ಬೇಡ ಅತ್ಯಾಚಾರಗಳ ಸಾಮಾನ್ಯೀಕರಣ ಬೇಕು ಸಮಾಜ- ಸರ್ಕಾರಗಳಿಗೆ ಆತ್ಮಾವಲೋಕನ
ನಮ್ಮ ರಾಜ್ಯದಲ್ಲಿ ಮಹಿಳಾ, ಮಕ್ಕಳ ಸಹಾಯವಾಣಿಗಳು ನಿಷ್ಕ್ರಿಯ...
ನಮ್ಮ ರಾಜ್ಯದಲ್ಲಿ ಮಹಿಳಾ, ಮಕ್ಕಳ ಸಹಾಯವಾಣಿಗಳು ನಿಷ್ಕ್ರಿಯ ಎಂಬ ಸುದ್ದಿಯನ್ನು ನಿನ್ನೆಯಷ್ಟೇ 'ಕನ್ನಡ ಪ್ರಭ' ಪ್ರಕಟಿಸಿದೆ. ಇನ್ನು, ರಾಜ್ಯ ಮಹಿಳಾ ಆಯೋಗಕ್ಕೊಬ್ಬ ಅಧ್ಯಕ್ಷೆಯನ್ನು ನೇಮಿಸುವ ಮುನ್ನ ಅದೆಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಬೇಕೆಂದು ಕಾಯುತ್ತಿದ್ದೀರ, ಮುಖ್ಯಮಂತ್ರಿಗಳೇ?
ಎರಡು ದಿನಗಳ ಹಿಂದೆ ಒಬ್ಬ ರೇಲ್ವೇ ಉದ್ಯೋಗಿಯ 1990ರ ಅನುಭವದ ಅಂಕಣವೊಂದನ್ನು ದೇಶವೇ ಓದಿತ್ತು. ಆಕೆಯ ಹಿಂದಿನ ಪ್ರಯಾಣದಲ್ಲಿ ಒಬ್ಬ ರಾಜಕಾರಣಿ ಮತ್ತವನ ಹಿಂಬಾಲಕರಿಂದ ಆದ ಕಿರುಕುಳ, ಅಸಭ್ಯ ವರ್ತನೆ ಮತ್ತು ಮಾರನೆಯ ದಿನ ಮತ್ತೊಂದು ರೈಲು ಪ್ರಯಾಣದಲ್ಲಿ ಅತ್ಯಂತ ಸಭ್ಯ ಮತ್ತು ಸುಸಂಕೃತ ವರ್ತನೆಯನ್ನು ಮೆರೆಸಿದ ಆಗಿನ ಪ್ರಚಾರಕರು, ಇಂದಿನ ಪ್ರಧಾನಿಗಳು-ನಮೋ ಮತ್ತು ಶಂಕರ್ಸಿಂಹ ವಘೇಲರ ಕುರಿತು, ಓದಿದಾಗ...
ಒಂದೆಡೆ ನಮ್ಮ ನಾಯಕರ ಕುರಿತು ಅಪಾರವಾದ ಹೆಮ್ಮೆಯೆನಿಸಿತು. ಸ್ತ್ರೀಯರಾಗಿ ಪುರುಷರಿಂದ ನಮಗಿರುವ ಅಪೇಕ್ಷೆಯದೊಂದೆ... ನಿರ್ಭಯವಾಗಿರುವ ವಾತಾವರಣ. ಅಂತಹ ಸುರಕ್ಷತೆಯ ಭಾವನೆಯನ್ನು ಕೊಟ್ಟವರ ಪ್ರತಿ ಆಪಾರವಾದ ಗೌರವ ಹುಟ್ಟುತ್ತದೆ. ಮತ್ತೊಂದೆಡೆ ಒಬ್ಬ ಹುಡುಗಿಯಾಗಿ, ಯುವತಿಯಾಗಿ, ಮಹಿಳೆಯಾಗಿ ನನಗಾದ ಕೆಲವು ಅಹಿತಕರ, ಅಸಭ್ಯ ವರ್ತನೆಯ ನೆನಪೂ ಆಯಿತು.
ಒಬ್ಬರನ್ನೂ ಬಿಡದೇ 'ಎಲ್ಲಾ' ಸ್ತ್ರೀಯರು ಬದುಕಿನ ಯಾವುದಾದರೂ ಒಂದು ಘಳಿಗೆಯಲ್ಲಿ ಒಬ್ಬ ಪುರುಷನ ಅಸಭ್ಯ ವರ್ತನೆಗೆ ಗುರಿಯಾಗಿರುತ್ತಾರೆ, ಎಂಬುದನ್ನು ನಿಸ್ಸಂಕೋಚವಾಗಿ, ಘಂಟಾಘೋಷವಾಗಿ ನಾನು ಹೇಳಬಲ್ಲೆ. ಅಸಭ್ಯ ಮಾತಿನಿಂದಲೋ, ಸ್ಪರ್ಶದಿಂದಲೋ, ಬಸ್ಸಿನಲ್ಲೋ, ಟ್ರೇನಿನಲ್ಲೋ, ದೇವಸ್ಥಾನದಲ್ಲೋ, ಜಾತ್ರೆಯಲ್ಲೋ, ಸಿನಿಮಾ ಟಾಕೀಸಿನಲ್ಲೋ, ಶಾಲೆ-ಕಾಲೇಜು-ಕೆಲಸಕ್ಕೆ ಹೋಗುವಾಗ...ಸ್ನೇಹಿತರು,cousins, ಸಂಬಂಧಿಗಳು, ಮೇಷ್ಟರುಗಳು, ಸೈನಿಕರು, ಡಾಕ್ಟರುಗಳು, ವಕೀಲರು, ಸಹೋದ್ಯೋಗಿಗಳು, ಆಪ್ತರು, ತಿಳಿದವರು, ಅಪರಿಚಿತರು, ಹಿರಿಯರು, ಕಿರಿಯರು, ಕೆಲವು ಅತ್ಯಂತ ದಯನೀಯ ಕೇಸುಗಳಲ್ಲಿ ಗಂಡಂದಿರು, ಅಪ್ಪಂದಿರು...
ಪ್ರಾಯಶಃ ಈ ಅಂಕಣವನ್ನು ಓದುವ ಪ್ರತಿಯೊಬ್ಬ ಮಹಿಳೆಗೂ ಅಂತಹ ಕಹಿ ಅನುಭವದ ನೆನಪಾಗುತ್ತದೆ. ಕೆಲವು ಅಲ್ಲ, ಹಲವು ಪುರುಷರು ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಹೌದು ಸ್ವಾಮೀ.. ನೀವು ನೂಕು ನುಗ್ಗಲಿನಲ್ಲಿ, ಕತ್ತಲಿನಲ್ಲಿ ನನಗೆ ತಿಳಿಯುವುದಿಲ್ಲ ಎಂದುಕೊಂಡು ಉಜ್ಜಿಕೊಂಡು ಹೋದಾಗ, ನನಗೆ ವಯಸ್ಸು 10 ಆಗಿದ್ದರೂ, 60 ಆಗಿದ್ದರೂ, ನನ್ನ ಶರೀರವನ್ನು violate ಮಾಡುವ ಅಧಿಕಾರವನ್ನು ನಿಮಗ್ಯಾರ್ರೀ ಕೊಟ್ಟಿದ್ದು, ಅಂತ ನನ್ನ ಆತ್ಮ ಕಿರುಚುತ್ತದೆ! ಅಂತಹ ಪ್ರತಿಯೊಂದು violation ಕೂಡ ಅತ್ಯಾಚಾರವೇ. ಹಾಗಂತ 'ನಿಮ್ಮನ್ನು ನೋಡಿದ್ದಕ್ಕೂ ದೂರು ಕೋಡುತ್ತೀರೇನ್ರೀ?' ಅಂತ ಪ್ರಶ್ನಿಸಬಹುದು. ನೀವು ನೋಡುವುದರ ಬಗ್ಗೆ ತಕರಾರಿಲ್ಲ, ಆದರೆ 'ನಾವು' ನಿಮ್ಮನ್ನು ನೋಡುವಂತೆ, 'ನೀವು' ನಮ್ಮನ್ನೇಕೆ ನೋಡುವುದಿಲ್ಲ? ನಾವು ನಿಮ್ಮನ್ನು ಮನುಷ್ಯರಾಗಿ, ವ್ಯಕ್ತಿಗಳಾಗಿ ಕಾಣುತ್ತೇವೆ. ನೀವು ನಮ್ಮನ್ನೇಕೆ ಗಳಿಸಬಹುದಾದ/ವಶಪಡಿಸಿಕೊಳ್ಳಬಹುದಾದ ಭೋಗದ ವಸ್ತುವಾಗಿ, ಶರೀರವಾಗಿ ಕಾಣುತ್ತೀರ?
ಮತೀಯ ಸಮಸ್ಯೆಯಾದರೆ ನಾವೇ ಗುರಿ, ಸೈನ್ಯ ಧಾಳಿ ಮಾಡಿದರೆ, ಜಾತೀಯ ವೈಮನಸ್ಯವಿದ್ದರೆ, ಭೂಮಿ ವಿವಾದವಿದ್ದರೆ, ನಿಮ್ಮ ಪೌರುಷವನ್ನು- ಹಿರಿಮೆಯನ್ನು, ಬಲವನ್ನು ಪ್ರದರ್ಶಿಸುವುದಕ್ಕೆ ಒಬ್ಬ ಅಸಹಾಯಕ ಮಗು, ಹುಡುಗಿ, ಯುವತಿ, ತಾಯಿ, ಮಹಿಳೆ ಗುರಿಯಾಗಬೇಕಾ? 'ಆಕೆ ಜಾತಿಯಿಂದ ದಲಿತಳು, ಹಾಗಾಗಿ ಅವಳನ್ನು ರೇಪ್ ಮಾಡುತ್ತೇನೆ' ಇದೆಂತಹ ಮಾನಸಿಕ ರೋಗ? ನಿಮ್ಮ ಕಾಮದ ಅಭಿವ್ಯಕ್ತಿಗೆ ಕಾರಣಗಳನ್ನೇಕೆ ಹುಡುಕುತ್ತೀರ?
ಜೀನ್ಸ್, ಮಿನಿ ಸ್ಕರ್ಟ್ ತೊಟ್ಟದ್ದರಿಂದ ಎಂದೆಲ್ಲ ಕಾರಣ ಹುಡುಕುವವರು ಪಾಶ್ಚಾತ್ಯ ದೇಶಗಳಲ್ಲಿ ಅಜ್ಜಿ, ತಾಯಿ ಎಲ್ಲರೂ ಅಂತಹ ಬಟ್ಟೆಗಳನ್ನೇ ಹಾಕಿರುವುದನ್ನು ನೋಡಿ ಬೆಳೆಯುವವರು ರೇಪ್ ಮಾಡುವುದೇಕೆ? ತಲೆಯಿಂದ ಕಾಲ್ತುದಿಯವರೆಗೆ ಬುರ್ಖಾ ಹಾಕುವ ಮಹಿಳೆಯರನ್ನು ಪುರುಷರು ಬಿಟ್ಟಾರಾ? ಕೊನೆಯ ಪಕ್ಷ ಆರು ತಿಂಗಳು, ವರ್ಷ ತುಂಬಿರುವ ಕೂಸುಗಳನ್ನಾದರು ಬಿಟ್ಟಾರಾ?
ಅತ್ಯಾಚಾರಕ್ಕೆ ಕಾರಣಗಳನ್ನು ಸ್ತ್ರೀಯರಲ್ಲಿ ಹುಡುಕುವುದನ್ನು ಕೊನೆಗೊಳಿಸಿ, ಒಂದು ಸಮಾಜವಾಗಿ ಆತ್ಮಾವಲೋಕನವನ್ನು ಪ್ರಾರಂಭಿಸೋಣ.
ನಿರ್ಭಯ ಪ್ರಕರಣದಲ್ಲಿ ಶಿಕ್ಷೆಯಾದಾಗ ಒಂದಷ್ಟು ಬುದ್ಧಿಜೀವಿಗಳು, ಮಾನವತಾವಾದಿಗಳು ಗಲ್ಲು ಶಿಕ್ಷೆಯ ವಿರುದ್ಧ ದನಿಯೆತ್ತಿದ್ದರು. ಕಠಿಣದಿಂದ ಕಠಿಣ ಶಿಕ್ಷೆಯಾಗಬೇಕಷ್ಟೆ. ಎಷ್ಟೋ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದ ಶಿಕ್ಷೆಯೇ ಆಗುವುದಿಲ್ಲ. ಶಿಕ್ಷೆಯಾದರೂ ಎಲ್ಲ ಪ್ರಕರಣಗಳಲ್ಲೂ ಮರಣ ಶಿಕ್ಷೆಯಾಗುವುದಿಲ್ಲ. rarest of rare ವಿರಳದಲ್ಲಿ ವಿರಳ. ಅಂದ ಮೇಲೂ ತಕರಾರ್ಯಾಕೆ?
ಇಷ್ಟಕ್ಕೂ ಶಿಕ್ಷೆ ವಿಧಿಸಿದ ಮಾರನೆಯ ದಿನವೇನೋ ಗಲ್ಲಾಗುವುದಿಲ್ಲವಲ್ಲ. 12 ವರ್ಷಗಳ ಹಿಂದಾದ ಚಾಮರಾಜನಗರದ ಪ್ರಕರಣದ ಅಪರಾಧಿಗಳು ಇನ್ನೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಸ್ವತಃ ರಾಷ್ಟ್ರಪತಿಗಳು ಕ್ಷಮೆಯನ್ನು ನಿರಾಕರಿಸಿದ ನಂತರವೂ. ಹಾಗಾಗಿ, ಅತ್ಯಾಚಾರದ ಪ್ರಕರಣಗಳಿಗೆ ಕಾರಣಗಳನ್ನು ಹುಡುಕದೆ, 'ನಿಮ್ಮಲ್ಲಿ ನಡೆಯಲ್ವಾ' ಎಂಬ ಅಖಿಲೇಶ್ ಯಾದವರಂತಹ ಅವಿವೇಕದ ಮಾತನಾಡದೆ, 'ಹುಡುಗರು ಕೆಲವೊಮ್ಮೆ ತಪ್ಪು ಮಾಡುತ್ತಾರೆ', ಎಂಬ ಮುಲಾಯಂರಂತಹ ಹಗುರ ಮಾತುಗಳನ್ನಾಡದೆ, 'ಹುಡುಗಿ ಯಾಕೆ ರಾತ್ರಿ ಒಂಟಿಯಾಗಿ ಹೋದ್ಲು?' ಎಂದು ಜವಾಬ್ದಾರಿಯನ್ನು ಸಂತ್ರಸ್ತೆಯ ಮೇಲೆ ಹೊರಿಸದೇ, ಒಕ್ಕೊರಲಿನಿಂದ ಒಂದು ಸಮಾಜವಾಗಿ ಸ್ತ್ರೀ ಮೇಲಿನ ಹಲ್ಲೆಗಳನ್ನು ಖಂಡಿಸೋಣ. ಅತ್ಯಾಚಾರಕ್ಕೆ 'ಹಿಂಸೆ ಮತ್ತು ಕಾಮ'ದ ಪೈಶಾಚಿಕ ಮನೋಭಾವವನ್ನು ಹೊರತುಪಡಿಸಿ ಬೇರೆ ಇನ್ಯಾವ ಕಾರಣಗಳೂ ಇಲ್ಲ. ದಯಮಾಡಿ ಹುಡುಕುವುದನ್ನು ಕೈಬಿಡೋಣ. ಮನೆಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಕೆಲಸದ ಜಾಗದಲ್ಲಿ, ಬಸ್ಸಿನಲ್ಲಿ, ರಸ್ತೆಗಳಲ್ಲಿ, ರೈಲಿನಲ್ಲಿ ಭಯವಿಲ್ಲದೆ ಬದುಕುವಂತಹ ವಾತಾವರಣವನ್ನು ನಿರ್ಮಿಸೋಣ. ಇದನ್ನೆಲ್ಲಾ ದೊಡ್ಡದು ಮಾಡೋದು ಬೇಡವೆಂದು ಹುಡುಗಿಯ ಬಾಯಿಮುಚ್ಚಿಸದೇ ದೂರು ದಾಖಲಿಸುವುದಕ್ಕೆ ಸಹಕಾರ ನೀಡೋಣ. ಆದರೆ ದೂರು ದಾಖಲಿಸುವುದಕ್ಕೆ ಕ್ರಮ ಜರುಗಿಸುವುದಕ್ಕೆ 'ಮಹಿಳಾ ಆಯೋಗದಂತಹ' ಸಂಸ್ಥೆಗಳು ಕಾರ್ಯಗತವಾಗಿರಬೇಕಲ್ಲ?
ಹಿಂದೆ ನಾನು ಪ್ರಸ್ತಾಪಿಸಿದ್ದನ್ನು ನಾವು ಸಮಾಜವಾಗಿ ಮಾಡುತ್ತೇವೆ. ಆದರೆ ಆಯೋಗದ ಅಧ್ಯಕ್ಷರನ್ನು ನೇಮಿಸುವ ಕನಿಷ್ಠ ಸೌಜನ್ಯವನ್ನಾದರೂ ನೀವು ತೋರಿಸಿ. ಸಹಾಯ ವಾಣಿಗಳನ್ನು ಸರಿಪಡಿಸಿ. ಮುಖ್ಯಮಂತ್ರಿಗಳೇ... ತ್ವರಿತಗತಿ ನ್ಯಾಯಾಲಯಗಳ ನಿರ್ಮಾಣ ಮಾಡುತ್ತೇನೆಂದಿದ್ದಾರೆ ನಿಮ್ಮ ಕಾನೂನು ಸಚಿವರು. ತಡವೇಕೆ? ಕರ್ನಾಟಕವನ್ನು ಅತ್ಯಾಚಾರ ಮುಕ್ತಗೊಳಿಸೋಣ.
- ಮಾಳವಿಕ ಅವಿನಾಶ
ನಟಿ, ಬಿಜೆಪಿ ವಕ್ತಾರರು