಮತ್ತು ಭವಿಷ್ಯದ ದರ್ಶನ ಮಾಡಿಸುವ ನೀಲನಕ್ಷೆಯೇ ನಿರ್ವೀರ್ಯವಾಗಿದೆ. ಎಲ್ಲರೂ ಪಾಲ್ಗೊಳ್ಳುವಂಥ ಜೀವನ ಶೈಲಿ ಅಸಾಧ್ಯ ಏಕೆಂದರೆ ದಕ್ಷಿಣ ಏಶಿಯಾದ ಬಹುಸಂಖ್ಯೆಯ ಜನರು  ಕೆಲವು ಧರ್ಮಗಳ ನಂಬಿಕೆಯಲ್ಲಿ ಬದುಕುವವರು. ಸರ್ಕಾರದ ಕಾರ್ಯಸೂಚಿಗಳು ಇಲ್ಲಿ ನಡೆಯುವುದಿಲ್ಲ. ಬೌದ್ಧ ಧರ್ಮ ಮತ್ತು ಇಸ್ಲಾಂ ಧರ್ಮಗಳು ದೇಶದ ಧರ್ಮವೆಂದು ಘೋಷಿಸಲಾಗಿದೆ. ಅವುಗಳಿಗೆ ಸರ್ಕಾರದ ರಕ್ಷಣೆ ಇದೆ. ಧಾರ್ಮಿಕವಾಗಿ ಅಲಿಪ್ತತೆ ಎಂಬುದು ಇಲ್ಲಿ ಸಾಧ್ಯವಿಲ್ಲ. ಸಮಾನ ದೂರವನ್ನು ಕಾಯ್ದುಕೊಳ್ಳುವುದೂ ಸಾಧ್ಯವಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರು ಬಹುಸಂಖ್ಯೆಯವರ ವಿಚಾರಗಳನ್ನು ಒಪ್ಪಿಕೊಳ್ಳುವುದಿಲ್ಲ. ಭವಿಷ್ಯಕ್ಕೆ ಇದೊಂದು ನಿರ್ವೀರ್ಯವಾದ ನೀಲನಕ್ಷೆ ಏಕೆಂದರೆ, ಇದರ ಮೂಲ ಸ್ವರೂಪವೇ ಧಾರ್ಮಿಕ ಮೂಲಭೂತವಾದವನ್ನು ಮತ್ತು ಧರ್ಮಾಂಧತೆಯನ್ನು ತಡೆಯುವಲ್ಲಿ ಅಸಾಮರ್ಥ್ಯದಿಂದ ಕೂಡಿದೆ.
 ಜಯಪ್ರಕಾಶ ನಾರಾಯಣ ಅವರು ಸಾಂಪ್ರದಾಯಿಕ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸುವ ಮಹಾತ್ಮ ಗಾಂಧಿಯವರ ವಿಚಾರಗಳನ್ನು  ಒಪ್ಪಲಿಲ್ಲ. ಈ ವಿಷಯದಲ್ಲಿ ಜಾತ್ಯತೀತೆಯನ್ನು ಬೆಳೆಸಿದ ಜವಾಹರಲಾಲ್ ನೆಹರುಗೆ ಅವರು ಹತ್ತಿರದವರಾಗಿದ್ದರು. ಹೀಗಿದ್ದರೂ ಅವರು 1977ರಲ್ಲಿ ಆರ್‌ಎಸ್‌ಎಸ್‌ನ ಪಾಟ್ನಾದಲ್ಲಿಯ ಶಿಬಿರವೊಂದಕ್ಕೆ ಭೆಟ್ಟಿ ನೀಡಿದ್ದರು. ಅಲ್ಲಿ ಜೆಪಿಯವರು ಹಿಂದೂ ಧರ್ಮದ ಸಾರ್ವತ್ರಿಕತೆಯ ಗುಣಗಳನ್ನು ಪ್ರಸ್ತಾಪಿಸಿದರು. 'ವೇದಗಳಲ್ಲಿ ನಂಬಿಕೆಯನ್ನು ಇಡುವವರನ್ನೂ ಅದನ್ನು ತಿರಸ್ಕರಿಸುವವರನ್ನೂ ಹಿಂದೂಗಳೆನ್ನತ್ತಾರೆ. ವಾಸ್ತವವೆಂದರೆ ಹಿಂದೂ ಎಂಬ ಪದ ಬಹಳ ಪ್ರಾಚೀನವೇನಲ್ಲ. ಮತ್ತು ಅದು ಯಾವುದೇ ಪ್ರಾಚೀನ ಕೃತಿಗಳಲ್ಲಿ ಇಲ್ಲ. ಇತರ ಜನರು 'ಸ'ವನ್ನು 'ಹ' ಎಂದು ಉಚ್ಚರಿಸುತ್ತಿದ್ದುದರಿಂದ ಸಿಂದ್ ಎಂಬುದು ಹಿಂದ್ ಆಗಿ ಅದೇ ಹಿಂದೂ ಎಂದಾಯಿತು. ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಮತ್ತು ಅದು ಒಂದು ಪ್ರಾದೇಶಿಕ ವ್ಯಾಪ್ತಿನ್ನು ಸೂಚಿಸುವುದು.'
 ಕೊನೆಯದಾಗಿ 20ನೆ ಶತಮಾನದ ದೊಡ್ಡ ತತ್ವಶಾಸ್ತ್ರಜ್ಞ ಹಾಗೂ ವಿವಾದ ಪುರುಷ ಸಿ.ಇ.ಎಂ ಜೋದ್ (ನಿಧನ 1953) ಅವರ ಮಾತುಗಳನ್ನು ಕೇಳೋಣ. ದೇಶವೊಂದರ ಆದರ್ಶವಾದಿ ಪರಿಕಲ್ಪನೆಯಲ್ಲಿಯೇ ಸರ್ವಾಧಿಕಾರದ ಮೂಲವಿರುತ್ತದೆ. ಇದರ ಪ್ರಕಾರ ದೇಶದ ಅಸ್ತಿತ್ವ ಅದರ ನೈತಿಕ ಅಸ್ತಿತ್ವ. ಜೋದ್ ಅವರು ಬವೇರಿಯಾದ ಸಚಿವ ವ್ಯಾಗ್ನರ್ ಅವರನ್ನು ಉಲ್ಲೇಖಿಸುತ್ತಾರೆ, 'ಹಿಟ್ಲರನು ಸರಿಯಾಗಿಯೇ ನಿರ್ಧರಿಸಿದ್ದ ಮತ್ತು ಸದಾಕಾಲಕ್ಕೂ ಸರಿಯಾಗಿಯೇ ಇರುತ್ತಾನೆ. ಜರ್ಮನಿಯ ಜನರಿಗೆ ಯಾವುದು ಉಪಯುಕ್ತವೋ ಅದು ಸರಿ. ಯಾವುದು ಹಾನಿಕರವೋ ಅದು ತಪ್ಪು.' 'ದೇಶವು ತನ್ನದೇ ನಾಗರಿಕರೊಂದಿಗೆ ಹೊಂದಿರುವ ಸಂಬಂಧದಲ್ಲಿಯೇ ತನ್ನ ಅಸ್ಮಿತೆಯ ಮೂಲವನ್ನು ಹೊಂದಿರುವುದರಿಂದ ಅದು ಯಾವುದೇ ನೈತಿಕತೆಯ ಬಂಧನಕ್ಕೆ ಒಳಗಾಗುವುದಿಲ್ಲ. ಇತರ ದೇಶಗಳೊಂದಿಗೆ ಅದು ವ್ಯವಹರಿಸುವಾಗ ನೈತಿಕ ಜವಾಬ್ದಾರಿಯಿಂದ ಮುಕ್ತವಾಗಿರುತ್ತದೆ' ಎಂದು ಜೋದ್ ಮುಗಿಸುತ್ತಾರೆ.
 ಸಂಕ್ಷಿಪ್ತದಲ್ಲಿ ಹೇಳಬೇಕೆಂದರೆ, ಆದರ್ಶವಾದವು ಅಪಾಯಕಾರಿ, ಧರ್ಮನಿರಪೇಕ್ಷತೆಯೂ ಅಸಾಧ್ಯ, ಶೂನ್ಯವೇ ಸರ್ವ ಮತ್ತು ಯಾರು ಅಧಿಕಾರವನ್ನು ಪಡೆಯುತ್ತಾರೋ ಅವರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ವಿಚಿತ್ರ ಜಗತ್ತು, ವಿಚಿತ್ರ ಮಾನವರು.

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ