ಹೋರಾಟಗಾರನ ಆತ್ಮಕಥೆ
80ರ ದಶಕ. ಆರ್. ಗುಂಡೂರಾವ್ ರಾಜ್ಯದ ಮುಖ್ಯಮಂತ್ರಿ. ಬೆಂಗಳೂರಿನ ಕಾಲೇಜಿನ ಉದ್ಯೋಗಿಯೊಬ್ಬರಿಗೆ ತುರ್ತು ಕರೆ...
80ರ ದಶಕ. ಆರ್. ಗುಂಡೂರಾವ್ ರಾಜ್ಯದ ಮುಖ್ಯಮಂತ್ರಿ. ಬೆಂಗಳೂರಿನ ಕಾಲೇಜಿನ ಉದ್ಯೋಗಿಯೊಬ್ಬರಿಗೆ ತುರ್ತು ಕರೆ. ತಕ್ಷಣ ಮುಖ್ಯಮಂತ್ರಿ ನಿವಾಸದಲ್ಲಿ ಭೇಟಿಯಾಗಲು ಸೂಚನೆ. ಕುಮಾರಕೃಪ ಅತಿಥಿ ಗೃಹದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ವ್ಯಕ್ತಿಗೆ 'ನಿಮ್ಮನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡುವ ಮೊದಲು ನಿಮ್ಮ ಪೂರ್ವಭಾವಿ ಒಪ್ಪಿಗೆಗೆ ಕರೆಸಿದೆ. ನಿಮ್ಮ ಒಪ್ಪಿಗೆ ದೊರೆತ ನಂತರ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಸಮ್ಮತಿ ಪಡೆಯಬೇಕಾಗಿದೆ ಎಂದರು. ಎದುರಿನ ವ್ಯಕ್ತಿ ತಣ್ಣಗೆ ಥ್ಯಾಂಕ್ಯೂ ಸರ್ ಎಂದರು. ಆಗ ಗುಂಡೂರಾಯರು 'ಐದು ಲಕ್ಷ ರುಪಾಯಿ ಕೊಡ್ತೀನಿ ನನ್ನನ್ನು ನಾಮಕರಣ ಮಾಡಿ ಅಂತ ಒಬ್ಬರು ಕೇಳಿದರು. ಈ ಸದಸ್ಯತ್ವಕ್ಕೆ ತುಂಬ ತೂಕ ಇದೆ ಬೆಲೆ ಇದೆ' ಎಂದರು. 'ತುಂಬಾ ಥ್ಯಾಂಕ್ಸ್ ಸರ್ ಇದಕ್ಕೆ ನಾನು ಕೃತಜ್ಞನಾಗಿದ್ದೇನೆ' ಎಂದ ವ್ಯಕ್ತಿ ವಾಪಸು ಕಾಲೇಜಿಗೆ ಮರಳಿದರು.
ವಿಧಾನಪರಿಷತ್ ಸದಸ್ಯರಾದ ಆ ವ್ಯಕ್ತಿ ಕಾಂಗ್ರೆಸ್ ಸೇರಲೊಲ್ಲದೆ ಇದ್ದಾಗ ಗುಂಡೂರಾಯರು ರಾಜಿನಾಮೆಗೆ ಒತ್ತಾಯಿಸಿದರು. ರಾಜ್ಯಪಾಲರ ಅಭಿಪ್ರಾಯ ಕೇಳಿದ ನಂತರ ಸ್ವತಂತ್ರ ಸದಸ್ಯನಾಗಿ ಕೇವಲ ಶಿಕ್ಷಣ ಮತ್ತು ವಿಜ್ಞಾನದ ಬಗ್ಗೆ ಮಾತನಾಡಿ ಅವಧಿ ಪೂರೈಸಿದ ವ್ಯಕ್ತಿ ತಪ್ಪಿಯೂ ರಾಜಕೀಯ ವಿಷಯಗಳ ಬಗ್ಗೆ ಒಂದು ಮಾತೂ ಆಡಲಿಲ್ಲ. ಅವಧಿ ಮುಗಿದಾಗ ಮಾಜಿ ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರಿಗೆ ಕೃತಜ್ಞತಾಪತ್ರ ಬರೆದರು. 'ನನ್ನಿಂದ ಸಹಾಯ ಪಡೆದ ಅನೇಕರು ನೆನಪಿಲ್ಲದ ರೀತಿಯಲ್ಲಿ ವರ್ತಿಸಿದರೆ ಈ ವ್ಯಕ್ತಿ ಎಂತಹ ಪತ್ರ ಬರೆದಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ.
1980ನೇ ಇಸವಿ ಆದಿಭಾಗದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಬ್ಬರು ದೂರವಾಣಿ ಕರೆ ಮಾಡುತ್ತಾರೆ. ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳಿಗಾಗಿ ಒಂದು ಆಯೋಗ ರಚಿಸುತ್ತಿದೆ. ಅದಕ್ಕೆ ಸದಸ್ಯರಾಗಲು ನಿಮ್ಮ ಒಪ್ಪಿಗೆ ಬೇಕು ಎಂದಾಗ ದೂರವಾಣಿಯ ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿ ನನಗೆ ಆ ಹುದ್ದೆ ಬೇಡ ಎಂದು ನಿರಾಕರಿಸುತ್ತಾರೆ. ತಕ್ಷಣ ಹಾಗೆನ್ನಬೇಡಿ. ಅದರ ಸದಸ್ಯರಿಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಮಂತ್ರಿಗಳ ಸ್ಥಾನಮಾನ ಸಿಗುತ್ತದೆ. ದೆಹಲಿಯಲ್ಲಿ ಇರಲು ಮನೆ, ಓಡಾಡಲು ವಾಹನ, ಖರ್ಚಿಗೆ ಸಂಬಳ ಎಲ್ಲಾ ಸಿಗುತ್ತದೆ. ಇದೊಂದು ಅಪೂರ್ವ ಅವಕಾಶ. ಎಷ್ಟೋ ಜನ ಇದಕ್ಕಾಗಿ ಹಾತೊರೆಯುತ್ತಾರೆ. ಈ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿರುವಾಗ ಇಲ್ಲ ಅನ್ನಬೇಡಿ ಎನ್ನುತ್ತಾರೆ.
ನನಗೆ ಯಾವ ಸೌಲಭ್ಯವೂ ಬೇಡ. ನನಗೆ ಇದೆಲ್ಲಾ ಸಾಧ್ಯವಿಲ್ಲ ಎಂದು ಆ ವ್ಯಕ್ತಿ ಖಚಿತವಾಗಿ ತಿಳಿಸುತ್ತಾರೆ. ಎಂತಹ ಆಮಿಷವೊಡ್ಡಿದರೂ ತನ್ನ ಮನಸ್ಸಾಕ್ಷಿಗೆ ಒಪ್ಪದ ಕೆಲಸವನ್ನು ಆತ ಮಾಡುತ್ತಿರಲಿಲ್ಲ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬೋಧಿಸುತ್ತಿದ್ದ ಆತ ಯಾವುದನ್ನೂ ಪ್ರಶ್ನಿಸದೆ, ವಿಚಾರ ಮಾಡದೇ ಒಪ್ಪಿಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಎಂತಹ ಪ್ರಭಾವಿಯನ್ನೂ ಎದುರು ಹಾಕಿಕೊಳ್ಳಲು ಹಿಂಜರಿಯದ ಆ ವ್ಯಕ್ತಿಯ ಹೆಸರು ಎಚ್. ನರಸಿಂಹಯ್ಯ. ಇಂದು ಅವರ ಜನ್ಮದಿನ.
1920ನೆ ಇಸವಿ ಜೂನ್ 6ರಂದು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದ ನರಸಿಂಹಯ್ಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಾದ ಹೊಸೂರಿನಲ್ಲಿ ಮುಗಿಸಿದರು. ಪ್ರೌಢಶಾಲೆ ವಿದ್ಯಾಭ್ಯಾಸಕ್ಕಾಗಿ ಸುಮಾರು 53 ಮೈಲು ನಡೆದು ಬೆಂಗಳೂರಿನ ನ್ಯಾಷನಲ್ ಕಾಲೇಜು ಸೇರಿದರು. ಬಿ.ಎಸ್ಸಿ., ಓದುತ್ತಿರುವಾಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಮೈಸೂರು ಮತ್ತು ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ಹಾಗಾಗಿ ವಿದ್ಯಾಭ್ಯಾಸಕ್ಕೆ ತಡೆಬಿತ್ತು. ರಾಮಕೃಷ್ಣಾಶ್ರಮದ ಸ್ವಾಮಿ ತ್ಯಾಗೀಶಾನಂದರು ಆಶ್ರಮದಲ್ಲಿ ಉಳಿಯಲು ಆಶ್ರಯ ನೀಡಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಮುಂದೆ ಎಂ.ಎಸ್ಸಿ., ಮುಗಿಸಿ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದಾಗ ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಸಂಪೂರ್ಣ ಪ್ರಭಾವಿತರಾಗಿದ್ದರು.
ದೇಶಕ್ಕೆ ಸ್ವಾತಂತ್ರ್ಯ ತಂದ ಕ್ವಿಟ್ ಇಂಡಿಯಾ ಚಳುವಳಿ, ರಾಜ್ಯಕ್ಕೆ ಜವಾಬ್ದಾರಿ ಸರ್ಕಾರ ತಂದ ಮೈಸೂರು ಚಳವಳಿ ಎರಡರಲ್ಲೂ ಸಕ್ರಿಯವಾಗಿ ಭಾಗವಹಿಸಿದ ನಂತರ ಪುನಃ ಕಾಲೇಜಿಗೆ ಅಧ್ಯಾಪಕರಾಗಿ ಮರಳಿದರು. ಅಮೆರಿಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಡಾಕ್ಟರೇಟ್ ಪಡೆದು ನ್ಯಾಷನಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾದರು. 1972ನೆ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಶಿಕ್ಷಣ ಕ್ಷೇತ್ರದಲ್ಲಿ ತುಂಬ ಬೆಳವಣಿಗೆಗೆ ಕಾರಣರಾದರು. ಮೂಢನಂಬಿಕೆಗಳ ವಿರುಧ್ಧ ಪವಾಡಗಳ ಸತ್ಯಾಸತ್ಯತೆ ಅರಿಯಲು ಅವರ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ಮಾಡಿದ ಕಾರ್ಯಗಳು ಇತಿಹಾಸ ಸೃಷ್ಟಿಸಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಭಾರತ ಸರ್ಕಾರ 1984ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ತಮ್ಮ ಸರಳ, ಪ್ರಾಮಾಣಿಕ ಹಾಗೂ ನೇರ ನಡೆನುಡಿಯಿಂದ ಇಷ್ಟೆಲ್ಲವನ್ನು ಸಾಧಿಸಿದರು ಎಚ್ಚೆನ್. ಹಿಂದುಳಿದ ಬಡ ಕುಟುಂಬದಲ್ಲಿ ಹುಟ್ಟಿ, ತೀವ್ರ ಬಡತನ, ಕಷ್ಟಗಳ ನಡುವೆ ಅಪಾರ ಸಾಧನೆ ಮಾಡಿದ ನರಸಿಂಹಯ್ಯನವರೆಂದೂ ಮೀಸಲಾತಿ ಸೌಲಭ್ಯ ಬಳಸಿಕೊಳ್ಳಲಿಲ್ಲ. ಸ್ವಾತಂತ್ರ್ಯಹೋರಾಟ ಮಾಡಿದ್ದು ಲೇವಾದೇವಿ ಅಲ್ಲ ಎಂದು ಹೇಳಿ ಸ್ವಾತಂತ್ರ್ಯ ಹೋರಾಟದ ಪಿಂಚಣಿಯೂ ಪಡೆಯಲಿಲ್ಲ.
'ಜಾತಿ ವ್ಯವಸ್ಥೆಯನ್ನು ನಾವು ನಾಶ ಮಾಡದೇ ಹೋದರೆ ಜಾತಿಯೇ ನಮ್ಮ ದೇಶವನ್ನು ನಾಶ ಮಾಡುತ್ತದೆ. ಈಗಾಗಲೇ ಈ ನಾಶ ಆರಂಭವಾಗಿದೆ. ಜಾತಿ ಇಲ್ಲದೆ ಇದ್ದರೆ ಈ ದಿಕ್ಕಿನಲ್ಲಿ ಅಂಬೇಡ್ಕರ್ ಅಪ್ರಸ್ತುತರಾಗುತಿದ್ದರು. ಮೀಸಲಾತಿ ಇರುತ್ತಿರಲಿಲ್ಲ. ಹಿಂದುಳಿದ ವರ್ಗಗಳ ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗಗಳ ಅವಶ್ಯಕತೆ ಇರುತ್ತಿರಲಿಲ್ಲ.' ಈ ಎಲ್ಲಾ ಚಿಂತನೆಗಳನ್ನು ತಮ್ಮ ಆತ್ಮಕಥನ 'ಹೋರಾಟದ ಹಾದಿ'ಯಲ್ಲಿ ಬಿಚ್ಚಿಟ್ಟಿದ್ದಾರೆ.
ನರಸಿಂಹಯ್ಯನವರ ಚಿಂತನೆ ಇಂದು ತುಂಬ ಪ್ರಸ್ತುತ.
-ಎನ್.ಟಿ. ಶಂಕರನಾರಾಯಣಮಡಿಕೇರಿ